Homeಮುಖಪುಟಈಗಲಾದರೂ ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಆತ್ಮಾವಲೋಕನ ಮಾಡಿಕೊಳ್ಳಬೇಕು - ಡಾ.ಬಿ.ಪಿ.ಮಹೇಶ ಚಂದ್ರಗುರು

ಈಗಲಾದರೂ ಕಸಾಪ ಅಧ್ಯಕ್ಷ ಮನು ಬಳಿಗಾರ್‌ ಆತ್ಮಾವಲೋಕನ ಮಾಡಿಕೊಳ್ಳಬೇಕು – ಡಾ.ಬಿ.ಪಿ.ಮಹೇಶ ಚಂದ್ರಗುರು

- Advertisement -
- Advertisement -

ಇತ್ತೀಚೆಗೆ ಕಲಬುರಗಿಯಲ್ಲಿ ಜರುಗಿದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಾದೇಶಿಕ ಮತ್ತು ರಾಷ್ಟ್ರೀಯ ವಿದ್ಯಮಾನಗಳನ್ನು ಗಂಭೀರವಾಗಿ ಚರ್ಚಿಸಿ ಆಳುವವರಿಗೆ ಸ್ಪಷ್ಟ ನಿರ್ದೇಶನ ನೀಡುವಲ್ಲಿ ವಿಫಲಗೊಂಡಿರುವುದು ನಾಡಿನ ಹಿತಚಿಂತಕರಿಗೆ ಬಹುದೊಡ್ಡ ನಿರಾಶೆ ಉಂಟುಮಾಡಿದೆ. ಯಾವುದೇ ಸಮ್ಮೇಳನ ಯಶಸ್ವಿಯಾಗಿ ಜರುಗಬೇಕಾದರೆ ಅಧ್ಯಕ್ಷತೆ ವಹಿಸುವ ವ್ಯಕ್ತಿಯ ದೂರದೃಷ್ಟಿ, ರಾಷ್ಟ್ರೀಯತೆ, ಸಾಮಾಜಿಕ ನ್ಯಾಯಪರ ಕಾಳಜಿ ಮತ್ತು ಸಮಷ್ಟಿಪ್ರಜ್ಞೆಗಳು ಅತ್ಯವಶ್ಯಕ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಮತ್ತು ಬಳಗಕ್ಕೆ ಅಪ್ಪಟ ಮನುವಾದಿ, ಯಥಾಸ್ಥಿತಿವಾದಿ ಮತ್ತು ಪ್ರಭುತ್ವವನ್ನು ಸಂತುಷ್ಟಗೊಳಿಸುವುದೇ ತನ್ನ ಜೀವನದ ಪರಮ ಧ್ಯೇಯವೆಂದು ಭಾವಿಸಿರುವ ಹೆಚ್.ಎಸ್.ವೆಂಕಟೇಶಮೂರ್ತಿ ಎಂಬ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಪರಿ ತರವಲ್ಲ.

ನಾಡಿನ ಮೂಲನಿವಾಸಿಗಳು ಮತ್ತು ತುಳಿತಕ್ಕೆ ಒಳಪಟ್ಟ ಶೋಷಿತ ಸಮುದಾಯಗಳ ಪರ ದನಿಯೆತ್ತುವ ಮತ್ತು ಜನಪರ ಸಂವಾದಗಳು ಮತ್ತು ನಿರ್ಣಯಗಳಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಇವರು ತಮ್ಮ ಇಡೀ ಬದುಕು ಮತ್ತು ಬರಹಗಳಲ್ಲಿ ಎಂದಿಗೂ ಯಶಸ್ವಿಯಾಗಿಲ್ಲ. ಇಂತಹ ನಾಡಿನ ‘ಸಾಕ್ಷಿಪ್ರಜ್ಞೆಯಾಗಿ’ ಪ್ರಸ್ತುತ ಸಂದರ್ಭದಲ್ಲಿ ದಮನಕಾರಿ ಪ್ರಭುತ್ವದ ವಿರುದ್ಧ ದನಿಯೆತ್ತಿ ತಮ್ಮ ಜವಾಬ್ದಾರಿಗೆ ನ್ಯಾಯ ದೊರಕಿಸಿಕೊಡುವ ಬದ್ಧತೆಯಿಲ್ಲದ ವ್ಯಕ್ತಿಯನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತು ನಗೆಪಾಟಲಿಗೆ ಈಡಾಗಿರುವುದು ವಿಷಾಧನೀಯ ಸಂಗತಿಯಾಗಿದೆ.

ಮಾಧ್ಯಮಗಳಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರು, ಸಾಹಿತಿಗಳು, ಸಂಶೋಧಕರು ಮತ್ತು ಪ್ರತಿನಿಧಿಗಳು ಸಾಹಿತ್ಯ, ಸಂಸ್ಕೃತಿ, ಪರಿಸರ ಮೊದಲಾದವುಗಳನ್ನು ಕುರಿತ ಚರ್ಚೆಗಳ ಪ್ರವಾಹದಲ್ಲಿ ಮುಳುಗೆದ್ದರು ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ. ರೈತರ ಆತ್ಮಹತ್ಯೆ, ಕಾರ್ಮಿಕರ ಅತಂತ್ರ ಸ್ಥಿತಿ, ನಿರುದ್ಯೋಗಿಗಳ ಬವಣೆ, ಮಕ್ಕಳ ಅಪೌಷ್ಟಿಕತೆ, ಮಹಿಳೆಯರ ಮೇಲಿನ ದೌರ್ಜನ್ಯ, ರಾಜಕೀಯ ಅಪರಾಧಿಕರಣ, ಅನರ್ಹರ ಕೊಳಕು ರಾಜಕಾರಣ, ಪ್ರಭುತ್ವದ ಸಂವಿಧಾನ ವಿರೋಧಿ ನಡೆ, ಹತಾಶೆ ಉಂಟುಮಾಡುವ ಕೇಂದ್ರ ಸರ್ಕಾರದ ಬಜೆಟ್, ಹಣದುಬ್ಬರ ಏರಿಕೆ, ಕೃಷಿ ಕ್ಷೇತ್ರದ ಅವನತಿ, ಮೂಲಸೌಕರ್ಯಗಳಿಂದ ವಂಚಿತರಾದ ಗ್ರಾಮೀಣ ಜನ, ಅಭಿವೃದ್ಧಿಯ ಹೆಸರಿನಲ್ಲಿ ಅತಂತ್ರರಾದ ಆದಿವಾಸಿಗಳು, ಪೌರತ್ವ ಕಾಯ್ದೆಯಿಂದ ದಿಗಿಲುಗೊಂಡಿರುವ ಮೂಲನಿವಾಸಿಗಳು, ದೇಶದ ಹಿತದೃಷ್ಟಿಯಿಂದ ಶೋಷಣೆ ಬಗ್ಗೆ ಮಾತನಾಡುವವರಿಗೆ ದೇಶದ್ರೋಹ ಪಟ್ಟ, ಅನರ್ಹರಿಂದ ಮೀಸಲಾತಿ ಸೌಲಭ್ಯ ಕಬಳಿಕೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಕನ್ನಡ ಶಾಲೆಗಳ ರಕ್ಷಣೆ, ದೇಶಿ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯ ಭೋಗ ಸಂಸ್ಕೃತಿಯ ಧಾಳಿ, ವಿದ್ಯುನ್ಮಾನ ಮಾಧ್ಯಮಗಳ ಹೊಣೆಗೇಡಿತನ, ಮಾಧ್ಯಮಗಳಲ್ಲಿ ಮೌಢ್ಯದ ವಿಜೃಂಭಣೆ, ಸಂಸ್ಕೃತಿಯ ಕೇಸರೀಕರಣ, ಬಡವರ ಗೋರಿಯ ಮೇಲೆ ಮಂದಿರಗಳ ನಿರ್ಮಾಣ, ಕಾಶ್ಮೀರ ಬಿಡುಗಡೆಗೊಳಿಸಿ ಎಂದವರ ಮೇಲೆ ರಾಜ್ಯದ್ರೋಹ ಮೊಕದ್ದಮೆ ದಾಖಲೆ, ಮೊದಲಾದ ಗಂಭೀರ ವಿಷಯಗಳ ವಿಶ್ಲೇಷಣೆ ನಡೆಸುವ ಸಾಮಾಜಿಕ ಹೊಣೆಗಾರಿಕೆಯಿಂದ ನಾಜೂಕಾಗಿ ಜಾರಿಕೊಂಡ ಸಮ್ಮೇಳನಾಧ್ಯಕ್ಷರನ್ನು ಒಬ್ಬ ಅಪ್ಪಟ ಯಥಾಸ್ಥಿತಿವಾದಿ ಎಂದು ಕರೆಯದೇ ವಿಧಿಯಿಲ್ಲ.

ಇಂತಹ ಮಹತ್ವದ ವಿಚಾರಗಳ ಗಂಭೀರ ಚರ್ಚೆ, ವಿಶ್ಲೇಷಣೆ, ಸಾರ್ವಜನಿಕ ಅಭಿಪ್ರಾಯ ನಿರೂಪಣೆ, ಪ್ರಭುತ್ವಕ್ಕೆ ಸೂಕ್ತ ಎಚ್ಚರಿಕೆ, ನಾಗರೀಕ ಸಮಾಜಕ್ಕೆ ರಕ್ಷಣೆ ಮೊದಲಾದವುಗಳನ್ನು ಪ್ರಾಮಾಣಿಕವಾಗಿ ಉತ್ತೇಜಿಸದ ಸಾಹಿತ್ಯ ಪರಿಷತ್ ಮತ್ತು ಸಾಹಿತ್ಯ ಸಮ್ಮೇಳನಗಳು ನಿಜಕ್ಕೂ ಸಮಕಾಲೀನ ಮಹತ್ವವನ್ನು ಕಳೆದುಕೊಂಡಿವೆ. ಸರ್ಕಾರದ ಬೊಕ್ಕಸ, ತೆರಿಗೆದಾರರ ಹಣ, ರೈತರ ಬೆವರಿನ ಹಣ, ಕಾರ್ಮಿಕರ ರಕ್ತಬಸಿದ ಹಣ, ಶ್ರಮಿಕರ ಕಷ್ಟಪಟ್ಟು ದುಡಿದ ಹಣ ಮೊದಲಾದವುಗಳು ಇಂತಹ ಅನರ್ಥಕಾರಿ ಸಾಹಿತ್ಯ ಸಮ್ಮೇಳನಗಳಿಗೆ ವಿನಿಯೋಗವಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡಿ ಸಾಹಿತ್ಯ ಪರಿಷತ್ತಿನ ಸಾರಥ್ಯವನ್ನು ಹಿಡಿದು ಸಮ್ಮೇಳನಗಳ ಹೆಸರಿನಲ್ಲಿ ಆರ್ಥಿಕವಾಗಿ ಮತ್ತು ವ್ಯಾವಹಾರಿಕವಾಗಿ ಹೆಚ್ಚು ಲಾಭ ಗಳಿಸುವ ಸಾಂಸ್ಕೃತಿಕ – ಸಾಹಿತ್ಯಕ ಲೂಟಿಕೋರರ ಕೈಗೆ ಸಿಲುಕಿ ಸಾಹಿತ್ಯ ಪರಿಷತ್ತು ದುರ್ಬಲಗೊಳ್ಳುತ್ತಿದೆ.

ಇತ್ತೀಚೀನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಕೈಗೊಳ್ಳುವ ನಿರ್ಣಯಗಳಿಗೆ ಸರ್ಕಾರ ಮತ್ತು ನಾಗರೀಕ ಸಮಾಜ ಗಂಭೀರವಾಗಿ ಸ್ಪಂದಿಸುತ್ತಿಲ್ಲ. 1918ರಿಂದ ಧಾರವಾಡ ಸಾಹಿತ್ಯ ಸಮ್ಮೇಳನದಿಂದ ಇಂದಿನ ತನಕ ನಿರ್ಣಯಗಳನ್ನು ಕೈಗೊಳ್ಳುವ ಪರಿಪಾಠ ಮುಂದುವರೆದಿದೆ. ಅದ್ಭುತ ಚರ್ಚೆಗಳನ್ನಾಧರಿಸಿದ ಸಾಹಿತ್ಯ ಪರಿಷತ್ತಿನ ನಿರ್ಣಯಗಳಿಗೆ ಸಾಹಿತ್ಯ, ಸಂಸ್ಕೃತಿ, ಪರಿಸರ, ಸಂವಿಧಾನ, ಜನಹಿತ ಮೊದಲಾದವುಗಳ ಪರಿವೆಯೇ ಇಲ್ಲದ ಪ್ರಭುತ್ವ ಮೂರು ಕಾಸಿನ ಬೆಲೆ ನೀಡಿಲ್ಲ. ರಾಷ್ಟ್ರೀಯ ಬಾಷಾ ನೀತಿ ಜಾರಿಗೊಳಿಸಿ, ಶಿಕ್ಷಣದ ಮಾಧ್ಯಮವನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ, ಕನ್ನಡಿಗರಿಗೆ ಸರ್ಕಾರ ಹಾಗೂ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉದ್ಯೋಗ ನೀಡಿ, ಹೆಚ್ಚುತ್ತಿರುವ ಪರಿಸರ ಮಾಲಿನ್ಯದಿಂದ ನಾಡನ್ನು ರಕ್ಷಿಸಿ, ಹೊರನಾಡ ಕನ್ನಡಿಗರ ಹಿತರಕ್ಷಿಸಿ, ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ, ಹೈದರಾಬಾದ್ ಕರ್ನಾಟಕದಂತಹ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಮಾಡಿ, ಪ್ರಾಕೃತಿಕ ವಿಕೋಪಗಳಿಗೆ ಕಾರಣವಾದ ಬೃಹತ್ ಯೋಜನೆಗಳನ್ನು ತಡೆಗಟ್ಟಿ ಮೊದಲಾದ ನಿರ್ಣಯಗಳ ಪ್ರಾಮಾಣಿಕ ಅನುಷ್ಟಾನಕ್ಕೆ ಪೂರಕವಾದ ರಾಜಕೀಯ ಇಚ್ಛಾಶಕ್ತಿಯನ್ನು ಪ್ರಭುತ್ವ ಇದುವರೆಗೂ ಪ್ರಕಟಿಸಿಲ್ಲ.

ಇಂತಹ ಜನಪರ ಕಾಳಜಿಗಳನ್ನು ಕೇಂದ್ರೀಕರಿಸಿದ ಸಾಮಾಜಿಕ ಚಳುವಳಿಗಳನ್ನು ಮುನ್ನಡೆಸುವ ಬದ್ಧತೆ ಸಾಹಿತ್ಯ ಪರಿಷತ್ತಿನ ಬಿಳಿಯಾನೆಗಳಿಗೆ ಇಲ್ಲ. ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನಗಳಲ್ಲಿ ಮನುವಾದಿಗಳು, ದ್ರೋಣಾಚಾರ್ಯರ ಪಳೆಯುಳಿಕೆಗಳು ಮತ್ತು ಪ್ರಭುತ್ವವನ್ನು ಓಲೈಸುವುದೇ ತಮ್ಮ ಪರಮಧರ್ಮವೆಂದು ನಂಬಿರುವ ಭಟ್ಟಂಗಿಗಳು ಮಠಾಧೀಶರು, ಮಂತ್ರಿಗಳು ಮತ್ತು ಅಧಿಕಾರಶಾಹಿಯ ಬೆಂಬಲ ಪಡೆದು ವಿಜೃಂಭಿಸುತ್ತಿರುವುದು ಸಾರಸ್ವತ ಲೋಕ ಅವನತಿಯೆಡೆಗೆ ಸಾಗಲು ಕಾರಣರಾಗಿದ್ದಾರೆ. ಪ್ರಭುತ್ವದ ಗುಲಾಮರಾಗುವುದೇ ಪ್ರಸ್ತುತ ಸಂದರ್ಭದಲ್ಲಿ ಬಹುದೊಡ್ಡ ಜಾಣತನವೆಂದು ನಂಬಿರುವ ಸಮ್ಮೇಳನಾಧ್ಯಕ್ಷ ಹೆಚ್.ಎಸ್.ವೆಂಕಟೇಶಮೂರ್ತಿ ಮತ್ತು ಬಳಗದವರಿಂದ ಕನ್ನಡ ವಿಮರ್ಶಾ ಪರಂಪರೆ ನಿಜಕ್ಕೂ ದುರ್ಬಲಗೊಂಡಿದೆ.

ಸಾಹಿತ್ಯ ಸಮ್ಮೇಳನಾಧ್ಯಕ್ಷರು ‘ಸಂಸ್ಕೃತವನ್ನು ರಾಷ್ಟ್ರಭಾಷೆ ಮಾಡಬೇಕು’ ಎಂದು ಹೇಳಿ ಕನ್ನಡ ಭಾಷೆಗೆ ಮಾಡಿರುವ ಅವಮಾನ ಇವರ ಗೌಪ್ಯ ಕಾರ್ಯಸೂಚಿ ಏನೆಂಬುದನ್ನು ತೋರಿಸುತ್ತದೆ. ದೈಹಿಕವಾಗಿ ಸಂಪನ್ನರಾಗಿರುವ ಅಧ್ಯಕ್ಷರು ಬೌದ್ಧಿಕವಾಗಿ ತಮ್ಮ ದಿವಾಳಿತನವನ್ನು ಇಂತಹ ಅನರ್ಥಕಾರಿ ವಕಾಲತ್ತಿನಿಂದ ಅಭಿವ್ಯಕ್ತಗೊಳಿಸಿದ್ದಾರೆ. ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರು ‘ಹಿಂದಿ ಭಾಷೆ, ಹಿಂದುತ್ವ ಮತ್ತು ಹಿಂದೂ ದೇಶ’ ಪರಿಕಲ್ಪನೆಗಳನ್ನು ಪ್ರಬಲವಾಗಿ ವಿರೋಧಿಸಿ ಬಹುಸಂಸ್ಕೃತಿ, ಬಹುತ್ವ ಮತ್ತು ಬಹುಜನರ ಬದುಕಿಗೆ ವಿಶೇಷ ಮಹತ್ವ ನೀಡಿದ್ದರು. ಮಹಾತ್ಮ ಗಾಂಧಿ ಅಹಿಂಸಾತ್ಮಕ ವಿಚಾರಧಾರೆಗಳು, ಸಂಘಟನೆಗಳು ಮತ್ತು ಹೋರಾಟಗಳಿಂದ ದೇಶದ ಸರ್ವಜನರ ಹಿತರಕ್ಷಣೆ ಮಾಡಿರೆಂದು ಕರೆ ನೀಡಿದ್ದರು. ಸಂವಿಧಾನಶಿಲ್ಪಿ ವಿಶ್ವಮಾನ್ಯ ಅಂಬೇಡ್ಕರ್ ಧರ್ಮ ನಿರಪೇಕ್ಷತೆಯೇ ದೇಶದ ಆತ್ಮ, ಅಭಿವ್ಯಕ್ತಿ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಉಸಿರು ಮತ್ತು ಬಹುತ್ವವೇ ಭಾರತೀಯ ಪ್ರಜಾಸತ್ತೆಯ ಆಧಾರಸ್ತಂಭ’ವೆಂದು ಪ್ರತಿಪಾದಿಸಿದ್ದರು.

ಇಂದು ಪ್ರಧಾನಿ ಮೋದಿ ಮತ್ತು ಬಳಗ ಗಾಂಧಿ, ನೆಹರು, ಅಂಬೇಡ್ಕರ್ ಮೊದಲಾದ ರಾಷ್ಟ್ರನಾಯಕರ ಆಶಯಗಳಿಗೆ ಪೂರಕವಾಗಿ ಪೌರತ್ವ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತಂದಿರುವುದಾಗಿ ಹೇಳಿ ಭಾರತೀಯರನ್ನು ದಾರಿತಪ್ಪಿಸುತ್ತಿದ್ದಾರೆ. ಸಂವಿಧಾನ ವಿರೋಧಿ ಮಸೂದೆಗಳೆಂದು ತಿಳಿದಿದ್ದರೂ ಸಹ ಇತ್ತೀಚಿನ ಪೌರತ್ವ ಮಸೂದೆಗಳನ್ನು ವಿರೋಧಿಸುವ ಕಾಂಗ್ರೆಸ್, ಕಮ್ಯುನಿಸ್ಟರು ಮತ್ತಿತರ ಪ್ರಜಾಪ್ರಭುತ್ವವಾದಿಗಳನ್ನು ದೇಶವನ್ನು ಅರಾಜಕತೆಯೆಡೆಗೆ ಮುನ್ನಡೆಸುತ್ತಿದ್ದೀರಿಯೆಂದು ಮೂದಲಿಸುತ್ತಿರುವುದು ಸರಿಯಲ್ಲ. ದೆಹಲಿಯ ಶಹೀನ್ ಭಾಗ್‌ನಲ್ಲಿ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಅಹಿಂಸಾತ್ಮಕ ಪ್ರತಿಭಟನೆಗಳನ್ನು ಪ್ರಭುತ್ವ ದಮನಗೊಳಿಸಲು ಹೊರಟಿರುವುದು ಆಘಾತಕಾರಿ ಸಂಗತಿಯಾಗಿದೆ.

ಶಹೀನ್ ಭಾಗ್‌ನಲ್ಲಿ ನಡೆಯುತ್ತಿರುವ ವಿಚಾರವನ್ನು ತನ್ನ ಜೈಪುರದ ಗೆಳೆಯನ ಜೊತೆ ಮೊಬೈಲ್‌ನಲ್ಲಿ ಚರ್ಚಿಸಿದ ಪ್ರಗತಿಪರ ಕವಿ ಬಪ್ಪಾದಿತ್ಯ ಸರ್ಕಾರ್ ಮನುವಾದಿ ಟ್ಯಾಕ್ಸಿ ಚಾಲಕನ ಅವಿವೇಕದಿಂದಾಗಿ ಪೊಲೀಸ್ ಠಾಣೆಯಲ್ಲಿ ಕೆಲವು ಕಾಲ ತೀವ್ರ ವಿಚಾರಣೆಗೆ ಒಳಪಟ್ಟ ಸಂಗತಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಶ್ನಿಸುವವರನ್ನೇ ದೇಶದ್ರೋಹಿಗಳೆಂದು ಬಣ್ಣಿಸಿ ಅಪರಾಧಿಗಳೆಂಬ ಪಟ್ಟ ಕಟ್ಟುವ ಇತ್ತೀಚಿನ ಕೆಟ್ಟಕಾಲ ಸಮ್ಮೇಳನಾಧ್ಯಕ್ಷರ ಕಣ್ಣಿಗೆ ಬೀಳದಿರುವುದು ಅವರ ಸಾಕ್ಷಿಪ್ರಜ್ಞೆ ಕೊರತೆಗೆ ಬಹುದೊಡ್ಡ ಉದಾಹರಣೆಯಾಗಿದೆ. ಭಾರತೀಯರು ಇಂತಹ ಕೆಟ್ಟ ಕಾಲದಲ್ಲಿ ಬದುಕುವುದನ್ನು ಸಾಹಿತ್ಯ ಸಮ್ಮೇಳನದಲ್ಲಿ ಸಂದರ್ಭೋಚಿತವಾಗಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಸ್ತಾಪಿಸದಿರುವ ಅಧ್ಯಕ್ಷರು ನಿಜಕ್ಕೂ ನೈತಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಇವರು ಉದ್ಘಾಟನಾ ಸಮಾರಂಭದಲ್ಲಿ ಮೋದಿ ನೇತೃತ್ವದ ಮನುವಾದಿಗಳನ್ನು ಸಂತುಷ್ಟಗೊಳಿಸಲು ಕೇಸರಿ ಜುಬ್ಬಾ ಧರಿಸಿದ ಪರಿ ಹೇಸಿಗೆ ಉಂಟುಮಾಡುತ್ತದೆ. ಇಂತಹ ಬೇಜವಾಬ್ದಾರಿಯುತ ಸಾಹಿತಿಯನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿದ ಮನುಬಳಿಗಾರ್ ನೇತೃತ್ವದ ಸಾಹಿತ್ಯ ಪರಿಷತ್ ಮನುವಾದಿಗಳ ಪ್ರಭಾವಕ್ಕೆ ಒಳಗಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

ಪ್ರಭುತ್ವದ ಎದುರು ಪ್ರಜೆಗಳ ಹಿತದೃಷ್ಟಿಯಿಂದ ದಿಟ್ಟತನದಿಂದ ಪ್ರಶ್ನೆಯೆತ್ತದ ಮನುವಾದಿ ಸಮ್ಮೇಳನಾಧ್ಯಕ್ಷ ಮತ್ತು ದ್ರೋಣಾಚಾರ್ಯರ ಸಂತಾನದಿಂದ ಕನ್ನಡ ಸಾರಸ್ವತ ಲೋಕವನ್ನು ಪಾರುಮಾಡುವ ಬಹುದೊಡ್ಡ ಜವಾಬ್ದಾರಿ ನಾಡಿನ ಪ್ರಜ್ಞಾವಂತರ ಮೇಲಿದೆ. ವೈದಿಕರಿಂದ, ವೈದಿಕರಿಗಾಗಿ ಮತ್ತು ವೈದಿಕರಿಗೋಸ್ಕರವೇ ಇರುವ ಸಂಸ್ಕೃತ ಭಾಷೆ ರಾಷ್ಟ್ರ ಭಾಷೆಯಾಗಬೇಕೆಂಬ ಸಮ್ಮೇಳನಾಧ್ಯಕ್ಷರ ನಿಲುವು ಖಂಡನೀಯ. ಪ್ರಸ್ತುತ ದೇಶವನ್ನಾಳುತ್ತಿರುವವರು ‘ಹಿಂದು ರಾಷ್ಟ್ರಭಾಷೆಯಾಗಬೇಕು’ ಎಂದು ಘೋಷಿಸಿದಾಗ ಇವರು ಸುಮ್ಮನಿದ್ದ ಬಗೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತದೆ. ಸಂಸ್ಕೃತ ಭಾಷೆ ಎಲ್ಲರನ್ನೂ ಪ್ರೀತಿಸುವ, ಒಗ್ಗೂಡಿಸುವ ಮತ್ತು ಉದ್ಧರಿಸುವ ಸಾಮರ್ಥ್ಯ ಹೊಂದಿದ್ದರೆ ಇಂದು ಅದು ಜಗತ್ತಿನ ಭಾಷೆ ಸ್ಥಾನವನ್ನು ಸಹಜವಾಗಿ ಪಡೆಯುತ್ತಿತ್ತು.
ಜಗತ್ತಿನ ಸಾಯುತ್ತಿರುವ ಭಾಷೆಗಳಲ್ಲಿ ಸಂಸ್ಕೃತವೂ ಒಂದು ಎಂದು ಭಾಷಾ ಶಾಸ್ತ್ರಜ್ಞರು ಅಧಿಕೃತ ಸಾಕ್ಷಿ ಮತ್ತು ಆಧಾರಗಳ ಮೇಲೆ ಪ್ರತಿಪಾದಿಸಿದ್ದಾರೆ. ಮೈಸೂರಿನ ‘ಸುಧರ್ಮ’ ಎಂಬ ಒಂದು ಸಾವಿರ ಪ್ರಸಾರ ಸಂಖ್ಯೆಯನ್ನೂ ಹೊಂದಿರದ ಸಂಸ್ಕೃತ ಪತ್ರಿಕೆಯ ವಾರಸುದಾರರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಮನುವಾದಕ್ಕೆ ಸಿಕ್ಕಿದ ಪುರಸ್ಕಾರವೇ ಆಗಿದೆ ಎಂದು ತಿಳಿಯಲು ಯಾವುದೇ ಸಂಶೋಧನೆ ಅವಶ್ಯಕತೆಯಿಲ್ಲ.

ಪ್ರಭುತ್ವವನ್ನು ಓಲೈಸುವ, ಸಾಹಿತ್ಯವನ್ನು ಕಲುಷಿತಗೊಳಿಸುವ, ದೇಶಿ ಪರಂಪರೆಯನ್ನು ನಾಶಗೊಳಿಸುವ ಮತ್ತು ಬಹುಜನ ಮೂಲನಿವಾಸಿಗಳ ಬದುಕನ್ನು ಅತಂತ್ರಗೊಳಿಸುವ ಕೆಲಸದಲ್ಲಿ ನಿರತರಾಗಿ ಇತಿಹಾಸದ ಕಸದಬುಟ್ಟಿ ಸೇರಬಾರದೆಂಬ ಸಾಕ್ಷಿಪ್ರಜ್ಞೆಯಿಲ್ಲದ ಇಂತಹ ಸಮ್ಮೇಳನಾಧ್ಯಕ್ಷರು ನಮಗೆ ಎಷ್ಟು ಸರಿ ಎಂಬ ನಿಟ್ಟಿನಲ್ಲಿ ಮನುಬಳಿಗಾರ್ ಮತ್ತು ಬಳಗ ಆತ್ಮಾವಲೋಕನ ಮಾಡಿಕೊಳ್ಳಬೇಕು.

(ಲೇಖಕರು ಪತ್ರಿಕೋಧ್ಯಮ ಪ್ರಾಧ್ಯಾಪಕರು ಮತ್ತು ಚಿಂತಕರು. ಲೇಖನದಲ್ಲಿ ಅಭಿಪ್ರಾಯಗಳು ಅವರ ವಯಕ್ತಿಕವಾದವುಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮನುವಾದಿಗಳ ಬಾಲಬಡುಕರಂತೆ ವರ್ತಿಸುತ್ತಿರುವ ಮನುಬಳಿಗಾರ್ ಮೊದಲು ಪರಿಷತ್ತಿಗೆ ರಾಜೀನಾಮೆ ಕೊಟ್ಟು, ಆನಂತರ ಬೇಕಾದರೆ ಆತ್ಮಾವಲೋಕನ ಮಾಡಿಕೊಳ್ಳಲಿ.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...