Homeಮುಖಪುಟಕೌಶಂಬಿ: 'ನಕಲಿ ಎನ್‌ಕೌಂಟರ್' ಆರೋಪ; ಮುಸ್ಲಿಂ ಯುವಕನಿಗೆ ಗುಂಡು, ಸಹೋದರ ನಾಪತ್ತೆ; ನ್ಯಾಯಕ್ಕಾಗಿ ಮೊರೆ

ಕೌಶಂಬಿ: ‘ನಕಲಿ ಎನ್‌ಕೌಂಟರ್’ ಆರೋಪ; ಮುಸ್ಲಿಂ ಯುವಕನಿಗೆ ಗುಂಡು, ಸಹೋದರ ನಾಪತ್ತೆ; ನ್ಯಾಯಕ್ಕಾಗಿ ಮೊರೆ

- Advertisement -
- Advertisement -

ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಸರಾಯ್ ಅಕಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಪೊಲೀಸರು ತನ್ನ ಮಗ ಸದ್ದಾಂನನ್ನು ‘ನಕಲಿ ಎನ್‌ಕೌಂಟರ್’ನಲ್ಲಿ ಗುಂಡಿಕ್ಕಿ ಗಾಯಗೊಳಿಸಿದ್ದಾರೆ ಮತ್ತು ಇನ್ನೊಬ್ಬ ಮಗ ಅಲಿಶಾನ್ ನಾಪತ್ತೆಯಾಗಿದ್ದಾನೆ ಎಂದು ಮುಸ್ಲಿಂ ಕುಟುಂಬವೊಂದು ಆರೋಪಿಸಿದೆ.

ಕುಟುಂಬವು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ವಿಡಿಯೊ ಹಂಚಿಕೊಂಡಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ಗಮನ ಸೆಳೆದಿದೆ. ಸದ್ದಾಂ ಮತ್ತು ಅಲಿಶಾನ್ ತಂದೆ ಮೊಯಿನ್ ಅಹ್ಮದ್ ಅವರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರತೀಕಾರವಾಗಿ ಇಬ್ಬರು ಸಹೋದರರು ಆರೋಪಿಗಳನ್ನು ಪ್ರಶ್ನಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ಕುಟುಂಬ ಹೇಳಿಕೊಂಡಿದೆ.

ಪೊಲೀಸರು ಇಬ್ಬರೂ ಸಹೋದರರನ್ನು ಕರೆದೊಯ್ದ ನಂತರ, ಸದ್ದಾಂನನ್ನು ಎನ್‌ಕೌಂಟರ್ ನಂತರ ಬಂಧಿಸಲಾಗಿದೆ ಎಂದು ತೋರಿಸಲಾಗಿದೆ. ಆದರೆ, ಅಲಿಶಾನ್‌ನ ಸುಳಿವು ಇನ್ನೂ ಸಿಕ್ಕಿಲ್ಲ. ಈ ಕುರಿತು ಮಾತನಾಡಿದ ಸದ್ದಾಂ ಅವರ ಪತ್ನಿ ಇಶಿದಾ, “ನನ್ನ ಗಂಡ ಮತ್ತು ಭಾವ ಅಲಿಶಾನ್ ಇಬ್ಬರನ್ನೂ ಪೊಲೀಸರು ಕರೆದೊಯ್ದಿದ್ದಾರೆ. ಈಗ ನನ್ನ ಭಾವನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವನಿಗೂ ಏನಾದರೂ ಆಗಬಹುದೆಂದು ನಾವು ಭಯಪಡುತ್ತಿದ್ದೇವೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಘಟನೆಯು ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ‘ಎನ್‌ಕೌಂಟರ್ ಸಂಸ್ಕೃತಿ’ಯ ಬಗ್ಗೆ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಈ ರೀತಿಯ ಪ್ರಕರಣಗಳು, ನಿರ್ದಿಷ್ಟವಾಗಿ ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿಕೊಳ್ಳುತ್ತಿವೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಕುಟುಂಬವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ನ್ಯಾಯಕ್ಕಾಗಿ ಮನವಿ ಮಾಡಿದ್ದು, ಪೊಲೀಸ್ ಕ್ರಮದ ವಿರುದ್ಧ ತನಿಖೆಗೆ ಒತ್ತಾಯಿಸಿದೆ.

ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಆರೋಪಿಸುವ ಸಂತ್ರಸ್ತರ ಕುಟುಂಬದ ಹೊಸ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಆರೋಪಗಳು ಹೊರಬಿದ್ದಿವೆ. ಗ್ರಾಮ ಪಂಚಾಯತ್ ಮುಖ್ಯಸ್ಥೆ ಇಶಿದಾ, ಪೊಲೀಸರ ಮೇಲೆ ದೂರು ನೀಡಿ, ಸ್ಥಳೀಯ ಜಗಳವು ಕೈ ಮೀರಿದ ನಂತರ ಕೌಶಂಬಿ ಪೊಲೀಸರು ತಮ್ಮ ಪತಿ ಸದ್ದಾಂ ಮತ್ತು ಭಾವ ಅಲಿಶಾನ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪೊಲೀಸರು ನನ್ನ ಪತಿ ಮತ್ತು ನನ್ನ ಭಾವ ಇಬ್ಬರನ್ನೂ ಕರೆದೊಯ್ದಿದ್ದಾರೆ. ನಂತರ, ಅವರು ಎನ್‌ಕೌಂಟರ್‌ನಲ್ಲಿ ಸದ್ದಾಂ ಅವರನ್ನು ಬಂಧಿಸಿ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಆದರೆ ಅಲಿಶಾನ್ ಎಲ್ಲಿದ್ದಾರೆ? ಅವರನ್ನೂ ಕೊಲ್ಲುತ್ತಾರೆ ಎಂದು ನಮಗೆ ಭಯವಾಗಿದೆ” ಎಂದು ಹೇಳಿದರು.

ಇಶಿದಾ ಕಣ್ಣೀರು ಹಾಕುತ್ತಾ, “ಸದ್ದಾಂ ಕ್ರಿಮಿನಲ್ ಅಲ್ಲ. ತನ್ನ ತಂದೆಯನ್ನು ಥಳಿಸಿದವರನ್ನು ಪ್ರಶ್ನಿಸಲು ಅವನು ಹೋಗಿದ್ದ ಅಷ್ಟೇ. ನಮಗೆ ನ್ಯಾಯ ಒದಗಿಸುವ ಬದಲು, ಪೊಲೀಸರು ನನ್ನ ಪತಿಯನ್ನು ಗುರಿಯಾಗಿಸಿಕೊಂಡಿದ್ದಾರೆ” ಎಂದು ಹೇಳಿದರು.

ಇಶಿದಾ ಅವರ ಮಾವ ಮೊಯಿನ್ ಅಹ್ಮದ್, ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಸರಾಯ್ ಅಕಿಲ್ ಮಾರುಕಟ್ಟೆಗೆ ಹೋದಾಗ ಈ ವಿವಾದ ಪ್ರಾರಂಭವಾಯಿತು. ಅಲ್ಲಿ, ಮಾದಕ ವ್ಯಸನಿಗಳೆಂದು ಹೇಳಲಾದ ಇಬ್ಬರು ಅಥವಾ ಮೂವರು ವ್ಯಕ್ತಿಗಳು ಅವರ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದರು.

ಈ ಸುದ್ದಿ ಸದ್ದಾಂ ಮತ್ತು ಅಲಿಶಾನ್‌ಗೆ ತಲುಪಿದಾಗ, ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಹಲ್ಲೆಕೋರರನ್ನು ಪ್ರಶ್ನಿಸಿದ್ದಾರೆ. ಮಾತುಕತೆ ವಿಕೋಪಕ್ಕೆ ತಿರುಗಿ ಕೈ ಕೈ ಮಿಲಾಯಿಸಿದ್ದು, ಇಬ್ಬರೂ ಸಹೋದರರನ್ನು ಪೊಲೀಸರು ಕರೆದೊಯ್ದಿದ್ದಾರೆ. ಕುಟುಂಬದ ಪ್ರಕಾರ, ನಂತರ ನಡೆದ ಘಟನೆಯಿಂದ ಅವರಿಗೆ ಆಘಾತವಾಗಿದೆ. ಸದ್ದಾಂ ಅವರನ್ನು ‘ಎನ್‌ಕೌಂಟರ್’ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ತೋರಿಸಿದ್ದು, ಅವರ ಕಾಲಿಗೆ ಗುಂಡು ಹಾರಿಸಲಾಗಿದೆ. ಆದರೆ, ಅಲಿಶಾನ್ ಯಾವುದೇ ವಿವರಣೆಯಿಲ್ಲದೆ ನಾಪತ್ತೆಯಾಗಿದ್ದಾರೆ.

ಹಿರಿಯ ತಂದೆ ಮೊಯಿನ್ ಅಹ್ಮದ್ ಕೂಡ ವೈರಲ್ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದು, ಹಲ್ಲೆಯಿಂದ ಅವರ ಮುಖದಲ್ಲಿ ರಕ್ತವಿತ್ತು. ತಮ್ಮ ಪುತ್ರರನ್ನು ಅಪರಾಧಿಗಳೆಂದು ಬಿಂಬಿಸಲು ಪೊಲೀಸರು ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ನನ್ನ ಮೇಲೆ ಮೊದಲು ಹಲ್ಲೆಯಾಯಿತು. ನನ್ನ ಪುತ್ರರು ನನ್ನನ್ನು ರಕ್ಷಿಸಲು ಮಾತ್ರ ಬಂದಿದ್ದರು. ಆದರೆ ಪೊಲೀಸರು ಕಥೆಯನ್ನು ತಿರುಚಿ, ನಮ್ಮ ವಿರುದ್ಧ ವಿಡಿಯೊಗಳನ್ನು ಹರಡಿದ್ದಾರೆ ಮತ್ತು ಈಗ ನನ್ನ ಒಬ್ಬ ಮಗ ನಾಪತ್ತೆಯಾಗಿದ್ದಾನೆ” ಎಂದು ಅವರು ಹೇಳಿದರು.

ಕುಟುಂಬವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ. “ನನ್ನ ಭಾವ ಅಲಿಶಾನ್‌ಗೆ ಏನಾದರೂ ಆದರೆ, ಇಡೀ ಜವಾಬ್ದಾರಿ ಕೌಶಂಬಿ ಪೊಲೀಸರದ್ದಾಗಿರುತ್ತದೆ” ಎಂದು ಇಶಿದಾ ಘೋಷಿಸಿದರು.

ಸ್ಥಳೀಯ ನಿವಾಸಿಗಳು ಕೂಡ ಪೊಲೀಸರ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. “ನೈಜ ಅಪರಾಧಿಗಳಿಗೆ ಶಿಕ್ಷೆ ನೀಡುವ ಬದಲು, ಸಂತ್ರಸ್ತರನ್ನು ಮೌನಗೊಳಿಸುವ ಪ್ರಯತ್ನ ಇದಾಗಿದೆ” ಎಂದು ಹೆಸರು ಹೇಳಲು ಇಚ್ಛಿಸದ ಒಬ್ಬ ಗ್ರಾಮಸ್ಥ ಹೇಳಿದರು.

ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡುತ್ತಿದ್ದಂತೆ, ಅಲಿಶಾನ್ ನಾಪತ್ತೆ ಮತ್ತು ಸದ್ದಾಂ ಅವರಿಗೆ ಗುಂಡು ಹಾರಿಸಿದ ಸಂದರ್ಭಗಳ ಬಗ್ಗೆ ವಿವರಣೆ ನೀಡುವಂತೆ ಕೌಶಂಬಿ ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಪ್ರಕರಣವು ಅಧಿಕಾರದ ದುರುಪಯೋಗದ ದೊಡ್ಡ ಮಾದರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ ಹಕ್ಕುಗಳ ಹೋರಾಟಗಾರರು ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಸದ್ಯ, ಕುಟುಂಬವು ಭಯದಲ್ಲಿದೆ. “ನಮಗೆ ಕೇವಲ ನ್ಯಾಯ ಬೇಕು. ಮುಗ್ಧ ಮುಸ್ಲಿಮರನ್ನು ಅಪರಾಧಿಗಳೆಂದು ಪರಿಗಣಿಸುವುದನ್ನು ನಿಲ್ಲಿಸಿ. ನಮ್ಮ ಮಗ ಜೀವಂತವಾಗಿ ಹಿಂದಿರುಗಬೇಕು” ಎಂದು ಇಶಿದಾ ಮನವಿ ಮಾಡಿದರು, ಸಮುದಾಯವು ಆತಂಕದಿಂದ ಉತ್ತರಗಳಿಗಾಗಿ ಕಾಯುತ್ತಿದೆ.

ಒಡಿಶಾ| ಗೋಹತ್ಯೆ ಆರೋಪದ ಮೇಲೆ ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...