Homeಮುಖಪುಟಲಂಕೇಶ್-86; ದಾರಿದೀಪವಾದ ಲಂಕೇಶ್ ಪತ್ರಿಕೆ; ಲಂಕೇಶ್ ಪತ್ರಿಕೆಯ ಪ್ರೂಫ್‌ರೀಡರ್ ಒಬ್ಬರ ನೆನಪುಗಳು

ಲಂಕೇಶ್-86; ದಾರಿದೀಪವಾದ ಲಂಕೇಶ್ ಪತ್ರಿಕೆ; ಲಂಕೇಶ್ ಪತ್ರಿಕೆಯ ಪ್ರೂಫ್‌ರೀಡರ್ ಒಬ್ಬರ ನೆನಪುಗಳು

ಪತ್ರಿಕೆ ಮೂಲಕ ಹುಟ್ಟಿಬಂದ ಬರಹಗಾರರೂ ಅಸಂಖ್ಯ. ಇವರುಗಳ ಜತೆ ನಾನೂ ಕೆಲಸ ಮಾಡಿರುವುದು ನನ್ನ ಪುಣ್ಯ. ಜೀವನದ ದಿಕ್ಕನ್ನೇ ಬದಲಾಯಿಸಿದ ಸಂದರ್ಭ

- Advertisement -
- Advertisement -

’ಯಾವ ಮನುಷ್ಯನಲ್ಲಿ ಶ್ರದ್ಧೆ, ಆಸಕ್ತಿ ಇರುತ್ತದೋ ಆತ ಜೀವನದಲ್ಲಿ ಮುಂದೆ ಬರಲು ಸಾಧ್ಯ, ಉನ್ನತ ಸ್ಥಾನಕ್ಕೂ ಏರಬಹುದು’.

ಇದನ್ನು ನಮ್ಮ ಮೇಷ್ಟ್ರು ಲಂಕೇಶ್ ಪದೇ ಪದೇ ಹೇಳುತ್ತಿದ್ದರು. ಇವರ ಈ ಧ್ಯೇಯವಾಕ್ಯವನ್ನು ಪಾಲಿಸಿದವರು ನಮ್ಮ ಕಣ್ಣಮುಂದಯೇ ಬೆಳೆದು, ಹೆಸರು ಗೌರವಗಳನ್ನು ಗಳಿಸಿದ್ದಾರೆ. ಟಿ.ಎನ್ ಸೀತಾರಾಂ, ಸಿ.ಎಸ್ ದ್ವಾರಕಾನಾಥ್, ಆರ್ ಶಂಕರ್, ಡಿ.ಆರ್ ನಾಗರಾಜ್, ಶೂದ್ರ ಶ್ರೀನಿವಾಸ್, ಸದಾಶಿವ ಶೆಣೈ – ಹೀಗೆ ಅವರ ನಿಕಟವರ್ತಿಗಳ ಪಟ್ಟಿ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲ. ಪತ್ರಿಕೆ ಮೂಲಕ ಹುಟ್ಟಿಬಂದ ಬರಹಗಾರರೂ ಅಸಂಖ್ಯ. ಇವರುಗಳ ಜತೆ ನಾನೂ ಕೆಲಸ ಮಾಡಿರುವುದು ನನ್ನ ಪುಣ್ಯ. ಜೀವನದ ದಿಕ್ಕನ್ನೇ ಬದಲಾಯಿಸಿದ ಸಂದರ್ಭ.

ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಉರುಫ್ ಗುಂ ಹಾಗೂ ಬಂಗಾರಪ್ಪ ಉರುಫ್ ಬಂ ಹಾಗೂ ದೇವರಾಜ ಅರಸರ ಕಾಲದಲ್ಲಿ ಪತ್ರಿಕೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ರಾಜಕಾರಣಿಗಳಿಗೆ ಒಂದು ತರಹ ಸಿಂಹಸ್ವಪ್ನದಂತಾಗಿತ್ತು. ಪತ್ರಿಕೆ ಪ್ರಕಟವಾಗುವುದನ್ನೇ ಕಾಯುತ್ತಿದ್ದ ಓದುಗರು ಸಂಜೆವಾಣಿ ಪತ್ರಿಕೆ ಕಚೇರಿಯ ಹತ್ತಿರವೇ ಬಂದುಬಿಡುತ್ತಿದ್ದರು. (ಏಕೆಂದರೆ ಲಂಕೇಶ್ ಪತ್ರಿಕೆ ಪ್ರಿಂಟ್ ಆಗುತ್ತಿದ್ದುದು ಅಲ್ಲಿಯೇ). ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಎಲ್ಲ ಕಾಲಮ್‌ಗಳಿಗೆ ವಿವಿಧ ರೀತಿಯ ಓದುಗರು ಇರುತ್ತಿದ್ದರು. ಅವೆಲ್ಲವೂ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು.

ಮುಖ್ಯಮಂತ್ರಿಯಾಗಿದ್ದ ಜೆ.ಎಚ್ ಪಟೇಲ್, ಎಂಪಿ ಪ್ರಕಾಶ್, ಅನಂತನಾಗ್, ಜಯಮಾಲ, ಬಿ.ಎಲ್ ಶಂಕರ್ ಇನ್ನೂ ಹಲವು ರಾಜಕಾರಣಿಗಳು ಕೂಡ ಮೇಷ್ಟ್ರು ಅವರ ಒಡನಾಟವನ್ನು ಇಟ್ಟುಕೊಂಡಿದ್ದರು. ತಿಂಗಳಿಗೊಂದು ಸಲ ಅವರ ತೋಟದಲ್ಲಿ ಸಾಹಿತಿಗಳು, ರಾಜಕಾರಣಿಗಳು, ಸ್ನೇಹಿತರು ಎಲ್ಲ ಸೇರಿ ಸಂವಾದ, ಹರಟೆ, ರಾಜಕೀಯ ವಿಶ್ಲೇಷಣೆ, ಚಿಂತನಮಂಥನ ನಡೆಸೋ ಕ್ಷಣ – ಇವೆಲ್ಲ ನೆನಪಿಸಿಕೊಂಡರೆ ಗತಕಾಲದ ವೈಭವ ಮತ್ತೆ ಮರುಕಳಿಸಬಾರದೇ ಎಂದೆನಿಸುತ್ತದೆ.

ನಾನು 83ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನಾನು ಲಂಕೇಶ್ ಪತ್ರಿಕೆ ಓದುವುದು ಮಾತ್ರವಲ್ಲ ಅದರ ಅಭಿಮಾನಿಯಾಗಿದ್ದೆ. ’ತುಂಟಾಟ’ ಕಾಲಮ್ ಓದುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ. ಅವುಗಳ ಕಟಿಂಗ್ಸ್‌ನ್ನೆಲ್ಲ ಒಂದು ಪುಸ್ತಕದಲ್ಲಿ ಸಂಗ್ರಹಿಸಿ ಈಗಲೂ ಇಟ್ಟಿರುವೆ. ಇವೆಲ್ಲ ಇಂದಿಗೂ ನನಗೆ ಅಮೂಲ್ಯ ರತ್ನಗಳು. ಎಷ್ಟೇ ಹಣ ಕೊಟ್ಟರೂ ಸಿಗದಂತಹ ಮುತ್ತುಗಳು.

ರಾಷ್ಟ್ರೋತ್ಥಾನ ಸಂಸ್ಥೆಯವರು ಬೇಡ ಲಂಕೇಶ್ ಪತ್ರಿಕೆ ಇವತ್ತಲ್ಲ ನಾಳೆ ನಿಂತು ಹೋಗುತ್ತದೆ. ರಾಜಕಾರಣಿಗಳು ಇದರ ಮೇಲೆ ಒಂದು ಕಣ್ಣು ಇಟ್ಟಿದ್ದಾರೆ. ಯಾವತ್ತಿದ್ದರೂ ಅಪಾಯವೇ ಇಲ್ಲೇ ಇರಿ ಎಂದು ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದೆ ಲಂಕೇಶ್‌ಗೆ ಬಂದು ಸೇರಿಕೊಂಡೆ. ಮೇಷ್ಟ್ರು ನನ್ನನ್ನು ಸಂದರ್ಶನ ಮಾಡಿ ತಾನಾಗಿ 600 ಸಂಬಳಕ್ಕೆ ಗೊತ್ತು ಮಾಡಿದರೂ ತಿಂಗಳಾದ ಮೇಲೆ ಕೊಟ್ಟಿದ್ದು 700. 100 ಹೆಚ್ಚಿಗೆ ಕೊಟ್ಟಿದ್ದು ನನಗೆ ಆನೆ ಬಲ ಬಂದಂತೆ ಆಯಿತು.

ಲಂಕೇಶ್ ಪತ್ರಿಕೆಯಲ್ಲಿ ಸೇರಿದ್ದಾನೆ ಎಂಬ ಕಾರಣಕ್ಕಾಗಿಯೇ ಎಷ್ಟೋ ಕಡೆ ಹೆಣ್ಣು ಕೊಡಲು ಮುಂದೆ ಬರುತ್ತಿದ್ದರು. ಆದರೆ ಪಟ್ಟು ಬಿಡದೇ ’ಲಂಕೇಶ್ ಎಂಬ ನಾಮಬಲದಿಂದ ನಮ್ಮ ಸಂಬಂಧಿಕರಲ್ಲೇ ನನಗೆ ಲಗ್ನವಾಯಿತು. ಎಲ್ಲೇ ಹೋಗಲಿ ಎಲ್ಲಿ ಕೆಲಸ ಎಂದರೆ ಹೇಳಿಕೊಳ್ಳಲು ಒಂದು ಹೆಮ್ಮೆ. ಆಗ ವಾರ ಪತ್ರಿಕೆ ಸುಧಾ ಬಿಟ್ಟರೆ ಲಂಕೇಶ್ ಪತ್ರಿಕೆಯ ಸರ್ಕುಲೇಶನ್ ಉನ್ನತ ತಲುಪಿತ್ತು. ಸುಮಾರು ಒಂದೂವರೆ ಲಕ್ಷದಷ್ಟು ಪ್ರಸಾರವಿತ್ತು. ಇದರಿಂದ ನನಗೂ ಒಂದು ಗೌರವ ಸ್ಥಾನಮಾನ ಸಿಗುತ್ತಿತ್ತು. ನನ್ನ ಪಾಲಿಗೆ ಜೀವನದ ದಾರಿದೀಪವಾಗಿ ಮುಂದುವರೆದಿತ್ತು ಪತ್ರಿಕೆ.

ರಾಷ್ಟ್ರೋತ್ಥಾನ ಸಂಸ್ಥೆಯವರು ಹೆದರಿಸಿದ್ದಾಗ ಆಗಿದ್ದ ಭಯ ಪತ್ರಿಕೆಗೆ ಬಂದ ಮೇಲೆ ತನ್ನಿಂದತಾನೇ ದೂರವಾಯಿತು. ಜೆ.ಎಚ್ ಪಟೇಲ್, ಎಂ.ಪಿ ಪ್ರಕಾಶ್, ಅನಂತನಾಗ್, ಚಿತ್ರನಟಿ ತಾರಾ, ಜಯಮಾಲ ಇವರುಗಳನ್ನೆಲ್ಲ ಹತ್ತಿರದಿಂದ ನೋಡುವ ಸೌಭಾಗ್ಯ ದೊರಕಿದಂತಾಗಿತ್ತು.

ಮೇಷ್ಟ್ರರ ಕಾಲಮ್ಮುಗಳಂತೂ ಓದುಗರಿಗೆ ಅಚ್ಚುಮೆಚ್ಚು. ಛೆಛೆ ಕಾಲಮ್, ರಾಜಕಾರಣಿಗಳಿಗೆ ಛಾಟಿ ಏಟಿನಂತಿತ್ತು. ಕಣ್ಣಾಮುಚ್ಚಾಲೆ ಕಾಲಮ್ ಕಚಗುಳಿ ಇಟ್ಟರೆ, ಹಲವರಿಗೆ ಪರಸ್ಪರ ವಿಳಾಸ ತಿಳಿದುಕೊಳ್ಳಲು ಸಹಾಯ ಮಾಡಿ ಸರಳ ಮದುವೆಗಳಿಗೆ ಕಾರಣವಾಗಿದೆ. ಮರೆಯುವ ಮುನ್ನ ಓದುಗರಿಗೆ ಪ್ರಿಯವಾದ ಕಾಲಮ್ಮು. ಯುವ ಪೀಳಿಗೆಗೆ ’ತುಂಟಾಟ’ ಕಾಲಮ್ ನೆನಪಿನಲ್ಲಿ ಉಳಿಯುವ ಹಾಸ್ಯವಾಗಿ ಮತ್ತು ಒಂದು ತರಹ ಕಚಗುಳಿಯಿಡುವ ಚುಟುಕಾಗಿತ್ತು. ಬಿ.ಎ ಶ್ರೀಧರ್ ರವರ ’ಪ್ರಪಂಚ ಪರ್ಯಟನೆ’, ಬಾಲಾಜಿ ಅವರ ಗಾರ್ದಭನಗರಿ, ಪ್ರಸಿದ್ಧ ಕಲಾವಿದ ಪಂಜುಗಂಗೊಳ್ಳಿ ಅವರ ‘ಅರೇಬಿಯನ್ ನೈಟ್ಸ್’ ಓದುಗರನ್ನು ಮಂತ್ರಮುಗ್ಧರನ್ನಾಗಿಸಿ, ಮುಂದಿನ ವಾರಕ್ಕೆ ಕಾದು ಓದಲು ಪ್ರೋತ್ಸಾಹಿಸುತ್ತಿದ್ದವು.

ಚಂದ್ರೇಗೌಡರ ಕಟ್ಟೆಪುರಾಣ, ಸುದ್ದಿಬಿಂಬ, ಟೀಕೆಟಿಪ್ಪಣಿ, ಸಿನಿಮಾ ಕಾಲಂ, ವಿದೇಶ ಸುದ್ದಿ, ಎಚ್‌ಎಲ್‌ಕೆ ಅವರ ರಾಜಕೀಯ ವಿಡಂಬನೆ ಹೀಗೆ ಹಲವು ಕಾಲಮ್‌ಗಳು ಓದುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದವು. ವಿಧಾನಸೌಧದ ಪಡಸಾಲೆಯಲ್ಲಿಯೂ ಲಂಕೇಶ್ ಪತ್ರಿಕೆ ಕಲರವ ಮೂಡಿತ್ತು. ಹೆಗಡೆ ಸರ್ಕಾರವನ್ನು ಬೆಚ್ಚಿ ಬೀಳಿಸಿದಂತೆಯೇ ಲಂಕೇಶ್ ಪತ್ರಿಕೆ ವರದಿಗಳು ರೇವಜೀತು ಹಗರಣದಲ್ಲಿ ಅಂದಿನ ಸರ್ಕಾರದ ಬುಡ ಅಲ್ಲಾಡಿಸಿದ್ದವು.
ಲಂಕೇಶ್ ಮೇಷ್ಟ್ರನ್ನು ಒಂದು ಅರ್ಥದಲ್ಲಿ ಅನ್ನದಾತ ಸುಖೀಭವ ಅನ್ನಬೇಕು! ಏಕೆಂದರೆ ಕಚೇರಿಯ ಮೇಲಿನ ಕೋಣೆಯಲ್ಲಿ 60 ಜನರಿಗೆ ಅಡುಗೆ ಮಾಡಿಸಿಕೊಡುತ್ತಿದ್ದರು. ಅದಕ್ಕಾಗಿ ತಿಂಗಳಿಗೆ ಸಂಬಳದಿಂದ ಹಿಡಿಯುತ್ತಿದ್ದುದು ಕೇವಲ 60ರೂ ಮಾತ್ರ. ದಿನಕ್ಕೊಂದು ತರಹೇವಾರಿ ತರಕಾರಿಯ ಸಾಂಬಾರು, ಅನ್ನ ಮಜ್ಜಿಗೆ, ತುಪ್ಪ, ಹಪ್ಪಳ, ರಾಗಿಮುದ್ದೆ ಹೀಗೆ ರುಚಿಕಟ್ಟಿನ ಮತ್ತು ಪ್ರೀತಿಪಾತ್ರದ ಅಡುಗೆಗೆ ಬೆಲೆ ಕಟ್ಟಲಾದೀತೇ! ನಮ್ಮ ಬಡತನವನ್ನು ಮರೆಸುತ್ತಿದ್ದ ಕ್ಷಣಗಳು ಅವು.

ಈಗ ಅವನ್ನೆಲ್ಲ ನೆನಪಿಸಿಕೊಂಡರೆ, ಆ ದಿನಗಳು ಮತ್ತೆ ಮರುಕಳಿಸಬಾರದೆ ಎನಿಸುತ್ತದೆ. ಲಂಕೇಶ್ ಮರಣಾನಂತರ ಪತ್ರಿಕೆ ಮುಗಿಯಿತು ಎನ್ನುತ್ತಿದ್ದಂತೆ ದೆಹಲಿಯ ಇಂಗ್ಲಿಷ್ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗೌರಿ ಮೇಡಂ ಹಲವು ಬುದ್ಧಿಜೀವಿಗಳ ಒತ್ತಾಯದ ಮೇರೆಗೆ ಪತ್ರಿಕೆ ಮುಂದುವರೆಸಲು ಕೈ ಹಿಡಿದರು. ಆದರೆ ಕನ್ನಡವೇ ಗೊತ್ತಿಲ್ಲದ ಅವರಿಗೆ ಹೇಗೆ ನಿಭಾಯಿಸಲು ಸಾಧ್ಯ ಎಂಬ ಸಂದೇಹ ಹಲವರಲ್ಲಿ ಮೂಡಿದ್ದೂ ನಿಜ. ಹಲವು ಬುದ್ಧಿಜೀವಿಗಳ ಒಡನಾಟ, ಪ್ರೋತ್ಸಾಹ ಮತ್ತು ಸ್ವಯಂ ಶ್ರದ್ಧೆಯಿಂದ ಗೌರಿ ಲಂಕೇಶ್ ಅವರು ಕನ್ನಡ ಕಲಿತು ಪತ್ರಿಕೆಗೆ ಸಂಪಾದಕಿ ಆದದ್ದು ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಅವರು ಕೂಡ ಹೊಸ ಕಾಲಮ್ ಶುರುಮಾಡಿ ಅದು ಪ್ರಸಿದ್ದಿಯೂ ಪಡೆಯಿತು. ಕೊನೆಗೆ ಹಂತಕರ ಗುಂಡಿಗೆ ಮೇಡಂ ಬಲಿಯಾದದ್ದು ದುರದೃಷ್ಟಕರ ಮತ್ತು ದುರಂತ.

ಲಂಕೇಶರ 86ನೇ ಜನ್ಮದಿನದ ಮತ್ತು ಲಂಕೇಶ್ ಪತ್ರಿಕೆಗೆ 40 ದಾಟಿರುವ ಈ ಸಂದರ್ಭದಲ್ಲಿ ಆ ಕಾಲದ ಗತ ವೈಭವಗಳನ್ನು ನೆನಪು ಮಾಡಿಕೊಳ್ಳುವುದರಿಂದ ಎಷ್ಟು ಉಪಯೋಗ.ಆದರೆ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದ, ಹೊಸ ತಿರುವನ್ನು ನೀಡಿದ ಲಂಕೇಶ್ ಪತ್ರಿಕೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ನನಗೆ ದಾರಿದೀಪವಾಗಿ ಲಂಕೇಶ್ ಪತ್ರಿಕೆಗೆ ಮತ್ತು ಈಗ ನಮ್ಮ ಜೊತೆಗೆ ಭೌತಿಕವಾಗಿ ಇರದಿದ್ದರೂ ನೆನಪನಲ್ಲಿ ಅಚ್ಚಳಿಯದೆ ಉಳಿದಿರುವ ಮೇಷ್ಟ್ರಿಗೆ Many Many Thanks.

ಎಚ್. ಎನ್.ದ್ವಾರಕಾನಾಥ್

ಎಚ್ ಎನ್ ದ್ವಾರಕಾನಾಥ್
ಲಂಕೇಶ್ ಪತ್ರಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಸುಮಾರು ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದವರು ದ್ವಾರಕಾನಾಥ್. ಈಗ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ: ಸರ್ಕಾರ ಎಂದರೆ ದೇಶ ಅಲ್ಲ… ದೇಶವೆಂಬುದು ಸರ್ಕಾರಕ್ಕಿಂತ ದೊಡ್ಡದು: ಡಿ ಉಮಾಪತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...