Homeಅಂಕಣಗಳುಸರ್ಕಾರ ಎಂದರೆ ದೇಶ ಅಲ್ಲ... ದೇಶವೆಂಬುದು ಸರ್ಕಾರಕ್ಕಿಂತ ದೊಡ್ಡದು: ಡಿ ಉಮಾಪತಿ

ಸರ್ಕಾರ ಎಂದರೆ ದೇಶ ಅಲ್ಲ… ದೇಶವೆಂಬುದು ಸರ್ಕಾರಕ್ಕಿಂತ ದೊಡ್ಡದು: ಡಿ ಉಮಾಪತಿ

- Advertisement -
- Advertisement -

ಸ್ವಾತಂತ್ರ್ಯ- ಸಮಾನತೆ- ಸಾಮಾಜಿಕ ನ್ಯಾಯದ ಮಾತುಗಳನ್ನು ದೇಶದ್ರೋಹದ ಶಿಲುಬೆಗೆ ಏರಿಸಲಾಗಿದೆ.

ಸರ್ಕಾರ ಎಂದರೆ ದೇಶವೆಂಬ ಕಥಾನಕವನ್ನು ಇತ್ತೀಚಿನ ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ದೇಶ ಸರ್ಕಾರಕ್ಕಿಂತ ದೊಡ್ಡದು ಎಂಬ ಸತ್ಯವನ್ನು ಮರೆಮಾಚಲಾಗಿದೆ. ಸರ್ಕಾರವನ್ನು ಟೀಕಿಸಿದರೆ ದೇಶವನ್ನು ಟೀಕಿಸಿದಂತೆ ಎಂಬುದು ಅತ್ಯಂತ ದುಷ್ಟ ಮತ್ತು ಪ್ರತಿಗಾಮಿವಾದ. ಆದರೆ ಈ ವಾದವನ್ನು ವೈಭವೀಕರಿಸಲಾಗಿದೆ.

ಪರಮದೈವ ಎಂದು ಪ್ರಧಾನಿಯವರೇ ಘೋಷಿಸುವ ಅದೇ ಸಂವಿಧಾನದ ಮೌಲ್ಯಗಳನ್ನು ಆಚರಣೆಯ ಮಾತು ಬಂದಾಗ ಹರಿದ ಕಾಗದದ ಚೂರುಗಳಂತೆ ಗಾಳಿಗೆ ತೂರಲಾಗುತ್ತಿದೆ. ಸಮಾಜವನ್ನು ಹರಿದುಹಂಚುವವರು ಭಾರೀ ತ್ರಿವರ್ಣ ಧ್ವಜವನ್ನು ಹಿಡಿದು ವಂದೇಮಾತರಂ ಹೇಳಿ ದೇಶಭಕ್ತರೆಂಬ ಬಿರುದು ಬಾವಲಿ ಗಳಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಶಕಪುರುಷನೆಂದು ಹಾಡಿ ಹೊಗಳಿದ ಅವೇ ನಾಲಗೆಗಳು ಅಂಬೇಡ್ಕರ್‌ವಾದಿಗಳನ್ನು ದೇಶದ್ರೋಹಿಗಳೆಂದು ನಿಂದಿಸಿ ಹಲ್ಲು ಮಸೆಯುತ್ತಿವೆ. ರಕ್ತದಾಹದ ರಾಷ್ಟ್ರಭಕ್ತಿ ಹೂಂಕರಿಸಿ ದೀನ ದುರ್ಬಲರಲ್ಲಿ ಭಯ ಬಿತ್ತತೊಡಗಿವೆ.

ಭಿನ್ನಮತ ಅಥವಾ ಭಿನ್ನಾಭಿಪ್ರಾಯವನ್ನು, ಶಾಂತಿಯುತ ಪ್ರತಿಭಟನೆಗಳನ್ನು ಕ್ರೂರವಾಗಿ ದಂಡಿಸಲಾಗುತ್ತಿದೆ. ಅದಕ್ಕೆ ಭಯೋತ್ಪಾದನೆ ಇಲ್ಲವೇ ರಾಜದ್ರೋಹದ ಹಣೆಪಟ್ಟಿಗಳನ್ನು ಹಚ್ಚಲಾಗುತ್ತಿದೆ. ಬೇಹುಗಾರಿಕೆ, ಬಂಧನ, ಪೊಲೀಸು-ತೆರಿಗೆ ದಾಳಿಗಳಿಗೆ ಗುರಿಪಡಿಸಲಾಗುತ್ತಿದೆ. ಭಯೋತ್ಪಾದನೆ ನಿಗ್ರಹಕ್ಕೆ ಪ್ರಯೋಗಿಸಲಾಗುವ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಡು ಕಠಿಣ ಕಾಯಿದೆಗಳನ್ನು ಪ್ರಯೋಗಿಸಲಾಗುತ್ತಿದೆ. ಬಾಲಬಡುಕ ಮೀಡಿಯಾ ಸರ್ಕಾರದೊಂದಿಗೆ ಶಾಮೀಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಮತವನ್ನು ಬೇಟೆಯಾಡಲಾಗುತ್ತಿದೆ. ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ದನಿ ಎತ್ತಿದ ವಿದ್ಯಾರ್ಥಿಗಳು, ಅಲ್ಪಸಂಖ್ಯಾತರು, ರೈತರು, ಪತ್ರಕರ್ತರು, ಸಾಮಾಜಿಕ ಆಂದೋಲನಕಾರರು ಯಾರೇ ಇರಲಿ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಗುಂಡಿಟ್ಟು ಹೊಡೆಯಬೇಕು ಎಂಬ ಘೋಷಣೆಗಳನ್ನು ಆಳುವ ಪಕ್ಷಕ್ಕೆ ಸೇರಿದವರು ಮತ್ತು ಬೆಂಬಲಿಗರು ಕೂಗತೊಡಗಿದ್ದಾರೆ.

ಕವಿಗಳು-ಕಲಾವಿದರ ಸಾಂಸ್ಕೃತಿಕ ಪ್ರತಿರೋಧ, ಮಾನವಹಕ್ಕುಗಳ ಹೋರಾಟಗಾರರ ಅದಮ್ಯ ಛಲ ಪ್ರಭುತ್ವದ ಆಕ್ರೋಶಕ್ಕೆ ಗುರಿಯಾಗುತ್ತಲೇ ಬಂದಿದೆ.

ಸರ್ಕಾರ ಅನಾಯಾಸವಾಗಿ ಹೇಳುವ ಸುಳ್ಳುಗಳನ್ನು ಸುಳ್ಳೆಂದು ಹೇಳುವುದೂ ರಾಜದ್ರೋಹವಾಗಿ ಪರಿಣಮಿಸಿದೆ. “ತೀವ್ರ ದಮನಕಾರಿ ನಾಯಕತ್ವದ ಪ್ರತಿಯೊಂದು ಸಂದೇಶವೂ ಸತ್ಯವನ್ನು ತಿರುವುಮುರುವು ಮಾಡುತ್ತದೆ. ಉದಾಹರಣೆಗೆ ಹೇಳುವುದಾದರೆ ’ಸಮರವೇ ಶಾಂತಿ’ ಮತ್ತು ’ಸ್ವಾತಂತ್ರ್ಯ ಎಂಬುದು ಗುಲಾಮಗಿರಿ’ ಎಂಬುದಾಗಿ ನಿರಂತರ ಪುನರುಚ್ಚರಿಸಲಾಗುತ್ತದೆ. ಸತ್ಯದ ಸಚಿವ ಖಾತೆಯು ಸುಳ್ಳುಗಳನ್ನು ಹರಡುತ್ತಿರುತ್ತದೆ. ಪ್ರೇಮ ಪ್ರೀತಿಯ ಸಚಿವ ಖಾತೆಯು ಪ್ರೇಮಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸುತ್ತ ಇರುತ್ತದೆ” ಎಂಬ ಜಾರ್ಜ್ ಆರ್ವೆಲ್ ಮಹಾಶಯನ ಮಾತುಗಳು ಈ ಸನ್ನಿವೇಶದಲ್ಲಿ ಉಲ್ಲೇಖಿಸಬೇಕಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಟೀಕಿಸುವ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕೂ ಅಡಗಿದೆ ಎಂಬುದನ್ನು ಸುಪ್ರೀಮ್ ಕೋರ್ಟು ಈ ಹಿಂದೆ ಹಲವಾರು ಸಲ ಹೇಳಿದೆ.

ಭಿನ್ನಮತವಿಲ್ಲದೆ ಜನತಂತ್ರವಿಲ್ಲ. ಭಿನ್ನಾಭಿಪ್ರಾಯ ಎಂಬುದು ಪ್ರಜಾಪ್ರಭುತ್ವದ ಜೀವಾಳ ಎಂಬುದು ಕಾಯಂ ಮೌಲ್ಯವೇ ವಿನಾ ಕೇವಲ ಮಾತಲ್ಲ.

ಭಾರತದ ಸಂವಿಧಾನದ ಪೀಠಿಕೆಯಲ್ಲಿ ಆಲೋಚನೆ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಹಾಗೂ ಆರಾಧನೆಯ ಸ್ವಾತಂತ್ರ್ಯಗಳನ್ನು ನೀಡಲಾಗಿದೆ. 19 (1)ನೆಯ ಪರಿಚ್ಛೇದದ (ಎ)(ಬಿ)(ಸಿ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಹತಾರುಗಳಿಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಹಾಗೂ ಸಂಘಸಂಸ್ಥೆಗಳನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯಗಳನ್ನು ನಮೂದಿಸಲಾಗಿದೆ. ಈ ಮೂರೂ ಸ್ವಾತಂತ್ರ್ಯಗಳು ಭಿನ್ನಮತವನ್ನು ವ್ಯಕ್ತಪಡಿಸಬಹುದಾದ ವಾಹಕಗಳು. ಅಭಿಪ್ರಾಯ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯಗಳಲ್ಲಿ ಒಪ್ಪದೆ ಇರುವ ಸ್ವಾತಂತ್ರ್ಯ ನಿಹಿತವಾಗಿದೆ. ಒಪ್ಪದೆ ಇರುವ ಹಕ್ಕು, ಭಿನ್ನಮತದ ಹಕ್ಕು ಹಾಗೂ ಭಿನ್ನದೃಷ್ಟಿಕೋನವನ್ನು ತಳೆಯುವ ಹಕ್ಕುಗಳು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಂಟು.

ಅಪ್ಪ ನೆಟ್ಟ ಆಲಕ್ಕೇ ಜೋತುಬೀಳುವುದು ಸಾಮಾಜಿಕ ಅಧಃಪತನಕ್ಕೆ ದಾರಿ ಮಾಡುತ್ತದೆ. ಸರ್ವಮಾನ್ಯ ಕಟ್ಟು ಕಟ್ಟಳೆಗಳನ್ನು ಪ್ರಶ್ನಿಸುವ ಪ್ರಕ್ರಿಯೆಯು ಕಾಲಕಾಲಕ್ಕೆ ಹೊಸ ಚಿಂತಕರು ಮತ್ತು ಸಮಾಜ ಸುಧಾರಕರ ಹುಟ್ಟಿಗೆ ಕಾರಣವಾಗಿದೆ. ತುಳಿದುಕೊಂಡು ಬಂದಿರುವ ಹಾದಿಯನ್ನೇ ಎಲ್ಲರೂ ಕಟ್ಟುನಿಟ್ಟಾಗಿ ತುಳಿಯುತ್ತ ಹೋದರೆ ಹೊಸ ದಾರಿಗಳು ಹುಟ್ಟುವುದಿಲ್ಲ, ಹೊಸ ಶೋಧನೆಗಳು ಆಗುವುದಿಲ್ಲ, ಹೊಸ ದಿಗಂತಗಳು ಕಾಣುವುದಿಲ್ಲ. ಸನಾತನ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನೇ ಕೇಳದೆ ಹೋದರೆ, ಸಂದೇಹಗಳನ್ನು ಪ್ರಕಟಿಸದೆ ಹೋದರೆ ಹೊಸ ವ್ಯವಸ್ಥೆಗಳು ವಿಕಸಿಸುವುದಿಲ್ಲ, ಮನೋದಿಗಂತಗಳು ವಿಸ್ತರಿಸುವುದಿಲ್ಲ. ಬುದ್ಧ, ಮಹಾವೀರ, ಯೇಸುಕ್ರಿಸ್ತ, ಪ್ರವಾದಿ ಮಹಮ್ಮದ್, ಗುರುನಾನಕ್, ಮಾರ್ಟಿನ್ ಲೂಥರ್, ಕಬೀರ್, ರಾಜಾರಾಮ್ ಮೋಹನ್ ರಾಯ್, ಕಾರ್ಲ್ ಮಾರ್ಕ್ಸ್, ಮಹಾತ್ಮಾ ಗಾಂಧೀ ಅವರು ಒಪ್ಪಿತ ಮೌಲ್ಯಗಳನ್ನು, ಆಚರಣೆಗಳೂ-ರೂಢಿ ಸಂಪ್ರದಾಯಗಳನ್ನು ಪ್ರಶ್ನಿಸದೆ ಎತ್ತಿ ಹಿಡಿಯುತ್ತ ಹೋಗಿದ್ದರೆ ಹೊಸ ಚಿಂತನೆಗಳಿಗೆ ಅವಕಾಶವೇ ಇರುತ್ತಿರಲಿಲ್ಲ ಎನ್ನುತ್ತಾರೆ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತ.

ಬಹುಮತದ ಆಳ್ವಿಕೆ ಜನತಂತ್ರದ ಅವಿಭಾಜ್ಯ ಅಂಗ ಎಂಬುದು ಸರಿ. ಆದರೆ ಬಹುಸಂಖ್ಯಾತರ ಆಳ್ವಿಕೆಯು ಜನತಾಂತ್ರಿಕ ತಿರುಳಿನ ಉಲ್ಲಂಘನೆ. ನಮ್ಮ ಹಾಲಿ ಚುನಾವಣಾ ವ್ಯವಸ್ಥೆಯ ಪ್ರಕಾರ ಆಯ್ಕೆಯಾಗುವ ಸರ್ಕಾರಗಳು ಜನಸಂಖ್ಯೆಯ ಬಹುಮತವನ್ನು ಪ್ರತಿನಿಧಿಸುವುದಿಲ್ಲ. ಅಷ್ಟೇ ಅಲ್ಲ, ಮತ ಚಲಾಯಿಸಿದವರ ಸಂಖ್ಯೆಯನ್ನು ಲೆಕ್ಕಕ್ಕೆ ಹಿಡಿದರೂ ಸರ್ಕಾರಗಳು ಬಹುಮತದ ಮತದಾರರನ್ನು ಪ್ರತಿನಿಧಿಸುವುದಿಲ್ಲ.

ಹೀಗಾಗಿ ತಾವು ಜನಮತವನ್ನು ಪ್ರನಿಧಿಸುತ್ತಿದ್ದೇವೆ ಎಂದು ಸರ್ಕಾರ ನಡೆಸುವವರು ಹೇಳಿಕೊಳ್ಳುವುದಕ್ಕೆ ಆಧಾರವೇ ಇಲ್ಲ. ಸರ್ಕಾರ ನಡೆಸುವವರನ್ನು ಜನ ಆಯ್ಕೆ ಮಾಡಿರಬಹುದು. ಆದರೆ ಅವರು ದೇಶದ ಇಡೀ ಜನಸಂಖ್ಯೆಯ ಬೆಂಬಲವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಹೇಳಲು ಬರುವುದಿಲ್ಲ.

ಆಳುವವರಿಗೆ ಶೇ.50ಕ್ಕಿಂತ ಹೆಚ್ಚು ಮತಗಳು ಬಿದ್ದಿವೆ ಎಂದು ಒಂದು ವೇಳೆ ಅಂದುಕೊಂಡರೂ, ಉಳಿದ ಶೇ.49ರಷ್ಟು ಜನರಿಗೆ ಈ ದೇಶದ ಆಳ್ವಿಕೆಯಲ್ಲಿ ದನಿಯೇ ಇಲ್ಲ ಎನ್ನಲಾದೀತೇ? ಈ ಶೇ.49ರಷ್ಟು ಜನ ಮುಂದಿನ ಐದು ವರ್ಷಗಳ ಕಾಲ ಬಾಯಿ ಹೊಲಿದುಕೊಂಡಿರಬೇಕೇ, ಅವರು ಸರ್ಕಾರವನ್ನು ವಿರೋಧಿಸಿದರೆ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕೇ? ಖಂಡಿತ ಸಾಧ್ಯವಿಲ್ಲ ಎನ್ನುತ್ತಾರೆ ನ್ಯಾಯಮೂರ್ತಿ ಗುಪ್ತ.

ಐದು ವರ್ಷಗಳಿಗೊಮ್ಮೆ ಮತದಾನ ಮಾಡಿದ ನಂತರ ನಾಗರಿಕನ ಹಕ್ಕು ಹೊಣೆಗಾರಿಕೆ ಎರಡೂ ತೀರಿತು ಎಂಬುದು ಆಳುವ ಸರ್ವಾಧಿಕಾರಿ ಸರ್ಕಾರಗಳ ಧೋರಣೆ. ಆದರೆ ಮತದಾನ ಮಾಡಿದ ನಂತರ ದೇಶವನ್ನು ಯಾವ ರೀತಿ ನಡೆಸಲಾಗುತ್ತಿದೆ ಎಂಬುದರಲ್ಲಿ ಪಾಲ್ಗೊಳ್ಳುವುದೂ ಪ್ರತಿಯೊಬ್ಬ ನಾಗರಿಕನ ಹಕ್ಕು. ಸರ್ಕಾರದ ನಡೆನುಡಿಗಳನ್ನು ಟೀಕಿಸುವ ಬಾಯಿಗಳಿಗೆ ಬೀಗ ಹಾಕಿ ಸೆರೆಮನೆಗೆ ತಳ್ಳಿದರೆ ಈ ಹಕ್ಕಿಗೆ ಯಾವ ಅರ್ಥವೂ ಉಳಿಯುವುದಿಲ್ಲ. ಆಳುವವರ ಅಭಿಮತಗಳಿಗೆ ಸಾರಾಸಗಟು ವ್ಯತಿರಿಕ್ತ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುವ ಹಕ್ಕು ನಾಗರಿಕನಿಗೆ ಉಂಟು. ಆದರೆ ಈ ಅಭಿಪ್ರಾಯವನ್ನು ಪ್ರಕಟಿಸುವ ರೀತಿನೀತಿಗಳು ಶಾಂತಿಯುತವಾಗಿರಬೇಕು ಅಷ್ಟೇ. ಸರ್ಕಾರದ ಕ್ರಮಗಳು ಸರಿಯಾಗಿಲ್ಲವೆಂದು ನಾಗರಿಕರಿಗೆ ಅನಿಸಿದರೆ ಶಾಂತಿಯುತವಾಗಿ ಸಭೆ ಸೇರಿ ಪ್ರತಿಭಟಿಸುವ ಹಕ್ಕು ಅವರಿಗೆ ಇದ್ದೇ ಇದೆ. ನಾಗರಿಕರ ತಿಳಿವಳಿಕೆ ಸದಾ ಸರಿಯಿರಲೇಬೇಕಿಲ್ಲ. ಹಾಗೆಯೇ ಸರ್ಕಾರದ ಕ್ರಮ ಕೂಡ ದಾರಿ ತಪ್ಪಿರುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ವಾದಿಸಿದ್ದಾರೆ.

ವಕೀಲರು, ಪ್ರಾಧ್ಯಾಪಕರು, ಕವಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ದಮನಿತರ ಪರವಾಗಿ ಧೈರ್ಯದಿಂದ ದನಿಯೆತ್ತುವವರು. ಕೋಟಿ ಕೋಟಿ ಭಾರತೀಯರು ಕೇಳಲು ಹೆದರುವ ಪ್ರಶ್ನೆಗಳನ್ನು ಅಂಜಿಕೆಯಿಲ್ಲದೆ ಕೇಳುವವರು. ಅವರ ದಮನ ಜನಕೋಟಿಯ ದನಿಯ ದಮನ. ಈ ದಮನದ ಖಂಡನೀಯ ಕೃತ್ಯಕ್ಕೆ ಆಳುವ ಸರ್ಕಾರದ ಮಡಿಲಿನಲ್ಲಿ ಹಚ್ಚಗೆ ಬೆಚ್ಚಗೆ ಆಡಿಕೊಂಡಿರುವ ಮಾಧ್ಯಮಗಳು ಗಾಳಿ ಹಾಕತೊಡಗಿರುವುದು ಘೋರ ವಿಪರ್ಯಾಸ.

ಪ್ರತಿಕಿಚ್ಚನ್ನು ಹಚ್ಚಿ ಕಾಳ್ಗಿಚ್ಚನ್ನು ಅಡಗಿಸುವುದು ಅರಣ್ಯದಲ್ಲಿ ಸಾಧ್ಯ. ಆದರೆ ಸಮಾಜ ಅರಣ್ಯ ಅಲ್ಲ. ಮನುಷ್ಯರೆಂದರೆ ಹುಲ್ಲಿನ ಒಣಹುಲ್ಲಿನ ಎಸಳುಗಳಲ್ಲ. ಸ್ವತಂತ್ರ ಚೇತನಗಳು ಎಂದು ಹಿಂದೊಮ್ಮೆ ಸುಪ್ರೀಂ ಕೋರ್ಟ್ ಹೇಳಿದ್ದ ಮಾತುಗಳು, ಹುಲ್ಲುಕಡ್ಡಿಗೂ ಸಮನಲ್ಲ ಎಂಬಂತೆಯೇ ಸರ್ಕಾರಗಳು ನಡೆದುಕೊಂಡು ಬಂದಿವೆ. ಈ ಸರ್ಕಾರ ಈ ಮಾತುಗಳನ್ನು ಗಾಳಿಗೆ ತೂರಿ ಬಹುಕಾಲವಾಗಿದೆ.

ಪ್ರಚಂಡ ನಾಯಕರು ಮತ್ತು ಬಹುಮತದ ಸರ್ಕಾರಗಳಿಗಿಂತ ದೇಶ ದೊಡ್ಡದು. ಮಾನವೀಯ ಮೌಲ್ಯಗಳು ದೇಶಕ್ಕಿಂತ ದೊಡ್ಡವು.


ಇದನ್ನೂ ಓದಿ: ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ: ಪೌರಕಾರ್ಮಿಕರ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಂದುವರಿದ ಬಿಜೆಪಿ ನಾಯಕರ ದ್ವೇಷ ಭಾಷಣ; ‘ಕಾಂಗ್ರೆಸ್ ದೇಶದಲ್ಲಿ ಷರಿಯಾ ಕಾನೂನು ಜಾರಿಗೆ ತರಲಿದೆ’...

0
ಸಂಪತ್ತು ಮರು ಹಂಚಿಕೆ ಕುರಿತು ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಕಾಂಗ್ರೆಸ್...