Homeಕರ್ನಾಟಕವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

- Advertisement -
- Advertisement -

ಹಣ್ಣೆಲೆ ಉದುರುವುದು, ಹೊಸ ಚಿಗುರು ಮೂಡುವುದು ಜೀವಂತ ಮರದ ಲಕ್ಷಣ. ಅಂತೆಯೇ ಒಂದು ರಾಷ್ಟ್ರದ ಸಂಸ್ಕೃತಿಯೂ ಸಹ. ಕಾಲಕಾಲಕ್ಕೆ ಹಳತು ಉದುರಿ ಹೊಸ ಚಿಗುರು ಹಸುರಾಗಬೇಕು. ಹಳೆಯ ಕೊಳೆಯೆಲ್ಲ ಕೊಚ್ಚಿ ಹೋಗಬೇಕು. ಹೊಸ ನೀರು ಹರಿಯಬೇಕು. ಅದಕ್ಕಾಗಿ ರಾಷ್ಟ್ರಕವಿ ಕುವೆಂಪು ದಶಕಗಳ ಹಿಂದೆಯೇ ತರುಣರಿಗೆ ಕೊಟ್ಟ ಕರೆ:

ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿಹೋಗಲಿ; ಬರಲಿ ವಿಜ್ಞಾನ ಬುದ್ಧಿ
ವೇದ ಪ್ರಮಾಣತೆಯ ಮರು ಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯ ಸಿದ್ಧಿ
ತರುಣರಿರ ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ! -ತರುಣರಿರ ಎದ್ದೇಳಿ

ಇದು ತರುಣರಿಗೆ ಕುವೆಂಪು ನೀಡಿದ ಸ್ವಾತಂತ್ರ್ಯ ದೀಕ್ಷಾಮಂತ್ರ. ವಿಚಾರಶೀಲತೆಗೆ ಅಡ್ಡಗೋಡೆಯಾಗಿರುವ ವೈಜ್ಞಾನಿಕ ಪ್ರಜ್ಞೆಗೆ ಗಂಟಲಗಾಳವಾಗಿರುವ ಉಸಿರುಗಟ್ಟಿಸುವ ಮತ ಮೌಢ್ಯದ ಮುಗ್ಗುಲು ವಾಸನೆ ತುಂಬಿರುವ ಗುಡಿ ಚರ್ಚು ಮಸೀದಿಗಳ ಗರ್ಭ ಗುಡಿಗಳನ್ನು ತೊರೆದು ಬರದಿದ್ದರೆ ನಮ್ಮ ತರುಣರಿಗೆ ಉದ್ಧಾರವಿಲ್ಲ ಎಂಬುದು ಈ ಪ್ರವಾದಿ ಕವಿಯ ಕರೆ. ಮತ ಮೌಢ್ಯಕ್ಕೂ ಬಡತನಕ್ಕೂ ಬಿಡಿಸಲಾರದ ನಂಟು. ಅದರ ನಿವಾರಣೆಗೆ ಮೊದಲು ಮೌಢ್ಯದ ಮಾರಿಯನು ಗೆಲ್ಲಬೇಕು. ಅಲ್ಲಿ ವಿಜ್ಞಾನ ದೀವಿಗೆಯ ಬೆಳಗಬೇಕು ಎಂದು ಒತ್ತಾಯಿಸುತ್ತಾರೆ.

ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟ ಕೀಳಬನ್ನಿ,
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ!

ಹಳೆಯ ಮತಗಳನ್ನು ಬಿಟ್ಟು ವಿಜ್ಞಾನವೆಂಬ ಹೊಸಮತಕ್ಕೆ ಸೇರಿದಾಗ ಮಾತ್ರ ವಿಶ್ವಶಾಂತಿ. ನಾಡಿನ ಅಶಾಂತಿಗೆ, ಅನಭಿವೃದ್ಧಿಗೆ, ರಕ್ತಪಾತಕ್ಕೆ ಮುಖ್ಯಕಾರಣ ಮತೀಯ ಗಲಭೆಗಳೇ, ಕೋಮು ಕಲಹಗಳೇ. ಉದಾಹರಣೆಗೆ ಆ ತೊಂಭತ್ತರ ದಶಕದಲ್ಲಿ ಅಯೋಧ್ಯೆಯ ಹಳೆ ಮಸೀದಿಯನ್ನು ಕೋಮುವಾದಿಗಳು ಕೆಡುವುದರೊಂದಿಗೆ ಮುರಿದುಬಿದ್ದ ಹಿಂದೂ-ಮುಸ್ಲಿಂ ಸೌಹಾರ್ದದ ಸೇತುವೆ ಇನ್ನೂ ದುರಸ್ತಿ ಕಾಣದೆ ನೇತಾಡುತ್ತಿದೆ. ಆದ್ದರಿಂದ ಕವಿವಾಣಿ ಎಚ್ಚರಿಸುತ್ತಿದೆ:

ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಓ, ಬನ್ನಿ ಸೋದರರೆ ವಿಶ್ವಪಥಕೆ!

ಎಂದು ಪ್ರಾರ್ಥಿಸುತ್ತದೆ. ಆದರೀಗ ಆಗುತ್ತಿರುವುದೇನು? ಕೇಂದ್ರ ಸರ್ಕಾರ ಕೊಟ್ಟ, ಕರ್ನಾಟಕ ರಾಜ್ಯ ಜಾರಿಗೆ ತಂದಿರುವ ’ರಾಷ್ಟ್ರೀಯ ಶಿಕ್ಷಣ ನೀತಿ 2020’ರ ಕಾಯಿದೆಯು ಕುವೆಂಪು ಕೊಟ್ಟ ಪ್ರಗತಿ ಕರೆಗೆ ತದ್ವಿರುದ್ಧವಾಗಿ ಬ್ರಾಹ್ಮಣ್ಯದ ಬೇರುಗಳು ಬಸವಯುಗದ ಪೂರ್ವಕ್ಕೂ ಇಳಿಯುವಂತಿದೆ. ಸಂಗ್ರಹವಾಗಿ ಹೇಳುವುದಾದರೆ: ಈ ಕಾಯಿದೆಯು ಸಂಪೂರ್ಣವಾಗಿ ಕಾರ್ಯಗತವಾದರೆ ವರ್ತಮಾನ ಭಾರತವು ’ಅರಿವೆ ಗುರು’ ಎಂದ ಬಸವಣ್ಣನವರ ಪೂರ್ವಯುಗಕ್ಕೆ ಜಾರುವ ಅಪಾಯ ತಪ್ಪಿದ್ದಲ್ಲ. ಸದ್ಯದ ಪಠ್ಯಪುಸ್ತಕ ಪರಿಷ್ಕರಣೆಯು ಅದರ ಪೂರ್ವಭಾವಿ ತಾಲೀಮು ಅಷ್ಟೆ. ಜಾತೀಯತೆ, ಪಿತೃಪ್ರಧಾನತೆ, ಮೂಲಭೂತವಾದವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಬೆಳೆಸಲಿಕ್ಕೆ ಬಿಜೆಪಿಯು ಹಾಕಿರುವ ಭದ್ರ ಬುನಾದಿ ಇದಾಗಿದೆ. ವರ್ಗ, ವರ್ಣ, ಜಾತಿ, ಲಿಂಗ ತಾರತಮ್ಯಗಳನ್ನು ಕಳೆದು ಇಲ್ಲಿ ಸಮಬಾಳು ಸಮಪಾಲು ಎಂಬ ಸಮಸಮಾಜಕ್ಕೆ ನಾಂದಿ ಹಾಡಿದ್ದು ಶರಣ ಚಳವಳಿ. ಆದರೀಗ ಮೊದಲಿನ ಪಠ್ಯಗಳನ್ನು ಕಮ್ಯೂನಿಸ್ಟ್ ಪ್ರಣಾಳಿಕೆ ಎಂದು ದೂರಿ, ಮನುಧರ್ಮ ಶಾಸ್ತ್ರ ಪ್ರಣೀತ ಸಮಾಜವನ್ನು ಪುನಃ ಸಂಸ್ಥಾಪಿಸಲು ಅಡಿಪಾಯ ಹಾಕುತ್ತಿರುವ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿಯು ಇತಿಹಾಸವನ್ನು ಸರಿಪಡಿಸುವ ಸೋಗಿನಲ್ಲಿ ರಾಷ್ಟ್ರೀಯತೆ, ಭಾರತೀಯ ಸಂಸ್ಕೃತಿ, ದೇವಭಾಷೆ ಸಂಸ್ಕೃತ ಎಂದು ಸ್ಥಳೀಯ ಆಡು ನುಡಿಗಳನ್ನು ನಿರ್ಲಕ್ಷಿಸಿ, ಹಿಂದಿಗೆ ಮಣೆ ಹಾಕುತ್ತಾ ಬುದ್ಧ, ಬಸವ, ಸೂಫಿ ಸಂತರ, ಪೆರಿಯಾರ್, ನಾರಾಯಣ ಗುರು, ಶಾಹು ಮಹಾರಾಜ್, ಜ್ಯೋತಿಬಾ ಫುಲೆ, ಸಾವಿತ್ರಿ ಬಾಯಿ ಫುಲೆ, ಭಗತ್‌ಸಿಂಗ್, ಗಾಂಧಿ, ಕುವೆಂಪು, ಅಂಬೇಡ್ಕರ್ ಮತ್ತಿತರ ಪ್ರಗತಿಪರರ ಜೀವನಗಾಥೆಗಳ ಪಠ್ಯಗಳನ್ನು ನೇಪಥ್ಯಕ್ಕೆ ಸರಿಸಿ ಸಂಘಪರಿವಾರದ ಅಜೆಂಡಾಕ್ಕನುಗುಣವಾಗಿ ಹೆಡಗೆವಾರ್, ಸಾವರ್ಕರ್ ಮುಂತಾದವರ ಪಠ್ಯಗಳನ್ನು ಮುನ್ನೆಲೆಗೆ ತರುತ್ತಿರುವುದು ಎದ್ದು ಕಾಣುತ್ತದೆ.

ಇದರಲ್ಲಿ ಮುಚ್ಚುಮರೆಯೇನಿಲ್ಲ. ಈ ಪಠ್ಯ ಪರಿಷ್ಕರಣೆಯ ಮೂಲವಿರುವುದು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ. ಈ ಸತ್ಯವನ್ನು ಮನಗಂಡ ರಾಜ್ಯದ ನ್ಯಾಯವಾದಿಗಳು, ಸಾಹಿತಿ ಕಲಾವಿದರು, ಪ್ರಗತಿಪರ ಚಿಂತಕರು, ಮಠದ ಸ್ವಾಮಿಗಳು, ವಿವಿಧ ಸಂಘಟನೆಗಳು ’ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ ನೇತೃತ್ವದಲ್ಲಿ, ಕಳೆದ ಜೂನ್ 19, 2022ರಂದು ಫ್ರೀಡಂ ಪಾರ್ಕಿನಲ್ಲಿ ಸಭೆ ಸೇರಿ ಪರಿಷ್ಕೃತ ಪಠ್ಯಪುಸ್ತಕವನ್ನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ, 10 ದಿನಗಳ ಗಡುವು ಕೊಟ್ಟಿದೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇವರ ಮನವಿಯನ್ನು ಸ್ವೀಕರಿಸುವ ಸೌಜನ್ಯವನ್ನೂ ತೋರಲಿಲ್ಲ. ಮತ್ತು ಪಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ’ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಪ್ರತಿಭಟನೆ ಮಾಡುವವರಿಗೆ ಸ್ವಾತಂತ್ರ್ಯವಿದೆ’ ಎಂದು ತಮ್ಮ ದಿವ್ಯ ನಿರ್ಲಕ್ಷ್ಯವನ್ನು ಪ್ರದರ್ಶಿಸಿದ್ದಾರೆ.

ನಿಜ. ಬಹುಮತವಿರುವ ಯಾವುದೇ ಸರ್ಕಾರ ಇಂಥ ಮೆರವಣಿಗೆ, ಪ್ರತಿಭಟನೆಗಳಿಗೆ ಜಗ್ಗುವುದುಂಟೆ? ಎಲ್ಲೀವರೆಗೆ ಶೋಷಿತ ವರ್ಗಕ್ಕೆ ಸೇರಿದ ಶಾಸಕರು, ಮಂತ್ರಿಗಳು, ಸಂಸದರು, ಅಧಿಕಾರ ಆಮಿಷಗಳಿಗೆ ಮಾರುಹೋಗಿ ಬಿಜೆಪಿಗೆ ತಲೆಯಾಡಿಸುತ್ತಾ ಬೆಂಬಲ ನೀಡುತ್ತಾರೋ, ಎಲ್ಲೀವರಗೆ ದನಿಯಿಲ್ಲದವರಿಗೆ ದನಿಯಾಗಿ ತಮ್ಮ ಅಸಮಾಧಾನ, ಅತೃಪ್ತಿ ವ್ಯಕ್ತಪಡಿಸುವುದಿಲ್ಲವೋ, ಅಲ್ಲೀವರೆಗೆ ಆಳುವ ಸರ್ಕಾರ ಬಂಡೆಗಲ್ಲಿನಂತೆ ಭದ್ರವಾಗಿರುತ್ತದೆಯಲ್ಲವೆ?

ಇನ್ನೂ ಪರಮಾಶ್ಚರ್ಯವೆಂದರೆ, ಯಾವ ಬ್ರಾಹ್ಮಣ್ಯವನ್ನು ವಿರೋಧಿಸಿ ಬಸವಾದಿ ಶರಣರು ಧರ್ಮ ನಿರಪೇಕ್ಷ ಸಮಸಮಾಜದ, ಕಲ್ಯಾಣದ ಕನಸು ಕಂಡು ಕ್ರಾಂತಿ ಕಹಳೆ ಊದಿದರೂ ಅದೇ ಬಸವ ಧರ್ಮಾವಲಂಬಿ ವೀರಶೈವ ಲಿಂಗಾಯಿತ ರಾಜಕಾರಣಿಗಳು ತೀರ ಅಲ್ಪಸಂಖ್ಯಾತರಾದ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿಯೊಂದಿಗೆ ಕೈ ಜೋಡಿಸಿ ಸಹಭಾಗಿಗಳಾಗಿ ಕನ್ನಡನಾಡನ್ನು ಬಸವಪೂರ್ವ ಯುಗಕ್ಕೆ ಕೊಂಡೊಯ್ಯಲು ಉತ್ಸುಕರಾಗಿ ಟೊಂಕಕಟ್ಟಿ ನಿಂತಿರುವುದು. ಹೀಗಿರುತ್ತ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಪಠ್ಯಗಳನ್ನು ಕಿತ್ತು ಹಾಕುವುದು ಅಥವಾ ಅವರ ಚಿಂತನೆಗಳನ್ನು ತಿರುಚುವುದು ಇವರಿಗೆ ಯಾವ ಲೆಕ್ಕ? ಇಂಥ ಒಂದು ಅವಕಾಶಕ್ಕಾಗಿ ಸಂಘಪರಿವಾರವು ಶತಮಾನ ಪರ್ಯಂತ ಕಾದಿದೆ. ಹಿಂದೂ ರಾಷ್ಟ್ರವನ್ನಾಗಿ ಮಾಡಿ, ಧರ್ಮನಿರಪೇಕ್ಷ ಸೆಕ್ಯುಲರ್ ಸಂವಿಧಾನವನ್ನು ತಿದ್ದುವ ಯಾವ ಅವಕಾಶವನ್ನು ಅದು ಕಳೆದುಕೊಳ್ಳಲಾರದು.
ಆದ್ದರಿಂದ ಕುವೆಂಪು ಕೈವಾರಿಸಿದ ನಾಡಗೀತೆಯನ್ನು ತಿರುಚುವುದೂ ದಶದಿಕ್ಕುಗಳಿಂದಲೂ ಸಂವಿಧಾನದ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮೇಲೆ ಆಕ್ರಮಣ ಮಾಡುವುದೂ ನಡೆದೇ ತೀರುತ್ತದೆ. ’ನೂಲ ಎಳೆಯಲಿ ಕೊರಳ ಕೊಯ್ಯುವ, ಭೇದದಲಿ ಹೊಕ್ಕಿರುವ ಚಾತುರ್ಯ ಬ್ರಾಹ್ಮಣ್ಯದ ಹುಟ್ಟುಗುಣ’ ಎಂದು ವಿದುರ ನೀತಿಯಲ್ಲಿ ಕವಿ ಕುಮಾರವ್ಯಾಸ ಹೇಳಿರುವುದು ನೂರಕ್ಕೆ ನೂರು ಸತ್ಯ. ಬುದ್ಧ ಬಸವರು ಕಂಡ, ಕುವೆಂಪು ದರ್ಶಿಸಿದ, ಅಂಬೇಡ್ಕರ್ ಕಲ್ಪಿಸಿದ ಕಲ್ಯಾಣಕರ್ನಾಟಕ ಕುಸಿಯುತ್ತಿದೆ. ಇಂಥ ಕಲ್ಯಾಣ ಪ್ರಭುತ್ವವನ್ನು ಕಿತ್ತೆಸೆದು ಕಾರ್ಪೊರೆಟ್ ಪ್ರಭುತ್ವವನ್ನೂ, ಸಂವಿಧಾನದ ಜಾಗದಲ್ಲಿ ಮನುವಾದವನ್ನೂ, ಪ್ರಜಾತಂತ್ರ ಜಾಗದಲ್ಲಿ ಸರ್ವಾಧಿಕಾರವನ್ನೂ ನೆಲೆಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದುವರೆಗೆ ಕುಂಟುತ್ತಲೆ ಹೇಗೋ ಮುಂದೆ ಸಾಗುತ್ತಿದ್ದ ದೇಶ ಈಗ ನಾಗಾಲೋಟದಲ್ಲಿ ಹಿಂದಕ್ಕೆ ಜಾರುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ, ಆರ್ಥಿಕತೆ ಕುಸಿಯುತ್ತಿದೆ, ಬೆಲೆ ಏರುತ್ತಿದೆ, ಭ್ರಷ್ಟಾಚಾರ ಮುಗಿಲು ಮುಟ್ಟುತ್ತಿದೆ. ಅರಾಜಕತೆ ಬೆಳೆಯುತ್ತಿದೆ.

’ಅಗ್ನಿಪಥ’ದಂತ ಘನ ಗಂಭೀರ ಯೋಜನೆಯ ಅನುಷ್ಠಾನವು ಸರಿಯಲ್ಲವೆಂದೂ, ಸೇನೆ ಸೇರಿ ನಾಲ್ಕು ವರ್ಷಗಳ ನಂತರ ಬಿಡಬೇಕಾಗಿ ಬಂದಾಗ ನಾವೇನು ಮಾಡಬೇಕೆಂದೂ ಸೇನಾಕಾಂಕ್ಷಿ ’ಅಗ್ನಿವೀರರು’ ಕೆಲಸಕ್ಕೆ ಮೊದಲೇ ದಂಗೆಯೆದ್ದು ಬೀದಿಗಿಳಿದು ಹೋರಾಡುತ್ತಿದ್ದಾರೆ. ಇದೆಲ್ಲಾ ನೋಡಿದರೆ ಶ್ರೀಲಂಕಾ, ಆಫ್ಘಾನಿಸ್ಥಾನಗಳು ತಲುಪಿರುವ ದುಃಸ್ಥಿತಿಗೆ ಭಾರತವೂ ತಲುಪಬಹುದೇ ಎಂಬ ಆತಂಕ ಕಾಡುತ್ತದೆ.

ಆದರೆ ನಿರಾಶೆಗಿದು ಹೊತ್ತಲ್ಲ; ಚಿಂತಿಸುತ್ತಾ ಕೂರಲು ಸಮಯ ಇಲ್ಲ, ಎಲ್ಲಾ ಕ್ಷೇತ್ರದಲ್ಲಿಯೂ ಮೌಲ್ಯಗಳ ಅಧಃಪತನ; ಪ್ರಾಮಾಣಿಕತೆ ನೆಲಕಚ್ಚುತ್ತಿದೆ; ದೊಡ್ಡ ದೇಶದ ದೊಡ್ಡ ಜನ ಎತ್ತ ಸಾಗುತ್ತಿದ್ದಾರೋ ಗೊತ್ತಿಲ್ಲ? ಮನುಕುಲದ ನಡಿಗೆಯಲ್ಲಿ ಈ ಏರುಪೇರು ಹೊಸದೇನೂ ಅಲ್ಲ. ಪ್ರತಿಗಾಮಿ ಹಾಗೂ ಪ್ರಗತಿಗಾಮಿ ಶಕ್ತಿಗಳ ನಡುವೆ ಸಂಘರ್ಷ ಎಲ್ಲಾ ಕಾಲಕ್ಕೂ ಇದ್ದದ್ದೇ. ’ಚಕ್ರಾರಪಂಕ್ತಿ’ಯಂತೆ ಕಾಲ ಸುತ್ತುತ್ತಿರುತ್ತದೆ-ಮುಂದೆ ಮುಂದೆ. ಎಷ್ಟೆಷ್ಟೋ ಚಳವಳಿಗಳು, ಆಂದೋಲನಗಳು, ದನಿಯಿಲ್ಲದವರಿಗೆ ದನಿಗೊಡುವ ಹೋರಾಟಗಳು ಮುಂತಾಗಿ ನಡೆದೇ ಇವೆ; ನಡೆಯುತ್ತವೆ. ’ಚಲಿಸಲ್ ಸೃಷ್ಟಿ; ನಿಲ್ಲಲ್ ಪ್ರಳಯ’ ಪ್ರಜಾತಂತ್ರದಲ್ಲಿ ಇರುವುದೊಂದೇ ಮಾರ್ಗ. ಅದು ಗಾಂಧೀ ನೀಡಿದ ಅಹಿಂಸಾತ್ಮಕ ಮಾರ್ಗ. ಅದೇ ಸ್ವಾಭಿಮಾನ ಮತದಾರರ ಒಂದು ಓಟಿನ ಕ್ರಾಂತಿ ಮಾರ್ಗ. ಈ ಕುರಿತು ರಾಷ್ಟ್ರಕವಿ ಕುವೆಂಪು ತಮ್ಮ ವಿಚಾರಕ್ರಾಂತಿಗೆ ಆಹ್ವಾನ ಎಂಬ ಭಾಷಣದಲ್ಲಿ ಎಂದೋ ಗುಡುಗಿದ್ದಾರೆ. ಆಲಿಸಿ:

’ಚುನಾವಣೆಯ ರೀತಿಯನ್ನೇ ಬದಲಿಸದಿದ್ದರೆ, ಮಾನ-ಮರ್ಯಾದೆಯುಳ್ಳ ಯಾವ ಪ್ರಾಮಾಣಿಕ ವ್ಯಕ್ತಿಯಾಗಲೀ, ಯಾವ ಪಕ್ಷವಾಗಲೀ ಭ್ರಷ್ಟಾಚಾರಕ್ಕೆ ಬಲಿಯಾಗದಿರಲು ಸಾಧ್ಯವಿಲ್ಲ. ಉಗ್ರ ಕ್ರಾಂತಿಯಿಂದಲಾದರೂ ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳು, ಸಮಯ ಸಾಧಕರು, ಗೂಂಡಾಗಳು, ಕಾಳಸಂತೆಕೋರರು, ಕಳ್ಳಸಾಗಾಣಿಕೆ ಖದೀಮರು, ಚಾರಿತ್ರ್ಯಹೀನರು ಪ್ರಜಾಸತ್ತೆಯ ಹುಸಿ ಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ’.

ಆದ್ದರಿಂದ ’ಮಾತನೆ ಉಣಕೊಟ್ಟು ಮಾತನೆ ಉಡಕೊಟ್ಟು ಮಾತಿನಾ ಮುತ್ತ ಸೂರೆಗೊಟ್ಟು ಹೋದಾತನೇ ಜಾಣ’ ಎಂಬಂತಿರುವ ರಾಜಕಾರಣಿಯನ್ನು, ಅಂತಹವನ ರಾಜಕಾರಣವನ್ನು ದೂರವಿಟ್ಟು ನಿಜವಾದ ಅಂತಃಕರಣವುಳ್ಳ ಮುತ್ಸದ್ಧಿ ರಾಜಕಾರಣಿಯನ್ನು, ಎಲ್ಲ ಜನರನ್ನೂ ಒಟ್ಟಿಗೆ ಕರೆದೊಯ್ಯಬಹುದಾದ ಪಕ್ಷವನ್ನು ಚುನಾಯಿಸುವುದು ಮತದಾರನ ಕರ್ತವ್ಯ. ಅದಕ್ಕಾಗಿ ವಿಜ್ಞಾನದೀವಿಗೆ ಹಿಡಿದ ಯುವಜನರು ಮುಂದೆ ಬರಬೇಕು.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ಸಂವಿಧಾನ ಒಬ್ಬರೇ ಬರೆದಿದ್ದು ಎಂದು ಹೇಗೆ ಹೇಳುತ್ತೀರಿ?: ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿದ್ದಕ್ಕೆ ಪಠ್ಯ ಪರಿಶೀಲನೆ ಸಮಿತಿ ಸದಸ್ಯನ ಸಮರ್ಥನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುತ್ತಿದ್ದಾರೆ, ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು: ಮಲ್ಲಿಕಾರ್ಜುನ ಖರ್ಗೆ

0
'ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ' ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗ...