ಇಂಧನ, ಅಗತ್ಯ ವಸ್ತುಗಳು ಮತ್ತು ಔಷಧಿಗಳ ಬೆಲೆಗಳು ಹೆಚ್ಚುತ್ತಿರುವುದರ ವಿರುದ್ಧ ಎಡ ಪಕ್ಷಗಳು ಬುಧವಾರದಿಂದ ಹದಿನೈದು ದಿನಗಳ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಿವೆ ಎಂದು ಭಾನುವಾರ ಜಂಟಿ ಹೇಳಿಕೆ ನೀಡಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್)-ಲಿಬರೇಶನ್ ಸೇರಿದಂತೆ ಹಲವು ಎಡ ಪಕ್ಷಗಳು ಈ ಪ್ರತಿಭಟನೆಯನ್ನು ಬೆಂಬಲಿಸಿದೆ.
ಜೂನ್ 16 ರಂದು ಪ್ರತಿಭಟನೆ ಆರಂಭಗೊಂಡು ಜೂನ್ 30 ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹೆಚ್ಚಿದ ಇಂಧನ ಬೆಲೆಯನ್ನು ಕಡಿಮೆ ಮಾಡಬೇಕು, ಅಗತ್ಯ ವಸ್ತುಗಳ ಮತ್ತು ಔಷಧಿಗಳ ಬೆಲೆಯನ್ನು ನಿಯಂತ್ರಿಸಲು ಎಡ ಪಕ್ಷಗಳು ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿವೆ.
ಇದನ್ನೂ ಓದಿ: ಬೆಂಗಳೂರಿನ ರೌಡಿಗಳಿಗೆ ಆಯುಧ ಪೂರೈಸುತ್ತಿದ್ದ ವೆಪನ್ ಡೀಲರ್ ಬಂಧನ
“ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿರುವುದರಿಂದ ಜನರ ಜೀವನೋಪಾಯದ ಮೇಲೆ ಹೊಡೆತ ಬೀಳುತ್ತಿವೆ. ಕೊರೊನಾ ದುರಂತದ ವಿನಾಶವನ್ನು ಎದುರಿಸಲು ಜನರಿಗೆ ಸಹಾಯ ಮಾಡುವ ಬದಲು, ನರೇಂದ್ರ ಮೋದಿ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು, ಮೇ 2 ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ನಂತರ ಕನಿಷ್ಠ 21 ಪಟ್ಟು ಹೆಚ್ಚಿಸಿದೆ” ಎಂದು ಎಡ ಪಕ್ಷಗಳು ಆರೋಪಿಸಿವೆ.
“ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಹನ್ನೊಂದು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆಹಾರ ಉತ್ಪನ್ನಗಳ ಬೆಲೆಗಳು ಏಪ್ರಿಲ್‌ನಲ್ಲಿ 5% ದಷ್ಟು ಏರಿಕೆಯಾಗಿದೆ. ಪ್ರಾಥಮಿಕ ಸರಕುಗಳ ಬೆಲೆಗಳು 10.16% ದಷ್ಟು ಏರಿಕೆಯಾಗಿದೆ ಮತ್ತು ರೆಡಿ ಉತ್ಪನ್ನಗಳ ಬೆಲೆ 9.01% ದಷ್ಟು ಏರಿಕೆಯಾಗಿದೆ. ಈ ಸರಕುಗಳು ಚಿಲ್ಲರೆ ಮಾರುಕಟ್ಟೆಗಳನ್ನು ತಲುಪುವ ಹೊತ್ತಿಗೆ, ಗ್ರಾಹಕರಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ” ಎಂದು ಎಡ ಪಕ್ಷಗಳ ಜಂಟಿ ಹೇಳಿಕೆಯು ಹೇಳಿದೆ.
ಇದನ್ನೂ ಓದಿ: ಎಚ್.ಎಸ್. ದೊರೆಸ್ವಾಮಿಯವರ ’ನೆನಪಿನ ಸುರುಳಿ ತೆರೆದಾಗ’ ಕಂಡ ಕುವೆಂಪು
ಆರ್ಥಿಕತೆಯ ತೀವ್ರ ಹಿನ್ನಡೆ, ನಿರುದ್ಯೋಗ ಹೆಚ್ಚಳ, ಕೊಳ್ಳುವ ಶಕ್ತಿ ಕುಸಿಯುವಿಕೆ ಮತ್ತು ಹಸಿವಿನ ಮಟ್ಟ ಹೆಚ್ಚಳದ ಈ ಸಂಕಷ್ಟದ ಸಮಯದಲ್ಲಿ ಬೆಲೆ ಏರಿಕೆ ನಡೆಯುತ್ತಿದೆ ಎಂದು ಎಡ ಪಕ್ಷಗಳು ತಿಳಿಸಿವೆ.
“ಸರ್ಕಾರದ ಪ್ರೋತ್ಸಾಹದಡಿಯಲ್ಲೇ ಸ್ಪಷ್ಟ ಹಾಗೂ ನಿರ್ಲಜ್ಜವಾಗಿ ಕಾಳ ಮಾರುಕಟ್ಟೆ ಮತ್ತು ಸಂಗ್ರಹಣೆ ನಡೆಯುತ್ತಿದೆ. ಮೋದಿ ಸರ್ಕಾರವು ಇಂತಹ ಕಾಳ ಮಾರುಕಟ್ಟೆಯನ್ನು, ಅದರಲ್ಲೂ ವಿಶೇಷವಾಗಿ ಅಗತ್ಯ ಔಷಧಿಗಳ ಕಾಳ ಮಾರುಕಟ್ಟೆಯನ್ನು ಕಟ್ಟುನಿಟ್ಟಾಗಿ ನಿಗ್ರಹಿಸಬೇಕು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆದಾಯ ತೆರಿಗೆ ಪಾವತಿ ಮಾಡುವ ಅಡಿಯಲ್ಲಿ ಬರದ ಎಲ್ಲಾ ಕುಟುಂಬಗಳಿಗೆ ಒಕ್ಕೂಟ ಸರ್ಕಾರವು ತಕ್ಷಣ ಆರು ತಿಂಗಳವರೆಗೆ ತಿಂಗಳಿಗೆ 7,500 ರೂ.ಗಳ ನೇರ ನಗದು ವರ್ಗಾವಣೆಯನ್ನು ನೀಡಬೇಕು ಎಂದು ಎಡ ಪಕ್ಷಗಳು ಒತ್ತಾಯಿಸಿವೆ.
ಇದನ್ನೂ ಓದಿ: ಗೋಹತ್ಯೆ ತಡೆ ಕಾನೂನಿನ ದುರ್ಬಳಕೆ: ಪೊಲೀಸರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಗರಂ