Homeಮುಖಪುಟ2020 ಸಾಹಿತ್ಯ ಕ್ಷೇತ್ರಾವಲೋಕನ; ಕೊರೊನಾ ಸೃಷ್ಟಿಸಿದ ಬಿಕ್ಕಟ್ಟು ಮತ್ತು ಅವಕಾಶಗಳ ನಡುವೆ ಪುಸ್ತಕ ಲೋಕ

2020 ಸಾಹಿತ್ಯ ಕ್ಷೇತ್ರಾವಲೋಕನ; ಕೊರೊನಾ ಸೃಷ್ಟಿಸಿದ ಬಿಕ್ಕಟ್ಟು ಮತ್ತು ಅವಕಾಶಗಳ ನಡುವೆ ಪುಸ್ತಕ ಲೋಕ

- Advertisement -
- Advertisement -

ಸಾಹಿತ್ಯಾವಲೋಕನ ಎಂದಾಗ ಇಡೀ ವರ್ಷ ಎಷ್ಟು ಪುಸ್ತಕ ಬಂದವು? ಮಾರಾಟವಾದುವು? ಅದರಲ್ಲಿ ಯಾವು ಜನಮೆಚ್ಚುಗೆ ಗಳಿಸಿದವು? ಎಂಬ ಚರ್ಚೆಗಳು ವರ್ಷದ ಕಡೆಯಲ್ಲಿ ಶುರುವಾಗುತ್ತವೆ. ಅಸಲಿಗೆ ದಿನಪತ್ರಿಕೆಗಳ ಸಾಹಿತ್ಯ ಪುರವಣಿಗಳು ಈ ಕೆಲಸವನ್ನು ಹೆಚ್ಚು ಮಾಡುತ್ತವೆ. ಇದಕ್ಕೆ ಯಾವುದೇ ರೀತಿಯ ಸ್ಪಷ್ಟ ಮಾನದಂಡಗಳು ಇಲ್ಲ. ತಮಗೆ ಪರಿಚಿತ ಇರುವ ಬರಹಗಾರರನ್ನು ಕೇಳಿ ಅವರ ಅಭಿಮತವನ್ನು ದಾಖಲಿಸುವ ಪ್ರಕ್ರಿಯೆ ಇದಾಗಿದೆ. ಆದರೆ ಇದು ನಿಜವಾದ ಸಾಹಿತ್ಯಾವಲೋಕನ ಅಲ್ಲ. ಬರಹಗಾರರೇ ಎಲ್ಲವನ್ನು ನಿರ್ವಹಿಸಿಬಿಟ್ಟರೆ ಹೇಗೆ? ಸಾಹಿತ್ಯ ಎಂದಾಗ ಇರುವ ಮತ್ತೊಂದು ಮುಖ್ಯ ಪಾತ್ರ ’ಓದುಗ’. ಅವಲೋಕನ ಎಂಬುವುದು ಅವನನ್ನು ಒಳಗೊಂಡು ಸಾಗಬೇಕು, ಇಲ್ಲವಾದರೆ ಬರಹಗಾರರ ಸ್ವಗತಗಳಲ್ಲಿ ಕಾಲಹರಣವಾಗಿಬಿಡುತ್ತದೆ.

ಸಾಹಿತ್ಯಾವಲೋಕನ ಎಂಬುದು ಒಂದು ಅವಧಿಯಲ್ಲಿ ಓದಿನ ಟ್ರೆಂಡ್ ಹೇಗೆ ಬದಲಾಯಿತು, ಯಾವ ರೀತಿಯ ಹೊಸತುಗಳ ಪ್ರವೇಶವಾಯಿತು ಎಂಬುದರ ನೋಟವೂ ಆಗಿದೆ. ಪ್ರಪಂಚದ ಬೇರೆ ಬೇರೆ ದೇಶಭಾಷೆಗಳ ಕೃತಿ ಮತ್ತು ಓದುಗಳ ಬಗ್ಗೆ ಆಗಾಗ್ಗೆ ಕನ್ನಡದಲ್ಲಿ ಪ್ರಸ್ತಾಪವಾಗುತ್ತಿರುತ್ತದೆ. ಆದರೆ ಅಂತಹವು ಕನ್ನಡದಲ್ಲಿ ಘಟಿಸಿರುವುದೇ? ಯಾಕೆ ಘಟಿಸುತ್ತಿಲ್ಲ? ಅಂತಹ ಫಲಾಫಲಗಳೇನು ಅಂತ ಯೋಚಿಸದೆ, ಕೆಲವೇ ಕೆಲವು ಪುಸ್ತಕಗಳ ಸಂಭ್ರಮದಲ್ಲಿ ನಾವು ಒಂದುಕ್ಷಣ ಮುಳುಗಿ ಮುಂದೆ ಸಾಗಿಬಿಟ್ಟರೆ ತಪ್ಪಾಗಿಬಿಡುತ್ತದೆ. ಈ ಪ್ರಕ್ರಿಯೆಗಳು ಒಂದು ಭಾಷೆಯ ಬರಹ ಮತ್ತು ಓದಿನ ಹರಹನ್ನು ವಿಸ್ತರಿಸದೇ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುತ್ತವೆ. ಯಥಾಸ್ಥಿತಿಯ ಮುಂದುವರಿಕೆಯು ಒಳ್ಳೆಯ ಸಾಹಿತ್ಯ, ಕಲೆ, ಸೃಜನಶೀಲತೆಯು ಇರುವ ದೇಶಭಾಷೆಯ ಗುಣಲಕ್ಷಣವಾಗಲಾರದು.

PC : MetroSaga

2020ರ ವರ್ಷದ ಮೊದಲ ಎರಡು ತಿಂಗಳಲ್ಲಿ ಹೆಚ್ಚು ಪುಸ್ತಕಗಳು ಪ್ರಕಟವಾಗಿರಲಿಲ್ಲ. ಎಲ್ಲ ಸಿದ್ಧಗೊಳ್ಳುತ್ತಿದ್ದವು. ಆ ವೇಳೆಗೆ ಲಾಕ್‌ಡೌನ್ ಆಯಿತು. ಪ್ರಕಾಶನ ಮತ್ತು ಮುದ್ರಣ ಎರಡೂ ನಿಂತವು. ಆದರೆ ಮನೆಯಲ್ಲಿ ಕುಳಿತ ಬರಹಗಾರ ಮತ್ತು ಓದುಗ ಇಬ್ಬರಿಗೂ ಓದಲು ಬರೆಯಲು ಸುಗ್ಗಿಯ ಕಾಲ. ಬರಹ ಅನುವಾದ ಮತ್ತು ಓದು ಸಾವಕಾಶವಾಗಿ ಸಾಗಿದುವು. ಇಂತಹ ಸಾಂಕ್ರಾಮಿಕದ ಹೊತ್ತಿನ ಬಗ್ಗೆಯೇ ಕಮು ಬರೆದ ’ದಿ ಪ್ಲೇಗ್’ ಕಾದಂಬರಿಯನ್ನು ಹಿರಿಯರಾದ ಎಚ್ ಎಸ್ ರಾಘವೇಂದ್ರ ರಾವ್ ಅವರು ಅನುವಾದಿಸಲು ಶುರು ಮಾಡಿದರು. ಹಾಗೆಯೇ ಎಚ್ ಎಸ್ ಶಿವಪ್ರಕಾಶ್ ಅವರು ಲ್ಯಾಟಿನ್ ಅಮೆರಿಕದ ಹತ್ತಾರು ಹಿರಿಯ ಮತ್ತು ಯುವಕವಿಗಳ ಕವಿತೆಗಳನ್ನು ಕನ್ನಡಕ್ಕೆ ತಂದರು. ಎಚ್ ಎಸ್ ಶ್ರೀಮತಿ ಅವರು ಸ್ತ್ರೀವಾದದ ಬಗೆಗಿನ ಬೆಲ್ ಹುಕ್ಸ್ ಅವರ ಎರಡು ಕೃತಿಗಳನ್ನು ಕನ್ನಡಕ್ಕೆ ತಂದರು. ಓ ಎಲ್ ನಾಗಭೂಷಣ ಸ್ವಾಮಿ ಅವರಂತೂ ಬಿಡುವಿರದೆ ಸತತ ಅನುವಾದ ಕಾರ್ಯಗಳಲ್ಲಿ, ಕೋವಿಡ್ ಪೂರ್ವಕಾಲದಿಂದಲೂ ತೊಡಗಿಸಿಕೊಂಡಿದ್ದಾರೆ. ಇಷ್ಟರಲ್ಲೇ ಅವರ ಅನುವಾದದ ದಾಸ್ತೊವಸ್ಕಿಯ ’ಅಪರಾಧ ಮತ್ತು ಶಿಕ್ಷೆ’ ಕೃತಿ ಪ್ರಕಟವಾಗಲಿದೆ. ಇದರ ಜೊತೆಗೆ ಅವರ ಅನೇಕ ಅನುವಾದಗಳು ಕೊನೆಯ ಸ್ವರೂಪ ಪಡೆದುಕೊಳ್ಳಲು ಕಾದಿವೆ. ಕೇಶವ ಮಳಗಿ ಅವರ ಗಾಥಾ ಸಪ್ತಶತಿಯ ಆಯ್ದ ಪದ್ಯಗಳ ಅನುವಾದ, ಕಬೀರ್ ಪದ್ಯಗಳ ಅನುವಾದ ’ಹಂಸ ಏಕಾಂಗಿ’ ಹಾಗು ಮಧ್ಯಕಾಲೀನ ಯುಗದ ಭಕ್ತಿ ಮತ್ತು ಸೂಫಿ ಕಾವ್ಯದ ಅನುವಾದಗಳು – ಹೀಗೆ ಹಲವು ಹಿರಿಯ ಮತ್ತು ಕಿರಿಯ ಬರಹಗಾರರ ಅನುವಾದಗಳು ಈ ವರ್ಷದ ಅವಧಿಯಲ್ಲಿ ಪ್ರಕಟವಾದುವು. ಮತ್ತಷ್ಟು ಈಗ ಮುದ್ರಣದ ಮನೆಯಲ್ಲಿವೆ ಕೂಡ. ಡಿಸೆಂಬರ್ ಕೊನೆಯನ್ನೇ ನಾವು ಪುಸ್ತಕ ವರ್ಷದ ಕೊನೆಯಾಗಿ ಕಾಣಲಾಗದು. ಹಲವು ಕೃತಿಗಳು ಪುಟವಿನ್ಯಾಸ, ಕರಡು ತಿದ್ದುವಿಕೆ ಮತ್ತು ಮುದ್ರಣ ಹೀಗೆ ಬೇರೆ ಬೇರೆ ಅವಸ್ಥೆಗಳಲ್ಲಿವೆ.

ಈ ವರ್ಷ ಅತಿಹೆಚ್ಚು ಮಾರಾಟವಾದ ಕೃತಿಗಳು ಬಹುಶಃ ಕಾದಂಬರಿಗಳು ಮತ್ತು ಆತ್ಮಕಥನಗಳು. ಕೃಷ್ಣಮೂರ್ತಿ ಹನೂರರ ’ಕಾಲಯಾತ್ರೆ’, ರಾಘವೇಂದ್ರ ಪಾಟೀಲರ ’ಗೈರ ಸಮಜೂತಿ’, ಹಾಗೇ ವರ್ಷ ಮುಗಿಯುವುದರೊಳಗೆ ಮೂರು ಮುದ್ರಣ ಮುಗಿಸಿದ ವಸುಧೇಂದ್ರರ ’ತೇಜೋ ತುಂಗಭದ್ರಾ’ ಮತ್ತು ಕರಣಂ ಪವನ್ ಪ್ರಸಾದ್ ಅವರ ’ರಾಯಕೊಂಡ’ ಹೆಚ್ಚು ಜನರ ಮಾತಿನಲ್ಲಿ ಕಾಣಿಸಿಕೊಂಡವು. ವಿಚಾರ ಸಂಶೋಧನೆ ಕುರಿತಾಗಿ ಬಂದ ಪುಸ್ತಕಗಳಲ್ಲಿ ಜಿ ಎನ್ ನಾಗರಾಜ್ ಅವರ ’ಜಾತಿಪದ್ಧತಿ ಹೇಗೆ ಬಂತು’ ಮತ್ತು ನಟರಾಜ ಬೂದಾಳು ಅವರ ಬೌದ್ಧ ಅರಿವಿನ ಸರಣಿ ಪುಸ್ತಕಗಳಾದ ’ಪ್ರಜ್ಞಾಪರಾಮಿತ ಸೂತ್ರ, ’ದಾವ್ ದ ಜಿಂಗ್ ಹೆಚ್ಚು ಚರ್ಚೆಯಾದವು.

೨೦೨೦ನೇ ವರ್ಷದಲ್ಲಿ ಚೂರು ಭಿನ್ನವಾಗಿ ಕಾಣಿಸಿಕೊಂಡಿದ್ದು ಆತ್ಮಕಥನ/ಜೀವನ ಚರಿತ್ರೆ ಪುಸ್ತಕಗಳು. ಹೆಚ್ಚು ಮಾತು ಮತ್ತು ವಿಮರ್ಶೆಗೆ ಸಿಕ್ಕಿದ್ದು ಮಾತ್ರವಲ್ಲ ಮಾರುಕಟ್ಟೆಯಲ್ಲಿ ಕೂಡ ಹೆಚ್ಚು ಬಿಕರಿಯಾದುವು. ಡಾ. ಪುರುಷೋತ್ತಮ ಬಿಳಿಮಲೆ ಅವರ ’ಕಾಗೆ ಮುಟ್ಟಿದ ನೀರು’ ವರುಷ ಮುಗಿಯುವುದರೊಳಗೆ ಮೂರಕ್ಕೂ ಹೆಚ್ಚು ಮುದ್ರಣ ಕಂಡಿತು. ಹಾಗೆಯೆ ಮೂಡ್ನಾಕೂಡು ಚಿನ್ನಸ್ವಾಮಿ ಅವರ ’ನೆನೆಪಿನ ಹಕ್ಕಿಯ ಹಾರಲು ಬಿಟ್ಟು’ ಮತ್ತು ಚಂದ್ರಶೇಖರ ಮಂಡೆಕೋಲು ಅವರು ಸಂಪಾದಿಸಿ ಬರೆದಿರುವ ’ನೂರ್ ಇನಾಯತ್ ಖಾನ್ ಜೀವನ ಕಥನ’, ಜಗದೀಶ್ ಕೊಪ್ಪ ಅವರು ಅನುವಾದಿಸಿದ ಮಹಮದ್ ಯೂನಸ್ ಅವರ ಆತ್ಮಚರಿತ್ರೆ ’ಬಡವರ ಬಾಪು’ ಮತ್ತು ಪಲ್ಲವಿ ಇಡೂರು ಅವರ ’ಜೋಲಾಂಟಾ: ಇರೇನಾ ಸೆಂಡ್ಲರ್ ಜೀವನ ಕಥನ’ (ಮರು ಮುದ್ರಣ) ಸೇರಿದಂತೆ ಹಲವಾರು ಕೃತಿಗಳು ಮಾರುಕಟ್ಟೆಗೆ ಬಂದುವು.

ಇದನ್ನೂ ಓದಿ: ಪತ್ರಿಕೋದ್ಯಮ 2020: ಸ್ವಂತದ್ದೇ ಸ್ವಯ ತಪ್ಪಿದವರ ಊರ ಉಸಾಬರಿ

ಪ್ರತಿವರ್ಷ ಹೆಚ್ಚು ಮುದ್ರಿತವಾಗುತ್ತಿದ್ದ ಕವನ ಸಂಕಲನಗಳು ಈ ವರ್ಷ ಬಹಳವಾಗಿ ಕಡಿಮೆಯಾಗಿವೆ. ಅದಾಗ್ಯೂ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಯೋಜನೆಯಿಂದ ಒಂದಷ್ಟು ಕೃತಿಗಳು ಪ್ರಕಟಗೊಂಡಿವೆ. ಇವೆಲ್ಲಾ ಯುವ ಬರಹಗಾರರ ಮೊದಲ ಕೃತಿಗಳಾದ್ದರಿಂದ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಳ್ಳುವಂತಿಲ್ಲ. ಆದರೆ ಇವರೆಲ್ಲ ಭಿನ್ನ ವೃತ್ತಿ ಮತ್ತು ಪ್ರವೃತ್ತಿಯ ಕವಿಗಳು ಮತ್ತು ಅವರ ಪದ್ಯಗಳಲ್ಲಿ ಅಡಗಿಕೊಂಡಿರುವ ವಸ್ತು ವೈವಿಧ್ಯತೆ, ರಾಜಕೀಯ ಪ್ರತಿಸ್ಪಂದನೆ, ಲೈಂಗಿಕ ರಾಜಕೀಯಗಳ ವಿರುದ್ಧ ಹುರಿಗೊಳ್ಳುತ್ತಿರುವ ಪ್ರತಿಭಟನೆಯ ಪದಪ್ರಯೋಗಗಳು ಮುಂದೆ ಅವರಲ್ಲಿ ಹೆಚ್ಚು ಭರವಸೆಯನ್ನು ಮೂಡಿಸುತ್ತಿವೆ. ಇಲ್ಲಿ ಕೆಲವು ಹೆಸರುಗಳನ್ನ ನಾಮಕಾವಸ್ಥೆಗೆ ಹೆಸರಿದ್ದೇನೆ. ಆದ್ಯತೆಯ ಮೇಲಲ್ಲ.

ಓದಿನ ಟ್ರೆಂಡು:

PC : TCEA blog

ಪ್ರತಿವರ್ಷ ನಡೆಯುವ ಸಾಹಿತ್ಯಾವಲೋಕನಗಳು ಕೇವಲ ಆ ವರ್ಷ ಬಿಡುಗಡೆಯಾದ ಪುಸ್ತಕಗಳಿಗೆ ಸೀಮಿತ ಎಂದುಕೊಂಡು ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಇವತ್ತಿಗೂ ಕನ್ನಡದ ಓದುಗರು ಏನನ್ನು ಇಷ್ಟಪಡುತ್ತಿದ್ದಾರೆ? ಯಾರನ್ನು ಹೆಚ್ಚು ಓದುತ್ತಾರೆ? ಅಥವಾ ಓದಲು ಗೆಳೆಯರಿಗೆ, ಮಕ್ಕಳಿಗೆ ಯಾವುದನ್ನು ಶಿಫಾರಸ್ಸು ಮಾಡುತ್ತಾರೆ? ಎಂದು ಗಮನಿಸಿದರೆ ಆ ಸಾಲಿನಲ್ಲಿ ಪೂರ್ಣಚಂದ್ರ ತೇಜಸ್ವಿ ಮೊದಲು ಬರುತ್ತಾರೆ. ವಾದ ಸಿದ್ಧಾಂತಗಳ ಆಚೆಗೂ ತೇಜಸ್ವಿಯವರ ಪುಸ್ತಕಗಳು ಹೆಚ್ಚು ಬಿಕರಿಯಾಗುತ್ತಿವೆ. ತದನಂತರ ಕುವೆಂಪು, ಕಾರಂತ, ಲಂಕೇಶ್ ಮತ್ತು ಭೈರಪ್ಪ ಅವರ ಕೃತಿಗಳು ಇವೆ. ದೇವನೂರರ ಕೃತಿಗಳು ಇವತ್ತು ಅದೇ ಹಳೆಯ ರೀತಿಯಲ್ಲಿ ಓದುಗರನ್ನು ಒಳಗೊಳ್ಳುತ್ತಲೇ ಇವೆ. ಅಂದರೆ ನಮ್ಮ ಓದಿನ ಟ್ರೆಂಡು ಕಳೆದ ನಾಲ್ಕೈದು ದಶಕಗಳ ಹಿಂದೆ ಹೇಗಿತ್ತೋ ಇಂದೂ ಹಾಗೆಯೆ ಇದೆ.

ಪ್ರತಿವರ್ಷ ಬಿಡುಗಡೆಯಾಗುತ್ತಿರುವ ಆರೇಳು ಸಾವಿರ ಶೀರ್ಷಿಕೆಗಳ ಪುಸ್ತಕಗಳು ಬರುತ್ತಿವೆ ಹೋಗುತ್ತಿವೆ ಆದರೆ ಗಟ್ಟಿಯಾಗಿ ನಿಲ್ಲುತ್ತಿಲ್ಲ. ನಮ್ಮ ಹಿಂದಿನ ತಲೆಮಾರಿನ ಹಲವು ಲೇಖಕರ ಕೃತಿಗಳು ಕೂಡ ಮಾರುಕಟ್ಟೆಯಲ್ಲಿ ಒಳ್ಳೆಯ ಮಾರಾಟವಾಗಲು ಸಾಧ್ಯವಾಗುತ್ತಿಲ್ಲ. ಉಸಿರುಗಟ್ಟಿ ಸಾವಿರ ಪ್ರತಿ ಮಾರಿದರೆ ಸಾಕು ಎಂದರೆ ಕೆಲವರು 300 ಪ್ರತಿ ಹೋಗಿ ಅಸಲು ಬಂಡವಾಳ ಬಂದರೆ ಸಾಕು ಎನ್ನುತ್ತಿದ್ದಾರೆ. ಇದನ್ನು ಗಮನಿಸಿದರೆ ಓದುವ ಪ್ರವೃತ್ತಿ ಇಳಿದಿದೆ ಎಂದು ಭಾವಿಸಲಾಗುತ್ತದೆ. ಅಸಲಿಗೆ ಹಾಗೆಂದುಕೊಳ್ಳುವುದು ತಪ್ಪು. ಓದುವ ಪ್ರವೃತ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಯಾಕಂದ್ರೆ ಪ್ರತಿ ಮನೆಯಲ್ಲೂ ಸಾಕ್ಷರತೆಯ ಪ್ರಮಾಣ ಇದೀಗ ಹೆಚ್ಚುತ್ತಿದೆ. ಆದರೆ ಅಲ್ಲಿ ಕನ್ನಡ ಸಾಹಿತ್ಯದ ಬೇರೆ ಬೇರೆ ಮನರಂಜನೆಯ ಪುಸ್ತಕಗಳು ಮತ್ತು ಧಾರ್ಮಿಕ ಕೃತಿಗಳು ಸ್ಥಾನ ಗಳಿಸುತ್ತಿವೆ. ಹಲವರು ವೈವಿಧ್ಯಮಯವಾದ ಸಾಹಿತ್ಯಕ್ಕಾಗಿ ಇಂಗ್ಲಿಷ್ ಭಾಷೆಗೆ ಮೊರೆಹೋಗುವುದು ಅತಿಯಾಗಿದೆ.

ಹೊಸಮಾದರಿಯನ್ನು ಕಂಡುಕೊಳ್ಳಲು ಅವಕಾಶ?

PC : Udayavani

ಕೋವಿಡ್-19ರ ಪರಿಸ್ಥಿತಿಯು ಪುಸ್ತಕದ ಅಂಗಡಿಗಳು ಮತ್ತು ಪ್ರಕಾಶಕರಿಗೆ ಹೆಚ್ಚು ನಷ್ಟವನ್ನೇ ಉಂಟುಮಾಡಿದೆ. ಲಾಕ್‌ಡೌನ್ ಅವಧಿಯಲ್ಲಿ ಪುಸ್ತಕದ ವ್ಯವಹಾರ ಸಂಪೂರ್ಣ ನೆಲಕಚ್ಚಿತ್ತು. ಅಂಗಡಿಗಳನ್ನು ತೆರೆಯುವಂತಿರಲಿಲ್ಲ, ಅಂಚೆ ವ್ಯವಸ್ಥೆ, ಸಾಗಣೆ ವ್ಯವಸ್ಥೆಗಳು ಕೂಡ ಇರಲಿಲ್ಲ. ಹಾಗಾಗಿ ಪುಸ್ತಕಗಳನ್ನು ಮಾರುವ ದಾರಿಯೇ ಇಲ್ಲವಾಗಿತ್ತು. ಲಾಕ್‌ಡೌನ್ ನಿಯಮಗಳು ಚೂರು ತೆರವಾದ ಮೊದಲಲ್ಲಿ ಸೋಶಿಯಲ್ ಮಿಡಿಯಾಗಳ ಮೂಲಕ ಪ್ರಕಾಶಕರು ಮತ್ತು ವ್ಯಾಪಾರಿಗಳು ಸಣ್ಣದಾಗಿ ವ್ಯವಹಾರ ಶುರುಮಾಡಿದರು. ಆದರೆ ದೊಡ್ಡ ದೊಡ್ಡ ಪುಸ್ತಕದಂಗಡಿಗಳು ಮುಚ್ಚಿಕೊಂಡಿದ್ದವು.

ಇದನ್ನೂ ಓದಿ: ಹೊಸ ವರುಷದ ಆವಿಷ್ಕಾರಗಳ ನಿರೀಕ್ಷೆಯಲ್ಲಿ, ಹಳೆ ವರುಷದ ವಿಜ್ಞಾನ ಕಸುವಿನ ನೆನಪುಗಳು

ಈ ಹೊಸ ನೇರ ವ್ಯವಹಾರವು ಓದುಗ ಮತ್ತು ಪ್ರಕಾಶಕನ ನಡುವೆ ಹೊಸ ಬಾಂಧವ್ಯವನ್ನು ಸೃಷ್ಟಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಹೆಚ್ಚು ರಿಯಾಯಿತಿಯೊಂದಿಗೆ ನಗದು ವ್ಯವಹಾರ ಮಾಡುವುದರಿಂದ ಪ್ರಕಾಶಕನಿಗೂ ಬಲವನ್ನು ಕೊಡುತ್ತಿದೆ. ಇದು ಮತ್ತಷ್ಟು ಮಾರ್ಪಾಡುಗಳನ್ನ ಮಾಡಿಕೊಂಡು ಮುಂದುವರಿದರೆ ಪುಸ್ತಕ ಮಾರಾಟಕ್ಕೆ ಹೊಸ ದಾರಿಯು ತೆರೆದುಕೊಳ್ಳುತ್ತದೆ.

ಬಲಪಂಥೀಯ ಸಾಹಿತ್ಯ?!

2020ರ ಕನ್ನಡ ಸಾಹಿತ್ಯದ ಬೆಳವಣಿಗೆಗಳಲ್ಲಿ ಮತ್ತೊಂದು ಗಮನಿಸಬೇಕಾದ ಸಂಗತಿ ಎಂದರೆ ಬಲಪಂಥೀಯವಾದಿಗಳು ಅಧಿಕೃತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು, ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಮತ್ತು ಪ್ರತ್ಯೇಕ ಸಾಹಿತ್ಯ ಗೋಷ್ಠಿಗಳು, ಸಮ್ಮೇಳನಗಳನ್ನು ನಡೆಸುತ್ತಿರುವುದು. ಇದೆಷ್ಟೇ ಅಲ್ಲ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ಓದುವಾಗ ಎಬಿವಿಪಿ ತರಹ ಕೇಳಿಸುತ್ತದೆ) ಅನ್ನು ಸ್ಥಾಪಿಸಿಕೊಂಡು ತಳಮಟ್ಟದಿಂದಲೇ ಸುಳ್ಳು ಸುದ್ದಿಗಳ ಸಾಹಿತ್ಯ ಭಂಡಾರವನ್ನು ಸೃಷ್ಟಿಸಲು ತೊಡಗಿದ್ದಾರೆ. ಪ್ರಮುಖವಾದ ವೇದಿಕೆಗಳಲ್ಲೇ ಸಾವರ್ಕರ್ ಕುರಿತಾದ ಎರಡು ಮೂರು ಪುಸ್ತಕಗಳು ಈಚೆಗೆ ಬಿಡುಗಡೆಯಾಗಿವೆ. ಹಾಗೆಯೇ ಪುರಾವೆಗಳಿಲ್ಲದ, ಕಟ್ಟುಕಥೆಗಳುಳ್ಳ ಪುಸ್ತಕಗಳು ಸಂಶೋಧನೆ ಮತ್ತು ವಿಮರ್ಶೆಯ ಹೆಸರಿನಲ್ಲಿ ಪ್ರಕಟವಾಗಿದ್ದು ಮಾತ್ರವಲ್ಲ ಅವನ್ನು ಕಡಿಮೆ ಬೆಲೆಯಲ್ಲಿ ಸಾವಿರಾರು ಪ್ರತಿಗಳನ್ನು ಸಂಘಟನೆಗಳ ಮೂಲಕ ಜನರಿಗೆ ಮಾರಲಾಗುತ್ತಿದೆ.

ಒಬ್ಬ ಪ್ರಕಾಶಕನಾಗಿ ಈ ವರ್ಷ ಪುಸ್ತಕಗಳಿಗೆ ಹೆಚ್ಚು ಬೇಡಿಕೆ ಇದ್ದುದನ್ನು ಗಮನಿಸಿದ್ದೇನೆ. ಕೋವಿಡ್‌ನ ಭಯ, ಲಾಕ್‌ಡೌನ್‌ನಲ್ಲಿನ ಏಕತಾನತೆಯಿಂದ ಬಿಡಿಸಿಕೊಳ್ಳಲು ಜನ ಪುಸ್ತಕಗಳಿಗಾಗಿ ಮೊರೆಯಿಡಲು ಆರಂಭಿಸಿದರು. ಆದರೆ ಅವರ ದಾಹಕ್ಕೆ ತಕ್ಕಷ್ಟು ನೀರು ಸಿಕ್ಕಲಿಲ್ಲ. ಒಬ್ಬ ಓದುಗನಾಗಿ ಈ ಒಂದು ವರ್ಷದ ಕಾಲಾವಧಿಯಲ್ಲಿ ಹೇಳಿಕೊಂಡು ತೀರ ಸಂಭ್ರಮಿಸುವ ಪುಸ್ತಕಗಳೇನು ಬರಲಿಲ್ಲ ಎಂಬುದು ನನ್ನ ಅಭಿಮತ.

ರಾಜೇಂದ್ರ ಪ್ರಸಾದ್

ರಾಜೇಂದ್ರ ಪ್ರಸಾದ್
ಹೊಸ ತಲೆಮಾರಿನ ಕವಿ. ಕಾವ್ಯ, ತತ್ವಶಾಸ್ತ್ರ, ಕರ್ನಾಟಕ ಸಂಗೀತ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು, ಭೂಮಿಗಂಧ, ಕೋವಿ ಮತ್ತು ಕೊಳಲು, ಲಾವೋನ ಕನಸು, ಬ್ರೆಕ್ಟ್ ಪರಿಣಾಮ ನೀರೊಳಗೆ ಮಾಯದ ಜೋಳಿಗೆ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಸಂಕಥನ’ ಸಾಹಿತ್ಯ ಪತ್ರಿಕೆ ಸಂಪಾದಕ.


ಇದನ್ನೂ ಓದಿ: ನಾವೆಲ್ಲರು ಓದಲೇಬೇಕಾದ ಪುಸ್ತಕ: ‘ಎಲ್ಲರಿಗಾಗಿ ಸ್ತ್ರೀವಾದ – ಆಪ್ತತೆಯ ರಾಜಕಾರಣ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...