ಮಧ್ಯಪ್ರದೇಶ: ಹೊಸ ಶಿಕ್ಷಣ ನೀತಿ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ, ಪೊಲೀ‌ಸರಿಂದ ಲಾಠಿಚಾರ್ಜ್

ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ನೇತೃತ್ವದಲ್ಲಿ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐನ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿದ್ದು, ಕಲ್ಲು ತೂರಾಟ ಮತ್ತು ಲಾಠಿಚಾರ್ಜ್ ನಡೆದಿರುವ ಘಟನೆಗಳು ವರದಿಯಾಗಿವೆ.

ಪ್ರತಿಭಟನಾಕಾರರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿವಾಸದ ಕಡೆಗೆ ಮೆರವಣಿಗೆ ಹೋಗುವುದನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್ ಸೇರಿದಂತೆ ರಾಜ್ಯದ ಎಲ್ಲಾ 52 ಜಿಲ್ಲೆಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020; ಶಿಕ್ಷಕರ ಮೇಲಿನ ಪರಿಣಾಮ

ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿ ಜಾರಿಯಾಗುತ್ತಿರುವ ಹೊಸ ಶಿಕ್ಷಣ ನೀತಿಯಲ್ಲಿನ ಲೋಪದೋಷಗಳ ಕುರಿತು ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್ ವಿರುದ್ಧ ಹಲವರು ಆಕ್ರೋಶ ಹೊರಹಾಕಿದ್ದಾರೆ.

“ಹೊಸ ಶಿಕ್ಷಣ ನೀತಿ, ಶಿಕ್ಷಣದ ಖಾಸಗೀಕರಣ ಮತ್ತು ನಿರುದ್ಯೋಗದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಸದಸ್ಯರ ಮೇಲೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕ್ರೂರ ಲಾಠಿಚಾರ್ಜ್ ನಡೆದಿದೆ. ವಿದ್ಯಾರ್ಥಿಗಳ ಮಾತನ್ನು ಕೇಳುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ” ಎಂದು ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ರಾಷ್ಟ್ರೀಯ ಸಂಚಾಲಕಿ ರುಚಿರಾ ಚರ್ತುವೇದಿ ಟ್ವೀಟ್ ಮಾಡಿದ್ದಾರೆ.

ಎನ್‌ಎಸ್‌ಯುಐ ಘಟಕ ಸದಸ್ಯರ ಮೇಲೆ ನಡೆದಿರುವ ಹಲ್ಲೆಯ ಚಿತ್ರಗಳನ್ನು ಹಂಚಿಕೊಂಡು, ಘಟನೆಯನ್ನು ಖಂಡಿಸಿದೆ.

‘ಶಿಕ್ಷಣ ಉಳಿಸಿ, ಭಾರತ ಉಳಿಸಿ’ ಎಂಬ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿದ್ದೇವೆ ಎಂದು ಯುವ ಕಾಂಗ್ರೆಸ್ ಮಾಧ್ಯಮ ಘಟಕದ ಅಧ್ಯಕ್ಷ ವಿವೇಕ್ ತ್ರಿಪಾಠಿ ಹೇಳಿದ್ದಾರೆ.

“ಮಧ್ಯಪ್ರದೇಶದಲ್ಲಿ ಎಸ್‌ಸಿ-ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವು ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ ಕಾಲೇಜು ಆಡಳಿತವು ಶುಲ್ಕಕ್ಕಾಗಿ ಅವರ ಮೇಲೆ ಒತ್ತಡ ಹೇರುತ್ತದೆ. ಶಿಕ್ಷಣ ಮಾಫಿಯಾ ಎಲ್ಲವನ್ನೂ ನಡೆಸುತ್ತಿದೆ. ಅವರು ನಕಲಿ ಪದವಿಗಳನ್ನು ವಿತರಿಸುತ್ತಿದ್ದಾರೆ. ನಾವು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಹೊರಟಿದ್ದೇವು, ಆದರೆ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ವಿವೇಕ್ ತ್ರಿಪಾಠಿ ಹೇಳಿದ್ದಾರೆ.


ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ 2020: ಪ್ರಭುತ್ವ ಹಿತಾಸಕ್ತಿ v/s ಸಾರ್ವಜನಿಕ ಹಿತಾಸಕ್ತಿ

LEAVE A REPLY

Please enter your comment!
Please enter your name here