ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಘೋಷಿಸಿದ ನಂತರ ದೆಹಲಿ ಗಡಿಗಳಿಂದ ರೈತರು ವಾಪಸಾಗುತ್ತಿಲ್ಲ, ಬದಲಿಗೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಗಡಿಗಳತ್ತ ಬಂದು ಸೇರುತ್ತಿರುವ ವಿದ್ಯಮಾನ ಜರುಗುತ್ತಿದೆ. ಕಾಯ್ದೆ ವಾಪಸಾತಿಯಿಂದ ರೈತರ ಖುಷಿ ದ್ವಿಗುಣಗೊಂಡಿದ್ದು, ಸಂಭ್ರಮ ಆಚರಿಸಲು ಮತ್ತು ಎಂಎಸ್‌ಪಿ ಕಾಯ್ದೆ ಜಾರಿ ಮಾಡಲು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಗಳತ್ತ ಹೊರಟಿದ್ದಾರೆ.

ನವೆಂಬರ್ 26ಕ್ಕೆ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ರೈತರು ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣಗಳಿಂದ ದೆಹಲಿ ಗಡಿಗಳತ್ತ ಬಸ್, ಟ್ರಾಕ್ಟರ್ ಮತ್ತು ರೈಲುಗಳಲ್ಲಿ ಬಂದು ಸೇರುತ್ತಿದ್ದಾರೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಮೋದಿ ಘೋಷಿಸಿದ್ದರೂ ರೈತರ ಚಿತ್ತವೀಗ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲೆ ನೆಟ್ಟಿದೆ. ಚುನಾವಣಾ ಭರವಸೆಯಲ್ಲಿ ಎಂಎಸ್‌ಪಿ ನೀಡುವುದಾಗಿ, ರೈತರ ಆದಾಯ ಡಬಲ್ ಮಾಡುವುದಾಗಿ ಘೋಷಿಸಿದ್ದ ಪ್ರಧಾನಿ ಈಗ ಅದನ್ನು ಜಾರಿಗೊಳಿಸಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.

ಸಮಗ್ರ ಉತ್ಪಾದನಾ ವೆಚ್ಚದ (C2+50%) ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಲ್ಲಾ ರೈತರಿಗೆ ಕಾನೂನುಬದ್ಧ ಅರ್ಹತೆಯಾಗಿ ಮಾಡಬೇಕು. ಸರ್ಕಾರವು ಪ್ರಸ್ತಾಪಿಸಿರುವ “ವಿದ್ಯುತ್ ತಿದ್ದುಪಡಿ ಮಸೂದೆ, 2020/2021” ಕರಡನ್ನು ಹಿಂತೆಗೆದುಕೊಳ್ಳಬೇಕು ಎಂದು ರೈತರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ದೆಹಲಿ, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಹಲವಾರು ಇತರ ರಾಜ್ಯಗಳಲ್ಲಿ ಈ ಚಳವಳಿಯ ಸಂದರ್ಭದಲ್ಲಿ (ಜೂನ್ 2020 ರಿಂದ ಇಲ್ಲಿಯವರೆಗೆ) ರೈತರ ಮೇಲೆ ನೂರಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಕೂಡಲೇ ಈ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಹ ರೈತರು ಒತ್ತಾಯಿಸಿದ್ದಾರೆ.

ಲಖಿಂಪುರ ಖೇರಿ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಮತ್ತು ಸೆಕ್ಷನ್ 120 ಬಿ ಆರೋಪಿ ಅಜಯ್ ಮಿಶ್ರಾ ಟೆನಿ ಇನ್ನೂ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಮತ್ತು ನಿಮ್ಮ ಸಂಪುಟದಲ್ಲಿ ಸಚಿವರಾಗಿ ಉಳಿದಿದ್ದಾರೆ.  ಅವರು ನಿಮ್ಮೊಂದಿಗೆ ಮತ್ತು ಇತರ ಹಿರಿಯ ಸಚಿವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಅವರನ್ನು ವಜಾಗೊಳಿಸಿ ಬಂಧಿಸಬೇಕು ಮತ್ತು ಇದುವರೆಗೆ ಸುಮಾರು 700 ರೈತರು ತಮ್ಮ ಪ್ರಾಣವನ್ನು ತಮ್ಮ ಪರಮ ತ್ಯಾಗವಾಗಿ ಅರ್ಪಿಸಿದ್ದಾರೆ.  ಅವರ ಕುಟುಂಬಗಳಿಗೆ ಪರಿಹಾರ ಮತ್ತು ಪುನರ್ವಸತಿ ಬೆಂಬಲ ನೀಡಬೇಕು.  ಹುತಾತ್ಮ ರೈತರ ಸ್ಮರಣಾರ್ಥ ಹುತಾತ್ಮರ ಸ್ಮಾರಕ ನಿರ್ಮಿಸಲು ಸಿಂಘು ಗಡಿಯಲ್ಲಿ ಭೂಮಿ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದೆ.

ಈ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವಂಬರ್ 29 ರಂದು ಸಂಸತ್ ಚಲೋ ಕಾರ್ಯಕ್ರಮಕ್ಕೆ ರೈತರು ಕರೆ ನೀಡಿದ್ದಾರೆ.


ಇದನ್ನೂ ಓದಿ: ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಮಂಡನೆಯಾಗಲಿವೆ 26 ಹೊಸ ಮಸೂದೆ: ಇಲ್ಲಿದೆ ಸಂಕ್ಷಿಪ್ತ ವಿವರ

LEAVE A REPLY

Please enter your comment!
Please enter your name here