Homeಮುಖಪುಟಬಿಲ್ಕಿಸ್ ಬಾನು ಪ್ರಕರಣ: ಆಶಾ ಭಾವನೆ ಮೂಡಿಸಿದ ಮಹಾರಾಷ್ಟ್ರದ ಕ್ಷಮಾದಾನ ನೀತಿ

ಬಿಲ್ಕಿಸ್ ಬಾನು ಪ್ರಕರಣ: ಆಶಾ ಭಾವನೆ ಮೂಡಿಸಿದ ಮಹಾರಾಷ್ಟ್ರದ ಕ್ಷಮಾದಾನ ನೀತಿ

- Advertisement -
- Advertisement -

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಜೈಲಿನಿಂದ ಅವಧಿಪೂರ್ವ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.

ಈ ಬೆನ್ನಲ್ಲೇ ಅಪರಾಧಿಗಳು ಬಿಡುಗಡೆ ಕೋರಿ ಮಹಾರಾಷ್ಟ್ರ ಸರ್ಕಾರದ ಮೊರೆ ಹೋಗಬಹುದು, ಮಹಾರಾಷ್ಟ್ರದ ಹಿಂದುತ್ವವಾದಿ ಸರ್ಕಾರ ಅವರನ್ನು ಬಿಡುಗಡೆ ಮಾಡಬಹುದು ಎಂಬ ಆತಂಕ ಸ್ವತಃ ಬಿಲ್ಕಿಸ್ ಬಾನು ಸೇರಿದಂತೆ ಬಹುತೇಕರಿಗೆ ಶುರುವಾಗಿದೆ. ಆದರೆ, ಮಹಾರಾಷ್ಟ್ರದ ಒಂದು ಕಾನೂನು ಈ ಆತಂಕವನ್ನು ದೂರ ಮಾಡುವ ಆಶಾ ಭಾವನೆ ಜೀವಪರರಲ್ಲಿ ಮೂಡಿಸಿದೆ.

ಬಿಲ್ಕಿಸ್ ಬಾನು ಪ್ರಕರಣ ಗುಜರಾತ್‌ನಲ್ಲಿ ನಡೆದಿದ್ದರೂ, ಸುಪ್ರೀಂ ಕೋರ್ಟ್‌ ಆದೇಶದಂತೆ ವಿಚಾರಣೆ ಮಹಾರಾಷ್ಟ್ರದ ನ್ಯಾಯಾಲಯದಲ್ಲಿ ನಡೆದಿತ್ತು. ಮಹಾರಾಷ್ಟ್ರದ ಗ್ರೇಟರ್ ಮುಂಬೈ ವಿಶೇಷ ನ್ಯಾಯಾಲಯ 2008ರ ಜನವರಿ 21ರಂದು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹಾಗಾಗಿ ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರ ಮಹಾರಾಷ್ಟ್ರ ಸರ್ಕಾರಕ್ಕಿದೆ. ಸೋಮವಾರ ಸುಪ್ರೀಂ ಕೋರ್ಟ್‌ ತೀರ್ಪು ನಿಡುವಾಗಲೂ ಗುಜರಾತ್‌ ಸರ್ಕಾರಕ್ಕೆ ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರ ಇಲ್ಲ ಎಂದಿರುವುದು ಕೂಡ ಇದೇ ವಿಚಾರಕ್ಕೆ.

ಆದರೆ, ಮುಂಬೈ ನ್ಯಾಯಾಲಯದ ತೀರ್ಪಿನ ಪ್ರಕಾರ 11 ಅಪರಾಧಿಗಳು ಕ್ಷಮಾದಾನ ಪಡೆಯುವ ಮೊದಲು ಕನಿಷ್ಠ 18 ವರ್ಷ ಶಿಕ್ಷೆ ಅನುಭವಿಸಿರಬೇಕು. ಇದರರ್ಥ ಎಲ್ಲಾ ಹನ್ನೊಂದು ಅಪರಾಧಿಗಳು 2026ರಲ್ಲಿ ಮಾತ್ರ ಕ್ಷಮಾದಾನ ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ ಅತೀವ ಹಿಂಸೆಗೆ ತುತ್ತಾದ ಮಹಿಳೆಯರ ಪ್ರಕರಣಗಳನ್ನು 2008ರ ಮಹಾರಾಷ್ಟ್ರ ಕ್ಷಮಾದಾನ ನೀತಿ ಪ್ರತ್ಯೇಕವಾಗಿ ಗುರುತಿಸಿದ್ದು, ಇದರ ಅಡಿಯಲ್ಲಿ ಅಪರಾಧಿಗಳು 28 ವರ್ಷಗಳ ಶಿಕ್ಷೆ ಅನುಭವಿಸಿದ ನಂತರವಷ್ಟೇ ಕ್ಷಮಾದಾನಕ್ಕೆ ಅರ್ಹರಾಗಿರುತ್ತಾರೆ. ಈ ನಿಯಮ ಪ್ರಕರಣದ 11 ಅಪರಾಧಿಗಳಿಗೆ ಅನ್ವಯವಾಗುವ ಸಾಧ್ಯತೆಯಿದ್ದು, ಕನಿಷ್ಠ ಇನ್ನೂ 12 ವರ್ಷಗಳ ಕಾಲ ಅಂದರೆ 2036ರವರೆಗೆ ಅವರು ಸೆರೆವಾಸ ಅನುಭವಿಸಬೇಕಾಗಬಹುದು. 2008ರ ನೀತಿಗೆ ಮೊದಲು, ಮಹಾರಾಷ್ಟ್ರದಲ್ಲಿ 1992ರ ನೀತಿಯಡಿ ಕ್ಷಮಾದಾನ ನೀಡಲಾಗುತ್ತಿತ್ತು.

ಅಪರಾಧಿಗಳು 28 ವರ್ಷಗಳ ಶಿಕ್ಷೆ ಅನುಭವಿಸಿದ ನಂತರವಷ್ಟೇ ಕ್ಷಮಾದಾನಕ್ಕೆ ಅರ್ಹರಾಗಿರುತ್ತಾರೆ ಎಂಬ ಮಹಾರಾಷ್ಟ್ರದ 2008ರ ಕ್ಷಮಾದಾನ ನೀತಿ ಬಿಲ್ಕಿಸ್ ಬಾನು ಮತ್ತು ಆಕೆಯನ್ನು ಬೆಂಬಲಿಸುವ ಮನುಷ್ಯರಲ್ಲಿ ಆಶಾಭಾವನೆ ಮೂಡಿಸಿದೆ. ಆದರೂ, ಈಗ ಅತೀವ ಸಂತಸಪಡುವಂತಿಲ್ಲ.

ಮುಂದೆ ನಡೆಯಬೇಕಾಗಿರುವುದು ಅಪರಾಧಿಗಳು ಸುಪ್ರೀಂ ಕೋರ್ಟ್‌ ಆದೇಶದಂತೆ ಎರಡು ವಾರಗಳಲ್ಲಿ ಜೈಲಿಗೆ ಮರಳಬೇಕು. ಒಂದು ವೇಳೆ ಅವರು ತಪ್ಪಿಸಿಕೊಂಡರೆ ಪೊಲೀಸರು ಬಂಧಿಸಿ ಕರೆ ತರಲಿದ್ದಾರೆ. ಜೈಲು ಸೇರುವ ಮುನ್ನ ಅಥವಾ ನಂತರ ಅವರು ಕ್ಷಮಾದಾನ ಕೋರಿ ಮಹಾರಾಷ್ಟ್ರ ಸರ್ಕಾರದ ಮೊರೆ ಹೋಗಬಹುದು. ಮಹಾರಾಷ್ಟ್ರ ಸರ್ಕಾರ ಅವರನ್ನು ಬಿಡುಗಡೆ ಮಾಡಿದರೆ, ಬಿಲ್ಕಿಸ್ ಬಾನು ಮತ್ತೊಮ್ಮೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿ ಬಿಡುಗಡೆ ಪ್ರಶ್ನಿಸುವ ಸಾಧ್ಯತೆ ಇದೆ. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್‌ ತೀರ್ಪಿನ ಮೇಲೆ ನಿರ್ಧರಿತವಾಗಿರುತ್ತದೆ.

ಒಂದು ವೇಳೆ ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮನವಿ ತಳ್ಳಿ ಹಾಕಿದರೆ, ಅತ್ಯಾಚಾರಿಗಳು ತಮ್ಮ ಶಿಕ್ಷೆಯ ಅವಧಿ ಮುಗಿಯುವವರೆಗೆ ಜೈಲಿನಲ್ಲಿ ಇರಬೇಕಾಗುತ್ತದೆ. ಇದರಿಂದ ಒಂದು ಹಂತದಲ್ಲಿ ಬಿಲ್ಕಿಸ್ ಬಾನು ಹೋರಾಟಕ್ಕೆ ಜಯ ಸಿಕ್ಕಿದಂತಾಗುತ್ತದೆ.

ಗುಜರಾತ್‌ ಸರ್ಕಾರದ ನಡೆಗೆ ಸುಪ್ರೀಂ ಕೋರ್ಟ್‌ ಅಸಮಧಾನ

ನಿನ್ನೆ ಪ್ರಕಟವಾದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, “ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಅಧಿಕಾರ ಕಸಿದುಕೊಂಡಿದ್ದು ಸರಿಯಲ್ಲ. ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮನವಿಯನ್ನು ನಿರ್ಧರಿಸಲು ಗುಜರಾತ್‌ ಸಮರ್ಥವಾಗಿದೆ ಎಂದು ಘೋಷಿಸಿದ ಮೇ 2022ರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಗುಜರಾತ್ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿತ್ತು. ಸಿಆರ್‌ಪಿಸಿ 437ನೇ ಸೆಕ್ಷನ್‌ ಪ್ರಕಾರ ಮಹಾರಾಷ್ಟ್ರವೇ ಸೂಕ್ತ ಸರ್ಕಾರ ಎಂದು ಗುಜರಾತ್ ಈ ಹಿಂದೆ ಸರಿಯಾಗಿ ವಾದಿಸಿತ್ತು. ಆದರೆ ಅದನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿದಾಗ ಗುಜರಾತ್ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದಿತ್ತು. ಮೇ 13, 2022ರ ತೀರ್ಪನ್ನು ತಿದ್ದುಪಡಿ ಮಾಡುವಂತೆ ಕೋರಿ ಗುಜರಾತ್ ಸರ್ಕಾರ ಏಕೆ ಮರುಪರಿಶೀಲನೆ ಸಲ್ಲಿಸಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಈ ಪ್ರಕರಣದಲ್ಲಿ ಬಿಡುಗಡೆ ಎಂಬುದು ಅಧಿಕಾರ ಮತ್ತು ನ್ಯಾಯವ್ಯಾಪ್ತಿಯಿಲ್ಲದ ಆದೇಶಗಳಿಂದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.

ಅತ್ಯಾಚಾರಿಗಳು ಕನಿಷ್ಠ 28 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು

ಅಪರಾಧಿಗಳ ಬಿಡುಗಡೆಗೆ ಯಾವ ನೀತಿ ಅನ್ವಯಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಧೀಶರು 2008ರ ನೀತಿ ಅನ್ವಯಿಸಿದ್ದರು. ಮತ್ತೊಂದೆಡೆ 1992ರ ನೀತಿ ಅನ್ವಯಿಸಿದರೂ ಕೂಡ, ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಕೊಲೆಗಳಿಗಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವವರ ಪ್ರಕರಣಗಳಲ್ಲಿ ಕನಿಷ್ಠ 22 ವರ್ಷಗಳನ್ನು ಪೂರೈಸಿದ ನಂತರವೇ ವಿನಾಯಿತಿ ದೊರೆಯಲಿದ್ದು, ಅಸಾಧಾರಣ ಹಿಂಸಾಚಾರ ಅಥವಾ ವಿಕೃತತೆಯನ್ನು ಒಳಗೊಂಡಿದ್ದರೆ ಕನಿಷ್ಠ ಶಿಕ್ಷೆಯ ಅವಧಿ 28 ವರ್ಷಗಳಾಗುತ್ತವೆ. ಈ ನೀತಿ ಅನ್ವಯ ಪ್ರಕರಣದ ಅಪರಾಧಿಗಳು 2030 ಅಥವಾ 2036ರ ನಂತರವಷ್ಟೇ ಬಿಡುಗಡೆಗೆ ಅರ್ಹರಾಗುತ್ತಾರೆ.

ಸುಪ್ರೀಂ ತೀರ್ಪಿನ ಬಗ್ಗೆ ಯಾರು ಏನಂದ್ರು?

“ನಾನು ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ, ನ್ಯಾಯಾಲಯ ತೀರ್ಪು ನೀಡುವಾಗ, ಗುಜರಾತ್ ಸರ್ಕಾರ ತನ್ನೆಲ್ಲ ಮಿತಿಗಳನ್ನು ಮೀರಿ, ಅನ್ಯಾಯದ ಮಾರ್ಗದ ಮೂಲಕ ಅಪರಾಧಿಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದೆ. ಇದು ನನಗೆ ಆಘಾತವನ್ನು ಉಂಟು ಮಾಡಿದೆ. ಅತ್ಯಂತ ಕ್ರೂರ ಕೃತ್ಯ ಎಸಗಿದವರನ್ನು ರಕ್ಷಣೆ ಮಾಡುವ ದರ್ದು ಗುಜರಾತ್ ಸರ್ಕಾರಕ್ಕೆ ಯಾಕಿದೆ? ಗುಜರಾತ್ ಸರ್ಕಾರ ಅಪರಾಧಿಗಳ ಬಿಡುಗಡೆಗೆ ಯಾಕಿಷ್ಟು ಮುತುವರ್ಜಿ ವಹಿಸುತ್ತಿದೆ ಎಂದು ತಿಳಿಯುತ್ತಿಲ್ಲ. ಅಪರಾಧಿಗಳು ಮಹಾರಾಷ್ಟ್ರ ಸರ್ಕಾರದ ಮೊರೆ ಹೋದರೆ ನಾವು ಹೋರಾಟ ಮುಂದುವರಿಸುತ್ತೇವೆ. ಬಿಲ್ಕಿಸ್ ಮೇಲೆ ದೌರ್ಜನ್ಯ ನಡೆದ ಕೆಲ ದಿನಗಳಲ್ಲೇ ನಾನು ಆಕೆಯನ್ನು ಭೇಟಿಯಾಗಿದ್ದೆ. ಅವತ್ತು ಆಕೆಯ ಮುಖದಲ್ಲಿದ್ದ ನೋವು, ಇವತ್ತಿಗೂ ನನ್ನ ಕಣ್ಣ ಮುಂದೆ ಬರುತ್ತಿದೆ” ಎಂದು ಬಿಲ್ಕಿಸ್ ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಸಾಮಾಜಿಕ ಹೋರಾಟಗಾರ್ತಿ ಸುಭಾಶಿನಿ ಅಲಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ ಮಹಿಳಾ ಹಕ್ಕುಗಳ ವಕೀಲೆ ಆಭಾ ಸಿಂಗ್, “ಬಿಲ್ಕಿಸ್ ಬಾನುಗೆ ನ್ಯಾಯ ದೊರೆತಿದೆ, ಆಕೆಗೆ ನ್ಯಾಯ ದೊರಕಿಸಿ ಕೊಡಲಾಗಿದೆ. ಇದೊಂದು ದೊಡ್ಡ ಜಯ. ಒಳ್ಳೆಯದನ್ನು ಯೋಚನೆ ಮಾಡುವ ಎಲ್ಲಾ ಮನುಷ್ಯರಿಗೆ ಸಿಕ್ಕ ಜಯ. ಗುಜರಾತ್ ಸರ್ಕಾರ ತಪ್ಪಾದ ರೀತಿಯಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೊಬ್ಬರು ವಕೀಲೆ ಫ್ಲಾವಿಯ ಇಗ್ನಿಸ್ ಮಾತನಾಡಿ, ನಾನು ತೀರ್ಪು ಸ್ವಾಗತಿಸುತ್ತೇನೆ. ಇದೊಂದು ಅತ್ಯದ್ಭುತ ತೀರ್ಪ. ಅಪರಾಧಿಗಳನ್ನು ಬಿಡುಗಡೆ ಮಾಡಿದ್ದಾಗ ಹೂಮಾಲೆ ಹಾಕಿ ಸ್ವಾಗತಿಸುವ ಮೂಲಕ, ನ್ಯಾಯ ನಿರೀಕ್ಷೆ ಮಾಡುವ ಸರ್ವರಿಗೂ ಅವಮಾನ ಮಾಡಲಾಗಿತ್ತು. ಸುಪ್ರೀಂ ಕೋರ್ಟ್‌ ಒಳ್ಳೆಯ ತೀರ್ಪಿನ ಮೂಲಕ ನಮನ್ನು ನಿರಾಳವಾಗಿಸಿದೆ ಎಂದಿದ್ದಾರೆ.

ಹಿರಿಯ ವಕೀಲೆ ವೃಂದಾ ಗ್ರೋವರ್ ಅವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ. ಗುಜರಾತ್ ಸರ್ಕಾರ ತಪ್ಪಾದ ರೀತಿಯಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಗುಜರಾತ್ ಸರ್ಕಾರಕ್ಕೆ ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರ ಇಲ್ಲ. ಆದರೂ, ಸರ್ಕಾರ ಮಿತಿಗಳನ್ನು ಮೀರಿ ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನ ಮಾಡಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ ಎಂದಿದ್ದಾರೆ.

ಇದನ್ನೂ ಓದಿ : ಸುಪ್ರೀಂ ತೀರ್ಪಿನ ಬೆನ್ನಲ್ಲೇ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಮನೆಗಳಿಗೆ ಬೀಗ: ತಲೆ ಮರೆಸಿಕೊಂಡ್ರಾ ಅಪರಾಧಿಗಳು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read