Homeಮುಖಪುಟರೇಪಿಸ್ಟ್‌ಗಳಿಗೆ ಮತ್ತೆ ಜೈಲು: ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಬಿಲ್ಕಿಸ್‌ ಬಾನು ಪ್ರತಿಕ್ರಿಯೆ...

ರೇಪಿಸ್ಟ್‌ಗಳಿಗೆ ಮತ್ತೆ ಜೈಲು: ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಬಿಲ್ಕಿಸ್‌ ಬಾನು ಪ್ರತಿಕ್ರಿಯೆ…

- Advertisement -
- Advertisement -

2002ರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ 14 ಮಂದಿಯ ಕೊಲೆ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್‌ ಸರಕಾರದ ಆದೇಶನ್ನು ನಿನ್ನೆ ಸುಪ್ರೀಂಕೋರ್ಟ್‌ ರದ್ದುಗೊಳಿಸಿತ್ತು. ಈ ತೀರ್ಪಿನ ಬಗ್ಗೆ ಬಿಲ್ಕಿಸ್ ಬಾನು ಪ್ರತಿಕ್ರಿಯಿಸಿದ್ದು, ತೀರ್ಪು ಸಮಾಧಾನ ತಂದಿದೆ, ನನಗೆ ಈಗ ಮತ್ತೆ ಉಸಿರಾಡಬಹುದು ಎಂದು ಹೇಳಿದ್ದಾರೆ.

ತಮ್ಮ ವಕೀಲೆ ಶೋಭಾ ಗುಪ್ತಾ ಮೂಲಕ ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಬಿಲ್ಕಿಸ್ ಬಾನು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಇಂದು ನನಗೆ ನಿಜವಾಗಿಯೂ ಹೊಸ ವರ್ಷ, ಸುಪ್ರೀಂಕೋರ್ಟ್ ತೀರ್ಪಿಗೆ ಧನ್ಯವಾದಗಳು. ನಾನು ಸಮಾಧಾನದಿಂದ ಕಣ್ಣೀರು ಹಾಕಿದೆ. ಒಂದೂವರೆ ವರ್ಷದಲ್ಲಿ ನಾನು ಮೊದಲ ಬಾರಿಗೆ ನಗುತ್ತಿದ್ದೇನೆ. ನಾನು ನನ್ನ ಮಕ್ಕಳನ್ನು ತಬ್ಬಿಕೊಂಡಿದ್ದೇನೆ. ನನ್ನ ಎದೆಯಿಂದ ಪರ್ವತದ ಗಾತ್ರದ ಕಲ್ಲು ಎತ್ತಲ್ಪಟ್ಟಂತೆ ಭಾಸವಾಗುತ್ತಿದೆ. ನಾನು ಈಗ ಮತ್ತೆ ಉಸಿರಾಡುತ್ತೇನೆ. ಇದು ನ್ಯಾಯ ಅನ್ನಿಸುತ್ತದೆ. ನನಗೆ, ನನ್ನ ಮಕ್ಕಳು ಮತ್ತು ಎಲ್ಲಾ ಮಹಿಳೆಯರಿಗೆ ಈ ನ್ಯಾಯ ನೀಡಿದ್ದಕ್ಕಾಗಿ ಭಾರತದ ಗೌರವಾನ್ವಿತ ಸುಪ್ರೀಂಕೋರ್ಟ್‌ಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಕಳೆದ 20 ವರ್ಷಗಳಿಂದ ನನಗೆ ಬೆಂಬಲವನ್ನು ನೀಡಿದ್ದಕ್ಕಾಗಿ ಮತ್ತು ನನ್ನ ಪರವಾಗಿ ನಿಂತಿದ್ದಕ್ಕಾಗಿ ನನ್ನ ಕುಟುಂಬ, ಸ್ನೇಹಿತರು ಮತ್ತು ವಕೀಲರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಾನು ಮೊದಲೇ ಹೇಳಿದ್ದೇನೆ ಮತ್ತು ನಾನು ಇಂದು ಮತ್ತೆ ಹೇಳುತ್ತೇನೆ, ನನ್ನಂತಹ ಮಹಿಳೆಯ ಪ್ರಯಾಣ ಎಂದಿಗೂ ಏಕಾಂಗಿಯಾಗಿ ಸಾಧ್ಯವಿಲ್ಲ. ನನ್ನ ಪಕ್ಕದಲ್ಲಿ ನನ್ನ ಪತಿ ಮತ್ತು ಮಕ್ಕಳಿದ್ದಾರೆ. ದ್ವೇಷದ ಸಮಯದಲ್ಲಿ ನನಗೆ ತುಂಬಾ ಪ್ರೀತಿಯನ್ನು ನೀಡಿದ ನನ್ನ ಸ್ನೇಹಿತರಿದ್ದಾರೆ. ಪ್ರತಿ ಕಷ್ಟದ ಸಮಯದಲ್ಲಿ ನನ್ನ ಕೈಯನ್ನು ಹಿಡಿದಿದ್ದಾರೆ. ನನ್ನ ವಕೀಲರದ್ದು ಅಸಾಧಾರಣ ವ್ಯಕ್ತಿತ್ವ, ವಕೀಲೆ ಶೋಭಾ ಗುಪ್ತಾ ಅವರು 20 ವರ್ಷಗಳಿಂದ ನನ್ನೊಂದಿಗೆ ಅಚಲವಾಗಿ ನಿಂತುಕೊಂಡಿದ್ದಾರೆ ಮತ್ತು ನ್ಯಾಯದ ಹೋರಾಟದಲ್ಲಿ ಭರವಸೆ ಕಳೆದುಕೊಳ್ಳಲು ನನಗೆ ಎಂದಿಗೂ ಅವಕಾಶ ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.

ಅಪರಾಧಿಗಳ ಬಿಡುಗಡೆ ಆರಂಭಿಕವಾಗಿ ನನ್ನನ್ನು ಭಾವನಾತ್ಮಕವಾಗಿ ಕುಗ್ಗಿಸಿತ್ತು. ಆದರೆ ನಂತರ ಬೆಂಬಲದ ಅಲೆಯ ಮೂಲಕ ಧೈರ್ಯವನ್ನು ಮರಳಿ ಪಡೆದಿದ್ದೇನೆ. ಸಾವಿರಾರು ಜನರು PIL ಅರ್ಜಿಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ. ಕೋರ್ಟ್‌ಗೆ ಸಾರ್ವಜನಿಕ ಹಿತಾಶಕ್ತಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಬಹಿರಂಗ ಪತ್ರಗಳ ರೂಪದಲ್ಲಿ ಬೆಂಬಲಿಸಲು ಮುಂದೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಗೋಧ್ರಾ ರೈಲು ದಹನ ಘಟನೆಯ ನಂತರ ಭುಗಿಲೆದ್ದ ಗುಜರಾತ್‌ ಕೋಮುಗಲಭೆ ವೇಳೆ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಈ ವೇಳೆ ಅವರಿಗೆ 21 ವರ್ಷ ವಯಸ್ಸಾಗಿತ್ತು ಮತ್ತು ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. 2002ರ ಕೋಮುಗಲಭೆಯಲ್ಲಿ ಮೃತಪಟ್ಟ ಏಳು ಕುಟುಂಬದ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷಗೆ ಒಳಗಾಗಿದ್ದ 11 ಅಪರಾಧಿಗಳಿಗೆ ಗುಜರಾತ್‌ ಸರಕಾರ ಕ್ಷಮಾದಾನ ನೀಡಿ 2022ರ ಆಗಸ್ಟ್ 15ರಂದು ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬಿಲ್ಕಿಸ್‌ ಬಾನು, ತೃಣಮೂಲ ಕಾಂಗ್ರೆಸ್‌ ಪಕ್ಷದ ಮಹುವಾ ಮೊಯಿತ್ರಾ, ಸಿಪಿಐ(ಎಂ) ಪಾಲಿಟ್‌ ಬ್ಯುರೋ ಸದಸ್ಯೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್‌ ಹಾಗೂ ಲಕ್ನೋ ವಿವಿಯ ಮಾಜಿ ಉಪಕುಲಪತಿ ರೂಪ್‌ ರೇಖಾ ವರ್ಮಾ ಸಹಿತ ಹಲವರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ 14 ಮಂದಿಯ ಕೊಲೆ ಪ್ರಕರಣದಲ್ಲಿ 11 ಅಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್‌ ಸರಕಾರದ ಆದೇಶನ್ನು ರದ್ದುಗೊಳಿಸಿ ನಿನ್ನೆ ಆದೇಶಿಸಿತ್ತು.

ಇದನ್ನು ಓದಿ: ಮಣಿಪುರದಲ್ಲಿ ಗ್ರಾಮಸ್ಥರಿಗೆ ಮನೆ ಬಿಟ್ಟು ತೆರಳುವಂತೆ ಬಲವಂತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...