ರಾಜಸ್ಥಾನದಲ್ಲಿ ಬನ್ಸ್ವಾರದಲ್ಲಿ ನಡೆದ ಬಿಜೆಪಿಯ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಪ್ರಾಣಾಳಿಕೆ ಬಗ್ಗೆ ಟೀಕಿಸುತ್ತಾ ಪ್ರಧಾನಿ ಮೋದಿ ಮುಸ್ಲಿಮರ ಬಗ್ಗೆ ದ್ವೇಷದ ಹೇಳಿಕೆಯನ್ನು ನೀಡಿದ್ದರು. ಇದರ ಬೆನ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಕ್ಷದ ಪ್ರಣಾಳಿಕೆ ಬಗ್ಗೆ ಚರ್ಚೆಗೆ ಕಾಲಾವಕಾಶವನ್ನು ಕೋರಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ಹಂಚಬಹುದು ಎಂದು ರಾಜಸ್ಥಾನದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಹೇಳಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ನೀಡುವುದೇ ಕಾಂಗ್ರೆಸ್‌ನ ಗ್ಯಾರಂಟಿ ಎಂದು ಹೇಳಿದ್ದು, ಮುಸ್ಲಿಂ ಅಲ್ಪಸಂಖ್ಯಾತರನ್ನು “ಒಳನುಸುಳುವವರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ಹಂಚಬಹುದು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು.
ದೇಶದ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅದನ್ನು ಮುಸ್ಲಿಮರಿಗೆ ಕಾಂಗ್ರೆಸ್ ಹಂಚಲಿದೆ. ಇದು ನಗರ ನಕ್ಸಲರ ಯೋಜನೆಯಾಗಿದೆ. ಈ ‘ನಗರ ನಕ್ಸಲ್’ ಮನಸ್ಥಿತಿಯಿಂದ ತಾಯಂದಿರೇ ಮತ್ತು ಸಹೋದರಿಯರೇ, ಅವರು ನಿಮ್ಮ ‘ಮಂಗಲಸೂತ್ರ’ವನ್ನು ಸಹ ಬಿಡುವುದಿಲ್ಲ. ಅವರು ಆ ಮಟ್ಟಕ್ಕೆ ಹೋಗಬಹುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅವರು ತಾಯಿ ಮತ್ತು ಸಹೋದರಿಯರ ಚಿನ್ನವನ್ನು ಲೆಕ್ಕ ಹಾಕುತ್ತಾರೆ, ಅದರ ಬಗ್ಗೆ ಮಾಹಿತಿ ಪಡೆದು ನಂತರ ಆ ಆಸ್ತಿಯನ್ನು ಹಂಚುತ್ತಾರೆ. ಅವರು ಅದನ್ನು ಯಾರಿಗೆ ಹಂಚುತ್ತಾರೆ? ಮನಮೋಹನ್ ಸಿಂಗ್ ಅವರ ಸರ್ಕಾರವು ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳಿತ್ತು. ಇದನ್ನು ನುಸುಳುಕೋರರಿಗೆ ವಿತರಿಸಲಾಗುವುದು. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಅನುಮೋದಿಸುತ್ತೀರಾ? ಇದು ನಿಮಗೆ ಸ್ವೀಕಾರಾರ್ಹವೇ? ನೀವು ಕಷ್ಟಪಟ್ಟು ಸಂಪಾದಿಸಿದ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಸರ್ಕಾರಗಳಿಗೆ ಇದೆಯೇ? ತಾಯಂದಿರ ಮಂಗಳಸೂತ್ರದ ಮೌಲ್ಯವು ಚಿನ್ನ ಅಥವಾ ಅದರ ಬೆಲೆಯಲ್ಲಿಲ್ಲ, ಆದರೆ ಜೀವನದಲ್ಲಿ ಅವಳ ಕನಸುಗಳಿಗೆ ಸಂಬಂಧಿಸಿದೆ ಮತ್ತು ನೀವು ಅದನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದರು.
ಖರ್ಗೆ ಅವರು ಮೋದಿಯ ಹೇಳಿಕೆಯನ್ನು ದ್ವೇಷದ ಹೇಳಿಕೆ ಎಂದು ಬಣ್ಣಿಸಿದ್ದಾರೆ. ಇದು ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಯತ್ನ. ಇದು ಮೊದಲ ಹಂತದ ಲೋಕಸಭೆ ಚುನಾವಣೆಯ ಬಗ್ಗೆ ಬಿಜೆಪಿಗಿರುವ ಭೀತಿ ಮತ್ತು ನಿರಾಶೆಯನ್ನು ತೋರಿಸುತ್ತದೆ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಮುಸ್ಲಿಂ ಮತ್ತು ಹಿಂದೂ ಪದಗಳ ಉಲ್ಲೇಖವಿಲ್ಲ ಮತ್ತು ಎಲ್ಲರಿಗೂ ಸಮಾನತೆ ಮತ್ತು ನ್ಯಾಯದ ಬಗ್ಗೆ ಮಾತನಾಡುತ್ತದೆ. ಇಂಡಿಯಾ ಮೈತ್ರಿಕೂಟವು ಮೊದಲ ಸುತ್ತಿನಲ್ಲಿ ಗೆದ್ದಿರುವುದನ್ನು ಮನಗಂಡ ನಂತರ ಪ್ರಧಾನಿ ಮೋದಿ “ದ್ವೇಷ” ಭಾಷಣ ಮಾಡಿದ್ದಾರೆ. ಅಧಿಕಾರಕ್ಕಾಗಿ ಸುಳ್ಳು ಹೇಳುವುದು ಮತ್ತು ವಿರೋಧಿಗಳ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುವುದು ಮೋದಿ ಅವರು ಮೈಗೂಡಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ-ಭಾರತೀಯ ಜನತಾ ಪಕ್ಷದ ಮೌಲ್ಯಗಳಾಗಿವೆ. ಭಾರತದ ಇತಿಹಾಸದಲ್ಲಿ, ಯಾವುದೇ ಪ್ರಧಾನಿ ಮೋದಿಯಂತೆ ‘ತಮ್ಮ ಹುದ್ದೆಯ ಘನತೆಯನ್ನು ಕಡಿಮೆ ಮಾಡಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನು ಓದಿ: ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಳಂಬ: ವಿವಾದ ಸೌಹಾರ್ದಯುತವಾಗಿ ಬಗೆಹರಿಸಲು ಸುಪ್ರೀಂಕೋರ್ಟ್ ಸೂಚನೆ