Homeಮುಖಪುಟಮನು ಬಳಿಗಾರ್ ರಾಜೀನಾಮೆ ನೀಡಲೇಬೇಕು... ಯಾಕೆಂದರೆ.? - ಇಸ್ಮತ್‌ ಪಜೀರ್‌

ಮನು ಬಳಿಗಾರ್ ರಾಜೀನಾಮೆ ನೀಡಲೇಬೇಕು… ಯಾಕೆಂದರೆ.? – ಇಸ್ಮತ್‌ ಪಜೀರ್‌

- Advertisement -
- Advertisement -

ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಎಂಬತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ತನಗೆ ಮಾತನಾಡಲು ಅವಕಾಶ ಕೊಟ್ಟ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರದ್ದೇ ರಾಜೀನಾಮೆಗೆ ಅದೇ ವೇದಿಕೆಯಲ್ಲಿ ನಿಂತು ಬಹಿರಂಗವಾಗಿ ನಮ್ಮ ಸಂಗಾತಿ ಕೆ.ನೀಲಾ ಆಗ್ರಹಿಸಿದ್ದು ಅಧ್ಯಕ್ಷರಿಗೆ ಕೋಲು ಕೊಟ್ಟು ಹೊಡೆಸಿದಂತಾಗಿರಬಹುದು.

ನೀಲಕ್ಕ ಅವರ ಮನು ಬಳಿಗಾರ್ ರಾಜೀನಾಮೆ ಕೊಡಬೇಕೆಂಬ ಆಗ್ರಹಕ್ಕೆ ಮುಖ್ಯ ಕಾರಣ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆಹಿಡಿದದ್ದು, ಸಮ್ಮೇಳನಾಧ್ಯಕ್ಷರನ್ನು ಬದಲಿಸಬೇಕೆಂಬ ಸರ್ವಾಧಿಕಾರಿ ಧೋರಣೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿಯ ಭಯೋತ್ಪಾದನೆಯನ್ನು ಮುಂದಿಟ್ಟಾಗಿತ್ತು.

ಸಿ.ಟಿ.ರವಿಯ ಧಮಕಿ ಅಕ್ಷರಶಃ ಭಯೋತ್ಪಾದನೆ. ಎರಡನೇ ದಿನಕ್ಕೆ ಸಾಹಿತ್ಯ ಸಮ್ಮೇಳನವನ್ನು ಮುಂದುವರಿಸಿದರೆ ಪೆಟ್ರೋಲ್ ಬಾಂಬ್ ಹಾಕುತ್ತೇನೆಂದು ಬೆದರಿಸಿದ್ದು ಜನ ಮನದಲ್ಲಿ ಭಯವನ್ನು ಉತ್ಪಾದಿಸುವುದೇ ಆಗಿದೆ. ಅದನ್ನು‌ ಭಯೋತ್ಪಾದನೆ ಎನ್ನದೇ ಬೇರೇನೂ ಎನ್ನಲು ಸಾಧ್ಯವಿಲ್ಲ.

ಮೊನ್ನೆ ನೀಲಕ್ಕ ಹೇಳಿರುವ ಕಾರಣಗಳಲ್ಲದೇ ಮನು ಬಳಿಗಾರ್ ರಾಜೀನಾಮೆ ಕೊಡಲೇಬೇಕು ಎನ್ನುವುದಕ್ಕೆ ಇನ್ನಿತರ ಬಲವಾದ ಸಮರ್ಥನೆಯೂ ಇದೆ.

ಮನು ಬಳಿಗಾರ್ ಈಗ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಮುಂದುವರಿದಿರುವುದೇ ಅಸಾಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ. ಯಾಕೆಂದರೆ ಸಾಹಿತ್ಯ ಪರಿಷತ್‌‌ನ ಮೂಲ ಬೈಲಾ ಪ್ರಕಾರ ಒಂದು ಚುನಾಯಿತ ಸಮಿತಿಯ ಆಡಳಿತಾವಧಿಯು ಮೂರು ವರ್ಷಗಳು ಮಾತ್ರ. ಮೂರು ವರ್ಷಗಳ ಬಳಿಕ ಮತ್ತೆ ಚುನಾವಣೆ ನಡೆಯಬೇಕು. ಆದರೆ ಮನು ಬಳಿಗಾರ್ ತನ್ನ ಅಧ್ಯಕ್ಷಾವಧಿ ಇನ್ನೇನು ಮುಗಿಯಬೇಕೆನ್ನುವಷ್ಟರಲ್ಲಿ ವಿಶೇಷ ತುರ್ತು ಸಾಮಾನ್ಯ ಸಭೆ ಕರೆದು ಬೈಲಾಕ್ಕೆ ತಿದ್ದುಪಡಿ ಮಾಡಿದರು. ತಿದ್ದುಪಡಿ ಮಾಡಲಾದ ಬೈಲಾ ಪ್ರಕಾರ ಆಡಳಿತ ಸಮಿತಿಯ ಅವಧಿಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೇರಿಸಲಾಯಿತು. ಇದು ಬಹಳ ಸ್ಪಷ್ಟವಾಗಿ ತನ್ನ ಅಧಿಕಾರವನ್ನು ಮುಂದುವರಿಸುವ ಸಲುವಾಗಿಯೇ  ಬೈಲಾ ತಿದ್ದುಪಡಿ ಮಾಡಲಾಗಿದ್ದನ್ನು ಸೂಚಿಸುತ್ತದೆ. ಪ್ರಜಾತಾಂತ್ರಿಕವಾಗಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆಯಲ್ಲೂ ಬೈಲಾ ತಿದ್ದುಪಡಿಗೆ ಅನೇಕ ನಿಬಂಧನೆಗಳಿರುತ್ತವೆ. ಆದರೆ ಇಲ್ಲಿ ತನ್ನ ವಾದವನ್ನು ಸಮಿತಿ ಒಪ್ಪಲು ಬೇಕಾದ ತಂತ್ರವನ್ನು ಮೊದಲೇ ಹೆಣೆದು ಏಕಾಏಕೀ ಸಭೆ ಕರೆಯಲಾಗಿತ್ತು. ಪ್ರಜಾತಾಂತ್ರಿಕವಾಗಿ ರಚಿಸಲಾದ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು.

ಬೈಲಾ ತಿದ್ದುಪಡಿಯನ್ನು ತರ್ಕಕ್ಕೆ ಸಮಂಜಸವೆಂದೇ ಒಪ್ಪಿಕೊಳ್ಳೋಣ. ಆದರೆ ಅಧಿಕಾರಾವಧಿ ಮುಗಿಯುವ ಹಂತದಲ್ಲಿ ತಂದ ತಿದ್ದುಪಡಿ ಯಾವುದೇ ಕಾರಣಕ್ಕೂ ಆಗ ಅಧಿಕಾರದಲ್ಲಿರುವ ಸಮಿತಿಗೆ ಅನ್ವಯವಾಗಕೂಡದು. ಅದನ್ನು ಮುಂದಿನ ಅವಧಿಯಿಂದ ಜಾರಿಗೆ ತರಬೇಕಿತ್ತು. ಆದುದರಿಂದ ಸದ್ಯ ಮನು ಬಳಿಗಾರರ ಅಧಿಕಾರವೇ ಅಪ್ರಜಾಸತ್ತಾತ್ಮಕ ಮತ್ತು ಅಸಾಂವಿಧಾನಿಕ. ಆದುದರಿಂದ ಮನು ಬಳಿಗಾರ್ ಕೂಡಲೇ ತನ್ನ ಅಧ್ಯಕ್ಷ ಸ್ಥಾನದ ಸಮಿತಿಯನ್ನು ಬರ್ಖಾಸ್ತುಗೊಳಿಸಲೇಬೇಕು. ಅಧ್ಯಕ್ಷ ಸ್ಥಾನದಿಂದ ಬಳಿಗಾರ್ ಕೆಳಗಿಳಿಯಲೇಬೇಕು ಮತ್ತು ಹೊಸ ಸಮಿತಿಗೆ ಚುನಾವಣೆ ನಡೆಯಬೇಕು.

ಈ ಬಾರಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಹದಿಮೂರು‌ ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರಕಾರ ನೀಡಿದೆ. ಕಳೆದ ವರ್ಷದ ಧಾರವಾಡ ಸಮ್ಮೇಳನಕ್ಕೂ ಹತ್ತು ಕೋಟಿ ಅನುದಾನ ನೀಡಲಾಗಿತ್ತು. ಅದಕ್ಕಿಂತ ಹಿಂದಿನ ಅವಧಿಗಳಲ್ಲೂ‌ ಹೀಗೆಯೇ ಬಹುಕೋಟಿ ಅನುದಾನ ನೀಡಲಾಗಿತ್ತು.ಮೂಲತಃ ಸಾಹಿತ್ಯ ಪರಿಷತ್ತು ಎನ್ನುವುದು ಸಮಸ್ತ ಕನ್ನಡಿಗರ ಸ್ವಾಯತ್ತ ಸಂಸ್ಥೆಯೇ ಹೊರತು ಆಡಳಿತ ಸಮಿತಿಯ ಮತ್ತು ಕನ್ನಡ-ಸಂಸ್ಕೃತಿ ಇಲಾಖೆಯ ಪಿತ್ರಾರ್ಜಿತ ಸ್ವತ್ತಲ್ಲ. ಅದಕ್ಕೆ ನೀಡುವ ಅನುದಾನಗಳು ಸಮಸ್ತ ಕನ್ನಡಿಗರ ತೆರಿಗೆಯ ದುಡ್ಡು. ಆದುದರಿಂದ ಸಾರ್ವಜನಿಕ ಲೆಕ್ಕಪತ್ರ ಮಂಡನೆಯಾಗಲೇಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಂತೂ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರ ಪ್ರೈವೇಟ್ ಲಿಮಿಟೆಡ್ ಕಂಪೆನಿಯಂತಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾರ್ವಜನಿಕ ಬಿಡಿ, ಸ್ವತಃ ಅದರ ಸದಸ್ಯರ ವಾರ್ಷಿಕ ಸಭೆಯಲ್ಲೂ ಲೆಕ್ಕಪತ್ರ ಮಂಡನೆ ಮಾಡದೇ ದಶಕವೇ ಕಳೆದಿದೆ. ಮನು ಬಳಿಗಾರ್ ಅಧ್ಯಕ್ಷನಾದ ಬಳಿಕ ಅವರನ್ನು ಸಾಹಿತ್ಯ ಪರಿಷತ್‌ನ‌ ಸದಸ್ಯರಾಗಿರುವ ಗೆಳೆಯರೊಬ್ಬರು ಮುಖತಃ ಭೇಟಿಯಾಗಿ ಆ ಬಗ್ಗೆ ದೂರಿ‌ಕೊಂಡರು. ಸ್ವತಃ ನಾನೂ ಪತ್ರಿಕೆಗಳಲ್ಲಿ ಆ ಬಗ್ಗೆ ಬರೆದಿದ್ದೆ. ಆದರೆ ಮನು ಬಳಿಗಾರ್ ಅದಕ್ಕೆ ಈವರೆಗೆ ಸ್ಪಂದಿಸದೇ ಭ್ರಷ್ಟಾಚಾರಕ್ಕೆ ಪರೋಕ್ಷ ಕಾರಣರೂ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತಿಗೆ ಸ್ವಂತ ಬಿಡಿ, ಬಾಡಿಗೆ ಕಚೇರಿಯೂ ಇಲ್ಲ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರರ ಖಾಸಗಿ ಕಚೇರಿಯಲ್ಲೇ ಬೋರ್ಡೊಂದನ್ನು ತಗಲಿಸಿ ಅದನ್ನೇ ಕಚೇರಿ ಎನ್ನಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಯಾರಾದರೂ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಬಯಸಿದರೆ ಅದಕ್ಕೆ ಅಧ್ಯಕ್ಷನ ಒಪ್ಪಿಗೆಯಿದ್ದರೆ ಮಾತ್ರ ಆತನಿಗೆ ಅರ್ಜಿ ನಮೂನೆ ನೀಡಲಾಗುತ್ತದೆ. ನಮ್ಮಂತಹ ಬಂಡಾಯ ಪ್ರವೃತ್ತಿಯವರು ಸಾಹಿತ್ಯ ಪರಿಷತ್ತಿನ ಸದಸ್ಯರಾಗಲೂ ಜಿಲ್ಲಾಧ್ಯಕ್ಷರು ಬಿಡುತ್ತಿಲ್ಲ. ಈ ವಿಚಾರವೂ ಮನು ಬಳಿಗಾರರಿಗೆ ಗೊತ್ತಿದೆ. ಆದರೆ ಈ ಬಗ್ಗೆ ಈ ವರೆಗೆ ಕ್ರಮ ಕೈ ಗೊಂಡಿಲ್ಲ.

ಇತ್ತೀಚೆಗೆ ಮಾಣಿ ಎಂಬಲ್ಲಿ ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನದ ಸಭಾಭವನದ ತುಂಬಾ ಮುಸ್ಲಿಂ ದ್ವೇಷ ಬಿತ್ತುವ ಮತ್ತು ಕೋಮು ಪ್ರಚೋದಕ ಬಿತ್ತಿ ಪತ್ರಗಳನ್ನು ಹಚ್ಚಲಾಗಿತ್ತು. ಇದನ್ನು ಬಂಟ್ವಾಳದ ಕೆಲವು ಪ್ರಜ್ಞಾವಂತ ಯುವಕರು ಗಲಾಟೆ ಮಾಡಿಯೇ ತೆಗೆಸಿದ್ದರು. ಅದಕ್ಕೆ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮತ್ತು ತಾಲೂಕು ಅಧ್ಯಕ್ಷ ನೇರ ಹೊಣೆ. ಈ ವಿಚಾರ ಪತ್ರಿಕೆಯಲ್ಲಿ ವರದಿಯಾಗಿದ್ದರೂ ರಾಜ್ಯಾಧ್ಯಕ್ಷ ಮನು ಬಳಿಗಾರ್ ಆ ಕುರಿತಂತೆ ಕ್ರಮ ಕೈ‌ಗೊಂಡಿಲ್ಲ.

ಇವಿಷ್ಟಲ್ಲದೇ ದುರಾಡಳಿತದ ಹತ್ತಾರು ನಿದರ್ಶನಗಳಿವೆ. ಆದುದರಿಂದ ಅನರ್ಹ ಮನು ಬಳಿಗಾರ್ ಕೂಡಲೇ ರಾಜೀನಾಮೆ ನೀಡಬೇಕು..

(ಲೇಖಕರು ಯುವ ಬರಹಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ಅವರ ವ್ಯಕ್ತಿಗತವಾದವುಗಳು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಮನುವಾದಿಗಳ ಬಾಲಬಡುಕರಂತೆ ವರ್ತಿಸುತ್ತಿರುವ ಮನು ಬಳಿಗಾರ್ ಈ ಕೂಡಲೇ ರಾಜೀನಾಮೆ ಕೊಡಬೇಕು. ಈ ಬಗ್ಗೆ ಸ್ವಾಭಿಮಾನ ಇರುವ ಸಾಹಿತಿಗಳೆಲ್ಲರೂ ದನಿ ಎತ್ತಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...