HomeUncategorized#Metoo ಅಭಿಯಾನ: ದಿಟ್ಟದನಿಗಳಿಗೆ ಬೆಂಬಲ ಇನ್ನಷ್ಟು ಆಳ, ಅಗಲ ವಿಸ್ತಾರಗೊಳ್ಳಲಿ ಎಂಬ ಆಶಯ!

#Metoo ಅಭಿಯಾನ: ದಿಟ್ಟದನಿಗಳಿಗೆ ಬೆಂಬಲ ಇನ್ನಷ್ಟು ಆಳ, ಅಗಲ ವಿಸ್ತಾರಗೊಳ್ಳಲಿ ಎಂಬ ಆಶಯ!

- Advertisement -
- Advertisement -

ಸದ್ದು ಗುದ್ದಾಗದೇ ಹೋದರೆ ಅಳುವೂ ಅಳಿಸಿದವರ ಪಾಲಿಗೆ ಹಾಡಾದೀತು!

ಹೀಗೆ; ಕಾಮದ ತಿವಿತಕ್ಕೆ ಈಡಾದ ಹೆಣ್ಣ ದನಿಗಳೆಲ್ಲ ಹೊರಸಿಡಿದರೆ ಅದು ಮಹಾ ಸದ್ದಷ್ಟೇ ಆಗಿ ಗಂಡುಗಳ ಕಿವಿ ಪೊಟರೆ ಹರಿದು ಹೋದೀತಷ್ಟೇ! ಇದಷ್ಟೇ ಅಲ್ಲ; ಆಗಬೇಕಿರುವುದು ಗಂಡಿನ ಎದೆಗುಂಡಿಗೆಯನ್ನು ಸಣ್ಣಗೆ ಕೊಯ್ಯುವಂತಹ ಬ್ಲೇಡಿನಂತಹ ಸದ್ದು. ಈಗ ಬೇಕಿರುವುದು ನೀರನ್ನು ಬೆಂಕಿಯಾಗಿ ಬೆಳಕಾಗಿ ಮಾರ್ಪಡಿಸುವ ತಂತ್ರಶಕ್ತಿಯಂತೆ, ಸದ್ದನ್ನು ಮಹಾಕ್ರಿಯೆಯಾಗಿ ರೂಪಿಸಬೇಕಾದ ಸಾಂಘಿಕ ಶಕ್ತಿ.
ನಿಜ, ಈಗ ಕೆಲವರಾದರೂ ಮಾತಾಡುತ್ತಿದ್ದಾರೆ. ಆದರೆ ಗಂಡೆಜಮಾನತ್ವದ ಈ ಸಮಾಜದ ಲೈಂಗಿಕ ಹಿಂಸೆಯನ್ನು ಅರಿಯಲು ಈ ಹೆಣ್ಣುಮಕ್ಕಳೇ ಮಾತಾಡಬೇಕಿಲ್ಲ. ಯಾರೊಬ್ಬರೂ ನುಡಿಯದಿದ್ದರೂ ಈ ರೋಗ ಭವ್ಯಭಾರತದ ದಿವ್ಯಸಂಸ್ಕøತಿ ಮತ್ತು ಸಾಮಾಜಿಕ ವರ್ತಮಾನದ ಅಂತರ್ಗತ ಸತ್ಯ ಎಂಬುದು ಎಲ್ಲರಿಗೂ ತಿಳಿದದ್ದೇ ಆಗಿದೆ. ಈ ‘ಮೀಟು’ವಿಕೆÀ ನಗರಗಳ, ಸುಶಿಕ್ಷಿತ ಹೆಣ್ಣುಮಕ್ಕಳ, ಮಾಸ್‍ಮೀಡಿಯಾಗಳ ಮೂಲಕ ಹೊರಬಿದ್ದಿರುವ ಅನುಭವ ಮಾತ್ರವಲ್ಲ; ಆಡದೇ ಅನುಭವಿಸುತ್ತಿರುವ ಪ್ರಮಾಣ ಇದರ ಕೋಟಿಪಾಲು ಹೆಚ್ಚಿದೆ. ನಿಜವೆಂದರೆ ಗ್ರಾಮೀಣ ಪರಿಸರದಲ್ಲಿ, ದಮನಿತ ಸಮುದಾಯಗಳಲ್ಲಿ ಇದರಿಂದ ಬೆಂದವರ ಸಂಕಟವನ್ನು ಸಂಖ್ಯೆಗಳಲ್ಲಿ ಗಣಿಸಲಾಗದು.
ಹೆಣ್ಣನ್ನು ದೈಹಿಕವಾಗಿ ಮಾನಸಿಕವಾಗಿ ಹಿಂಸಿಸುವ ಈ ‘ಗಂಡುಪೃವೃತ್ತಿ’ ಊಳಿಗಮಾನ್ಯ ಬಂಡವಾಳಶಾಹಿ ಸಮಜೋಡು ಸಮಾಜದ ಒಳ ಹರಿಯುತ್ತಿರುವ ಭೋಗ ಗುಣದ ಅಭಿವ್ಯಕ್ತಿ. ಮೀಟುದಂತಹ ಅಭಿಯಾನಗಳು ಇಂತಹ ಕಾಮಿ ಗಂಡುಗಳಲ್ಲಿ ಆ ಮಟ್ಟಿಗಿನ ಭಯ ಹಿಂಜರಿಕೆ ಸೃಷ್ಟಿಸುವಲ್ಲಿ ಸಫಲವಾದೀತೆಂಬುದು ತಕ್ಷಣದ ಆಶಾದಾಯಕ ಆರಂಭಿಕ ಹಂತ. ಆದರೆ ಆಗಬೇಕಿರುವುದು ಬಿಡಿಬಿಡಿಯಾದ ಕೇಸು ದಾಖಲಿಸುವ ಅಥವಾ ಅನುಭವಗಳನ್ನು ಬಯಲುಗೊಳಿಸುವ ಪ್ರಯತ್ನಗಳು ಮಾತ್ರವಲ್ಲ, ಬದಲಿಗೆ ತಕ್ಷಣಕ್ಕೆ ತಿರುಗಿ ಬೀಳುವ ಕ್ರಮಗಳ ಶೋಧ ಮತ್ತು ಸಿದ್ಧತೆ. ಅಂತಹ ಅನುಭವಗಳನ್ನು ಎದುರಿಸುವ ಸಾಮೂಹಿಕ ತರಬೇತಿಗಳು ಮತ್ತು ಸಾಂಘಿಕ ಪ್ರತಿರೋಧ ಕ್ರಮಗಳ ಜಾರಿಗೊಳಿಸುವಿಕೆ.
ದ್ರೌಪದಿ, ಅಹಲ್ಯೆ ಮೊದಲಾದ ಹಲವು ಹೆಣ್ಣುಗಳ ಅನುಭವಗಳ ಮೂಲಕ ನಮ್ಮ ಸಾಂಸ್ಕøತಿಕ ಪಠ್ಯಗಳು ಪುರುಷ ದಮನಕ್ಕೆ ಸಮ್ಮತಿಯನ್ನು ಸೃಷ್ಟಿಸಿವೆ. ಪುರಾಣ, ಚರಿತ್ರೆ ಮತ್ತು ವರ್ತಮಾನಗಳೆಲ್ಲವನ್ನೂ ಏಕಕಾಲಕ್ಕೆ ಬಹುವಿಧಗಳ ಮೂಲಕ ಎದುರಿಸುವ ಕ್ರಿಯಾತ್ಮಕತೆ ಮಾತ್ರ ಇದನ್ನು ತಡೆವ ನಿಟ್ಟಿನಲ್ಲಿ ಎರಡು ಹೆಜ್ಜೆ ಮುನ್ನಡೆದೀತೇ ಹೊರತು ಬರೀ ಬೌದ್ಧಿಕ ವಾಗ್ವಾದಗಳು ಭೀಕರತೆಯನ್ನು ಶಮನಗೊಳಿಸಬಹುದಾದ ಅಪಾಯವನ್ನೂ ಹೊಂದಿರಬಲ್ಲವು.

– ಬಿ ಪೀರ್‍ಬಾಷ

*****

ಮೀ-ಟೂ: ಬೆಂಬಲಿಸಬೇಕಾದದ್ದು ಎಲ್ಲ ಪ್ರಜ್ಞಾವಂತರ ಕರ್ತವ್ಯ!

ಭಾರತದಲ್ಲಿ ಸದ್ಯಕ್ಕೆ ಒಂದು ಬಗೆಯ ಸಂಚಲನ ಮೂಡಿಸಿರುವ ‘ಮಿಟೂ’ ಆಂದೋಲನವನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ಕೂಡಾ ಬೆಂಬಲಿಸುವ ಅಗತ್ಯವಿದೆ. ನಾನು ಕೂಡಾ ಇದನ್ನು ವ್ಯಕ್ತಿಗತವಾಗಿ ಮತ್ತು ಸಂಘಟನಾತ್ಮಕವಾಗಿ ಬೆಂಬಲಿಸುತ್ತೇನೆ. ಈ ಆಂದೋಲನ ಇದೇ ಸಮಯದಲ್ಲಿ ಯಾಕೆ ಮುನ್ನೆಲೆಗೆ ಬಂತು ಎಂಬುದಕ್ಕೂ ಬಹುಶಃ ಒಂದು ಕಾರಣವಿರಬಹುದು ಅನಿಸುತ್ತದೆ. ಶಬರಿಮಲೈಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂಬುದರಿಂದ ಹಿಡಿದು, ಸಲಿಂಗಕಾಮಿಗಳು ಅಪರಾಧಿಗಳಲ್ಲ ಎಂದಿದ್ದು, ವಿವಾಹಬಾಹಿರ ಸಂಬಂಧವು ಇಬ್ಬರು ವಯಸ್ಕರ ನಡುವಿನಲ್ಲಿದ್ದಾಗ ಅದನ್ನು ಕ್ರಮಿನಲ್ ಅಪರಾಧ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಹೇಳಿದ್ದರತನಕ, ಈ ಹಿಂದೆಂದೂ ಇಲ್ಲದಂತಹ ರೀತಿಯಲ್ಲಿ ಸುಪ್ರೀಂಕೋರ್ಟ್ ಕೆಲವು ವಿಶಿಷ್ಟವಾದ ತೀರ್ಪುಗಳನ್ನು ನೀಡಿತು. ಬಹುಶಃ ಹೀಗೆ ರೂಪುಗೊಂಡ ವಾತಾವರಣವು, ಎಷ್ಟೋ ಕಾಲದಿಂದ ಮನದೊಳಗಿನ ಬೇಗುದಿಯಾಗಿದ್ದ ಸಂಗತಿಗಳನ್ನು ಕೆಲವು ಮಹಿಳೆಯರು ಹೊರಗೆಡುಹಲು ಕಾರಣವಾಗಿರಬಹುದು.
ಜೊತೆಗೆ, ಮಿಟೂ ಆಂದೋಲನವು ದಿಢೀರ್ ಉದ್ಭವವಾದದ್ದೂ ಕೂಡಾ ಅಲ್ಲ! ಅದಕ್ಕೂ ಒಂದು ಇತಿಹಾಸ ಇದೆ. ವಿಪರ್ಯಾಸವೆಂದರೆ, ಸಾವಿರಾರು ವರ್ಷಗಳಿಂದ ಮಹಿಳೆಯರು ಅನುಭವಿಸುತ್ತಲೇ ಬಂದ ಹಿಂಸೆ, ಲೈಂಗಿಕ ದೌರ್ಜನ್ಯ ಮತ್ತು ಅವಮಾನಗಳ ಬಗ್ಗೆ ಮಾತನಾಡಲು ಒಂದು ಮುಕ್ತವಾದ ವೇದಿಕೆಯೇ ಇರಲಿಲ್ಲ. ಇಂದಿಗೂ ಕೂಡಾ ಮಡುಗಟ್ಟಿರುವ ಪುರುಷಕೇಂದ್ರಿತ ದುರಹಂಕಾರದ ವ್ಯವಸ್ಥೆಯಲ್ಲಿ ಮಹಿಳೆ ತನ್ನ ಮೇಲಾಗುವ ದೌರ್ಜನ್ಯವನ್ನು ಹೇಳಿಕೊಂಡು ನಿಭಾಯಿಸುವುದು ಸಾಮಾನ್ಯ ಸಂಗತಿಯಲ್ಲ. ಹೀಗಿರುವಾಗ ‘ಮೀಟೂ’ ಅಭಿಯಾನವು ಕೆಲವಾದರೂ ಮಹಿಳೆಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯಗಳನ್ನು ಮುಕ್ತವಾಗಿ ಹೇಳಿಕೊಂಡು, ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಿ, ಅವರಲ್ಲಿ ಕೆಲವರಾದರೂ ಸಾರ್ವಜನಿಕವಾಗಿ ತಲೆತಗ್ಗಿಸುವಂತೆ ಮಾಡಿರುವುದು, ತಮ್ಮ ದೊಡ್ಡ ಹುದ್ದೆಗಳನ್ನು ತ್ಯಜಿಸುವಂತಹ ಒತ್ತಡವನ್ನು ಅವರ ಮೇಲೆ ಹೇರಿರುವುದು ಪಾಸಿಟಿವ್ ಆದ ವಿಚಾರವೇ ಸರಿ. ಹಿಮಾಚಲ ಪ್ರದೇಶದ ಬುಡಕಟ್ಟು ಒಂದರಿಂದ ಬಂದು, ಕೇವಲ ತನ್ನ ನಟನೆಯ ಕೌಶಲ ಮತ್ತು ಕಠಿಣ ಶ್ರಮದ ಮೂಲಕ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡ ನಟಿ ಕಂಗನಾ ರನೌತ್. ಆಕೆಯ ಕ್ವೀನ್ ಚಿತ್ರವೂ ಮಹಿಳಾ ಪ್ರಧಾನವಾದದ್ದೇ. ಇಂತಹ ಖ್ಯಾತ ನಟಿಯೂ ಕೂಡಾ, ನಿರ್ದೇಶಕನ ಕಾಮಲಂಪಟತನವನ್ನು ತಾನು ಬಿಚ್ಚಿಟ್ಟಿದ್ದೇ ಆಗಿದ್ದಲ್ಲಿ, ಆ ಚಿತ್ರದಲ್ಲಿ ಅವಕಾಶ ಕಳೆದುಕೊಳ್ಳಬೇಕಾಗುತ್ತಿತ್ತು ಎಂದು ಹೇಳುತ್ತಾಳೆಂದರೆ, ಇನ್ನು ಸಾಮಾನ್ಯ ಮಹಿಳೆಯರ ಪಾಡೇನು?
ಇನ್ನೂ ಒಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಮೇಲ್ಜಾತಿಯ ಮಹಿಳೆಯರ ಹೋರಾಟಕ್ಕೆ ವ್ಯವಸ್ಥೆ ಸ್ಪಂದಿಸಿದಂತೆ, ದಲಿತ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಈಗ ದನಿಯೆತ್ತಿರುವ ಎಷ್ಟೋ ಮಹಿಳೆಯರೂ ಕೂಡಾ ಹಿಂದೆ ದುರ್ಬಲ ಸಮುದಾಯಗಳ ಮಹಿಳೆಯರಿಗೆ ಸ್ಪಂದಿಸಿರಲಿಲ್ಲ. ನಿಜ! ಆದರೆ, ಆ ಕಾರಣಕ್ಕೆ ‘ಮೀಟೂ’ ಎಂದು ದನಿಯೆತ್ತಿರುವ ಮಹಿಳೆಯರನ್ನು ತಂದು ಇವರೇ ನಿಮ್ಮ ಶತೃಗಳು ಎಂದು ನಿಲ್ಲಿಸಲು ಸಾಧ್ಯವಿಲ್ಲ. ಯಾವುದೇ ಮಹಿಳೆಯರಾದರೂ ಅವರು ದೌರ್ಜನ್ಯಗಳ ವಿರುದ್ಧ ದನಿಯೆತ್ತಿದಾಗ ಅದರ ಪರವಾಗಿ ನಿಲ್ಲುವುದು ಬಹಳ ಮುಖ್ಯ. ಈ ದೇಶದ ಮಾಧ್ಯಮಗಳು ಕೂಡಾ ಜಾತಿ-ವರ್ಗ-ಲಿಂಗದ ಬಯಾಸ್ ಹೊಂದಿರುವವೇ ಆಗಿವೆ. ಸದಾ ತಮ್ಮ ಟಿಆರ್‍ಪಿಗೆ ಪೂರಕವಾದವುಗಳನ್ನಷ್ಟೇ ಆಯ್ದುಕೊಂಡು ಫೋಕಸ್ ಮಾಡುತ್ತವೆ ಎಂಬುದನ್ನು ಕೂಡಾ ನೆನಪಿಟ್ಟುಕೊಳ್ಳಬೇಕು.
‘ಮೀಟೂ’ ಎತ್ತಿರುವಂತಹ ಮಹಿಳಾ ವಿಷಯಗಳ ಚರ್ಚೆ ಈ ರೀತಿ ಯಾವತ್ತೋ ಆಗಬೇಕಿತ್ತು, ಅದು ಈಗಾದರೂ ಶುರುವಾಗಿದೆ. ಇದರ ಪರವಾಗಿ ನಿಲ್ಲುವ ಮೂಲಕ ನಾವು ‘ಮೀಟೂ’ ಆಂದೋಲನದ ಚೌಕಟ್ಟನ್ನು ದಲಿತ ದಮನಿತ ಹೆಣ್ಣುಮಕ್ಕಳವರೆಗೂ ವಿಸ್ತರಿಸುವ ಅಗತ್ಯವಿದೆ. ಹಾಗಾಗಿಯೂ ಆಂದೋಲನದ ಪರವಾಗಿ ನಾವೆಲ್ಲರೂ ನಿಲ್ಲಬೇಕಾದ ಸಂದರ್ಭ ಇದಾಗಿದೆ.

– ಗೌರಿ, ಬೆಂಗಳೂರು.

*****

ವಿಮರ್ಶಿಸುತ್ತಲೇ ಬೆಂಬಲಿಸೋಣ
ಮೀಟೂ ಆಂದೋಲನ ದೇಶಾದ್ಯಂತ ಈ ಬಾರಿ ಸದ್ದು ಮಾಡಿದೆ. ಕಳೆದ ವರ್ಷ ರಾಯಾ ಸರ್ಕಾರ್ ಎಂಬ ಕಾನೂನು ವಿದ್ಯಾರ್ಥಿನಿ ಅಕಾಡೆಮಿಕ್ ಮತ್ತು ಸಾರ್ವಜನಿಕ ವಲಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳ ಪಟ್ಟಿ ತಯಾರಿಸಿದ್ದಾಗಿ ಹೇಳಿದಾಗ ಅಷ್ಟೇನೂ ತಲೆಕೆಡಿಸಿಕೊಳ್ಳದ ಭಾರತೀಯರು ಈ ಬಾರಿ ತನುಶ್ರೀ ದತ್ತಾ ಎಂಬ ಬಾಲಿವುಡ್ ನಟಿ ನಾನಾ ಪಾಟೇಕರ್ ಮೇಲೆ ಆರೋಪ ಮಾಡಿದ್ದಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿದರಲ್ಲದೇ ಮಾಧ್ಯಮರಂಗವೂ ಸಹ ಸಾಥ್ ನೀಡಿತು. ಮೀ ಟೂ ಅಭಿಯಾನ ಸೋಷಿಯಲ್ ಮೀಡಿಯಾಕ್ಕೂ ಮೊದಲೇ 2006 ರಲ್ಲಿಯೇ ಅಮೆರಿಕಾದ ಕಪ್ಪು ಮಹಿಳೆ ತರಾನ ಬರ್ಖ್ ಆರಂಭಿಸಿದಾಗ ಅಮೆರಿಕನ್ನರೂ ಸಹ ನೀರಸ ಪ್ರತಿಕ್ರಿಯೆ ನೀಡಿದ್ದರು. ಆದರೆ ಅಲಿಸ್ಸಾ ಮಿಲಾನೋ ಎಂಬ ಹಾಲಿವುಡ್ ನಟಿ ಹಾರ್ವೇ ವಿನ್‍ಸ್ಟನ್ ಎಂಬ ನಟ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಿದಾಗ ಮೀಟೂ ಹೆಚ್ಚು ಪ್ರಚಾರ ಪಡೆಯಿತು. ಈ ಮೂಲಕ ಹೆಚ್ಚು ಸೆಲೆಬ್ರಿಟಿಗಳ ಸುತ್ತಲೇ ಮೀಟೂ ತಿರುಗಲಾರಂಭಿಸಿತು.
ಭಾರತದಲ್ಲಿಯೂ ಇದೇ ರೀತಿಯಾದ್ದರಿಂದ ಇಲ್ಲಿನ ದಲಿತ, ಮುಸ್ಲಿಂ, ಆದಿವಾಸಿ ಪರ ಚಿಂತಕರು ಈ ಆಂದೋಲನವನ್ನು ವಿಮರ್ಶಿಸಿದ್ದಾರೆ. ಇದು ಹೀಗೆಯೇ ಆಗುತ್ತದೆ ಹಾಗೂ ಆಗಬೇಕು. ಮಹಿಳೆಯರಿಗೆ ಶಾಸನ ಸಭೆಯಲ್ಲಿ ಮೀಸಲಾತಿ ಕೇಳಿದಾಗ ಇದೇ ಕಾರಣಕ್ಕೆ ಮಾಯಾವತಿಯವರು ಮತ್ತು ಇತರರು ತಳಸಮುದಾಯದ ದಲಿತೆಯರಿಗೂ ಮೀಸಲಾತಿ ಕೇಳಿದ್ದರು.
ಇಲ್ಲಿ ಪ್ರತಿಯೊಂದು ಸಮುದಾಯ, ಜಾತಿಗಳಲ್ಲೂ ವರ್ಗ ತಾರತಮ್ಯವಿದೆ. ನಾವು ವರ್ಗ ಎಂದುಕೊಳ್ಳುವವರಲ್ಲಿಯೂ ಜಾತಿ ತಾರತಮ್ಯವಿದೆ, ಲಿಂಗ ತಾರತಮ್ಯವಿದೆ. ಹೀಗೆ ಭಾರತದ ಮಹಿಳೆಯರಲ್ಲೂ ಈ ತಾರತಮ್ಯಗಳು ಎದ್ದು ಕಾಣುತ್ತದೆ.
ಖೈರ್ಲಾಂಜಿಯ ಪ್ರಿಯಾಂಕ, ಸುರೇಖಾ ಬೋತಮಾಂಗೆ ಮೇಲೆ ಮೇಲ್ಜಾತಿ ಗಂಡಸರು ಗುಂಪುಗಟ್ಟಿ ಅತ್ಯಾಚಾರ ಮಾಡುತ್ತಿದ್ದಾಗ ಸುತ್ತಾ ನಿಂತು ಆ ಗಂಡಸರನ್ನು ಹುರಿದುಂಬಿಸುತ್ತಿದ್ದವರು ಅದೇ ಮೇಲ್ಜಾತಿ ಹೆಂಗಸರು. ಆ ಭೀಕರ ಅತ್ಯಾಚಾರ ಆ ಹೆಂಗಸರ ಕರುಳನ್ನು ಚುರುಕ್ ಎನ್ನಿಸಲೇ ಇಲ್ಲ. ಇದು ಈ ನೆಲದ ವಾಸ್ತವ. ಒಪ್ಪಿಕೊಳ್ಳಲೇಬೇಕು.
ಹಾಗಂತ ನಾವು ಈ #ಒe_ಣoo ಛಿಚಿmಠಿಚಿigಟಿ ಅನ್ನು ವಿರೋಧಿಸಬೇಕೆ? ಯೋಚಿಸಿ ತೀರ್ಮಾನಿಸಬೇಕಾದ ವಿಚಾರ.
ಈ ದೇಶದ ಪಟ್ಟಭದ್ರ, ಪುರುಷ ಪ್ರಧಾನ ಚಿಂತನೆ ಪ್ರಾಚೀನ ಕಾಲದಿಂದಲೂ ದಲಿತರ ವಿರುದ್ಧ ದಲಿತರನ್ನು, ಮಹಿಳೆಯರ ವಿರುದ್ಧ ಮಹಿಳೆಯರನ್ನು, ಬಡವರ ವಿರುದ್ಧ ಬಡವರನ್ನೂ, ಶ್ರಮಿಕರ ವಿರುದ್ಧ ಶ್ರಮಿಕರನ್ನೂ ಹೀಗೆಯೇ ದಲಿತರ ವಿರುದ್ಧ ಬಡವರನ್ನೂ, ಶ್ರಮಿಕರ ವಿರುದ್ಧ ರೈತರನ್ನೂ, ಮಹಿಳೆಯರ ವಿರುದ್ಧ ಬಡವರನ್ನೂ ಇತ್ಯಾದಿಯಾಗಿ ನಿಲ್ಲಿಸುತ್ತಾ ತನ್ನ ಮತ್ತು ತಳಸಮುದಾಯದ ನಡುವೆ ಶೋಷಿತರನ್ನೇ ಅಡ್ಡಗೋಡೆಯನ್ನಾಗಿಸಿಕೊಂಡು ಕೇಕೆ ಹಾಕುತ್ತಿದೆ. ಹೀಗಿರುವಾಗ ಪಟ್ಟಭದ್ರರ ವಿರುದ್ಧದ ಎಳ್ಳಿನಷ್ಟೂ ಪ್ರತಿಭಟನೆ ಸ್ವಾಗತಾರ್ಹ. ಜೊತೆಗೆ ದಲಿತ, ಆದಿವಾಸಿ, ತಳಸಮುದಾಯದ ಮಹಿಳೆಯರ ನೋವು, ಸಂಕಟಗಳನ್ನು ಮೇಲ್ಜಾತಿ ಮಹಿಳೆಯರು ತಮ್ಮದಾಗಿಸಿಕೊಳ್ಳಬೇಕಾದದ್ದು ಅನಿವಾರ್ಯ. ಪ್ರಶ್ನಿಸಿದಾಕ್ಷಣ ಪ್ರತಿಪ್ರಶ್ನೆಗಳನ್ನು ಎಸೆದು ನಿರುಮ್ಮಳವಾಗಲು ಇದು ನ್ಯೂಟನ್ ಮೂರನೇ ನಿಯಮವಲ್ಲ. ಮಡಿಲು ದೊಡ್ಡದಾದಷ್ಟು ಒಡಲು ತಂಪಾಗುತ್ತದೆ. ಭಿನ್ನಾಭಿಪ್ರಾಯಗಳನ್ನ ಗೌರವಿಸಿ ಜೊತೆಯಾಗೋಣ. ಇಂದಲ್ಲ ನಾಳೆ ಸಂಬಂಜ ದೊಡ್ಡದಾಗಿ ಪಟ್ಟಭದ್ರರ ವಿರುದ್ಧ ತಿರುಗಿ ಬೀಳುತ್ತದೆ.

– ವಿಕಾಸ್ ಆರ್ ಮೌರ್ಯ

*****

ಸೀಮಿತ ನೆಲೆಯ #Metoo ಅಭಿಯಾನ ತನ್ನ ಗಡಿಗಳನ್ನು ವಿಸ್ತರಿಸಿಕೊಳ್ಳಲಿ

ಸುಶಿಕ್ಷಿತ, ಆಧುನಿಕ, ಪ್ರಸಿದ್ಧ ಮಹಿಳೆಯರೂ ಕೂಡ ಈ ಶೋಷಕ – ಶೋಷಿತ ಸಮಾಜದ ಭಾಗವಾಗಿ, ಲೈಂಗಿಕ ದೌರ್ಜನ್ಯಗಳಿಂದ ಹೊರತಾಗಿಲ್ಲ ಎಂಬುದು ನಿಜ. ಅಮೆರಿಕಾದಲ್ಲಿ ಸದ್ದು ಮಾಡಿದ್ದ #ಒeಖಿoo ಅಭಿಯಾನ ಈಗ ಭಾರತದಲ್ಲಿಯೂ ಪ್ರಚಾರದಲ್ಲಿದೆ. ಬಾಲಿವುಡ್ ನಟಿ ತನುಶ್ರೀ ದತ್ತಾಳ ಹೇಳಿಕೆಯೊಂದಿಗೆ ಶುರುವಾದ ಈ ಅಭಿಯಾನ ಇನ್ನೊಂದಷ್ಟು ದನಿಗಳನ್ನು ದಾಖಲಿಸಿಕೊಳ್ಳುತ್ತಿದೆ. ಈ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯಗಳು ದಾಖಲಾಗುವುದನ್ನು ಖಂಡಿತ ಸ್ವಾಗತಿಸೋಣ. ಅವರ ಸಂಕಟಗಳನ್ನು ಸಹಾನುಭೂತಿಯಿಂದ ನೋಡೋಣ. ಆದರೆ, ಸೆಲೆಬ್ರಿಟಿಗಳ ಈ ಅಭಿಯಾನ ಕೆಲವು ಮಿತಿಗಳನ್ನೂ ಹೊಂದಿದೆ ಎಂಬುದರ ಬಗ್ಗೆಯೂ ತಿಳಿದಿರೋಣ.
ಹತ್ತು ಹಲವು ಜಾತಿ, ಶ್ರೇಣಿ, ವರ್ಗ, ಧರ್ಮಗಳ ಕೂಪವಾಗಿರುವ ಭಾರತವೆಂಬ ಈ ಅತಿ ಸಂಕೀರ್ಣ ದೇಶದಲ್ಲಿ ಇಂಥದ್ದೊಂದು ಅಭಿಯಾನವನ್ನು ಗ್ರಹಿಸಬೇಕಾದದ್ದು ಹೇಗೆ ?
ಇರುವೆಯನ್ನು ಆನೆಯಂತೆಯೂ, ಆನೆಯನ್ನು ಇರುವೆಯಂತೆಯೂ ಬಿಂಬಿಸಬಲ್ಲ ಅತಿರಂಜಿತ ಸುದ್ದಿ ಮಾಧ್ಯಮಗಳು, ಸೆಲೆಬ್ರಿಟಿಗಳ ವೈಯಕ್ತಿಕ ವಿಷಯಗಳನ್ನು, ಅದರಲ್ಲೂ ಅವರ ಲೈಂಗಿಕ ಸಂಬಂಧಗಳು ಅಥವಾ ಲೈಂಗಿಕ ಹಗರಣಗಳನ್ನು ಎಳೆದೆಳೆದು, ದಿನಗಟ್ಟಲೆ, ವಾರಗಟ್ಟಲೆ ಸುದ್ದಿ ಚಪ್ಪರಿಸಿ, ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತವೆ ಎಂಬುದು ಸ್ಪಷ್ಟವಾಗಿ ಅರ್ಥವಾಗಬಲ್ಲ ವಿಚಾರ. ದೆಹಲಿಯ ನಿರ್ಭಯ ಹಗರಣಕ್ಕೆ ಮಿಡಿಯುವ ಮಾಧ್ಯಮಗಳು ಬಿಜಾಪುರದ ದಲಿತ ಹೆಣ್ಣುಮಗಳು ದಾನಮ್ಮ ಅಥವಾ ಖೈರ್ಲಾಂಜಿಯಂಥ ಹಗರಣಗಳ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯವಹಿಸಿಬಿಡುತ್ತವೆ. ಇಂಥ ನಿಯೋಜಿತ ತಾರತಮ್ಯಗಳ ಹಿನ್ನೆಲೆಯಲ್ಲಿ ಈ ಮೀಟೂ ಅಭಿಯಾನ ಅತ್ಯಂತ ಸೀಮಿತ ವಲಯದ್ದು ಎಂಬುದು ಢಾಳಾಗಿ ರಾಚುತ್ತಿರುವ ಸತ್ಯ.
ಒಂದೆರಡು ಪರ್ಸೆಂಟ್ ಇರಬಹುದಾದ ಈ ದನಿಗಳು, ಈ ನೆಲದ, ಉಳಿದ 99% ಶೋಷಿತ ಮಹಿಳೆಯರ ಪ್ರಾತಿನಿಧಿಕ ದನಿಗಳಲ್ಲ ಎಂಬುದನ್ನೂ ಗಮನಿಸಬೇಕು. ಹೀಗಿರುವಾಗ, ಇದನ್ನೇ ದೊಡ್ಡಮಟ್ಟದ ಕ್ರಾಂತಿ ಎಂಬಂತೆ ಬಿಂಬಿಸುವ ಮಾಧ್ಯಮಗಳು ಹಾಗೂ ಇದೇ ಆತ್ಯಂತಿಕ ಸತ್ಯವೆಂಬಂತೆ ಉದಾಹರಿಸುವ ಸ್ತ್ರೀವಾದಿಗಳು ನಿಜಕ್ಕೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭ ಇದು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಈಗ ಚಾಲ್ತಿಯಲ್ಲಿರುವ ‘ಸ್ತ್ರೀವಾದ’ ಮೆಟ್ರೊ ಕೇಂದ್ರಿತವಾದುದು ಎಂಬ ಅಭಿಪ್ರಾಯ ಮತ್ತಷ್ಟು ಗಟ್ಟಿಗೊಳ್ಳತೊಡಗುತ್ತದೆ.
ಆಧುನಿಕತೆಯ ಗಂಧಗಾಳಿ ಇರದ, ತಮ್ಮ ಸಂಕಟಗಳನ್ನು ಅಭಿವ್ಯಕ್ತಿಸಬಹುದಾದ ಭಾಷೆಯಾಗಲೀ, ಮಾಧ್ಯಮವಾಗಲೀ, ಸ್ವಾತಂತ್ರ್ಯವಾಗಲೀ ಪಡೆದಿರದ ಮಹಿಳೆಯರ ಸಂಕಟದ ಕತೆಗಳು, ‘#Metoooo’ ಎಂಬ hashtag ಹಾಕಿ ಹೇಳಿಬಿಡುವಷ್ಟು ಸರಳವಾದವಲ್ಲ. ಶತಶತಮಾನಗಳಿಂದ ದೇವದಾಸಿ ಎಂಬ ಅನಿಷ್ಟ ಪದ್ಧತಿಯ ಬಲಿಪಶುಗಳಾಗಿ, ‘ದೇವರ’(!) ಹೆಸರಲ್ಲಿ ಲೈಂಗಿಕ ಶೋಷಣೆಗೊಳಗಾದವರು ದಲಿತ ಮಹಿಳೆಯರು. ಅವರ ಸಂಕಟಗಳನ್ನು ಎರಡು ಸಾಲಲ್ಲಿ ಹೇಳಿಬಿಡುವುದು ಸಾಧ್ಯವೆ?! ಹೀಗಿರುವಾಗ, ಸ್ತ್ರೀವಾದಿಗಳು, ಮಹಿಳಾಪರ ಚಿಂತಕರು ಹೆಚ್ಚು inclusive ಆಗಿರಬೇಕಾದದ್ದು ಇಂದಿನ ತುರ್ತು.
ಜಾತಿ, ವರ್ಗ, ಧರ್ಮದ ಪ್ರಶ್ನೆಗಳನ್ನೂ ಮೀರಿ, ಮಾನವೀಯತೆಯ ಗಡಿಯೊಳಗೆ ಲೆಕ್ಕಕ್ಕೂ ಇರದವರ ಬಗ್ಗೆ ಯೋಚಿಸಬೇಕಾದ ಸಂದರ್ಭ ಇದು. ಮುಖ್ಯವಾಗಿ mainstream feministಗಳು ಈ ಬಗ್ಗೆ ಯೋಚಿಸಬೇಕಿದೆ. ದೆಹಲಿಯ ನಿರ್ಭಯ ಪ್ರಕರಣದಂಥ ಇಶ್ಯೂಗಳಲ್ಲಿ ತುಂಬಾ ಬದ್ಧತೆ ತೋರುವವರು, ಬಿಜಾಪುರದ ದಾನಮ್ಮ ಪ್ರಕರಣದಂಥ ಇಶ್ಯೂಗಳ ಬಗ್ಗೆ ಒಂದೇ ಒಂದು ಹೇಳಿಕೆ ಕೂಡ ಕೊಡುವುದಿಲ್ಲ. ಇದು ಏನನ್ನು ಸೂಚಿಸುತ್ತೆ? ಮತ್ತದೇ ಜಾತಿಗ್ರಸ್ಥ ವ್ಯವಸ್ಥೆಯನ್ನೇ ತಾನೆ ?! ಈ ನಿಟ್ಟಿನಲ್ಲಿ ಪ್ರಚಲಿತ ಸ್ತ್ರೀವಾದ ತನ್ನ ಗಡಿಗಳನ್ನು ವಿಸ್ತರಿಸಿಕೊಳ್ಳಬೇಕಿದೆ. ಸ್ತ್ರೀವಾದ ಎಂಬುದು ಮಾನವೀಯ ನೆಲೆಯಲ್ಲಿ ಇನ್ನೂ ಹೆಚ್ಚು inclusive ಆಗಬೇಕಿದೆ.
ಈ ಹಿನ್ನೆಲೆಯಲ್ಲಿ #Metoo ಅಭಿಯಾನ ಜಾತಿ, ವರ್ಗ, ಧರ್ಮ, ಶ್ರೇಣಿಗಳ ಗಡಿಗಳನ್ನೂ ಮೀರಿ, ಈ ನೆಲದ ಪ್ರತಿಯೊಬ್ಬ ಮಹಿಳೆಯ ಪ್ರಾತಿನಿಧಿಕ ದನಿಯಾಗಬಲ್ಲುದೆ ?!

– ಡಾ.ಚರಿತಾ, ಮೈಸೂರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...