Homeಅಂಕಣಗಳುಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

ಮೋಟಮ್ಮಾ ಕಾಂಗ್ರೆಸಿಗಲ್ಲಾದವಳು..

- Advertisement -
- Advertisement -

ತಿಪಟೂರಿನ ಹುಡುಗರು ಶಿಕ್ಷಣ ಸಚಿವರ ಮನೆಯ ಮುಂದೆ ಹೋಗಿ ಒಂದು ಹರಕಲು ಚೆಡ್ಡಿಗೆ ಬೆಂಕಿಕಡ್ಡಿ ಗೀರಿದ ತಕ್ಷಣ ಈ ರಾಜ್ಯದ ಗೃಹಮಂತ್ರಿಯಲ್ಲದೆ ಮುಖ್ಯಮಂತ್ರಿ ಸಮೇತ ಶಿಕ್ಷಣ ಸಚಿವರ ಮನೆಗೆ ಬೆಂಕಿ ಹಾಕಲು ಹೋಗಿದ್ದ ಕಿಡಿಗೇಡಿಗಳನ್ನ ಸುಮ್ಮನೆ ಬಿಡುವುದಿಲ್ಲ ಎಂದಿದ್ದಲ್ಲದೆ ಪೊಲೀಸರಿಗೆ ಹೇಳಿ ಹಾಕಬಾರದ ಕೇಸನ್ನೆಲ್ಲಾ ಹಾಕಿ ಜೈಲಿಗೆ ತಳ್ಳಿದರಂತಲ್ಲಾ. ಹೀಗೆ ಚೆಡ್ಡಿ ಸುದ್ದಿ ಮುನ್ನಲೆಗೆ ಬಂದು ಹಲವರ ಬಾಯಲ್ಲಿ ಹರಿದಾಡುತ್ತಿರುವಾಗ ಚೆಡ್ಡಿಗಳಿಗೊಂದು ಸೂಕ್ತ ಕಾರ್ಯಕ್ರಮವೇ ಹೊಳೆಯಿತಂತಲ್ಲಾ. ಅದರಂತೆ ಸಿದ್ದರಾಮಯ್ಯನವರ ಮನೆಗೆ ಚೆಡ್ಡಿ ಹೊತ್ತುಕೊಂಡು ಹೋಗಿ ಸುರಿಯುವುದು. ಇಂತಹ ಅಸಹ್ಯಕರ ಕೆಲಸಕ್ಕೆ ಯಾರು ಸೂಕ್ತ ಎಂದು ಚೆಡ್ಡಿಗಳ ಪಡೆಯಲ್ಲಿ ಚರ್ಚೆ ನಡೆಯುತ್ತಿರುವಾಗ ದೂರದಲ್ಲಿ ನಾರಾಯಣಸ್ವಾಮಿ ಸಿಟ್ಟಿನಿಂದ ಬರುತ್ತಿರುವುದು ಕಾಣಿಸಿ ಎಲ್ಲರು ನಿಟ್ಟುಸಿರುಬಿಟ್ಟರಂತೆ. ಸಿದ್ದರಾಮಯ್ಯನವರ ಮನೆ ಮುಂದೆ ಚೆಡ್ಡಿ ಸುರಿಯಲು ಈತನೇ ಸರಿಯಾದ ವ್ಯಕ್ತಿ, ಏಕೆಂದರೆ ಬಿಜೆಪಿಗೆ ಬಂದು ಬಹಳ ದಿನವಾಗಿಲ್ಲ, ಆದ್ದರಿಂದ ಹೇಳಿದ ಕೆಲಸ ಮಾಡುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದುಕೊಂಡರಂತಲ್ಲಾ. ಕೇಳಿದ ಕೂಡಲೇ ನಾರಾಯಣಸ್ವಾಮಿ ಚೆಡ್ಡಿ ತುಂಬಿಕೊಂಡು ಸಿದ್ದು ಮನೆಕಡೆ ಓಡಿದರಂತಲ್ಲಾ, ಧೂತ್ತೇರಿ.

******

ಚೆಡ್ಡಿಗೆ ಚೆಡ್ಡಿಗಳದ್ದೇ ಆದ ಒಂದು ಇತಿಹಾಸವಿದೆ. ಆರೆಸ್ಸೆಸ್ ಪಡೆ ನಿರ್ಮಿಸಿದ ಮಹಾನುಭಾವರು ಮಾಡಿದ ಯೂನಿಫಾರಂ ಅದು. ಆ ಯೂನಿಫಾರಂಗಾಗಿ ಪೂರ್ಣಪ್ರಮಾಣದ ಪ್ಯಾಂಟ್ ಹೊಲಿಸುವ ಶಕ್ತಿ ಯಾರಲ್ಲೂ ಇರಲಿಲ್ಲ, ಆದ್ದರಿಂದ ಬಡತನದಲ್ಲಿ ತಯಾರಾಗುತ್ತಿದ್ದ ಆ ಪಡೆಗೆ ಪ್ಯಾಂಟ್ ಬದಲು ಚೆಡ್ಡಿ ತೊಟ್ಟುಕೊಂಡು ಬರಲು ಹೇಳಲಾಯ್ತು. ಬಹುಪಯೋಗಿ ಚೆಡ್ಡಿ ಸಂಘದ ಪಥಸಂಚಲನೆಯ ಭಾಗ್ಯ ಪಡೆಯಿತು. ನಿಜಕ್ಕೂ ಚೆಡ್ಡಿ ಅಂದು ಬಡತನದ ಸಂಕೇತ. ಅದನ್ನ ತೊಟ್ಟವನ ಕಾಲುಗಳಿಗೂ ಕೈಯಲ್ಲಿದ್ದ ಲಾಟಿಗೂ ಅಂತಹ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ಜೊತೆಗೆ ಕುಳಿತಾಗ ಮಾನ ತೆಗೆಯುವ ಆ ಚೆಡ್ಡಿಯಿಂದ ಮುಕ್ತಿ ಪಡೆದು ಪ್ಯಾಂಟ್ ಹೊಲಿಸಿಕೊಳ್ಳಬೇಕಾದರೆ ಚೆಡ್ಡಿಗಳೇ ಪವರ್ರಿಗೆ ಬರಬೇಕಾಯ್ತು. ಈಗ ಚೆಡ್ಡಿಗಳಿಂದ ಚೆಡ್ಡಿ ಮಾಯವಾಗಿ ಪ್ಯಾಂಟ್‌ಗೆ ಭಡ್ತಿ ಪಡೆಯಲಾಗಿದೆ. ಆದರೂ, ಬ್ರಾಹ್ಮಣ ಸತ್ತರೂ ಬ್ರಾಹ್ಮಣ್ಯ ಬೆನ್ನುಬಿಡದಂತೆ ಈ ನಾಡನ್ನು ಚೆಡ್ಡಿ ಸಂಗತಿಗಳು ಆವರಿಸಿರುವ ಈ ಸಮಯದಲ್ಲಿ ಚೆಡ್ಡಿ ಪಡೆ ಮನೆಮನೆಗೆ ಹೋಗಿ ಚೆಡ್ಡಿ ಭಿಕ್ಷೆ ಕೇಳುತ್ತಿವೆಯಂತಲ್ಲಾ. ಸಾಮಾನ್ಯರು ತಮಾಶೆ ಮುಖದಲ್ಲಿ ತಮ್ಮ ಮನೆಯಲ್ಲಿದ್ದ ಬರ್ಮುಡಾ ಚೆಡ್ಡಿಗಳನ್ನೆ ಭಿಕ್ಷೆಯಾಗಿ ನೀಡುತ್ತಿರುವಾಗ ನಮ್ಮ ಜೆಡಿಎಸ್ ಪಕ್ಷದ ಧೀಮಂತ ನಾಯಕರಾದ ಕುಮಾರಸ್ವಾಮಿಯವರು ಚೆಡ್ಡಿಯನ್ನು ಕೀಳಾಗಿ ಕಾಣುವಂತ ಅಗತ್ಯವಿಲ್ಲ, ನಮ್ಮ ರೈತರೂ ಕೂಡ ಚೆಡ್ಡಿಯನ್ನ ಇಕ್ಕಿಕೊಳ್ಳುತ್ತಾರೆ ಎಂದು ಚೆಡ್ಡಿಗಳ ಮಾನ ಉಳಿಸುವ ಮಾತನಾಡುತ್ತಿರಬೇಕಾದರೆ, ಮಂಡ್ಯದ ಹೈದರು ನಮ್ಮದು ಪಟಪಟ್ಟಿ ಚೆಡ್ಡಿಕಲ ಖಾಕಿ ಚೆಡ್ಡಿಯಲ್ಲ ಎಂದರಂತಲ್ಲಾ, ಥೂತ್ತೇರಿ.

******

“ಬಿದಿರು ನೀನ್ಯಾರಿಗಲ್ಲದವಳು” ಎಂಬ ಹೆಸರಿನಲ್ಲಿ ಮೋಟಮ್ಮನವರ ಆತ್ಮವೃತ್ತಾಂತ ಪ್ರಕಟವಾಗಿದೆ. ಬಿದಿರು ಅನಾದಿ ಕಾಲದಿಂದ ಮನುಕುವನ್ನು ಪೊರೆದ ಸಂಜೀವಿನಿಯಂತಹ ಸಸ್ಯ. ’ಹುಟ್ಟುತ್ತ ಹುಲ್ಲಾದೆ ಬೆಳೆಯುತ್ತ ಮರವಾದೆ’ ಎಂದು ಹೇಳುವ ಬಿದಿರು, ’ಕಂದನಿಗೆ ತೊಟ್ಟಿಲಾದೆ ಕೃಷ್ಣನಿಗೆ ಕೊಳಲಾದೆ ಹತ್ತುವವಗೆ ಏಣಿಯಾದೆ ಸತ್ತವಗೆ ಚಟ್ಟವಾದೆ’ ಎಂದು ಇಡೀ ಮನುಷ್ಯನ ಬದುಕಿಗೆ ಆಸರೆಯಾದದ್ದು ಒಂದು ಅದ್ಭುತವಾದ ತತ್ವಪದ. ಇದನ್ನು ಬರೆದ ಶಿಶುನಾಳ ಷರೀಪರು ಅಜರಾಮರ. ತಮ್ಮ ಆತ್ಮವೃತ್ತಾಂತಕ್ಕೆ ಈ ಹೆಸರಿಟ್ಟ ಮೋಟಮ್ಮ ದಿಟ್ಟ ಮಹಿಳೆ ಹಾಗೆ ಸ್ವಲ್ಪ ದಡ್ಡತನವೂ ಇದೆ. ಇಲ್ಲವಾದರೆ ಬಿಜೆಪಿಯವರಿಗೂ ಬೇಕಾಗದೆ ಮನೆಯಲ್ಲಿರುವ ಎಸ್.ಎಂ ಕೃಷ್ಣರಿಂದ ಈ ಪುಸ್ತಕ ಬಿಡುಗಡೆ ಮಾಡಿಸುತ್ತಿರಲಿಲ್ಲ. ಕೃಷ್ಣ ಕರ್ನಾಟಕ ಕಂಡ ಸಜ್ಜನ ರಾಜಕಾರಣಿ. ತನ್ನ ಕಾರಿನ ಡ್ರೈವರನ್ನು ಕೂಡ ಬಹುವಚನದಲ್ಲಿ ಮಾತಾಡಿಸುವ ಕೃಷ್ಣ ಕಾಡುಗಳ್ಳ ವೀರಪ್ಪನ್‌ನನ್ನ ವೀರಪ್ಪನ್‌ರವರೆ ಎಂದು ಸಂಬೋಧಿಸಿ ಸುದ್ದಿಯಾಗಿದ್ದರು. ಬೆಳ್ಳಿ ಚಮಚ ಬಾಯಲ್ಲಿಟ್ಟುಕೊಂಡೇ ಬಂದ ಕೃಷ್ಣ ಎಂಟತ್ತು ಜನ ಅಕ್ಕತಂಗಿಯರೊಡನೆ ಬೆಳೆದು ಅಮೆರಿಕಕ್ಕೆ ಹೋಗಿ ಓದಿ ಬಂದು ಬಿಸಿಲಲ್ಲಿ ಪ್ರತಿಭಟಿಸದೆ ಜಾಥ ಮಾಡದೆ, ಬೆವರಿಳಿಸದೆ ರಾಜಕಾರಣ ಮಾಡಿದವರು. ಕಾಂಗ್ರೆಸಿನಲ್ಲಿ ಪ್ರಧಾನಿ ಪಟ್ಟವನ್ನು ಬಿಟ್ಟು ಇನ್ನೆಲ್ಲವನ್ನೂ ಅನುಭವಿಸಿದವರು. ವಯೋಮಾನದ ಕಾರಣಕ್ಕೆ ಮನೆಗೆ ಬಂದವರು. ಹಾಗೆ ಸುಮ್ಮನಿರದೆ ಬಿಜೆಪಿಯ ವೃದ್ಧಾಶ್ರಮಕ್ಕೆ ಸೇರಿಕೊಂಡರೆಂದು ಕಾಂಗೈಗಳು ಆಡಿಕೊಳ್ಳುತ್ತಿರುವಾಗ ಹೋರಾಟದಿಂದಲೇ ಮೇಲೆ ಬಂದ ಮೋಟಮ್ಮ ಬರೆದ ಬಿದಿರು ನೀನ್ಯಾರಿಗಲ್ಲದವಳ ಬಿಡುಗಡೆಗೂ, ಕೃಷ್ಣರ ಬದುಕಿಗೂ, ಮೋಟಮ್ಮನ ಬಾಳಿಗೂ ಯಾವ ಸಂಬಂಧವೂ ಇಲ್ಲವಂತಲ್ಲಾ, ಥೂತ್ತೇರಿ.

ಎಸ್.ಎಂ ಕೃಷ್ಣ

******

ನಮ್ಮ ನಡುವಿನ ದಲಿತರೆಲ್ಲಾ ತಮ್ಮತಮ್ಮ ಬದುಕಿನ ವೃತ್ತಾಂತ ಬರೆಯಬಹುದು, ಏಕೆಂದರೆ ಅವರ ಬದುಕೆ ಹಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮತಮ್ಮ ಆತ್ಮ ವೃತ್ತಾಂತ ಬರೆದುಕೊಳ್ಳುತ್ತಿರುವ ಮೇಲುವರ್ಗದ ಜನ ಅಲ್ಲಲ್ಲಿ ತಮಗೆ ಕಿತ್ತು ತಿನ್ನುವ ಬಡತನ, ನಿರ್ಗತಿಕತನದ ನಿದರ್ಶನ ನೀಡುತ್ತಿದ್ದಾರೆ. ಹಾಗಾದರೆ ನಮ್ಮ ನಡುವಿನ ದಲಿತರು ತಮ್ಮ ಬಡತನಕ್ಕೆ ಯಾವ ಪದ ಬಳಸಬೇಕೆಂಬುದೇ ಸಮಸ್ಯೆಯಾಗಿದೆಯಂತಲ್ಲಾ. ಏಕೆಂದರೆ ಇಂತಹವನೊಬ್ಬ ದಾಖಲಿಸುವ ಬಡತನದ ಪರಿಸರದಲ್ಲಿ ಬರಿ ಅನ್ನ ಸಾರಿತ್ತೆ ವಿನಹ, ಅದಕ್ಕೆ ಹಪ್ಪಳ ಉಪ್ಪಿನ ಕಾಯಿ, ಸಂಡಿಗೆ, ತಿಳಿಸಾರು, ಮೊಸರು ಯಾವುದೂ ಇರಲಿಲ್ಲ ಎಂದು ಅಳುತ್ತಿರುವ ಸಮಯಕ್ಕೆ, ದಲಿತನೊಬ್ಬ ತೋಟದಲ್ಲಿ ಹೂತ ಎತ್ತನ್ನು ಹೊರತೆಗೆದು, ಮಾಂಸಖಂಡವನ್ನ ಎತ್ತಿಕೊಂಡು ಹೋಗಿದ್ದ ದಾಖಲೆಯೂ ಇದೆ. ಹಾಗಾದರೆ ಕಿತ್ತುತಿನ್ನುವ ಬಡತನ ಅಂದರೆ ಏನೆಂಬುದು ಸಮಸ್ಯೆಯಾಗಿದೆಯಲ್ಲಾ. ಇಂತಿರುವಾಗ ತುಂಬಾ ನಿರ್ಗತಿಕರೆ ಇರುವ ಮೂಡಿಗೆರೆಯಿಂದ ಬಂದ ಮೋಟಮ್ಮ ಮೀಸಲು ಕ್ಷೇತ್ರದಿಂದ ಸರಾಗವಾಗಿ ಗೆದ್ದು ಬಂದವರು. ಸರಾಗವಾಗಿ ಮಂತ್ರಿಯಾದವರು, ಬಂದ ಸರಕಾರದಲೆಲ್ಲಾ ಮಂತ್ರಿಯಾಗಬೇಕೆಂದು ಅಪೇಕ್ಷೆಪಟ್ಟವರು. ಆದರೆ ತಮ್ಮ ಸರದಿ ಮುಗಿಯಿತೆಂದು ಅರಿಯದವರು. ಅದಕ್ಕೆ ಈವತ್ತಿನ ಗೋಳಾಟವಿದೆಂಬುದು ಚಂದ್ರಪ್ಪ, ನಿಂಗಯ್ಯ ಕುಮಾರಸ್ವಾಮಿಯ ಅಭಿಪ್ರಾಯವಾಗಿದೆಯಲ್ಲಾ, ಥೂತ್ತೇರಿ.

*****

ಹಾಗೆ ನೋಡಿದರೆ ಮೂಡಿಗೆರೆಯಿಂದ ಬಂದವರೆಲ್ಲಾ ತುಂಬಾ ಸಜ್ಜನ ರಾಜಕಾರಣಿಗಳು. ಕೆ.ಹೆಚ್ ರಂಗನಾಥ್, ಪಿ. ತಿಪ್ಪಯ್ಯ ಮೇಷ್ಟ್ರು, ಬಿ.ಬಿ ನಿಂಗಯ್ಯ, ಮೋಟಮ್ಮ, ಕುಮಾರಸ್ವಾಮಿ ಇವರೆಲ್ಲಾ ಜಿಲ್ಲೆ ಕಂಡರಿಯದ ರಾಜಕೀಯ ಪ್ರತಿಭೆಗಳು. ಇಲ್ಲಿ ರಂಗನಾಥ್, ಬಿ.ಬಿ ನಿಂಗಯ್ಯ ಹೊರತಾಗಿ ಇನ್ನೆಲ್ಲರು ಮೇಲು ಜಾತಿ ಜನರ ಸೇವಕರಂತೆ ವರ್ತಿಸಿದ್ದಾರೆ. ಮೇಲು ಜಾತಿಯ ಪಾರ್ಟಿ ಪ್ರೆಸಿಡೆಂಟ್, ಶಾಸಕ ತಿಪ್ಪಯ್ಯರನ್ನು ಕರೆದು “ರೀ ತಿಪ್ಪಯ್ಯಾ ಒಂದು ಪ್ಯಾಕ್ ಸಿಗರೇಟು ಬೆಂಕಿಪಟ್ನ” ತಗಂಬನ್ರಿ ಎಂದು ಕಳಿಸಿದ ಉದಾಹರಣೆಯಿದೆ. ಇಂತಹ ಕೆಲಸ ಮಾಡದವರು ಸೋಲುತ್ತಾರೆ. ಹಾಗೆ ಮಾಡಿಬಿಡಬಲ್ಲ ಕುಮಾರಸ್ವಾಮಿ ಈಗಿನ ಬಿಜೆಪಿ ಶಾಸಕ. ಇಂತವರನ್ನ ಕಂಡರೆ ಬಿಜೆಪಿ ಜನರಿಗೆ ಇಷ್ಟ. ಅದು ಬಿಟ್ಟು ದಿಟ್ಟ ಸ್ವಾಭಿಮಾನದ ಮಹಿಳೆಯಾದ ಮೋಟಮ್ಮ ಮತ್ತೆ ಇಲ್ಲಿಂದ ಮೇಲೆ ಬರಲಾರರು. ಏಕೆಂದರೆ ಬೆಂಗಳೂರಲ್ಲಿ ಭವ್ಯವಾದ ಮನೆ ಕಟ್ಟಿಕೊಂಡು ಸಾಮಾಜಿಕ ಕಾಳಜಿಯಿಂದ ಅಗಾಗ್ಗೆ ಸ್ಲಂಗೆ ಭೇಟಿ ಕೊಡುವಂತೆ ಮೂಡಿಗೆರೆಗೆ ಬರುವ ಮೋಟಮ್ಮ ಇಲ್ಲಿಂದ ಚುಕ್ತಾ ಆಗಿಯಾಗಿದೆ. ಅದಕ್ಕೆ ತಮ್ಮ ಪುಸ್ತಕ ಬಿಡುಗಡೆಗೆ ಎಸ್.ಎಂ ಕೃಷ್ಣರನ್ನು ಕರೆದಿರುವುದು. ಮುಂದೆ ಅವರು ಮೂಡಿಗೆರೆ ಶಾಸಕಿಯಾಗಬೇಕಾದರೆ ಕುಮಾರಸ್ವಾಮಿ ಕೆಲಸಗಳನ್ನ ಮೀರಿಸಬೇಕು. ಅದ್ಯಾವುವೆಂದರೆ ಎಲ್ಲರ ಮನೆಗಳ ಕೋಣೆಗೆ ನುಗ್ಗಿ ಚಟ್ನಿ ಇಲ್ಲದಿದ್ದರು ರೊಟ್ಟಿ ಈಸಿಕೊಂಡು ತಿನ್ನುವುದು, ಸಾರಿಲ್ಲದಿದ್ದರೂ ಮುದ್ದೆ ನುಂಗುವುದು ಹೀಗೆ. ಇದು ಮೋಟಮ್ಮ, ನಿಂಗಪ್ಪ, ಚಂದ್ರಪ್ಪನಿಂದ ಸಾಧ್ಯವಿಲ್ಲ ಎಂದು ಬಿಜೆಪಿಗಳೇ ನಿರಾಳವಾಗಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋಟಮ್ಮನವರ ಆತ್ಮಕಥನ ’ಬಿದಿರು ನೀನ್ಯಾರಿಗಲ್ಲದವಳು’ವಿನಿಂದ ಆಯ್ದ ಭಾಗ; ಇಂದಿರಾಜಿಗೆ ಮರುಹುಟ್ಟು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...