ಉಪ ಚುನಾವಣೆಗಳಲ್ಲಿ ಆಡಳಿರೂಢ ಪಕ್ಷ ಮೇಲುಗೈ ಸಾಧಿಸುವುದನ್ನು ನೋಡುತ್ತಲೇ ಬಂದಿದ್ದೇವೆ. ಆದರೆ ಈ ಸಲ ಆಡಳಿತ ಪಕ್ಷಕ್ಕೆ ಆಟ ಸುಲಭವಿಲ್ಲ! ಮಸ್ಕಿ ಭಾಗದಲ್ಲಿ ನೀರಾವರಿಗಾಗಿ 58 ಹಳ್ಳಿಗಳ ಜನರು ಹೋರಾಟ ಮಾಡುತ್ತಿರುವುದು ಸರ್ಕಾರಕ್ಕೆ ಬೆವರು ಇಳಿಸಿತೆ? 2018-19ರಲ್ಲಿ ಈಗಿನ ಬಿಜೆಪಿ ಕ್ಯಾಂಡೀಡೇಟ್ ಸಲ್ಲಿಸಿದ್ದ ಪ್ರಸ್ತಾಪ ಒಂದನ್ನು ಈ ಸರ್ಕಾರ ಜಾರಿ ಮಾಡಲು ಹೊರಟಿದೆ.
ಮಸ್ಕಿ ತಾಲೂಕಿನ 17 ಕೆರೆಗಳಿಗೆ ಕೃಷ್ಣಾ ನದಿ ನೀರನ್ನು ತಂದು ಹಾಕುವ ಈ ಅವೈಜ್ಞಾನಿಕ ಯೋಜನೆಗೆ ಸರ್ಕಾರ 487 ಕೋಟಿ ರೂ, ನಿಗದಿ ಮಾಡಿದೆ. ಈಗಾಗಲೇ ಆಡಳಿತಾತ್ಮಕ ಮಂಜೂರಿ ಪಡೆದು 87 ಕೋಟಿ ರೂ. ನಿಡುಗಡೆ ಆಗಿದೆ.
ಇದನ್ನೂ ಓದಿ: ಮಸ್ಕಿ ಉಪಚುನಾವಣೆ: NRBC_5A ನೀರಾವರಿ ಹೋರಾಟ ಫಲಿತಾಂಶ ಬದಲಿಸಬಲ್ಲದೇ?
ಆಟ ಶುರುವಾಗಿದೆ. ಆದರೆ ಇವರು ಗುರುತಿಸಿರುವ 17 ಕೆರೆಗಳು ಯಾವುವು ಅಂತಾ ನೋಡಲು ಹೊರಟರೆ, ಅಲ್ಲಿ ಬಹುತೇಕ ಕಡೆ ಕೆರೆಗಳೇ ಇಲ್ಲ! ಅವು ಹೂಳು ತುಂಬಿಕೊಂಡಿವೆ ಅಥವಾ ಒತ್ತುವರಿ ಆಗಿಬಿಟ್ಟಿವೆ! ಸರ್ಕಾರ ಗುರುತಿಸಿರುವ ಈ 17 ‘ಕೆರೆ’ ತುಂಬಿಸಿದರೂ ಅರ್ಧ ಟಿಎಂಸಿ ನೀರು ಕೂಡ ಸಂಗ್ರಹ ಆಗುವುದಿಲ್ಲ!
ಈ ಮೀಸಲು ಕೇತ್ರದಲ್ಲಿ ಮೇಲ್ಜಾತಿಯ ಲಿಂಗಾಯತರದ್ದೇ ಆಟ ನಡೆದಿದೆ. ಈಗ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಂಟ್ರೋಲ್ ಮಾಡುತ್ತಿರುವುದೂ ಇವರೇ. 17 ಕೆರೆ ತುಂಬಿಸುವ ಯೋಜನೆಯಲ್ಲಿ ಈ ವರ್ಗದ ಜನರೇ ಮಹಾನ್ ಫಲಾನುಭವಿಗಳು!
ಆಡಳಿತ ಪಕ್ಷ ಈ ಸೀಟು ಗೆಲ್ಲಲು ಹರಸಾಹಸ ಮಾಡುತ್ತಿದೆ. ಅದರ ಬಳಿ ರೊಕ್ಕ ಇದೆ, ಅಧಿಕಾರ ಶಕ್ತಿಯಿದೆ. ಆದರೆ, ಈ ಸಲದ ಆಟ ಸುಲಭ ಇಲ್ಲ. 56 ಹಳ್ಳಿಗಳ ಜನತೆ ಚುನಾವಣಾ ಫಲಿತಾಂಶವನ್ನೇ ಬದಲಿಸಬಲ್ಲರು. ಕಳೆದ ಸಲ ಪ್ರತಾಪಗೌಡರನ್ನು ಕಾಂಗ್ರೆಸ್‌ಗೆ ಕರೆ ತಂದ ಸಿದ್ದರಾಮಯ್ಯ ಇಲ್ಲಿ ಒಂದು ದಿನ ಅಬ್ಬರದ ಪ್ರಚಾರ ಮಾಡಿಬಿಟ್ಟರೆ ಆಟದ ರಂಗೇ ಬದಲಾಗಲಿದೆ ಎನ್ನುತ್ತಾರೆ ಇಲ್ಲಿನ ಕೆಲವು ಪ್ರಜ್ಞಾವಂತ ಮತದಾರರು.
ಇದನ್ನೂ ಓದಿ: ಮಸ್ಕಿ ಉಪಚುನಾವಣೆ| ಅಭ್ಯರ್ಥಿಗಳು ಅದಲು-ಬದಲು: ಮೀಸಲು ಕ್ಷೇತ್ರದಲ್ಲಿ ‘ಗೌಡರ’ ಸ್ಪರ್ಧೆ!