ನರಸಿಂಹಮೂರ್ತಿ ಬಂಧನ: ರಾಯಚೂರಿನಲ್ಲಿ ಅವತ್ತು ನಡೆದದ್ದೇನು? – ಪ್ರತ್ಯಕ್ಷದರ್ಶಿಯ ಬರಹ

0

| ಸುನಿಲ್ ಶಿರಸಂಗಿ |

ಪತ್ರಿಕೆಯ ಮುಖ್ಯ ತಂಡದ ಸುನಿಲ್ ಶಿರಸಂಗಿ ಕರ್ನಾಟಕದ ಹಲವು ಪ್ರಮುಖ ಚಾನೆಲ್‍ಗಳಲ್ಲಿ ಮುಖ್ಯ ಸ್ಥಾನಗಳಲ್ಲಿದ್ದವರು. ಹೊಸಪೇಟೆ ಮತ್ತು ರಾಯಚೂರುಗಳಲ್ಲಿ ನಡೆದ ಪತ್ರಿಕೆಯ ಕಾರ್ಯಕ್ರಮಗಳಲ್ಲಿ ನರಸಿಂಹಮೂರ್ತಿಯವರ ಜೊತೆಯಲ್ಲಿದ್ದು, ಅಲ್ಲೇನಾಯಿತು ಎಂಬ ಕುರಿತು ಅವರ ಅನಿಸಿಕೆಗಳನ್ನು ಬರೆದಿದ್ದಾರೆ

ಲಂಕೇಶ್ ಪತ್ರಿಕೆ ಮತ್ತು ಲಂಕೇಶ್ ಮೇಸ್ಟ್ರು ಬರಹಗಳು ನಮ್ಮಂತಹ ಯುವ ಜನಾಂಗವನ್ನು ವೈಚಾರಿಕತೆಯತ್ತ ಸೆಳೆಯುತ್ತಲಿದ್ದವು, ವೈಯಕ್ತಿಕವಾಗಿ ನನ್ನನ್ನು ಮಾಧ್ಯಮ ಕ್ಷೇತ್ರದತ್ತ ಆಕರ್ಷಿತನಾಗುವಂತೆ ಮಾಡಿತು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕನ್ನಡದ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ನಾನು Activist ಆಗಿರಲಿಲ್ಲ. ಆದರೆ ಪತ್ರಿಕೋದ್ಯಮದಲ್ಲಿ Activism ಮಾಡಲು ಪ್ರಯತ್ನಿಸಿದೆ ಅನ್ನಬಹುದು. ಮಾಧ್ಯಮದಲ್ಲಿನ ಏಳುಬೀಳುಗಳು ಈ ಮಧ್ಯಯೇ ಪರಿಚಯವಾಗಿದ್ದು ಗೌರಿ ಲಂಕೇಶ್ ಮತ್ತು ಬಳಗ. ರಾಜಲಕ್ಷ್ಮಿ ಅಂಕಲಗಿಯವರ ಜೊತೆ ಹೆಚ್ಚು ಒಡನಾಟವಿದ್ದ ಗೌರಿ ಮುಂದೆ ನಮ್ಮ ಬದುಕಿನ ಭಾಗವಾಗಿಬಿಟ್ಟರು. ಅವರೊಂದಿಗಿನ ಮಧುರ ಒಡನಾಟ, ಸಣ್ಣ ಪುಟ್ಟ ಭಿನ್ನಾಭಿಪ್ರಾಯ, ಹೋರಾಟಗಳು ಈ ಎಲ್ಲದರ ಮಧ್ಯೆಯೂ ನಾನು ಮುಖ್ಯವಾಹಿನಿ ಬಿಟ್ಟು ಟ್ಯಾಬ್‍ಲಾಯ್ಡ್‍ಗೆ ಬರೆಯಬಾರದು ಅಂತ ನಿರ್ಧರಿಸಿಬಿಟ್ಟೆ. ಯಾಕೆಂದರೆ ಅಷ್ಟರಲ್ಲಾಗಲೆ ಮೇಷ್ಟ್ರು ಲಂಕೇಶ್ ಪತ್ರಿಕೆ ಶೈಲಿ ಮುಗಿದು ಜಗತ್ತು ಕಪ್ಪು ಬಿಳುಪಿನತ್ತ ವಾಲಿತ್ತು.

ಆದರೆ ಗೌರಿ ಹತ್ಯೆ ನಮ್ಮನ್ನೆಲ್ಲ ಬಡಿದೆಬ್ಬಿಸಿತ್ತು. ಚೌಕಟ್ಟಿನೊಳಗೆ ಬಂದಿಯಾಗಿದ್ದ ನನ್ನಂತವರನ್ನ ಹೊರಬರುವಂತೆ ಮಾಡಿತು. ಆಗಲೇ ಅಲ್ಲಿಯವರೆಗೆ ಕೇವಲ ಪರಿಚಯವಿದ್ದ ದೊಡ್ಡಿಪಾಳ್ಯ ನರಸಿಂಹಮೂರ್ತಿ ನಮ್ಮ ಅಂತರಂಗÀಕ್ಕೆ ಎಂಟ್ರಿ ಕೊಟ್ಟಿದ್ದು. ಎಷ್ಟೇ ಕಷ್ಟವಾದರೂ ಗೌರಿ ಆಶಯವನ್ನು ಮುಂದುವರೆಸಬೇಕು ಎಂಬ ದೃಢ ನಿರ್ಧಾರಕ್ಕೆ ಬಂದ ನರಸಿಂಹ ಮೂರ್ತಿ ಹಲವರನ್ನು ಸೇರಿಸಿಕೊಂಡು ಸಾಹಸಕ್ಕೆ ಧುಮುಕಿಬಿಟ್ಟರು.

ಒಂದೆಡೆ ನಿರಕುಂಶ ಪ್ರಭುತ್ವ, ಇನ್ನೊಂದೆಡೆ ಕೇವಲ ಸದಾಶಯ ಹೊಂದಿದ ತತ್ವಬದ್ಧರಾಗಿರುವ ನಮ್ಮ ಯುವ ಗುಂಪಿಗೆ ಎದುರಾಗಿದ್ದು ಕಷ್ಟಗಳ ಸರಮಾಲೆ. ಕೋಮುವಾದಿ ಸರಕಾರದ ವಿರುದ್ಧ ಹೋರಾಡಲು ಸಜ್ಜಾಗಿದ್ದ ನಮಗೆ ‘ನಾನುಗೌರಿ’ ಟೈಟಲ್ ಕೂಡ ದೊರೆಯದಂತೆ ಮಾಡಿತು ವ್ಯವಸ್ಥೆ. ಅಲ್ಲಿಯವರೆಗೆ ಖಾಸಗಿ ಪ್ರಸಾರಕ್ಕೆ ಬರುತ್ತಿದ್ದ ನಾನು ಗೌರಿಯನ್ನು ನಿಲ್ಲಿಸಿ, ನಂತರ ‘ನ್ಯಾಯಪಥ’ ಜೊತೆಗೆ naanugauri.com ಎಂಬ ವೆಬ್‍ಸೈಟ್ ಆರಂಭಿಸಲಾಯಿತು.
ಆರ್ಥಿಕ ಸಂಕಷ್ಟಗಳ ಸರಮಾಲೆ, ವೈಯಕ್ತಿಕ ಬದುಕಿನ ಜಂಜಾಟಗಳ ಮಧ್ಯೆಯು ನಮ್ಮ ತಂಡ ನ್ಯಾಯಪಥವನ್ನು ಎಲ್ಲರನ್ನ ಒಳಗೊಳ್ಳುವಂತಹ, ಎಲ್ಲರೂ ಓದುವಂತಹ ಪತ್ರಿಕೆಯಾಗಿ ರೂಪಿಸುವಲ್ಲಿ ಯಶಸ್ವಿಯಾಯಿತು. ಇದರ ಶ್ರೇಯಸ್ಸು ಸಲ್ಲುವುದು ದೊಡ್ಡಿಪಾಳ್ಯ ನರಸಿಂಹಮೂರ್ತಿಗೆ.

ಹೊಸ ತಂಡವನ್ನು ಕಟ್ಟುತ್ತಾ ಹೊಸ ಹೊಸ ಅಲೋಚನೆಗಳನ್ನು ಒಳಗೊಳ್ಳುತ್ತ ಸಾಗುತ್ತಿದ್ದ ನಮ್ಮ ತಂಡಕ್ಕೆ ಎದುರಾಗಿದ್ದು ನ್ಯಾಯಪಥ ಪತ್ರಿಕೆಯನ್ನು ಹೇಗೆ ಸ್ವಾವಲಂಬಿಯಾಗಿಸುವುದು? ಹೇಗೆ ಆರ್ಥಿಕ ಸಂಕಷ್ಟದಿಂದ ಹೊರತರುವುದು ಅಂತ. ಆಗ ಹೊಳೆದಿದ್ದೆ ಚಂದಾ ಅಭಿಯಾನ. ರಾಜ್ಯದ ಪ್ರಜ್ಞಾವಂತರಲ್ಲಿ 10 ಸಾವಿರ ಜನ ಚಂದಾ ಮಾಡಿಸಿದರೆ ಗೌರಿ ಮೀಡಿಯಾ ಟ್ರಸ್ಟ್ ಸ್ವತಂತ್ರವಾಗಿ ನಡೆಯಬಲ್ಲದು ಎಂಬುದು ನಮ್ಮ ನಂಬಿಕೆ. ಅದಕ್ಕಾಗಿ ಆರಂಭವಾಗಿದ್ದು ಜಿಲ್ಲಾವಾರು ಪರ್ಯಾಯ ಮಾಧ್ಯಮದ ಅಗತ್ಯ ಮತ್ತು ಸಾಧ್ಯತೆ ವಿಚಾರಗೋಷ್ಟಿಗಳು ಮತ್ತು ಚಂದಾ ಅಭಿಯಾನ. ಈಗಾಗಲೇ ಚಿತ್ರದುರ್ಗ ಮತ್ತು ದಾವಣಗೆರೆಗಳಲ್ಲಿ ಮೊದಲ ಸುತ್ತಿನ ಸಭೆ ಮುಗಿಸಿದ್ದ ನಾವು ಎರಡನೇ ಸುತ್ತಿನಲ್ಲಿ ನಮ್ಮ ಪಯಣ ಹೊಸಪೇಟೆ, ಗಂಗಾವತಿ, ಸಿಂಧನೂರು, ರಾಯಚೂರು ಮತ್ತು ಕೊಪ್ಪಳ ಕಡೆ ಹೊರಟಿತ್ತು.

ಬೆಂಗಳೂರು ರೈಲ್ವೆ ಸ್ಟೇಷನ್ನಿಂದ ನಾನು ಮುತ್ತುರಾಜು ಮತ್ತು ದೊಡ್ಡಿಪಾಳ್ಯ ನರಸಿಂಹಮೂರ್ತಿ ಹೊಸಪೇಟೆಗೆ ಪ್ರಯಾಣ ಬೆಳೆಸಿದೆವು. ಇಂದಿನ ಪ್ರಮುಖ ಮಾಧ್ಯಮ ಸಂಸ್ಥೆಗಳು ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿರುವಾಗ ಅಗತ್ಯವಾದ ಪರ್ಯಾಯ ಮಾಧ್ಯಮವನ್ನು ಕಟ್ಟುವುದು ಹೇಗೆ ಎಂದು ನಾವು ಯೋಚಿಸಿರುತ್ತಿರುವಾಗಲೇ ಹೊಸಪೇಟೆಯಲ್ಲಿನ ಕಾರ್ಯಕ್ರಮದಲ್ಲಿ ದೊರೆತ ಯಶಸ್ಸು ಮತ್ತು ಸಮಾನ ಮನಸ್ಕರಿಂದ ಸಿಕ್ಕ ಪ್ರೋತ್ಸಾಹ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಅಂದು ದಿನವಿಡೀ ಹೊಸಪೇಟೆಯ ವಿವಿಧ ಗಣ್ಯರನ್ನು ಭೇಟಿಯಾಗಿ ಮಾತಾಡಿಸಿ ಬೆಂಬಲ ಕೋರಿ ಸಲಹೆಗಳನ್ನು ಪಡೆದವು.

ಮರುದಿನ ರವಿಯ ಉದಯದೊಂದಿಗೆ ಅರಂಭವಾಯಿತು ನಮ್ಮ ಪಯಣ ರಾಯಚೂರಿಗೆ. ಡ್ರೈವಿಂಗ್ ಸೀಟಲ್ಲಿ ನಾನು ಪಕ್ಕಕ್ಕೆ ಮುತ್ತುರಾಜು ಹಿಂದಿನ ಸೀಟಲ್ಲಿ ನರಸಿಂಹಮೂರ್ತಿ. ಕಾರ್ಯಕ್ರಮದ ರೂಪುರೇಷೆ ಚರ್ಚಿಸುತ್ತಾ, ಸಮಾನ ಮನಸ್ಕರಿಗೆ ಕರೆಮಾಡಿ ಕರೆಯುವುದು, ಮಧ್ಯ ಮಧ್ಯ ಹಾಸ್ಯ ಚರ್ಚೆಗಳು ನಡೆಯುತ್ತಿದ್ದವು. ಆದರೆ ರಾಯಚೂರಿನಲ್ಲಿ ರೂಪಿತವಾಗುತ್ತಿರುವ ಸಂಚಿನ ಸಣ್ಣ ಸುಳಿವು ಸಹ ನಮಗಿರಲಿಲ್ಲ.

ಎನ್‍ಜಿಓ ಹಾಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಅದ್ಭುತ ಭಾಷಣ ಎಲ್ಲರನ್ನು ಯೋಚನೆಗೆ ತಳ್ಳಿತ್ತು. ಭಾಷಣ ನಂತರ ಸಭಿಕರೊಂದಿಗೆ ಉಭಯ ಕುಶಲೋಪರಿ ನಡೆದಿತ್ತು. ಅಲ್ಲಿಯವರೆಗೆ ಇಂಟಲಿಜೆನ್ಸ್‍ನವರ ಸಹಜ ಚಲನವಲನ ಪ್ರಾರಂಭವಾಗಿತ್ತು. ಅದು ನಮಗೆ ಹೊಸಪೇಟೆಯಲ್ಲಿ ಇದ್ದಹಾಗೆ ಅಂದುಕೊಂಡಿದ್ದೆವು ಆದರೆ ಕೆಲವೇ ನಿಮಿಷಗಳಲ್ಲಿ ಬೂಟಿನ ಸದ್ದು ಎಲ್ಲೆಡೆ ಕೇಳಲಾರಂಭಿಸಿತು.
ಮೊದಲಿಗೆ ಡಿವೈಎಸ್ಪಿಯವರು 5 ನಿಮಿಷ ನರಸಿಂಹಮೂರ್ತಿಯವರನ್ನು ಕರೆಯುತ್ತಿದ್ದಾರೆ ಅನ್ನುವ ಮೂಲಕ ಆರಂಭವಾಯಿತು. ಪೊಲೀಸರ ನಡವಳಿಕೆ ನೋಡಿದ ಕೂಡಲೆ ನನ್ನೊಳಗಿನ ಪತ್ರಕರ್ತ ಜಾಗೃತನಾದ. ಆರಂಭದಲ್ಲಿ ಸೆಮಿನಾರ್ ಕುರಿತು ಕೇವಲ ಮಾತುಕತೆಗಾಗಿ ಎಂದಿದ್ದ ಖಾಕಿ ಪಡೆ ನಮ್ಮ ಸುತ್ತ ಗಸ್ತು ತಿರುಗಲು ಪ್ರಾರಂಭಿಸಿದ ಕೂಡಲೆ ಮೊದಲ ಸುಳಿವು ದೊರೆತಿತ್ತು. ತದನಂತರ ಸ್ಥಳೀಯ ಪತ್ರಕರ್ತರು ಮತ್ತು ಮೀಡಿಯಾಗಳು ಇದನ್ನು ಇನ್ನಷ್ಟು ಖಚಿತಪಡಿಸಿದವು.

‘ನೇರವಾಗಿ ವಿಚಾರಕ್ಕೆ ಬರುತ್ತೇವೆ. ಒಬ್ಬರ ಮೇಲೆ ಹಳೇ ಕೇಸಿನಲ್ಲಿ ವಾರೆಂಟ್ ಇದೆ. ಅವರೇ ನೀವು ಎಂಬುದಾಗಿ ನಮಗೆ ಮಾಹಿತಿ ಬಂದಿದೆ. ಹಾಗಾಗಿ ನಾವು ವಿಚಾರಣೆ ಮಾಡಬೇಕು’ ಎಂದರು ಡಿವೈಎಸ್ಪಿ. ಆಗ ನರಸಿಂಹ ಮೂರ್ತಿಯವರು ಬಹಳ ಧೈರ್ಯವಾಗಿ ನಗುತ್ತಾ, ‘ನನ್ನ ಹೆಸರು ದೊಡ್ಡಿಪಾಳ್ಯ ನರಸಿಂಹಮೂರ್ತಿ. ನಮ್ಮ ಊರು ಬೆಂಗಳೂರು ಹೊರವಲಯದ ದೊಡ್ಡಿಪಾಳ್ಯ. ಅಲ್ಲಿಂದ 90ರ ದಶಕದಲ್ಲಿ ಬೆಂಗಳೂರಿಗೆ ಬಂದು ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅದೇ ಸಮಯದಲ್ಲಿ ದೊರೆಸ್ವಾಮಿಯವರ ಜೊತೆಸೇರಿ ಬಿಎಂಐಸಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದೇನೆ. ಕರ್ನಾಟಕ ವಿಮೋಚನಾ ರಂಗದ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಆದರೆ ರಾಯಚೂರಿನಲ್ಲಿ ನನ್ನ ಮೇಲೆ ಯಾವುದೇ ಕೇಸ್‍ಗಳಿಲ್ಲ. ಬೆಂಗಳೂರಿನಲ್ಲಿ ಮಾತ್ರ ರಸ್ತೆ ತಡೆಗೆ ಸಂಬಂಧಿಸಿದ ಒಂದು ಕೇಸ್ ಇತ್ತು, ಅದು ಕೂಡ ಮುಗಿದಿದೆ. ಹಾಗಾಗಿ ನೀವು ಬೇರೆ ಯಾರದೋ ವ್ಯಕ್ತಿ ಎಂದು ತಪ್ಪು ತಿಳಿದುಕೊಂಡಿದ್ದೀರಿ’ ಎಂದು ಸ್ಪಷ್ಟವಾಗಿ ಹೇಳಿದರು.

ನಂತರ ಎಸ್‍ಐ ಒಬ್ಬರು ಪದೇ ಪದೇ ಅದೇ ಪ್ರಶ್ನೆಗಳನ್ನು ಕೇಳಿದರು. ಆಗ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರು ನೋಡಿ, ನಾನು ಊರಿನಲ್ಲಿದ್ದೆ. ನನ್ನ ಅಣ್ಣನೊಡನೆ ಸೇರಿ ರೇಷ್ಮೆ ಮಿಲ್ ಒಪನ್ ಮಾಡಿದೆ. ನಂತರ ಜಮೀನು ಮಾರಿ ಬೆಂಗಳೂರಿಗೆ ಬಂದೆ. ಆನಂತರ ಬಟ್ಟೆ ಅಂಗಡಿ ಮತ್ತು ಚಪ್ಪಲಿ ಅಂಗಡಿ ಹಾಕಿದೆ. ಆಗ ಎಲ್ಲಾ ಚಳವಳಿಗಳಲ್ಲಿ ಭಾಗವಹಿಸಿದ್ದೇನೆ. ಇಷ್ಟೆಲ್ಲವಕ್ಕೂ ಸಮರ್ಪಕ ದಾಖಲೆಗಳಿವೆ. ನಾವು ಸಿಂಧನೂರಿನ ಸಭೆಗೆ ಹೋಗಬೇಕು. ನಿಮ್ಮ ವಿಚಾರಣೆ ಎಷ್ಟು ಹೊತ್ತು ನಡೆಯಬಹುದು ತಿಳಿಸಿ ಎಂದರು.

ಪೊಲೀಸ್ ಮೂಲದಿಂದ ಮೊದಲು ಬಂದಿದ್ದು ಯಾಪಲದಿನ್ನಿ ಹೆಸರು. ಆಗಲೇ ನನಗೆ ಸ್ಪಷ್ಟವಾಯಿತು ಇವರನ್ನು ಅಲ್ಲಿನ ಪೊಲೀಸ್ ಠಾಣೆ ಸುಟ್ಟುಹಾಕಿದ ಕೇಸಿನಲ್ಲಿ ಫಿಟ್ ಮಾಡಲು ಹೊರಟಿದ್ದಾರೆ ಎಂದು. ಇನ್ನು ಮೂರ್ತಿ ಜೊತೆ ಪೊಲೀಸ್ ಠಾಣೆಯಲ್ಲಿ ಕೂರುವ ಬದಲು ಹೊರಬಂದು ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಮುಂದಿನ ನಡೆ ನಿರ್ಧರಿಸಬೇಕಿತ್ತು. 2 ಗಂಟೆಗೆ ಆರಂಭವಾದ ಖಾಕಿ ಆಟ ಸೂರ್ಯ ತನ್ನ ಆಟ ಮುಗಿಸಿ ಮೋಡದಲ್ಲಿ ಮರೆಯಾಗುವ ಹೊತ್ತಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ವೇದಮೂರ್ತಿ ಮತ್ತು ತಂಡದ ಉದ್ದೇಶ ಸ್ಪಷ್ಟವಾಗಿತ್ತು.

ಎಸ್ಪಿ ಸಾಹೇಬರನ್ನು ಕೇಳಿದಾಗ ನಮಗೆ ದೊರೆತ ಮಾಹಿತಿ ಇಷ್ಟು. 1993-94ರಲ್ಲಿ ರಾಯಚೂರಿನ ಸುತ್ತಮುತ್ತಲಿನಲ್ಲಿ ನಡೆದ ಹೋರಾಟ ಚಟುವಟಿಕೆಗಳಲ್ಲಿ ವಿನೋದ್ ಅಲಿಯಾಸ್ ಬಸವರಾಜ್ ಎಂಬುವವರು ಪಾಲ್ಗೊಂಡಿದ್ದಾರೆ. ಸರ್ಕಾರ ಬಡವರ ಪರ ಕೆಲಸ ಮಾಡುತ್ತಿಲ್ಲವೆಂದು 8-9 ಜನ ಸೇರಿ ಸಭೆ ನಡೆಸಿದ್ದಾರೆ. ಬಿಡಿಓ ಸಮುದಾಯ ಭವನ ಕಟ್ಟುವಾಗ ಪಕ್ಕದಲ್ಲಿದ್ದ ಗುಡಿಸಲಿಗೆ ತೊಂದರೆಯಾಗುತ್ತದೆ ಎಂದು ಹೋರಾಟ ಮಾಡಿದ್ದಾರೆ. ಹಾಗಾಗಿ ನ್ಯಾಯಾಲಯದಿಂದ ವಾರೆಂಟ್ ಇದೆ. ಅದಕ್ಕಾಗಿ ವಿಚಾರಣೆ ನಡೆಸುತ್ತಿದ್ದೇವೆ. ಇವರಲ್ಲವಾದರೆ ಕ್ಷಮೆ ಕೇಳಿ ಕಳಿಸಿಕೊಡುತ್ತೇವೆ. ಇವರೇ ಆದರೆ ಕಾನೂನು ಕ್ರಮ ಎದುರಿಸಬೇಕು ಎಂದರು.

ಎಸ್ಪಿಯವರು ಹೇಳುತ್ತಿರುವ ಈ ಬಹುತೇಕ ಕೇಸುಗಳು ವಿಚಾರಣೆ ನಡೆದು ಬಿದ್ದುಹೋಗಿವೆ, ಇನ್ನು 25 ವರ್ಷ ಹಳೆಯ ಕೇಸಿನಲ್ಲಿ ನರಸಿಂಹಮೂರ್ತಿ ತಲೆಮರೆಸಿಕೊಂಡಿದ್ದಾರೆ ಎನ್ನುವುದು ಹಾಸ್ಯಾಸ್ಪದ. ಹೀಗಿರುವಾಗ ಮೂರ್ತಿಯನ್ನು ಬಿಡದೆ ಡಾ.ವೇದಮೂರ್ತಿ & ಟೀಮ್‍ಗೆ ಬೇರೆ ದಾರಿ ಇರಲಿಲ್ಲ ಆದರೆ ಅವರು ಹೇಳಿದ್ದು ಬೇರೆ ಮಾಡಿದ್ದು ಬೇರೆ.

ಇಲ್ಲಿ ಒಂದಂತೂ ಸ್ಪಷ್ಟವಾಗುತ್ತೆ. ಕಾಣದ ಕೈಗಳು ತುಂಬಾ ಕೆಲಸ ಮಾಡಿವೆ. ಅಂತಿಮವಾಗಿ ದೊಡ್ಡಿಪಾಳ್ಯ ನರಸಿಂಹಮೂರ್ತಿಯನ್ನು ಕೋರ್ಟ್‍ಗೆ ಪ್ರೊಡ್ಯೂಸ್ ಮಾಡುವ ಮೊದಲು ಪತ್ರಿಕಾಗೋಷ್ಠಿ ನಡೆಸಿದ ಎಸ್.ಪಿ ಡಾ.ವೇದಮೂರ್ತಿಯವರ ಹತ್ತಿರ ಯಾವ ಪ್ರಶ್ನೆಗೂ ಉತ್ತರವಿರಲಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಹೋರಾಡುತ್ತಿದ್ದ ಮೂರ್ತಿ 25 ವರ್ಷಗಳಿಂದ ತಲೆ ಮರೆಸಿಕೊಂಡಿದ್ದರೇ ಎನ್ನುವ ಪ್ರಶ್ನೆಯೂ ಸೇರಿ ಬೇರೆ ಯಾವ ಪ್ರಶ್ನೆಗೂ ಉತ್ತರವಿಲ್ಲ ಆದರೆ ಬಂಧಿಸಬೇಕೆನ್ನುವ ಒತ್ತಡ ಅವರ ಮೇಲಿದ್ದದ್ದು ಎದ್ದು ಕಾಣುತ್ತಿತ್ತು.

ಮೂರ್ತಿಯವರನ್ನು ಕೋರ್ಟಿನಲ್ಲಿ ಹಾಜರುಪಡಿಸಿ ಜೈಲಿಗೆ ಕಳಿಸಿದರು. ತುಂಬಾ ಹಳೆಯ ಕೇಸುಗಳಾದ್ದರಿಂದ ಕೇಸ್‍ಫೈಲ್ ತೆಗೆಸಬೇಕು; ಸದರಿ ಕೇಸುಗಳಲ್ಲಿ ವಿಚಾರಣೆ ನಡೆದು ಉಳಿದ ಬಹುತೇಕರ ಮೇಲಿನ ಆರೋಪಗಳು ಬಿದ್ದು ಹೋಗಿರುವುದರಿಂದ, ಚಾರ್ಜ್‍ಶೀಟ್ ಪ್ರತ್ಯೇಕ (Split) ಹಾಕಬೇಕು. ಎಲ್ಲವೂ ಸಿಕ್ಕ ನಂತರ ಕೆಳಗಿನ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರೂ, ವ್ಯಾಪ್ತಿಯ ಸಮಸ್ಯೆಯಿಂದ ಅವರು ಜಾಮೀನು ಕೊಡುವಂತಿಲ್ಲ. ಸೆಷನ್ಸ್ (ಜಿಲ್ಲಾ) ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕು. ಹೀಗೆ ಕಾನೂನು ಪ್ರಕ್ರಿಯೆ ಹಲವು ದಿನ ತೆಗೆದುಕೊಳ್ಳುತ್ತದೆ ಮತ್ತು ಮೂರ್ತಿಯವರು ಕೇಸುಗಳಿಂದ ಸಂಪೂರ್ಣ ಮುಕ್ತವಾಗಿ ಹೊರಬರುತ್ತಾರೆ. ಆದರೆ, ಈ ಮಧ್ಯೆ ‘ಕಾಣದ ಕೈಗಳ’ ಆಟ ಹೆಚ್ಚಾಗುವ ಎಲ್ಲಾ ಸಾಧ್ಯತೆಯಿದೆ. ಅದು ಕೇವಲ ಮೂರ್ತಿಯವರನ್ನು ಗುರಿ ಮಾಡಿಕೊಂಡಿರುವುದಲ್ಲ. ಪ್ರಜಾತಂತ್ರದ ಪರವಾಗಿರುವ ಮಾಧ್ಯಮಗಳನ್ನು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿ ಮಾಡಿಕೊಂಡಿರುತ್ತದೆ ಎಂಬುದು ಸ್ಪಷ್ಟವಾಗಿದೆ.

ಅದೇನೇ ಇದ್ದರೂ ಕರ್ನಾಟಕದ ಪ್ರಜ್ಞಾವಂತರು ಒಂದಾಗಿ ಮೂರ್ತಿಯವರ ಪರವಾಗಿ ನಿಂತಿರುವುದು ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಂಟಿಯಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here