Homeಮುಖಪುಟಕಾರ್ಗಿಲ್‌: 370 ವಿಧಿ ರದ್ದತಿ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ 'ಎನ್‌ಸಿ-ಕಾಂಗ್ರೆಸ್' ಮೈತ್ರಿಗೆ ಅಭೂತಪೂರ್ವ ಗೆಲುವು

ಕಾರ್ಗಿಲ್‌: 370 ವಿಧಿ ರದ್ದತಿ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ‘ಎನ್‌ಸಿ-ಕಾಂಗ್ರೆಸ್’ ಮೈತ್ರಿಗೆ ಅಭೂತಪೂರ್ವ ಗೆಲುವು

- Advertisement -
- Advertisement -

ಆರ್ಟಿಕಲ್ 370 ರದ್ಧತಿ ನಂತರ ಕಾರ್ಗಿಲ್‌ನಲ್ಲಿ ನಡೆದ ಮೊದಲ ಚುನಾವಣೆಯಲ್ಲಿ, INDIA ಮೈತ್ರಿ ಒಕ್ಕೂಟದ ಘಟಕಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಕಾರ್ಗಿಲ್‌ ಹಿಲ್ ಕೌನ್ಸಿಲ್ ಚುನಾವಣೆಯಲ್ಲಿ 26ರಲ್ಲಿ 22 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ಗೆಲುವು ದಾಖಲಿಸಿದೆ.

2019ರಿಂದ ಲೆಫ್ಟಿನೆಂಟ್ ಗವರ್ನರ್ ಮೂಲಕ ನವದೆಹಲಿಯಿಂದ ನೇರವಾಗಿ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಜಮ್ಮು-ಕಾಶ್ಮೀರದ ಹಳೆಯ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಹೊರಹೊಮ್ಮಿದ್ದು, ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ ಕಾರ್ಗಿಲ್ ರಾಜಕೀಯವಾಗಿ ಬೇರ್ಪಡಿಸಲಾಗದು ಎಂಬುದನ್ನು ತೋರಿಸಿದೆ.

ಚುನಾವಣಾ ಫಲಿತಾಂಶವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಗಸ್ಟ್ 5, 2019ರ ನಿರ್ಧಾರ ಮತ್ತು ಆ ಬಳಿಕದ ನೀತಿಗಳನ್ನು ಜನರು ತಿರಸ್ಕರಿಸಿರುವುದನ್ನು ಸ್ಪಷ್ಟಪಡಿಸಿದೆ ಎಂದು INDIA ಮೈತ್ರಿ ಒಕ್ಕೂಟದ ಪಕ್ಷಗಳು ಅಭಿಪ್ರಾಯ ಪಟ್ಟಿದೆ.

ಲಡಾಖ್‌ನಲ್ಲಿ ನಡೆದ ಚನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 12 ಸ್ಥಾನವನ್ನು ಗೆದ್ದುಕೊಂಡರೆ ಅದರ ಮಿತ್ರಪಕ್ಷ ಕಾಂಗ್ರೆಸ್ 10 ಸ್ಥಾನಗಳಲ್ಲಿ ವಿಜಯಶಾಲಿಯಾಗಿದೆ. ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಎರಡು ಸ್ಥಾನಗಳಿಗೆ ತೃಪ್ತಿಪಟ್ಟಿಕೊಂಡಿದ್ದಾರೆ.

INDIA ಒಕ್ಕೂಟದ ಭಾಗವಾಗಿರುವ ಎನ್‌ಸಿ ಮತ್ತು ಕಾಂಗ್ರೆಸ್ ಎರಡೂ ಬಿಜೆಪಿಯನ್ನು ದೂರವಿಡಲು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಹಿಲ್ ಕೌನ್ಸಿಲ್‌ನ ಕಾರ್ಯಕಾರಿ ಮಂಡಳಿಯಲ್ಲಿ ಎರಡೂ ಪಕ್ಷಗಳು ಸಮಾನ ಪಾಲು ಪಡೆಯಲಿದೆ.

ಎರಡೂ ಪಕ್ಷಗಳು ಚುನಾವಣೆಯ ಫಲಿತಾಂಶವನ್ನು ಬಿಜೆಪಿ ಮತ್ತು ಅದರ ಆಗಸ್ಟ್ 5, 2019ರ ನಿರ್ಧಾರಗಳ ವಿರುದ್ಧದ ಜನರ ತೀರ್ಪು ಎಂದು ಬಣ್ಣಿಸಿದೆ.

ಎಕ್ಸ್‌ನಲ್ಲಿ ಎನ್‌ಸಿ ಉಪಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಕುರಿತು ಪೋಸ್ಟ್‌ ಮಾಡಿದ್ದು, ಈ ಫಲಿತಾಂಶವು ಬಿಜೆಪಿ ಮತ್ತು ಅದರ ನೀತಿಗಳ ವಿರುದ್ಧ ಪ್ರತಿಧ್ವನಿಸಿದ ತೀರ್ಪು ಮತ್ತು ಆ.5, 2019ರಂದು ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಏನು ಮಾಡಿದೆ ಎಂಬುದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿಯನ್ನು ಕಾರ್ಗಿಲ್ ಜನರು ತಿರಸ್ಕರಿಸಿದ್ದಾರೆ ಎಂದು ಲಡಾಖ್‌ನ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಜಿ ಅಸ್ಗರ್ ಅಲಿ ಕರ್ಬಾಲಿ ಹೇಳಿದ್ದಾರೆ. ಬಿಜೆಪಿ ಮತ್ತು ಅದರ ನೀತಿಗಳು ಇಲ್ಲಿನ ಜನರಿಗೆ ಸ್ವೀಕಾರಾರ್ಹವಲ್ಲ ಎಂಬ ಸಂದೇಶವು ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಆರ್ಟಿಕಲ್ 370ನ್ನು ರದ್ದುಪಡಿಸಿದ ನಂತರ ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಿದ ನಂತರ ಕಾರ್ಗಿಲ್‌ನಲ್ಲಿ ನಡೆದ ಮೊದಲ ಚುನಾವಣೆ ಇದಾಗಿದೆ.

ಬಿಜೆಪಿಯು 2018ರಲ್ಲಿ ಪಡೆದಿದ್ದ ಒಂದು ಸ್ಥಾನದಿಂದ ಈ ಬಾರಿ ಎರಡು ಸ್ಥಾನಗಳಿಗೆ ತನ್ನ ಸಂಖ್ಯೆಯನ್ನು ಸುಧಾರಿಸಿಕೊಂಡಿದ್ದರೂ, ಬೌದ್ಧರು ಬಹುಸಂಖ್ಯಾತವಾಗಿರುವ ಲೇಹ್ ಜಿಲ್ಲೆಯಲ್ಲಿ ಬಿಜೆಪಿಯ ಜನಪ್ರಿಯತೆ ಕುಗ್ಗಿದ ಕಾರಣ 2024ರ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ ಎನ್ನಲಾಗಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆಯ ಗೆಲುವು ಎಂದು ಹೇಳಿದ್ದು ಫಲಿತಾಂಶಗಳು ಲಡಾಖ್ ಮತ್ತು ಕಾರ್ಗಿಲ್‌ನಲ್ಲಿ ಹೊಸ ಪ್ರಜಾಸತ್ತಾತ್ಮಕ ಉದಯಕ್ಕೆ ನಾಂದಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಬಿಜೆಪಿ ಸಂವಿಧಾನದ ಬದಲಾವಣೆಗೆ ಪ್ರಯತ್ನಿಸುತ್ತಿದೆ: ಅಖಿಲೇಶ್ ಯಾದವ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಎಇಒ ಕ್ರೈಸ್ತ ಧರ್ಮದವರಲ್ಲ

0
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂತನ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಒ) ಆಗಿ ಯೇಸುರಾಜ್ ನೇಮಕಗೊಂಡಿದ್ದಾರೆ. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ...