Homeಮುಖಪುಟಗುರು ಕಾಶೀನಾಥ್ ನಾಯ್ಕ್‌ ಮನೆಗೆ ನೀರಜ್ ಚೋಪ್ರಾ ಭೇಟಿ: ಕೋಚ್ ಅಲ್ಲ ಎಂದಿದ್ದವರ ಬಾಯಿ ಬಂದ್!

ಗುರು ಕಾಶೀನಾಥ್ ನಾಯ್ಕ್‌ ಮನೆಗೆ ನೀರಜ್ ಚೋಪ್ರಾ ಭೇಟಿ: ಕೋಚ್ ಅಲ್ಲ ಎಂದಿದ್ದವರ ಬಾಯಿ ಬಂದ್!

ಕೆಲವರು ಸತ್ಯಾಸತ್ಯತೆ ಪರಿಶೀಲಿಸದೆ, ಅಥ್ಲೆಟಿಕ್ಸ್ ಅಧ್ಯಕ್ಷರ ಹೇಳಿಕೆ ಇಟ್ಟುಕೊಂಡು ಕಾಶಿನಾಥ್ ನಾಯ್ಕ್‌ರನ್ನು ಟೀಕಿಸಿದ್ದರು. ಅದಕ್ಕೆ ಸ್ವತಃ ನೀರಜ್ ಚೋಪ್ರಾ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ.

- Advertisement -
- Advertisement -

ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದ ನೀರಜ್ ಚೋಪ್ರಾಗೆ ಕಾಶೀನಾಥ್ ನಾಯ್ಕ್‌ ಎಂಬುವವರನ್ನು ಕೋಚ್ ಆಗಿ ನೇಮಿಸಿಲ್ಲ. ಕಾಶೀನಾಥ್ ನಾಯ್ಕ್‌ ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂಬ ಅಥ್ಲೆಟಿಕ್ಸ್ ಫೆಡರೇಷನ್ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಮೂಲಕ ಎರಡು ವರ್ಷಗಳ ಕಾಲ ನೀರಜ್‌ ಚೋಪ್ರಾಗೆ ಕೋಚ್ ಆಗಿ ತರಬೇತಿ ನೀಡಿದ್ದ ಕನ್ನಡಿಗ ಕಾಶೀನಾಥ್‌ರನ್ನು ಅವಮಾನಿಸಲಾಗಿತ್ತು. ಈಗ ಕಾಶಿನಾಥ್ ಮನೆಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ಭೇಟಿ ನೀಡುವ ಮೂಲಕ ವಿವಾದಗಳಿಗೆ ತೆರೆ ಎಳೆದಿದ್ದಾರೆ ಮತ್ತು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಅತ್ತ ಟೋಕಿಯೋದಲ್ಲಿ ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನ ಗೆಲ್ಲುತ್ತಿದ್ದಂತೆ ಇತ್ತ ಅವರಿಗೆ ಕೋಚ್ ಆಗಿ ಕೆಲಸ ಮಾಡಿದ್ದ ಎಲ್ಲರನ್ನು ಶ್ಲಾಘಿಸಲಾಗಿತ್ತು. 2015 ರಿಂದ 2017ರವರೆಗೆ ನೀರಜ್‌ಗೆ ಕೋಚ್ ಆಗಿದ್ದ ಕನ್ನಡಿಗ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬೆಂಗಳೆ ಗ್ರಾಮದ ಕಾಶೀನಾಥ್ ನಾಯ್ಕ್‌ರವರನ್ನು ಸ್ಮರಿಸಲಾಗಿತ್ತು. ಅವರ ಸಾಧನೆ ಗುರುತಿಸಿ ಅವರಿಗೆ ರಾಜ್ಯದ ಕ್ರೀಡಾ ಸಚಿವರು 10 ಲಕ್ಷ ರೂ ಗಳ ಬಹುಮಾನ ಘೋಷಿಸಿದ್ದರು.

ಆದರೆ ಅವರ ವಿರುದ್ದ ಅಪಪ್ರಚಾರ ಸಹ ಅದೇ ಸಮಯದಲ್ಲಿ ಶುರುವಾಗಿತ್ತು. ಅವರಿಗೆ 10 ಲಕ್ಷ ಬಹುಮಾನ ಘೋಷಿಸಿದ್ದಕ್ಕೆ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲಾ ಆಕ್ಷೇಪ ವ್ಯಕ್ತಪಡಿಸಿದ್ದರು. “ನೀರಜ್ ಚೋಪ್ರಾಗೆ ಕಾಶೀನಾಥ್ ನಾಯ್ಕ್‌ ಎಂಬುವವರನ್ನು ಕೋಚ್ ಆಗಿ ನೇಮಿಸಿಲ್ಲ. ಕಾಶೀನಾಥ್ ಯಾರು ಎಂಬುದೇ ನಮಗೆ ಗೊತ್ತಿಲ್ಲ. ಅವರಿಗೆ ಕರ್ನಾಟಕ ಸರ್ಕಾರ 10 ರೂ ಲಕ್ಷ ರೂ ಬಹುಮಾನ ಘೋಷಿಸಿರುವುದು ತಿಳಿದುಬಂದಿದೆ. ಅಧಿಕೃತ ಪತ್ರ ತಲುಪಿದಾಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತೇವೆ” ಎಂದು  ಸುಮರಿವಾಲಾ ಹೇಳಿಕೆ ನೀಡಿದ್ದರು.

ಈ ಹೇಳಿಕೆ ಹೊರಬೀಳುತ್ತಿದ್ದಂತೆ ಕನ್ನಡದ ಬಹುತೇಕ ಮಾಧ್ಯಮಗಳು ಕಾಶೀನಾಥ್ ನಾಯ್ಕ್‌ ವಿರುದ್ಧ ಕಿಡಿಕಾರಿದ್ದವು. ಪತ್ರಕರ್ತರು ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಕಾಶಿನಾಥ್‌ರನ್ನು ಟೀಕಿಸಿದ್ದರು. ಆ ಸಂದರ್ಭದಲ್ಲಿ ನಾನುಗೌರಿ.ಕಾಂ ಕಾಶೀನಾಥ್ ನಾಯ್ಕ್‌ ರವರನ್ನು ಸಂಪರ್ಕಿಸಿ ಅವರ ಕ್ರೀಡಾಸಾಧನೆ, ಕೋಚ್ ಆಗಿ ಕೆಲಸ ಮಾಡಿದ್ದರ ಕುರಿತು ವಿವರವಾದ ವರದಿ ಪ್ರಕಟಿಸಿತ್ತು. ಅದನ್ನು ಇಲ್ಲಿ ಓದಬಹುದು.

2000 ದಲ್ಲಿ ದೇಶ ಸೇವೆಗೆ ಸೈನಿಕರಾಗಿ ಸೇರಿದ್ದ ಕಾಶಿನಾಥ್‌ ನಾಯ್ಕರವರು 2010ರಲ್ಲಿ ನವದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಪಡೆದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಸಂದಿವೆ. 2015 ರಿಂದ 2017ರವರೆಗೆ ನೀರಜ್ ಚೋಪ್ರಾಗೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದಾರೆ.

“ನಾನು ಯಾರು ಅಂತ ಗೊತ್ತಿಲ್ಲವೆಂದು ಅದಿಲ್ಲೆ ಸುಮರಿವಾಲಾ ಹೇಳಿದ್ದಾರೆ. ಹಾಗಾದರೆ ನಾನು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದು ಸುಳ್ಳೇ? 2015 ರಿಂದ 2017ರ ವರೆಗೆ ಪಟಿಯಾಲದಲ್ಲಿ ನಾನು ಚೋಪ್ರಾಗೆ ಸಹಾಯಕ ಕೋಚ್ ಆಗಿ ಕೆಲಸ ಮಾಡಿದ್ದೇನೆ. ಈ ಮಧ್ಯೆ 2016ರಲ್ಲಿ ವಿದೇಶಿ ಕೋಚ್ ಗ್ಯಾರಿ ಕ್ಯಾಲ್ವರ್ಟ್ ನೇಮಕವಾದರು. ಆಗ ನಾವೆಲ್ಲರೂ ಪೋಲಾಂಡ್‌ಗೆ ತೆರಳಿ 20 ವರ್ಷದೊಳಗಿನ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾಗ ನೀರಜ್ ಚಿನ್ನ ಗೆದ್ದಿದ್ದರು” ಎಂದು ಕಾಶಿನಾಥ್ ಹೇಳಿದ್ದರು.

ಇಂತಹ ಅಪ್ರತಿಮ ಸಾಧನೆಗೈದ ಕಾಶಿನಾಥ್‌ರವರ ಪುಣೆಯಲ್ಲಿನ ಮನೆಗೆ ನೀರಜ್ ಚೋಪ್ರಾ ಭೇಟಿ ನೀಡಿ ಗುರುಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕಾಶಿನಾಥ್‌ರವರ ಮಕ್ಕಳನ್ನು ಎತ್ತಿಕೊಂಡು ಮುದ್ದಿಸಿದ್ದಾರೆ. ಕಾಶಿನಾಥ್ ಕುಟುಂಬದ ಜೊತೆ ಫೋಟೊ ತೆಗೆದುಕೊಂಡಿದ್ದಾರೆ. ಯಾವುದೇ ಅಹಂಭಾವವಿಲ್ಲದೇ ಗುರುಗಳ ಜೊತೆ ಪ್ರೀತಿಯಿಂದ ಬೆರೆತಿದ್ದಾರೆ. ಈ ಎಲ್ಲಾ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೇ ಕಾಶಿನಾಥ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದವರ ಬಾಯಿ ಮುಚ್ಚಿಸಿವೆ.

ಆಗಸ್ಟ್ 24ರ ಮಧ್ಯಾಹ್ನ ನೀರಜ್ ಚೋಪ್ರಾ ಕಾಶೀನಾಥ್ ನಾಯ್ಕ್‌ರವರ ಮನೆಗೆ ಭೇಟಿ ನೀಡಿದಾಗ ಕಾಶಿನಾಥ್‌ರವರ ಪತ್ನಿ ಚೈತ್ರಾ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಸ್ವಾಗತಿಸಿದ್ದಾರೆ. ನೀರಜ್ ಅಂತೂ ಮನೆಯೊಳಗೆ ಬಂದ ಕೂಡಲೇ ಮನೆಯೊಳಗಿದ್ದ ಲ್ಯಾಬ್ರೊಡರ್ ನಾಯಿಯ ತಲೆ ಸವರಿ ಮುದ್ದು ಮಾಡಿದ್ದಾರೆ. ನಂತರ ಮಕ್ಕಳನ್ನು ಎತ್ತುಕೊಂಡಿದ್ದಾರೆ.

ಒಟ್ಟಿನಲ್ಲಿ ಕೆಲವರು ಸತ್ಯಾಸತ್ಯತೆ ಪರಿಶೀಲಿಸದೆ, ಅಥ್ಲೆಟಿಕ್ಸ್ ಅಧ್ಯಕ್ಷರ ಹೇಳಿಕೆ ಇಟ್ಟುಕೊಂಡು ಕಾಶಿನಾಥ್ ನಾಯ್ಕ್‌ರನ್ನು ಟೀಕಿಸಿದ್ದರು. ಅದಕ್ಕೆ ಸ್ವತಃ ನೀರಜ್ ಚೋಪ್ರಾ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಆ ಮೂಲಕ ಗುರುಗಳ ಗೌರವ ಹೆಚ್ಚಿಸಿದ್ದಾರೆ.


ಇದನ್ನೂ ಓದಿ: ನಾನು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದು ಸುಳ್ಳೇ? ನೀರಜ್ ಚೋಪ್ರಾ ಮಾಜಿ ಕೋಚ್ ಕನ್ನಡಿಗ ಕಾಶಿನಾಥ್ ನಾಯ್ಕ ಅಸಮಾಧಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...