Homeಮುಖಪುಟನಿತೀಶ್‌ ಕುಮಾರ್‌ಗೆ ವಯಸ್ಸಾಯ್ತು: ಪ್ರಶಾಂತ್ ಕಿಶೋರ್‌ ತಿರುಗೇಟು

ನಿತೀಶ್‌ ಕುಮಾರ್‌ಗೆ ವಯಸ್ಸಾಯ್ತು: ಪ್ರಶಾಂತ್ ಕಿಶೋರ್‌ ತಿರುಗೇಟು

- Advertisement -
- Advertisement -

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರು ಭ್ರಾಂತಿಗೊಳಗಾಗಿದ್ದು ರಾಜಕೀಯವಾಗಿ ಪ್ರತ್ಯೇಕಗೊಳ್ಳುತ್ತಿದ್ದಾರೆ. ಅವರು ನಿಜವಾಗಿ ಅರ್ಥ ಮಾಡಿಕೊಳ್ಳಬೇಕಾದ ಸಂಗತಿಗಳಿಗಿಂತ ಬೇರೆ ವಿಷಯಗಳನ್ನು ಮಾತನಾಡುತ್ತಿದ್ದಾರೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ ತಿರುಗೇಟು ನೀಡಿದ್ದಾರೆ.

“ನಿತೀಶ್‌ ಕುಮಾರ್ ಅವರಿಗೆ ವಯಸ್ಸಾಗಿರುವುದನ್ನು ಅವರ ಹೇಳಿಕೆ ಪ್ರತಿಫಲಿಸುತ್ತಿದೆ” ಎಂದು ಕುಟುಕಿದ್ದಾರೆ.

“ಬಿಹಾರದಲ್ಲಿ ಜನ್ ಸೂರಜ್ ಯಾತ್ರೆಯನ್ನು ಇತ್ತೀಚೆಗೆ ಆರಂಭಿಸಿರುವ ರಾಜಕೀಯ ತಂತ್ರಗಾರ ಕಿಶೋರ್‌ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಹೇಳಿದ ಬಳಿಕ ಈ ಪ್ರತಿಕ್ರಿಯೆ ಹೊರಬಿದ್ದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಬಿಜೆಪಿಯ ಆಣತಿಯಂತೆ ಕೆಲಸ ಮಾಡುತ್ತಿದ್ದೇನೆ, ಕಾಂಗ್ರೆಸ್‌ನೊಂದಿಗೆ ಜೆಡಿಯು ವಿಲೀನಗೊಳ್ಳಲು ನಾನು ತಿಳಿಸಿದ್ದೇನೆ ಎಂದು ನಿತೀಶ್ ಕುಮಾರ್‌ ಆರೋಪಿಸಿದ್ದಾರೆ. ಅದು ಹೇಗೆ ಸಾಧ್ಯ? ನಾನು ಬಿಜೆಪಿಯನ್ನು ಬೆಂಬಲಿಸುತ್ತಿದ್ದರೆ, ಕಾಂಗ್ರೆಸ್ ಅನ್ನು ಬಲಪಡಿಸಲು ಇವರನ್ನೇಕೆ ಕೇಳುತ್ತಿದ್ದೆ? ಎರಡನೆಯ ಪ್ರತಿಪಾದನೆ ಸರಿಯಾಗಿದ್ದರೆ, ಮೊದಲನೆಯದ್ದು ತಪ್ಪಾಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಅವರು (ಕುಮಾರ್) ತಮ್ಮ ವಯೋಸಹಜ ಪರಿಣಾಮ ಹಾಗೂ ಭ್ರಮೆಗೆ ಒಳಗಾಗಿದ್ದಾರೆ. ನಂಬಿಕಸ್ಥರಲ್ಲದ ಜನರಿಂದ ಅವರು ಸುತ್ತುವರೆದಿರುವ ಕಾರಣ ರಾಜಕೀಯವಾಗಿ ಪ್ರತ್ಯೇಕಿಸಲ್ಪಟ್ಟಿದ್ದಾರೆ. ಹೀಗಾಗಿ ಅವರು ಅರ್ಥವಿಲ್ಲದ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ.

ಶನಿವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಮಾತನಾಡಿ, “ಪ್ರಶಾಂತ್ ಕಿಶೋರ್‌ ಇತ್ತೀಚೆಗೆ ನನ್ನನ್ನು ಭೇಟಿಯಾಗಲು ತಾವಾಗಿಯೇ ಬಂದರು. ನಾನು ಅವರನ್ನು ಆಹ್ವಾನಿಸಲಿಲ್ಲ. ಅವರು ತುಂಬಾ ಮಾತನಾಡುತ್ತಾರೆ. ಒಮ್ಮೆ ಅವರು ನನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ಹೇಳಿದ್ದರು” ಎಂದು ತಿಳಿಸಿದ್ದರು.

“ಅವರು ಏನು ಬೇಕಾದರೂ ಮಾತನಾಡಲಿ. ಅವರು ಏನು ಹೇಳಿದರೂ ಅರ್ಥವಿರುವುದಿಲ್ಲ. ನಾಲ್ಕೈದು ವರ್ಷಗಳ ಹಿಂದೆಯೇ ಕಾಂಗ್ರೆಸ್‌ನಲ್ಲಿ ವಿಲೀನ ಆಗುವಂತೆ ಹೇಳಿದ್ದರು. ಈಗ ಕಿಶೋರ್‌ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದರು.

ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿಯವರ ಜನ್ಮದಿನದಂದು ಭಿತಿಹರ್ವಾ ಗಾಂಧಿ ಆಶ್ರಮದಿಂದ ‘ಜನ್ ಸೂರಜ್’ ಪಾದಯಾತ್ರೆಯನ್ನು ಪ್ರಶಾಂತ್‌ ಕಿಶೋರ್ ಆರಂಭಿಸಿದ್ದಾರೆ.

ಅಂದು ಮಾತನಾಡಿದ ಅವರು, “ಒಬ್ಬ ವ್ಯಕ್ತಿ ಅಥವಾ ಕುಟುಂಬ ಅಥವಾ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸದೆ ಇಡೀ ಸಮಾಜಕ್ಕಾಗಿ ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸಲು ನನ್ನ ತಂಡವು ಪ್ರಯತ್ನಿಸುತ್ತಿದೆ” ಎಂದು ಘೋಷಿಸಿದ್ದರು.

ಇದನ್ನೂ ಓದಿರಿ: ಬೆಂಗಳೂರು: ಮಕ್ಕಳ ಕಿಡ್ನಾಪರ್‌‌ ಎಂದು ಶಂಕಿಸಿ ವಲಸೆ ಕಾರ್ಮಿಕನ ಕೊಲೆ; ಪೊಲೀಸರ ಹೇಳಿಕೆ

ಕಿಶೋರ್ ಮತ್ತು ಅವರ ತಂಡವು ಸುಮಾರು 3,500 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ. 38 ಜಿಲ್ಲೆಗಳಲ್ಲಿ ಪಾದಯಾತ್ರೆ ಮಾಡಲಿದೆ. ಇದು ಪೂರ್ಣಗೊಳ್ಳಲು ಸುಮಾರು ಒಂದೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಪಾದಯಾತ್ರೆಯ ನಂತರ ಅವರು ತಮ್ಮ ರಾಜಕೀಯ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ.

ಚುನಾವಣೆಗೆ ಸ್ಪರ್ಧಿಸಲು ಸೂಕ್ತ ವ್ಯಕ್ತಿಗಳನ್ನು ಸಮಾಜ ಗುರುತಿಸುವಂತೆ ಮಾಡುವುದೇ ಪಾದಯಾತ್ರೆಯ ಹಿಂದಿನ ಉದ್ದೇಶ ಎಂದು ಕಿಶೋರ್ ಹೇಳಿದ್ದಾರೆ.

“ನಾನು ಪಂಚಾಯತ್ ಮತ್ತು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆಯನ್ನು ಮುಗಿಸಿದ ತಕ್ಷಣ, ಸಂಭವನೀಯ ಅಭ್ಯರ್ಥಿಗಳ ಬಗ್ಗೆ ನಮಗೆ ಸ್ಪಷ್ಟತೆ ಇರುತ್ತದೆ” ಎಂದಿರುವ ಅವರು, “ಒಬ್ಬ ರಾಜಕಾರಣಿ ಚುನಾಯಿತನಾದ ನಂತರ ಆತನ ಮಗ ಅಧಿಕಾರಕ್ಕೆ ಬರುತ್ತಾನೆ. ಈ ಚಿಂತನೆಯನ್ನು ನಾವು ಬದಲಾಯಿಸಬೇಕಾಗಿದೆ. ಇದು ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮ, ಸಿದ್ಧಾಂತದ ಹೆಸರಲ್ಲಿ ಹೆಚ್ಚಾಗಿ ಮತ ಹಾಕುತ್ತಾರೆ. ಮುಂದಿನ ಬಾರಿ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವವರಿಗೆ ಮತ ​​ಹಾಕಬೇಕು” ಎಂದು ಮನವಿ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...