Homeಕರ್ನಾಟಕಬೆಂಗಳೂರು: ಮಕ್ಕಳ ಕಿಡ್ನಾಪರ್‌‌ ಎಂದು ಶಂಕಿಸಿ ವಲಸೆ ಕಾರ್ಮಿಕನ ಕೊಲೆ; ಪೊಲೀಸರ ಹೇಳಿಕೆ

ಬೆಂಗಳೂರು: ಮಕ್ಕಳ ಕಿಡ್ನಾಪರ್‌‌ ಎಂದು ಶಂಕಿಸಿ ವಲಸೆ ಕಾರ್ಮಿಕನ ಕೊಲೆ; ಪೊಲೀಸರ ಹೇಳಿಕೆ

ಕಸ್ಟಡಿಯಲ್ಲಿ ಸಾವಾಗಿದೆ ಎಂಬುದನ್ನು ಬೆಂಗಳೂರು ಪೊಲೀಸರು ನಿರಾಕರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಯನ್ನು ಉಲ್ಲೇಖಿಸಿದ್ದಾರೆ.

- Advertisement -
- Advertisement -

ಸೆಪ್ಟೆಂಬರ್ 24ರಂದು ಶವವಾಗಿ ಪತ್ತೆಯಾದ ವಲಸೆ ಕಾರ್ಮಿಕ, ಹಿಂದಿನ ರಾತ್ರಿ ನಡೆದಿದ್ದ ಗುಂಪು ದಾಳಿಯಿಂದಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಬೆಂಗಳೂರು ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್ 23ರ ರಾತ್ರಿ ಕೆ.ಆರ್.ಪುರಂನ ರಸ್ತೆಬದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವನ್ನು ಪೊಲೀಸರು ಪತ್ತೆ ಮಾಡಿದ್ದರು. ಮಕ್ಕಳನ್ನು ಅಪರಿಸುವ ವ್ಯಕ್ತಿ ಈತನೆಂದು ಶಂಕಿಸಿದ ಜನರ ಗುಂಪು ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.

ಡಿಸಿಪಿ (ವೈಟ್‌ಫೀಲ್ಡ್) ಎಸ್ ಗಿರೀಶ್ ಈ ಕುರಿತು ಮಾಹಿತಿ ನೀಡಿದ್ದು, “ಅಪರಿಚಿತ ವ್ಯಕ್ತಿಯ ದೇಹದ ಮೇಲೆ ಯಾವುದೇ ದೊಡ್ಡ ಗಾಯಗಳಿಲ್ಲದ ಕಾರಣ ಆರಂಭದಲ್ಲಿ ಸಿಆರ್‌ಪಿಸಿ 174 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ನಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆಹಚ್ಚಿದ್ದರು. ಆರು ಜನರ ಗುಂಪು ವಲಸೆ ಕಾರ್ಮಿಕ ಮೇಲೆ ಹಲ್ಲೆ ನಡೆಸಿರುವುದು ಕಂಡು ಬಂದಿತು. ಹಲ್ಲೆಯಿಂದ ಉಂಟಾದ ಗಾಯಗಳಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ವರದಿ ಬಂದಿದೆ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಶ್ರೀನಿ ಮತ್ತು ಯಾಸೀನ್ ಸೇರಿದಂತೆ ಆರು ಜನರ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಜಾರ್ಖಂಡ್‌ನ ವಲಸೆ ಕಾರ್ಮಿಕ ಸಂಜಯ್ ತುಡು ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಲ್ಲಿ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು” ಎಂದು ವಿವರಿಸಿದ್ದಾರೆ.

ಸಂಜಯ್ ಮದ್ಯದ ಅಮಲಿನಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿದ್ದರು. ಮನೆಯೊಂದಕ್ಕೆ ನುಗ್ಗಿ ಮಗುವನ್ನು ಮನೆಯಿಂದ ಎಳೆದೊಯ್ಯಲು ಯತ್ನಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಮಗುವಿನ ತಂದೆ ಸಂಜಯ್‌ನನ್ನು ಹಿಡಿದು ಹೊಡೆಯಲಾರಂಭಿಸಿದರು. ತಕ್ಷಣ ಆರರಿಂದ ಏಳು ಜನರ ಗುಂಪು ಅವರನ್ನು ಸುತ್ತುವರಿಯಿತು. ಮಕ್ಕಳ ಕಿಡ್ನಾಪರ್‌ ಎಂದು ಶಂಕಿಸಿ ತೀವ್ರವಾಗಿ ಹಲ್ಲೆ ನಡೆಸಿದರು. ಇದನ್ನು ಇತರರು ನೋಡುತ್ತಿದ್ದರು. ನಂತರ ರಾಮಮೂರ್ತಿನಗರ ಪೊಲೀಸರು ಸ್ಥಳಕ್ಕೆ ಬಂದು ಸಂಜಯ್‌ ಅವರನ್ನು ಠಾಣೆಗೆ ಕರೆದೊಯ್ದರೂ ಅವರು ದೂರು ನೀಡಲು ನಿರಾಕರಿಸಿ ನಂತರ ಠಾಣೆಯಿಂದ ಹೊರಹೋಗಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ.

ವಲಸೆ ಕಾರ್ಮಿಕ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಆರೋಪ ಬಂದಿದ್ದು, ಆನಂತದಲ್ಲಿ ಪೊಲೀಸರ ಹೇಳಿಕೆ ಹೊರಬಿದ್ದಿದೆ. ಬೆಂಗಳೂರು ಮೂಲದ ಹೋರಾಟಗಾರ ಪರಮೇಶ್ ವಿ ಅವರು ಕರ್ನಾಟಕ ಹೈಕೋರ್ಟ್‌ಗೆ ಪತ್ರ ಬರೆದಿದ್ದು, “ಇದು ಕಸ್ಟಡಿ ಸಾವಿನ ಪ್ರಕರಣ. ಸಂಜಯ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ” ಎಂದು ದೂರಿದ್ದಾರೆ.

ತಮ್ಮ ಮೇಲೆ ಬಂದಿರುವ ಆರೋಪವನ್ನು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ವಲಸೆ ಕಾರ್ಮಿಕನು ಕೇವಲ ನಾಲ್ಕು ನಿಮಿಷಗಳ ಕಾಲ ಪೊಲೀಸ್ ಠಾಣೆಯಲ್ಲಿದ್ದರು. ತನ್ನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳ ವಿರುದ್ಧ ದೂರು ನೀಡಲು ಅವರು ನಿರಾಕರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ (ಪೂರ್ವ) ಭೀಮಾಶಂಕರ್ ಎಸ್ ಗುಳೇದ್ ಮಾತನಾಡಿ, “ಸಾವಿಗೀಡಾದ ವ್ಯಕ್ತಿಯು ಕುಡಿದಿದ್ದರು. ಪೊಲೀಸ್ ಠಾಣೆಗೆ ಕರೆತಂದಾಗ ಪ್ರಜ್ಞಾ ಸ್ಥಿತಿಯಲ್ಲಿದ್ದು, ಎಚ್ಚರದಿಂದಿದ್ದರು. ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಲು ನಿರಾಕರಿಸಿದರು. ಆನಂತರ ಹೊರಟುಹೋದರು” ಎಂದಿದ್ದಾರೆ.

“ನಾವು ಈಗಾಗಲೇ ಪೊಲೀಸ್ ಠಾಣೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಪೊಲೀಸ್ ಠಾಣೆಯಲ್ಲಿ ಅವರು ನಾಲ್ಕು ನಿಮಿಷಗಳು ಇದ್ದದ್ದು ದಾಖಲಾಗಿದೆ. ಪೊಲೀಸರು ಹಲ್ಲೆ ನಡೆಸಿರುವ ಪ್ರಶ್ನೆಯೇ ಇಲ್ಲ. ದರ್ಗಾ ಮೊಹಲ್ಲಾದಲ್ಲಿ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದೆ ಎಂದು ಕರೆ ಬಂದಿರುವುದು ಕಾಲ್‌ ರೆಕಾರ್ಡ್‌ನಲ್ಲಿ ದಾಖಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಗುಜರಾತ್‌: ಕಾಂಗ್ರೆಸ್ ಶಾಸಕ ಅನಂತ್‌ ಪಟೇಲ್‌ ಮೇಲೆ ಹಲ್ಲೆ; ಕೃತ್ಯದ ಹಿಂದೆ ಬಿಜೆಪಿ ಕೈವಾಡ?

ಮೃತದೇಹದ ವಿಳಾಸ ಪತ್ತೆ ಹಚ್ಚಲು ಸುಮಾರು ಎಂಟು ದಿನಗಳನ್ನು ತೆಗೆದುಕೊಳ್ಳಲಾಯಿತು. ನಂತರ ಜಾರ್ಖಂಡ್‌ನಲ್ಲಿರುವ ಅವರ ಕುಟುಂಬವನ್ನು ಸಂಪರ್ಕಿಸಲಾಯಿತು. ಅಕ್ಟೋಬರ್ 3ರಂದು ಮರಣೋತ್ತರ ಪರೀಕ್ಷೆ ನಡೆಸಿ, ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗುರುವಾರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅವರ ಮೇಲೆ ಹಲ್ಲೆ ನಡೆಸಿರುವುದು ಕಂಡು ಬಂದಿದೆ. ಅವರ ದೇಹದ ಮೇಲೆ ಹಲವಾರು ಗಾಯಗಳಾಗಿರುವುದು ದಾಖಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

“ಮಕ್ಕಳ ಅಪಹರಣಕಾರರು ಇದ್ದಾರೆ” ಎಂಬ ವದಂತಿಯನ್ನು ವಾಟ್ಸಾಪ್‌ನಲ್ಲಿ ಹರಡಿದ ಕಾರಣ 2018ರ ಮೇ ತಿಂಗಳಲ್ಲಿ ನಗರದ ಚಾಮರಾಜಪೇಟೆಯಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಅದೇ ರೀತಿ, ಜುಲೈ 2018 ರಲ್ಲಿ ಕರ್ನಾಟಕದ ಬೀದರ್‌ನಲ್ಲಿ ಹೈದರಾಬಾದ್‌ನ ಟೆಕ್ಕಿಯೊಬ್ಬರನ್ನು ಕೊಲ್ಲಲಾಗಿತ್ತು. ಮಕ್ಕಳ ಕಿಡ್ನಾಪರ್‌ ಬಂದಿದ್ದಾರೆಂದು ಈಗಲೂ ವಾಟ್ಸ್‌ಅಪ್‌ನಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರು ಇದ್ದಾರೆ. ಈ ಸುಳ್ಳು ಸುದ್ದಿಗಳ ಕುರಿತು ಕನ್ನಡದ ‘ಎನ್‌ಸುದ್ದಿ.ಕಾಂ’ ನಿರಂತರ ವರದಿ ಮಾಡುತ್ತಲೇ ಇದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...