Homeಮುಖಪುಟಯಾವುದೇ ಶಿಕ್ಷೆಯಾಗಿಲ್ಲ, ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶರ್ಜೀಲ್ ಇಮಾಂ

ಯಾವುದೇ ಶಿಕ್ಷೆಯಾಗಿಲ್ಲ, ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಶರ್ಜೀಲ್ ಇಮಾಂ

- Advertisement -
- Advertisement -

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಐಐಟಿ ಪದವೀಧರ, ಪಿಹೆಚ್‌ಡಿ ಸಂಶೋಧನಾ ವಿದ್ಯಾರ್ಥಿ ಶರ್ಜೀಲ್‌ ಇಮಾಂ ಜೈಲು ಸೇರಿ ಜನವರಿ 28,2024ಕ್ಕೆ ನಾಲ್ಕು ವರ್ಷ ಭರ್ತಿಯಾಗಿದೆ.

ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ದೆಹಲಿ ಮತ್ತು ಉತ್ತರ ಪ್ರದೇಶಗಳ ಪೊಲೀಸರು ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಾಡಿದ್ದ ಭಾಷಣಗಳಿಗಾಗಿ ಶರ್ಜೀಲ್ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿದ ಬಳಿಕ 2020ರಲ್ಲಿ ಅವರನ್ನು ಬಂಧಿಸಲಾಗಿತ್ತು. ಶರ್ಜೀಲ್‌ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಕೂಡ ಆರೋಪಗಳನ್ನು ಹೊರಿಸಲಾಗಿದೆ. ದೆಹಲಿ ಗಲಭೆಗಳ ಸಂದರ್ಭ ವ್ಯಾಪಕ ಪಿತೂರಿ ನಡೆಸಿದ ಪ್ರಕರಣದಲ್ಲಿಯೂ ಅವರನ್ನು ಇತ್ತೀಚೆಗೆ ಆರೋಪಿಯನ್ನಾಗಿ ಹೆಸರಿಸಲಾಗಿದೆ.

ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗದಿದ್ದರೂ ಶರ್ಜೀಲ್‌ ಇಮಾಂ ಕಳೆದ ನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಅವರ ವಿರುದ್ಧದ ಒಟ್ಟು ಎಂಟು ಪ್ರಕರಣಗಳ ಪೈಕಿ ಐದರಲ್ಲಿ ಜಾಮೀನು ದೊರೆತಿದೆ. ಒಂದು ಪ್ರಕರಣದಲ್ಲಿ ಎಂದಿಗೂ ಪೊಲೀಸರು ಬಂಧಿಸಿಲ್ಲ. ಇನ್ನು ಅವರ ವಿರುದ್ಧದ ಯುಎಪಿಎ ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ.

ನಾಲ್ಕು ವರ್ಷಗಳಲ್ಲಿ ಶರ್ಜೀಲ್ ಅವರ ಜಾಮೀನು ಅರ್ಜಿಗಳು ದೆಹಲಿಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಕಳೆದ ವರ್ಷ ಸಲ್ಲಿಸಲಾದ ಒಂದು ಅರ್ಜಿಯಲ್ಲಿ, ಯುಎಪಿಎ ಸೆಕ್ಷನ್ 13 ರ ಅಡಿಯಲ್ಲಿ ಗರಿಷ್ಠ ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು (ಏಳು ವರ್ಷಗಳು) ಪೂರ್ಣಗೊಳಿಸಿದ್ದೇನೆ. ಈ ಆಧಾರದ ಮೇಲೆ ತಕ್ಷಣ ನನಗೆ ಜಾಮೀನು ನೀಡಿ ಎಂದು ಶರ್ಜೀಲ್‌ ಕೋರಿದ್ದರು.

“ಅವನ ಜೀವನದ ನಾಲ್ಕು ವರ್ಷಗಳು ವ್ಯರ್ಥವಾಯಿತು. ಹೊರಗಿದ್ದರೆ ಹೆಚ್ಚು ಓದಬಹುದಿತ್ತು, ಸಂಶೋಧನೆ ಮಾಡಬಹುದಿತ್ತು. ಅವನು ಇನ್ನೂ ಪಿಹೆಚ್‌ಡಿ ಪೂರ್ಣಗೊಳಿಸಿಲ್ಲ. ಆದರೆ, ಅವನ ಮನೋಬಲ ಕಡಿಮೆಯಾಗಿಲ್ಲ. ಅವನು ನಗುತ್ತಲೇ ಇರುತ್ತಾನೆ ಮತ್ತು ನಮ್ಮ ತಾಯಿಗೆ ಭರವಸೆಯನ್ನು ನೀಡುತ್ತಿರುತ್ತಾನೆ” ಎಂದು ಅವರ ಕಿರಿಯ ಸಹೋದರ ಮುಝಮ್ಮಿಲ್ ತಿಳಿಸಿದ್ದಾಗಿ ದಿ ವೈರ್‌ ವರದಿ ಮಾಡಿದೆ.

“ಜೈಲಿನಲ್ಲಿರುವ ಯಾವುದೇ ಕೈದಿಯ ಕುಟುಂಬಕ್ಕೆ ಸ್ಥಿರತೆಯ ಭಾವನೆ ಕಳೆದುಹೋಗುತ್ತದೆ. ನಮ್ಮ ತಾಯಿಗೆ ನಾವಿಬ್ಬರೇ ಮಕ್ಕಳು. ಆ ಸ್ಥಿರತೆಯ ಭಾವನೆಯು ಕಳೆದ ಬಳಿಕ ಒಂದು ರೀತಿಯಲ್ಲಿ ನಮ್ಮ ಜೀವನವು ಸ್ಥಗಿತಗೊಂಡಿದೆ” ಎಂದು ಮುಝಮ್ಮಿಲ್ ಹೇಳಿದ್ದಾರೆ.

ಬಂಧನದ ನಾಲ್ಕು ವರ್ಷಗಳಲ್ಲಿ ದೆಹಲಿ ಉಚ್ಚ ನ್ಯಾಯಾಲಯವು ಶರ್ಜೀಲ್‌ ಅವರ ಜಾಮೀನು ಅರ್ಜಿಯನ್ನು 46 ಸಲ ವಿಚಾರಣೆಗೆ ಪಟ್ಟಿ ಮಾಡಿತ್ತು. ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದಿನ ತಿಂಗಳಿನಿಂದ ಹೊಸದಾಗಿ ನಡೆಸಲು ಸಜ್ಜಾಗಿದೆ. ಮೊದಲ ಎಫ್‌ಐಆರ್‌ ಅಡಿಯಲ್ಲಿ ಶರ್ಜೀಲ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನೂ ದಿಲ್ಲಿಯ ಕೆಳ ನ್ಯಾಯಾಲಯವು ಮುಂದಿನ ತಿಂಗಳು ಹೊಸದಾಗಿ ಆರಂಭಿಸಲಿದೆ. ಈ ಎಫ್‌ಐಆರ್‌ ಅಡಿ ಶರ್ಜೀಲ್‌ ಅವರ ಭಾಷಣಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಶರ್ಜೀಲ್ ಬಂಧನವಾದಾಗ ಜಾಮೀನು ಸಿಗಲು ಬಹುಶಃ ಎರಡು ವರ್ಷ ಹೋಗಬಹುದು ಎಂದು ನಾವು ಭಾವಿಸಿದ್ದೆವು. ಆದರೆ, ಇಷ್ಟೊಂದು ವರ್ಷಗಳ ಕಾಲ ಎಳೆಯುತ್ತದೆ ಎಂದು ನಾವು ಭಾವಿಸಿರಲಿಲ್ಲ. ಈಶಾನ್ಯ ದೆಹಲಿ ಗಲಭೆಗಳು ಶರ್ಜೀಲ್ ಬಂಧನದ ಬಳಿಕ ನಡೆದಿದ್ದವು. ಆದರೂ, ವಿನಾಕಾರಣ ಆತನನ್ನು ಆ ಪ್ರಕರಣದಲ್ಲಿ ಸಿಲುಕಿಸಲಾಗಿದೆ” ಎಂದು ಸಹೋದರ ಮುಝಮ್ಮಿಲ್ ಹೇಳಿದ್ದಾರೆ.

ಯುಎಪಿಎ ಪ್ರಕರಣದಲ್ಲಿ ತಕ್ಷಣ ಜಾಮೀನು ಕೋರಿ ಶರ್ಜೀಲ್ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳುಗಳು ಕಳೆದಿವೆ. ಅವರು ಅರ್ಧಕ್ಕೂ ಹೆಚ್ಚಿನ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿರುವುದರಿಂದ ಶಾಸನಬದ್ಧ ಜಾಮೀನಿಗೆ ಅರ್ಹರಾಗಿದ್ದಾರೆ. ಆದರೂ, ಅವರಿಗೆ ಈವರೆಗೆ ಜಾಮೀನು ಮಂಜೂರಾಗಿಲ್ಲ. ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾಯಾಧೀಶರು ಕಳೆದ ಡಿಸೆಂಬರ್‌ನಲ್ಲಿ ವರ್ಗಾವಣೆಗೊಂಡಿದ್ದಾರೆ. ಈಗ ಇನ್ನೋರ್ವ ನ್ಯಾಯಾಧೀಶರ ಎದುರು ಫೆ.7ಕ್ಕೆ ವಿಷಯವನ್ನು ಪಟ್ಟಿ ಮಾಡಲಾಗಿದೆ. ಅವರು ಹೊಸದಾಗಿ ಅದನ್ನು ಪರಿಗಣಿಸಿ ಬಳಿಕ ಆದೇಶವನ್ನು ಹೊರಡಿಸಲಿದ್ದಾರೆ ಎಂದು ಶರ್ಜೀಲ್ ಪರ ವಕೀಲ ಇಬ್ರಾಹಿಂ ತಿಳಿಸಿದ್ದಾರೆ.

ಇತ್ತೀಚಿನ ವರದಿ ಪ್ರಕಾರ, ದೇಶದ್ರೋಹ ಪ್ರಕರಣದಲ್ಲಿ ಶರ್ಜೀಲ್‌ ಇಮಾಮ್ ಅವರ ಶಾಸನಬದ್ಧ ಜಾಮೀನು ಅರ್ಜಿಯನ್ನು ಫೆಬ್ರವರಿ 17 ರೊಳಗೆ ನಿರ್ಧರಿಸುವಂತೆ ದೆಹಲಿ ಹೈಕೋರ್ಟ್ (ಜ.31) ಮಂಗಳವಾರ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ಪೀಠವು ಫೆಬ್ರವರಿ 7 ರಂದು ಮುಂದಿನ ವಿಚಾರಣೆಯ ನಂತರ 10 ದಿನಗಳಲ್ಲಿ ಶರ್ಜೀಲ್‌ ಅವರ ಮನವಿಯ ತೀರ್ಪು ಪ್ರಕಟಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ಶರ್ಜೀಲ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ಇತ್ಯರ್ಥಗೊಳಿಸುವಲ್ಲಿ ನ್ಯಾಯಾಂಗದಿಂದ ತುಂಬ ವಿಳಂಬವಾಗಿದೆ. ಇದು ದುರಂತ. ಯಾವುದೇ ಜಾಮೀನು ಅರ್ಜಿಯು ಎರಡು ವರ್ಷಕ್ಕಿಂತ ಹೆಚ್ಚು ಅವಧಿಗೆ ಬಾಕಿಯಾಗಬಾರದು. ಆರೋಪಿಯು ಜಾಮೀನಿಗೆ ಅರ್ಹನಲ್ಲ ಎಂದು ನೀವು ಭಾವಿಸಿದ್ದರೆ ಅರ್ಜಿಯನ್ನು ವಜಾಗೊಳಿಸಿ, ಆಗ ಆರೋಪಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅಥವಾ ಮೇಲಿನ ನ್ಯಾಯಾಲಯದಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಬಹುದು. ಆದರೆ ಜಾಮೀನು ಅರ್ಜಿಯನ್ನು ಇಷ್ಟೊಂದು ದೀರ್ಘಕಾಲ ಬಾಕಿಯಿರಿಸುವುದು ಕ್ರಿಮಿನಲ್ ನ್ಯಾಯಶಾಸ್ತ್ರದಿಂದ ಎಲ್ಲ ನೀರೀಕ್ಷೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ ಇಬ್ರಾಹಿಂ, ನ್ಯಾಯಾಂಗವು ಸರ್ಕಾದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ಈ ವಿಳಂಬಗಳು ತೋರಿಸುತ್ತಿವೆ ಎಂದಿದ್ದಾರೆ.

ಉಮರ್‌ ಖಾಲಿದ್ ಅವರಂತೆ ಇತರ ರಾಜಕೀಯ ಕೈದಿಗಳಂತೆ ಶರ್ಜೀಲ್‌ಗೆ ನಾಗರಿಕ ಸಮಾಜದ ಗುಂಪುಗಳು ಮತ್ತು ಪ್ರಮುಖ ರಾಜಕೀಯ ಕಾರ್ಯಕರ್ತರಿಂದ ಬೆಂಬಲ ದೊರೆತಿಲ್ಲ. ಜೈಲಿನಲ್ಲಿ ಶರ್ಜೀಲ್ ಕಾನೂನನ್ನು ಅಧ್ಯಯನ ಮಾಡಲು ಕಾನೂನು ಪುಸ್ತಕಗಳನ್ನು ಓದುತ್ತಿದ್ದಾನೆ. ಕಾನೂನು ಸಹಾಯ ಸಿಗದ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಸಹಾಯ ಮಾಡಲು ಅವನು ಪ್ರಯತ್ನಿಸುತ್ತಿದ್ದಾನೆ ಎಂದು ಮುಝಮ್ಮಿಲ್ ಹೇಳಿದ್ದಾರೆ.

“ಒಂದು ದಿನ ಅವನು ಹೊರಬರುತ್ತಾನೆ ಎಂದು ಭರವಸೆ ಇಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ.ಅವನದ ಜೀವನದ ಅಮೂಲ್ಯ ವರ್ಷಗಳು ವ್ಯರ್ಥವಾಗುತ್ತಿವೆ ಅಷ್ಟೇ. ಅವರು ಜಾಮೀನು ಮುಂದೂಡುತ್ತಲೇ ಇರಬಹುದು. ಆದರೆ, ಎಷ್ಟು ದಿನ ಜೈಲಿನಲ್ಲಿ ಇಡುತ್ತಾರೆ? ‘ಹರ್ ಉರೂಜ್ ಕಾ ಝವಾಲ್ ದೇಖನಾ ಹೋತಾ ಹೈ (ಪ್ರತಿಯೊಂದು ಏರಿಕೆಗೂ ಪತನವಿದೆ) ಎಂಬ ಗಾದೆಯಂತೆ ಇದು ನಮಗೂ ಅವರಿಗೂ ನಿಜವಾಗಲಿದೆ’ಎಂದು ಮುಝಮ್ಮಿಲ್ ಬೇಸರ ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಕೇರಳ: ರಂಜಿತ್‌ ಹತ್ಯೆ ಪ್ರಕರಣ; 15 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...