Homeಕರ್ನಾಟಕಬಜರಂಗದಳ ಸದಸ್ಯನ ಕೊಲೆಯ ಹಿಂದೆ ಸಂಘಟನೆಗಳಿರುವ ಮಾಹಿತಿ ಸಿಕ್ಕಿಲ್ಲ: ಗೃಹಸಚಿವ

ಬಜರಂಗದಳ ಸದಸ್ಯನ ಕೊಲೆಯ ಹಿಂದೆ ಸಂಘಟನೆಗಳಿರುವ ಮಾಹಿತಿ ಸಿಕ್ಕಿಲ್ಲ: ಗೃಹಸಚಿವ

- Advertisement -
- Advertisement -

ಶಿವಮೊಗ್ಗ ನಗರದಲ್ಲಿ ನಡೆದಿರುವ ಭಜರಂಗದಳ ಸದಸ್ಯ ಹರ್ಷನ ಕೊಲೆಯ ಹಿಂದೆ ಯಾವುದಾದರೂ ಸಂಘಟನೆಗಳಿರುವ ಮಾಹಿತಿ ಸಿಕ್ಕಿಲ್ಲ, ಹಿಜಾಬ್‌ ಪ್ರಕರಣಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆಯಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ನಗರದ ವಿವಿಧೆಡೆ ಅಹಿತಕರ ಘಟನೆಗಳು ನಡೆದಿವೆ. ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

“ಸಂಘಟನೆಗಳು ಕೈವಾಡ ಏನಾದರೂ ಇದೆಯೇ?” ಎಂದು ಗೃಹ ಸಚಿವರಲ್ಲಿ ಪತ್ರಕರ್ತರು ಕೇಳಿದಾಗ, “ಸಂಘಟನೆಗಳು ಇದರ ಹಿಂದೆ ಇವೆ ಎಂಬ ಯಾವುದೇ ಮಾಹಿತಿ ಸಿಕ್ಕಲಿಲ್ಲ. ನಾಲ್ಕೈದು ಜನ ಯುವಕರ ಗುಂಪು ಇದರ ಹಿಂದೆ ಎಂಬ ಮಾಹಿತಿ ನನಗೆ ಸಿಕ್ಕಿದೆ” ಎಂದಿದ್ದಾರೆ.

“ಈಗ ಪರಿಸ್ಥಿತಿ ಕಂಟ್ರೋಲ್‌ನಲ್ಲಿದೆ. ಜಿಲ್ಲಾಧಿಕಾರಿಯವರು ಆದೇಶ ಕೊಟ್ಟು ಶಾಲಾ ಕಾಲೇಜುಗಳಿಗೆ ರಜೆ ಕೊಟ್ಟಿದ್ದಾರೆ” ಎಂದಿರುವ ಅವರು, “ಕೊಲೆಗೂ ಹಿಜಾಬ್ ಗದ್ದಲಕ್ಕೂ ಯಾವುದೇ ಸಂಬಂಧವಿದೆ ಎಂದು ತಾನು ಭಾವಿಸಿಲ್ಲ. ಆರೋಪಿಗಳು ಸಿಕ್ಕಿಬಿದ್ದ ನಂತರವಷ್ಟೇ ಸತ್ಯ ಹೊರಬರಲಿದೆ” ಎಂದು ತಿಳಿಸಿರುವುದಾಗಿ ‘ದಿ ಕ್ವಿಂಟ್‌’ ವರದಿ ಮಾಡಿದೆ.

ಕೊಲೆಯಾದ ಯುವಕ ಹರ್ಷ

ಪರಿಸ್ಥಿತಿಯನ್ನು ನಿಭಾಯಿಸಲು ಸೆಕ್ಷನ್ 144 ಜಾರಿಗೊಳಿಸಲಾಗಿದೆ. “ಒಟ್ಟಾರೆ ಪರಿಸ್ಥಿತಿ ಶಾಂತಿಯುತವಾಗಿದ್ದರೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ನಿಯೋಜಿಸಲಾಗಿದೆ” ಎಂದು ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.

ಫೆಬ್ರವರಿ 20ರ ಭಾನುವಾರ ತಡರಾತ್ರಿ ಶಿವಮೊಗ್ಗದ ಭಾರತಿ ಕಾಲೋನಿಯಲ್ಲಿ ಹರ್ಷ ಎಂಬ 26 ವರ್ಷದ ಬಜರಂಗದಳದ ಸದಸ್ಯನನ್ನು ಅಪರಿಚಿತ ದುಷ್ಕರ್ಮಿಗಳು ಕೊಂದಿದ್ದಾರೆ. ಈ ಪ್ರಕರಣವು ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಿದೆ.

ವರದಿಗಳ ಪ್ರಕಾರ, ಯುವಕರ ತಂಡವು ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿ ಹರ್ಷನನ್ನು ಕೊಂದಿದೆ. ದಾಳಿಯ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಹರ್ಷ ಕೊನೆಯುಸಿರೆಳೆದಿದ್ದಾರೆ.

ಪೊಲೀಸರಿಂದ ಅಧಿಕೃತ ಹೇಳಿಕೆ ಹೊರ ಬೀಳಬೇಕಾಗಿದೆ. ಸಚಿವ ಕೆಎಸ್ ಈಶ್ವರಪ್ಪ ಅವರು, “ಇಲ್ಲಿಯವರೆಗೆ ಮೂವರನ್ನು ಬಂಧಿಸಲಾಗಿದೆ” ಎಂದಿದ್ದಾರೆ. ಜೊತೆಗೆ ಮುಸ್ಲಿಂ ಗುಂಪಿನಿಂದ ಕೊಲೆ ನಡೆದಿದೆ ಎಂದೂ ಅವರು ಆರೋಪಿಸಿದ್ದಾರೆ.

ಫೆಬ್ರವರಿ 7ರಂದು ಶಿವಮೊಗ್ಗದ ಕಾಲೇಜಿನ ಹೊರಗೆ ಹಿಜಾಬ್‌ಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಹರ್ಷ ಭಾಗವಹಿಸಿದ್ದರು ಎನ್ನಲಾಗಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ.

ಸೋಮವಾರ ಮುಂಜಾನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಗೃಹ ಸಚಿವ ಜ್ಞಾನೇಂದ್ರ ಭೇಟಿ ನೀಡಿ ಹರ್ಷ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ನ್ಯಾಯ ಮತ್ತು ತಕ್ಷಣದ ಕ್ರಮದ ಭರವಸೆ ನೀಡಿದ್ದಾರೆ.

ಅವರ ಸಾವಿನ ಸುದ್ದಿ ತಿಳಿದ ಹಿಂದುತ್ವ ಪರ ಸಂಘಟನೆಗಳ ಸದಸ್ಯರು ಆಸ್ಪತ್ರೆಯ ಹೊರಗೆ ಜಮಾಯಿಸಿ ಪಟ್ಟಣದ ಸೀಗೆಹಟ್ಟಿ ಪ್ರದೇಶದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರ, ಹರ್ಷ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ನೂರಾರು ಬಜರಂಗದಳದ ಸದಸ್ಯರು ಪಾಲ್ಗೊಂಡಿದ್ದರು.

ಮೆರವಣಿಗೆ ನಡೆಯುತ್ತಿರುವಾಗ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿದ್ದಾರೆ.

ಶಿವಮೊಗ್ಗದ ಸ್ಥಿತಿ ಹೇಗಿದೆ?

ಸಚಿವ ಕೆ.ಎಸ್‌.ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರು ಆಗಮಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಗಾಂಧಿ ಜಬಾರ್‌, ಶಿವಪ್ಪ ನಾಯಕ ಸರ್ಕಲ್‌, ಬಿ.ಎಚ್.ರಸ್ತೆ, ಹೊಳೆ ಬಸ್ ಸ್ಟಾಪ್‌ ಸೇರಿದಂತೆ ಸುಮಾರು 5 ಕಿಮೀವರೆಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ವಿದ್ಯಾನಗರದ ರೋಟರಿ ಚಿತಾಗಾರದವರೆಗೆ ಮೆರವಣಿಗೆ ಆಯೋಜಿಸಲಾಗಿತ್ತು.

ಹಳೆ ಶಿವಮೊಗ್ಗ ಭಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಗಾಂಧಿ ಬಜಾರ್‌, ರವಿವರ್ಮ ಬೀದಿ, ಸೀಗೆಹಟ್ಟಿ, ಆಜಾದ್‌ನಗರ, ಭಾರತಿ ಕಾಲೋನಿ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ಬಿಗುವಿನ ವಾತಾವರಣವಿತ್ತು.

ಇದರ ನಡುವೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ಇಂದಿನಿಂದ ಎರಡು ವಾರಗಳವರೆಗೆ ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಹೊರಗೆ ಸಭೆ/ಪ್ರತಿಭಟನೆ ಮಾಡದಂತೆ ನಿಷೇಧಾಜ್ಞೆ ಹೊರಡಿಸಿದ್ದು, ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸಭೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ‘ಅವಳನ್ನು ಅಟ್ಟಾಡಿಸಬೇಡಿ’: ಹೈಕೋರ್ಟ್ ಮಧ್ಯಂತರ ಆದೇಶದ ದುರ್ವ್ಯಾಖ್ಯಾನದ ವಿರುದ್ಧ SYS ರಾಜ್ಯದಾದ್ಯಂತ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡವನ್ನು ಜಗತ್ತಿನ ಮುಂದೆ ಬಿಚ್ಚಿಟ್ಟ ಪ್ಯಾಲೆಸ್ತೀನ್‌ ಪತ್ರಕರ್ತರಿಗೆ ‘2024ರ ಯುನೆಸ್ಕೋ...

0
ಗಾಝಾದಲ್ಲಿ ಇಸ್ರೇಲ್‌ ನಡೆಸಿದ ಹತ್ಯಾಕಾಂಡದ ಬಗ್ಗೆ ವರದಿ ಮಾಡಿದ ಪ್ಯಾಲೆಸ್ತೀನ್ ಪತ್ರಕರ್ತರನ್ನು 2024ರ ಯುನೆಸ್ಕೋ/ಗಿಲ್ಲೆರ್ಮೊ ಕ್ಯಾನೊ ವರ್ಲ್ಡ್ ಪ್ರೆಸ್ ಫ್ರೀಡಂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತರಾಷ್ಟ್ರೀಯ ಮಾಧ್ಯಮ ವೃತ್ತಿಪರ ತೀರ್ಪುಗಾರರ ಶಿಫಾರಸಿನ ಮೇರೆಗೆ ವಿಜೇತರನ್ನು...