ಮೇವು ಹಗರಣಕ್ಕೆ ಸಂಬಂಧಿಸಿದ ಐದನೇ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ವಿಶೇಷ ಸಿಬಿಐ ನ್ಯಾಯಾಲಯ ಇಂದು ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಕಳೆದ ವಾರ ಈ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕನಿಗೆ ಶಿಕ್ಷೆ ವಿಧಿಸಲಾಗಿತ್ತು. 1990ರ ದಶಕದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ನಡೆದ ಮೇವು ಹಗರಣದಲ್ಲಿ ಡೊರಾಂಡಾ ಖಜಾನೆಯಿಂದ 139.5 ಕೋಟಿಗಳನ್ನು ಅಕ್ರಮವಾಗಿ ಪಡೆಯಲಾಗಿತ್ತು.
ಜಾಮೀನಿನ ಮೇಲೆ ಹೊರಬಂದು ಅಸ್ವಸ್ಥರಾಗಿರುವ ಲಾಲು ಪ್ರಸಾದ್ ಯಾದವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಶಿಕ್ಷೆಯ ಪ್ರಮಾಣದ ಬಗ್ಗೆ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯ ಶಿಕ್ಷೆಯನ್ನು ಘೋಷಿಸಿದೆ.
ಇದನ್ನೂ ಓದಿ: ಮೇವು ಹಗರಣದ ದುಮ್ಕಾ ಖಜಾನೆ ಪ್ರಕರಣದಲ್ಲಿ ಲಾಲೂ ಪ್ರಸಾದ್ ಯಾದವ್‌ಗೆ ಜಾಮೀನು
Fifth fodder scam case | CBI court in Ranchi sentences RJD leader Lalu Prasad Yadav to 5 years' imprisonment and imposes Rs 60 Lakh fine on him. pic.twitter.com/413701Rt5W
— ANI (@ANI) February 21, 2022
ಫೆಬ್ರವರಿ 15 ರಂದು ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು. ಇಂದು ಶಿಕ್ಷೆಯ ಪ್ರಮಾಣ ಘೋಷಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ, ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ 73 ವರ್ಷದ ಲಾಲು ಪ್ರಸಾದ್ ಯಾದವ್ ಅವರನ್ನು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಬಳಿಕ ಅವರನ್ನು ರಾಂಚಿಯ ಸರ್ಕಾರಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS) ಗೆ ಸ್ಥಳಾಂತರಿಸಲಾಗಿದೆ.
ಮೇವು ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣವು ಪಾಟ್ನಾದ ಸಿಬಿಐ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದೆ.
950 ಕೋಟಿ ರೂಪಾಯಿ ಮೇವು ಹಗರಣವು ದೊಡ್ಡ ಪ್ರಮಾಣದ ಭ್ರಷ್ಟಾಚಾರವನ್ನು ಒಳಗೊಂಡಿತ್ತು. ಇದರಲ್ಲಿ ಪ್ರಾಣಿಗಳ ಮೇವಿಗೆ ಮೀಸಲಾದ ಹಣವನ್ನು ಬಿಹಾರದಾದ್ಯಂತ ಅನೇಕ ಸರ್ಕಾರಿ ಖಜಾನೆಗಳಿಂದ ದುರುಪಯೋಗಪಡಿಸಲಾಯಿತು. ಪಶು ಸಂಗೋಪನಾ ಇಲಾಖೆಯು ನಕಲಿ ಬಿಲ್ ನೀಡಿ ವಂಚನೆಗೆ ಅನುಕೂಲ ಮಾಡಿಕೊಡಲಾಗಿದೆ ಎನ್ನಲಾಗಿದೆ.
ಡಿಸೆಂಬರ್ 2017 ರಿಂದ ಜೈಲಿನಲ್ಲಿರುವ ಅವರು ತಮ್ಮ ಹೆಚ್ಚಿನ ಶಿಕ್ಷೆಯನ್ನು ಜಾರ್ಖಂಡ್‌ನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅನುಭವಿಸಿದ್ದಾರೆ. ಕಳೆದ ವರ್ಷ ಜನವರಿಯಲ್ಲಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ದೆಹಲಿಗೆ ಕರೆತರಲಾಗಿತ್ತು.
ಇದನ್ನೂ ಓದಿ: ಲೀಟರ್ ಪೆಟ್ರೋಲ್ ಮೇಲೆ 50 ರೂ ಕಡಿತ ಮಾಡಲಿ: ಲಾಲು ಪ್ರಸಾದ್ ಯಾದವ್ ಒತ್ತಾಯ