ಕೋಲಾರದ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ನಿನ್ನೆ ಎಂಟು ರೋಗಿಗಳು ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ಎಸ್‌ಎನ್‌ಆರ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್. ಜಿ.ನಾರಾಯಣಸ್ವಾಮಿ ಮತ್ತು ವೈದ್ಯಕೀಯ ಅಧಿಕಾರಿ (RMO) ಡಾ.ನಾರಾಯಣಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ. ಆದರೂ ಆಸ್ಪತ್ರೆಯ ಮೂಲಸೌಲಭ್ಯಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವೈದ್ಯರು, ದಾದಿಯರು ಇಲ್ಲದೇ ರೋಗಿಗಳು ಸಂಕಷ್ಟದಲ್ಲಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ಮುಖಂಡೆ ವಿ.ಗೀತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿ.ಗೀತಾರವರು ಕೊರೊನಾ ಪಾಸಿಟಿವ್ ಆಗಿ ಇಂದು ಮಧ್ಯಾಹ್ನ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. “ಮೂರು ವಾರ್ಡ್‌ಗಳಲ್ಲಿ ಹಲವಾರು ರೋಗಿಗಳಿದ್ದು ಕೇವಲ ಮೂವರು ದಾದಿಯರಿದ್ದಾರೆ. ಇದುವರೆಗೂ ವೈದ್ಯರು ಬಂದು ಚಿಕಿತ್ಸೆ ನೀಡಿಲ್ಲ. ಇಲ್ಲಿನ ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ” ಎಂದು ಅವರು ಆಸ್ಪತ್ರೆಯಿಂದಲೇ ವಿಡಿಯೋದಲ್ಲಿ ತಿಳಿಸಿದ್ದಾರೆ.

ನಮ್ಮ ಸಂಪರ್ಕದ ವೈದ್ಯರಿಗೆ ಫೋನ್ ಮಾಡಿದೆ. ಹಾಗಾಗಿ ಒಬ್ಬರು ಬಂದು ಒಂದು ಇಂಜೆಕ್ಷನ್ ಕೊಟ್ಟು ಹೋಗಿದ್ದಾರೆ. ಆದರೆ ಇತರ ರೋಗಿಗಳಿಗೆ ಯಾವುದೇ ಚಿಕಿತ್ಸೆ ದೊರೆತಿಲ್ಲ. ಈ ಬಗ್ಗೆ ದೂರು ನೀಡಲು ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿದರೆ ತೆಗೆಯುತ್ತಿಲ್ಲ. ಸಿಇಓರವರಿಗೆ ಫೋನ್ ಮಾಡಿದರೆ ವಿಚಾರಿಸುತ್ತೇನೆ ಎಂದು ಹೇಳುತ್ತಾರೆ. ನಿನ್ನೆ ತಾನೇ ವೈದ್ಯರ ನಿರ್ಲಕ್ಷ್ಯ ಮತ್ತು ಆಕ್ಸಿಜನ್ ಕೊರತೆಯಿಂದ 8 ರೋಗಿಗಳು ಮೃತಪಟ್ಟಿದ್ದಾರೆ. ಆದರೆ ಇಲ್ಲಿನ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಇನ್ನೆಷ್ಟು ರೋಗಿಗಳು ಬಲಿಯಾಗಬೇಕು ಎಂದು ಅವರು ಕಿಡಿಕಾರಿದ್ದಾರೆ.

ಆರೋಗ್ಯ ಸಚಿವರು ಮತ್ತು ಜಿಲ್ಲಾಡಳಿತ ಕೂಡಲೇ ಗಮನಹರಿಸಿ, ವೈದ್ಯರು ಮತ್ತು ದಾದಿಯರನ್ನು ನಿಯೋಜಿಸಬೇಕು.. ಇಲ್ಲದಿದ್ದರೆ ನಾವು ಸತ್ತರೂ ಪರವಾಗಿಲ್ಲ ಎಂದು ಆಸ್ಪತ್ರೆ ಹೊರಗೆ ಬೀದಿಯಲ್ಲಿ ಕೂರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಆ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಐದು ಮಂದಿ ಹಾಗೂ ಇತರ ಮೂರು ರೋಗಿಗಳು ಆಮ್ಲಜನಕ ಪೂರೈಕೆ ಕೊರತೆಯಿಂದ ಸಾವನ್ನಪ್ಪಿರುವುದಾಗಿ ತಿಳಿದುಬಂದಿದ್ದು, ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿರುವ  ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವೈದ್ಯರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಸೋಮವಾರ ತಡರಾತ್ರಿ 11 ಗಂಟೆ ಸುಮಾರಿಗೆ ಎಸ್‌ಎನ್‌ಆರ್ ಆಸ್ಪತ್ರೆಗೆ ತಲುಪಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಡಳಿತ ಮತ್ತು ವೈಧ್ಯಾಧಿಕಾರಿಗಳ ಜೊತೆ ಸಭೆ ನಡೆಸಿ, ನಂತರ ನಿರ್ಧಾರ ಕೈಗೊಳ್ಳಲಾಗಿದೆ.


ಇದನ್ನೂ ಓದಿ: ಕೋಲಾರ: ಆಮ್ಲಜನಕ ಸಿಗದೆ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಾವು, ವೈದ್ಯರ ಅಮಾನತು

LEAVE A REPLY

Please enter your comment!
Please enter your name here