Homeಕರ್ನಾಟಕಕರ್ನಾಟಕದ ವಿವಿಧ ಸಮುದಾಯಗಳ ಜಾಗೃತಿಗೆ ದಾರಿದೀಪವಾದ ದಲಿತ ಚಳವಳಿ

ಕರ್ನಾಟಕದ ವಿವಿಧ ಸಮುದಾಯಗಳ ಜಾಗೃತಿಗೆ ದಾರಿದೀಪವಾದ ದಲಿತ ಚಳವಳಿ

- Advertisement -
- Advertisement -

ಕರ್ನಾಟಕ ಚಳವಳಿಗಳ ನಾಡು. ಜಗತ್ತಿನ ಎಲ್ಲಾ ಪರಿಸರಗಳಲ್ಲಿ ಆಗುವಂತೆ ಇಲ್ಲಿಯೂ ಮೇಲ್‌ಸ್ತರದ ಬದಲಾವಣೆಗಳೊಂದಿಗೆ ಗುರುತಿಸಿಕೊಳ್ಳದ ಸಾವಿರಾರು ತಳ ಸಮುದಾಯಗಳು ಅಂತರ್ಮುಖಿಯಾಗಿದ್ದವು ಮತ್ತು ತಮ್ಮನ್ನು ಉಳಿಸಿಕೊಳ್ಳುವ ಜೀವದ್ರವ್ಯವನ್ನು ತಮ್ಮೊಳಗಿನ ಸಾಂಸ್ಕೃತಿಕ ಗಣಿಗಳಿಂದಲೇ ಅಗೆಯುತ್ತಿದ್ದವು. ಬೌದ್ಧಾನುಯಾಯಿಗಳ ಲೋಕಗ್ರಹಿಕೆಗೆ ಕನ್ನಡದ ನೆಲ ಭಿತ್ತಿಯಾದ ಹಾಗೇ ಜೈನರಿಗೂ, ಶರಣರಿಗೂ ಮುಖ್ಯ ಭೂಮಿಕೆಯಾಯಿತು. ಇದನ್ನು ಹನ್ನೆರಡನೇ ಶತಮಾನದಲ್ಲಿ ಶರಣರು ನಿರೂಪಿಸಿದರು. ಶರಣರು ಆಗಿಹೋದ ನಾಲ್ಕೈದು ಶತಮಾನಗಳವರೆಗೆ ಕನ್ನಡ ನೆಲ ಮತ್ತದೇ ಧರ್ಮ ಮತ್ತು ಸಾಮ್ರಾಜ್ಯಗಳ ನಡುವಿನ ಅನರ್ಥ ಅನುಸಂಧಾನದ ಸರ್ಕಸ್ಸಿಗೆ ಸಾಕ್ಷಿಯಾಯಿತು. ಇದರಿಂದಾಗಿ ಶೈವ-ವೈಷ್ಣವ ವ್ಯಾಜ್ಯಗಳು ದಾಖಲಾದವೇ ಹೊರತು ಹತ್ತೊಂಬತ್ತನೇ ಶತಮಾನದಲ್ಲಿ ಮುನ್ನೆಲೆಗೆ ಬಂದ ವೈದಿಕ ಸಂಕಥನಗಳೆದುರು ಶರಣ ಕ್ರಾಂತಿಯ ಸುಧಾರಣೆಗಳು ಗೌಣವಾಗಿ ಹೋದವು. ಆನಂತರದಲ್ಲಿ ಈ ವ್ಯಾಜ್ಯಗಳನ್ನೂ ಹಿಂದೂ ಧಾರ್ಮಿಕ ಪುನರುತ್ಥಾನದ ಹೆಸರಿನಲ್ಲಿ ಅಪಮಾನಿಸಲಾಯಿತು. ಆದರೆ, 15-16ನೇ ಶತಮಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾದ ಕನ್ನಡದ ಜನಪದ ಸಾಂಸ್ಕೃತಿಕ ಪ್ರಜ್ಞಾಪ್ರವಾಹವನ್ನು ಈ ಧರ್ಮ ರಾಜಕಾರಣ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ಪ್ರಜ್ಞಾಪ್ರವಾಹದ ಗಟ್ಟಿತನವೇ ಮುಂದೆ ಕರ್ನಾಟಕದಲ್ಲಿ ದಲಿತ ಚಳವಳಿ ಹುಟ್ಟಿ ಬೆಳೆಯಲು ಶಕ್ತಿ ನೀಡಿತು. ಇದನ್ನು ಯಾವ ಸಾಮಾಜಿಕ ವಿಶ್ಲೇಷಕರೂ ಅಧ್ಯಯನ ಶಿಸ್ತಿನಲ್ಲಿ ಮಂಡಿಸಿಲ್ಲವಾದರೂ ತಳ ಸಮುದಾಯಗಳ ಸಾಂಸ್ಕೃತಿಕ ಪ್ರಜ್ಞೆಯೊಳಗೆ ಅಂತರ್ಮುಖಿಯಾಗಿ ಕಾಲದಿಂದ ಕಾಲಕ್ಕೆ ಹರಿಯುತ್ತಲೇ ಇತ್ತು ಎಂಬುದನ್ನು ನಾವು ಕಂಡುಕೊಳ್ಳಬಹುದು. ಇತ್ತೀಚಿನ ವರ್ಷಗಳಲ್ಲಿ ನಾವು ಅಭ್ಯಸಿಸುತ್ತಿರುವ ಮಂಟೇಸ್ವಾಮಿ, ಮಾದಪ್ಪ, ಮೈಲಾರಲಿಂಗ ರೀತಿಯ ಜನಪದ ಮಹಾಕಾವ್ಯಗಳೇ ಇದಕ್ಕೆ ಸಾಕ್ಷಿಯಾಗಿವೆ. ಈ ಮಹಾಕಾವ್ಯಗಳು ಮೇಲ್ನೋಟಕ್ಕೆ ವೈದಿಕ ಆಕ್ರಮಣದೆದುರು ಸೆಣೆಸುವ ಉದ್ದೇಶದಿಂದ ಸೃಷ್ಟಿಯಾದವು ಎಂದೆನ್ನಿಸಿದರೂ, ಮನುಷ್ಯ ವಿಕಾಸದ ಹಾದಿಯಲ್ಲಿ ಆನ್ಯಾಕ್ರಮಣದ ವಿರುದ್ಧ ತಮ್ಮ ಸುತ್ತಲೂ ತಳ ಸಮುದಾಯಗಳು ಕಟ್ಟಿಕೊಂಡ ಶಸ್ತ್ರಾಸ್ತ್ರಗಳ ಕೋಟೆಯ ರೀತಿಯಲ್ಲಿ ಕಾಣಿಸಿದರೂ, ಆಳದಲ್ಲಿ ಆದಿಮ ಕಲಾವಂತಿಕೆಯ ರಿಲೇ ಓಟವಾಗಿ ಕಾಣಿಸುತ್ತವೆ. ಈ ರಿಲೇ ಓಟದ ವೇಗವನ್ನು ಮಾತ್ರ ’ಶಿಷ್ಟ ಸಂಸ್ಕೃತಿ’ಯ ಹೆಸರಲ್ಲಿ ಆಗಾಗ ಕುಗ್ಗಿಸಲಾಗಿದೆ ಎಂಬುದು ಸತ್ಯ.

ಕರ್ನಾಟಕದಲ್ಲಿ ದಲಿತ ಚಳವಳಿಯ ಹುಟ್ಟಿಗೆ ಬಿ.ಬಸವಲಿಂಗಯ್ಯನವರ ’ಬೂಸಾ’ ಹೇಳಿಕೆ ಕಾರಣವಾಯಿತು ಎಂದು ಕಂಡರೂ, ಇದೂ ಆದಿಮ ವಿವೇಕದ ರಿಲೇ ಓಟದ ಭಾಗವೇ ಎಂಬುದನ್ನು ನಾವು ಗಮನಿಸಬೇಕಿದೆ. ಶತಮಾನಗಳ ನೋವು ಸಹಿಸಲಾಗದ ಸ್ಥಿತಿಯಲ್ಲಿ ಸ್ಪೋಟಿಸಲು ಬಾಬಾಸಾಹೇಬರ ಸಂವಿಧಾನ ಹಾಗೂ ಶಿಕ್ಷಣ ಕಾರಣವಾಯಿತು ಎಂಬುದನ್ನು ನಾವು ಒಪ್ಪಿಕೊಂಡರೆ, ಈ ವಿದ್ಯಮಾನವನ್ನು ಕನ್ನಡ ಪ್ರಜ್ಞೆಯೊಂದಿಗೆ ಹೊಂದಿಸಿ ನೋಡುವ ಕ್ರಮ ದಕ್ಕುತ್ತದೆ. ಅಂದರೆ, ಯಾವ ವಿವೇಕ ಹನ್ನೆರಡನೇ ಶತಮಾನದಲ್ಲಿ ಶರಣರನ್ನು ಜಾತಿವಿನಾಶದ ಚಳವಳಿಗೆ ಪ್ರೇರೇಪಿಸಿತೋ, ಯಾವ ವಿವೇಕ ಹದಿನೈದನೇ ಶತಮಾನದಲ್ಲಿ ಮಂಟೇದ ಮಾದಯ್ಯರ ಕಾವ್ಯವನ್ನು ಕಟ್ಟಿತೋ, ಯಾವ ವಿವೇಕ ಶಿಶುನಾಳ ಷರೀಪಜ್ಜ, ಕಡಕೋಳ ಮಡಿವಾಳಪ್ಪ, ಕೊಡೇಕಲ್ಲ ಬಸವಣ್ಣ, ಕೈವಾರ ತಾತಯ್ಯನಂಥವರ ಪದಗಳಲ್ಲಿ- ನಡೆಯಲ್ಲಿ ಸ್ಪುರಿಸಿತೋ ಅದೇ ವಿವೇಕ ಎಪ್ಪತ್ತರ ದಶಕದಲ್ಲಿ ದಲಿತ ಚಳವಳಿಯನ್ನೂ, ರೈತ- ಕಾರ್ಮಿಕ- ಮಹಿಳಾ ಚಳವಳಿಯನ್ನೂ ಹುಟ್ಟುಹಾಕಿತು. ಅದನ್ನೇ ನಾನು ’ಕನ್ನಡದ ವಿವೇಕ’ ಎನ್ನುತ್ತೇನೆ. ಕನ್ನಡದ ನೆಲದಲ್ಲಿ ಹುಟ್ಟಿ ಹಬ್ಬಿದ ದಲಿತ-ರೈತ ಚಳವಳಿಗಳು, ಕಾರ್ಮಿಕ-ಮಹಿಳಾ ಚಳವಳಿಗಳು ಕನ್ನಡ ಚಳವಳಿಗಳೇ ಎಂಬುದು ನನ್ನ ತಿಳಿವಳಿಕೆ. ಇದರೊಂದಿಗೆ ಕನ್ನಡ ಭಾಷೆಯ ಹೆಸರಿನಲ್ಲಿ ನಡೆದ ಚಳವಳಿಯನ್ನು ಮಾತ್ರ ಕನ್ನಡ ಚಳವಳಿ ಎಂದರೆ, ಅದು ಕನ್ನಡದ ವಿವೇಕಕ್ಕೆ ಮಾಡಿದ ಅಪಮಾನವೇ ಸರಿ.

ದಲಿತ ಚಳವಳಿ ಪ್ರಾರಂಭವಾದ ದಿನಗಳಲ್ಲಿ ಕನ್ನಡ ಭಾಷೆಯ ಹೆಸರಿನ ಚಳವಳಿಯೂ ಚಾಲ್ತಿಯಲ್ಲಿತ್ತು. ದಲಿತ ಚಳವಳಿಗಿಂತ ಎರಡು ದಶಕಗಳ ಮೊದಲೇ ಪ್ರಾರಂಭವಾಗಿದ್ದ ಕನ್ನಡ ಭಾಷಾ ಚಳವಳಿ ಭಾಷಾವಾರು ಪ್ರಾಂತ್ಯ ವಿಂಗಡಣೆ ಎಂಬ ಭ್ರಮಾತ್ಮಕ ಸಫಲತೆಯನ್ನು ಹೊತ್ತು ಮೆರೆಯುವ ಕಾಲದಲ್ಲಿ ಇದ್ದಕ್ಕಿದ್ದಂತೆ ಹಿಂದಿ-ಇಂಗ್ಲಿಷ್ ಹೇರಿಕೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಯಿತು. ಆಡಳಿತದಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ತನ್ನದೇ ರಾಜ್ಯದ ಸರ್ಕಾರಕ್ಕೆ ಒತ್ತಾಯಿಸಬೇಕಾದ ಸ್ಥಿತಿ ಒದಗಿತು. ಆ ಚಳವಳಿ ನೆಲದ ಮುಖ್ಯ ಸಮಸ್ಯೆಗಳನ್ನು ಕನ್ನಡ ಸಮಸ್ಯೆಗಳೆಂದು ನೋಡದ ಕಾರಣಕ್ಕೆ ಸೀಮಿತಗೊಂಡಿತು. ’ಬೂಸಾ ಪ್ರಕರಣ’ದ ಕಾರಣದಿಂದ ಹುಟ್ಟಿದ ದಲಿತ ಚಳವಳಿಯಲ್ಲಿದ್ದ ಮುಖಂಡರಲ್ಲಿ ಬಹುತೇಕರು ಶಿಕ್ಷಕ ವೃತ್ತಿಗೆ ಸೇರಿರುವುದರಿಂದ ಅವರೆಲ್ಲರೂ ಅನಿವಾರ್ಯವಾಗಿ ಕನ್ನಡ ಹೋರಾಟಗಳಲ್ಲಿ ಭಾಗವಹಿಸಬೇಕಾಯಿತು. ಆದರೆ, ದಲಿತ ಚಳವಳಿಯ ಹುಟ್ಟು ತನ್ನೊಳಗೆ ಜಾತಿವಿನಾಶದಂತಹ ಮಹತ್ತರವಾದ ಗುರಿಯನ್ನು ಹೊಂದಿದ್ದರಿಂದ ಕನ್ನಡ ಚಳವಳಿಯೊಂದಿಗೆ ಸಖ್ಯ ಸಾಧ್ಯವಾಗಲಿಲ್ಲ. ನಂತರದಲ್ಲಿ ಬಂಡಾಯ ಸಾಹಿತಿಗಳಲ್ಲಿ ಕೆಲವರು ಕನ್ನಡ ಹೋರಾಟದ ಭಾಗವಾದರು; ಮತ್ತವರು ದಲಿತ ಚಳವಳಿಗೆ ಬೆನ್ನು ಮಾಡಿದರು. ಗೋಕಾಕ್ ಚಳವಳಿಯಲ್ಲಿ ತಮಿಳರ ಹೆಸರಿನಲ್ಲಿ ಬಲಿಯಾದ ಹನ್ನೊಂದಕ್ಕೂ ಹೆಚ್ಚು ಜನರಲ್ಲಿ ಬಹುತೇಕರು ದಲಿತರಾಗಿದ್ದರು ಎಂಬ ಸತ್ಯವನ್ನು ನಮ್ಮ ಬಂಡಾಯಗಾರರೂ ಮರೆಮಾಚಿದರು.

ಇದೆಲ್ಲದರಾಚೆಗೆ ಕರ್ನಾಟಕದಲ್ಲಿ ಹುಟ್ಟಿ ಬೆಳೆದ ದಲಿತ ಚಳವಳಿ ಕನ್ನಡದ ವಿವೇಕವನ್ನು ತಿದ್ದಿದೆ ಮತ್ತು ಕನ್ನಡ ಪ್ರಜ್ಞೆಯನ್ನು ಹಿಗ್ಗಿಸಿದೆ ಎಂಬುದರಲ್ಲಿ ಸಂಶಯವಿಲ್ಲ. ಬಿ.ಬಸವಲಿಂಗಪ್ಪನವರು 1973ರ ಒಂದು ಭಾಷಣದಲ್ಲಿ ’ಕನ್ನಡ ಸಾಹಿತ್ಯದಲ್ಲಿರುವುದು ಬೂಸ’ ಎಂದು ಕೊಟ್ಟ ಹೇಳಿಕೆ ನಿಜಕ್ಕೂ ಆವತ್ತಿನ ಕನ್ನಡ ಹೋರಾಟಗಾರರು ಮತ್ತು ಕನ್ನಡಾಭಿಮಾನಿಗಳ ಬಣ್ಣವನ್ನು ಬಯಲು ಮಾಡಿತ್ತು. ಇಂಥದ್ದೇ ಮಾತುಗಳನ್ನು ಕುವೆಂಪು ಅಂತಹ ದೊಡ್ಡ ಸಾಹಿತಿಗಳು ಹೇಳಿದ್ದರೂ, ಬಸವಲಿಂಗಪ್ಪನವರ ಮಾತು ’ದೊಡ್ಡ ಕನ್ನಡ ಹೋರಾಟ’ಕ್ಕೆ ಕಾರಣವಾಯಿತು. ಇದು ದಲಿತರ ವಿರುದ್ಧ ಕನ್ನಡ ಹೋರಾಟಗಾರರು ನಡೆಸಿದ ಹೋರಾಟ ಅಲ್ಲವಾದರೂ, ಬಸವಲಿಂಗಪ್ಪನವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು ಸೋತಿದ್ದರು. ಆದರೆ, ಅದಾಗಲೇ ಜಾತಿವಿನಾಶವನ್ನು ಕನಸುತ್ತಿದ್ದ ದಲಿತ ವಿದ್ಯಾವಂತರು ಬಸವಲಿಂಗಪ್ಪನವರ ಜತೆಯಲ್ಲಿ ನಿಂತರು. ’ಹೌದು ಕನ್ನಡ ಸಾಹಿತ್ಯದಲ್ಲಿರುವುದು ಬಹುತೇಕ ಬೂಸಾ’ನೇ ಎಂದರು. ಈ ವಿದ್ಯಮಾನ ಕನ್ನಡ ಭಾಷಾ ಹೋರಾಟದ ಸೂಕ್ಷ್ಮತೆಯನ್ನು ಒರೆಹಚ್ಚುವಂತೆ ಮಾಡಿತು. ಬಸವಲಿಂಗಪ್ಪನವರು ತಮ್ಮ ಮಂತ್ರಿ ಪಟ್ಟಕ್ಕೆ ರಾಜೀನಾಮೆ ಕೊಟ್ಟರೂ ಕನ್ನಡ ನೆಲದಲ್ಲಿ ಒಂದು ಪ್ರಮುಖ ಹೋರಾಟಕ್ಕೆ ನಾಂದಿ ಹಾಡಿದರು.

ದಲಿತ ಸಂಘರ್ಷ ಸಮಿತಿಯ ಹುಟ್ಟು ಕನ್ನಡ ನಾಡಿನ ಮಾನವೀಯ ಹೋರಾಟದ ಹೊಸ ಅಧ್ಯಾಯವನ್ನು ತೆರೆಯಿತು. ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಎಚ್.ಗೋವಿಂದಯ್ಯ, ಇಂದೂಧರ ಹೊನ್ನಾಪುರ, ಕೆ.ರಾಮಯ್ಯ ಮೊದಲಾದ ದಲಿತ ಬರಹಗಾರರು ಕನ್ನಡದ ಹೊಸ ಭಾಷಾ ಸಾಧ್ಯತೆಗಳನ್ನು ಶೋಧಿಸಿದರು. ಸಿದ್ಧಲಿಂಗಯ್ಯನವರ ’ಹೊಲೆಮಾದಿಗರ ಹಾಡು’ ದೇವನೂರ ಮಹಾದೇವರ ಮಾತಿನಂತೆ ’ಮುದಿಯಾಗಿ ಸತ್ತಿದ್ದ ಕನ್ನಡ ಕಾವ್ಯದ ಹೊಸ ಚಿಗುರು ಹಾಗೂ ಹೊಸ ಜಗತ್ತಿನಿಂದ ಎದ್ದ ದನಿಯೆಂಬ ಕಾರಣಕ್ಕಾಗಿ ಅದು ಸಾಹಿತ್ಯೇತರ ಸಮಸ್ಯೆಗಳಿಗೆ ಕೊಟ್ಟ ಉತ್ತರ’ವಾಗಿ ಗೋಚರಿಸಿತು. ಇದು ದಲಿತ ಲೋಕದ ನೋವಿನ ಆಕ್ರಂದನದಂತೆ ಕಂಡರೂ, ಆಕ್ರೋಶದ ದನಿಯಂತೆ ಕೇಳಿಸಿದರೂ ’ಇಪ್ಪತ್ತನೇ ಶತಮಾನದ ಜನಪದ ಕಾವ್ಯ’ ಎಂಬಷ್ಟರಮಟ್ಟಿಗೆ ಜನಪ್ರಿಯವಾಯಿತು. ಇದನ್ನೇ ಡಿ.ಆರ್.ನಾಗರಾಜ್ ’ಸಿದ್ಧಲಿಂಗಯ್ಯನವರ ಹಾಡು ಒಂದು ಜನಾಂಗವನ್ನಲ್ಲ, ವಿಶ್ವದ ಎಲ್ಲ ದಲಿತರನ್ನೂ ಒಗ್ಗೂಡಿಸುವ ಸಾಮರ್ಥ್ಯವನ್ನು ಪಡೆದಿವೆ’ ಎಂಬ ಮಾತುಗಳಲ್ಲಿ ಹೇಳಿದರು. ಇದರ ನಂತರ ಬಂದ ಕುಸುಮಬಾಲೆ, ಒಡಲಾಳ ಕೃತಿಗಳು ಕನ್ನಡ ಸಾಹಿತ್ಯದ ವ್ಯಾಸವನ್ನು ಹಿಗ್ಗಿಸಿದವು ಮತ್ತು ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ಕಾಣಿಸಿದವು.

ಅಷ್ಟು ದೊಡ್ಡ ಕನ್ನಡ ಸಾಹಿತ್ಯ ಪರಂಪರೆಗೆ ಕನ್ನಡದ ದಲಿತ ಸಾಹಿತ್ಯ ಕೊಟ್ಟ ಕೊಡುಗೆ ಅಪಾರವೆನ್ನಿಸುವಷ್ಟರ ಮಟ್ಟಿನದ್ದಾದರೆ, ದಲಿತ ಚಳವಳಿಯ ಹಾಡುಗಳು ಇನ್ನೊಂದು ರೀತಿಯ ಜಗತ್ತನ್ನೇ ಸೃಷ್ಟಿಸಿದವು. ಅವುಗಳ ಮೂಲಕ ಮನಸ್ಸುಗಳ ನಡುವೆ ಸೇತುವೆಗಳನ್ನೂ ಕಟ್ಟಿ ಎಲ್ಲರೊಂದಾಗಿ ಬಾಳುವ ಶರಣ ಸಂಸ್ಕೃತಿಯ ಮಾದರಿಯನ್ನು ಈ ಹಾಡುಗಳ ಮೂಲಕ ಪುನರ್ ಸೃಷ್ಟಿಸಲಾಯಿತು. ಈ ಮಾದರಿ ಕನ್ನಡ ಭಾಷೆಯಲ್ಲದೆ ಕನ್ನಡ ಸಾಮಾಜಿಕ ಪರಿಸರದಲ್ಲಿ ಹೊಸ ಎಚ್ಚರವನ್ನು ಹುಟ್ಟುಹಾಕಿತು. ದಲಿತ ಚಳವಳಿಯ ಜೊತೆಜೊತೆಗೆ ನಡೆದ ಕಮ್ಯುನಿಸ್ಟ್ ಸೈದ್ಧಾಂತಿಕ ಹೋರಾಟಗಳು, ರೈತ ಹೋರಾಟಗಳೂ ದಲಿತ ಕಲಾಮಂಡಳಿ ಮಾದರಿಯನ್ನು ಅನುಸರಿಸಿದವು. ’ಇಪ್ಟಾ’ ಅಂಥ ಸಾಂಸ್ಕೃತಿಕ ಸಂಘಟನೆಗಳಲ್ಲೊಂದು. ಹಿ.ಶಿ.ರಾಮಚಂದ್ರೇಗೌಡರು ಬರೆದ ರೈತ ಹೋರಾಟಗೀತೆಗಳು, ಇಪ್ಟಾದ ಹೋರಾಟದ ಗೀತೆಗಳು ದಲಿತ ಸಂಘಟನೆಯ ಹಾಡುಗಳ ಮಾದರಿಯನ್ನು ಬಳಸಿಕೊಂಡವು. ಬಂಡಾಯ ಸಾಹಿತ್ಯ ಸಂಘಟನೆಯೂ ಈ ದಾರಿಯಲ್ಲಿ ಹೆಜ್ಜೆ ಹಾಕಿತು. ಅದಾಗಲೇ ಪ್ರಾರಂಭವಾದ ’ದಲಿತ ವಿದ್ಯಾರ್ಥಿ ಒಕ್ಕೂಟ’ದಂತಹ ಯುವಜನರ ಸಂಘಟನೆಗಳೂ ಆಗ ಪ್ರಾರಂಭಗೊಂಡವು.

ಕನ್ನಡ ಭಾಷಿಕ ಹೋರಾಟಗಾರರೂ ದಲಿತ ಚಳವಳಿಯ ಮಾದರಿಗಳನ್ನು ಬಳಸಿಕೊಳ್ಳತೊಡಗಿದರು. ದಲಿತ ಸಂಘರ್ಷ ಸಮಿತಿ ಆಯೋಜಿಸುತ್ತಿದ್ದ ಅಧ್ಯಯನ ಶಿಬಿರಗಳು, ಹಾಡುಗಾರರ ಕಮ್ಮಟಗಳು, ಕರಪತ್ರ- ಕಿರು ಹೊತ್ತಿಗೆಗಳು ಸಮಕಾಲೀನ ಚಳವಳಿಯ ಮಾದರಿಯಾದವು. ಇದು ಕನ್ನಡ ನಾಡನ್ನು ಪ್ರತಿಭಟನಾತ್ಮಕ ಎಚ್ಚರದಲ್ಲಿ ನಡೆಯುವಂತೆ ಮಾಡಿತು. ಇದಾದ ನಂತರ ಮೈಸೂರು ಭಾಗದಲ್ಲಿ ಗರಿಗೆದರಿದ ’ಬಹುಜನ ವಿದ್ಯಾರ್ಥಿ ಸಂಘ’ಕ್ಕಾಗಿ ಹನಸೋಗೆ ಸೋಮಶೇಖರ್ ರೀತಿಯ ಹೊಸ ಕವಿಗಳು ಬರೆದ ಬಹುಜನ ಗೀತೆಗಳು ಕರ್ನಾಟಕದ ಹೋರಾಟ ಪರಂಪರೆಯಲ್ಲಿ ಪ್ರಮುಖ ಮೈಲಿಗಲ್ಲು. ಈ ಗೀತೆಗಳಿಗೆ ಹಾಕಿದ ರಾಗಗಳು ಹೊಸಕಾಲದ ಸಾಂಸ್ಕೃತಿಕ ಒಳಗೊಳ್ಳುವಿಕೆಗೆ ಸಾಕ್ಷಿಯಾಗಿದ್ದರಿಂದ ಜಾತಿವಿನಾಶದ ನೂತನ ಚಳವಳಿಗೆ ದಲಿತರಲ್ಲದೆ ಹಿಂದುಳಿದ ಜಾತಿಗಳ ಹೊಸ ಯುವಜನರನ್ನು ಸೆಳೆಯಲು ಕಾರಣವಾಯಿತು. ಈ ಸಮಯದಲ್ಲಿ ಕರ್ನಾಟಕದಲ್ಲಿ ನಡೆದ ’ಬುದ್ಧನೆಡೆಗೆ ಮರಳಿ ಮನೆಗೆ’ ಕಾರ್ಯಕ್ರಮಗಳು, ನಾಲ್ವಡಿ ಕೃಷ್ಣರಾಜ ಒಡೆಯರ್, ನಾರಾಯಣ ಗುರು ಮತ್ತು ಟಿಪ್ಪೂ ಸುಲ್ತಾನರ ಮರು ಓದಿನ ಅಭಿಯಾನಗಳು ಕನ್ನಡ ಪ್ರಜ್ಞೆಗೆ ನೀಡಿದ ಕೊಡುಗೆ ದೊಡ್ಡದು. ಇವೆಲ್ಲಾ ಕನ್ನಡದ ದಲಿತ ಚಳವಳಿಯ ಪ್ರಾಮುಖ್ಯತೆಯನ್ನೂ, ಎಚ್ಚರದ ಅಗತ್ಯವನ್ನೂ ತೋರಿಸುತ್ತವೆ.

ದಲಿತ ಚಳವಳಿಯ ಕುರಿತು ನೇತ್ಯಾತ್ಮಕ ಅಭಿಪ್ರಾಯಗಳು ಮುನ್ನಲೆಯಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ಈ ಮೇಲಿನ ನೆನಪುಗಳೊಂದಿಗೆ ನಾವು ಗಮನಿಸಲೇಬೇಕಾದ ಇನ್ನೂ ಕೆಲವು ವಿಷಯಗಳಿವೆ. ಅದು ಪ್ರಭುತ್ವದ ನೆಲೆಯಲ್ಲಿ ಬ್ರಾಹ್ಮಣೇತರ ಸಮುದಾಯಗಳಿಗೆ ದಕ್ಕಿದ ಆರ್ಥಿಕ ಸವಲತ್ತುಗಳು. ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ನೂರಾರು ಬಡವರ ಪರವಾದ ಕಾರ್ಯಕ್ರಮಗಳು ಚಾಲ್ತಿಗೆ ಬರಲು ನೇರ ಕಾರಣ ದಲಿತ ಹೋರಾಟಗಾರರು. ಇದೇ ಇಲಾಖೆ ಕೆಳಗೆ ಹಾಲಿ ಕೆಲಸ ನಿರ್ವಹಿಸುತ್ತಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮವೂ ಸೇರಿದಂತೆ ಹತ್ತಾರು ನಿಗಮ ಮಂಡಳಿಗಳು ತಮ್ಮ ಮಿತಿಗಳ ನಡುವೆಯೂ ತಳ ಸಮುದಾಯಗಳ ಆರ್ಥಿಕ ಸಬಲೀಕರಣಕ್ಕೆ ಮಹತ್ತರವಾದ ಕೊಡುಗೆ ನೀಡಿವೆ, ನೀಡುತ್ತಿವೆ. ರಾಜ್ಯದ ನೂರಾರು ವಿದ್ಯಾರ್ಥಿ/ನಿ ನಿಲಯಗಳಲ್ಲಿ ಇಂದು ಹೊಟ್ಟೆತುಂಬಾ ಊಟ ಮಾಡುತ್ತಿರುವ ವಿದ್ಯಾರ್ಥಿಗಳು ದಲಿತ ಚಳವಳಿಯನ್ನು ನೆನೆಯಬೇಕಿದೆ ಮತ್ತಿದು ಕೇವಲ ದಲಿತ ಯುವಜನರಿಗಲ್ಲದೆ ಎಲ್ಲಾ ಸಮುದಾಯಗಳ ಯುವಜನರಿಗೆ ಅನುಕೂಲವಾಗಿದೆ.

ಇವೆಲ್ಲವೂ ದಲಿತ ಚಳವಳಿ ತಾನು ಬದುಕುತ್ತಿರುವ ಮತ್ತು ಸಮಾನ ಬದುಕನ್ನು ಇಂದಿಗೂ ಕನಸುತ್ತಿರುವ ಸಾಮಾಜಿಕ ಪರಿಸರದಲ್ಲಿ ಉಂಟುಮಾಡಿದ ಬದಲಾವಣೆಯಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ದಲಿತ ಚಳವಳಿ ಹೆಚ್ಚು ಭಾಗಗಳಾಗಿದ್ದರೂ, ಕನ್ನಡ ನೆಲದಲ್ಲಿ ನಡೆಯುತ್ತಿರುವ ಎಲ್ಲಾ ಮಾನವಪರ ಹೋರಾಟಗಳಲ್ಲಿ ಆಸ್ಥೆಯಿಂದ ಭಾಗಿಯಾಗಿದೆ. ರೈತ, ಕಾರ್ಮಿಕ, ಮಹಿಳಾ ಹೋರಾಟಗಳಲ್ಲಿ, ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಳಲ್ಲಿ ಹಾಗೂ ಭಾಷಾ ಹೋರಾಟಗಳಲ್ಲಿ ಎಪ್ಪತ್ತರ ದಶಕದ ಹೋರಾಟದ ಪಂಜುಗಳನ್ನಿಡಿದು ಬೆಳಕು ಹುಡುಕಿದ ಹಿರಿ- ಕಿರಿಯರು ಭಾಗವಹಿಸುತ್ತಿದ್ದಾರೆ. ಇಂಥದ್ದೊಂದು ಸಮನ್ವಯವನ್ನು ಇವತ್ತು ಕನ್ನಡ ನಾಡು ಸಾಧಿಸಿದೆಯೆಂದರೆ ಅದು ಕನ್ನಡನಾಡಿಗೆ ದಲಿತ ಚಳವಳಿಯ ಕೊಡುಗೆಯಾಗಿದೆ.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರದ ಹುಲಿಕುಂಟೆಯವರು. ಕನ್ನಡ ಅಧ್ಯಾಪಕರು. ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಅವರ ಕವನಸಂಕಲನ. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಒಡಲಿನಾಳದಿಂದ ಬಂದ ಅರಿವಿನ ಆಸ್ಫೋಟವೇ; ದಲಿತ ಚಳುವಳಿ ಮತ್ತು ಅಂಬೇಡ್ಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...