Homeಕರ್ನಾಟಕಸರ್ಕಾರದ ಆದೇಶದ ಹೊರತಾಗಿಯೂ ಸ್ಥಳಾಂತರವಾಗದ ಸಕ್ಕರೆ ನಿರ್ದೇಶನಾಲಯ; ಆಯುಕ್ತರು ಹೇಳಿದ್ದೇನು?

ಸರ್ಕಾರದ ಆದೇಶದ ಹೊರತಾಗಿಯೂ ಸ್ಥಳಾಂತರವಾಗದ ಸಕ್ಕರೆ ನಿರ್ದೇಶನಾಲಯ; ಆಯುಕ್ತರು ಹೇಳಿದ್ದೇನು?

- Advertisement -
- Advertisement -

ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರು ಮತ್ತು ಸಕ್ಕೆರೆ ಕಾರ್ಖಾನೆಗಳ ಬಹುಕಾಲದ ಬೇಡಿಕೆಯನ್ನು ಮನ್ನಿಸಿರುವ ಸರ್ಕಾರ, ‘ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ’ವನ್ನು ಬೆ೦ಗಳೂರಿನಿ೦ದ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಅಕ್ಟೋಬರ್‌ 1 ರಿ೦ದ ಜಾರಿಗೆ ಬರುವ೦ತೆ ಪೂರ್ಣ ಪ್ರಮಾಣದಲ್ಲಿ ಸ್ಥಳಾ೦ತರಿಸುವಂತೆ ಆದೇಶಿಸಿತ್ತು. ಆದರೆ ಸರ್ಕಾರ ಆದೇಶ ಹೊರಡಿಸಿ ತಿಂಗಳಾದರೂ ಸ್ಥಳಾಂತರದ ಸಲುವಾಗಿ ಯಾವುದೆ ಪ್ರಾಥಮಿಕ ಪ್ರಕ್ರಿಯೆಯು ನಡೆದಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿಫೈಲ್‌’ ವರದಿ ಮಾಡಿದೆ.

ಸರ್ಕಾರವು ‘ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ’ಯವನ್ನು ಪೂರ್ಣ ಪ್ರಮಾಣದಲ್ಲಿ ಬೆಳಗಾವಿಗೆ ಸ್ಥಳಾಂತರಿಸುವ ಬಗ್ಗೆ ಸೆಪ್ಟೆಂಬರ್‌ 30 ರಂದು ಆದೇಶ ಹೊರಡಿಸಿತ್ತು. ಜೊತೆಗೆ ಅಕ್ಟೋಬರ್‌ 8 ರಿಂದ ಬೆಳಗಾವಿಯಲ್ಲಿ ಕಚೇರಿ ಕಾರ್ಯಾರಂಭಿಸಲಿ ಎಂದು ಕೂಡಾ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆಯು ನೀಡಿದ್ದರು. ಆದರೆ ಆದೇಶ ನೀಡಿ ಒಂದು ತಿಂಗಳಾದರೂ ಸ್ಥಳಾಂತರದ ಯಾವುದೆ ಪ್ರಕ್ರಿಯೆಗಳೂ ನಡೆದಿಲ್ಲ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ‘ದಿಫೈಲ್‌’ ವರದಿ ಮಾಡಿದೆ.

ಇದನ್ನೂ ಓದಿ: ಮೋದಿ ಚೀನಾ ಭಯಕ್ಕೆ ಚಹಾಗೆ ಚೀನಿ(ಸಕ್ಕರೆ) ಕೂಡಾ ಹಾಕುವುದಿಲ್ಲ: ಓವೈಸಿ ವ್ಯಂಗ್ಯ

ಉತ್ತರ ಕರ್ನಾಟಕ ಅಭಿವೃದ್ದಿಯ ಉದ್ದೇಶದಿಂದ ಕೆಲವು ಸರ್ಕಾರಿ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸುವ ಪಟ್ಟಿಯಲ್ಲಿ ರಾಜ್ಯ ಸರ್ಕಾರವು 2019 ಜನವರಿ 10 ರಂದು ‘ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ’ವನ್ನು ಸೇರಿಸಿತ್ತು. ಆದರೆ 2019 ರ ಸೆಪ್ಟೆಂಬರ್‌ 7 ರಂದು ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರು, ನಿರ್ದೇಶನಾಯಲವನ್ನು ಬೆಳಗಾವಿಗೆ ಸ್ಥಳಾಂತರಿಸದೆ ಬೆಂಗಳೂರಿನಲ್ಲೇ ಉಳಿಸಿಕೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.

ಇದರ ನಂತರ, ಸ್ಥಳಾಂತರವಾಗಬೇಕಾದ ಎಲ್ಲಾ ಕಚೇರಿಗಳು 2019 ಅಕ್ಟೋಬರ್‌ ಅಂತ್ಯದೊಳಗೆ ಸ್ಥಳಾಂತರಗೊಳ್ಳಬೇಕು ಎಂದು 2019 ರ ಸೆಪ್ಟೆಂಬರ್‌ 23 ರಂದು ‘ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ’ಯಿಂದ ಅಧಿಸೂಚನೆ ಹೊರಡಿಸಲಾಗಿತ್ತು.

ಈ ನಡುವೆ ಕಬ್ಬು ನಿಯಂತ್ರಣ ಮಂಡಳಿಯ ತೀರ್ಮಾನದಂತೆ ಕಬ್ಬು ಅಭಿವೃದ್ಧಿ, ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಲ್ಲಿಯೇ ಉಳಿಸಿಕೊ೦ಡು ಬೆಳಗಾವಿಯಲ್ಲಿ ಒಂದು ಪ್ರಾಂತೀಯ ಕಚೇರಿ ತೆರೆಯಲು ಸರ್ಕಾರವು ಪರಿಶೀಲನೆ ನಡೆಸಿತ್ತು.

ಇದನ್ನೂ ಓದಿ: ಸಕ್ಕರೆ ಕಾರ್ಖಾನೆ ಮಾಲೀಕರಿಗೆ ‘ನಾಡೋಜ’: ಹಂಪಿ ವಿವಿ ಮೌಲ್ಯ ಕುಸಿತ ಎಂದ ಹಿರಿಯರು

ಇದರ ನಡುವೆ ಕಚೇರಿ ಸ್ಥಳಾಂತರಗೊಳ್ಳದ ಕುರಿತು ಎರೆಡೆರೆಡು ರಿಟ್ ಅರ್ಜಿ ಕೂಡಾ ಸಲ್ಲಿಕೆಯಾಗಿತ್ತು. ಹಲವಾರು ಬೆಳವಣಿಗೆ ನಡೆದು ಕೊನೆಗೆ ಕೃಷಿಕರು, ಜನರ ಮನವಿಯನ್ನು ಪರಿಗಣಿಸಿ ಅನಿವಾರ್ಯವಾಗಿ ರಾಜ್ಯ ಸರ್ಕಾರ 2021 ರ ಸೆಪ್ಟೆಂಬರ್‌ 30 ರಂದು ಅಕ್ಟೋಬರ್‌ 30 ರ ಒಳಗೆ ‘ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯ’ ಕಚೇರಿಯನ್ನು ಪೂರ್ಣ ಪ್ರಮಾಣದಲ್ಲಿ ಸ್ಥಳಾ೦ತರಿಸುವಂತೆ ಆದೇಶ ಹೊರಡಿಸಿತ್ತು. ಆದರೆ ಸರ್ಕಾರದ ಆದೇಶದ ಹೊರತಾಗಿಯು ಯಾವುದೇ ಬೆಳವಣಿಗೆ ಆಗಿಲ್ಲ ಎಂದು ವರದಿಯಾಗಿಲ್ಲ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕಬ್ಬು ಅಭಿವೃದ್ಧಿ ಆಯುಕ್ತರು ಹಾಗೂ ಸಕ್ಕರೆ ನಿರ್ದೇಶಕರು ಶಿವಾನಂದ ಎಚ್. ಕಲಕೇರಿ, “ಕಚೇರಿಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಅವರು ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ ಅವರು, “ಈ ಕಾರ್ಯಾಲಯವು 1973ರಿಂದ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ರೀತಿಯ ರಾಜ್ಯ ಮಟ್ಟದ ದೊಡ್ಡ ಕಚೇರಿಯನ್ನು ತಕ್ಷಣ ಸ್ಥಳಾಂತರಿಸಲು ಹಲವು ಅಡೆತಡೆಗಳಿರುತ್ತವೆ. ನಿತ್ಯವೂ ನಡೆಯುವ ಕಚೇರಿಯ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡೇ ಹಂತ ಹಂತವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ತಾತ್ಕಾಲಿಕವಾಗಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಕಚೇರಿ ಆರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ.

“ಕಚೇರಿಯನ್ನು ಪೂರ್ಣ ಪ್ರಮಾಣದಲ್ಲಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಸುವರ್ಣ ವಿಧಾನಸೌಧದ ಎಇ ಜೊತೆ ಚರ್ಚಿಸಲಾಗಿದೆ. ಸ್ಥಳವನ್ನೂ ಗುರುತಿಸಲಾಗಿದೆ. ಅಲ್ಲದೆ ತಾತ್ಕಾಲಿಕ ಕಚೇರಿಯಲ್ಲಿ ಶಾಶ್ವತವಾಗಿ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ವಾರದಲ್ಲಿ ಒಂದೆರಡು ದಿನ ಒಂದಿಬ್ಬರನ್ನು ನಿಯೋಜಿಸಲಾಗುತ್ತಿದೆ. ನಾನೂ ಕೆಲವು ದಿನಗಳು ಪ್ರವಾಸ ಕೈಗೊಂಡಿದ್ದೇನೆ. ಬೆಂಗಳೂರಿನ ಕಚೇರಿಯಲ್ಲಿ 1.36 ಲಕ್ಷ ಫೈಲ್‌ಗಳ ದಾಸ್ತಾನು ಕಾರ್ಯ ಪ್ರಗತಿಯಲ್ಲಿದೆ. ಅದು ಮುಗಿದ ತಕ್ಷಣ ಕಚೇರಿಯನ್ನು ಪೂರ್ಣ ಪ್ರಮಾಣದಲ್ಲಿ ಬೆಳಗಾವಿಗೆ ಸ್ಥಳಾಂತರಿಸಲಾಗುವುದು. ಅಷ್ಟೊಂದು ಫೈಲ್‌ಗಳ ಪೂರ್ಣ ದಾಸ್ತಾನಿಗೆ ಸುಮಾರು ಮೂರು ತಿಂಗಳು ಕಾಲಾವಕಾಶ ಬೇಕಾಗಬಹುದು” ಎಂದು ಅವರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಹಳಿಯಾಳ: ಕಬ್ಬು ಬೆಳೆಗಾರರನ್ನು ಜಲ್ಲೆ ಮಾಡುತ್ತಿರುವ ’ಪ್ಯಾರಿ ಸಕ್ಕರೆ’ ದೊರೆಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಾನವತಾವಾದಿ’ ಸಂವಿಧಾನವನ್ನು ‘ಮನುವಾದಿ’ ಮಾಡಲು ಹೊರಟಿದ್ದಾರೆ: ಪ್ರೊ. ನರೇಂದ್ರ ನಾಯಕ್

0
'ನಮ್ಮ ಸಂವಿಧಾನವೇ ನಮಗೆ ಅಂತಿಮ; ಈಗ ಅವರು ಅದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಮಾನವತಾವಾದಿ ಸಂವಿಧಾನವನ್ನು ಈಗ ಮನುವಾದಿ ಸಂವಿಧಾನ ಮಾಡಲು ಹೊರಟಿದ್ದಾರೆ' ಎಂದು ಭಾರತೀಯ ವಿಚಾರವಾದಿಗಳ ಸಂಘಗಳ ಒಕ್ಕೂಟದ ಪ್ರೊಫೆಸರ್ ನರೇಂದ್ರ ನಾಯಕ್...