HomeUncategorized’ಉಸುರಿಗೆ ಒಂದು ಹೆಸರು ಕೊಟ್ಟು, ಹೆಸರಿಗೆ ಒಂದು ಕುಸುರಿ ಕೊಟ್ಟು’

’ಉಸುರಿಗೆ ಒಂದು ಹೆಸರು ಕೊಟ್ಟು, ಹೆಸರಿಗೆ ಒಂದು ಕುಸುರಿ ಕೊಟ್ಟು’

- Advertisement -
- Advertisement -

ಜರ್ಮನಿಯ ಡ್ಯೂಷ ವಿಜ್ಞಾನ ವಸ್ತುಸಂಗ್ರಹಾಲಯದ ಬಗ್ಗೆ ಒಂದು ಜೋಕು ಐತಿ.

ಅದನ್ನ ನೋಡಲಿಕ್ಕೆ ಬಂದ ಒಬ್ಬ ಸಾಲಿ ಹುಡುಗ ಅಲ್ಲೆ ಇರುವ ಮೈಕೆಲ್ ಸೇಂದಿವೋಗಿಯಸ್ ಹಾಗೂ ಆಂಟೋನಿ ಲವೊಸಯಿಯರ ಅವರ ಚಿತ್ರಪಟ ನೋಡಿ ಗಾಬರಿ ಆಗಿಬಿಟ್ಟನಂತ. “ಅಯ್ಯೋ ಯಪ್ಪ, ಇವರು ಹುಟ್ಟುವದಕ್ಕಿಂತ ಮೊದಲು ನಾವು ಹೆಂಗ ಉಸರಾಟ ಮಾಡ್ತಾ ಇದ್ದೆವೋ ಏನೋ?” ಅಂತ. ಪೋಲಂಡ್‌ನ ವಿಜ್ಞಾನಿ ಮೈಕೆಲ್ ಅವರು ಗಾಳಿ ಒಳಗ ಮನುಷ್ಯ ಉಸರಾಟ ಮಾಡಲಿಕ್ಕೆ ಅನುಕೂಲ ಆಗುವ ಹವೆ ಒಂದು ಐತಿ

ಅಂತ ಸುಮಾರು 1605ಕ್ಕ ಕಂಡುಹಿಡದರು.

ಅದನ್ನ ಜೀವಾಹಾರ ಅಂತ ಕರಿಯಬಹುದು ಅಂತ ಹೇಳಿದರು.
ಅವರ ಆದ ಮ್ಯಾಲೆ 170 ವರ್ಷ ನಂತರ ಹುಟ್ಟಿದ ಸ್ವೀಡನ್ ದೇಶದ ಅಂಟೋನಿ ಅವರು ಅದಕ್ಕ ಆಮ್ಲಜನಕ ಅಂತ ಹೆಸರು ಇಟ್ಟರು. ಅದು ಯಾಕ್ ಅಂದ್ರ ಅದಕ್ಕ ನೀರು, ಅಥವಾ ಇತರ ದ್ರವ ಸೇರಿಸಿದರ ಅದು ಆಮ್ಲೀಯ ಗುಣ ಪಡೆದುಕೊಳ್ಳುತ್ತದ ಅಂತ ಹೇಳಿ.

ಆ ಹುಡುಗನ ಮತಿನಾಗ ಜೋಕು ಎನಪಾ ಅಂದ್ರ ಆ ವಿಜ್ಞಾನಿಗಳು ಆಮ್ಲಜನಕವನ್ನು ಸೃಷ್ಟಿ ಮಾಡಲಿಲ್ಲ. ಅದನ್ನು ಗುರುತಿಸಿದರು, ಅದಕ್ಕ ಹೆಸರು ಇಟ್ಟರು.

ಕವಿಗೆ ಏನು ಕೆಲಸ ಅಂತ ಕೇಳಿದಾಗ ಬೇಂದ್ರೆ ಅವರು ಹೇಳಿದರಂತ.

“ಕುದುರಿಯವರು ಬಂದಾರವ್ವಾ, ಕುದುರಿಯವರು ಬಂದಾರ, ಉಸುರಿಗೆ ಒಂದು ಹೆಸರು ಕೊಟ್ಟು, ಹೆಸರಿಗೆ ಒಂದು ಕುಸುರಿ ಕೊಟ್ಟು, ಏನೇನೋ ಅಂದರವ್ವಾ, ಕುದುರಿಯವರು ಬಂದಾರ”.

ಈ ಪ್ರಕರಣದೊಳಗ ನಾವು ಮೈಕಲ್ ಅವರದು ಒಂದು ಕುದುರಿ, ಅಂಟೋನಿ ಅವರದು ಇನ್ನೊಂದು ಕುದುರಿ ಅಂತ ತಿಳಕೋಬಹುದು. ಅವರ ಸಂಶೋಧನೆ ಏನು ಅಂದ್ರ ಆಮ್ಲಜನಕದ ಗುಣ ಗುರುತು ಹಚ್ಚಿದ್ದು, ಮತ್ತು ಅದಕ್ಕ ಹೆಸರು ಕೊಟ್ಟಿದ್ದು. ಏನೇನೋ ಅಂದರವ್ವಾ ಅಂದ್ರ ಇಷ್ಟ ಮತ್ತ.

ಇವರು ಇಬ್ಬರು 17-18ನೆ ಶತಮಾನದೊಳಗ ಈ ಸಂಶೋಧನೆ ಮಾಡದೇ ಹೋಗಿದ್ದರೆ ನಾವು ಎಲ್ಲಾ ಏನು ಉಸಿರಾಡಿಸಬೇಕಿತ್ತು? ಅಥವಾ ಅದಕ್ಕಿಂತ ಮುಂಚಿನ ಮನುಷ್ಯರೆಲ್ಲಾ ಏನು ಉಸಿರಾಡುತ್ತಾ ಇದ್ದರು ಅನ್ನುವುದು ನಮ್ಮ ತಲಿ ಒಳಗ ಬರೋದು ಸಹಜ. ಇಂತಹ ಸಂದೇಹಗಳು ಈಗಲೂ ನಮ್ಮ ಜನರಿಗೆ ಕಾಡಲಿಕ್ಕೆ ಹತ್ತಿಬಿಟ್ಟಾವು.

ಈಗ ದೇಶಾದ್ಯಂತ ಆಮ್ಲಜನಕ ಕೊರತೆ ಐತಿ. ನಾವು ಉಸಿರು ಆಡುವ ಗಾಳಿ ಒಳಗ ಬೇಕಾದಷ್ಟು ಆಮ್ಲಜನಕ ಇದ್ದರೂ ಕೂಡ ಕೊರೊನಾ ರೋಗಿಗಳಿಗೆ ಅದು ಸಾಲೋದಿಲ್ಲಾ. ಅವರಿಗೆ ಬರೆ ಶುದ್ಧ ಆಮ್ಲಜನಕ ಬೇಕಾಗತದ.
ಇದು ಎರಡು ಮೂರು ರೀತಿಯಿಂದ ಸಿಗತದ. ಮನಿಯೊಳಗ ಇರೋ ರೋಗಿಗಳು ಸಾಂದ್ರ ಆಮ್ಲಜನಕ ತಯಾರಕ ಯಂತ್ರ ಇಟ್ಟುಕೋತಾರ. ಆಸ್ಪತ್ರೆಯೊಳಗ ಇರೋ ರೋಗಿಗಳಿಗೆ ಆಮ್ಲಜನಕದ ಸಿಲಿಂಡರ್ ಬೇಕಾಗತದ. ಇದು ಪ್ರತಿ ಹಾಸಿಗೆ ಪಕ್ಕದಾಗ ಇರಬಹುದು, ಅಥವಾ ಇಡೀ ಆಸ್ಪತ್ರೆಗೆ ಒಂದು ದೊಡ್ಡ ಯಂತ್ರ ಇದ್ದು, ಅದರಿಂದ ಪ್ರತಿ ಹಾಸಿಗೆಗೆ ನಳಿಕೆಯಿಂದ ಪೂರೈಕೆ ಆಗಬಹುದು.

ಇವು ಎರಡೂ ಈಗ ಕಮ್ಮಿ ಅಗಿಬಿಟ್ಟಾವ. ಯಾಕ್ ಅಂದ್ರ ಪೂರೈಕೆಗಿಂತ ಬೇಡಿಕೆ ಹೆಚ್ಚು ಆಗಿಬಿಟ್ಟದ. ಇದು ಅರ್ಥಶಾಸ್ತ್ರದ ಮೂಲ ನಿಯಮಗಳಲ್ಲಿ ಒಂದು.

ಕೊರೊನಾ ವೈರಸ್‌ನ ಎರಡನೇ ಅಲೆ ಶುರು ಆದ ಮೇಲೆ ಈ ಕೊರತೆ ಆಗೆತಿ. ಮೊದಲನೇ ಅಲೆ ಒಳಗ ಬಹಳ ಜನರಿಗೆ ರೋಗಲಕ್ಷಣ ಇರಲಿಲ್ಲ. ಹಾಗೂ ಈಗ ನಾವು ಈ ಸೋಂಕಿಗೆ ಯಾರನ್ನ ಬಯ್ಯಬೇಕು ಅನ್ನೋ ಚಿಂತನೆ ಒಳಗ ಇದ್ದೀವಿ.

ನಾಳೆ ಇದು ಹೆಚ್ಚು ಆದರ ನಮಗ ಯಾವುದರ ಕೊರತೆ ಆಗಬಹುದು ಅಂತ ತಿಳಕೊಂಡಿದ್ದರ ಈ ಪರಿಸ್ಥಿತಿ ಬರ್ತಾ ಇರಲಿಲ್ಲ. ಅಂದ್ರ ಒಬ್ಬ ವಿದ್ಯಾರ್ಥಿ ಎಂಟನೇ ಇಯತ್ತೆ ಪಾಸು ಮಾಡಿ ಒಂಬತ್ತನೇ ಇಯತ್ತೆಗೆ ಬಂದಾಗ ಎಂಟನೇ ಇಯತ್ತೆಯ ಪಾಠಗಳು ಒಂದಾದರೂ ನೆನಪು ಇರಬೇಕು, ಅಲ್ಲವೇ?

ಓದಿ, ಬರೆದು, ಪಾಸು ಆಗಿದ್ದರ ಅವರಿಗೆ ನೆನಪು ಇರ್ತದ. ಕೊರೊನಾ ಪಾಸು ಆದರ ಇರೋದಿಲ್ಲ. ನಮ್ಮ ಸರಕಾರಗಳಿಗೂ ಅಷ್ಟ. ಅವರು ಮೊದಲನೇ ಅಲೆಯೊಳಗ ಜನರಿಗೆ ಅನುಕೂಲ ಮಾಡಿಕೊಟ್ಟು, ರೋಗ ನಿಯಂತ್ರಣ ಮಾಡಿದ್ದರ ಎನರ ಪಾಠ ಕಲಿತಾ ಇದ್ದರು. ಅವರೂ ಕೈ ಝಾಡಿಸಿ, ದೂರ ನಿಂತು ಬರೆ ರೇಡಿಯೋ ಭಾಷಣ ಮಾಡಿದ್ದಕ್ಕ ಅವರಿಗೂ ನೆನಪು ಇಲ್ಲ.

ಅಂದಹಾಗೆ ಆಮ್ಲಜನಕ ತಯಾರಿ ಅಂದ್ರ ಉಪಗ್ರಹ ಉಡಾವಣೆಯಷ್ಟು ಸಂಕೀರ್ಣ ವಿಷಯ ಏನೂ ಅಲ್ಲ. ಅದಕ್ಕೆ ದೊಡ್ಡದೊಡ್ಡ ದುಬಾರಿ ಯಂತ್ರ ಬೇಕಾಗಿಲ್ಲ. ಅದನ್ನು ಸಕ್ಕರೆ ಕಾರ್ಖಾನೆಗಳ ಬಾಯಿಲರ್‌ಗಳಿಂದ ತಯಾರು ಮಾಡಬಹುದು. ಇಡೀ ದೇಶದಲ್ಲಿ ಎರಡನೇ ಅತಿಹೆಚ್ಚು ಸಕ್ಕರೆ ಕಾರಖಾನೆ ಹೊಂದಿರುವ ಮಹಾರಾಷ್ಟ್ರ ಸರಕಾರ ತನ್ನ ಸಕ್ಕರೆ ಕಾರಖಾನೆಗಳಿಂದ ಆಮ್ಲಜನಕ ತಯಾರು ಮಾಡಿಸುತ್ತಾ ಇದೆ.

ಇಡೀ ದೇಶದಲ್ಲಿ 732 ಸಕ್ಕರೆ ಕಾರ್ಖಾನೆ ಅದಾವು. ಅವು ಒಂದು ದಿನಕ್ಕ ಸರಾಸರಿ 70 ಟನ್ ಆಮ್ಲಜನಕ ತಯಾರು ಮಾಡಿದರ 1464 ಟನ್ ಆಮ್ಲಜನಕ ದೇಶದ ರೋಗಿಗಳಿಗೆ ಸಿಗತದ. ಆದರ ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಇರುವ ಉತ್ತರ ಪ್ರದೇಶ ಹಾಗೂ ಕಬ್ಬು ಬೆಳೆಯುವ ಹರಿಯಾಣ, ಗೋವಾ, ಕರ್ನಾಟಕ ಮುಂತಾದ ರಾಜ್ಯಗಳ ಸರ್ಕಾರಗಳು ನಮಗೆ ಆಮ್ಲಜನಕ ಕೊರತೆ ಇಲ್ಲ, ನಮಗ ಈಗ ಏನು ಬೇಕಾಗಿಲ್ಲ ಅಂತ ಹೇಳಿ ಬಿಟ್ಟಾವು. ಈಗ ಏನು ಮಾಡ್ತೀರಿ? ರೊಟ್ಟಿ ಬ್ಯಾಡ ಅಂದವರಿಗೆ ಹೋಳಿಗೆ ತಿನ್ನಸಲಿಕ್ಕೆ ಆಗತದ?
ಇನ್ನೊಂದು ವಿಷಯ ಅಂದ್ರ ಕೊರೊನಾ ನಿವರ್ಹಹಣೆ ಒಳಗ ನಮ್ಮ ದೇಶದ ಅಡಳಿತದ ಒಂದು ಹುಳುಕು ಹೊರಗ ಬಂದದ. ಅದು ಎನಪ ಅಂದ್ರ ಅನಗತ್ಯ ಕೇಂದ್ರೀಕರಣ.

ಒಂದು ನೂರ ಮೂವತ್ತು ಕೋಟಿ ಜನಸಂಖ್ಯೆಯ ದೇಶದೊಳಗ ಎಲ್ಲ ನಿರ್ಧಾರಗಳನ್ನು ದೆಹಲಿಯ ಕೆಲವೇ ಕೆಲವು ಜನ ತೊಗೊಳ್ಳೋದು ಕಾರ್ಯಸಾಧು ಅಲ್ಲ. ಆದರ ಕಳೆದ ಏಳು ವರ್ಷಗಳಿಂದ ಹಂಗನ ನಡದದ. ಆಮ್ಲಜನಕದ ಕತಿನೂ ಹಂಗ. ಇಡೀ ದೇಶಕ್ಕೆ ಆಮ್ಲಜನಕ ಎಷ್ಟು ಬೇಕು ಅನ್ನೋದನ್ನ ಕೇಂದ್ರದ ಕೆಲವು ರಾಜಕಾರಣಿಗಳು-ಅಧಿಕಾರಿಗಳು ನಿರ್ಧಾರ ಮಾಡತಾರ. ಎಲ್ಲಾ ಮಾರಾಟಗಾರರಿಂದ ಸಂಪೂರ್ಣ ಖರೀದಿ ಅವರೇ ಮಾಡತಾರ. ಪ್ರತಿ ರಾಜ್ಯಕ್ಕ ಎಷ್ಟು ಬೇಕು ಅನ್ನೋದು ಅವರೇ ನಿಗದಿ ಮಾಡಿ ಕಳಸತಾರ. ಇದರಾಗ ಎಪ್ರಾ ತಪ್ರಾ ಆಗತದ. ಹೆಚ್ಚು ಕೇಸು ಇರೋ ರಾಜ್ಯಗಳಿಗೆ ಕಮ್ಮಿ, ಕಮ್ಮಿ ಕೇಸು ರಾಜ್ಯಗಳಿಗೆ ಹೆಚ್ಚು ಆಮ್ಲಜನಕ ಸಿಕ್ಕದ. ದೆಹಲಿಗೆ ಹತ್ತಿರ ಇರೋ ರಾಜ್ಯಗಳಿಗೆ ಸಹಜವಾಗಿ ಹೆಚ್ಚು ಆಮ್ಲಜನಕ ಸಿಕ್ಕು, ದೆಹಲಿಯಿಂದ ದೂರ ಇದ್ದ ರಾಜ್ಯಗಳಿಗೆ ಕಮ್ಮಿ ಸಿಕ್ಕದ.

ಇದನ್ನ ಪ್ರಶ್ನೆ ಮಾಡುವ, ಇದರ ಹಿಂದಿನ ಕೇಂದ್ರೀಕರಣದ ಸೂತ್ರದ ಅನಾನುಕೂಲತೆಯ ಬಗ್ಗೆ ಮಾತಾಡುವ ಬುದ್ಧಿಜೀವಿಗಳು ಯಾರು ಉಳಿದಿಲ್ಲ. ಹೆಚ್ಚು ವಯಸ್ಸಿನವರನ್ನ ಕೊರೊನಾ ಪೀಪಿಯಿ ಕಿಟ್ಟಿನಾಗ ಸುತ್ತಿ ಕರಕೊಂಡು ಹೋಗಿ ಬಿಟ್ಟೆತಿ. ಸಣ್ಣ ವಯಸ್ಸಿನವರು ಹೆದರಿಕೊಂಡು ಕೂತಾರ. ಹೆದರಲಾರದೆ ದನಿ ಎತ್ತಿದವರು ಜೈಲಿನೊಳಗ ಇದ್ದಾರ.

ಆಮ್ಲಜನಕದ ಸಂಶೋಧನೆಗೆ ಮುಂಚೆ ಜನ ಏನು ಉಸಿರು ಆಡ್ತಾ ಇದ್ದರೂ ಅಂತ ಸಣ್ಣ ಹುಡುಗರು ಕೇಳಿದರ, ಪಂಥ ಪ್ರಧಾನ ಸೇವಕರಿಗಿಂತ ಮುಂಚೆ ಈ ದೇಶವನ್ನ ಯಾರು ನಡೆಸುತ್ತಾ ಇದ್ದರು? ಇಲ್ಲೆ ಆಡಳಿತ ಅನ್ನೋದು ಇತ್ತೋ ಇಲ್ಲೋ ಅನ್ನೋ ಪ್ರಶ್ನೆಗಳನ್ನ ದೊಡ್ಡವರು ಕೇಳಾಕ ಹತ್ಯಾರ.

ಇದನ್ನ ಜೋಕು ಅಂತ ಹೇಳೋರು ಮಾತ್ರ ಯಾರೂ ಇರಲಾರದ ಹಂಗ ಆಗೇದ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಮಾಚಲ ಕಾಂಗ್ರೆಸ್​​ನಲ್ಲಿ ಎಲ್ಲವೂ ಸರಿಯಿದೆ: ಡಿಕೆ ಶಿವಕುಮಾರ್

0
ಬಣ ರಾಜಕೀಯದಿಂದ ಪತನವಾಗುವ ಹಂತ ತಲುಪಿದ್ದ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ಡಿ.ಕೆ ಶಿವಕುಮಾರ್ ರವಾನಿಸಿದ್ದಾರೆ. ಶಿಮ್ಲಾದಲ್ಲಿ ಗುರುವಾರ ಸಂಜೆ ವಿಕ್ರಮಾದಿತ್ಯ ಸಿಂಗ್ ಹಾಗೂ ಪ್ರತಿಭಾ ಸಿಂಗ್...