Homeಕರ್ನಾಟಕಜಾತಿ ಗಣತಿ ವರದಿಯ ಮೂಲ ಪ್ರತಿ ನಾಪತ್ತೆ!

ಜಾತಿ ಗಣತಿ ವರದಿಯ ಮೂಲ ಪ್ರತಿ ನಾಪತ್ತೆ!

- Advertisement -
- Advertisement -

ಹೆಚ್.ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯ ದತ್ತಾಂಶ ಆಧರಿಸಿ ಸಿದ್ದಪಡಿಸಿದ್ದ ವರದಿಯ ಮೂಲ ಪ್ರತಿ (ಹಸ್ತಪ್ರತಿ) ಆಯೋಗದ ಕಚೇರಿಯಿಂದ ನಾಪತ್ತೆಯಾಗಿದೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಸ್ವೀಕರಿಸುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಮೂಲ ಪ್ರತಿ ನಾಪತ್ತೆಯಾಗಿರುವ ವಿಷಯ ಮುನ್ನೆಲೆಗೆ ಬಂದಿದೆ.

ಮೂಲ ಪ್ರತಿ ನಾಪತ್ತೆ ಮತ್ತು ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದಿರುವ ಬಗ್ಗೆ 5 ಅಕ್ಟೋಬರ್‌ 2021ರಂದು ಆಯೋಗದ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸೀಲ್ಡ್ ಬಾಕ್ಸ್‌ನಲ್ಲಿ ಇದ್ದ ಹಸ್ತಪ್ರತಿ ಕಾಣೆಯಾಗಿದೆ ಎಂದು ಹೇಳಿದ್ದರು.

ನಿನ್ನೆ( ನ.23) ಈ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜಯಪ್ರಕಾಶ್‌ ಹೆಗ್ಡೆಯವರಿಗೆ ಪತ್ರ ಬರೆದಿದ್ದು, “2015 ರಲ್ಲಿ ಕರ್ನಾಟಕ ಸರ್ಕಾರ 180 ಕೋಟಿ ಖರ್ಚು ಮಾಡಿ ಮಾಡಿದ ಸಮೀಕ್ಷೆಯ ಮೂಲ ಪ್ರತಿಯೇ ಕಳೆದುಹೋಗಿರುವುದು ಹಾಗು ಲಭ್ಯವಿರುವ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯ ಸಹಿ ಇಲ್ಲದೆ ಇರುವುದು ಆಯೋಗದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದಿದ್ದಾರೆ.

“ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿ ನಂತರ ರಾಜಕೀಯ ಒತ್ತಡಕ್ಕೆ ಮಣಿದು ತನಿಖೆಯನ್ನೇ ಅರ್ಧಕ್ಕೆ ಕೈಬಿಟ್ಟಿರುವುದು ಆಶ್ಚರ್ಯದ ಸಂಗತಿ. ಈ ಕೂಡಲೇ ವರದಿ ನೈಜತೆಯ ಬಗ್ಗೆ ತನಿಖೆ ಮಾಡಬೇಕು ಹಾಗು ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

“ಮೂಲ ಪ್ರತಿ ಕಳೆದು ಹೋದರೆ ಯಾವ ಠಾಣೆಯಲ್ಲಿ ದೂರು ದಾಖಲಾಗಿದೆ? ಈ ಲೋಪಕ್ಕೆ ಕಾರಣರಾದ ಅಧಿಕಾರಿಯ ವಿರುದ್ಧ ಯಾವ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ? ಈ ಲೋಪ ಕುರಿತು ಸರಕಾರ ಕೂಡಲೇ ಸ್ಪಷ್ಟನೆ ನೀಡಬೇಕು” ಒತ್ತಾಯಿಸಿದ್ದಾರೆ.

ಯತ್ನಾಳ್ ಅವರು ತನ್ನ ಪತ್ರದ ಪ್ರತಿಯನ್ನು ಎಕ್ಸ್‌ನಲ್ಲಿ (ಟ್ವಿಟ್ಟರ್‌) ಪೋಸ್ಟ್‌ ಮಾಡಿದ್ದಾರೆ. ಇದರಿಂದ ವರದಿಯ ಮೂಲ ಪ್ರತಿ ನಾಪತ್ತೆ ವಿಚಾರ ಮುನ್ನೆಲೆಗೆ ಬಂದು ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಕಾಂತರಾಜು ಆಯೋಗ ಸಿದ್ದಪಡಿಸಿದ್ದ ವರದಿಯನ್ನು ಆಯೋಗದ ಕಚೇರಿಯಲ್ಲಿ ನಾಲ್ಕು ಪೆಟ್ಟಿಗಳಲ್ಲಿ ಭದ್ರವಾಗಿ ಇಟ್ಟಿತ್ತು. ಈ ವರದಿಯ ಮೂಲ ಪ್ರತಿ ನಾಪತ್ತೆಯಾಗಿದೆ. ಲಭ್ಯವಿರುವ ಮೂಲ ಪ್ರತಿಯ ನಕಲು ಪ್ರತಿಯಲ್ಲಿ ಕಾಂತರಾಜು ಮತ್ತು ಎಲ್ಲಾ ಸದಸ್ಯರ ಸಹಿಯಿದೆ. ಆದರೆ, ಅಂದಿನ ಸದಸ್ಯ ಕಾರ್ಯದರ್ಶಿ ಎನ್‌.ವಿ ಪ್ರಸಾದ್ ಅವರ ಹೆಸರಷ್ಟೇ ನಮೂದಿಸಲಾಗಿದ್ದು, ಸಹಿ ಇಲ್ಲ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ : ಜಾತಿ ಜನಗಣತಿ ವರದಿ ಕೊಡುವ ಮುನ್ನವೇ ವಿರೋಧಿಸುವುದೇಕೆ: ಸಿಎಂ ಸಿದ್ದರಾಮಯ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...