ಕಲ್ಕತ್ತಾ ಡ್ರಗ್ಸ್ ಪ್ರಕರಣದಲ್ಲಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್‌ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇತ್ತೀಚೆಗೆ ಈ ಪ್ರಕರಣದಲ್ಲಿ ಬಿಜೆಪಿ ಯುವಮೋರ್ಚಾದ ನಾಯಕಿ ಪಮೇಲಾ ಗೋಸ್ವಾಮಿ ಮತ್ತು ಇನ್ನಿಬ್ಬರನ್ನು ಬಂಧಿಸಲಾಗಿದ್ದು, ಕೊಕೆನ್ ಸಾಗಾಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಬಂಧನದ ನಂತರ ಪಮೇಲಾ ಗೋಸ್ವಾಮಿ ಬಿಜೆಪಿ ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಳು. ಈ ಹಿನ್ನೆಲೆಯಲ್ಲಿ ರಾಕೇಶ್ ಸಿಂಗ್‌ಗೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಫೆಬ್ರವರಿ 23 ರಂದು ತನಿಖಾ ಅಧಿಕಾರಿಗಳ ಮುಂದೆ ಹಾಜರಾಗುವಂತೆ ರಾಕೇಶ್ ಸಿಂಗ್‌ಗೆ ನೋಟಿಸ್ ನೀಡಲಾಗಿದೆ” ಎಂದು ಐಪಿಎಸ್ ಅಧಿಕಾರಿ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಪಮೇಲಾ ಗೋಸ್ವಾಮಿ ನನ್ನ ಹೆಸರನ್ನು ಪ್ರಸ್ತಾಪಿಸಿರುವುದರಿಂದ ಇದರ ತನಿಖೆಯಲ್ಲಿ ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ರಾಕೇಶ್ ಸಿಂಗ್ ಈ ಹಿಂದೆ ನಗರ ಪೊಲೀಸ್ ಆಯುಕ್ತ ಸೌಮೆನ್ ಮಿತ್ರಾಗೆ ಈಮೇಲ್ ಬರೆದಿದ್ದರು.
ಸಾರ್ವಜನಿಕವಾಗಿ ನನ್ನನ್ನು ಈ ಪ್ರಕರಣದಲ್ಲಿ ಆರೋಪಿಸಿರುವುದರಿಂದ ಅಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿಯೂ ಈಮೇಲ್‌ನಲ್ಲಿ ಬರೆದಿದ್ದಾರೆ. ಇದರ ಪ್ರತಿಗಳನ್ನು ನ್ಯೂ ಅಲಿಪೋರ್ ಪೊಲೀಸ್ ಠಾಣೆಯ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಉಸ್ತುವಾರಿ ಅಧಿಕಾರಿಗೂ ಕಳುಹಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಗ್ರೇಟಾ ಥನ್‌ಬರ್ಗ್‌ಗೆ ಕಳಂಕ ತರಲು ಮತ್ತೆ ಚಾಲ್ತಿಗೆ ಬಂದ ಎಡಿಟೆಡ್ ಫೋಟೊ!
ಪಮೇಲಾ ಗೋಸ್ವಾಮಿ ಪರ್ಸ್ ಮತ್ತು ಅವರು ಇದ್ದ ಕಾರಿನ ಸೀಟಿನಲ್ಲಿ ಕೆಲವು ಲಕ್ಷ ಮೌಲ್ಯದ ಕೊಕೇನ್ ಸಿಕ್ಕಿದ್ದಕ್ಕಾಗಿ ಕೊಲ್ಕತ್ತಾ ಪೊಲೀಸರು ಶುಕ್ರವಾರ (ಫೆ.19) ಬಂಧಿಸಿದ್ದಾರೆ. ಕಾರಿನಲ್ಲಿದ್ದ ಅವರ ಸ್ನೇಹಿತ ಮತ್ತು ಯುವ ಮೋರ್ಚಾದ ಸಹೋದ್ಯೋಗಿ ಪ್ರಬೀರ್ ಕುಮಾರ್ ಡೇ ಮತ್ತು ಭದ್ರತಾ ಸಿಬ್ಬಂದಿ ಸೋಮನಾಥ್ ಚಟರ್ಜಿಯನ್ನು ಕೂಡ ಬಂಧಿಸಲಾಗಿದೆ.
ಬಂಧನದ ನಂತರ, “ನಾನು ಸಿಐಡಿ ತನಿಖೆಯನ್ನು ಬಯಸುತ್ತೇನೆ. ಕೈಲಾಶ್ ವಿಜಯವರ್ಗಿಯಾ ಅವರ ಆಪ್ತ ರಾಕೇಶ್ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಬಂಧಿಸಿ. ಇದು ಅವರದ್ದೇ ಪಿತೂರಿ. ಅವರ ವಿರುದ್ಧ ನನ್ನ ಬಳಿ ಎಲ್ಲ ಪುರಾವೆಗಳಿವೆ” ಎಂದು ಪಮೇಲಾ ಗೋಸ್ವಾಮಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಕೇಶ್ ಸಿಂಗ್, “ಕೋಲ್ಕತ್ತಾ ಪೊಲೀಸರು ಮತ್ತು ಆಡಳಿತಾರೂಢ ಟಿಎಂಸಿ ಪಮೇಲಾ ಗೋಸ್ವಾಮಿ ಅವರಿಗೆ “ಬ್ರೈನ್ ವಾಶ್” ಮಾಡಿದ್ದಾರೆ. ನಾನು ಕಳೆದ ಒಂದು ವರ್ಷದಿಂದ ಅವರೊಂದಿಗೆ ಯಾವುದೇ ಸಂಪರ್ಕದಲ್ಲಿಲ್ಲ. ಯಾವುದೇ ಏಜೆನ್ಸಿಯ ತನಿಖೆಯನ್ನು ಎದುರಿಸಲು ತಾನು ಸಿದ್ಧ. ನಾನು ಭಾಗಿಯಾಗಿದ್ದರೆ, ನನ್ನನ್ನು ಅಥವಾ ಕೈಲಾಶ್ ವಿಜಯವರ್ಗಿಯಾ ಅಥವಾ ಅಮಿತ್ ಶಾ ಅವರನ್ನು ತನಿಖೆಗೆ ಕರೆಯಬಹುದು” ಎಂದು ಹೇಳಿದ್ದಾರೆ.
“ಕೋಲ್ಕತ್ತಾ ಪೊಲೀಸರು ತೃಣಮೂಲ ಕಾಂಗ್ರೆಸ್ ಸೂಚನೆಗಳನ್ನು ಪಾಲಿಸುವ ಸಾಧ್ಯತೆಯಿದೆ. ಅವರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಇವು ಆಧಾರರಹಿತ ಆರೋಪ ಮತ್ತು ಯಾವುದೇ ಸವಾಲನ್ನು ಎದುರಿಸಲು ನಾನು ಸಿದ್ಧ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಸ್ಪೋಟ | ಜಿಲೆಟಿನ್ ಸ್ಪೋಟದಿಂದ ಅಲ್ಲ, ಯಡಿಯೂರಪ್ಪ ಸರ್ಕಾರದ ದುರಾಡಳಿತಕ್ಕೆ ಬಲಿಯಾಗಿದ್ದಾರೆ- ಸಿದ್ದರಾಮಯ್ಯ
ಕೈಲಾಶ್ ವಿಜಯವರ್ಗಿಯಾ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಉಸ್ತುವಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, “ಈ ಘಟನೆಯ ಬಗ್ಗೆ ನನಗೆ ತಿಳಿದಿಲ್ಲ ಮತ್ತು ಆದ್ದರಿಂದ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಪಮೇಲಾ ಗೋಸ್ವಾಮಿ ತಂದೆ ನೀಡಿದ ದೂರಿನ ನಂತರ ಆಕೆ ಮತ್ತು ಆಕೆಯ ಸ್ನೇಹಿತ ಪ್ರಬೀರ್ ಕುಮಾರ್ ಡೇ ಇಬ್ಬರ ಮೇಲೂ ಕಣ್ಣಿಡಲಾಗಿತ್ತು ಎಂದು ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ. ಪ್ರಬೀರ್ ಪಮೇಲಾರನ್ನು ಮಾದಕ ವ್ಯಸನಿಯನ್ನಾಗಿ ಮಾಡಿದ್ದಾನೆ ಎಂದು ನಗರ ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಕೌಶಿಕ್ ಗೋಸ್ವಾಮಿ ಆರೋಪಿಸಿದ್ದರು. ಸದ್ಯ ಆರೋಪಿಗಳನ್ನು ಫೆ.25ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪಮೇಲಾ ಗೋಸ್ವಾಮಿ ಅವರು 2019 ರಲ್ಲಿ ಬಿಜೆಪಿಗೆ ಸೇರುವ ಮೊದಲು ಏರ್ ಹೊಸ್ಟೆಸ್, ಮಾಡೆಲ್ ಮತ್ತು ಟಿವಿ ಧಾರಾವಾಹಿ ನಟಿಯಾಗಿ ಕೆಲಸ ಮಾಡಿದ್ದಾರೆಂದು ಹೇಳಲಾಗಿದೆ. ನಂತರ ಅವರನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಹೂಗ್ಲಿ ಜಿಲ್ಲೆಯ ಯುವ ಮೋರ್ಚಾ ವೀಕ್ಷಕರಾಗಿ ನೇಮಿಸಲಾಗಿತ್ತು.
ಇದನ್ನೂ ಓದಿ: ‘ಅಗತ್ಯ ಬಿದ್ದರೆ, ಕಳೆದ ವರ್ಷ ಮಾಡಿದ್ದನ್ನು ಮತ್ತೆ ಮಾಡುತ್ತೇನೆ: ಕಪಿಲ್ ಮಿಶ್ರಾ ವಿವಾದಾತ್ಮಕ ಹೇಳಿಕೆ