Homeಮುಖಪುಟಪಂಡಿತ್‌ ವಿವಾದ: ಭಾಗವತ್ ಹೇಳಿಕೆ ಬಳಿಕ ‘ಶ್ರೇಣೀಕೃತ ಜಾತಿ ವ್ಯವಸ್ಥೆ’ ಸಮರ್ಥಿಸಿದ ಸ್ವಾಮೀಜಿಗಳು

ಪಂಡಿತ್‌ ವಿವಾದ: ಭಾಗವತ್ ಹೇಳಿಕೆ ಬಳಿಕ ‘ಶ್ರೇಣೀಕೃತ ಜಾತಿ ವ್ಯವಸ್ಥೆ’ ಸಮರ್ಥಿಸಿದ ಸ್ವಾಮೀಜಿಗಳು

- Advertisement -
- Advertisement -

ಜಾತಿ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ ಬಳಿಕ, ಹಿಂದೂ ಧಾರ್ಮಿಕ ಮುಖಂಡರು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿ, ಬ್ರಾಹ್ಮಣರ ಮೇಲರಿಮೆಯನ್ನು ಪ್ರದರ್ಶಿಸುತ್ತಿದ್ದಾರೆ.

ಭಕ್ತಿ ಕವಿ ಸಂತ ರವಿದಾಸ್ ಅವರ ಜಯಂತಿಯ ಸ್ಮರಣಾರ್ಥ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, “ಜಾತಿ ವಿಭಜನೆಯ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದಾರೆ” ಎಂದು ಹೇಳಿದ್ದರು.

ಸಂತ ರವಿದಾಸ್ ಅವರು ದೇವರು ಕುರಿತು ಹೇಳಿರುವುದನ್ನು ಉಲ್ಲೇಖಿಸಿ ಭಾಗವತ್ ಭಾಷಣ ಮಾಡಿದ್ದರು. “ನಾನು (ದೇವರು) ಎಲ್ಲಾ ಜೀವಿಗಳಲ್ಲಿ ಇದ್ದೇನೆ. ಹೆಸರು ಅಥವಾ ಬಣ್ಣ ಯಾವುದೇ ಇರಲಿ, ಎಲ್ಲರಿಗೂ ಒಂದೇ ಸಾಮರ್ಥ್ಯ, ಒಂದೇ ಗೌರವವಿದೆ. ಎಲ್ಲಾ ನನ್ನ ಸ್ವಂತದ್ದು. ಯಾರೂ ಮೇಲು ಅಥವಾ ಕೀಳು ಅಲ್ಲ. ಶಾಸ್ತ್ರಗಳ ಆಧಾರದ ಮೇಲೆ ಪಂಡಿತರು ಹೇಳುವುದು ಸುಳ್ಳು. ಮೇಲು-ಕೀಳು ಎಂಬ ಈ ಕಲ್ಪನೆಯಲ್ಲಿ ಸಿಲುಕಿ ದಾರಿ ತಪ್ಪಿದ್ದೇವೆ. ಈ ಭ್ರಮೆಯನ್ನು ತೊಲಗಿಸಬೇಕು”- ಎಂದು ಭಾಗವತ್ ಹೇಳಿದ್ದರು.

ಕೆಲವು ದಿನಗಳ ನಂತರ ಆರ್‌ಎಸ್‌ಎಸ್ ಪ್ರತಿಕ್ರಿಯಿಸಿ, ಭಾಗವತ್ ಅವರು ಮಠಾಠಿ ಮೇಲ್ವರ್ಗದ ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ ಎಂದು ತಿಳಿಸಿತು. ಭಾಗವತ್ ಅವರು ಬಳಸಿದ ‘ಪಂಡಿತ್‌’ ಎಂಬ ಪದವು ‘ವಿದ್ವಾಂಸರು’ ಎಂಬ ಅರ್ಥವನ್ನು ಹೊಂದಿದೆ ಹೊರತು, ‘ಬ್ರಾಹ್ಮಣರು’ ಎಂದಲ್ಲ ಎಂಬುದು ಆರ್‌ಎಸ್‌ಎಸ್‌ ನೀಡಿದ ಸಮರ್ಥನೆ.

ಭಾಗವತ್‌ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪುರಿ ಶಂಕರಾಚಾರ್ಯರಾದ ನಿಶ್ಚಲಾನಂದ ಸರಸ್ವತಿ ಅವರಲ್ಲಿ ಭಕ್ತರೊಬ್ಬರು ಪ್ರಶ್ನಿಸಿದಾಗ ಸ್ವಾಮೀಜಿಯವರು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದ್ದು, ಭಾಗವತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಮೊದಲ ಬ್ರಾಹ್ಮಣನ ಹೆಸರು ಬ್ರಹ್ಮಜಿ. ನೀವು ಧರ್ಮಗ್ರಂಥಗಳನ್ನು ಅಧ್ಯಯನ ಮಾಡಬೇಕು. ಪ್ರಪಂಚದ ಎಲ್ಲಾ ಶಾಸ್ತ್ರಗಳು ಮತ್ತು ಕಲೆಗಳನ್ನು ಬ್ರಾಹ್ಮಣರು ಮಾತ್ರ ವಿವರಿಸುತ್ತಾರೆ. ಶಿಕ್ಷಣ, ರಕ್ಷಣೆ ಮತ್ತು ಇತರ ಸೇವೆಗಳು ಯಾವಾಗಲೂ ಸಮತೋಲನದಲ್ಲಿರಬೇಕು. ನಾವು ಸನಾತನ ವ್ಯವಸ್ಥೆಯನ್ನು ಒಪ್ಪಿಕೊಳ್ಳದಿದ್ದರೆ, ಆಗ ಅಲ್ಲಿ ಯಾವ ವ್ಯವಸ್ಥೆ ಇರಬೇಕು?” ಎಂದು ಪ್ರಶ್ನಿಸಿದ್ದಾರೆ ನಿಶ್ಚಲಾನಂದ ಸರಸ್ವತಿ.

“ಆರ್‌ಎಸ್‌ಎಸ್‌ಗೆ ಸ್ವಂತ ಜ್ಞಾನವಿಲ್ಲ. ಜಾತಿ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದಾರೆಯೇ ಹೊರತು ಮೂರ್ಖರಿಂದಲ್ಲ. ಇಂದಿಗೂ ಜನರು ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಭಾರತದ ಬ್ರಾಹ್ಮಣರ ಬಳಿಗೆ ಬರುತ್ತಾರೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸನಾತನ ಸಮಾಜದ ರಚನೆಯ ಅನುಪಸ್ಥಿತಿಯಲ್ಲಿ, ಯುಎಸ್ ಮತ್ತು ಫ್ರಾನ್ಸ್‌ನಂತಹ ಪಾಶ್ಚಿಮಾತ್ಯ ದೇಶಗಳಲ್ಲಿ “ಪರ್ಯಾಯ ಜಾತಿ ಶ್ರೇಣಿಯನ್ನು ಸೃಷ್ಟಿಸುವ ಅಗತ್ಯವಿದೆ” ಎಂದು ಕರೆ ನೀಡಿದ್ದಾರೆ.

ಭಾಗವತ್ ಅವರ ಹೇಳಿಕೆಗಳ ವಿರುದ್ಧ ಟೀಕೆಗಳು ವ್ಯಕ್ತವಾದ ಬಳಿಕ, ಆರ್‌ಎಸ್‌ಎಸ್ ಸ್ಪಷ್ಟೀಕರಣ ನೀಡಿ ಡ್ಯಾಮೇಜ್‌ ಕಂಟ್ರೋಲ್‌ ಮಾಡಲು ಮುಂದಾಯಿತು. “ಭಾಗವತ್ ಅವರ ಮಾತುಗಳನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಭಾಗವತ್ ಅವರು ಬಳಸಿದ ‘ಪಂಡಿತ್‌’ ಎಂಬ ಪದವು ‘ವಿದ್ವಾಂಸರು’ ಎಂಬ ಅರ್ಥವನ್ನು ಹೊಂದಿದೆಯೇ ಹೊರತು, ‘ಬ್ರಾಹ್ಮಣರು’ ಎಂದಲ್ಲ” ಎಂದಿದೆ ಆರ್‌ಎಸ್‌ಎಸ್‌.

ಇದನ್ನೂ ಓದಿರಿ: ‘ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ದೊಡ್ಡ ಅಪಾಯ’: ಮಾಜಿ ನ್ಯಾಯಾಧೀಶರನ್ನು ರಾಜ್ಯಪಾಲರನ್ನಾಗಿಸಿದ್ದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ

ಭಾಗವತ್ ಅವರ ಹೇಳಿಕೆಗಳು ಮತ್ತು ಆರ್‌ಎಸ್‌ಎಸ್‌ ನಂತರ ನೀಡಿದ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿದ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ್, “ಭಾಗವತ್ ಅವರು ತಡವಾಗಿ ಅಪಾರ ಬುದ್ಧಿವಂತಿಕೆಯನ್ನು ಸಂಪಾದಿಸಿದ್ದಾರೆ. ನೀವು ಸಂಶೋಧನೆ ಮಾಡಿದ್ದೀರಾ?… ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಾಲ್ಕು ವರ್ಣಗಳನ್ನು ಸೃಷ್ಟಿಸಿದನೆಂದು ನಾವು ಓದಿದ್ದೇವೆ. ದೇವರು ಇದನ್ನು (ಜಾತಿ ವ್ಯವಸ್ಥೆ) ಸೃಷ್ಟಿಸಿಲ್ಲ, ಅವುಗಳನ್ನು ಪಂಡಿತರು ನಿರ್ಮಿಸಿದ್ದಾರೆ ಎಂದು ಭಾಗವತ್ ಹೇಳುತ್ತಿದ್ದಾರೆ. ಈಗವರು ‘ಪಂಡಿತ್’ ಎಂದರೆ ‘ವಿದ್ವಾಂಸರು’ ಹೊರತು ‘ಬ್ರಾಹ್ಮಣ’ ಅಲ್ಲ ಎನ್ನುತ್ತಿದ್ದಾರೆ. ವಿದ್ವಾಂಸರು ಏನಾದರೂ ಹೇಳಿದ್ದರೆ ನೀವು ಅದನ್ನು ಏಕೆ ನಿರಾಕರಿಸುತ್ತೀರಿ?” ಎಂದು ಕೇಳಿದ್ದಾರೆ.

ವಿವಾದಾತ್ಮಕ ಹಾಗೂ ದ್ವೇಷ ಭಾಷಣಗಳಿಗೆ ಹೆಸರಾದ ದಾಸ್ನಾ ದೇವಸ್ಥಾನದ ಯತಿ ನರಸಿಂಹಾನಂದ್ ಮತ್ತು ತಪಸ್ವಿ ಚಾವ್ನಿಯ ಮಹಂತ್ ಪರಮಹಂಸ ದಾಸ್ ಅವರು ಭಾಗವತ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ದೇಶವಿರೋಧಿ ಶಕ್ತಿಗಳು ಹಿಂದೂಗಳ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸಲು ಪಿತೂರಿ ನಡೆಸುತ್ತವೆ. ಆದರೆ ಕೆಲವು ಹಿಂದೂಗಳು ಅವರ ಪಿತೂರಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ” ಎಂದು ಹೇಳಿಕೆಗಳನ್ನು ನೀಡಿದ್ದಾರೆ.

ವರದಿ ಕೃಪೆ: ದಿ ವೈರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...