Homeಮುಖಪುಟಪನ್ಸಾರೆ ಹತ್ಯೆ ಪ್ರಕರಣ: 8 ವರ್ಷಗಳ ಬಳಿಕ 10 ಜನರ ವಿರುದ್ಧ ಆರೋಪ ದಾಖಲಿಸಿದ ನ್ಯಾಯಾಲಯ

ಪನ್ಸಾರೆ ಹತ್ಯೆ ಪ್ರಕರಣ: 8 ವರ್ಷಗಳ ಬಳಿಕ 10 ಜನರ ವಿರುದ್ಧ ಆರೋಪ ದಾಖಲಿಸಿದ ನ್ಯಾಯಾಲಯ

- Advertisement -
- Advertisement -

ದೇಶವನ್ನೇ ತಲ್ಲಣಗೊಳಿಸಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನಾಯಕ ಗೋವಿಂದ್ ಪನ್ಸಾರೆ ಅವರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ಎಂಟು ವರ್ಷಗಳ ಬಳಿಕ ಆರೋಪಿಗಳ ವಿರುದ್ಧ ಆರೋಪಗಳನ್ನು ದಾಖಲಿಸಿದೆ.

ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 10 ಜನರ ವಿರುದ್ಧ ಮಹಾರಾಷ್ಟ್ರದ ಕೊಲ್ಹಾಪುರ ನಗರದ ವಿಶೇಷ ನ್ಯಾಯಾಲಯವು ಆರೋಪಗಳನ್ನು ದಾಖಲಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಕೊಲ್ಹಾಪುರದಲ್ಲಿ ಫೆಬ್ರುವರಿ 16, 2015ರಂದು ಬೆಳಗಿನಜಾವ ವಿಚಾರವಾದಿ ಪನ್ಸಾರೆ ಅವರು ವಾಕಿಂಗ್ ಮುಗಿಸಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಪನ್ಸಾರೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಯಿಂದಾಗಿ ನಾಲ್ಕು ದಿನಗಳ ನಂತರ ಅವರು ಸಾವನ್ನಪ್ಪಿದರು.

ವಿಶೇಷ ಭಯೋತ್ಪಾದನಾ ನಿಗ್ರಹ ದಳದ ನ್ಯಾಯಾಧೀಶ ಎಸ್‌ಎಸ್ ತಾಂಬೆ ಅವರು, ಸೋಮವಾರ ಸಮೀರ್ ಗಾಯಕ್ವಾಡ್, ವೀರೇಂದ್ರ ಸಿನ್ ತಾವ್ಡೆ, ಅಮೋಲ್ ಕಾಳೆ, ವಾಸುದೇವ್ ಸೂರ್ಯವಂಶಿ, ಭರತ್ ಕುರಾಣೆ, ಅಮಿತ್ ದೆಗ್ವೇಕರ್, ಶರದ್ ಕಲಾಸ್ಕರ್, ಸಚಿನ್ ಅಂದುರೆ, ಅಮಿತ್ ಬದ್ದಿ ಮತ್ತು ಗಣೇಶ್ ಮಿಸ್ಕಿನ್ ವಿರುದ್ಧ ಆರೋಪಗಳನ್ನು ದಾಖಲಿಸಿದ್ದಾರೆ.

ಇನ್ನಿಬ್ಬರು ಆರೋಪಿಗಳಾದ ವಿನಯ್ ಪವಾರ್ ಮತ್ತು ಸಾರಂಗ್ ಅಕೋಲ್ಕರ್ ತಲೆಮರೆಸಿಕೊಂಡಿದ್ದಾರೆ. ಇನ್ನು ಪ್ರಕರಣದ ಸಾಕ್ಷಿಗಳ ಪಟ್ಟಿ ಮತ್ತು ತನಿಖಾ ಸಂಸ್ಥೆಗಳಿಂದ ದಾಖಲೆಗಳನ್ನು ಹಾಜರುಪಡಿಸುವಂತೆ ನ್ಯಾಯಾಧೀಶರು ಪ್ರಾಸಿಕ್ಯೂಷನ್‌ಗೆ ಸೂಚಿಸಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 307 (ಕೊಲೆಗೆ ಯತ್ನ), 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾಜಿರಾವ್ ರಾಣೆ ತಿಳಿಸಿದ್ದಾರೆ. ಅಕ್ರಮವಾಗಿ ಬಂದೂಕು ಸಂಗ್ರಹ ಮತ್ತು ಬಳಕೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯಿದೆಯಡಿ ಆರೋಪಗಳನ್ನು ಹೊರಿಸಲಾಗಿದೆ.

ಇದನ್ನೂ ಓದಿರಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ; ಆರೋಪಿಗಳನ್ನು ಗುರುತು ಹಚ್ಚಿದ ಪ್ರಮುಖ ಸಾಕ್ಷಿ

ಈ ಬಗ್ಗೆ ಆರೋಪಿಗಳ ಪರ ವಕೀಲ ಸಮೀರ್ ಪಟವರ್ಧನ್ ಮಾತನಾಡಿ, ಎಲ್ಲಾ ಆರೋಪಿಗಳು ಆರೋಪಗಳನ್ನು ನಿರಾಕರಿಸಿದ್ದು, ವಿಚಾರಣೆಯನ್ನು ಎದುರಿಸಲು ಅವರು ಸಿದ್ಧರಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಗೋವಿಂದ ಪನ್ಸಾರೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಲಾಸ್ಕರ್ ಮತ್ತು ಅಂಧುರೆಯವರು, ಮೂಢನಂಬಿಕೆ ವಿರೋಧಿ ಹೋರಾಟಗಾರರಾಗಿದ್ದ ನರೇಂದ್ರ ದಾಭೋಲ್ಕರ್ ಅವರ ಹತ್ಯೆಯಲ್ಲೂ ಭಾಗಿಯಾಗಿದ್ದಾರೆ.

ಪುಣೆಯಲ್ಲಿ ಆಗಸ್ಟ್ 20, 2013 ರಂದು ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ನಂತರ 2015ರಲ್ಲಿ ಪನ್ಸಾರೆ ಮತ್ತು ಚಿಂತಕ ಎಂಎಂ ಕಲ್ಬುರ್ಗಿ ಅವರನ್ನು, 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಯಿತು. ಈ ಎಲ್ಲ ಪ್ರಕರಣಗಳಿಗೂ ಒಂದಕ್ಕೊಂದು ಸಂಬಂಧವಿದೆ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಅಷ್ಟೇ ಅಲ್ಲದೇ ಈ ಹತ್ಯೆಗಳ ಹಿಂದೆ ಹಿಂದುತ್ವದ ಉಗ್ರಗಾಮಿಗಳು ಇದ್ದಾರೆ ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...