Homeಮುಖಪುಟಪವನ್ ಖೇರಾ: ಟಿವಿಯಲ್ಲಿ ಮಿಂಚುತ್ತಿರುವ ಹೊಸ ಶೈಲಿಯ ಆಕ್ರಮಣಶೀಲ ಕಾಂಗ್ರೆಸಿಗ

ಪವನ್ ಖೇರಾ: ಟಿವಿಯಲ್ಲಿ ಮಿಂಚುತ್ತಿರುವ ಹೊಸ ಶೈಲಿಯ ಆಕ್ರಮಣಶೀಲ ಕಾಂಗ್ರೆಸಿಗ

ಕಾಂಗ್ರೆಸ್ ಪಕ್ಷದದ ಹೊಸ ವಕ್ತಾರ ಪವನ್ ಖೇರಾ ತನ್ನ ಒಂದೇ ವಾಕ್ಯದ ಕಟಕು ಮಾತು, ಆಕ್ರಮಣಶೀಲ ಮತ್ತು ಉದ್ದೀಪಕ ಶೈಲಿಯಿಂದಾಗಿ ಟಿವಿ ಹಾಜರಾತಿಗಳಲ್ಲಿ ಜನಪ್ರಿಯರಾಗುತ್ತಿದ್ದಾರೆ. ಉಳಿದವರು ಕೂಡಾ ಇದನ್ನು ಅನುಸರಿಸಬೇಕು ಎಂಬುದು ಕಾಂಗ್ರೆಸ್ ನಾಯಕರ ಅಭಿಮತವಾಗಿದೆ.

- Advertisement -
- Advertisement -

ಒಂದು ವರ್ಷದ ಹಿಂದೆ ಆರ್ಥಿಕ ಬಿಕ್ಕಟ್ಟಿನ ಕುರಿತು ಪ್ರಶ್ನೆಯೊಂದಕ್ಕೆ ಬಿಜೆಪಿಯ ಶಾನವಾಝ್ ಹುಸೈನ್ ಲೈವ್ ಟಿವಿ ಶೋ ಒಂದರಲ್ಲಿ ಉತ್ತರಿಸುವಾಗ ತನ್ನ ಹಣೆಗೆ ಕೈ ಹಚ್ಚಿ ಕುಳಿತ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಜನಪ್ರಿಯ ಆನ್‌ಲೈನ್ ಸಂಸ್ಕೃತಿಯಲ್ಲಿ ತನಗೊಂದು ಜಾಗ ಮಾಡಿಕೊಂಡರು. ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ನೌಕರರಿಗೆ ಸಂಬಳ ನೀಡಲು ಸೀಮಿತವಾದ “ಕ್ಯಾಷ್ ಇನ್ ಹ್ಯಾಂಡ್” ಇರುವುದರ ಕುರಿತು ಹುಸೈನ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. “ನಾವು ನಗದು ರಹಿತ (ಕ್ಯಾಶ್‌ಲೆಸ್) ಆರ್ಥಿಕತೆಯಾಗಿರುವಾಗ ನಿಮಗೆ ಕೈಯಲ್ಲಿ ನಗದು ಏಕೆ ಬೇಕು?” ಎಂದು ಹುಸೈನ್ ಉತ್ತರಿಸಿದ್ದರು.

ಖೇರಾ ಅವರ ಪ್ರತಿಕ್ರಿಯೆಯು ಅಕೌಂಟಿಂಗ್‌ನಲ್ಲಿ ಬಳಸುವ ಸಾಮಾನ್ಯ ಪರಿಭಾಷೆಯ ಕುರಿತು ಹುಸೇನ್ ಅವರ ಅಜ್ಞಾನದ ಕುರಿತು ಅರೆ ತಮಾಷೆ, ಅರೆ ಅಚ್ಚರಿಯಿಂದ ಕೂಡಿದ್ದಾಗಿತ್ತು. (ವಾಸ್ತವವಾಗಿ ಕ್ಯಾಷ್ ಇನ್ ಹ್ಯಾಂಡ್ ಎಂದರೆ, ನಗದಲ್ಲ; ಬದಲಾಗಿ ಬ್ಯಾಂಕ್ ಖಾತೆಯಲ್ಲಾಗಲೀ, ಇತರ ಮೂಲಗಳಿಂದಾಗಲೀ ತಕ್ಷಣಕ್ಕೆ ಲಭ್ಯವಿರುವ ಹಣಕಾಸು. ಹುಸೈನ್‌ಗೆ ಇದು ಗೊತ್ತಿರಲಿಲ್ಲ!) ಅಂದಿನಿಂದ ಈ ಘಟನೆ ಒಂದು ಸ್ಮರಣಾರ್ಹ ಹಾಸ್ಯ ಘಟನೆ (meme)ಯಾಗಿಬಿಟ್ಟಿದೆ. ಈಗ ಯಾವುದೇ ಆಳುವ ಪಕ್ಷದ ಸದಸ್ಯ ಎಡವಟ್ಟು ಮಾಡಿದಾಗಲೆಲ್ಲಾ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತದೆ.

ಈ ಕ್ಷಣವು ಪಕ್ಷದಲ್ಲಿ ವಕ್ತಾರರಾಗಿ ಖೇರಾ ಅವರು ಜವಾಬ್ದಾರಿ ವಹಿಸಿಕೊಂಡ ತಕ್ಷಣದಲ್ಲಿಯೇ ಬಂತು. ಅವರು ಈ ಘಟನೆಗೆ ಒಂದು ತಿಂಗಳು ಮೊದಲು, 2018ರ ಡಿಸೆಂಬರ್‌ನಲ್ಲಷ್ಟೇ ಈ ಹುದ್ದೆಗೆ ನೇಮಕಗೊಂಡಿದ್ದರು. ಅಲ್ಪಕಾಲದಲ್ಲಿಯೇ ಅವರು ಟಿವಿ ಚರ್ಚೆಗಳಲ್ಲಿ ಬಿಜೆಪಿಯ ವಾದಗಳನ್ನು ಚಿಂದಿ ಉಡಾಯಿಸುವ ಜನಪ್ರಿಯ ವಕ್ತಾರರಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮೂಡಿಬಂದರು. ಅವರ ಹಲವಾರು ವಿಡಿಯೋ ಕ್ಲಿಪ್‌ಗಳು ವೈರಲ್ ಆಗಿವೆ.

ಕಳೆದ ಕೆಲವು ತಿಂಗಳುಗಳಿಂದ ಅವರು ಬಿಜೆಪಿ ವಕ್ತಾರರಿಗೆ ಇತಿಹಾಸ ಕಲಿಸುವುದರಲ್ಲಿ, ಅವರ ವಿಷಯಾಂತರ ತಂತ್ರಗಳನ್ನು ಪ್ರಶ್ನಿಸುವುದರಲ್ಲಿ ತೊಡಗಿದ್ದು, ದೇಶ ಮತ್ತು ತನ್ನ ಪಕ್ಷಕ್ಕೆ ಮುಖ್ಯವಾದ ವಿಷಯಗಳನ್ನು ಎತ್ತುವುದರಲ್ಲಿ ತೊಡಗಿದ್ದಾರೆ. ಇದನ್ನೆಲ್ಲಾ ಮಾಡುತ್ತಲೇ ತನ್ನ ಆಕ್ರಮಣಶೀಲ ಮನೋವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅವರು ಆಳುವ ಪಕ್ಷದ ಪರವಾಗಿರುವ ಕಾರ್ಯಕ್ರಮ ನಿರ್ವಾಹಕರ ಮನೋಭಾವವನ್ನೂ ಪ್ರಶ್ನಿಸಿ ಕಾಲೆಳೆದಿದ್ದಾರೆ.

ಆಂತರಿಕ ಬಿಕ್ಕಟ್ಟು ಮತ್ತು ಚುನಾವಣಾ ಸೋಲುಗಳ ನಡುವೆ ಗಂಭೀರ ಪರಿಸ್ಥಿತಿಯಲ್ಲಿರುವ ಕಾಂಗ್ರೆಸಿನ ರಕ್ಷಣೆಗೆ , ಅದೂ ಚುನಾವಣಾ ವಿಷಯದಲ್ಲಿ ಹೆಬ್ಬಂಡೆಯಾಗಿ ಬೆಳೆದಿರುವ ಬಿಜೆಪಿಯನ್ನು ಎದುರಿಸಲು ಈ ರೀತಿಯ ಶೈಲಿ ಮತ್ತು ಖೇರಾ ಅವರಂತವರು ಇನ್ನಷ್ಟು ಮಂದಿ ಬೇಕು ಎಂದು ಕಾಂಗ್ರೆಸ್ ಬೆಂಬಲಿಗರು ಬಯಸುವಂತೆ ಮಾಡಿದೆ.

ಚೀನಾ, ಪಾಕಿಸ್ತಾನ ಮತ್ತು ಇತಿಹಾಸ ಪಾಠ

ಇತ್ತೀಚಿನ ದಿನಗಳಲ್ಲಿ ಖೇರಾ ಟಿವಿ ಕಾರ್ಯಕ್ರಮಗಳಲ್ಲಿ ತೋರಿಸುತ್ತಿರುವ ಆಕ್ರಮಣಶೀಲತೆಯು ಭಾರತ-ಚೀನಾ ಸಂಘರ್ಷದ ಮೇಲೆ ಕೇಂದ್ರೀಕೃತವಾಗಿದೆ.

ಕಳೆದ ವಾರ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, “ನಾವು ಗಡಿಯ ಬಗ್ಗೆ ಕೇಳಿದರೆ, ಇವರು ನಮ್ಮ ಜೊತೆ ಕಾದಾಡಲು ಬರುತ್ತಾರೆ. ಅಯ್ಯೋ! ಚೀನಾದ ಜೊತೆ ಕಾದಾಡಿ. ಕಾಂಗ್ರೆಸ್ ಜೊತೆ ಕಾದಾಡಲು ಇನ್ನೂ ಪೂರ್ತಿ ನಾಲ್ಕು ವರ್ಷ ಉಳಿದಿದೆ. ಆಗ ನಾವು ಕೂಡಾ ಕಾದಾಡುತ್ತೇವೆ” ಎಂದು ಕಟಕಿದ್ದರು.

ನರೇಂದ್ರ ಮೋದಿ ಟಿಕ್ ಟಾಕ್ ಸಹಿತ ಚೀನಾದ 59 appಗಳನ್ನು ನಿಷೇಧಿಸಿದ ಬಳಿಕ ನಡೆದ ಚರ್ಚೆಯೊಂದರಲ್ಲಿ ಖೇರಾ ಮನೆಮಾತಾಗಿರುವ ಘೋಷಣೆಯೊಂದನ್ನು ಹುಟ್ಟುಹಾಕಿದ್ದರು. “ಹಮ್ಲಾ ಮ್ಯಾಪ್ ಪೆ ಹೋ ರಹಾ ಹೈ; ಬದ್ಲಾ app ಪೆ ಹೋ ರಹಾ ಹೈ” (ದಾಳಿ ಮ್ಯಾಪ್ ಮೇಲೆ ಆಗುತ್ತಿದೆ. ಪ್ರತೀಕಾರ app ಮೆಲೆ ಆಗುತ್ತಿದೆ).

ಕೇವಲ ಈ ರೀತಿಯ ವಾಕ್ಚಾತುರ್ಯದ ಪ್ರದರ್ಶನ ಮತ್ತು ಒಂದು ವಾಕ್ಯದ ಕಟಕಿ ಮಾತ್ರವಲ್ಲ; ಜೊತೆಜೊತೆಗೆಯೇ ಖೇರಾ ಅಲ್ಲೊಮ್ಮೆ ಇಲ್ಲೊಮ್ಮೆ ಇತಿಹಾಸದ ಪಾಠ ಮಾಡುವುದನ್ನೂ ಇಷ್ಟಪಡುತ್ತಾರೆ.

App ನಿಷೇಧದ ಕುರಿತ ಚರ್ಚೆಯಲ್ಲಿ ಅವರು 1971ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಜಯಗಳಿಸಿದ್ದನ್ನು ಕಾರ್ಯಕ್ರಮ ನಿರ್ವಾಹಕರಿಗೆ ನೆನಪಿಸಿ, ಚೀನಾದ ವಿರುದ್ಧ 1962ರ ಸೋಲನ್ನು ನೆನಪಿಸಲು ತುದಿಗಾಲಿನಲ್ಲಿ ನಿಂತಿರುವ ಬಿಜೆಪಿಯು 1971ನ್ನು ಸಂಪೂರ್ಣ ಮರೆಯುತ್ತಿದೆ ಎಂದು ಟೀಕಿಸಿದರು.

“ದಿ ಪ್ರಿಂಟ್” ಜೊತೆ ಮಾತನಾಡುತ್ತಾ ಅವರು, “ನಾನು ಯಾವತ್ತೂ ಇತಿಹಾಸ ಪುಸ್ತಕಗಳು, ಅಂತರರಾಷ್ಟ್ರೀಯ ಸಂಬಂಧಗಳ ಕುರಿತ ಪುಸ್ತಕಗಳ ಗಂಭೀರ ಓದುಗನಾಗಿದ್ದೆ. ಅದೃಷ್ಟವಶಾತ್ ಅದೀಗ ನಿಜವಾಗಿಯೂ ಚರ್ಚೆಗಳ ವೇಳೆ ನೆರವಿಗೆ ಬರುತ್ತಿದೆ. ನಾವು ಮಾಡಬೇಕಾದುದು ಇಷ್ಟೇ: ನಮ್ಮ ಇತಿಹಾಸದ ಧೂಳು ಗುಡಿಸಬೇಕು ಮತ್ತು ವಾಸ್ತವಾಂಶಗಳ ಜೊತೆ ಸಿದ್ಧರಾಗಿರಬೇಕು.”

ಅವರು ಚರ್ಚೆಯಲ್ಲಿ ಹಲವಾರು ಬಾರಿ ಬಳಸಿರುವ, ಅವರ ಪ್ರಿಯವಾದ ಇತಿಹಾಸದ ತುಣುಕೆಂದರೆ, ಬಿಜೆಪಿಗೆ ಅದರ ಮಾತೃ ಸಂಘಟನೆಯಾಗಿರುವ ಆರೆಸ್ಸೆಸ್, ಮುಸ್ಲಿಂಲೀಗ್ ಜೊತೆ ಹೊಂದಿದ್ದ ಸಂಬಂಧವನ್ನು ನೆನಪಿಸುವುದು.

“ಇತಿಹಾಸವು ನೀವು ಬಯಸಿದಲ್ಲಿಂದ ಆರಂಭವಾಗುವುದಿಲ್ಲ. ಇತಿಹಾಸವು ಹಿಂದೂ ಮಹಾಸಭಾದ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಮುಸ್ಲಿಂಲೀಗ್ ಜೊತೆಸೇರಿ ಪಶ್ಚಿಮ ಬಂಗಾಳ ಮತ್ತು ಸಿಂಧ್‌ನಲ್ಲಿ ಸರಕಾರ ರಚಿಸಿದಲ್ಲಿಂದ ಕೂಡಾ ಆರಂಭವಾಗುತ್ತದೆ” ಎಂದು ಕಳೆದ ವಾರದ ಚರ್ಚೆಯೊಂದರಲ್ಲಿ ಅವರು ಕಟಕಿದ್ದರು.

“ಅವರು ಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣ ಎಂದು ಹೇಳುತ್ತಲೇ ಇರುತ್ತಾರೆ. ಅವರ ಈ ಕಾಲ್ಪನಿಕ ವಾದವನ್ನು ಟುಸ್ಸೆನಿಸುವುದು ಬಹಳ ಮುಖ್ಯ. ಸಮಸ್ಯೆಯೆಂದರೆ ಅವರು ತಮ್ಮದೇ ಕಾಲ್ಪನಿಕ ವಾಟ್ಸಾಪ್ ವಾದವನ್ನು ನಿಜವೆಂದೇ ನಂಬಲು ಆರಂಭಿಸಿದ್ದಾರೆ” ಎಂದು ಖೇರಾ “ದಿ ಪ್ರಿಂಟ್”ಗೆ ಹೇಳಿದರು.

ಕಾಂಗ್ರೆಸ್‌ನಲ್ಲಿ ಖೇರಾ ಹಿನ್ನೆಲೆ, ಪ್ರಸ್ತುತ

ಪವನ್ ಖೇರಾ 1989ರಲ್ಲಿ ಕಾಂಗ್ರೆಸ್ ಯುವ ವಿಭಾಗದಿಂದ ರಾಜಕೀಯ ಜೀವನ ಆರಂಭಿಸಿದರು. ಆದರೆ, 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ಪಕ್ಷ ತೊರೆದರು. ನಂತರ 1998ರಲ್ಲಿ ಆಂದಿನ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಮರಳಿ ಬಂದರು. 2013ರಲ್ಲಿ ದೀಕ್ಷಿತ್ ಅವರ ಅಧಿಕಾರ ಕೊನೆಗೊಳ್ಳುವ ತನಕ ಅವರು ಅದೇ ಸ್ಥಾನದಲ್ಲಿದ್ದರು.

2015ರಿಂದ ಅವರು ಟಿವಿ ಚರ್ಚೆಗಳಲ್ಲಿ ಪಕ್ಷದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ 2018ರಲ್ಲಿ ರಚಿಸಲಾದ ಚುನಾವಣಾ ಸಮಿತಿಯೊಂದರ ಸಂಚಾಲಕರಾಗಿ ನೇಮಕಗೊಂಡರು.

ಅವರೀಗ ಕೆಲ ವರ್ಷಗಳಿಂದ ಟಿವಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರೂ ಇತ್ತೀಚೆಗೆ ಅವರ ಆಕ್ರಮಣಶೀಲತೆ ಒಂದು ಹಂತ ಮೇಲೇರಿದೆ. “ನನ್ನೊಳಗೆ ಏನೋ ಬದಲಾಗಿದೆ. ಯದ್ವಾತದ್ವಾ ಸುಳ್ಳು ಮಾಹಿತಿಗಳು, ದ್ವೇಷ ಇತ್ಯಾದಿ ನನ್ನನ್ನು ತಳಮಳಗೊಳಿಸಿ ಸಿಟ್ಟಿಗೆಬ್ಬಿಸುತ್ತವೆ. ಅವುಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಉಗ್ರವಾಗಿ ವಿರೋಧಿಸಬೇಕಾದ ಅಗತ್ಯವಿದೆ. ನಾವು ಸುಮ್ಮನೇ ಇದ್ದರೆ, ನಮ್ಮ ವಾದಗಳು ದುರ್ಬಲವಾಗುತ್ತವೆ. ನಾವು ಜಾತ್ಯತೀತರೂ, ಉದಾರವಾದಿಗಳಾಗಿರುವುದಕ್ಕೆ ಯಾರ ಕ್ಷಮೆಯನ್ನೂ ಕೇಳಬೇಕಾಗಿಲ್ಲ. ನಾವು ಅದೇ ಎಂದು ಒಪ್ಪಿಕೊಳ್ಳಬೇಕು” ಎಂದು ಹೇಳಿದ ಖೇರಾ, ಅವರ ಭಾವನಾತ್ಮಕ ಸ್ಫೋಟಕ ಮಾತುಗಳು ಮತ್ತು ಆಕ್ರಮಣಶೀಲತೆಯ ಬಗ್ಗೆ ಕೇಳಿದಾಗ, “ನನಗೆ ಬೇರೆ ರೀತಿಗಳು ಗೊತ್ತಿಲ್ಲ” ಎಂದರು.

“ಅದು ನನಗೆ ಸಹಜವಾಗಿಯೇ ಬರುತ್ತದೆ. ಯಾವುದೇ ವಿಷಯದ ಕುರಿತು ಭಾವತೀವ್ರತೆ ಇಲ್ಲದಿದ್ದರೆ ನಾನದನ್ನು ಮಂಡಿಸಲಾರೆ. ಬಹುಶಃ ಹಿಂದೆ ನಾನು ನನಗೇ ಲಗಾಮು ಹಾಕಿಕೊಂಡಿದ್ದೆ ಮತ್ತು ಹೆಚ್ಚು ಜಾಗರೂಕನಾಗಿದ್ದೆ. ಆದರೀಗ ಬೇರೆ ದಾರಿಯಿಲ್ಲ.” ಎಂದು ಖೇರಾ ಹೇಳಿದರು. ಟಿವಿ ಚರ್ಚೆಗಳಲ್ಲಿ ಅವರ ಭಾವತೀವ್ರತೆಯ ವಾದಗಳು ಅವರಿಗೆ ಸಾಮಾಜಿಕ ಮಾಧ್ಯಮಗಳ ವೀಕ್ಷಕರಿಂದ ಮಾತ್ರವಲ್ಲ; ಅವರ ಸ್ವಂತ ಪಕ್ಷದವರಿಂದಲೂ ಮೆಚ್ಚುಗೆಯನ್ನು ತಂದುಕೊಟ್ಟಿವೆ.

ಕಳೆದ ವಾರ ಕಾಂಗ್ರೆಸ್ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಖೇರಾ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. “ನೀವು ಈ ದಿನಗಳಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದೀರಿ” ಎಂದವರು ಹೇಳಿದ್ದರು.

ಕೆಲವರು ಅವರಿಗೆ ಯೂ ಟ್ಯೂಬ್ ಚಾನೆಲೊಂದನ್ನು ಆರಂಭಿಸಿ, ಬಿಜೆಪಿಯ ಅಪಪ್ರಚಾರವನ್ನು ಎದುರಿಸುವಂತೆಯೂ ಮನವಿ ಮಾಡಿದ್ದಾರೆ. “ಈ ಸೂಚನೆಯಿಂದ ನಾನು ವಿನೀತನಾಗಿದ್ದೇನೆ; ಆದರದು ಸರಿಯಲ್ಲ. ಇದು ಯಾವತ್ತೂ ವ್ಯಕ್ತಿಗತ ವಿಚರವಾಗಿರಲಿಲ್ಲ. ಅದು ಇನ್ನಷ್ಟು ಮಹತ್ವದ ಸಂದೇಶಕ್ಕೆ ಸಂಬಂಧಿಸಿದ್ದಾಗಿದೆ. ಅದು ನಮ್ಮ ವಾದವನ್ನು ಮರಳಿ ಪುನರುಜ್ಜೀವನಗೊಳಿಸುವ ಅಗತ್ಯಕ್ಕೆ ಸಂಬಂಧಿಸಿದೆ” ಎಂದ ಅವರು ಹೇಳಿದರು.

ಖೇರಾ “ಪ್ರತಿಕೃತಿ”ಗಳಿಗೆ ಕರೆ

ಅವರ ಜನಪ್ರಿಯ ಶೈಲಿಗೆ ದಿನೇದಿನೇ ಹೆಚ್ಚುತ್ತಿರುವ ಮೆಚ್ಚುಗೆಯ ನಡುವೆ “ಖೇರಾ ಪ್ರತಿಕೃತಿ”ಗಳ ಅಗತ್ಯದ ಬಗ್ಗೆಯೂ ಕಾಂಗ್ರೆಸ್ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಪಕ್ಷದಲ್ಲಿ ಅವರಂತಹ ಬಿರುಸಿನ, ಕಟುವಾದ ವಕ್ತಾರರ ಕೊರತೆ ಇರುವಾಗ ಅವರಂತಹ ಇನ್ನಷ್ಟು ಮಂದಿ ಬೇಕು ಎಂಬುದರ ಪ್ರತಿಫಲನವಾಗಿದೆ ಇದು. ಖೇರಾ ಅವರ ವಿಡಿಯೋಗಳಿಗೆ ಸಿಗುತ್ತಿರುವ ಸ್ವಾಗತವು ಇತರ ವಕ್ತಾರರು ಕೂಡಾ ಹೆಚ್ಚು ಆಕ್ರಮಣಕಾರಿ ನಿಲುವು ತಮ್ಮದಾಗಿಸಿಕೊಳ್ಳಬೇಕು ಎಂದು ಪಕ್ಷದ ನಾಯಕರು ಹೇಳುತ್ತಾರೆ.

“ಎಂದಾದರೂ ಬಿಜೆಪಿಯೊಂದಿಗೆ ಟಿವಿ ಚರ್ಚೆಯಲ್ಲಿ ಭಾಗವಹಿಸಿರುವ ನಮ್ಮಲ್ಲಿ ಪ್ರತಿಯೊಬ್ಬರಿಗೂ ಅವರನ್ನು ಎದುರಿಸಲು ನಮಗೆ ಸ್ವಲ್ಪ ಮಟ್ಟಿನ ವಾಕ್ಚಾತುರ್ಯ, ಸ್ವಲ್ಪ ಮಟ್ಟಿನ ಆಕ್ರಮಣಶೀಲತೆ ಬೇಕೆಂದು ಅರ್ಥವಾಗಿದೆ. ಸೌಮ್ಯ ಮನೋಭಾವದಿಂದ ಅದನ್ನು ಮಾಡಲು ಸಾಧ್ಯವಿಲ್ಲ” ಎಂದು ಹೆಸರು ಹೇಳಲು ಇಚ್ಚಿಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.

ಖೇರಾ ಅವರು ಪಕ್ಷದ ಹೊಸ ವಕ್ತಾರರಲ್ಲಿ ಒಬ್ಬರಾಗಿದ್ದರೆ, ಹಿರಿಯರಾದ ರಣದೀಪ್ ಸುರ್ಜೇವಾಲ್, ಅಭಿಶೇಕ್ ಮನು ಸಿಂಘ್ವಿ ಮುಂತಾದವರು ಈಗ ಹಲವಾರು ವರ್ಷಗಳಿಂದ ಇದ್ದವರು ಹಿಂದೆ ಯುಪಿಎ ಅವಧಿಯ ಕಾಂಗ್ರೆಸ್ ಧೋರಣೆಗಳ ಸಮರ್ಥನೆಯಲ್ಲಿ ತೊಡಗಿದ್ದರೆ, ಈಗ ಬಿಜೆಪಿಯ ಧೋರಣೆಗಳನನ್ನ ವಿರೋಧಿಸುವುದರಲ್ಲಿ ತೊಡಗಿದ್ದಾರೆ. ಆದರೆ, ಅವರ ವಾಕ್ಚಾತುರ್ಯವು ಅಪರೂಪಕ್ಕೊಮ್ಮೆ ಮಾತ್ರ ಈ ಮಟ್ಟವನ್ನು ಮುಟ್ಟಿದೆ.

“ನಮ್ಮ ಕೆಲವು ಹಿರಿಯ ವಕ್ತಾರರ ಚರ್ಚಾ ಕೌಶಲವು ಪುನರಾವರ್ತನೆಯಂತೆ ಕಾಣುತ್ತಿರುವುದು ನಿಜ. ಕೆಲವು ಸಲ ಅವು ಏಕತಾನತೆಯಿಂದ ಕೂಡಿರುವುದೂ ನಿಜ. ಆದರೆ, ಅದು ಏಕೆಂದರೆ,  ಹಿರಿಯ ನಾಯಕರು ಹೆಚ್ಚು ಜಾಗರೂಕತೆಯಿಂದ ಇರಬೇಕಾಗುತ್ತದೆ. ಅವರು ಲೈವ್ ಟಿವಿಯಲ್ಲಿ ಕಡಿಮೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಒಬ್ಬ ಪಕ್ಷದ ನಾಯಕರು ಎಷ್ಟು ಆಕ್ರಮಣಕಾರಿಯಾಗಿ ಮಾತನಾಡಬಹುದು ಎಂಬ ಮೇಲೆಯೂ ಈ ವ್ಯತ್ಯಾಸ ಅವಲಂಬಿಸಬಹುದು” ಎಂದು ಈ ನಾಯಕ ಹೇಳಿದರು.

“ಪವನ್ ಖೇರಾ, ಒಬ್ಬ ಸಂಬಿತ್ ಪಾತ್ರನನ್ನು ಎದುರಿಸಬಹುದು. ಆದರೆ, ಅಭಿಶೇಕ್ ಮನು ಸಂಘ್ವಿ ಅಂತವರು ರವಿಶಂಕರ್ ಪ್ರಸಾದ್ ಅಂತಹ ಹಿರಿಯರ ವಿರುದ್ಧ ಚರ್ಚೆ ಮಾಡಬೇಕಾಗುತ್ತದೆ. ಆದುದರಿಂದ ಅವರು ತಮ್ಮ ವಾಕ್ಚಾತುರ್ಯವನ್ನೂ, ಅಕಾಮಣಶೀಲತೆಯನ್ನೂ ನಿಯಂತ್ರಣದಲ್ಲಿ ಇಡಬೇಕಾಗುತ್ತದೆ” ಎಂದು ಈ ನಾಯಕರು ಹೇಳುತ್ತಾರೆ.

ಕೃಪೆ: ದಿ ಪ್ರಿಂಟ್ (ಫಾತಿಮಾ ಖಾನ್)

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಗೌರಿ ಲಂಕೇಶ್ ನೆನಪಿದೆಯಾ? ಎಂದು ಪತ್ರಕರ್ತೆ ರಾಣಾ ಅಯೂಬ್ ಗೆ ಜೀವ ಬೆದರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆರೋಪಿ ಲೊಕೇಶನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಗೌಪ್ಯತೆ ಹಕ್ಕಿಗೆ ಧಕ್ಕೆ ತರುತ್ತದೆ: ಸುಪ್ರೀಂ...

0
ಆರೋಪಿ ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಬೇಕೆಂಬ ಜಾಮೀನು ಷರತ್ತು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಗೌಪ್ಯತೆಯ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಮೌಖಿಕವಾಗಿ  ಹೇಳಿದೆ. ಗೂಗಲ್ ಲೊಕೇಷನ್‌ ಪಿನ್ ಹಂಚಿಕೊಳ್ಳಲು...