Homeಕರ್ನಾಟಕಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕಾಳಿ ಸ್ವಾಮೀಜಿಯ ಪ್ರಕರಣ ಮುತಾಲಿಕ್‌ ಹೇಳಿಕೆಯ ಮುಂದುವರಿದ ಭಾಗವಾಗಿಯೇ ಇದೆ. ಮುಖಗಳು ಬೇರೆಯಾದರೂ ಧ್ವನಿ ಒಂದೇ.

- Advertisement -
- Advertisement -

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ ಸ್ವಾಮೀಜಿ ಬಿಡುಗಡೆ ಮಾಡಿದ್ದ ವಿಡಿಯೊ ವಿವಾದ ಸೃಷ್ಟಿಸಿದೆ. ಕೋಮು ಸೌಹಾರ್ದತೆ ಹಾನಿ ಮಾಡಲು ಯತ್ನಿಸಿದ ಸ್ವಾಮೀಜಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಕಾಳಿ ಸ್ವಾಮೀಜಿ ಮಸೀದಿ ಮುಂದೆ ನಿಂತು ಮಾತನಾಡುತ್ತಾ ಮಸೀದಿ ಕೆಡವಲು ಕರೆ ನೀಡಿದ್ದರು. ದೇವಾಲಯವನ್ನು ದ್ವಂಸ ಮಾಡಿ ಮಸೀದಿ ಮಾಡಿದ್ದಾರೆ. ಹೀಗಾಗಿ ಬಾಬ್ರಿ ಮಸೀದಿ ರೀತಿಯಲ್ಲಿ ಕೆಡವಬೇಕು ಎಂದು ವಿಡಿಯೊ ಮಾಡಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಅಷ್ಟೇ ಅಲ್ಲದೇ, “ನನ್ನ ಹೇಳಿಕೆಗೆ ಈಗಲೂ ನಾನು ಬದ್ದನಾಗಿದ್ದೇನೆ. ಅಯೋಧ್ಯೆಯಲ್ಲಿ ರಾಮ ಮಂದಿರದಂತೆ ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ‌ ಕಟ್ಟುತ್ತೇವೆ. ಮಸೀದಿ‌ ನನಗೆ ದೇವಾಲಯದ ರೀತಿ‌ ಕಾಣಿಸಿದೆ” ಎಂದು ಬಂಧನದ ಬಳಿಕ ಹೇಳಿಕೆ ನೀಡಿದ್ದರು.

ದೇವಾಲಯಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ ಎಂದು ಸಂಘ ಪರಿವಾರದ ಮುಖಗಳು ಆರೋಪಿಸುವುದು ಇದೇ ಮೊದಲೇನೂ ಅಲ್ಲ. ಅಲ್ಲದೇ ಮೈಸೂರು ಸಂಸ್ಥಾನವನ್ನು ಮುಸ್ಲಿಂ ದೊರೆಗಳಾದ ‘ಹೈದರಾಲಿ’ ಮತ್ತು ‘ಟಿಪ್ಪು’ ಆಳಿದ್ದರಿಂದ ಈ ರೀತಿಯ ಆರೋಪಗಳನ್ನು ಮಾಡುವುದು ಸಾಮಾನ್ಯವಾಗಿದೆ.

ಟಿಪ್ಪು ಸುಲ್ತಾನ್‌ ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ. ಅಲ್ಲದೇ ಟಿಪ್ಪು ಕೋಮು ಸೌಹಾರ್ದತೆಗೂ ಹೆಸರಾಗಿದ್ದ ಎಂಬುದನ್ನು ಇತಿಹಾಸ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಆದರೆ ಆತ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಮುಸ್ಲಿಂ ವಿರುದ್ಧ ದ್ವೇಷವನ್ನು ಹರಡುವುದು ಎಗ್ಗಿಲ್ಲದೇ ಸಾಗಿದೆ. ಟಿಪ್ಪು ಹಿಂದೂ-ಮುಸ್ಲಿಂ ಭಾವೈಕ್ಯತೆ ಹೆಸರಾಗಿದ್ದ ಎಂಬುದಕ್ಕೆ ಆತ ಹಿಂದೂ ದೇವಾಲಯಗಳಿಗೆ ಕೊಟ್ಟ ಉಂಬಳಿಗಳು, ಹಿಂದೂಗಳನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಂಡಿದ್ದು, ಶೃಂಗೇರಿ ಮಠದ ಸ್ವಾಮೀಜಿಯೊಂದಿಗೆ ಆತ ಹೊಂದಿದ್ದ ಪ್ರೀತಿ, ವಿಶ್ವಾಸಗಳೇ ಸಾಕ್ಷಿಯಾಗಿ ನಿಂತಿವೆ. ಆದರೆ ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ಆತನ ಅಧಿಕಾರವಧಿಯಲ್ಲಿ ಹಿಂದೂಗಳನ್ನು ಅಪಮಾನಿಸಲಾಗಿದೆ ಎಂದು ಬಿಂಬಿಸುತ್ತಿರುವುದನ್ನು ಕಾಣಬಹುದು. ಕಾಳಿ ಸ್ವಾಮೀಜಿ ಆರೋಪ ಇದೇ ಹಿನ್ನೆಲೆಯಲ್ಲಿ ಮೂಡಿಬಂದಿರುವುದೆಂದು ಎಂಥವರೂ ಊಹಿಸುತ್ತಾರೆ. (ಟಿಪ್ಪು ಕುರಿತು ಹರಡಲಾಗಿರುವ ಸುಳ್ಳುಗಳಿಗೆ ಸಂಬಂಧಿಸಿದಂತೆ ಹಾಗೂ ನಿಜಸಂಗತಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಕಾಳಿ ಸ್ವಾಮೀಜಿಯಷ್ಟೇ ಅಲ್ಲ, ಹೀಗೆ ಕೋಮುದ್ವೇಷವನ್ನು ಹರಡುವ ಯತ್ನಗಳು ಮೊದಲಿನಿಂದಲೂ ಸಾಗುತ್ತಲೇ ಇವೆ. ರಾಯಚೂರಿನಲ್ಲಿ ಮಸೀದಿ ಒಡೆದಾಗ ದೇವಾಲಯ ಪತ್ತೆಯಾಗಿದೆ ಎಂದು ಸುದ್ದಿ ಹಬ್ಬಿಸಲಾಗಿತ್ತು. 2016ರಲ್ಲಿ ರಾಯಚೂರು ಜಿಲ್ಲೆಯ ಅಧಿಕಾರಿಗಳು ರಸ್ತೆ ವಿಸ್ತರಣೆಯ ಭಾಗವಾಗಿ ರಾಯಚೂರಿನ ಏಕ್ ಮಿನಾರ್ ಮಸೀದಿಯ ಭಾಗವನ್ನು ಕೆಡವಿದ್ದರು. ಏಕ್ ಮಿನಾರ್ ಮಸೀದಿ ಧ್ವಂಸದ ನಂತರ ಹೊರಹೊಮ್ಮಿದ ಕಂಬಗಳು ಹಿಂದೂ ದೇವಾಲಯಗಳಲ್ಲಿ ನಿರ್ಮಿಸಲಾದ ಕಂಬಗಳನ್ನು ಹೋಲುತ್ತವೆ ಎಂದು ಆರೋಪಿಸಲಾಗಿತ್ತು. ಆದರೆ, ಏಕ್ ಮಿನಾರ್ ಮಸೀದಿ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ನಿರಾಧಾರ ಎಂದು ಅಂದಿನ ರಾಯಚೂರು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದರು. “ಪ್ರಾಚೀನ ಸ್ಮಾರಕಗಳಲ್ಲಿ ಹಲವು ವಿಧಗಳಿವೆ. ಇಲ್ಲಿ ಪತ್ತೆಯಾಗಿರುವ ಕಂಬವನ್ನು ಹಿಂದೂ ದೇವಾಲಯ” ಎಂದು ಜಿಲ್ಲಾಧಿಕಾರಿ ಹೇಳಿದ್ದರು.

ಕಾಳಿ ಸ್ವಾಮೀಜಿಯನ್ನು ಬಂಧಿಸಲಾಗಿದೆ. ಆದರೆ ಇದೇ ರೀತಿ ಈ ಹಿಂದೆಯೇ ಹೇಳಿಕೆ ನೀಡಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಪ್ರಕರಣ ಏನಾಯಿತು ಎಂಬ ಪ್ರಶ್ನೆ ಏಳುತ್ತದೆ.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ತೆಗೆದು ದೇವಾಲಯ ನಿರ್ಮಿಸಿದಂತೆ ಗದಗದ ಜುಮ್ಮಾ ಮಸೀದಿಯನ್ನು ತೆರವು ಮಾಡಿ ಅಲ್ಲಿ ವೆಂಕಟೇಶ್ವರ ದೇವಾಲಯ ಕಟ್ಟಬೇಕೆಂಬ ಪ್ರಚೋದನೆಯನ್ನು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ ಅವರು ಕಳೆದ ಅಕ್ಟೋಬರ್‌ನಲ್ಲಿ ನೀಡಿದ್ದರು.

ಗದುಗಿನ ಮುನ್ಸಿಪಲ್‌ ಮೈದಾನದಲ್ಲಿ ನಡೆದ “ಮತಾಂತರ ತಡೆಗಾಗಿ ಪಥ ಸಂಚಲನ” ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅವರು ಪ್ರಚೋದನಾಕಾರಿಯಾಗಿ ಮಾತನಾಡಿದ್ದ ವಿಡಿಯೋ ವೈರಲ್‌ ಆಗಿತ್ತು.

“71 ವರ್ಷ ರಾಮಮಂದಿರ ಸಲುವಾಗಿ ಹೋರಾಟ ಮಾಡಬೇಕಾಯಿತು. 72 ವರ್ಷಗಳ ನಂತರ ಆ ಬಾಬರಿ ಮಸೀದಿಯನ್ನು ತೆಗೆದುಹಾಕಿ ಭವ್ಯ ದೇವಾಲಯವನ್ನು ನಿರ್ಮಾಣ ಮಾಡುವಂತಹ ಸಂಕಲ್ಪ ಪೂರ್ಣವಾಗಿದೆ. ಅದೇ ಮಾದರಿಯಲ್ಲಿ ಗದಗಿನಲ್ಲಿ ಜುಮ್ಮಾ ಮಸೀದಿ ಏನಿದೆ ಅದು ವೆಂಕಟೇಶ್ವರ ದೇವಸ್ಥಾನ…” ಎಂದು ಮುತಾಲಿಕ್‌ ಪ್ರಚೋದಿಸಿದ್ದರು.

ಮುತಾಲಿಕ್‌ ಅವರ ಪ್ರಚೋದನಕಾರಿ ಭಾಷಣಕ್ಕೆ ಶಿಳ್ಳೆ, ಚಪ್ಪಾಳೆಯನ್ನು ಸಭೆಯಲ್ಲಿದ್ದವರು ಹಾಕಿದ್ದರು. ಬಾಬರ್‌‌ನನ್ನು ನಿಂದಿಸಿದ ಮುತಾಲಿಕ್‌, “ಟಿಪ್ಪು ಸುಲ್ತಾನ್‌ ಅವಧಿಯಲ್ಲಿ ಒಡೆದು ಹಾಕಿದ ದೇವಸ್ಥಾನಗಳ ಪೈಕಿ ಜಮ್ಮಾ ಮಸೀದಿ ಜಾಗದಲ್ಲಿದ್ದ ವೆಂಕಟೇಶ್ವರ ದೇವಾಲಯವೂ ಒಂದು ಎಂಬ ಆಧಾರ ಸಹಿತ ಹೋರಾಟವನ್ನು ಮುಂದೆ ಮಾಡೋಣ” ಎಂದಿದ್ದರು. ಕಾಳಿ ಸ್ವಾಮೀಜಿಯ ಪ್ರಕರಣ ಮುತಾಲಿಕ್‌ ಹೇಳಿಕೆಯ ಮುಂದುವರಿದ ಭಾಗವಾಗಿಯೇ ಇದೆ. ಮುಖಗಳು ಬೇರೆಯಾದರೂ ಧ್ವನಿ ಒಂದೇ.

ಅಭಿವೃದ್ಧಿ ಅಜೆಂಡಾ ಇಲ್ಲದಿರುವಾಗ ಕೋಮು ಭಾವನೆಗಳೇ ಅಧಿಕಾರದ ಅಸ್ತ್ರಗಳಾಗಿ ಪರಿಣಮಿಸುತ್ತಿರುವ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ಹರಿದ್ವಾರದ ಧರ್ಮ ಸಂಸತ್‌ನಲ್ಲಿ ಮುಸ್ಲಿಮರ ನರಹತ್ಯೆಗೆ ಯತಿ ನರಸಿಂಗಾನಂದ ಕರೆ ನೀಡಿದ್ದನ್ನು ನೋಡಿದೆವು. ಕಾಳಿಚರಣ್‌ ಎಂಬ ಸ್ವಾಮೀಜಿ ಗಾಂಧೀಜಿಯ ಕುರಿತು ಅವಹೇಳನಕಾರಿಯಾಗಿ ಮತ್ತೊಂದೆಡೆ ಮಾತನಾಡಿದ್ದರು. ಇದನ್ನೆಲ್ಲ ಪ್ರಧಾನಿ ಮೋದಿಯವರು ನೋಡುತ್ತಾ ಕುಳಿತ್ತಿದ್ದಾರೆ. ಈ ಬೆಳವಣಿಗೆಗಳನ್ನು ವಿರೋಧಿಸಿ ಒಂದು ಹೇಳಿಕೆಯನ್ನೂ ಪ್ರಧಾನಿಯವರು ನೀಡಿಲ್ಲ. ಐದು ರಾಜ್ಯಗಳ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಮುಸ್ಲಿಂ ವಿರೋಧಿ ಹೇಳಿಕೆಗಳೇ ಚುನಾವಣೆಯ ಅಸ್ತ್ರಗಳಾಗಿ ಬಳಕೆಯಾಗುತ್ತಿರುವುದು ವಿಪರ್ಯಾಸ.


ಇದನ್ನೂ ಓದಿರಿ: ತಿರುಚಿದ ಟಿಪ್ಪು ಇತಿಹಾಸವನ್ನು ’ಫ್ಯಾಕ್ಟ್‌ಚೆಕ್’ ಮಾಡುವ ಕೃತಿ ’ಟಿಪ್ಪು ಸುಲ್ತಾನ- ಹಿಂದೂ, ಕ್ರೈಸ್ತ ವಿರೋಧಿಯೇ?’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

0
ಭಾರತೀಯ ಕಿಸಾನ್ ಯೂನಿಯನ್‌ನ ಸಂಸ್ಥಾಪಕ ಸದಸ್ಯ ಮತ್ತು ಹಿಂದೂ-ಮುಸ್ಲಿಂ ಏಕತೆಯ ಪ್ರತೀಕವಾಗಿದ್ದ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲವಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೌಲಾ ನಿಧನದಿಂದಾಗಿ ಮಹೇಂದ್ರಸಿಂಗ್ ಟಿಕೇತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್...