ಮಹಾರಾಷ್ಟ್ರದ ಆಡಳಿತರೂಢ ಮಹಾ ವಿಕಾಸ್ ಅಘಾಡಿ (MVS) ಮೈತ್ರಿ ಸರ್ಕಾರವು ರಾಜ್ಯದ ಚುನಾವಣಾ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿಯು ರಾಜ್ಯದಲ್ಲಿ ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಆದರೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.
ರಾಜ್ಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ನಗರ ಸ್ಥಳೀಯ ಸಂಸ್ಥೆಗಳ 1,649 ಸ್ಥಾನಗಳಲ್ಲಿ, ಬಿಜೆಪಿ 384 ಸ್ಥಾನಗಳನ್ನು ಗಳಿಸಿದರೆ, ಎನ್‌ಸಿಪಿ 344 ಸ್ಥಾನಗಳನ್ನು, ಕಾಂಗ್ರೆಸ್ 316 ಮತ್ತು ಶಿವಸೇನೆ 284 ಸ್ಥಾನಗಳನ್ನು ಗೆದ್ದಿದೆ.
ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ‘ಮಹಾ ವಿಕಾಸ್ ಅಘಾಡಿ’ ಮೈತ್ರಿ ಕೂಟ ಒಟ್ಟು 944 ಸ್ಥಾನಗಳನ್ನು ಗಳಿಸಿದೆ ಎಂದು ಈ ಅಂಕಿ ಅಂಶ ಹೇಳಿದೆ. ಮೈತ್ರಿಕೂಟದಲ್ಲಿ ಎನ್‌ಸಿಪಿ ಅತಿ ಹೆಚ್ಚು ಲಾಭ ಗಳಿಸಿದರೆ, ಶಿವಸೇನೆ 284 ಸ್ಥಾನಗಳೊಂದಿಗೆ ತನ್ನ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಶಿವಸೇನೆಯವರಾಗಿದ್ದರೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಚುನಾವಣೆಯ ಮತ್ತೊಂದು ಗಮನಾರ್ಹ ವೈಶಿಷ್ಟ್ಯವೆಂದರೆ, ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಅವರ ಕ್ಷೇತ್ರವಾದ ಕರ್ಜಾತ್‌ನ 17 ಸ್ಥಾನಗಳಲ್ಲಿ 15 ಸ್ಥಾನಗಳನ್ನು ಎನ್‌ಸಿಪಿ ಗೆದ್ದಿದೆ. ಬಿಜೆಪಿ ಪ್ರಾಬಲ್ಯದ್ದ ಈ ನಗರ ಸಂಸ್ಥೆಯಲ್ಲಿ ರೋಹಿತ್ ಪವಾರ್ ಅವರು ರಾಜಕೀಯ ಚಿತ್ರಣವನ್ನು ಬದಲಾಯಿಸಲು ನಿರಂತರ ಕೆಲಸ ಮಾಡಿದ್ದರು. ಇದೇ ರೀತಿ ಕವಠೆ-ಮಹಂಕಲ್‌ನ 17 ಸ್ಥಾನಗಳಲ್ಲಿ 10 ಸ್ಥಾನಗಳನ್ನು ಎನ್‌ಸಿಪಿ ಗೆದ್ದುಕೊಂಡಿದೆ.
ಹಣ ಮತ್ತು ಅಧಿಕಾರದ ದುರುಪಯೋಗದ ಹೊರತಾಗಿಯೂ ಬಿಜೆಪಿಯು ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತೊಮ್ಮೆ ನಂಬರ್ ಒನ್ ಪಕ್ಷವಾಗಿದೆ ಎಂದು ಅವರು ಹೇಳಿದ್ದಾರೆ. “ಜನರು ಮತ್ತೆ ಬಿಜೆಪಿಯ ಕೆಲಸ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರಬಲ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರ ಸಿಎಂ ಪತ್ನಿಗೆ ಅವಹೇಳನ: BJP ಐಟಿ ಸೆಲ್ ಸದಸ್ಯನ ಬಂಧನ
ಮಹಾ ವಿಕಾಸ್ ಅಘಾಡಿ ಮೈತ್ರಿಯು ಮತ್ತೊಮ್ಮೆ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ ಎಂದು ಎನ್‌ಸಿಪಿ ವಕ್ತಾರ ಮತ್ತು ಕ್ಯಾಬಿನೆಟ್ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. “ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವು ಮಹಾರಾಷ್ಟ್ರದ ಜನರು ಮಹಾ ವಿಕಾಸ್ ಅಘಾಡಿಯ ಪರವಾಗಿದ್ದಾರೆ ಎಂಬುದನ್ನು ನಿರೂಪಿಸುತ್ತದೆ. ಇದು ನಮ್ಮ ಒಳ್ಳೆಯ ಕೆಲಸಕ್ಕೆ ಸಿಕ್ಕ ರಶೀದಿಯಾಗಿದೆ” ಎಂದು ಮಲಿಕ್ ಪ್ರತಿಪಾದಿಸಿದ್ದಾರೆ.
ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮಾತನಾಡಿ, “ನಮ್ಮ ನಾಯಕತ್ವವು ನಿರಂತರವಾಗಿ ಸಾಮಾನ್ಯ ಜನರೊಂದಿಗೆ ಸಂವಾದ ನಡೆಸುತ್ತಿದೆ, ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತಿದೆ ಮತ್ತು ಜನಪರ ಕೆಲಸಗಳತ್ತ ಗಮನ ಹರಿಸುತ್ತಿದೆ” ಎಂದು ಹೇಳಿದ್ದಾರೆ. ಫಲಿತಾಂಶ ಖುಷಿ ತಂದಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಳೆ ಹೇಳಿದ್ದಾರೆ.
ಇದನ್ನೂ ಓದಿ:ದ್ವೇಷ ಭಾಷಣ: ವಿವಾದಿತ ಕಾಳಿಚರಣ್ ಸ್ವಾಮಿಯನ್ನು ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು