Homeಮುಖಪುಟ"ದಾಳಿ ವೇಳೆ ಪೊಲೀಸರು ನೋಡುತ್ತಾ ನಿಂತಿದ್ದರು": ಮುಂಬೈ ಹಿಂದುತ್ವ ಹಿಂಸಾಚಾರ ಸಂತ್ರಸ್ತರ ಅಳಲು

“ದಾಳಿ ವೇಳೆ ಪೊಲೀಸರು ನೋಡುತ್ತಾ ನಿಂತಿದ್ದರು”: ಮುಂಬೈ ಹಿಂದುತ್ವ ಹಿಂಸಾಚಾರ ಸಂತ್ರಸ್ತರ ಅಳಲು

- Advertisement -
- Advertisement -

ಜನವರಿ 22ರಂದು ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ದಿನ ಹಿಂದೂಗಳ ರ್‍ಯಾಲಿಗೆ ಮುಸ್ಲಿಮರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಮುಂಬೈನ ಮೀರಾ ರಸ್ತೆಯಲ್ಲಿ ಹಿಂದುತ್ವ ಗುಂಪಿನ ಉದ್ರಿಕ್ತ ಯುವಕರು ದಾಂಧಲೆ ನಡೆಸಿದ್ದಾರೆ.

ಜನವರಿ 23ರಂದು ಮಂಗಳವಾರ ಮುಂಬೈನ ಮೀರಾ ರಸ್ತೆಯ ಶಾಂತಿ ನಗರದ ಸೆಕ್ಟರ್ 5ರಲ್ಲಿ 200 ರಿಂದ 300 ಹಿಂದುತ್ವ ಗುಂಪಿನ ಯುವಕರು ಮುಸ್ಲಿಮರ ಅಂಗಡಿ-ಮುಂಗಟ್ಟುಗಳನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಅಲ್ಲದೆ, ಮುಸ್ಲಿಮರನ್ನು ಹುಡುಕಿ ಹುಡುಕಿ ಹಲ್ಲೆ ನಡೆಸಿದ್ದಾರೆ. ಯುವಕರ ಗುಂಪು ‘ಜೈ ಶ್ರೀರಾಮ್‌’ ಎಂಬ ಕೇಸರಿ ಧ್ವಜ ಇಲ್ಲದ ಹಾಗೂ ಮುಸ್ಲಿಂ ಹೆಸರಿನ ಅಂಗಡಿ ಮತ್ತು ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ಉದ್ರಿಕ್ತರ ಗುಂಪು ದಾಳಿ ನಡೆಸಿದ ಅಂಗಡಿಗಳ ಪೈಕಿ ಮೀರಾ ರಸ್ತೆಯ ಶಂಶರ್ ಆಲಂ ಅವರದ್ದೂ ಒಂದು. ಕಳೆದ 13 ವರ್ಷಗಳಿಂದ ಶಂಶರ್ ಆಲಂ ಇಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಜನವರಿ 23ರಂದು ಸುಮಾರು 20 ಹರೆಯದ ಯುವಕರ ಗುಂಪು ಏಕಾಏಕಿ ಶಂಶರ್ ಅವರ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದೆ. ಯುವಕರು ತಮ್ಮ ಬಳಿ ಬ್ಯಾಗ್‌ಗಳಲ್ಲಿ ಕಲ್ಲುಗಳನ್ನು ಶೇಖರಿಸಿಟ್ಟುಕೊಂಡಿದ್ದರು. ಇದರಿಂದ ಅವರು ದಾಳಿಗೆ ಮೊದಲೇ ಸಿದ್ದತೆ ನಡೆಸಿದ್ದರು ಎಂದು ಗೊತ್ತಾಗುತ್ತದೆ. ಶಂಶರ್ ಆಲಂ ಅವರ ಅಂಗಡಿಯಲ್ಲಿ 30 ಸೆಕೆಂಡುಗಳ ಕಾಲ ಗಾಜು ಸೇರಿದಂತೆ ಇತ್ಯಾದಿ ವಸ್ತುಗಳನ್ನು ಪುಡಿಗೈದ ಅವರು ಮುಂದೆ ಸಾಗಿದ್ದಾರೆ ಎಂದು ದಿ ವೈರ್ ತಿಳಿಸಿದೆ.

“ನನ್ನ ಅಂಗಡಿ ಧ್ವಂಸಗೈದ ಬಳಿಕ ಉದ್ರಿಕ್ತ ಯುವಕರು ಪಕ್ಕದ ರಸ್ತೆಯ ಮುಸ್ಲಿಮರಿಗೆ ಸೇರಿದ ಇತರ ಅಂಗಡಿಗಳ ಮೇಲೆ ದಾಳಿ ಮುಂದುವರಿಸಿದರು. ಈ ವೇಳೆ ನಯಾ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಅಲ್ಲೇ ಕೇವಲ 20 ಮೀಟರ್ ದೂರದಲ್ಲಿ ರಸ್ತೆಯಲ್ಲಿ ನಿಂತಿದ್ದರು. ಯುವಕರ ದುಷ್ಕೃತ್ಯ ನೋಡಿಯೂ ಅವರು ಸುಮ್ಮನಾಗಿದ್ದರು” ಎಂದು ಶಂಶರ್ ಆಲಂ ಹೇಳಿದ್ದಾರೆ.

ಜನವರಿ 24ರಂದು ಶಂಶರ್ ಆಲಂ ಸೇರಿದಂತೆ ಹಿಂದುತ್ವ ತಂಡದ ದಾಳಿಯಿಂದ ನಷ್ಟ ಅನುಭವಿಸಿದ ಅಂಗಡಿ ಮಾಲೀಕರು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಸಾಕ್ಷ್ಯ ಒದಗಿಸಿದರೂ ಪೊಲೀಸರು ಆರೋಪಿಗಳ ವಿರುದ್ದ ಎಫ್‌ಐಆರ್‌ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೀರಾ ರಸ್ತೆಯ ‘ಚೋಟೆ ನವಾಬ್’ ಎಂಬ ಶೂ ಅಂಗಡಿಯ ಮಾಲೀಕ ಶೇಖ್ ಫೈಯಾಝ್ ಅಹ್ಮದ್ ತನ್ನ ಅಂಗಡಿಯ ಮೇಲೆ ದಾಳಿ ಮಾಡಿದ ಸಮಯದ ಸಿಸಿಟಿವಿ ದೃಶ್ಯಾವಳಿಗಳನ್ನು ನಮಗೆ ತೋರಿಸಿದ್ದಾರೆ. ಅದರಲ್ಲಿ ಹದಿಹರೆಯದ ಯುವಕರು ಅಂಗಡಿಯ ಮೇಲೆ ಕಲ್ಲು ತೂರುವುದನ್ನು ನೋಡಬಹುದು. ಅವರ ಬೆನ್ನಿನಲ್ಲಿ ಕಲ್ಲುಗಳನ್ನು ತುಂಬಿದ್ದ ಭಾರವಾದ ಬ್ಯಾಗ್‌ ಇತ್ತು. ಕೆಲವರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು ಎಂದು ದಿ ವೈರ್ ಹೇಳಿದೆ.

ಮೀರಾ ರಸ್ತೆಯ ಸೆಕ್ಟರ್ 3ರಲ್ಲಿ “ರಶೀದ್ ಟೆಂಪೋ ಸರ್ವಿಸ್” ಎಂದು ಬರೆಯಲಾಗಿದ್ದ ಟೆಂಪೋ ಮೇಲೆ ಯುವಕ ಗುಂಪು ದಾಳಿ ನಡೆಸಿದೆ. ಘಟನೆಯಲ್ಲಿ 21 ವರ್ಷದ ಮೊಹಮ್ಮದ್ ತಾರಿಕ್ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ. ಈ ವೇಳೆ ಪಕ್ಕದ ಮೊಬೈಲ್ ಅಂಗಡಿಯೊಂದರ ಸಮೀಪದಲ್ಲಿದ್ದ ಮತ್ತೊಬ್ಬ 49 ವರ್ಷದ ವ್ಯಕ್ತಿ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ವೈರಲ್‌ ವಿಡಿಯೋವೊಂದರಲ್ಲಿ ಯುವಕರ ಗುಂಪು “ರಶೀದ್ ಟೆಂಪೋ ಸರ್ವಿಸ್” ಎಂದು ಬರೆಯಲಾಗಿದ್ದ ಟೆಂಪೋ ಮೇಲೆ ದಾಳಿ ನಡೆಸಿದ್ದನ್ನು ನೋಡಬಹುದು. ದಾಳಿ ವೇಳೆ ಟೆಂಪೋ ಚಾಲಕ ಹೊರಗಿಳಿದಿದ್ದಾನೆ. ಆಗ ಆತನಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಟೆಂಪೋ ಮೇಲಿದ್ದ ಮತ್ತೊಬ್ಬ ವ್ಯಕ್ತಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆಗ ಅಪ್ರಾಪ್ತ ಹುಡುಗನೊಬ್ಬ ಟೆಂಪೋ ಮೇಲೇರಿ ಆತನಿಗೆ ಥಳಿಸಿರುವುದು ವಿಡಿಯೋದಲ್ಲಿ ಗಮನಿಸಬಹುದು.

ಮುಸ್ಲಿಮರ ಆಟೋ ರಿಕ್ಷಾ ಮತ್ತು ಟೆಂಪೋ ಮೇಲೆ ದಾಳಿ ನಡೆಸಿರುವುದು

ಗುಜರಾತ್ ಮೂಲದ ಮೊಹಮ್ಮದ್ ಉಮರ್ ಎಂಬವರು ಮೀರಾ ರಸ್ತೆಯ ಕನ್ನಡಕದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಅಂಗಡಿಗೆ ಮುಸ್ಲಿಂ ಹೆಸರು ಇರಲಿಲ್ಲ, ಬದಲಾಗಿ ‘ಬ್ಲೂ ಐ’ ಎಂದು ಹೆಸರಿಡಲಾಗಿತ್ತು. ಆದರೂ, ಉದ್ರಿಕ್ತತರ ಗುಂಪು ದಾಳಿ ಮಾಡಿತ್ತು. “ನಾವು ಅಂಗಡಿಯ ಹೊರಗಡೆ ಕೇಸರಿ ಧ್ವಜ ಕಟ್ಟಿರಲಿಲ್ಲ. ಅಲ್ಲದೆ, ನಮ್ಮ ಗಡ್ಡ ನೋಡಿ ಮುಸ್ಲಿಮರು ಎಂದು ಊಹೆ ಮಾಡಿ ಅವರು ದಾಳಿ ಮಾಡಿದ್ದಾರೆ” ಎಂದು ಉಮರ್ ತಿಳಿಸಿದ್ದಾರೆ. “ಯುವಕರು ನಮ್ಮ ಪಕ್ಕದ ಅಂಗಡಿ ‘ಗಂಗಾರ್ ಐನೇಷನ್’ ಮೇಲೆಯೂ ದಾಳಿ ಮಾಡಿದ್ದಾರೆ. ಆ ಅಂಗಡಿ ನಿಜವಾಗಿಯೂ ಒಬ್ಬ ಹಿಂದೂ ವ್ಯಕ್ತಿಗೆ ಸೇರಿದ್ದು. ಆದರೆ, ಅಂಗಡಿಯ ಹೊರಗೆ ಕೇಸರಿ ಧ್ವಜ ಇಲ್ಲದ ಕಾರಣ ಅವರು ದಾಳಿ ಮಾಡಿದ್ದಾರೆ” ಎಂದು ಉಮರ್ ಹೇಳಿದ್ದಾರೆ.

ಮತ್ತೊಂದು ವೈರಲ್ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿ ಮೇಲೆ ಹಿಂದುತ್ವ ಗುಂಪು ದಾಳಿ ಮಾಡಿರುವುದನ್ನು ನೋಡಬಹುದು. ಅಂಗಡಿಯ ಮಾಲೀಕ ಪರಿ ಪರಿಯಾಗಿ ಬೇಡಿಕೊಂಡರು ಉದ್ರಿಕ್ತರ ಗುಂಪು ದಾಳಿ ನಡೆಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ ಕಾಣುತ್ತಿದೆ. ಅಂಗಡಿಯಲ್ಲಿ ಕೇಸರಿ ಧ್ವಜ ಕಟ್ಟಲು ನಿರಾಕರಿಸಿದ್ದಕ್ಕೆ ದಾಳಿ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ.

ಮುಸ್ಲಿಂ ವ್ಯಕ್ತಿಯ ಅಂಗಡಿ ಮೇಲೆ ದಾಳಿ ನಡೆಸಿದ್ದು ಎನ್ನಲಾದ ವಿಡಿಯೋ

“ಸುದೀರ್ಘ ಸಮಯ ಪೊಲೀಸರ ಮನವೊಲಿಸಿ ಅಂತಿಮವಾಗಿ ನಾಲ್ಕು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದೇವೆ. ಅವುಗಳಲ್ಲಿ ಒಂದು ರಸ್ತೆಯಲ್ಲಿ 16 ವರ್ಷದ ಹುಡುಗನ ಮೇಲೆ ಹಲ್ಲೆ ಮಾಡಿದ ಗುಂಪೊಂದರ ವಿರುದ್ಧವಾಗಿತ್ತು. ದಾಳಿಯ ನಂತರ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರಿಗೆ ಎಫ್‌ಐಆರ್‌ ದಾಖಲಿಸಲು ಇಷ್ಟವಿರಲಿಲ್ಲ. ಆದರೆ, ನಾವು ಬಗ್ಗಲು ನಿರಾಕರಿಸಿದಾಗ ಅವರು ಅಂತಿಮವಾಗಿ ಎಫ್‌ಐಆರ್ ದಾಖಲಿಸಿದರು ಎಂದು ದಾಳಿಯ ಸಂತ್ರಸ್ತರ ಪರ ವಾದ ಮಂಡಿಸಿದ ವಕೀಲ ಸಚಿನ್ ಸಾಲ್ವಿ ಹೇಳಿದ್ದಾರೆ ಎಂದು ದಿ ವೈರ್‌ ವರದಿ ಮಾಡಿದೆ.

16 ವರ್ಷದ ಹುಡುಗನ ಮೇಲೆ ದಾಳಿ ಮಾಡಿದ್ದು ಎನ್ನಲಾದ ವಿಡಿಯೋ

ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಥಾಣೆ ಜಿಲ್ಲೆಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮೀರಾ ರಸ್ತೆಯಲ್ಲಿ ಹಿಂಸಾಚಾರ ನಡೆದಿದೆ. 2011ರ ಜನಗಣತಿಯ ಮಾಹಿತಿಯ ಪ್ರಕಾರ, ಮೀರಾ ರಸ್ತೆಯಲ್ಲಿ ಶೇ.16ರಷ್ಟು ಮುಸ್ಲಿಮರಿದ್ದಾರೆ. ಕಳೆದ ದಶಕದಲ್ಲಿ, ಮುಂಬೈನಲ್ಲಿ ಜನಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿದಾಗ, ಜನರು ಮೀರಾ ರಸ್ತೆ ಮತ್ತು ಭಾಯಂದರ್‌ನಂತಹ ದೂರದ ಉಪನಗರ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಮೀರಾ ರಸ್ತೆಯ ಆಸುಪಾಸಿನಲ್ಲಿ ಅನೇಕ ಖಾಲಿ ಜಾಗಗಳಿವೆ. ಈ ಜಾಗಗಳ ಮೇಲೆ ರಿಯಲ್ ಎಸ್ಟೇಟ್ ಮಾಫಿಯಾಗಳ ಕಣ್ಣಿದೆ. ಮುಸ್ಲಿಮರು ಈ ಭಾಗದಲ್ಲಿ ಹೆಚ್ಚಿರುವುದು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಒಂದು ರೀತಿ ಅಡ್ಡಿಯಾಗಿದೆ. ಹಾಗಾಗಿ, ಗಲಭೆ ಎಬ್ಬಿಸಿ ಮುಸ್ಲಿಮರುನ್ನು ಇಲ್ಲಿಂದ ಓಡಿಸುವ ತಂತ್ರ ರೂಪಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಖಾಲಿದ್ ಸಿದ್ದಿಕಿ ಹೇಳಿದ್ದಾರೆ ಎಂದು ದಿ ವೈರ್ ತಿಳಿಸಿದೆ.

ಹಿಂಸಾಚಾರ ಮೊದಲು ಆರಂಭಗೊಂಡಿದ್ದು ರಾಮಮಂದಿರ ಉದ್ಘಾಟನೆಯ ಮುನ್ನಾ ದಿನ, ಅಂದರೆ ಜನವರಿ 21ರಂದು. ಅಂದು ರಾತ್ರಿ 10:30 ರ ಸುಮಾರಿಗೆ ಕೆಲ ಯುವಕರು ನಯಾ ನಗರದ ಬನೇಗರ್ ಗಲ್ಲಿಗೆ ಆಗಮಿಸಿದ್ದರು. ಬಹುತೇಕ ಮುಸ್ಲಿಮರ ಮನೆಗಳಿರುವ ಈ ಪ್ರದೇಶದಲ್ಲಿ ಅವರು ಜೋರಾಗಿ “ಜೈ ಶ್ರೀರಾಮ್” ಎಂಬ ಘೋಷಣೆ ಮೊಳಗಿಸಿದ್ದರು. ಕೊನೆಗೆ, ಇಲ್ಲಿನ ಸಾಂಘ್ವಿ ಎಂಪೈರ್ ಹೌಸಿಂಗ್ ಸೊಸೈಟಿಯ ಬಳಿ ತಮ್ಮ ವಾಹನ ನಿಲ್ಲಿಸಿ ಜೋರಾಗಿ ಹಾಡು ಹಾಕಿದ್ದರು. ಈ ಪ್ರದೇಶದಿಂದ ಹೊರ ಹೋಗಲು ರಸ್ತೆಯಿಲ್ಲ. ಆದರೂ, ಯುವಕರು ಮುಸ್ಲಿಮರನ್ನು ಪ್ರಚೋದಿಸುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದರು ಎಂದು ಸಾಂಘ್ವಿ ಎಂಪೈರ್ ಹೌಸಿಂಗ್ ಸೊಸೈಟಿಯ ನಿವಾಸಿ ಝುಲೇಖಾ ತಿಳಿಸಿದ್ದಾರೆ.

ಯವಕರ ಉಪಟಳ ಹೆಚ್ಚಾದಾಗ ಮುಸ್ಲಿಂ ಪುರುಷರು ಅವರನ್ನು ಪ್ರಶ್ನಿಸಿದ್ದರು. ಅದನ್ನು ಕೆಲವರು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ವಿಚಾರವನ್ನು ದೊಡ್ಡದಾಗಿ ಬಿಂಬಿಸಿದ ಹಿಂದುತ್ವ ಸಂಘಟನೆಗಳು ರಾಜ್ಯಾದ್ಯಂತ ಸುದ್ದಿ ಹಬ್ಬಿಸಿದವು. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲು ಪ್ರಯತ್ನಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದರು. ಈ ಬೆನ್ನಲ್ಲೇ 13 ಜನರನ್ನು ಬಂಧಿಸಲಾಯಿತು. ಅವರಲ್ಲಿ ಇಬ್ಬರು ನನ್ನ ಪುತ್ರರು. “ಪೊಲೀಸರು ನಮ್ಮ ಮಕ್ಕಳನ್ನು ಕರೆದುಕೊಂಡು ಹೋದರು. ಆದರೆ, ತಡರಾತ್ರಿ ನಮ್ಮ ಏರಿಯಾಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ ಕೂಗಿದವರನ್ನು ಪ್ರಶ್ನಿಸಲಿಲ್ಲ. ಮರುದಿನ ನಗರ ಪಾಲಿಕೆಯವರು ಮುಸ್ಲಿಮರ ಅಂಗಡಿಗಳನ್ನು ತೆರವುಗೊಳಿಸಿದರು” ಎಂದು ಝುಲೇಖಾ ಆರೋಪಿಸಿದ್ದಾರೆ.

ಇದನ್ನೂ ಓದಿ : ಬೀದರ್‌: ದಲಿತ ವಿದ್ಯಾರ್ಥಿಗೆ ‘ಜೈ ಶ್ರೀರಾಮ್‌’ ಹೇಳುವಂತೆ ಒತ್ತಾಯಿಸಿ ಹಲ್ಲೆ ಆರೋಪ; ನಾಲ್ವರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...