Homeಮುಖಪುಟವಿಪಕ್ಷಗಳ ಮೈತ್ರಿ: ಬಿಜೆಪಿಯನ್ನು 2024ರಲ್ಲಿ ಅಧಿಕಾರದಿಂದ ದೂರವಿಡಲಿದೆಯೇ?

ವಿಪಕ್ಷಗಳ ಮೈತ್ರಿ: ಬಿಜೆಪಿಯನ್ನು 2024ರಲ್ಲಿ ಅಧಿಕಾರದಿಂದ ದೂರವಿಡಲಿದೆಯೇ?

- Advertisement -
- Advertisement -

2014ರ ಚುನಾವಣೆಯ ಸಂದರ್ಭದಲ್ಲಿ ’ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ, ಏಕೆಂದರೆ ಹೇಗೆ ನೋಡಿದರೂ ಬಿಜೆಪಿ 200 ಸ್ಥಾನಗಳನ್ನು ದಾಟಲಾರದು’ ಎಂಬ ವಿಶ್ಲೇಷಣೆಯನ್ನು ಮಾಡಲಾಗಿತ್ತು. 2019ರ ಚುನಾವಣಾ ವೇಳೆಯಲ್ಲಿ ’ಬಿಜೆಪಿಯು ಈಗಾಗಲೇ ತಾನು ಗೆಲ್ಲಬಹುದಾದ ಎಲ್ಲಾ ರಾಜ್ಯಗಳಲ್ಲೂ ಶೇ.90ರಿಂದ ಶೇ.100 ಕ್ಷೇತ್ರಗಳನ್ನು ಗೆದ್ದಿರುವುದರಿಂದ, ಅದಕ್ಕಿಂತ ಸೀಟುಗಳು ಕಡಿಮೆಯಾಗುತ್ತವೆಯೇ ಹೊರತು ಹೆಚ್ಚಾಗಲು ಸಾಧ್ಯವೇ ಇಲ್ಲ. ಹಾಗಾಗಿ ಹೆಚ್ಚೆಂದರೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ ಹೊರತು ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂಬ ವಿಶ್ಲೇಷಣೆಯನ್ನು ಮಾಡಲಾಗಿತ್ತು. 2014ರಲ್ಲಿ ಬಿಜೆಪಿಯು ಸ್ವತಂತ್ರವಾಗಿ ಅಧಿಕಾರ ಹಿಡಿಯಿತು. 2019ರಲ್ಲಿ ಇನ್ನೂ ಹೆಚ್ಚು ಸೀಟುಗಳನ್ನು ಪಡೆದು 300ರ ಸಂಖ್ಯೆಯನ್ನೂ ದಾಟಿತು. ಹೀಗಿದ್ದ ಮೇಲೆ ಈಗ ಯಾವ ಧೈರ್ಯದ ಮೇಲೆ ’ತರ್ಕ ಮತ್ತು ಅಂಕಿ-ಸಂಖ್ಯೆಗಳನ್ನು ನೋಡಿದರೆ ಬಿಜೆಪಿಯು ಈ ಸಾರಿ ಅಧಿಕಾರ ಪಡೆಯುವ ಸಾಧ್ಯತೆ ಇಲ್ಲ’ ಎಂಬ ಮಾತನ್ನು ಹೇಳಬಹುದು?

ಆದರೆ, ತರ್ಕ ಮತ್ತು ಅಂಕಿ-ಸಂಖ್ಯೆಯ ಆಧಾರದ ಮೇಲೆಯೇ ಬಿಜೆಪಿಯು ಸ್ವತಂತ್ರವಾಗಿ ಸರ್ಕಾರ ರಚಿಸುವುದು ನೂರಕ್ಕೆ ನೂರು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಈ ರೀತಿ ಹೇಳುತ್ತಿರುವವರಲ್ಲಿ ಕೆಲವರು, ಈ ಹಿಂದೆ ಬಿಜೆಪಿಯು 2014 & 2019ರಲ್ಲಿ ಬಹುಮತ ಹಾಗೂ 300ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುತ್ತದೆಂದು ಕರಾರುವಾಕ್ಕಾಗಿ ಹೇಳಿದ್ದವರಾಗಿದ್ದರು ಎಂಬುದು ವಿಶೇಷ.

ಹೌದು ಈಗ ಇವೆಲ್ಲವನ್ನೂ ಚರ್ಚಿಸುವ ಸಂದರ್ಭ ಬಂದಿರುವುದು, ಇತ್ತೀಚೆಗೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಮಹತ್ವದ ಜಂಟಿ ಸಭೆಯ ಹಿನ್ನೆಲೆಯಲ್ಲೇ. ಅಂತಿಮವಾಗಿ ಈ ’ಮೈತ್ರಿ’ಯು ಯಾವ ಸ್ವರೂಪ ತೆಗೆದುಕೊಳ್ಳಬಹುದು ಎಂಬುದನ್ನು ಮುಂದಿನ ಏಳೆಂಟು ತಿಂಗಳುಗಳ ಕಾಲ ನಿರ್ಧರಿಸಲಿವೆ. ಬಹಳಷ್ಟು ಸೆಕ್ಯುಲರ್ ಜನರು ಅಪೇಕ್ಷಿಸುತ್ತಿರುವ ಒಂದು ಸಂಗತಿಯಿದೆ. ಅದೇನೆಂದರೆ ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಯ ವಿರುದ್ಧ ವಿರೋಧ ಪಕ್ಷಗಳ ವತಿಯಿಂದ ಜಂಟಿಯಾಗಿ ಒಬ್ಬರೇ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂದು. ಆದರೆ ಮೇಲೆ ಹೇಳಲಾದ ವಿಶ್ಲೇಷಕರ ಪ್ರಕಾರ ಅದರ ಅಗತ್ಯವೇ ಇಲ್ಲ!

ಮೊದಲು ಎರಡು ಸ್ವಾರಸ್ಯಕರ ಸಂಗತಿಗಳನ್ನು ನೋಡೋಣ.

2019ರಲ್ಲಿ ಬಿಜೆಪಿಯು ಎಲ್ಲೆಲ್ಲಿ ಎಷ್ಟೆಷ್ಟು ಸೀಟುಗಳನ್ನು ಗೆದ್ದಿತ್ತು ಎಂಬುದರಲ್ಲಿ ಅಂತಹ ಸ್ವಾರಸ್ಯವಿದೆ. ನೀವು ಬಿಹಾರದ ಎಡದಿಂದ ಶುರು ಮಾಡಿ ಕರ್ನಾಟಕದ ಬಲಕ್ಕೆ ಹಾದು ಹೋಗುವ ಹಾಗೆ ಮೇಲಿನಿಂದ ಕೆಳಕ್ಕೆ ಒಂದು ಗೆರೆ ಎಳೆಯಿರಿ. ಆ ಗೆರೆಯ ಬಲಕ್ಕೆ ಇರುವ ರಾಜ್ಯಗಳಲ್ಲಿ ಬಿಜೆಪಿಯು ಕಳೆದ ಸಾರಿ ಗೆದ್ದಿದ್ದು 72 ಸೀಟುಗಳನ್ನು. ಅಲ್ಲಿ ಅಸ್ಸಾಂ ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲೂ ಬಿಜೆಪಿಯ ಪ್ರಧಾನ ಎದುರಾಳಿ ಆಯಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು. ಆ ಗೆರೆಯ ಎಡಕ್ಕೆ ಇರುವ ರಾಜ್ಯಗಳಲ್ಲಿ ಬಿಜೆಪಿಯು ಕಳೆದ ಸಾರಿ ಗೆದ್ದಿದ್ದು 231 ಸೀಟುಗಳನ್ನು. ಈ ರಾಜ್ಯಗಳ ಪೈಕಿ ಬಿಜೆಪಿಯ ಪ್ರಧಾನ ಎದುರಾಳಿ, ಉತ್ತರ ಪ್ರದೇಶ ಹಾಗೂ ದೆಹಲಿಯನ್ನು ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷ.

ನರೇಂದ್ರ ಮೋದಿ

ಬಲಕ್ಕೆ ಇರುವ ರಾಜ್ಯಗಳು ಮತ್ತು ಅಲ್ಲಿ ಬಿಜೆಪಿ ಗೆದ್ದ ಸೀಟುಗಳನ್ನು ಒಮ್ಮೆ ನೋಡಿ. ಅರುಣಾಚಲ ಪ್ರದೇಶ (2), ಅಸ್ಸಾಂ (9), ಬಿಹಾರ (17), ಜಾರ್ಖಂಡ್ (11), ಮಣಿಪುರ (1), ಒರಿಸ್ಸಾ (8), ತೆಲಂಗಾಣ (4), ತ್ರಿಪುರಾ (2), ಪಶ್ಚಿಮ ಬಂಗಾಳ (18). ಈ ರಾಜ್ಯಗಳ ಪೈಕಿ ಯಾವುದರಲ್ಲಿ ಬಿಜೆಪಿಯು ಹಿಂದಿಗಿಂತ ಹೆಚ್ಚು ಪ್ರಬಲವಾಗಿದೆ? ದೊಡ್ಡ ರಾಜ್ಯಗಳ ಪೈಕಿ ಬಿಹಾರದಲ್ಲಿ ಈ ಹಿಂದೆ ಬಿಜೆಪಿಯ ಜೊತೆಗಿದ್ದ ಜೆಡಿಯು ಈಗ ಅದರ ವಿರೋಧಿ ಪಾಳೆಯದ ಅತ್ಯಂತ ಪ್ರಮುಖ ಪಕ್ಷವಾಗಿದೆ ಹಾಗೂ ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ ಮೈತ್ರಿ ಹೊಂದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗರಿಷ್ಠ ಸಾಧನೆ ಕಳೆದ ಲೋಕಸಭೆಯ ಹೊತ್ತಿನದ್ದೇ. ಆ ನಂತರ ಇಬ್ಬರು ಸಂಸದರು ಟಿಎಂಸಿಗೆ ಹೋಗಿದ್ದಾರೆ, ವಿಧಾನಸಭೆಯಲ್ಲಿ ಬಿಜೆಪಿಯು ಸೋತಿದೆ. ಅಂದರೆ ಈ ಎಲ್ಲಾ ಪ್ರಾದೇಶಿಕ ಪಕ್ಷಗಳು ಹಿಂದಿನಂತೆಯೇ ಅಥವಾ ಹಿಂದಿಗಿಂತ ಹೆಚ್ಚು ಬಲದಲ್ಲಿ ಬಿಜೆಪಿಯನ್ನು ಎದುರಿಸಲಿವೆ.

ಎಡಕ್ಕೆ ಇರುವ ರಾಜ್ಯಗಳನ್ನೊಮ್ಮೆ ನೋಡಿ. ಅದರಲ್ಲಿ ಗರಿಷ್ಠ ಸಂಖ್ಯೆಯ ಸೀಟುಗಳು ಮತ್ತು ಅಲ್ಲಿ ಬಿಜೆಪಿ ಪಡೆದುಕೊಂಡ ಸೀಟುಗಳ ಲೆಕ್ಕವನ್ನೂ ನೋಡಿ. ಜಮ್ಮು ಮತ್ತು ಕಾಶ್ಮೀರ (3ರಲ್ಲಿ 3), ಛತ್ತೀಸ್‌ಗಢ (11ರಲ್ಲಿ 9), ದೆಹಲಿ (7ರಲ್ಲಿ 7), ಗೋವಾ (2ರಲ್ಲಿ 1), ಗುಜರಾತ್ (26ರಲ್ಲಿ 26), ಹರಿಯಾಣ (10ರಲ್ಲಿ 10), ಹಿಮಾಚಲ ಪ್ರದೇಶ (4ರಲ್ಲಿ 4), ಕರ್ನಾಟಕ (28ರಲ್ಲಿ 25), ಮಧ್ಯಪ್ರದೇಶ (29ರಲ್ಲಿ 28), ಮಹಾರಾಷ್ಟ್ರ (48ರಲ್ಲಿ 23), ರಾಜಸ್ತಾನ (25ರಲ್ಲಿ 24), ಉತ್ತರ ಪ್ರದೇಶ (80ರಲ್ಲಿ 62), ಪಂಜಾಬ್ (13ರಲ್ಲಿ 2) ಚಂಡೀಗಢ ಮತ್ತು ಡಿಯು ದಮನಗಳಲ್ಲಿ ತಲಾ ಒಂದರಲ್ಲಿ ಒಂದು. ಅಂದರೆ ಬಹುತೇಕ ರಾಜ್ಯಗಳಲ್ಲಿ ನೂರಕ್ಕೆ ನೂರು. ಈಗಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಯೇ ಇನ್ನೂ ಐದು ಸೀಟುಗಳನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುತ್ತಾರೆ. ಅದನ್ನು ಹೊರತುಪಡಿಸಿದರೆ ಇನ್ನೆಲ್ಲೂ ಅಂತಹ ಸ್ಥಿತಿ ಇಲ್ಲ.

2019ರಲ್ಲೂ ಇದೇ ರೀತಿಯ ವಾದವಿತ್ತಲ್ಲವಾ? ಬಿಜೆಪಿ ದೆಹಲಿ, ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢಗಳಲ್ಲಿ ಗೆಲ್ಲಬಹುದಾದ ಗರಿಷ್ಠ ಸೀಟುಗಳನ್ನು ಗೆದ್ದು ಬಿಟ್ಟಿದೆ. ಇನ್ನೂ ಹೆಚ್ಚೇನೂ ಆಗುವ ಸಾಧ್ಯತೆಯೇ ಇಲ್ಲ. ಆದರೆ ಕಡಿಮೆಯಷ್ಟೇ ಆಗಬೇಕು ಎಂಬ ಚರ್ಚೆ ಇತ್ತು. ಆಗಿದ್ದೇನು? ವಾಸ್ತವದಲ್ಲಿ ಮೇಲಿನ ರಾಜ್ಯಗಳಲ್ಲಿ ಕೇವಲ 10-15 ಸೀಟುಗಳು ಮಾತ್ರ ಕಡಿಮೆಯಾದವು. ಆದರೆ, ಕರ್ನಾಟಕ (17ರಿಂದ 25ಕ್ಕೆ ಹೆಚ್ಚಳವಾಯಿತು), ಒರಿಸ್ಸಾ (1ರಿಂದ 8ಕ್ಕೆ ಏರಿತು), ಪ.ಬಂಗಾಳಗಳಲ್ಲಿ (2ರಿಂದ 18ಕ್ಕೆ ಏರಿತು) ಹಿಂದಿಗಿಂತ ಹೆಚ್ಚು ಗೆದ್ದರು. ಈ ಸಾರಿ ಈ ಮೂರೂ ರಾಜ್ಯಗಳ ಪೈಕಿ ಒರಿಸ್ಸಾ ಹೊರತುಪಡಿಸಿದರೆ ಉಳಿದೆರಡು ರಾಜ್ಯಗಳಲ್ಲಿ ಬಿಜೆಪಿಯ ಸೀಟುಗಳು ಖಂಡಿತವಾಗಿ ಕಡಿಮೆಯಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದನ್ನೂ ಓದಿ: ಉತ್ತರ ಪ್ರದೇಶ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸುಳಿವು ನೀಡುತ್ತಿರುವ ಬಿಎಸ್‌ಪಿ

ಇದರಾಚೆಗಿನ ಕೆಲವು ರಾಜ್ಯಗಳಲ್ಲಿ ಅಂದರೆ ಕೇರಳ ಮತ್ತು ತಮಿಳುನಾಡುಗಳಲ್ಲೂ ಬಿಜೆಪಿಯ ಬಲ ಹಿಂದಿಗಿಂತ ಹೆಚ್ಚಾಗಿರುವುದು ವಾಸ್ತವ. ಆದರೆ, ಅದು ಒಂದು ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ರೀತಿಯಲ್ಲಿ ಅದಿಲ್ಲ ಎಂಬುದೂ ವಾಸ್ತವವೇ. ಇಂದೇ ಚುನಾವಣೆ ನಡೆದರೂ ಜಾರ್ಖಂಡ್‌ನಲ್ಲಿ 2, ಹಿಮಾಚಲದಲ್ಲಿ 3, ಪಂಜಾಬಿನಲ್ಲಿ 2, ಹರಿಯಾಣದಲ್ಲಿ 5, ಚಂಡೀಗಢದಲ್ಲಿ 1, ದೆಹಲಿಯಲ್ಲಿ 2, ರಾಜಸ್ತಾನದಲ್ಲಿ 6, ಮಹಾರಾಷ್ಟ್ರದಲ್ಲಿ 8, ಕರ್ನಾಟಕದಲ್ಲಿ 10, ಪಶ್ಚಿಮ ಬಂಗಾಳದಲ್ಲಿ 8, ಬಿಹಾರದಲ್ಲಿ 7, ಜಾರ್ಖಂಡಿನಲ್ಲಿ 4, ಉತ್ತರಾಖಂಡದಲ್ಲಿ 1, ಮಧ್ಯಪ್ರದೇಶದಲ್ಲಿ 10, ಛತ್ತೀಸಗಢದಲ್ಲಿ 2, ಅಸ್ಸಾಂನಲ್ಲಿ 1 ಸೀಟುಗಳಾದರೂ ಕನಿಷ್ಠ ಕಡಿಮೆಯಾಗುತ್ತದೆ. ನೀವೇ ಇನ್ನೊಮ್ಮೆ ಮೇಲಿನ ಸಂಖ್ಯೆಗಳನ್ನು ಹಿಂದೆ ಬಿಜೆಪಿಯು ಪಡೆದುಕೊಂಡಿದ್ದ ಸೀಟುಗಳ ಜೊತೆಗೆ ಹೋಲಿಸಿ ನೋಡಿ. ಎಲ್ಲೂ ಉತ್ಪ್ರೇಕ್ಷೆ ಇಲ್ಲದಿರುವುದು ಕಂಡುಬರುತ್ತದೆ. ಅಂದರೆ ಕನಿಷ್ಠ 72 ಸೀಟುಗಳು ಕಡಿಮೆಯಾಗಲಿವೆ. ಉತ್ತರ ಪ್ರದೇಶದಲ್ಲಿ 5 ಸೀಟುಗಳು ಹೆಚ್ಚಾದರೂ, ನಿವ್ವಳ 67 ಸೀಟುಗಳು ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂಬುದು ಒಂದು ಲೆಕ್ಕಾಚಾರ.

ಬಿಹಾರದ ಎಡದಿಂದ ಕರ್ನಾಟಕದ ಬಲದೆಡೆ ಎಳೆಯುವ ಗೆರೆಯ ಬಲ ಭಾಗದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಹೋರಾಟವನ್ನು ಹಿಂದೆಯೂ ನಡೆಸಿದ್ದವು; ಈಗಲೂ ನಡೆಸುತ್ತವೆ. ಸೆಣೆಸಬೇಕಾದ್ದು ಗೆರೆಯ ಎಡಕ್ಕಿರುವ ಕಾಂಗ್ರೆಸ್ಸೇ. ಅದೂ ಕೂಡ ಈ ಸಾರಿ ಮೇಲೆ ಸೂಚಿಸಲಾದಷ್ಟು ಕನಿಷ್ಠ ಹೋರಾಟ ನಡೆಸಿಯೇ ತೀರುತ್ತದೆ ಎಂಬ ಲೆಕ್ಕಾಚಾರ ಶುರುವಾದದ್ದು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆದ ನಂತರ. ಲೆಕ್ಕಾಚಾರ ಮುಂದಿಟ್ಟಿದ್ದು ಆ ಚುನಾವಣೆಯ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್.

ಇಂತಹ ಲೆಕ್ಕಾಚಾರ ಈಗ ಮತ್ತೆ ಬಲ ಪಡೆದುಕೊಂಡಿರುವುದು ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ. ಈಗ ಈ ಲೆಕ್ಕಾಚಾರದಲ್ಲಿ ಪ್ರಶಾಂತ್ ಕಿಶೋರ್ ಇಲ್ಲ ಅಷ್ಟೇ ವ್ಯತ್ಯಾಸ.

ಈ ಎರಡು ಅವಧಿಗಳ ನಡುವೆ ನಾಲ್ಕು ಮಹತ್ವದ ಬೆಳವಣಿಗೆಗಳು ನಡೆದಿವೆ. ಬಿಹಾರದಲ್ಲಿ ಜೆಡಿಯು ಮತ್ತೆ ಕಾಂಗ್ರೆಸ್ ಹಾಗೂ ಆರ್‌ಜೆಡಿ ಜೊತೆ ಸೇರಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಒಂದು ಬಣ ಕಾಂಗ್ರೆಸ್ ಗುಂಪಿನ ಕಡೆಗೂ, ಇನ್ನೊಂದು ಬಣ ಬಿಜೆಪಿಯ ಕಡೆಗೂ ಹೋಗಿದೆ. ಪಂಜಾಬಿನಲ್ಲಿ ಆಪ್, ಗುಜರಾತಿನಲ್ಲಿ ಬಿಜೆಪಿ, ಹಿಮಾಚಲದಲ್ಲಿ ಕಾಂಗ್ರೆಸ್ ದೊಡ್ಡ ಗೆಲುವುಗಳನ್ನು ಸಾಧಿಸಿವೆ. ಕಾಂಗ್ರೆಸ್ ಮತ್ತು ಅದರ ನೇತಾರ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಿಂದ ಮೇಲ್ನೋಟದ ಒಂದಷ್ಟು ಚೇತರಿಕೆ ಕಂಡುಕೊಂಡಿವೆ/ದ್ದಾರೆ. ಆದರೆ, ಎಲ್ಲರೂ ಎದುರು ನೋಡುತ್ತಿದ್ದದ್ದು ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು. ಅದರಲ್ಲಿ ಬಿಜೆಪಿಗೆ ನಿರ್ಣಾಯಕ ಸೋಲು ಉಂಟಾಯಿತು. ಹಾಗಾಗಿಯೇ ಬಿಜೆಪಿ ವಿರೋಧಿ ಪಾಳೆಯದಲ್ಲಿ ಒಂದು ಆಶಾವಾದವಿದೆ. ವಾಸ್ತವದಲ್ಲಿ ಕರ್ನಾಟಕದ ಗೆಲುವು ಸೃಷ್ಟಿಸಿದ ಯೂಫೋರಿಯ ಹೆಚ್ಚು ಕಾಲವೇನೂ ಬಾಳುವುದಿಲ್ಲ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸದೇ ಇದ್ದರೆ ಇಂದಿರುವ ಉತ್ಸಾಹ ಇರುತ್ತಿರಲಿಲ್ಲ.

ಹಾಗಾದರೆ, ಈ ಎಲ್ಲಾ ರಾಜಕೀಯ ಪಕ್ಷಗಳೂ ಮಹತ್ವದ ವಿಚಾರಗಳಲ್ಲಿ ಸರ್ವಸಮ್ಮತ ಅಭಿಪ್ರಾಯಕ್ಕೆ ಬರುವ ಸಾಧ್ಯತೆಯಿದೆಯೇ? ಇಷ್ಟೆಲ್ಲಾ ಜನ ಸೇರಿದರೆ ಜಗಳವಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚಲ್ಲವೇ? ವಾಸ್ತವವೇನೆಂದರೆ ಇವರೆಲ್ಲರೂ ಬಿಜೆಪಿ ಅಭ್ಯರ್ಥಿಯ ಎದುರು ಒಂದೇ ಅಭ್ಯರ್ಥಿಯನ್ನು ನಿಲ್ಲಿಸುವ ಅಗತ್ಯವೇ ಇಲ್ಲ. ಇದೇ ಎರಡನೆಯ ಸ್ವಾರಸ್ಯಕರ ಸಂಗತಿ.

ಇದನ್ನು ಅರ್ಥಮಾಡಿಕೊಳ್ಳಲು ಇಂದು ದೇಶದ ರಾಜಕೀಯ ಸಮೀಕರಣ ಭಿನ್ನವಾಗಿರುವ ಐದು ರೀತಿಯ ರಾಜ್ಯಗಳನ್ನು ನೋಡಬೇಕಿದೆ.

ಪ್ರಧಾನವಾಗಿ ಕಾಂಗ್ರೆಸ್ ವರ್ಸಸ್ ಬಿಜೆಪಿ ರಾಜ್ಯಗಳು: ಹಿಮಾಚಲ, ಉತ್ತರಾಖಂಡ್, ಹರಿಯಾಣ, ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಕರ್ನಾಟಕ. (ಇಲ್ಲಿ ಕಾಂಗ್ರೆಸ್ಸಿಗೆ ಮೈತ್ರಿಯ ಅಗತ್ಯವಿಲ್ಲ, ಒಂದು ವೇಳೆ ಮೈತ್ರಿ ಆದರೂ ಒಳ್ಳೆಯದಾಗುತ್ತದೆಂದು ಹೇಳಲಾಗುವುದಿಲ್ಲ. ಮೈತ್ರಿ ಮಾಡಿಕೊಂಡಿದ್ದರಿಂದಲೂ ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನು ಹೆಚ್ಚು ಗೆದ್ದಿತು ಎಂಬುದನ್ನು ಗಮನಿಸಬಹುದು)

ಪ್ರಧಾನವಾಗಿ ಪ್ರಾದೇಶಿಕ ಪಕ್ಷ ವರ್ಸಸ್ ಬಿಜೆಪಿ ರಾಜ್ಯಗಳು: ಪ.ಬಂಗಾಳ, ಉತ್ತರ ಪ್ರದೇಶ, ಒರಿಸ್ಸಾ, ದೆಹಲಿ. (ಇಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮೈತ್ರಿಯ ಅಗತ್ಯವಿಲ್ಲ. ಮೈತ್ರಿ ಆದರೂ ಒಳ್ಳೆಯದಾಗುತ್ತದೆಂದು ಹೇಳಲಾಗುವುದಿಲ್ಲ)

ಕಾಂಗ್ರೆಸ್+ಪ್ರಾದೇಶಿಕ ಪಕ್ಷ ವರ್ಸಸ್ ಬಿಜೆಪಿ: ಬಿಹಾರ, ಜಾರ್ಖಂಡ್, ಜಮ್ಮು-ಕಾಶ್ಮೀರ, ಅಸ್ಸಾಂ, ಮಹಾರಾಷ್ಟ್ರ (ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಈಗಾಗಲೇ ಮೈತ್ರಿ ಇದೆ. ಹಾಗಾಗಿ ಹೊಸ ಮೈತ್ರಿಯ ಅಗತ್ಯವಿಲ್ಲ)

(ಎಂಪಿ ಸೀಟು ಗೆಲ್ಲುವ ಲೆಕ್ಕಾಚಾರದಲ್ಲಿ) ಬಿಜೆಪಿ ಪಕ್ಷ ಲೆಕ್ಕಕ್ಕೇ ಇಲ್ಲದ ರಾಜ್ಯಗಳು ಕೇರಳ, ತಮಿಳುನಾಡು, ಆಂಧ್ರ, ಪಂಜಾಬ್. ಇಲ್ಲಿ ಬಿಜೆಪಿಯೆದುರು ಬಿಜೆಪಿಯೇತರ ಪಕ್ಷಗಳು ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸುವುದು ಅಪಾಯಕಾರಿ. ಅದರ ಬದಲು ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ಅಥವಾ ನಾಲ್ಕನೇ ಸ್ಥಾನಕ್ಕೆ ದೂಡಬೇಕೆಂದರೆ ಬಿಜೆಪಿಯೇತರ ಪಕ್ಷಗಳೇ ಪರಸ್ಪರ ಸೆಣೆಸಬೇಕು.

ಕಾಂಗ್ರೆಸ್, ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ: ತೆಲಂಗಾಣ. (ಇಲ್ಲಿ ಈಗ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಎರಡನೇ ಸ್ಥಾನಕ್ಕೆ ಸ್ಪರ್ಧೆಯಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವರ್ಸಸ್ ಬಿಆರ್‌ಎಸ್ ಆಗಬಹುದೇ ಹೊರತು, ಬಿಜೆಪಿಗೆ ಹೆಚ್ಚಿನ ಅವಕಾಶವಿದ್ದಂತೆ ಕಾಣುತ್ತಿಲ್ಲ.)

ವಿಚಿತ್ರ ಪರಿಸ್ಥಿತಿಯಲ್ಲಿರುವ ರಾಜ್ಯಗಳು: ಈಶಾನ್ಯ ಭಾರತದ ರಾಜ್ಯಗಳು, ಗೋವಾ.

ಅಂದರೆ, ಬಿಜೆಪಿಯೇತರ ಪಕ್ಷಗಳ ನಡುವೆ ಹೊಸದಾಗಿ ಕುದುರಬೇಕಿರುವ ಚುನಾವಣಾ ಸೀಟು ಹೊಂದಾಣಿಕೆ ಏನೂ ಇಲ್ಲ. ಇನ್ನೂ ಕೆಲವು ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳೇ ಪರಸ್ಪರ ಸೆಣೆಸುವುದು ಒಳ್ಳೆಯದು. ಆಗ ಮಾತ್ರ ಬಿಜೆಪಿ ಮೂರನೆ ಅಥವಾ ನಾಲ್ಕನೇ ಸ್ಥಾನದಲ್ಲಿರುತ್ತದೆ!!

ಮೇಲಿನ ಎರಡೂ ಸಂಗತಿಗಳು ತೋರಿಸುತ್ತಿರುವುದೇನೆಂದರೆ, 2024ರ ಚುನಾವಣೆಯ ಫಲಿತಾಂಶ ಈಗಾಗಲೇ ತೀರ್ಮಾನವಾಗಿಬಿಟ್ಟಿಲ್ಲ! ಬಿಜೆಪಿ ಮತ್ತು ಮೋದಿಯೇ ಮುಂದಿನ ಸಾರಿಯೂ ಗೆದ್ದುಬಿಡುವುದೂ ಸುಲಭವಿಲ್ಲ!! ಎಲ್ಲರೂ ಊಹಿಸುತ್ತಿರುವ ರೀತಿಯಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಂದೇ ವೇದಿಕೆಗೆ ಬಂದು ಎಲ್ಲಾ ವಿಷಯಗಳಲ್ಲೂ ಸರ್ವಸಮ್ಮತಿಯನ್ನು ಹೊಂದುವ ಅಗತ್ಯವೂ ಇಲ್ಲ!!!

ಇಲ್ಲಿ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಒಂದು, ಹಾಗಾದರೆ ಬಿಜೆಪಿಯು ತನ್ನಂತೆ ತಾನೇ ಸೋತುಬಿಡುವ ಸಾಧ್ಯತೆ ಇದೆಯೇ? ಈ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡುವುದೇನನ್ನೋ ಬಿಜೆಪಿ ಮಾಡುವ ಅಥವಾ ಅಂತಹ ಸಂದರ್ಭ ಉಂಟಾಗಿಬಿಡುವ ಸಾಧ್ಯತೆಯೇ ಇಲ್ಲವೇ? ಎರಡು, ಬಿಜೆಪಿಯೇತರ ಪಕ್ಷಗಳ ನಡುವೆ ಯಾವ ಮೈತ್ರಿಯ ಅಗತ್ಯವೂ ಇಲ್ಲವೇ?

ಖಂಡಿತವಾಗಿ ಇವೆರಡೂ ಮಹತ್ವದ ಪ್ರಶ್ನೆಗಳೇ. ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿಯೇಬಿಡಬಹುದು ಎಂದು ತೀರಾ ಇತ್ತೀಚಿನವರೆಗೂ ದೇಶದ ದೊಡ್ಡ ವಿರೋಧ ಪಕ್ಷಗಳೇ ಅಂದುಕೊಂಡಿರಲಿಲ್ಲ. ಏಕೆಂದರೆ ಇಂದು ಅಖಿಲ ಭಾರತ ಮಟ್ಟದಲ್ಲಿ ಅಂತಹ ಒಂದು ದೊಡ್ಡ ಪಕ್ಷ ಇಲ್ಲ. ಬಿಜೆಪಿಯನ್ನು ಹೊರತುಪಡಿಸಿದರೆ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷಕ್ಕೂ ಅಂತಹ ಶಕ್ತಿ ಇಲ್ಲ. ಇನ್ನು ತಮ್ಮ ರಾಜ್ಯಗಳಲ್ಲಿ ಬಿಜೆಪಿಗೆ ಸೆಡ್ಡು ಹೊಡೆದು ಎದುರಿಸುವ ಶಕ್ತಿ ಇರುವ ಪ್ರಾದೇಶಿಕ ಪಕ್ಷಗಳಲ್ಲಿ ಬಹುತೇಕ (ಅಥವಾ ಎಲ್ಲವೂ) ಒಂದು ರಾಜ್ಯದಾಚೆಗೆ ಶಕ್ತಿ ಹೊಂದಿಲ್ಲ. ಆದರೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನೇ ಹಿಡಿದುಬಿಡುತ್ತೇವೆ ಎಂಬ ಅಬ್ಬರ ತೋರಿಸಿದ್ದ ಬಿಜೆಪಿಯು ಮೂರಂಕಿಯನ್ನೂ ಮುಟ್ಟಲಿಲ್ಲ; ಟಿಎಂಸಿಯು 292 ಕ್ಷೇತ್ರಗಳ ಪೈಕಿ 213ರಲ್ಲಿ ಗೆದ್ದಿತು. ಕರ್ನಾಟಕದಲ್ಲಿ ಅಧಿಕಾರಾರೂಢ ಬಿಜೆಪಿಯ ವಿರುದ್ಧ ಕಾಂಗ್ರೆಸ್ಸು 224ರಲ್ಲಿ 135 ಸೀಟುಗಳನ್ನು ಗೆದ್ದಿತು. ಎರಡೂ ಚುನಾವಣೆಗಳಲ್ಲಿ ಸ್ವತಃ ಮೋದಿ ಮತ್ತು ಅಮಿತ್ ಶಾ ಖುದ್ದಾಗಿ ಅಬ್ಬರದ ಪ್ರಚಾರ ನಡೆಸಿದ್ದರು. ಈ ಚುನಾವಣೆಗಳು ಮೋದಿ, ಅಮಿತ್ ಶಾ, ಬಿಜೆಪಿಗಳು ಅಜೇಯರಲ್ಲ ಎಂಬ ಭರವಸೆಯನ್ನು ನೀಡಿದವು.

ಇದನ್ನೂ ಓದಿ: ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ: ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದೇನು?

ಇಷ್ಟೆಲ್ಲಾ ಹೇಳಿದ ಮೇಲೂ ಎಲ್ಲರಿಗೂ ಗೊತ್ತಿರುವ ಸಂಗತಿಯೆಂದರೆ, ವಿಧಾನಸಭಾ ಚುನಾವಣೆಗಳೇ ಬೇರೆ, ಲೋಕಸಭಾ ಚುನಾವಣೆಗಳೇ ಬೇರೆ. ಇಂದಿಗೂ ನರೇಂದ್ರ ಮೋದಿಯೇ ದೇಶದ ಅತಿ ಜನಪ್ರಿಯ ನಾಯಕ. ರಾಜ್ಯಕ್ಕೆ ಪ್ರಾದೇಶಿಕ ನಾಯಕ; ದೇಶಕ್ಕೆ ನರೇಂದ್ರ ಮೋದಿ ಎಂಬ ಘೋಷಣೆಯನ್ನು ಕೆಲವೊಮ್ಮೆ ವಿರೋಧ ಪಕ್ಷಗಳ ಸ್ಥಳೀಯ ನಾಯಕರುಗಳೇ ಹರಿಯಬಿಡುತ್ತಾರೆ. ಜನರು ಅಹುದಹುದೆನಿಸುವ ಹಾಗೆ ಮತ್ತು ಉಳಿದವರನ್ನು ಮಣ್ಣುಮುಕ್ಕಿಸುವ ಕಥನವನ್ನು ಕಟ್ಟುವುದರಲ್ಲಿ ಬಿಜೆಪಿಗೆ ಯಾರೂ ಸಾಟಿಯಿಲ್ಲ. ಅದರಲ್ಲೂ ಕಾಂಗ್ರೆಸ್ ಇದರಲ್ಲಿ ಬಹಳ ದುರ್ಬಲ ಪಕ್ಷ. ಪ್ರಾಮಾಣಿಕರಂತೆ, ಹಲವು ಸದ್ಗುಣಗಳನ್ನುಳ್ಳವರಂತೆ ತೋರುವ ರಾಹುಲ್ ಗಾಂಧಿ ದೊಡ್ಡ ರಾಜಕೀಯ ನಾಯಕನಾಗಿ ಇನ್ನೂ ಎದ್ದು ನಿಂತಿಲ್ಲ; ಅವರು ಕಾಂಗ್ರೆಸ್ ಪಕ್ಷವನ್ನು ಎನ್‌ಜಿಓದಂತೆ ಅಥವಾ ಒಂದು ಅಧ್ಯಾತ್ಮಿಕ ಸಂಘಟನೆಯಂತೆ ಮಾಡಿಬಿಡುವ ಅಪಾಯವಿದೆ ಎಂದು ಕಾಂಗ್ರೆಸ್ಸಿನ ಹಲವು ನಾಯಕರು ಮಾತಾಡಿಕೊಳ್ಳುತ್ತಾರೆ. ರಾಹುಲ್ ಗಾಂಧಿಯವರ ಭಿನ್ನ ನಿಲುವನ್ನೂ ಸೇರಿದಂತೆ ದೊಡ್ಡ ಪಕ್ಷವನ್ನು ನಿಭಾಯಿಸಬೇಕಾದ ಹೊಣೆ ಹೊತ್ತಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಷ್ಟರಮಟ್ಟಿಗಿನ ಅಧಿಕಾರ ಇದೆ ಎಂದು ಯಾರಿಗೂ ಸ್ಪಷ್ಟವಿಲ್ಲ.

ಹಾಗಿದ್ದ ಮೇಲೆ ಉಳಿದೆಲ್ಲಾ ರಾಜಕೀಯ ಪಕ್ಷಗಳನ್ನು ಒಂದು ವೇದಿಕೆಗೆ ತರುವವರು ಯಾರು? ಅವರ ಅಥಾರಿಟಿಯನ್ನು ಉಳಿದವರು ಏಕೆ ಒಪ್ಪುತ್ತಾರೆ?

ಸೀಟು ಹೊಂದಾಣಿಕೆಯ ಅಗತ್ಯ ಅಷ್ಟೇನೂ ಇಲ್ಲ ಎಂದಮೇಲೆ, ಅಂತಹ ಒಂದು ವೇದಿಕೆಯ ಅಗತ್ಯವಿದೆಯಾ ಎಂಬ ಪ್ರಶ್ನೆಯೂ ಏಳುತ್ತದೆ. ಖಂಡಿತವಾಗಿ ಅಂತಹದೊಂದು ವೇದಿಕೆಯ ಅಗತ್ಯವಿದೆ. ಏಕೆಂದರೆ ಮೋದಿಯ ಎದುರಿಗೆ ಯಾರು? ಬಿಜೆಪಿಯನ್ನು ಸೋಲಿಸಿದರೆ ಇರುವ ಪರ್ಯಾಯವೇನು? ಎಂಬ ಪ್ರಶ್ನೆ ಎದ್ದೇ ಏಳುತ್ತದೆ. ಏಳದಿದ್ದರೂ ಅದನ್ನು ಏಳಿಸಲು ಸ್ವತಃ ಬಿಜೆಪಿ ಮತ್ತು ಅದರ ತುತ್ತೂರಿ ಮಾಧ್ಯಮಗಳು ಸತತವಾಗಿ ಪ್ರಯತ್ನಿಸಲಿವೆ. ಈ ಪ್ರಶ್ನೆಯೇ ಅಸಂಗತವಾಗಿಬಿಡುವ ಪ್ರಮಾಣದಲ್ಲಿ ’ಮೋದಿಯನ್ನು ಕಿತ್ತು ಹಾಕುವುದಷ್ಟೇ ಇವತ್ತು ಮುಖ್ಯ. ಉಳಿದುದೆಲ್ಲವನ್ನೂ ನಂತರ ನೋಡಿಕೊಳ್ಳೋಣ’ ಎನ್ನುವ ಸ್ಥಿತಿ ಇನ್ನೂ ಬಂದಿಲ್ಲ; ಮೋದಿಯ ಜನಪ್ರಿಯತೆ ಕುಸಿಯುತ್ತಿರುವುದು ನಿಜವಾದರೂ, ದೇಶದ ಆರ್ಥಿಕ ಸ್ಥಿತಿಯ ಹೊಡೆತ ಜನಸಾಮಾನ್ಯರಿಗೆ ಎಷ್ಟೇ ಬಿದ್ದಿದ್ದರೂ ಈ ಸರ್ಕಾರವನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಬಿಸಾಡುವ ಪ್ರಮಾಣದಲ್ಲಿ ಆಕ್ರೋಶ ಹುಟ್ಟಿಲ್ಲ; ಹುಟ್ಟುವ ಸಾಧ್ಯತೆಯೂ ಇಲ್ಲ.

ಈ ವರ್ಷದ ಡಿಸೆಂಬರ್ ಹೊತ್ತಿಗೆ ಅಥವಾ ಮುಂದಿನ ಚುನಾವಣೆಗೆ ಮುಂಚೆ ಅಯೋಧ್ಯೆಯಲ್ಲಿ ಹೊಸ ರಾಮಮಂದಿರ ಅನಾವರಣಗೊಳ್ಳಲಿರುವುದಂತೂ ಖಚಿತ. ಆಗ ಅದು ಒಂದು ದೇವಸ್ಥಾನವೊಂದರ ಉದ್ಘಾಟನೆಯ ರೀತಿ ಮುಗಿದುಹೋಗುವುದಿಲ್ಲ. ಅದನ್ನು ಸಮಸ್ತ ಹಿಂದೂ ಸಮಾಜದ ಹೆಮ್ಮೆ ಮತ್ತು ದಿಗ್ವಿಜಯದಂತೆ ಬಿಂಬಿಸಲಾಗುತ್ತದೆ ಮತ್ತು ರಾಮಮಂದಿರದ ಮೇಲೆ ನಡೆಯುವ ಯಾವುದೇ ರೀತಿಯ ವಾಗ್ದಾಳಿ ಅಥವಾ ಇತರ ಕ್ರಮಗಳನ್ನು ದೇಶ ವಿರೋಧಿ ಸಂಗತಿಗಳೆಂಬಂತೆ ಬಿಂಬಿಸಲಾಗುತ್ತದೆ. ಅಂತಹ ಇತರ ಕ್ರಮಗಳನ್ನು ಬಿಜೆಪಿಯೇ ಪ್ರಾಯೋಜಿಸುವುದಿಲ್ಲ ಎಂದು ಹೇಳಲಾಗದು. ಬಿಜೆಪಿ ನೇತಾರರೇ ಆಗಿದ್ದ ಸತ್ಯಪಾಲ್ ಮಲಿಕ್ ಅವರು ಪುಲ್ವಾಮಾ ಬಗ್ಗೆ ಹೇಳುತ್ತಿರುವುದನ್ನು ಗಮನಿಸಿದರೆ ಅದು ಗೊತ್ತಾಗುತ್ತದೆ.

ಇಂತಹ ಎಲ್ಲವನ್ನೂ ಎದುರಿಸಿ ನಿಭಾಯಿಸಬಲ್ಲ ಮತ್ತು ಅಖಿಲ ಭಾರತ ಮಟ್ಟದ ಮೆಸೇಜಿಂಗ್ (ಸಂದೇಶ ನೀಡುವಿಕೆ) ಮುಂದಿಡಲೂ ಒಂದು ವೇದಿಕೆ ಬೇಕಾಗುತ್ತದೆ. ಎಲ್ಲಾ ಅಲ್ಲದಿದ್ದರೂ ಬಹುತೇಕ ರಾಜಕೀಯ ಪಕ್ಷಗಳು ಅಂತಹ ಮೆಸೇಜಿಂಗ್‌ಅನ್ನು ತಳಮಟ್ಟಕ್ಕೆ ಕೊಂಡೊಯ್ಯಲು ಒಮ್ಮನಸ್ಸಿನಿಂದ ತೀರ್ಮಾನಿಸಬೇಕು.

ಹಾಗೆಂದು, ಇಡೀ ದೇಶಕ್ಕೆ ಒಂದೇ ಸಂದೇಶ ಇರುವುದಿಲ್ಲ. ಇಡೀ ದೇಶಕ್ಕೆ ಒಂದು ಸಂದೇಶ ರೂಪಿಸಬೇಕಾದ ಅಗತ್ಯವಿರುವುದು ನಿಜವಾದರೂ, ಹೆಚ್ಚಿನ ಆದ್ಯತೆ ರಾಜ್ಯವಾರು ಪ್ರತ್ಯೇಕ ಸಂದೇಶಗಳನ್ನು ಕೊಡುವುದು ಮತ್ತು ಅದನ್ನು ಜನರಿಗೆ ದೊಡ್ಡ ಮಟ್ಟದಲ್ಲಿ ತಲುಪಿಸುವುದು ಬಹಳ ಮುಖ್ಯ. ಏಕೆಂದರೆ ಈ ಒಂಭತ್ತು ವರ್ಷಗಳಲ್ಲಿ ರಾಜ್ಯಗಳ ಸ್ವಾಯತ್ತತೆಯೂ ಹೆಚ್ಚು ದಾಳಿಗೊಳಗಾಗಿದೆ ಮತ್ತು ಇದು ಇಡೀ ಚುನಾವಣಾ ಇಶ್ಯುವಾಗಿ ಮೋದಿ ವರ್ಸಸ್ ಎಲ್ಲರೂ ಅಥವಾ ಮೋದಿ ವರ್ಸಸ್ ಯಾರು ಎಂಬುದನ್ನು ಕೇಂದ್ರಕ್ಕೆ ತರುವುದರಿಂದ ತಪ್ಪಿಸಲು ಸಾಧ್ಯ. ಇದಕ್ಕಾಗಿ ವಿರೋಧ ಪಕ್ಷಗಳ ನಡುವೆ ಸಮಾನ ತಿಳಿವಳಿಕೆ ಏರ್ಪಡಬೇಕಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ಸು ಮುಂದಿಟ್ಟಿರುವ ಗ್ಯಾರಂಟಿ ಕಾರ್ಯಕ್ರಮಗಳಂತಹ ಕಲ್ಯಾಣ ಕಾರ್ಯಕ್ರಮಗಳನ್ನೇ, ಬೆಲೆ ಏರಿಕೆ ಹಾಗೂ ತೆರಿಗೆ ಭಾರದಿಂದ ತತ್ತರಿಸಿರುವ ಜನರ ಮುಂದೆ ಇಡಬೇಕು ಎಂಬ ವಾದವೊಂದು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ನಡುವೆ ಚಾಲ್ತಿಯಲ್ಲಿದೆ. ಕಳೆದೊಂದು ತಿಂಗಳಲ್ಲಿ ಬಿಜೆಪಿಯ ಪರಿವಾರ ಮತ್ತು ಅದರ ತುತ್ತೂರಿ ಮಾಧ್ಯಮಗಳು ಯಶಸ್ವಿಯಾಗಿ ಗ್ಯಾರಂಟಿಗಳ ಸುತ್ತ ಇರಬಹುದಾದ ಯೂಫೋರಿಯಾವನ್ನು ತಣ್ಣಗೆ ಮಾಡಿಬಿಟ್ಟಿವೆ ಎಂಬುದನ್ನು ಗಮನಿಸಬೇಕು. ಮೋದಿ ಕೊಟ್ಟಿದ್ದೆಲ್ಲವೂ ಪರಮ ಪವಿತ್ರ ಪ್ರಸಾದ, ಉಳಿದವರದ್ದೇನಿದ್ದರೂ ದೇಶ ಹಾಳು ಮಾಡುವ ಯೋಜನೆ ಎಂಬುದನ್ನು ಬಿಂಬಿಸಲು ಸಾಧ್ಯವಾಗುವಂತಹ ಯಂತ್ರಾಂಗ ಉಳಿದವರಿಗೆ ಇಲ್ಲ; ಅದರ ಅಗತ್ಯವೂ ಅವರಿಗೆ ಮನವರಿಕೆಯಾದಂತಿಲ್ಲ. ಮಾಧ್ಯಮಗಳೇ ಬಿಜೆಪಿಯ ದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಎದುರಿಸದ ರಾಜಕೀಯ ಪ್ರಕ್ರಿಯೆಯೊಂದು ಯಶಸ್ವಿಯಾಗುವುದು ಸಾಧ್ಯವೇ ಇಲ್ಲ.

ಈ ನಿಟ್ಟಿನಲ್ಲಿ ಬಿಜೆಪಿಯ ವಿರುದ್ಧ ಇರುವ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿದ ಸಮಾಜಮುಖಿ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೂ ಈ ಚುನಾವಣೆಯಲ್ಲಿ ಒಂದು ದೊಡ್ಡ ಪಾತ್ರವಿದೆ. ಕರ್ನಾಟಕದಲ್ಲೇ ಮುಸ್ಲಿಂ ಸಮುದಾಯ, ದಲಿತ ಸಂಘಟನೆಗಳು ಮತ್ತು ಎದ್ದೇಳು ಕರ್ನಾಟಕದಂತಹ ನೂರಾರು ಸಂಸ್ಥೆ/ವ್ಯಕ್ತಿಗಳ ವೇದಿಕೆಗಳು ವಹಿಸಿದ ಪಾತ್ರವನ್ನೂ ಗಮನಿಸಬೇಕು. ಅವುಗಳ ಸಂಘಟನಾ ಶಕ್ತಿ ಹೆಚ್ಚಿಲ್ಲ (ಮುಸ್ಲಿಂ ಸಮುದಾಯಕ್ಕೆ ಇದೆ), ಆದರೆ ಅಭಿಪ್ರಾಯ ಮೂಡಿಸುವಲ್ಲಿ ಪಕ್ಷಗಳನ್ನು ಹೊರತುಪಡಿಸಿದ ನಾಗರಿಕ ಸಮಾಜಕ್ಕೆ ದೊಡ್ಡ ಪಾತ್ರವಿದೆ. ರಾಜಕೀಯ ಪಕ್ಷಗಳಿಗಿಂತ ಹೆಚ್ಚಾಗಿ ಅಂತಹ ನಾಗರಿಕ ಸಮಾಜದ ಪ್ರಯತ್ನಗಳು ದೇಶಾದ್ಯಂತ ಪುಟಿದೇಳುತ್ತಿವೆ. ಎದ್ದೇಳು ತೆಲಂಗಾಣ (ಮೇಲುಕೋ ತೆಲಂಗಾಣ), ಜಾಗ್ ಆಂಧ್ರ, ಇತ್ಯಾದಿ ಹೆಸರುಗಳಲ್ಲಿ ಪ್ರತಿವಾರ ಒಂದಿಲ್ಲೊಂದು ಕಡೆ ದೇಶದೆಲ್ಲೆಡೆ ಕಾರ್ಯಕ್ರಮಗಳು ನಡೆಯುತ್ತಿವೆ. ಭಾರತ್ ಜೋಡೋ ಅಭಿಯಾನದ ಹೆಸರಿನಲ್ಲಿ ಎಲ್ಲರನ್ನೂ ಬೆಸೆಯುವ ಪ್ರಯತ್ನವೂ ಬಿರುಸು ಪಡೆದುಕೊಳ್ಳುತ್ತಿದೆ. ಆದರೆ, ರಾಜಕೀಯ ಪಕ್ಷಗಳು ಇವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತವೆಯೇ ಎಂಬ ಪ್ರಶ್ನೆ ಇದ್ದೇ ಇದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಮಹಾರಾಷ್ಟ್ರದ ಸಿಎಂ ಶಿಂಧೆ ಬಣಕ್ಕೆ ಹಿನ್ನಡೆಯಾಗುವ ಆತಂಕದಲ್ಲಿ ಬಿಜೆಪಿ

ದೇಶದ ವಿವಿಧ ಜಾತಿಸಮುದಾಯಗಳು ಭಿನ್ನಭಿನ್ನ ರೀತಿಯಲ್ಲಿ ಬಿಜೆಪಿಯ ಬೆಳವಣಿಗೆಯಿಂದ ಬಾಧಿತವಾಗುತ್ತಿವೆ. ಜಾತಿಗಣತಿ, ಜನಸಂಖ್ಯಾವಾರು ಮೀಸಲಾತಿ, ಮೀಸಲಾತಿಯ ಪ್ರಮಾಣವನ್ನು ಶೇ.75ಕ್ಕೆ ಏರಿಸುವ ವಿಚಾರವನ್ನು 2024ರ ಚುನಾವಣೆಯ ಕೇಂದ್ರ ಇಶ್ಯೂವನ್ನಾಗಿಸಬೇಕು ಎಂಬುದೊಂದು ಚರ್ಚೆಯೂ ಕೆಲ ರಾಜಕೀಯ ಪಕ್ಷಗಳ ಮೊಗಸಾಲೆಗಳಲ್ಲಿ ನಡೆದಾಗಿದೆ. ಆದರೆ, ಅಖಿಲ ಭಾರತ ಮಟ್ಟದ ಒಂದೇ ಸೋಷಿಯಲ್ ಇಂಜಿನಿಯರಿಂಗ್ ಈ ದೇಶದಲ್ಲಿ ಸಾಧ್ಯವಿಲ್ಲ. ಹಾಗಾಗಿಯೇ ಬಿಜೆಪಿಯು ಸ್ಥಳೀಯವಾದ ನೂರಾರು ಸೋಷಿಯಲ್ ಇಂಜಿನಿಯರಿಂಗ್ ಪ್ರಯತ್ನಗಳನ್ನು ನಡೆಸಿ ಯಶಸ್ವಿಯಾಗಿದೆ. ಇದಕ್ಕೆ ಬಿಜೆಪಿ ವಿರೋಧಿ ಪಕ್ಷಗಳ ಪ್ರತಿತಂತ್ರವೇನು ಎಂಬುದನ್ನೂ ಕಾದು ನೋಡಬೇಕಾಗಿದೆ.

ಒಟ್ಟಿನಲ್ಲಿ 2024ರ ಚುನಾವಣೆಯ ಫಲಿತಾಂಶ ಈಗಾಗಲೇ ನಿರ್ಧಾರವಾಗಿಬಿಟ್ಟಿರುವುದಲ್ಲ; ಬಿಜೆಪಿ ನೂರಕ್ಕೂ ಹೆಚ್ಚು ಸೀಟುಗಳನ್ನು ಸೋತರೆ ಅದರಲ್ಲಿ ಆಶ್ಚಿರ್ಯವೂ ಇಲ್ಲ; ಬಿಜೆಪಿಯೇತರ ಪಕ್ಷಗಳು ಸೀಟು ಹೊಂದಾಣಿಕೆಯಂತಹ ಕಠಿಣ ಕಸರತ್ತು ನಡೆಸುವ ಅಗತ್ಯವೂ ಇಲ್ಲ. ಇದನ್ನು ಬೇರೆಯವರಿಗಿಂತ ಚೆನ್ನಾಗಿ ಅರಿತಿರುವ ಬಿಜೆಪಿಯ ನಾಯಕತ್ವವು ಹಾಕಬಹುದಾದ ಪಟ್ಟುಗಳನ್ನು ಎದುರಿಸಲು, ಒಂದು ವೇದಿಕೆಗೆ ಬರಬಹುದಾದ ಎಲ್ಲಾ ಬಿಜೆಪಿಯೇತರ ಶಕ್ತಿಗಳು (ಇದರಲ್ಲಿ ಪ್ರಧಾನವಾಗಿ ರಾಜಕೀಯ ಪಕ್ಷಗಳು, ಆದರೆ ಪಕ್ಷಗಳಿಂದ ಹೊರತಾದ ಶಕ್ತಿಗಳೂ ಸೇರಿದಂತೆ) ಯಾವ ರೀತಿ ಸಜ್ಜಾಗುತ್ತಾರೆ ಎಂಬುದರ ಮೇಲೆ ಅಂತಿಮ ಫಲಿತಾಂಶ ನಿರ್ಧಾರವಾಗುತ್ತದೆ. ಆ ನಿಟ್ಟಿನಲ್ಲಿ ಪಾಟ್ನಾದ ಸಭೆಯು ಒಂದು ತೀರಾ ಪುಟ್ಟದಾದ ಹೆಜ್ಜೆಯಷ್ಟೇ ಆಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...