ಅಂತರ್ಜಾತಿ ವಿವಾಹದಿಂದ ಹತ್ಯೆಯಾದ ಪ್ರಣಯ್ ಹೆಂಡತಿ ಅಮೃತಗೆ ತಂದೆಯಿಂದ ಮತ್ತೆ ಬೆದರಿಕೆ: ದೂರು ದಾಖಲು

ಕಳೆದ ವರ್ಷ ನಲ್ಗೋಂಡ ಜಿಲ್ಲೆಯ ಮಿರ್ಯಾಲ ಗೂಡದಲ್ಲಿ ತಳಸಮುದಾಯ ಹುಡುಗ ಪ್ರಣಯ್ ಮತ್ತು ಮೇಲ್ಜಾತಿಯ ಹುಡುಗಿ ಅಮೃತ ಪ್ರೀತಿಸಿದ್ದರು. ಪ್ರಣಯಪಕ್ಷಿಗಳಿಂತಿದ್ದ ಈ ಮುದ್ದಾದ ಜೋಡಿ ಮದುವೆಯಾದ ಕಾರಣಕ್ಕೆ ಅಮೃತರವರ ತಂದೆ ಮಾರುತಿ ರಾವ್ ಸಿಟ್ಟಿನಿಂದ ಅವರನ್ನು ದೂರ ಇಟ್ಟು ಬೆದರಿಕೆ ಹಾಕಿದ್ದರು.

ನಂತರ ಗರ್ಭಿಣಿ ಸಂದರ್ಭದಲ್ಲಿ ಅಮೃತಳನ್ನು ಆಸ್ಫತ್ರೆಗೆ ಕರೆದುಕೊಂಡು ಬಂದ ಪ್ರಣಯ್‌ನನ್ನು ಅಮೃತಾಳ ತಂದೆ ಮತ್ತು ಆತನ ಗೂಂಡಾಗಳು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಇಡೀ ದೇಶ ಈ ಹತ್ಯೆಯಿಂದ ಬೆಚ್ಚಿ ಬೀಳುವಂತಹ ಜಾತಿ ದುರಹಾಂಕಾರದ ಹತ್ಯೆ ಇದಾಗಿತ್ತು. ಇದಕ್ಕೆ ಜಾತಿಧರ್ಮ ನೋಡದೇ ಹಲವಾರು ಜನ ಈ ದುಷ್ಕೃತ್ಯವನ್ನು ಖಂಡಿಸಿದ್ದರು.

ಈ ಸನ್ನಿವೇಶವನ್ನು ಅಮೃತ ಸಹ ದಿಟ್ಟತನದಿಂದ ಎದುರಿಸಿ ತನ್ನ ತಂದೆಯ ವಿರುದ್ಧ ದೂರು ನೀಡಿದ್ದಲ್ಲದೇ ಮೃತ ಗಂಡನ ಕುಟುಂಬದ ಜೊತೆಯೇ ಇದ್ದು ತಂದೆಯ ವಿರುದ್ಧ ಕಾನೂನು ಸಮರ ಸಾರಿದ್ದಳು. ಬಹಳಷ್ಟು ಜನರಿಗೆ ಅಂತರ್ಜಾತಿ ಮದುವೆಯಾಗಿ ಕುಟುಂಬವನ್ನು ಎದುರಿಸುವ ಬಗ್ಗೆ ಸ್ಫೂರ್ತಿಯಾಗಿ ಆಕೆ ನಿಂತಿದ್ದಾಳೆ. ಈಗ ಅಮೃತಾಳಿಗೆ ಮುದ್ದಾದ ಗಂಡುಮಗು ಜನಿಸಿದ್ದು ಆ ಮಗುವಿನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಇದನ್ನೂ ಓದಿ: ಪ್ರೀತಿ ಕೊಂದ ಜಾತಿ… ಜಾತಿಯನ್ನು ಕೊಲ್ಲುವುದು ಯಾವಾಗ?

ಆದರೆ ಪ್ರಣಯ್‌ ಹತ್ಯೆಯ ಪ್ರತ್ಯಕ್ಷ ಸಾಕ್ಷಿ ಅಮೃತಳೇ ಆಗಿದ್ದು, ಇತ್ತಿಚಿಗೆ ಕೋರ್ಟಿನಲ್ಲಿ ತನ್ನ ವಿರುದ್ಧ ಸಾಕ್ಷಿ ಹೇಳದಂತೆ ತಂದೆ ಮಾರುತಿರಾವ್ ಮತ್ತು ತನ್ನ ಬೆಂಬಲಿಗ ಕರೀಂ ಸೇರಿ ಅಮೃತಾಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ತಂದೆ ಮಾರುತಿರಾವ್ ನೊಂದಿಗೆ ಅಮೃತ

ಪ್ರಣಯ್‌ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದ ಮಾರುತಿರಾವ್ ಏಪ್ರಿಲ್‌ನಲ್ಲಿ ಬೇಲ್‌ ಮೇಲೆ ಹೊರಬಂದಿದ್ದಾನೆ. ಅದಾದ ಆರು ತಿಂಗಳಲ್ಲಿಯೇ ತನ್ನ ಸ್ನೇಹಿತ ಕಂದುಲ ವೆಂಕಟೇಶ್ವರರಾವ್‌ನನ್ನು ಅಮೃತ ವರ್ಷಿಣಿ ಜೊತೆ ಮಾತುಕತೆ ಕಳುಹಿಸಿದ್ದಾನೆ.

ವೆಂಕಟೇಶ್ವರಾವ್ ‘ನಿಮ್ಮ ತಂದೆ ಹೇಳಿದ ಹಾಗೆ ನೀನು ನಡೆದುಕೊಂಡರೆ ನಿಮ್ಮ ತಂದೆಯ ಆಸ್ತಿಯನ್ನೆಲ್ಲ ನಿನಗೆ ಬರೆದುಕೊಡಲಿದ್ದಾರೆ. ಆತನಿಗೆ ಇಷ್ಟವಾದ ವ್ಯಕ್ತಿಯನ್ನು ನೀನು ಮದುವೆ ಆದರೆ ಎಲ್ಲಾ ಆಸ್ತಿಯು ನಿನಗೆ ಸೇರುತ್ತದೆ ಎಂದು ಆಮಿಷ ಒಡ್ಡಿದ್ದಾನೆ. ಆದರೆ ತನ್ನ ಪತಿಯ ಹತ್ಯೆಯಿಂದ ಆಕ್ರೋಶಿತರಾಗಿರುವ ಅಮೃತಾ ಈ ಪ್ರಸ್ತಾಪವನ್ನು ತಿರಸ್ಕರಿಸಿ ವೆಂಕಟೇಶ್ವರಾವ್ ನನ್ನು ಮನೆಯಿಂದ ವಾಪಸ್ಸು ಕಳುಹಿಸಿದ್ದಾಳೆ.

ಮಗುವಿನೊಂದಿಗೆ ಅಮೃತ

ಇದರಿಂದ ಕುಪಿತಗೊಂಡಿರುವ ಆಕೆಯ ತಂದೆ ನಾನು ಹೇಳಿದಂತೆ ಕೇಳದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ, ನಿನಗೆ ತೊಂದರೆ ತಪ್ಪಿದ್ದಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ. ಇದರಿಂದ ನೊಂದ ಅಮೃತ ಪೋಲೀಸರಿಗೆ ದೂರು ನೀಡಿದ್ದರಿಂದ ಮಾರುತಿರಾವ್ ಮತ್ತು ಕರೀಂನನ್ನು ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ.

ಜಾತಿ ಅಮಲನ್ನು ನೆತ್ತಿಗೇರಿಸಿಕೊಂಡಿರುವ ದುರಹಾಂಕಾರಿ ಮಾರುತಿರಾವ್ ತನ್ನ ತಪ್ಪಿಗೆ ಮತ್ತು ಶಿಕ್ಷೆಗೆ ಪಾಠ ಕಲಿತಂತೆ ಕಾಣುತ್ತಿಲ್ಲ. ಅದಕ್ಕಾಗಿಯೇ ಅಮೃತ ಕುಟುಂಬವನ್ನು ಪದೇ ಪದೇ ಟಾರ್ಗೆಟ್ ಮಾಡುತ್ತಿರುವುದರಿಂದ ಆತನಿಗೆ ಕಠಿಣ ಶಿಕ್ಷೆ ನೀಡುವುದರ ಜೊತೆಗೆ ಅಮೃತ ಕುಟುಂಬಕ್ಕೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂಬ ಒತ್ತಾಯವನ್ನು ಪ್ರಜ್ಞಾವಂತರು ಮುಂದಿಟ್ಟಿದ್ದಾರೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here