Homeಮುಖಪುಟಹೊಸದಾಗಿ 19 ಜಿಲ್ಲೆ 3 ವಿಭಾಗೀಯ ಕೇಂದ್ರ ರಚಿಸಲು ರಾಜಸ್ಥಾನ ಸರ್ಕಾರ ನಿರ್ಧಾರ; ಬಿಜೆಪಿ ಟೀಕೆ

ಹೊಸದಾಗಿ 19 ಜಿಲ್ಲೆ 3 ವಿಭಾಗೀಯ ಕೇಂದ್ರ ರಚಿಸಲು ರಾಜಸ್ಥಾನ ಸರ್ಕಾರ ನಿರ್ಧಾರ; ಬಿಜೆಪಿ ಟೀಕೆ

- Advertisement -
- Advertisement -

19 ಹೊಸ ಜಿಲ್ಲೆಗಳನ್ನು ಮತ್ತು ಮೂರು ವಿಭಾಗೀಯ ಕೇಂದ್ರಗಳನ್ನು ರಚಿಸುವುದಾಗಿ ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರ ಶುಕ್ರವಾರ ಘೋಷಿಸಿದೆ. “ರಾಜ್ಯದ ನಿವಾಸಿಗಳಿಗೆ ಆಡಳಿತ ಕಚೇರಿಗಳು ಹತ್ತಿರದಲ್ಲಿರಬೇಕು ಎಂಬ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ.

“ಈ ನಿರ್ಧಾರದ ಹಿಂದೆ ರಾಜಕೀಯ ದುರುದ್ದೇಶಗಳಿವೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ.

ಅನುಪ್‌ಗಢ್, ಬಲೋತ್ರಾ, ಬೇವಾರ್, ದೀಗ್, ದಿದ್ವಾನಾ-ಕುಚಮನ್, ದುಡು, ಗಂಗಾಪುರ ನಗರ, ಜೈಪುರ ಉತ್ತರ, ಜೈಪುರ ದಕ್ಷಿಣ, ಜೋಧ್‌ಪುರ ಪೂರ್ವ, ಜೋಧ್‌ಪುರ ಪಶ್ಚಿಮ, ಕೇಕ್ರಿ, ಕೊಟ್‌ಪುಟ್ಲಿ-ಬೆಹ್ರೋರ್, ಖೈರ್ತಾಲ್, ನೀಮ್ ಕಾ ಥಾನಾ, ಫಲೋಡಿ, ಸಾಲುಂಬಾರ್, ಸಂಚೋರ್ ಮತ್ತು ಶಹಪುರ ಹೊಸ ಜಿಲ್ಲೆಗಳಾಗಲಿವೆ.

ಈ ನಿರ್ಧಾರದಿಂದಾಗಿ ರಾಜಸ್ಥಾನವು ಒಟ್ಟು 50 ಜಿಲ್ಲೆಗಳನ್ನು ಹೊಂದಲಿದೆ. ಮೂರು ಹೊಸ ವಿಭಾಗೀಯ ಪ್ರಧಾನ ಕಚೇರಿಗಳಾಗಿ ಪಾಲಿ, ಸಿಕರ್ ಮತ್ತು ಬನ್ಸ್ವಾರಾ ಸೇರಿಕೊಳ್ಳಲಿವೆ.

“ರಾಜಸ್ಥಾನವು ಭೌಗೋಳಿಕ ವಿಸ್ತೀರ್ಣದಲ್ಲಿ ದೇಶದ ಅತಿದೊಡ್ಡ ರಾಜ್ಯವಾಗಿದೆ. ಜನರು ಸುಲಭವಾಗಿ ಜಿಲ್ಲಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಆಡಳಿತ ವ್ಯವಸ್ಥೆಯು ಪ್ರತಿ ಕುಟುಂಬವನ್ನು ತಲುಪಲು ಆಗುತ್ತಿಲ್ಲ” ಎಂದು ಗೆಹ್ಲೋಟ್ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ.

“ಕಾನೂನು ಮತ್ತು ಸುವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿ ಜಾರಿಗೊಳಿಸಲು, ಉತ್ತಮ ಆಡಳಿತ ವ್ಯವಸ್ಥೆಯನ್ನು ತರಲು ಸಣ್ಣ ಜಿಲ್ಲೆಗಳು ಸಹಾಯ ಮಾಡುತ್ತದೆ” ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾರೆ.

ಹೊಸ ಜಿಲ್ಲೆಗಳಲ್ಲಿ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ 2,000 ಕೋಟಿ ರೂ.ಗಳ ಬಜೆಟ್ ಮಂಡಿಸಿದ್ದಾರೆ.

ಈ ಕ್ರಮವನ್ನು ಟೀಕಿಸಿದ ಬಿಜೆಪಿ, “ಹೊಸ ಜಿಲ್ಲೆಗಳ ರಚನೆಗೆ ಶಿಫಾರಸುಗಳನ್ನು ನೀಡಲು ಆರು ದಿನಗಳ ಹಿಂದೆ ರಚಿಸಲಾಗಿದ್ದ ರಾಮ್ ಲುಭಯಾ ಸಮಿತಿಯ ಅವಧಿಯನ್ನು ರಾಜ್ಯ ಸರ್ಕಾರವು ವಿಸ್ತರಿಸಿದೆ” ಎಂದು ಟೀಕಿಸಿದೆ.

“ಲುಭಯಾ ಸಮಿತಿಯ ಅಧಿಕಾರಾವಧಿಯನ್ನು ಸಿಎಂ ವಿಸ್ತರಿಸಿದ್ದಾರೆ. ಅದರ ವರದಿಯನ್ನು ಸ್ವೀಕರಿಸಲು ವಿಳಂಬವಾಗಿದೆ ಎಂದು ಹೇಳಿದ್ದಾರೆ” ಎಂದು ಬಿಜೆಪಿ ಶಾಸಕ ಮತ್ತು ವಿರೋಧ ಪಕ್ಷದ ಉಪ ನಾಯಕ ರಾಜೇಂದ್ರ ರಾಥೋಡ್ ಪ್ರತಿಕ್ರಿಯಿಸಿದ್ದಾರೆ.

“ವರದಿಯನ್ನು ಸ್ವೀಕರಿಸದೆ ಈಗ 19 ಜಿಲ್ಲೆಗಳನ್ನು ಹೇಗೆ ಘೋಷಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ” ಎಂದು ಬಿಜೆಪಿ ಟೀಕಿಸಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಪ್ರತಿಕ್ರಿಯಿಸಿ, “ರಾಜಕೀಯ ಉದ್ದೇಶಗಳನ್ನು ಈಡೇರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಆರೋಪಿಸಿದ್ದಾರೆ.

“ಹೊಸ ಜಿಲ್ಲೆಗಳನ್ನು ಘೋಷಿಸಿದ ವಿಧಾನವು [ರಾಜ್ಯ] ಬಜೆಟ್ ಮತ್ತು ಆರ್ಥಿಕ ರಚನೆಯನ್ನು ಅಪಾಯಕ್ಕೆ ಸಿಲುಕಿಸಿದೆ” ಎಂದು ದೂರಿದ್ದಾರೆ.

ಇದನ್ನೂ ಓದಿರಿ: ರಾಪರ್‌ ಸ್ಟಾನ್‌ ಸಂಗೀತ ಕಾರ್ಯಕ್ರಮಕ್ಕೆ ಬಜರಂಗದಳದಿಂದ ಅಡ್ಡಿ; ರದ್ದು

ಮತ್ತೊಂದೆಡೆ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವು ಡಿಸೆಂಬರ್‌ನಲ್ಲಿ ನಾಲ್ಕು ಜಿಲ್ಲೆಗಳನ್ನು ಇತರ ನಾಲ್ಕು ಜಿಲ್ಲೆಗಳೊಂದಿಗೆ ವಿಲೀನಗೊಳಿಸಲು ನಿರ್ಧರಿಸಿತ್ತು. ಬಿಸ್ವನಾಥ್ ಜಿಲ್ಲೆಯನ್ನು ಸೋನಿತ್‌ಪುರದೊಂದಿಗೆ, ಹೋಜೈ ಅನ್ನು ನಾಗಾಂವ್‌ನೊಂದಿಗೆ, ಬಜಾಲಿಯನ್ನು ಬರ್ಪೇಟಾದೊಂದಿಗೆ ಮತ್ತು ತಮುಲ್‌ಪುರವನ್ನು ಬಕ್ಸಾದೊಂದಿಗೆ ವಿಲೀನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದರು.

ಹೊಸ ಆಡಳಿತಾತ್ಮಕ ಘಟಕಗಳನ್ನು ರಚಿಸುವುದನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನಿಷೇಧ ಹೇರುವ ಒಂದು ದಿನದ ಮೊದಲು ಈ ನಿರ್ಧಾರವನ್ನು ಹೊರಬಿದ್ದಿತ್ತು. ವಿಧಾನಸಭಾ, ಲೋಕಸಭಾ ಕ್ಷೇತ್ರಗಳು ಮತ್ತು ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳ ಗಡಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಗೆ ಚುನಾವಣಾ ಸಮಿತಿ ಕ್ರಮ ಕೈಗೊಳ್ಳುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...