Homeಮುಖಪುಟಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-3)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಭಾಗ-3)

- Advertisement -
- Advertisement -

“ಓ, ಪುನಃ ಆ ದರಿದ್ರ ಕತ್ತೆ, ಸರಿ ಹೋಯ್ತು” ಮಹಿಳೆ ಉದ್ಗರಿಸಿದಳು, “ನಿಜವಾಗಲೂ ನಾನ್ಯಾವುದೇ ಬೇರೇ ಅರ್ಥದಲ್ಲಿ ಹೇಳಲಿಲ್ಲ ಪ್ರಿನ್ಸ್”

“ಪ್ರಚೋದನೆಯ ಮಾತು? ಓ! ನಾನು ತಪ್ಪು ತಿಳಿದುಕೊಂಡಿಲ್ಲ ಎಂದು ನಿಮಗೆ ಭರವಸೆ ಕೊಡುತ್ತೇನೆ” ಪ್ರಿನ್ಸ್ ಸಂತೋಷದಿಂದ ನಗುವುದನ್ನ ಮುಂದುವರಿಸುತ್ತಲೇ ಇದ್ದ.

“ನೀನು ನಗುತ್ತಿರುವುದು ಬಹಳ ಒಳ್ಳೆಯದು ಎಂದು ನಾನೀಗ ಹೇಳಲೇಬೇಕಿದೆ. ನೀನೊಬ್ಬ ಅತ್ಯಂತ ಕರುಣಾಳು ವ್ಯಕ್ತಿಯಂತೆ ನನಗೀಗ ಕಾಣಸ್ತಿದ್ದೀಯ” ಎಪಾಂಚಿನ್‌ನ ಹೆಂಡತಿ ಹೇಳಿದಳು.

“ಆದರೂ ನಾನ್ಯಾವಾಗಲೂ ಕರುಣಾಳು ವ್ಯಕ್ತಿಯಾಗಿರುವುದಿಲ್ಲ.”

“ನಾನೂ ಕೂಡ ಕರುಣಾಳು ಮನುಷ್ಯಳು ಮತ್ತು ಯಾವಾಗಲೂ ಕೂಡ, ಇದನ್ನು ತಿಳಿ!” ಅವಳು ಅನಿರೀಕ್ಷಿತವಾಗಿ ಕಟುವಾಗಿ ಉತ್ತರಿಸಿದಳು; “ಅದೇ ನನ್ನಲ್ಲಿನ ಮುಖ್ಯವಾದ ದೋಷ. ಸದಾಕಾಲವೂ ಒಬ್ಬ ವ್ಯಕಿ ಕರುಣೆಯಿಂದ ಇರಕೂಡದು. ನಾನು ಪದೇಪದೇ ಈ ಹುಡುಗಿಯರು ಮತ್ತು ಅವರ ತಂದೆಯ ಬಗ್ಗೆ ಕೋಪಗೊಳ್ಳುತ್ತಿರುತ್ತೇನೆ; ಆದರೆ ಎಲ್ಲಕ್ಕಿಂತ ಕೆಟ್ಟದ್ದೇನೆಂದರೆ, ನಾನು ಅತೀವವಾಗಿ ಕೋಪಗೊಂಡಾಗ ಕರುಣಾಮಯಿಯಾಗಿಬಿಡುತ್ತೇನೆ. ನೀನು ಬರುವುದಕ್ಕಿಂತ ಸ್ವಲ್ಪ ಸಮಯದ ಮುಂಚೆ ನಾನು ಕೋಪೋದ್ರಿಕ್ತಳಾಗಿದ್ದೆ, ಅಲ್ಲಿರುವ ಅಗ್ಲಾಯ ನನಗೊಂದು ಪಾಠವನ್ನ ಓದಿ ಹೇಳಿದಳು, ಧನ್ಯವಾದ ಪ್ರೀತಿಯ ಅಗ್ಲಾಯ, ಬಾ ನನ್ನನ್ನು ಚುಂಬಿಸು, ಹಾ ಅಷ್ಟು ಸಾಕು” ಅವಳು ತನ್ನ ಮಾತಿನ ಜೊತೆಗೆ ಸೇರಿಸಿದಳು. ಅಗ್ಲಾಯ ಮುಂದಕ್ಕೆ ಬಂದು ತಾಯಿಯ ತುಟಿಗೆ ನಂತರ ಕೈಗಳಿಗೆ ಚುಂಬಿಸುತ್ತಿದ್ದಂತೆ, “ಈಗ, ಮುಂದುವರಿಸು ಪ್ರಿನ್ಸ್, ಬಹುಶಃ ಕತ್ತೆಗಿಂತ ಇನ್ನೂ ಹೆಚ್ಚು ಆಕರ್ಷಕವಾಗಿರುವಂತಹ ಏನನ್ನಾದರೂ ಹೇಳುತ್ತೀಯ?”

“ಪುನಃ ನಾನು ಹೇಳುವುದೇನೆಂದರೆ, ಅದು ಹೇಗೆ ನೀನು ಯಾರನ್ನಾದರೂ ಈ ರೀತಿ ಏಕಾಏಕಿ ಕಥೆಗಳನ್ನ ಹೇಳಲು ನಿರೀಕ್ಷಿಸುತ್ತೀಯ ಎನ್ನುವುದೇ ಅರ್ಥವಾಗುವುದಿಲ್ಲ ಎಂದು” ಅಡೆಲೈಡ ಹೇಳಿದಳು. “ನನ್ನಿಂದ ಅಂತೂ ಅದು ಸಾಧ್ಯವೇ ಇಲ್ಲ!”

“ಹೌದು, ಅದು ಪ್ರಿನ್ಸ್‌ಗೆ ಸಾಧ್ಯ, ಕಾರಣ ಅವನು ಬುದ್ಧಿವಂತ, ನಿನಗಿಂತ ಹತ್ತಲ್ಲ ಇಪ್ಪತ್ತು ಪಟ್ಟು ಬುದ್ಧಿವಂತ. ಅದು ನಿನಗೆ ನಂತರ ಅರಿವಾಗುತ್ತದೆ. ಪ್ರಿನ್ಸ್ ಈಗ ಮುಂದುವರಿಸು, ಕತ್ತೆಯನ್ನ ಬಿಟ್ಟು ನೀನು ಇನ್ನೇನನ್ನು ವಿದೇಶದಲ್ಲಿ ನೋಡಿದೆ ಅನ್ನುವುದನ್ನ ಹೇಳು.”

“ಹೌದು, ಆದರೆ ಪ್ರಿನ್ಸ್ ನಮಗೆ ಕತ್ತೆಯ ಬಗ್ಗೆ ಬಹಳ ಜಾಣತನದಿಂದ ಹೇಳಿದ”, ಅಲೆಕ್ಸಾಂಡ್ರ ಹೇಳಿದಳು. “ಪ್ರಿನ್ಸ್ ಬಹಳ ಕುತೂಹಲಕಾರಿಯಾಗಿ ಅವನ ಕಾಯಿಲೆಯ ಬಗ್ಗೆ ಹೇಳಿದ ಮತ್ತು ನಂತರ ಹೊರಗಿನ ಒಂದು ಕತ್ತೆಯ ಕೂಗಿನಿಂದಾಗಿ ಅವನಿಗೆ ಹೇಗೆ ಎಲ್ಲವೂ ಸಂತೋಷಕರವಾಯಿತು ಅನ್ನುವುದನ್ನ ಕೂಡ. ಅದೂ ಇದ್ದಕ್ಕಿದ್ದಂತೆ ಆದ ಪರಿವರ್ತನೆ ಅದು. ಅದು ಹೇಗೆ ಜನ ತೀವ್ರವಾಗಿ ಅಸ್ವಸ್ಥರಾಗಿ, ಪುನಃ ಇದ್ದಕ್ಕಿದ್ದಂತೆ ಯಾವುದೋ ಒಂದು ಕಾರಣಕ್ಕೆ ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ ಅನ್ನುವುದು ನನಗೆ ಯಾವಾಗಲೂ ಕುತೂಹಲವನ್ನ ಹುಟ್ಟಿಸುತ್ತದೆ” ಅಲೆಕ್ಸಾಂಡ್ರ ಮುಂದುವರಿಸಿ ಹೇಳಿದಳು.

“ಖಂಡಿತ ಹೌದು, ಖಂಡಿತ ಹೌದು!” ಮೇಡಮ್ ಎಪಾಂಚಿನ್ ಎತ್ತರದ ಧ್ವನಿಯಲ್ಲಿ ಸಂತೋಷಗೊಂಡು ಹೇಳಿದಳು. “ಅಲೆಕ್ಸಾಂಡ್ರ ನೀನು ಆಗಾಗ್ಗೆ ವಿವೇಚನಾಶೀಲಳಾಗಿ ಬಿಡುತ್ತೀಯ ಎಂದೆನಿಸುತ್ತದೆ ನನಗೆ. ನೀನು ಸ್ವಿಟ್ಜರ್ಲ್ಯಾಂಡಿನ ಬಗ್ಗೆ ಮಾತನಾಡುತ್ತಿದ್ದೆ ಪ್ರಿನ್ಸ್.”

“ಹೌದು, ನಾವು ಲೂಸರ್ನ್‌ಗೆ ಬಂದೆವು, ಮತ್ತು ನನ್ನನ್ನು ಒಂದು ದೋಣಿಯಲ್ಲಿ ಕರೆದುಕೊಂಡು ಹೋಗಲಾಯಿತು. ಅದೆಷ್ಟು ಸುಂದರವಾಗಿದೆ ಎಂದು ನಾನು ಭಾವಿಸಿದೆ. ಆದರೆ ಆ ಸೌಂದರ್ಯ ನನ್ನನ್ನು ಧೃತಿಗೆಡಿಸಿ ನನ್ನಲ್ಲಿ ವಿಷಣ್ಣತೆಯನ್ನ ಉಂಟು ಮಾಡಿತು.”

“ಏತಕ್ಕೆ?” ಅಲೆಕ್ಸಾಂಡ್ರ ಕೇಳಿದಳು.

“ನನಗೆ ಗೊತ್ತಿಲ್ಲ; ನಾನು ಯಾವುದೇ ಪ್ರಕೃತಿ ಸೌಂದರ್ಯವನ್ನ ಮೊದಲ ಬಾರಿಗೆ ನೋಡಿದಾಗಲೆಲ್ಲಾ ನನ್ನಲ್ಲಿ ಅದೇ ರೀತಿಯ ಭಾವನೆ ಉಂಟಾಗುತ್ತದೆ; ಆದರೆ ಆಗ ನಾನು ಕಾಯಿಲೆಯಿಂದ ಬಳಲುತಿದ್ದೆ, ಅದರಿಂದಲೂ ಇರಬಹುದು!”

“ಓ, ನನಗೂ ಅದನ್ನ ನೋಡಬೇಕೆಂದು ಬಹಳ ಇಷ್ಟ ಆಗುತ್ತಿದೆ!” ಅಡೆಲೈಡ ಹೇಳಿದಳು. “ಆದರೆ, ನಾವು ಯಾವಾಗ ವಿದೇಶಕ್ಕೆ ಹೋಗುತ್ತೇವೆಯೊ ಗೊತ್ತಿಲ್ಲ. ನಾನು ಒಂದು ಕಲಾಕೃತಿಯನ್ನ ರಚಿಸಲು ಒಂದು ವಿಷಯದ ಮಾದರಿಗಾಗಿ ಎರಡು ವರ್ಷದಿಂದ ಹುಡುಕುತ್ತಲೇ ಇದ್ದೇನೆ. ನನಗೆ ತಿಳಿದಿರುವುದನ್ನೆಲ್ಲಾ ಆಗಲೇ ಮಾಡಿ ಮುಗಿಸಿದ್ದೇನೆ. ನಮ್ಮಲ್ಲಿನ ಕವಿಯು ಹೇಳುವಂತೆ ’ಉತ್ತರ ಮತ್ತು ದಕ್ಷಿಣ ನನಗೆ ಬಾಯಿಪಾಠವಾಗಿಬಿಟ್ಟಿದೆ’. ಒಂದು ವಿಷಯವನ್ನ ಆರಿಸಿಕೊಳ್ಳುವುದಕ್ಕೆ ನನಗೆ ಸಹಾಯ ಮಾಡು ಪ್ರಿನ್ಸ್.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಕೊನೆಯ ಭಾಗ)

“ಓ, ಚಿತ್ರಕಲೆಯ ಬಗ್ಗೆ ನನಗೇನೂ ತಿಳಿದಿಲ್ಲ, ನನಗೆ ಅನಿಸುವುದು, ಒಬ್ಬನು ಏನು ನೋಡುತ್ತಾನೋ ಅದರ ಚಿತ್ರವನ್ನ ಬಿಡಿಸಬೇಕೆನ್ನುವುದು.”

“ಆದರೆ ಹೇಗೆ ನೋಡುವುದು ಎನ್ನುವುದೇ ನನಗೆ ತಿಳಿದಿಲ್ಲ!”

“ಎಂತಹ ಅಸಂಬದ್ಧವಾಗಿ ಮಾತನಾಡುತ್ತಿದ್ದೀಯ!” ಅವಳ ತಾಯಿ ಜೋರುಮಾಡಿದಳು. “ನೋಡಲು ಬರುವುದಿಲ್ಲ ಅಂತ ಹೇಳುತ್ತಿದ್ದೀಯ! ನಿನ್ನ ಕಣ್ಣನ್ನ ತೆರೆದು ನೋಡು! ನಿನಗೆ ಇಲ್ಲಿ ನೋಡಲು ಬರದಿದ್ದರೆ, ವಿದೇಶದಲ್ಲಿಯೂ ನಿನಗೆ ನೋಡಲು ಬರುವುದಿಲ್ಲ. ನೀನು ಏನನ್ನು ನೋಡಿದೆ ಅನ್ನುವುದನ್ನ ಹೇಳು ಪ್ರಿನ್ಸ್!”

“ಹೌದು, ಅದೇ ಒಳ್ಳೆಯದು”, ಅಡೆಲೈಡ ಹೇಳಿದಳು; “ಪ್ರಿನ್ಸ್ ನೋಡುವುದನ್ನ ಕಲಿತಿದ್ದು ವಿದೇಶದಲ್ಲಿ.”

“ನನಗೆ ತಿಳಿದಿರುವುದು ಅತ್ಯಲ್ಪ! ನೋಡಿ, ನಾನು ಹೋಗಿದ್ದು ನನ್ನ ಅನಾರೋಗ್ಯವನ್ನ ಗುಣಪಡಿಸಿಕೊಂಡು ಬರಲು. ನಾನಲ್ಲಿ ನೋಡಲು ಕಲಿತೆನೋ ಇಲ್ಲವೊ ಎನ್ನುವುದು ನಿಖರವಾಗಿ ನನಗೆ ತಿಳಿದಿಲ್ಲ. ನಾನು ಎಲ್ಲಾ ಸಮಯದಲ್ಲೂ ಬಹಳ ಸಂತೋಷದಿಂದ ಇರುತ್ತಿದ್ದೆ ಅನ್ನುವುದು ಮಾತ್ರ ನಿಜ.”

“ಸಂತೋಷದಿಂದ! ಸಂತೋಷದಿಂದ ಇರುವುದರ ಬಗ್ಗೆ ನಿನಗೆ ಗೊತ್ತಿದೆಯಾ?” ಅಗ್ಲಾಯ ಕೇಳಿದಳು. “ಹಾಗಾದರೆ ನೀನು ನೋಡುವುದನ್ನ ಕಲಿಯಲಿಲ್ಲ ಅಂತ ಹೇಗೆ ಹೇಳುತ್ತೀಯ? ನಾನು ಯೋಚಿಸುವುದು, ನೀನು ನಮಗೆ ನೋಡುವುದನ್ನ ಕಲಿಸಬಹುದು ಎಂದು!”

“ಓ! ನಮಗೆ ಹೇಳಿಕೊಡು”, ಅಡೆಲೈಡ ನಗುತ್ತಾ ಕೇಳಿದಳು.

“ನನ್ನ ಕೈಲಿ ಅದು ಸಾಧ್ಯವಿಲ್ಲ”, ಪ್ರಿನ್ಸ್ ಕೂಡ ನಗುತ್ತಲೇ ಹೇಳಿದ. “ನಾನಲ್ಲಿ ನನ್ನ ಇಡೀ ಜೀವನವನ್ನ ಕಳೆದಿದ್ದು ಒಂದು ಸ್ವಿಸ್‌ನ ಹಳ್ಳಿಯಲ್ಲಿ; ನಾನೇನು ನಿಮಗೆ ಕಲಿಸಲು ಸಾಧ್ಯ? ನಾನು ಆ ಹಳ್ಳಿಯಲ್ಲಿ ಮೊದಮೊದಲು ಸದಾ ಮಂಕಾಗಿಯೇ ಇರುತ್ತಿದ್ದೆ, ನಂತರ ನನ್ನ ಆರೋಗ್ಯ ಸುಧಾರಿಸತೊಡಗಿತು; ನಂತರ ಪ್ರತಿದಿನವೂ ನನಗೆ ಅತ್ಯಂತ ಉಲ್ಲಾಸದ್ದೂ ಮತ್ತು ಅಮೂಲ್ಯದ್ದೂ ಆಗುತ್ತಾ ಹೋಯಿತು; ಹೆಚ್ಚೆಚ್ಚು ಅಲ್ಲಿರುತ್ತಿದ್ದಂತೆ, ಸಮಯ ಕೂಡ ನನಗೆ ಹೆಚ್ಚು ಅಮೂಲ್ಯವಾಗುತ್ತಾ ಬಂತು. ಅದೇ ಕಾರಣಕ್ಕೆ ನನಗೆ ಸುತ್ತಮುತ್ತಲಿನ ಪ್ರಕೃತಿಯನ್ನ ವೀಕ್ಷಿಸದೇ ಇರಲು ಸಾಧ್ಯವಾಗಲಿಲ್ಲ; ಆದರೆ ಯಾಕೆ ಹೀಗಾಯಿತು ಎಂದು ವಿವರಿಸುವುದು ಕಷ್ಟ!”

“ಆದದ್ದರಿಂದ ನೀನು ಇನ್ನೆಲ್ಲಿಗೂ ಹೋಗಲು ತಲೆ ಕೆಡಸಿಕೊಳ್ಳಲಿಲ್ಲವೇ?”

“ಹೌದು, ಮೊದಮೊದಲು ನಾನು ತಲೆಕೆಡಿಸಿಕೊಳ್ಳುತ್ತಿದ್ದೆ, ನಾನು ತಳಮಳಗೊಳ್ಳುತ್ತಲೇ ಇದ್ದೆ; ನನ್ನ ಜೀವನವನ್ನ ಬೆಂಬಲಿಸಲು ಯಾವ ರೀತಿ ಎಲ್ಲವನ್ನೂ ನಿರ್ವಹಿಸಬೇಕು ಎನ್ನುವುದು ನನಗೆ ತಿಳಿದಿರಲಿಲ್ಲ; ನಾನು ಸದಾಕಾಲ ನನ್ನ ಬದುಕು ಏನಾಗುತ್ತದೆ ಮತ್ತು ನನ್ನ ಭವಿಷ್ಯ ನನಗೇನನ್ನ ತಂದುಕೊಡುತ್ತದೆ ಅನ್ನುವುದರ ಬಗ್ಗೆಯೇ ಚಿಂತಿಸುತ್ತಿದ್ದೆ. ಆ ರೀತಿಯ ಪರಿಸ್ಥಿತಿಗಳು ಉಂಟಾಗುವುದರ ಬಗ್ಗೆ ನಿಮಗೇ ತಿಳಿದಿರಬಹುದು; ಅದರಲ್ಲೂ ಏಕಾಂಗಿತನವನ್ನ ಎದುರಿಸುತ್ತಿದ್ದಾಗ. ನಾನಿದ್ದ ಕಡೆ ಹತ್ತಿರದಲ್ಲಿಯೇ ಜಲಪಾತವೊಂದಿತ್ತು, ಅದು ಹೇಗೆ ಸುಂದರವಾಗಿ ನೀರಿನ ತೆಳು ಗೆರೆಗಳಂತಿತ್ತು ಎಂದರೆ, ಒಂದು ಬಿಳಿಯ ಬಣ್ಣದ ನೂಲಿನ ರೀತಿ, ಆದರೆ ಅದು ಚಲಿಸುತ್ತಿತ್ತು. ಅದು ಬಹಳ ಎತ್ತರದಿಂದ ಧುಮುಕುತ್ತಿತ್ತು, ಆದರೆ ನನಗದು ಬಹಳ ಕೆಳಗಿನಿಂದ ಬೀಳುತ್ತಿದೆ ಅಂತ ಅನಿಸುತ್ತಿತ್ತು, ಕಾರಣ ಅದು ಅರ್ಧ ಮೈಲಿಯಷ್ಟು ದೂರದಲ್ಲಿತ್ತು, ಆದರೂ ನನಗನಿಸುತ್ತಿದ್ದದ್ದು ಅದು ಬರೀ ಐವತ್ತು ಹೆಜ್ಜೆಗಳಷ್ಟು ದೂರದಲ್ಲಿದೆ ಎಂದು. ರಾತ್ರಿಯ ಹೊತ್ತು ಅದರ ಭೋರ್ಗರೆತವನ್ನ ಕೇಳುವುದನ್ನ ನಾನು ಇಷ್ಟಪಡುತ್ತಿದ್ದೆ, ಆದರೆ ಅದೇ ಸಮಯದಲ್ಲಿ ನಾನು ತಳಮಳಗೊಳ್ಳುತ್ತಿದ್ದದ್ದು. ಕೆಲವು ಬಾರಿ ನಾನು ಪರ್ವತವನ್ನ ಹತ್ತಿ ಅಲ್ಲಿಯೇ ಎತ್ತರದ ಪೈನ್ ಮರಗಳ ನಡುವೆ ನಿಂತುಬಿಡುತ್ತಿದ್ದೆ, ಒಬ್ಬಂಟಿಗನಾಗಿ ಭೀಕರವಾದ ನೀರವತೆಯಲ್ಲಿ, ದೂರದಲ್ಲಿನ ಪುಟ್ಟಹಳ್ಳಿಯ ಸಮ್ಮುಖದಲ್ಲಿ, ಗಾಢವಾದ ನೀಲಿ ಬಣ್ಣದ ಆಕಾಶ, ಮತ್ತು ಪ್ರಖರತೆಯ ಉತ್ತುಂಗ ಶಿಖರವನ್ನ ತಲುಪಿದ ಸೂರ್ಯದ ಕೆಳಹೆ, ಪರ್ವತದಿಂದಾಚೆಗೆ ಕಾಣುತ್ತಿದ್ದ ಶಿಥಿಲಗೊಂಡ ದುರ್ಗಗೃಹದ ಎದುರು ನಾನು ಆಕಾಶ ಮತ್ತು ಭೂಮಿ ಸಂಧಿಸಿದ ರೇಖೆಯನ್ನ ಗಮನಿಸುತ್ತಿದ್ದೆ; ಅಲ್ಲಿಗೆ ಹೋಗಿ ಎಲ್ಲಾ ರಹಸ್ಯಗಳ ಮೂಲವನ್ನ ಕಂಡುಕೊಳ್ಳಲು ಹಂಬಲಿಸುತ್ತಿದ್ದೆ; ಅಲ್ಲೊಂದು ನಮ್ಮದಕ್ಕಿಂತ ವಿಭಿನ್ನವಾದ ಜೀವನವನ್ನ ನಾನು ಕಂಡುಹಿಡಿಯಬಹುದೆಂದು, ಬಹುಶಃ ಒಂದು ಅದ್ಭುತವಾದ ನಗರವನ್ನ, ಬಹುಶಃ ಅದು ಇನ್ನೂ ಹೆಚ್ಚು ಭವ್ಯವಾದ ಮತ್ತು ಸಂಪದ್ಬರಿತವಾಗಿದ್ದಿರಬಹುದೆಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದೆ. ನಂತರ ನನಗೆ ಇದ್ದಕ್ಕಿದ್ದಂತೆ ಹೊಳೆದಿದ್ದು ಜೀವನ ಬಂಧೀಖಾನೆಯಲ್ಲೂ ಭವ್ಯವಾಗಿರಲು ಸಾಧ್ಯ ಎಂದು.”

“ನಾನು ಹನ್ನೆರಡನೇ ವರ್ಷದವಳಾಗಿದ್ದಾಗ ಅತ್ಯಂತ ಪ್ರಶಂಸಾರ್ಹ ಆಲೋಚನೆಗಳ ಬಗ್ಗೆ ನನ್ನ ಕೈಪಿಡಿಯಲ್ಲಿ ಓದಿದ್ದೆ”, ಅಗ್ಲಾಯ ಹೇಳಿದಳು.

“ಇವೆಲ್ಲವೂ ಕೂಡ ಅಪ್ಪಟ ತತ್ವಶಾಸ್ತ್ರ”, ಅಡೆಲೈಡ ಹೇಳಿದಳು. “ನೀನೊಬ್ಬ ತತ್ವಶಾಸ್ತ್ರಜ್ಞ ಪ್ರಿನ್ಸ್, ನಿನ್ನ ನಂಬಿಕೆಗಳನ್ನ ನಮಗೆ ಬೋಧಿಸಲು ನೀನು ಇಲ್ಲಿಗೆ ಬಂದಿದ್ದೀಯ.”

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

“ಬಹುಶಃ ನೀನು ಹೇಳಿದ್ದು ಸರಿಯಿರಬಹುದು”, ಪ್ರಿನ್ಸ್ ನಗುತ್ತಾ ಹೇಳಿದ. “ನಾನೂ ಕೂಡ ನಾನೊಬ್ಬ ತತ್ವಶಾಸ್ತ್ರಜ್ಞ ಎಂದೇ ಅಂದುಕೊಂಡಿದ್ದೀನಿ, ಬಹುಶಃ ಯಾರಿಗೆ ಗೊತ್ತು, ಬಹುಶಃ ನಾನು ಭೇಟಿಮಾಡಿದವರಿಗೆಲ್ಲಾ ನನ್ನ ಅನಿಸಿಕೆಗಳನ್ನೆಲ್ಲಾ ಬೋಧಿಸುವ ಇಂಗಿತ ನನಗೆ ರೂಢಿಯಾಗಿಬಿಟ್ಟಿರಬಹುದು.”

“ನಿನ್ನ ತತ್ವಶಾಸ್ತ್ರ ಮಾತ್ರ ನಮಗೆ ತಿಳಿದಿರುವ ಒಬ್ಬಳು ವೃದ್ಧ ಹೆಂಗಸಿನ ರೀತಿಯದ್ದೇ, ಮತ್ತು ಅವಳು ಐಶ್ವರ್ಯವಂತೆ ಮತ್ತು ಸದಾಕಾಲ ತನ್ನಿಂದ ಕಡಿಮೆ ಖರ್ಚು ಮಾಡಲು ಎಷ್ಟು ಸಾಧ್ಯ ಅನ್ನುವುದನ್ನಷ್ಟೇ ಪ್ರಯತ್ನಿಸುತ್ತಿರುತ್ತಾಳೆ. ಅವಳು ಇಡೀ ದಿನ ಹಣದ ಬಗ್ಗೆ ಬಿಟ್ಟು ಇನ್ನೇನನ್ನೂ ಮಾತನಾಡುವುದೇ ಇಲ್ಲ. ನಿನ್ನ ಜೈಲಿನಲ್ಲಿನ ಭವ್ಯ ಜೀವನದ ಬಗ್ಗೆಗಿನ ಕಲ್ಪನೆ, ಮತ್ತು ಸ್ವಿಟ್ಜರ್ಲೆಂಡಿನಲ್ಲಿನ ಹಳ್ಳಿಯ ನಾಲ್ಕುವರ್ಷಗಳ ಸಂತೋಷದಿಂದ ಕೂಡಿದ ಜೀವನ, ಇವೆಲ್ಲವೂ ಅದೇ ರೀತಿ ಇದೆ ಬಹುಶಃ” ಅಗ್ಲಾಯ ಹೇಳಿದಳು.

“ಬಂದಿಖಾನೆಯಲ್ಲಿನ ಜೀವನಕ್ಕೆ ಸಂಬಂಧಿಸಿದಂತೆ, ಖಂಡಿತವಾಗಿಯೂ ಎರಡು ಅಭಿಪ್ರಾಯಗಳಿರಬಹುದು”, ಪ್ರಿನ್ಸ್ ಹೇಳಿದ. “ಒಮ್ಮೆ ಹನ್ನೆರಡು ವರ್ಷಗಳು ಜೈಲಿನಲ್ಲಿ ವಾಸಮಾಡಿದ ಒಬ್ಬ ಮನುಷ್ಯನ ಕಥೆ ಕೇಳಿದೆ; ನಾನು ಅವನ ಬಾಯಿಂದಲೇ ಕೇಳಿದ್ದು. ನನ್ನ ಪ್ರೊಫೆಸರ್ ಬಳಿ ಚಿಕಿತ್ಸೆಗಾಗಿ ಬಂದಿದ್ದವನು ಅವನು; ಅವನಿಗೆ ಮೂರ್ಛೆರೋಗ ಬರುತ್ತಿತ್ತು, ಮತ್ತು ಆಗಾಗ್ಗೆ ವಿಷಣ್ಣತೆಯ ಆಕ್ರಮಣ ಬೇರೆ, ನಂತರ ಅವನು ಅಳುತ್ತಿದ್ದ, ಮತ್ತು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲೂ ಪ್ರಯತ್ನಿಸಿದ್ದ. ಅವನ ಜೈಲಿನಲ್ಲಿನ ಜೀವನ ಸಾಕಷ್ಟು ದುಃಖಮಯವಾಗಿತ್ತು; ಅವನಿಗಿದ್ದ ಒಂದೇ ಸಹಚರ್ಯವೆಂದರೆ ಹಲ್ಲಿಗಳ ಜೊತೆ, ಮತ್ತು ಸರಳುಗಳಿಂದಾಚೆಗೆ ಕಾಣುತ್ತಿದ್ದ ಒಂದು ಮರ. ಆದರೆ ಹೋದ ವರ್ಷ ನಾನು ಭೇಟಿಯಾದ ಇನ್ನೊಂದು ವ್ಯಕ್ತಿಯ ಬಗ್ಗೆ ಇಲ್ಲಿ ಹೇಳುವುದು ಸಂದರ್ಭೋಚಿತ. ಈ ಪ್ರಕರಣಕ್ಕೆ ಒಂದು ವಿಚಿತ್ರವಾದ ವೈಶಿಷ್ಟ್ಯತೆಯಿದೆಲ. ಇದು ವಿಚಿತ್ರವಾದದ್ದು ಏಕೆಂದರೆ ಇದೊಂದು ಅಪರೂಪದ ಘಟನೆ. ಈ ಮನುಷ್ಯನನ್ನು ಒಮ್ಮೆ ಗಲ್ಲಿನ ಸ್ಥಾನಕ್ಕೆ ಮಿಕ್ಕವರ ಜೊತೆಯಲ್ಲಿ ಕರೆತರಲಾಯಿತು, ಮತ್ತು ಯಾವುದೋ ರಾಜಕೀಯ ಅಪರಾಧಕ್ಕೋಸ್ಕರ ಅವನಿಗೆ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುವ ಮರಣದಂಡನೆ ಶಿಕ್ಷೆಯನ್ನ ವಿಧಿಸಲಾಗಿತ್ತು. ಇಪ್ಪತ್ತು ನಿಮಿಷಗಳ ನಂತರ ಅವನ ಮರಣದಂಡನೆಯ ಶಿಕ್ಷೆಯನ್ನ ಹಿಂತೆಗೆದುಕೊಂಡು ಅದರ ಬದಲು ಇನ್ನ್ಯಾವುದೊ ಶಿಕ್ಷೆಯನ್ನ ವಿಧಿಸಲಾಯಿತು; ಆದರೆ ಆ ಎರಡು ಶಿಕ್ಷೆಯ ಆಜ್ಞೆಗಳ ಮಧ್ಯಂತರದಲ್ಲಿ, ಅಂದರೆ ಆ ಇಪ್ಪತ್ತು ನಿಮಿಷಗಳಲ್ಲಿ, ಕಡೇ ಪಕ್ಷ ಕಾಲು ಗಂಟೆಯ ಕಾಲ ಕಳೆದುಹೋಗಿತ್ತು; ಕೆಲವು ನಿಮಿಷಗಳಲ್ಲಿ ಅವನು ಸಾಯಬೇಕೆನ್ನುವ ಖಚಿತತೆಯಿಂದ, ಆ ಕಡುಭೀತಿಯಿಂದ ಕೂಡಿದ ಸಮಯದಲ್ಲಿನ ಅವನ ಮನಸ್ಥಿತಿಯ ಬಗ್ಗೆ ಕೇಳಲು ನಾನು ಕಾತುರನಾಗಿದ್ದೆ. ಆ ಸಮಯದಲ್ಲಿ ನಾನು ಅನೇಕ ಬಾರಿ ಅವನ ಭಾವನೆ ಮತ್ತು ಯೋಚನೆ ಏನಿತ್ತು ಎಂದು ಕೇಳತೊಡಗಿದೆ. ಅವನು ನಿಖರತೆಯಿಂದ ಮತ್ತು ಅಸಾಧಾರಣವಾದ ವಿಶಿಷ್ಟತೆಯಿಂದ ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಂಡಿದ್ದ; ಅವನಿಗೆ ಆ ಅನುಭವದ ತೃಣಮಾತ್ರದಷ್ಟನ್ನೂ ಮರೆಯಲು ಸಾಧ್ಯವಿಲ್ಲ ಎಂದು ಘೋಷಿಸಿದ.

“ಗಲ್ಲಿನ ಸ್ಥಾನದಿಂದ ಸುಮಾರು ಇಪ್ಪತ್ತು ಹೆಜ್ಜೆಗಳಷ್ಟು ದೂರದಲ್ಲಿ, ಎಲ್ಲಿ ಅವನ ಮರಣದಂಡನೆಯ ತೀರ್ಪನ್ನ ಕೇಳಿಸಿಕೊಳ್ಳಲು ಅವನನ್ನು ನಿಲ್ಲಿಸಿದ್ದರೊ, ಅಲ್ಲಿಯೇ ಅಪರಾಧಿಗಳನ್ನ ಕಟ್ಟಿಹಾಕಲು ಮೂರು ಕಂಬಗಳಿದ್ದವು. ಅಂದು ಸಾಯಲು ನಿಂತಿದ್ದ ಅಪರಾಧಿಗಳು ಅನೇಕ ಮಂದಿ ಇದ್ದರು. ಮೊದಲನೇ ಮೂರು ಅಪರಾಧಿಗಳನ್ನ ಆ ಕಂಬಗಳ ಬಳಿಗೆ ಕರೆದೊಯ್ಯಲಾಯಿತು, ಅವರ ಉಡುಗೆಯು ಉದ್ದನೆಯ ಬಿಳಿಯ ವಸ್ತ್ರವಾಗಿತ್ತು, ಮತ್ತು ಬಿಳಿಯ ಮುಖಗವಚವಿದ್ದ ಟೋಪಿಯಿಂದ ಅವರ ಮುಖವನ್ನ ಮುಚ್ಚಲಾಗಿತ್ತು, ಇದಕ್ಕೆ ಕಾರಣ ಅವರ ಕಡೆಗೆ ಗುರಿ ಇಟ್ಟ ಬಂದೂಕವನ್ನ ಅವರು ನೋಡದೇ ಇರಲೆಂದು. ನಂತರ ಒಂದೊಂದು ಕಂಬದ ಮುಂದೆ ಸೈನಿಕರ ಗುಂಪು ತಾವು ಗುಂಡು ಹಾರಿಸುವ ಸ್ಥಾನದಲ್ಲಿ ನಿಂತುಕೊಂಡರು. ನನ್ನ ಸ್ನೇಹಿತ ಈ ಪಟ್ಟಿಯಲ್ಲಿ ಎಂಟನೆಯವ, ಅವನ ಸರದಿ ಮೂರನೆಯದಾಗಿತ್ತು, ಒಬ್ಬ ಪಾದ್ರಿ ಅವರ ಮುಂದೆ ಕ್ರಾಸ್ ಹಿಡಿದುಕೊಂಡು ಹೋದ; ಈಗ ಅವನು ಬದುಕಿರುವುದು ಇನ್ನು ಐದು ನಿಮಿಷಗಳು ಮಾತ್ರ.”

“ಅವನು ಹೇಳಿದ್ದು ಆ ಐದು ನಿಮಿಷಗಳು ಅವನಿಗೆ ಅತ್ಯಂತ ಮುಗಿಯದ ಸಮಯವಾಗಿತ್ತು; ಆ ಸಮಯ ಅಗಾಧವಾದ ಸಂಪತ್ತಿನಂತೆ ಆಗಿತ್ತು; ಅವನಿಗೆ ಈ ನಿಮಿಷಗಳಲ್ಲಿ ಮಾತ್ರ ಬದುಕುತ್ತಿದ್ದೇನೆ ಅಂತ ಅನಿಸಿತು, ಆ ಐದು ನಿಮಿಷದಲ್ಲಿ ಅದೆಷ್ಟೊಂದು ಬದುಕು ಅಡಗಿದೆ, ಈಗೇನು ತನ್ನ ಅಂತ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಅಂತ ಅವನು ನಿರ್ಧರಿಸಿದ. ಆದ್ದರಿಂದ ಅವನು ತನ್ನ ಸಮಯದ ಬಗ್ಗೆ ಅನೇಕ ಯೋಜನೆಗಳನ್ನ ರೂಪಿಸಿದ. ಅವನ ಸಮಯವನ್ನ ಭಾಗಗಳಾಗಿ ವಿಭಜಿಸಿದ, ಒಂದು ಭಾಗ ತನ್ನ ಸಹಚರರಿಗೆ ವಿದಾಯ ಹೇಳುವುದಕ್ಕೆ ಮೀಸಲಿಟ್ಟ; ಅದು ಎರಡು ನಿಮಿಷಗಳು; ಮತ್ತು ಇನ್ನೆರಡು ನಿಮಿಷಗಳು ತನ್ನದೇ ಆದ ಬದುಕಿನ ಮತ್ತು ವೃತ್ತಿಯ ಬಗ್ಗೆ ಮತ್ತು ಸಂಪೂರ್ಣವಾಗಿ ತನ್ನ ಬಗ್ಗೆಯೇ ಯೋಚಿಸಲು; ಮತ್ತು ಇನ್ನೊಂದು ನಿಮಿಷ ಸುತ್ತಮುತ್ತ ಅವಲೋಕಿಸಲು. ಈ ರೀತಿ ಉಳಿದ ತನ್ನ ಸಮಯವನ್ನ ಇಷ್ಟು ಚೆನ್ನಾಗಿ ವಿಭಜಿಸಿದ್ದನ್ನು ಅವನು ಚೆನ್ನಾಗಿ ನೆನಪಿಟ್ಟುಕೊಂಡಿದ್ದ. ಅವನ ಸ್ನೇಹಿತರಿಗೆ ವಿದಾಯ ಹೇಳುವಾಗ ನೆನಪಿಸಿಕೊಂಡಿದ್ದು, ಅವನು ಸರ್ವೇಸಾಮಾನ್ಯವಾದ ಪ್ರತಿದಿನ ಕೇಳುವಂತಹ ಪ್ರಶ್ನೆಯನ್ನೇ ಕೇಳಿದ್ದು, ಮತ್ತು ಉತ್ತರಕ್ಕೋಸ್ಕರ ಬಹಳ ಆಸಕ್ತಿ ವಹಿಸಿದ್ದ. ಎಲ್ಲರಿಗೂ ವಿದಾಯ ಹೇಳಿದ ನಂತರ, ಅವನು ತನ್ನದೇ ಆದ ಆಲೋಚನೆಗಾಗಿ ಮೀಸಲಿಟ್ಟಿದ್ದ ಸಮಯವನ್ನ ಉಪಯೋಗಿಸಿಕೊಳ್ಳಲು ಪ್ರಾರಂಭಿಸಿದ; ಮೊದಲೇ ಅವನಿಗೆ ತಿಳಿದಿದ್ದುದು ಈ ಸಮಯದಲ್ಲಿ ಯಾವ ರೀತಿಯ ಆಲೋಚನೆ ಮಾಡಬೇಕೆಂಬುದು. ಅದನ್ನ ಆದಷ್ಟು ಬೇಗನೆ ಮತ್ತು ಸ್ಪಷ್ಟವಾಗಿ ಮಾಡಬೇಕಿತ್ತು, ಅವನು ಈಗಿಲ್ಲಿರುವುದು ಒಬ್ಬ ಜೀವಂತ, ಯೋಚನಾಪರ ವ್ಯಕ್ತಿಯಾಗಿ, ಮತ್ತು ಇನ್ನು ಮೂರು ನಿಮಿಷದಲ್ಲಿ ಅವನೊಬ್ಬ ಯಾರೂ ಅಲ್ಲ; ಅಥವ ಅವನೊಬ್ಬ ಯಾರೇ ಆದರೂ ಅಥವ ಏನೊ ಒಂದು ಆದ ಅಂದರೂ ಅದು ಏನು? ಮತ್ತು ಎಲ್ಲಿ? ಅದರ ಬಗ್ಗೆ ಈ ಕಡೇ ಮೂರು ನಿಮಿಷದಲ್ಲಿ ಉತ್ತರವನ್ನ ತಿಳಿದುಬಿಡುತ್ತೇನೆಂದು ಅವನಂದುಕೊಂಡ. ಸ್ವಲ್ಪ ದೂರದಲ್ಲಿಯೇ ಸ್ಥಾಪಿತವಾಗಿರುವ ಒಂದು ಚರ್ಚ್, ಅದರ ಸ್ವರ್ಣಲೇಪಿತ ಶಿಖರ ಸೂರ್ಯನ ಬೆಳಕಿಗೆ ಹೊಳೆಯುತ್ತಿತ್ತು. ಅವನು ಈ ಶಿಖರದ ಮತ್ತು ಅದರಿಂದ ಪ್ರತಿಬಿಂಬಿಸುತ್ತಿದ್ದ ಬೆಳಕಿನ ಕಡೆಗೆ ದುರುಗುಟ್ಟಿಕೊಂಡು ತೀವ್ರವಾಗಿ ನೋಡುತ್ತಿದ್ದುದನ್ನ ನೆನಪಿಸಿಕೊಂಡ. ಅವನಿಗೆ ಈ ಬೆಳಕಿನ ಪ್ರತಿಫಲನದಿಂದ ತನ್ನ ನೋಟವನ್ನ ಬದಲಿಸಲು ಆಗಲಿಲ್ಲ, ಅವನಲ್ಲಿ ಆಗ ಹುಟ್ಟಿದ ಕಲ್ಪನೆ ಎಂದರೆ ಈ ಬೆಳಕಿನ ಕಿರಣಗಳೇ ಅವನ ನೂತನವಾದ ವ್ಯಕ್ತಿತ್ವ, ಮತ್ತು ಇನ್ನು ಮೂರು ನಿಮಿಷಗಳಲ್ಲಿ ಅದು ಹೇಗೊ ಅವುಗಳ ಜೊತೆಯಲ್ಲಿ ಸಂಯೋಜನೆಗೊಂಡು ಅವನು ಅವುಗಳಲ್ಲಿ ಒಂದಾಗುತ್ತಾನೆಂದು.

“ತಕ್ಷಣದಲ್ಲಿ ಮುಂದೆ ಸಂಭವಿಸುವ ಘಟನೆಯ ಬಗ್ಗೆ ಉಂಟಾದ ಜಿಗುಪ್ಸೆ ಮತ್ತು ಅನಿಶ್ಚತತೆ, ಘೋರವಾದವುಗಳು; ಅವನು ಮುಂದೆ ಹೇಳಿದ, ಅವೆಲ್ಲದಕ್ಕಿಂತ ಕೆಟ್ಟದೆಂದರೆ ಒಂದು ಕಲ್ಪನೆ ’ಈಗ ನಾನು ಸಾಯದೇ ಇದ್ದರೆ ಮುಂದೇನು ಮಾಡಬೇಕು? ನಾನು ಪುನಃ ಬದುಕಿಗೆ ವಾಪಸ್ಸಾಗಿಬಿಟ್ಟರೆ? ಇದೆಂತಹಾ ದಿನಗಳ ಅನಂತತೆ, ದಿನಗಳೆಲ್ಲವೂ ನನ್ನದೆ! ನಾನು ಪ್ರತಿಯೊಂದು ನಿಮಿಷವನ್ನೂ ಶತಮಾನವನ್ನಾಗಿ ಪರಿವರ್ತಿಸುತ್ತೇನೆ. ನಾನು ಯಾವುದರಿಂದಲೂ ತಪ್ಪಿಸಿಕೊಳ್ಳುವುದಿಲ್ಲ, ನಾನು ಪ್ರತಿಯೊಂದು ಕಳೆದುಹೋಗುವ ಗಳಿಗೆಯನ್ನೂ ಎಣಿಸುತ್ತೇನೆ ಮತ್ತು ಯಾವುದನ್ನೂ ವ್ಯರ್ಥಮಾಡುವುದಿಲ್ಲ!’ ಅವನು ಹೇಳಿದ್ದು ಈ ಆಲೋಚನೆಗಳು ಅವನ ತಲೆಯ ಮೇಲೆ ದೊಡ್ಡ ಭಾರವನ್ನೇ ಹೊರಸಿದವು ಮತ್ತು ಅದನ್ನು ಅವನಿಗೆ ಸಹಿಸಿಕೊಳ್ಳಲು ಆಗಲಿಲ್ಲ, ಅವನು ಈಗ ಬಯಸಿದ್ದು ಅವನ ಮೇಲೆ ತತ್‌ಕ್ಷಣದಲ್ಲಿ ಗುಂಡು ಹಾರಿಸಿ ಎಲ್ಲದಕ್ಕೂ ಕೊನೆ ಹಾಡಲಿ ಎಂದು.”

ಪ್ರಿನ್ಸ್ ಸ್ವಲ್ಪ ಕಾಲ ನಿಶ್ಯಬ್ದನಾದ ಮತ್ತು ಎಲ್ಲರೂ ಕಾಯುತ್ತಿದ್ದರು, ಅವನು ಪುನಃ ಪ್ರಾರಂಭಿಸಿ ಕಥೆಯನ್ನ ಮುಗಿಸಲೆಂದು.

ಅನುವಾದ: ಕೆ. ಶ್ರೀನಾಥ್

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...