Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-4; ಕೊನೆಯ ಭಾಗ)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಕೊನೆಯ ಭಾಗ)

- Advertisement -
- Advertisement -

ಅವಳು ಈಗಿನ ತನ್ನ ಜೀವನದಲ್ಲಿ ಒಂಟಿ ಅನ್ನುವುದು ಕೂಡ ನಿಜ; ಟೋಟ್ಸ್ಕಿ ಅವಳ ಆಲೋಚನೆಗಳನ್ನ ಸರಿಯಾಗಿಯೇ ವಿಶ್ಲೇಷಿಸಿದ್ದಾನೆ. ಅವಳು ಜೀವನದಲ್ಲಿ ಪ್ರೀತಿಸುವು ದಕ್ಕೋಸ್ಕರವಲ್ಲದಿದ್ದರೂ ಕಡೇ ಪಕ್ಷ ಕೌಟುಂಬಿಕ ಜೀವನಕ್ಕೋಸ್ಕರವಾದರು ಮತ್ತು ಹೊಸ ಭರವಸೆ ಮತ್ತು ಉದ್ದೇಶಗಳಿಗೋಸ್ಕರ ಮೇಲೆ ಬರುವುದಕ್ಕೆ ಹಂಬಲಿಸುತ್ತಿದ್ದಳು; ಆದರೆ ಗವ್ರಿಲ ಅರ್ಡಾಲಿಯೊನವಿಚ್‌ನ ವಿಷಯದಲ್ಲಿ ಮಾತ್ರ ಅವಳಿಗೆ ಹೆಚ್ಚಿನದೇನನ್ನೂ ಇನ್ನೂ ಹೇಳಲಾಗುತ್ತಿಲ್ಲ. ಅವನು ಅವಳನ್ನು ಪ್ರೀತಿಸುತ್ತಿದ್ದಿರಬಹುದು ಎಂದು ಅವಳು ಯೋಚಿಸುತ್ತಿದ್ದಳು; ಅವನು ತನ್ನ ಜೊತೆಯ ಬಾಂಧವ್ಯದಲ್ಲಿ ದೃಢವಾಗಿರುವುದರ ಬಗ್ಗೆ ತನಗೆ ಖಚಿತತೆ ಸಿಕ್ಕರೆ, ತಾನೂ ಕೂಡ ಅವನನ್ನು ಪ್ರೀತಿಸುವುದಕ್ಕೆ ಕಲಿಯಲು ಸಾಧ್ಯವಾಗಬಹುದೆಂದು ಅವಳು ಭಾವಿಸಿದಳು; ಆದರೆ ಅವನು ಬಹಳ ಚಿಕ್ಕ ವಯಸ್ಸಿನವನು ಮತ್ತು ನಿರ್ಧಾರ ತೆಗೆದುಕೊಳ್ಳಲು ಇದೊಂದು ಕಷ್ಟದ ಪ್ರಶ್ನೆಯಾಗಿತ್ತು. ಆತನ ಬಗ್ಗೆ ವಿಶೇಷವಾಗಿ ಅವಳು ಇಷ್ಟಪಟ್ಟಿದ್ದು ಏನೆಂದರೆ ಅವನು ಕೆಲಸ ಮಾಡುತ್ತಿದ್ದುದು ಮತ್ತು ತನ್ನ ಶ್ರಮದಿಂದ ತನ್ನ ಕುಟುಂಬದವರನ್ನ ಸಾಕುತ್ತಿದ್ದಾನೆಂಬುದು.

ಅವನು ಸ್ವಾಭಿಮಾನಿ ಮತ್ತು ಮಹತ್ವಾಕಾಂಕ್ಷೆಯನ್ನ ಹೊಂದಿರುವವನು ಎಂದು ಅವಳು ಕೇಳಿ ತಿಳಿದಿದ್ದಳು; ಅವಳು ಅವನ ತಾಯಿ ಮತ್ತು ಸೋದರಿಯ ಬಗ್ಗೆ ಕುತೂಹಲಕಾರಿಯಾದದ್ದನ್ನ ಕೇಳಿದ್ದಳು; ಅವಳು ಅದನ್ನೆಲ್ಲಾ ಪ್ಟಿಟ್ಸಿನ್‌ನಿಂದ ಕೇಳಿ ತಿಳಿದಿದ್ದಳು; ಅವರ ಪರಿಚಯ ಮಾಡಿಕೊಳ್ಳಲು ಬಹಳ ಇಷ್ಟಪಡುತ್ತಿದ್ದಳು, ಆದರೆ ಇಲ್ಲಿ ಇನ್ನೊಂದು ಪ್ರಶ್ನೆ! ಅವರೆಲ್ಲಾ ಅವಳನ್ನು ಅವರ ಕುಟುಂಬಕ್ಕೆ ಬರಮಾಡಿಕೊಳ್ಳಲು ಸಿದ್ಧರಿದ್ದಾರ ಎನ್ನುವುದು. ಎಲ್ಲವನ್ನೂ ಪರಿಗಣಿಸಿದಾಗ, ಅವಳು ಈ ಮದುವೆಯನ್ನ ತಿರಸ್ಕರಿಸಿರಲಿಲ್ಲ, ಆದರೆ ಅವಸರಪಡುವುದು ಅವಳಿಗೆ ಇಷ್ಟವಿರಲಿಲ್ಲ. ಎಪ್ಪತ್ತೈದು ಸಾವಿರ ರೂಬಲ್ಲುಗಳ ವಿಷಯಕ್ಕೆ ಬಂದರೆ, ಇದರ ಬಗ್ಗೆ ಟೋಟ್ಸ್ಕಿಗೆ ಯಾವುದೇ ರೀತಿಯಲ್ಲಿ ಮುಜುಗರವಾಗಲೀ, ಕಷ್ಟವಾಗಲೀ, ಇರಲಾರದು; ಅವಳು ಹಣದ ಮಹತ್ವದ ಬಗ್ಗೆ ಚೆನ್ನಾಗಿ ಅರ್ಥಮಾಡಿಕೊಂಡಿದ್ದಳು, ಖಂಡಿತವಾಗಿ ಈ ಉಡುಗೊರೆಯನ್ನ ತೆಗೆದುಕೊಳ್ಳುತ್ತಾಳೆ. ಅವನ ಸೂಕ್ಷ್ಮ ಮನಸ್ಸಿನ ಬಗ್ಗೆ ಮನಸ್ಸಿನಲ್ಲಿಯೇ ಧನ್ಯವಾದಗಳನ್ನ ಅರ್ಪಿಸಿದಳು, ಆದರೆ ಈ ವಿಷಯ ಗವ್ರಿಲ ಅರ್ಡಾಲಿಯೊನವಿಚ್‌ಗೆ ಯಾಕೆ ತಿಳಿಯಬಾರದು ಅನ್ನುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ಯೋಚಿಸಿದಳು.

ಅವನಿಗೆ ಮತ್ತು ಅವನ ಕುಟುಂಬದವರಿಗೆ ತನ್ನ ಮೇಲೆ ಯಾವುದೇ ಬಗೆಯ ಮುಚ್ಚಿಟ್ಟುಕೊಂಡ ಸಂಶಯಗಳು ಇಲ್ಲವೆನ್ನುವುದು ಮನದಟ್ಟಾಗುವವರೆಗೂ ಮದುವೆ ಮಾಡಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದಳು. ತನ್ನ ಭೂತಕಾಲದ ಬಗ್ಗೆಗಿನ ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ ಎನ್ನುವುದು ಅವಳ ನಿಲುವಾಗಿತ್ತು, ಮತ್ತು ಈ ಸತ್ಯಾಂಶ ಎಲ್ಲರಿಗೂ ತಿಳಿಯಬೇಕೆಂಬುದು ಅವಳ ಇಚ್ಛೆಯಾಗಿತ್ತು. ಯಾವುದಕ್ಕೂ, ಅಂದರೆ ಅವಳ ಗತ ಜೀವನದಲ್ಲಿ ನಡೆದಿದ್ದರ ಬಗ್ಗೆ ತನ್ನನ್ನು ತಾನೇ ಹಳಿದುಕೊಳ್ಳುವುದನ್ನ ಅವಳು ಎಂದೂ ಇಷ್ಟಪಡುತ್ತಿರಲಿಲ್ಲ. ಅವಳ ಮತ್ತು ಟೋಟ್ಸ್ಕಿಯ ನಡುವೆ ಹಿಂದಿನ ಐದು ವರ್ಷಗಳಿಂದ ಇದ್ದ ಸಂಬಂಧದ ಬಗ್ಗೆ ಗವ್ರಿಲ ಅರ್ಡಾಲಿಯೊನೊವಿಚ್‌ಗೆ ತಿಳಿಸಿಬಿಡಬೇಕೆಂದು ಅವಳು ಯೋಚಿಸಿದಳು. ಅವಳು ಈ ಹಣವನ್ನ ಪಡೆದುಕೊಂಡರೆ ತಾನು ಚಿಕ್ಕ ಹುಡುಗಿಯಾಗಿದ್ದಾಗಿನ ದುರಾದೃಷ್ಟಕ್ಕೆ ನಷ್ಟ ಪರಿಹಾರವೆಂದು ಯಾರೂ ಪರಿಗಣಿಸಬಾರದೆಂದು ಅವಳು ಭಾವಿಸಿದ್ದಳು; ಆ ದುರಾದೃಷ್ಟದ ದಿನಗಳು, ಯಾವುದೇ ಪ್ರಮಾಣದಲ್ಲೂ ಅವಳೇ ಮಾಡಿದ ತಪ್ಪಿಗಾಗಂತೂ ಒದಗಿದ್ದಲ್ಲ; ಆದರೆ ಹಾಳಾಗಿಹೋಗಿದ್ದ ಅವಳ ಜೀವನಕ್ಕೆ ಅದು ಕೇವಲ ಪರಿಹಾರವಷ್ಟೆ.

ಅವಳು ಈ ರೀತಿಯ ವಿವರಣೆಗಳನ್ನು ಕೊಡುವ ಮತ್ತು ನಿವೇದಿಸಿಕೊಳ್ಳುವ ಸಮಯದಲ್ಲಿ ಎಷ್ಟು ಉನ್ಮಾದಕ್ಕೆ ಒಳಗಾಗುತ್ತಿದ್ದಳು ಮತ್ತು ತಳಮಳಗೊಳ್ಳುತ್ತಿದ್ದಳೆಂದರೆ, ಜನರಲ್ ಎಪಾಂಚಿನ್ ಬಹಳ ಸಂತುಷ್ಟಗೊಳ್ಳುತ್ತಿದ್ದ; ಮತ್ತು ಈ ವಿಷಯವನ್ನ ಒಮ್ಮೆಗೇ ಸುಖಾಂತ್ಯಕ್ಕೆ ತರಬೇಕೆಂದು ನಿರ್ಧರಿಸಿದ. ಆದರೆ ಟೋಟ್ಸ್ಕಿಯ ಜೊತೆಗಿನ ತನ್ನ ಪೂರ್ವಾನುಭವದ ಕಾರಣಕ್ಕೆ ಎಚ್ಚರಿಕೆಯಿಂದಿದ್ದ, ಮತ್ತು ಹೂವಿನ ಗೊಂಚಲಿನ ಒಳಗೆ ಅವಿತುಕೊಂಡ ಹಾವಿಗಾಗಿ ಹುಡುಕಾಡುವಂತೆ ಹುಡುಕಿದ. ಏನಾದರೂ, ಇಬ್ಬರೂ ಸ್ನೇಹಿತರು ತಮ್ಮ ಉದ್ದೇಶವನ್ನ ಸಾಕಾರಗೊಳಿಸಲು ನಂಬಿಕೆ ಇಟ್ಟಿದ್ದ ವಿಶೇಷವಾದ ಅಂಶ (ಉದಾಹರಣೆಗೆ, ಗಾನಿಯಾಗೆ ನಸ್ಟಾಸಿಯಾ ಫಿಲಿಲೊಪೊವ್ನಳ ಬಗ್ಗೆ ಇದ್ದ ಆಕರ್ಷಣೆ) ಈಗ ಹೆಚ್ಚು ಪ್ರಮುಖವಾಗಿ ಕಾಣತೊಡಗಿತು; ಈಗ ಪೂರ್ವಭಾವಿ ಮಾತುಕತೆಗಳು ಪ್ರಾರಂಭವಾಗಿದ್ದವು, ನಿಧಾನವಾಗಿ ಟೋಟ್ಸ್ಕಿ ಕೂಡ ಇದು ಯಶಸ್ವಿಯಾಗುವುದರ ಸಾಧ್ಯತೆಯ ಬಗ್ಗೆ ನಂಬಲು ಪ್ರಾರಂಭಿಸಿದ.

ಬಹಳ ದಿನಗಳ ಕಾಲ ನಸ್ಟಾಸಿಯ ಮತ್ತು ಗಾನಿಯ ಈ ವಿಷಯದ ಬಗ್ಗೆ ಕೂಲಂಕಷವಾಗಿ ಸಮಾಲೋಚಿಸಿದರು. ಆದರೆ ಪರಸ್ಪರ ಮಾತನಾಡಿದ್ದು ಬಹಳಷ್ಟು ಕಡಿಮೆ; ಈ ರೀತಿಯ ಪ್ರಶ್ನೆಗಳ ಬಗ್ಗೆ ಚರ್ಚಿಸುವುದಕ್ಕೆ ಆಕೆಯ ನಮ್ರತೆ ಘಾಸಿಪಡುತ್ತಿತ್ತು. ತಾನು ಯಾವುದೇ ರೀತಿಯಲ್ಲಿ ಯಾವುದಕ್ಕೂ ಬದ್ಧಳಾಗಿಲ್ಲ ಎನ್ನುವ ತಿಳುವಳಿಕೆಯ ಮೇರೆಗೆ, ಮತ್ತು ’ಇಲ್ಲ’ ಎನ್ನುವ ಹಕ್ಕು ಮದುವೆಯ ದಿನದವರೆಗೂ ಅವಳಲ್ಲಿ ಸ್ಥಾಪಿತವಾಗಿಯೇ ಇರುತ್ತದೆ ಎನ್ನುವುದನ್ನು ಅರಿತು ಅವಳು ಅವನ ಪ್ರೀತಿಯನ್ನ ಗುರುತಿಸಿದಳು; ಗಾನಿಯಾಗೂ ಕೂಡ ಕೊನೆಯ ಗಳಿಗೆಯವರಿಗೂ ತಿರಸ್ಕರಿಸುವ ಹಕ್ಕು ಇರುತ್ತದೆ ಎಂದು ಕೂಡ.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-4; ಭಾಗ-4)

ಅನೇಕ ಜಗಳ ಮತ್ತು ರಂಪಾಟಗಳ ನಂತರ ತನ್ನ ಕುಟುಂಬದವರೆಲ್ಲರೂ ಗಂಭೀರವಾಗಿ ಈ ಜೋಡಿಯನ್ನ ವಿರೋಧಿಸುತ್ತಿದ್ದಾರೆ ಎಂದು ಕೆಲವೇ ಸಮಯದಲ್ಲಿ ಗಾನಿಯಾಗೆ ಸ್ಪಷ್ಟವಾಯಿತು; ನಸ್ಟಾಸಿಯಳಿಗೂ ಕೂಡ ಈ ಬೆಳವಣಿಗೆಯ ಸ್ಪಷ್ಟವಾದ ಅರಿವಾಗಿತ್ತು. ಅದರ ಬಗ್ಗೆ ನಸ್ಟಾಸಿಯ ಏನನ್ನಾದರೂ ಮಾತನಾಡಲಿ ಎಂದು ಅವನು ಪ್ರತಿದಿನವೂ ಕಾಯುತ್ತಿದ್ದರೂ ಕೂಡ ಅವಳು ಇದರ ಬಗ್ಗೆ ಏನನ್ನೂ ಹೇಳಲಿಲ್ಲ.

ಅನೇಕ ವದಂತಿಗಳು ಬಹಳ ದಿನದಿಂದ ಹರಡತೊಡಗಿದ್ದವು ಮತ್ತದು ಟೋಟ್ಸ್ಕಿಯ ಸಮಚಿತ್ತತೆಯನ್ನ ಸಾಕಷ್ಟು ಹಾಳುಮಾಡಿತು, ಆದರೆ ಈ ಸಂದರ್ಭದಲ್ಲಿ ಅದರ ಬಗ್ಗೆ ವಿವರಿಸಲು ನಾವು ಹೋಗುವುದಿಲ್ಲ; ಬರೀ ಒಂದೆರಡು ಘಟನೆಗಳನ್ನ ಮಾತ್ರ ಉಲ್ಲೇಖಿಸುತ್ತೇವೆ. ಮೊದಲನೆಯದೇನೆಂದರೆ ನಸ್ಟಾಸಿಯ, ಎಪಾಂಚಿನ್‌ನ ಹೆಣ್ಣುಮಕ್ಕಳ ಜೊತೆಯಲ್ಲಿ ಹತ್ತಿರದ ಮತ್ತು ರಹಸ್ಯವಾದ ಸಂಬಂಧವನ್ನ ಹೊಂದಿದ್ದಾಳೆ ಎನ್ನುವುದು, ಇದೊಂದು ನಂಬಲಸಾಧ್ಯವಾದಂತಹ ವದಂತಿ; ಇನ್ನೊಂದು, ಗಾನಿಯಾನ ಸ್ವಭಾವ ದುರಾಸೆಯಿಂದ ಕೂಡಿದ್ದು, ತಾಳ್ಮೆಯಿಲ್ಲದಂತಹದು, ಹೊಟ್ಟೆಕಿಚ್ಚಿನದು ಮತ್ತು ಅಸಾಧ್ಯವಾದ ವ್ಯರ್ಥ ಜೀವನ ನಡೆಸುವಂತಹುದಾಗಿರುವುದರಿಂದ, ಗಾನಿಯ ಅವಳನ್ನು ಮದುವೆಯಾಗುತ್ತಿರುವುದು ಹಣಕ್ಕೋಸ್ಕರ ಮಾತ್ರ ಎಂದು ಅನುಮಾನವಿಲ್ಲದೇ ನಸ್ಟಾಸಿಯ ಫಿಲಿಪೊವ್ನಳಿಗೆ ಮೊದಲೇ ಅರಿವಾಗಿದೆ ಎಂಬುದು; ಅವನೊಮ್ಮೆ ನಸ್ಟಾಸಿಯ ಫಿಲಿಪೊವ್ನಳ ವಾತ್ಸಲ್ಯವನ್ನ ಗೆಲ್ಲಲು ಶ್ರದ್ಧೆಯಿಂದಲೇ ಪ್ರಯತ್ನಪಟ್ಟಿದ್ದ, ಆದರೂ ಇಬ್ಬರೂ ಸ್ನೇಹಿತರುಗಳೂ, ಅಂದರೆ ಜನರಲ್ ಮತ್ತು ಟೋಟ್ಸ್ಕಿ, ಅವನ ಅವಳ ಬಗ್ಗೆಯ ಈ ಮೋಹವನ್ನ ಅವರದೇ ಆದ ಉದ್ದೇಶಕ್ಕೆ ದುರುಪಯೋಗಮಾಡಿಕೊಳ್ಳಲು ನಿರ್ಧರಿಸಿದರು; ಇಡೀ ಪ್ರಕರಣ ಅವನಿಗೆ ಒಂದು ಉಪದ್ರವ ಮತ್ತು ದುಃಸ್ವಪ್ನವಾಗಿ ಪರಿವರ್ತನೆಗೊಂಡಿರುವುದು ಈಗ ಸ್ಪಷ್ಟವಾಗಿದೆ.

ಅವನ ಹೃದಯದಲ್ಲಿ ಮೋಹ ಮತ್ತು ದ್ವೇಷ ಎರಡೂ ವಿಭಜಿತವಾಗಿ ತೂಗಾಡುತ್ತಿತ್ತು; ಕೊನೆಗೂ ಅವನು ಅವಳನ್ನು ಮದುವೆಯಾಗಲು ಸಮ್ಮತಿಸಿದರೂ ಕೂಡ (ಅವನೇ ಹೇಳಿದಂತೆ), ಪರಿಸ್ಥಿತಿಗಳ ಒತ್ತಡದಿಂದ, ಮದುವೆಯಾದ ನಂತರ ಅವಳ ಮೇಲೆ ಸರಿಯಾಗಿ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಅವನು ತನಗೆ ತಾನೆ ಆಶ್ವಾಸನೆ ಕೊಟ್ಟುಕೊಂಡಿದ್ದ.

ನಸ್ಟಾಸಿಯಾ ಇವನ್ನೆಲ್ಲಾ ಊಹಿಸಿ ತಿಳಿದುಕೊಂಡಿದ್ದಾಳೆ ಮತ್ತು ಇದಕ್ಕೆಲ್ಲಾ ಪ್ರತಿಯಾಗಿ ಯಾವುದೊ ಯೋಜನೆಯನ್ನ ರೂಪಿಸಿಕೊಳ್ಳುತ್ತಿದ್ದಾಳೆಂದು ಟೋಟ್ಸ್ಕಿಗೆ ಅನಿಸಿತ್ತು; ಇದು ಟೋಟ್ಸ್ಕಿಯಲ್ಲಿ ಅತೀವವಾದ ಭಯವನ್ನ ಉಂಟುಮಾಡಿತು; ಅವನು ಎಷ್ಟು ಭಯಗ್ರಸ್ತನಾಗಿದ್ದನೆಂದರೆ ಅವನು ತನ್ನ ಅನಿಸಿಕೆಗಳನ್ನ ಜನರಲ್‌ಗೆ ಕೂಡ ತಿಳಿಸಲಿಲ್ಲ. ಆದರೆ ಕೆಲವು ಬಾರಿ ಅವನು ಧೈರ್ಯ ತಂದುಕೊಂಡು, ಪುನಃ ಸಂಪೂರ್ಣವಾದ ಭರವಸೆಯಿಂದ ಮತ್ತು ಲವಲವಿಕೆಯಿಂದ ಇರುತ್ತಿದ್ದವನಂತೆ ನಟಿಸುತ್ತಿದ್ದ; ವಾಸ್ತವದಲ್ಲಿ ದುರ್ಬಲನಾದ ಮನುಷ್ಯ ಒಮ್ಮೊಮ್ಮೆ ಇಂತಹ ಪರಿಸ್ಥಿತಿಯಲ್ಲಿ ಈ ರೀತಿ ನಟಿಸುವುದು ಸಾಮಾನ್ಯ.

ಏನೇ ಆದರೂ, ತನ್ನ ಅಂತಿಮ ಉತ್ತರವನ್ನು ಅವಳ ಹುಟ್ಟುಹಬ್ಬದ ದಿನದ ಸಂಜೆ ತಿಳಿಸುತ್ತೇನೆಂದು ಒಂದು ದಿನ ನಸ್ಟಾಸಿಯ ಅವರಿಗೆ ತಿಳಿಸಿದ್ದರಿಂದ, ಇಬ್ಬರೂ ಸ್ನೇಹಿತರುಗಳಿಗೆ ಪರಿಸ್ಥಿತಿ ಈಗ ಬಹಳ ಆಶಾದಾಯಕವಾಗಿದೆ ಎಂದು ಅನಿಸಿತ್ತು; ಮತ್ತು ಅವಳ ಹುಟ್ಟುಹಬ್ಬದ ದಿನ ಇನ್ನೇನು ಹತ್ತಿರದಲ್ಲೇ ಇತ್ತು.

ಇವೆಲ್ಲದರ ಮಧ್ಯೆ ವಿಚಿತ್ರವಾದ ವದಂತಿಯೊಂದು ಹರಿದಾಡಲು ಶುರುವಾಯಿತು; ಅದೂ ಬಹಳ ಗೌರವಾನ್ವಿತ ವ್ಯಕ್ತಿಯಾಗಿದ್ದ ಜನರಲ್ ಎಪಾಂಚಿನ್‌ನ ಬಗ್ಗೆ; ಅವನೇ ಈಗ ನಸ್ಟಾಸಿಯ ಪಿಲಿಪೊವ್ನಳ ಬಗ್ಗೆ ಆಕರ್ಷಿತನಾಗಿದ್ದಾನೆ, ಅವಳ ಬಗೆಗಿನ ಭಾವನೆ ಈಗ ಮೋಹದ ಹತ್ತಿರ ಹತ್ತಿರಕ್ಕೆ ತಿರುಗುತ್ತಿದೆ ಎಂದು. ಗಾನಿಯ ಆ ಹುಡುಗಿಯನ್ನು ಮದುವೆಯಾಗುವುದರಿಂದ, ತನಗೆ ಯಾವ ರೀತಿಯ ಲಾಭವಾಗುತ್ತದೆ ಎಂದು ಜನರಲ್ ಯೋಚಿಸುತ್ತಿದ್ದಾನೆ ಎನ್ನುವುದನ್ನ ಕಲ್ಪಿಸಿಕೊಳ್ಳಲು ಕಷ್ಟವಾಗಿತ್ತು. ಬಹುಶಃ ಅವನು ಗಾನಿಯಾನ ಸಹಮತದ ಬಗ್ಗೆ ಅವಲಂಬಿತನಾಗಿದ್ದಾನೆ ಅನಿಸುತ್ತದೆ; ಅಲ್ಲದೆ, ಜನರಲ್ ಮತ್ತು ಅವನ ಕಾರ್ಯದರ್ಶಿ, ಇಬ್ಬರಲ್ಲೂ ಯಾವುದೋ ರಹಸ್ಯವಾದ ಒಡಂಬಡಿಕೆ ಇದೆಯೆನ್ನುವುದರ ಬಗ್ಗೆ ಟೋಟ್ಸ್ಕಿ ಹಿಂದಿನಿಂದಲೂ ಸಂಶಯ ಹೊಂದಿದ್ದ. ಎಲ್ಲದಕ್ಕಿಂತ ಮುಖ್ಯವಾಗಿ ತಿಳಿದ ಸತ್ಯವೇನೆಂದರೆ ನಸ್ಟಾಸಿಯಾಳ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೊಡಲು ಜನರಲ್ ಮುತ್ತಿನ ದುಬಾರಿ ಹಾರವೊಂದನ್ನ ಮಾಡಿಸಿದ್ದ; ಹುಟ್ಟುಹಬ್ಬದ ದಿನ ಹತ್ತಿರ ಬಂದಂತೆ ಅದನ್ನ ಅವಳಿಗೆ ಕೊಡಲು ಉತ್ಸುಕತೆಯಿಂದ ತಳಮಳಗೊಳ್ಳುತ್ತಾ ಕಾತುರನಾಗಿದ್ದ.

ಎಪಾಂಚಿನ್‌ನ ಹೆಂಡತಿ ಬಹಳ ಕಾಲದಿಂದ ತನ್ನ ಗಂಡನ ದಾಂಪತ್ಯ ದ್ರೋಹದ ಸ್ವಭಾವಕ್ಕೆ ಒಗ್ಗಿಕೊಂಡಿದ್ದವಳು, ಈ ಮುತ್ತಿನ ಹಾರದ ಬಗ್ಗೆಯೂ ಅವಳು ಕೇಳಲ್ಪಟ್ಟಳು; ಈ ವದಂತಿ ಅವಳ ಅತ್ಯಂತ ಉತ್ಸಾಹಭರಿತವಾದ ಕುತೂಹಲ ಮತ್ತು ಆಸಕ್ತಿಯನ್ನ ಉದ್ರೇಕಿಸಿತು. ಜನರಲ್ ಸರಿಯಾದ ಸಮಯಕ್ಕೆ ಇದನ್ನ ಕಂಡುಕೊಂಡ; ಇದಕ್ಕೆ ಸುದೀರ್ಘ ವಿವರಣೆ ನೀಡುವುದು ಅಗತ್ಯವಿದೆಯೆಂದು ಮನಗಂಡ, ಆದರೆ ಅದು ಅವನನ್ನು ಎಚ್ಚರಗೊಳಿಸಿತು.

ಇದೇ ಕಾರಣಕ್ಕೆ ಆ ದಿನ ಕುಟುಂಬದವರ ಒಟ್ಟಿಗೆ ಮಧ್ಯಾಹ್ನದ ಊಟ ಮಾಡಲು ಹಿಂಜರಿದ. (ನಾವು ಈ ನಿರೂಪಣೆಯನ್ನ ಶುರುಮಾಡಿದ ದಿನದ ಬೆಳಿಗ್ಗೆ). ಪ್ರಿನ್ಸ್‌ನ ಆಗಮನಕ್ಕಿಂತ ಮುಂಚೆ ಅವನು ಯಾವುದೋ ವ್ಯವಹಾರದ ಕಾರಣ ಒಡ್ಡಿ ಜೊತೆಯಲ್ಲಿ ಊಟಮಾಡುವುದನ್ನ ತಪ್ಪಿಸಿಕೊಳ್ಳಲು ನೋಡಿದ್ದ; ಸರಳವಾಗಿ ಹೇಳಬೇಕೆಂದರೆ ಅದನ್ನ ಓಡಿಹೋಗುವುದೆನ್ನಬಹುದು.

ಈ ಒಂದು ದಿನ ಅದರಲ್ಲೂ ಇಂದಿನ ಸಂಜೆ ಅವನ ಮತ್ತು ಅವನ ಕುಟುಂಬದ ಜೊತೆ ಯಾವುದೇ ಅಹಿತಕರವಾದ ಘಟನೆ ನಡೆಯದೇ ಮುಗಿದುಹೋಗಲಿ ಎಂದು ಅವನು ನಿರ್ದಿಷ್ಟವಾಗಿ ಆತಂಕಪಡುತ್ತಿದ್ದ; ಸರಿಯಾದ ಸಮಯಕ್ಕೆ ಪ್ರಿನ್ಸ್‌ನ ಆಗಮನವಾಯಿತು. “ದೇವರೆ ಅವನನ್ನು ಈ ಒಂದು ಉದ್ದೇಶಕ್ಕೋಸ್ಕರ ಕಳುಹಿಸಿದ” ಎಂದು ತನಗೆ ತಾನೇ ಹೇಳಿಕೊಂಡು ತನ್ನ ಹೆಂಡತಿಯ ಕೃಪೆಯನ್ನ ಅರಸುತ್ತಾ ರೂಮಿನತ್ತ ಹೊರನಡೆದ.

(ಮುಂದಿನ ವಾರ: ಅಧ್ಯಾಯ-5)

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...