Homeಕರ್ನಾಟಕಬಿಜೆಪಿಯಲ್ಲೇ ಉಳಿಯಲು ರಾಮದಾಸ್ ನಿರ್ಧಾರ; ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದೇನು?

ಬಿಜೆಪಿಯಲ್ಲೇ ಉಳಿಯಲು ರಾಮದಾಸ್ ನಿರ್ಧಾರ; ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದೇನು?

- Advertisement -
- Advertisement -

ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಅವರು ಮಂಗಳವಾರ ಸಂಜೆ ಜನರೊಂದಿಗೆ ಸಭೆ ನಡೆಸಿದ್ದು ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಮುಖಂಡರ ಭೇಟಿಗೂ ನಿರಾಕರಿಸಿದ್ದ ರಾಮದಾಸ್ ಅವರು ಬಂಡಾಯ ಏಳುವ ಸೂಚನೆಗಳು ದೊರೆತ್ತಿದ್ದವು. ಆದರೆ ಅಂತಿಮವಾಗಿ ಪಕ್ಷದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಕ್ಷೇತ್ರದ ಜನರೊಂದಿಗೆ ಮಾತನಾಡಿದ ಅವರು, ತಾವು ನಡೆದುಬಂದ ರಾಜಕಾರಣವನ್ನು ಮೆಲುಕು ಹಾಕಿದರು. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದರು. “ನಾನು ಶಾಸಕನಾಗಿರಲಿ, ಇಲ್ಲದಿರಲಿ ನನ್ನ ಕಚೇರಿ ತೆರೆದಿರುತ್ತದೆ. ಕ್ಷೇತ್ರದ ಪ್ರತಿ ವಾರ್ಡ್‌ನ ಮನೆಗೂ ಭೇಟಿ ನೀಡಿ ಊಟ ಉಪಚಾರ ಮಾಡುತ್ತೇನೆ. ಕ್ಷೇತ್ರದಲ್ಲಿ ನಿರಂತರ ಸಂಪರ್ಕದಲ್ಲಿ ಇರುತ್ತೇನೆ” ಎಂದು ಘೋಷಿಸಿದ್ದಾರೆ.

“ಶಾಸಕನಾದ ನಾನು ಪ್ರತಿಯೊಂದು ಬೂತ್‌ನ ಅಧ್ಯಕ್ಷರ ಮನೆಗೆ ಬರುತ್ತೇನೆ. ನಿಮ್ಮ ಮನೆಯಲ್ಲೇ ಊಟ ಮಾಡುತ್ತೇನೆ. ನಿಮ್ಮ ಯೋಗಕ್ಷೇಮ ವಿಚಾರಿಸುತ್ತೇನೆ. ಕಾರ್ಯಕರ್ತರೇ ಆಸ್ತಿ. ನನ್ನನ್ನು ಅಣ್ಣನ ಸ್ಥಾನದಲ್ಲಿ ನೋಡುತ್ತಿದ್ದೀರಿ. ಕೊನೆಯುಸಿರು ಇರುವವರೆಗೂ ನಿಮ್ಮ ಕ್ಷೇಮವನ್ನು ವಿಚಾರಿಸುತ್ತೇನೆ. ಶಾಸಕರ ಕಚೇರಿ ಇದೆ. ನಾನು ಶಾಸಕನಾಗಿ ಇರುತ್ತೇನೋ ಬಿಡುತ್ತೇನೋ ಬೇರೆ ವಿಷಯ. ಆದರೆ ನನ್ನ ಕಚೇರಿ ಜನರ ಸೇವೆಗಾಗಿ ತೆರೆದಿರುತ್ತದೆ” ಎಂದಿದ್ದಾರೆ.

“ಶಾಸಕನಾಗಿ ಸೇವೆ ಮಾಡುವುದಕ್ಕಾಗಿ ಸರ್ವೇ ಮಾಡಿಸಿದೆ. ಜಾತಿ ಮತ ಎಲ್ಲವನ್ನೂ ಮೀರಿ ನನಗೆ ಬೆಂಬಲ ನೀಡಿದ್ದಾರೆ. ಚುನಾವಣೆಯಲ್ಲಿ ನಿಂತರೆ ಹನ್ನೊಂದರಿಂದ ಹನ್ನೆರಡು ಸಾವಿರ ಮತಗಳಲ್ಲಿ ಗೆಲ್ಲುತ್ತೇನೆ ಅಂತ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

“ಮೋದಿಯವರು ಮಾಡಿದ ಪ್ರಶಂಸೆ ನನಗೆ ನೆನಪಿದೆ. ಪಕ್ಷ ಮುಖ್ಯನಾ? ನೋವು ಮುಖ್ಯನಾ ಎಂದು ಪ್ರಶ್ನೆ ಬರುತ್ತದೆ. ಜಗದೀಶ್‌ ಶೆಟ್ಟರು ನಮ್ಮ ಮುಂದೆ ಇದ್ದಾರೆ. ಅವರಿಗೆ ಅನಿಸಿದ ನಿರ್ಧಾರ ತೆಗೆದುಕೊಂಡಿದ್ದಾರೆ. ವೈಯಕ್ತಿಕ ವಿಷಯ ಮುಖ್ಯನಾ? ಪಕ್ಷದ ವಿಚಾರ ಮುಖ್ಯನಾ? ದೇಶವನ್ನು ಕಾಪಾಡುತ್ತಿರುವ ಮಹಾನ್ ನಾಯಕ ಮೋದಿಯವರು ಮುಖ್ಯನಾ? ಎಂಬ ತೊಳಲಾಟದಲ್ಲಿ ಇದ್ದೇನೆ. ಹನ್ನೊಂದು ಸಾವಿರ ಪ್ರಮುಖರು ನನ್ನನ್ನು ಮನೆಯ ಮಗ ಎಂದು ಸ್ವೀಕರಿಸಿದ್ದೀರಿ. ಕಠಿಣವಾದ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ” ಎಂದು ತಮ್ಮ ಭಾಷಣದಲ್ಲಿ ಹೇಳಿದರು.

“ನನ್ನ ನಿರ್ಧಾರ ನಿಮಗೆ ಕೆಟ್ಟದ್ದು ಅನಿಸಿದರೂ ಅದು ಒಳ್ಳೆಯ ನಿರ್ಧಾರವೆಂದು ನಾನು ಭಾವಿಸಿರುವೆ. ಅದನ್ನು ದಯವಿಟ್ಟು ಸ್ವೀಕರಿಸಬೇಕು. ಆರ್‌ಎಸ್‌ಎಸ್‌ನ ಸ್ವಯಂಸೇವಕನಾದ ನಾನು ಹೇಗೆ ಪಕ್ಷವನ್ನು ಕಟ್ಟಿ ಬೆಳೆಸಿದೆನೋ ಹಾಗೆಯೇ ನಡೆದುಕೊಂಡು ಹೋಗಬೇಕಾಗಿರುವುದು ಮುಖ್ಯವಾಗುತ್ತದೆ” ಎಂದಿದ್ದಾರೆ.

“ಪಕ್ಷದ ನಿರ್ಣಯವನ್ನು ತೆಗೆದುಕೊಳ್ಳಬೇಕು. ಭಾರತಾಂಬೆಯ ಗೌರವವನ್ನು ಹೆಚ್ಚಿಸುವ ಸಂದರ್ಭ ಇದು. ನಿಮ್ಮ ಶಾಸಕ ನಿಮ್ಮ ಮನೆಯಲ್ಲಿಯೇ ಇರುತ್ತಾನೆ. ಭಾರತೀಯ ಜನತಾ ಪಕ್ಷವನ್ನು ನಡೆಸಿಕೊಂಡು ಹೋಗಬೇಕಾಗಿದೆ. ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ನಿಮ್ಮ ಹಿತದೃಷ್ಟಿಯಿಂದ ಮತ್ತು ಕ್ಷೇತ್ರದ ಹಿತಾದೃಷ್ಟಿಯಿಂದ ಆಗಿರುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಈ ಮೂರು ದಿನಗಳ ಅವಧಿಯಲ್ಲಿ ಯಾರ್‍ಯಾರು ಹೋದರು, ಯಾರ್‍ಯಾರು ಬಂದರು ಎಂದು ತಿಳಿಸಿದೆ. ಈ ಕ್ಷೇತ್ರದ ಶೇ. 90ರಷ್ಟು ಪದಾಧಿಕಾರಿಗಳು ನನ್ನ ಜೊತೆ ಇದ್ದೀರಿ. ಇದಕ್ಕೆ ನನ್ನ ಜೀವನ ಸಾರ್ಥಕವಾಯಿತು” ಎಂದು ಭಾವುಕವಾಗಿ ನುಡಿದ್ದಾರೆ.

“ಕಾರ್ಯಕರ್ತರ ಯೋಗ ಕ್ಷೇಮ ಮಾಡುತ್ತಿದ್ದೇನೆ. 400 ಕಿಮೀ ರಸ್ತೆ ಆಗಿದೆ, ಇನ್ನೊಂದಿಷ್ಟು ಆಗಬೇಕಾಗಿದೆ.
ಕಬಿನಿಯಿಂದ ನೀರು ಸರಬರಾಜು ಆಗುತ್ತಿದೆ. 120 ಪಾರ್ಕ್‌ಗಳ ಅಭಿವೃದ್ಧಿಯಾಗಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡಿಸುತ್ತಿದ್ದೇವೆ. ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಕೊಡಿಸಲು 4500 ಮನೆ ನಿರ್ಮಾಣ ಮಾಡುತ್ತಿದ್ದೇವೆ. ಮನೆಗಳ ಕಾರ್ಯ ಆರಂಭವಾಗಿದೆ. ಬ್ಯಾಂಕ್‌ಗಳು ಒಪ್ಪಿಗೆ ಕೊಟ್ಟಿವೆ” ಎಂದು ವಿವರಿಸಿದ್ದಾರೆ.

“ಇಷ್ಟೆಲ್ಲ ಕೆಲಸ ನಿರಂತರವಾಗಿ ಮಾಡಿದ್ದೇನೆ. 265 ಬೂತ್‌ಗಳಲ್ಲಿ ಸಭೆ ಕರೆದು ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ ಭಾವನೆಗಳನ್ನು ಸ್ಪಷ್ಟಪಡಿಸಿದ್ದೀರಿ. ನಾನು ಒಂದು ಪಕ್ಷದ ವ್ಯವಸ್ಥೆಯಲ್ಲಿ ಬಂದಿರುವವನು. ಬಿ.ಎಸ್.ಯಡಿಯೂರಪ್ಪ ಮತ್ತು ಅನಂತಕುಮಾರ್‌ ಅವರಿಂದಾಗಿ ಎರಡು ಅವಧಿಯಲ್ಲಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷನಾಗಿದ್ದೆ. ಅದನ್ನು ನಾನು ಮರೆಯಲ್ಲ. ಪಕ್ಷ ನನ್ನ ತಾಯಿ ಸಮಾನ” ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿರಿ: ಅನಂತಕುಮಾರ್‌ ನೆಟ್ಟ ಗಿಡ ಉಳಿಸಬೇಕಿದೆ: ರಾಜಕೀಯ ಅರ್ಥ ಧ್ವನಿಸಿತೇ ತೇಜಸ್ವಿನಿ ಟ್ವೀಟ್?

ನೋವುಗಳನ್ನು ಅನುಭವಿಸಿದ್ದೇನೆ. ಮಂತ್ರಿ ಸ್ಥಾನ ಸಿಗದಿದ್ದಾಗ ಅನೇಕ ಕಡೆ ಬೆಂಕಿ ಹಚ್ಚಿದವರಿದ್ದಾರೆ. ನನ್ನ ಕ್ಷೇತ್ರದ ಜನ ಯಾವತ್ತೂ ಜಗಳ ಮಾಡಲಿಲ್ಲ. ಈ ಬಾರಿ ಕೂಡ ಮಂತ್ರಿ ಸ್ಥಾನ ಕೊಡಲಿಲ್ಲ. ಹೊರಗಿನವರಿಗೆ ಕೊಟ್ಟರು. ನಾನು ಆಗಲೂ ಮಾತನಾಡಲಿಲ್ಲ. ನೀವು ತಾಳ್ಮೆಯಿಂದ ಇದ್ದೀರಿ. ಐದು ವರ್ಷಗಳಿಂದ ಮಂತ್ರಿ ಸ್ಥಾನವನ್ನು ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹನ್ನೊಂದು ಶಾಸಕರು ಈ ಭಾಗದಲ್ಲಿ ಬಂದು ಹೋಗಿದ್ದಾರೆ. ಉಳಿದವನು ನಾನೊಬ್ಬ ಮಾತ್ರ. ಈ ಮೂವತ್ತು ವರ್ಷಗಳ ಕಾಲ ಎಲ್ಲ ನೋವುಗಳನ್ನು ಸಹಿಸಿಕೊಂಡು ಸ್ವಯಂ ಸೇವಕನಾಗಿ ಜೀವನ ನಡೆಸುತ್ತಾ ಬಂದಿರುವೆ. ರಾಜಕಾರಣದಲ್ಲಿ ಆಪಾದನೆಗಳು ಬರುತ್ತವೆ. ನೋವಾಗುತ್ತವೆ. ಆದರೆ ಮಹಾಭಾರತ ನೆನಪಾಗುತ್ತದೆ. ಕೃಷ್ಣನನ್ನೇ ಕಳ್ಳ ಎಂದರು, ನೀನ್ಯಾವ ಮಹಾ ಎನಿಸುತ್ತದೆ ಎಂದು ಮೆಲುಕು ಹಾಕಿದ್ದಾರೆ.

“ನನ್ನ ಜೀವನ ಇರುವವರೆಗೂ ಕಾರ್ಯಕರ್ತರ ಮನೆಯಾಳು. ಅವರ ಯೋಗಕ್ಷೇಮಕ್ಕಾಗಿ ಇರುತ್ತೇನೆ. ಆಗಿಬೇಕಾಗಿರುವ ಕೆಲಸಗಳು ಮುಂದೆ ಪೂರ್ಣವಾಗುತ್ತವೆಯೋ ಇಲ್ಲವೋ ಇಲ್ಲವೋ ಎಂಬ ಆತಂಕವಿದೆ” ಎಂದೂ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...