Homeದಲಿತ್ ಫೈಲ್ಸ್ಗರ್ಭಿಣಿ ಸೇರಿ 14 ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ಗರ್ಭಿಣಿ ಸೇರಿ 14 ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

- Advertisement -
- Advertisement -

ಮಹಿಳೆಯರೂ ಸೇರಿದಂತೆ ಸುಮಾರು 14 ಮಂದಿ ದಲಿತ ಕಾರ್ಮಿಕರನ್ನು ಕೂಡಿ ಹಾಕಿ ದೌರ್ಜನ್ಯ ಎಸಗಿರುವ ಸವರ್ಣೀಯ ಜಾತಿಯ ಎಸ್ಟೇಟ್ ಮಾಲೀಕ ಜಗದೀಶ್ ಗೌಡ ಹಾಗೂ ಆತನ ಮಗ ತಿಲಕ್‌ಗೌಡನನ್ನು ಬಂಧಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು, ಬಾಳೆಹೊನ್ನೂರು ಮತ್ತು ಆಲ್ದೂರಿನಲ್ಲಿ ಇಂದು ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ.

ಬಾಳೆಹೊನ್ನೂರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಬಳಿಯಿಂದ ನೀಲಿ ಬಾವುಟ ಹಿಡಿದು ಮೆರವಣಿಗೆ ಹೊರಟ ಪ್ರತಿಭಟನಾಕಾರರು ತಿಲಕ್‌ಗೌಡ ಮತ್ತು ಜಗದೀಶ್‌ಗೌಡ ವಿರುದ್ಧ ಘೋಷಣೆ ಕೂಗಿದ್ದಾರೆ.

ಮಾಗುಂಡಿ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಬಿರುಸಾದ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಿ ತಪ್ಪಿತಸ್ಥರನ್ನು ಬಂಧಿಸುವ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸಂಘಟನೆಗಳ ಮುಖಂಡರು ಪಟ್ಟು ಹಿಡಿದರು.

ಪ್ರತಿಭಟನೆಯ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ಮಹಿಳೆ ರೂಪಾ, ತಮಗಾಗಿರುವ ದೌರ್ಜನ್ಯವನ್ನು ವಿವರಿಸಿದರು.

“ನಾವು ಹುಣಸೇಹಳ್ಳಿಪುರ ಎಸ್ಟೇಟ್‌ಗೆ ಕೆಲಸಕ್ಕೆ ಹೋಗಿ ಮೂರೂವರೆ ತಿಂಗಳಾಗಿತ್ತು. ಸಣ್ಣ ಕಾರಣಕ್ಕೆ ಮಾಲೀಕರ ಜತೆಗೆ ಜಗಳ ಆಯಿತು. ಆಗ ಎಸ್ಟೇಟ್ ಮಾಲೀಕರು ನಮ್ಮ ಮನೆಯವರಿಗೆ ಕೋಲಿನಿಂದ ಹೊಡೆದರು. ಆಮೇಲೆ ನಾವು ಇಲ್ಲಿ ಇರೋದಿಲ್ಲ, ಬೇರೆ ಎಸ್ಟೇಟ್‌ಗೆ ಹೋಗುತ್ತೇವೆ ಎಂದು ಮೈದುನ, ತಮ್ಮ, ತಂಗಿ ಮಗ, ನನ್ನ ಗಂಡ ಬೇರೆ ಎಸ್ಟೇಟ್‌ಗಳಲ್ಲಿ ಕೆಲಸ ಹುಡುಕಲು ಹೋದರು. ನಾಲ್ಕು ದಿನ ಕೆಲಸ ಹುಡುಕುವುದೇ ಆಯಿತು. ಆದರೂ ಕೆಲಸ ಸಿಗಲಿಲ್ಲ…”

“ಬಳಿಕ ಸೆ. 7 ರಂದು ಜಗದೀಶ್ ಗೌಡ ಕರೆ ಮಾಡಿದರು. ಸೆ. 8ರಂದು ಜಗದೀಶ್ ಗೌಡ ಮತ್ತು ತಿಲಕ್ ಗೌಡ ನಮ್ಮ ಲೈನ್ ಮನೆ ಬಳಿ ಬಂದು ನಿನ್ನ ತಮ್ಮ ಅವರೆಲ್ಲ ಎಲ್ಲಿಗೆ ಹೋಗಿದ್ದಾರೆ ಎಂದು ಕೇಳಿದರು. ಜಗದೀಶ್‌ ಗೌಡ ಕರೆ ಮಾಡಲು ಹೇಳಿದರು. ಆದರೆ, ಅವರು ಸ್ವೀಕರಿಸಲಿಲ್ಲ. ಆಗ ನಮ್ಮ ಮೊಬೈಲ್ ಕಿತ್ತುಕೊಳ್ಳಲು ಬಂದರು. ನನ್ನ ತಮ್ಮನ ಹೆಂಡತಿ ಗರ್ಭಿಣಿ, ಅವಳು ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುತ್ತಿದ್ದರಿಂದ ಮೊಬೈಲ್ ಕಿತ್ತುಕೊಳ್ಳಲು ಬಂದು ಕಪಾಳಕ್ಕೆ ಹೊಡೆದರು. ಬಳಿಕ ತಿಲಕ್ ಗೌಡ ಮತ್ತು ಜಗದೀಶ್ ಗೌಡ ನಮ್ಮನ್ನ ಹೊಡೆದರು. ನೀವು ಅನ್ನ ನೀರು ಇಲ್ಲದೆ ಅಲ್ಲೇ ಸಾಯಬೇಕು. ನಾನು ನಿಮ್ಮುನ್ನು ಬಂದೂಕಿನಿಂದ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದರು” ಎಂದು ತಮಗಾದ ನೋವನ್ನು ತೆರೆದಿಟ್ಟಿದರು.

ಇದನ್ನೂ ಓದಿರಿ: ವಿಶ್ಲೇಷಣೆ: ದಲಿತ ಮತಗಳೇ ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ; ಒಡೆದು ಆಳುವ ತಂತ್ರವೇ ಪ್ರಧಾನ

“ಹೊಟ್ಟೆಗೆ ಪೆಟ್ಟು ಬಿದ್ದಿದ್ದರಿಂದ ಗರ್ಭಿಣಿಯಾಗಿದ್ದ ತಮ್ಮನ ಹೆಂಡತಿಗೆ ಹೊಟ್ಟೆ ನೋವು ಶುರುವಾಯ್ತು. ಆಕೆಯನ್ನು ಒಳಗೆ ಕರೆದೊಯ್ದು ಮಲಗಿಸುವಾಗ ನಮ್ಮನ್ನು ಒಳಗೆ ಕೂಡಿ ಬಾಗಿಲು ಹಾಕಿದರು. ಎಷ್ಟೇ ಕೇಳಿಕೊಂಡರೂ ಬಿಡಲಿಲ್ಲ. ನಂತರ ನಮ್ಮ ಸಂಬಂಧಿಕರು ಬಂದು ಬೀಗ ಒಡೆದು ಬಾಗಿಲು ತೆಗೆದರು” ಎಂದು ತಿಳಿಸಿದರು.

“ನಾವು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ನಿಮ್ಮ ಮೇಲೆ ಚೀಟಿಂಗ್ ಕೇಸ್ ಹಾಕಿದ್ದಾರೆ ಏನು ಮಾಡುತ್ತೀರ? ಎಂದು ಎಸ್ಐ ನಿತ್ಯಾನಂದ ಕೇಳಿದರು. ಬಳಿಕ ತಮ್ಮನ ಹೆಂಡತಿಯ ಆಸ್ಪತ್ರೆ ಖರ್ಚು ವೆಚ್ಚ ತಿಲಕ್‌ಗೌಡ ಅವರೆ ನೋಡಿಕೊಳ್ಳುತ್ತಾರೆ. ದೂರು ಕೊಡುವುದು ಬೇಡ ಎಂದು ಸಂಧಾನ ಮಾಡಲು ಮುಂದಾದರು. ನಂತರ ತಿಲಕ್ ಗೌಡ, ಜೀಪ್‌ನಲ್ಲಿ ತಮ್ಮನ ಹೆಂಡತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಹೊಟ್ಟೆಗೆ ಪೆಟ್ಟು ಬಿದ್ದಿದ್ದರಿಂದ ಹೊಟ್ಟೆಯಲ್ಲಿ ಮಗು ಮೃತಪಟ್ಟಿತ್ತು” ಎಂದು ನೋವು ತೋಡಿಕೊಂಡರು.

ಇದನ್ನೂ ಓದಿರಿ: ‘ವೇದಗಣಿತ’ ಯೋಜನೆ ಹಿಂಪಡೆದ ಸರ್ಕಾರ; ದಲಿತರ ಹೋರಾಟಕ್ಕೆ ಗೆಲುವು

ದಲಿತ ಸಂಘರ್ಷ ಸಮಿತಿ ಚಿಕ್ಕಮಗಳೂರು ಜಿಲ್ಲಾ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಮಾತನಾಡಿ, “ನಾವು ಮಳೆಯನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿದ್ದೇವೆ. ಎಸ್ಪಿ ಬರುತ್ತಾರೆ ಎಂದು ಬೆಳಿಗ್ಗೆಯಿಂದ ಸುಳ್ಳು ಆಶ್ವಾಸನೆ ನೀಡಿದರು. ಆದರೆ ಯಾರೂ ಬರಲಿಲ್ಲ. ಎರಡು ದಿನದಲ್ಲಿ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ. ಎರಡು ದಿನದಲ್ಲಿ ಬಂಧಿಸದಿದ್ದರೆ ಇನ್ನೂ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಭೀಮ್ ಆರ್ಮಿ ತಾಲೂಕು ಘಟಕದ ಅಧ್ಯಕ್ಷ ನಾಗರಾಜ್, “ದಲಿತ ಕೂಲಿ ಕಾರ್ಮಿಕ ಮಹಿಳೆಯರನ್ನು ಗೃಹಬಂಧನದಲ್ಲಿರಿಸಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಎಸ್ಟೇಟ್ ಮಾಲೀಕರಾದ ಜಗದೀಶ್ ಗೌಡ ಮತ್ತು ತಿಲಕ್‌ಗೌಡ ವಿರುದ್ಧ ಎಸ್ಸಿ ಎಸ್ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾದರೂ ಪೊಲೀಸರು ಇನ್ನೂ ಅವರನ್ನು ಬಂಧಿಸಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಯಾರೇ ಆಗಲಿ ದ್ವೇಷ ಸರಿಯಲ್ಲ… ಪ್ರೀತಿಯಿಂದ ಎಲ್ಲವೂ ಸಾದ್ಯ…. ದೌರ್ಜನ್ಯ ಮಾಡೋದು ದೊಡ್ಡ ತಪ್ಪು.

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...