ಪ್ರವಾಸ ಹೋದಾಗ ನೋಡುವ ಸ್ಥಳಕ್ಕಿಂತ ಹೆಚ್ಚಾಗಿ ಅವನ್ನು ತೋರಿಸುವ ಗೈಡುಗಳನ್ನು ಗಮನಿಸುತ್ತೇನೆ. ಅವರ ನಾಟಕೀಯತೆ, ವಿನೋದ ಪ್ರಜ್ಞೆ, ಇತಿಹಾಸದ ತಿಳಿವಳಿಕೆ, ಜೀವನದೃಷ್ಟಿ ನನ್ನಲ್ಲಿ ಕುತೂಹಲ ಹುಟ್ಟಿಸುತ್ತವೆ. ಪ್ರತಿದಿನ ಅವೇ ಸ್ಮಾರಕಗಳನ್ನು ತೋರಿಸುತ್ತ, ಅವೇ ಮಾತುಗಳನ್ನು ಆಡಬೇಕಾದ ಒತ್ತಡದಲ್ಲಿ ಅವರು ಸಹಜವಾಗಿಯೇ ಯಾಂತ್ರಿಕರಾಗಿರುತ್ತಾರೆ. ಇದು ಪ್ರತಿವರ್ಷ ಹೊಸಬರಾಗಿ ಬರುವ ವಿದ್ಯಾರ್ಥಿಗಳಿಗೆ ಹಳೇ ಪಾಠ ಒಪ್ಪಿಸುವ ಮೇಷ್ಟರ ಜಡತೆಯ ಹಾಗೆ. ಆದರೆ ಏಳೆಂಟು ದಿನ ಅವರು ಜತೆಯಿದ್ದರೆ, ಅವರ ವ್ಯಕ್ತಿತ್ವದ ಇನ್ನೊಂದು ಮಗ್ಗಲು ನಮಗೆ ದರ್ಶನವಾಗುತ್ತದೆ. ಆಗ ಅವರು ಕೊಡುವ ಚರಿತ್ರೆಯ ವಿವರಗಳ ಜತೆ ಅವರ ಆತ್ಮಚರಿತ್ರೆಯ ಎಳೆಗಳೂ ಸೇರಿಕೊಳ್ಳುತ್ತವೆ. ಊರಿಗಿಂತ ಊರದಿಕ್ಕನ್ನು ತೋರುವ ಹ್ಯಾಂಡ್‍ಪೋಸ್ಟು ಹೆಚ್ಚು ಸ್ವಾರಸ್ಯಕರವಾಗುತ್ತದೆ. ಕಂಡ ಸ್ಥಳ ಮರೆವಿಗೆ ಸಂದು, ಕಾಣಿಸಿದ ಗೈಡುಗಳು ನಮ್ಮ ಸ್ಮರಣೆಯಲ್ಲಿ ಉಳಿದುಬಿಡುತ್ತಾರೆ.

ನಮ್ಮ ಟರ್ಕಿ ಪ್ರವಾಸದಲ್ಲಿ ಗೈಡಾಗಿದ್ದ ಜೋಶ್ ಇಂಥವನು. ಆತ ಗ್ರೀಕ್ ರಂಗಭೂಮಿಯಿಂದ ತಪ್ಪಿಸಿಕೊಂಡು ಬಂದ ನಾಯಕ ನಟನಂತಿದ್ದನು. ಎತ್ತರದ ಆಳ್ತನ, ಬೊಜ್ಜಿಲ್ಲದ ತೆಳುಬಸಿರು, ದೃಢಕಾಯ, ನೀಳಮೂಗು, ಬಿಸಿಲಲ್ಲಿ ತಿರುಗಿ ಕೆಂಚಗಾದ ಬಣ್ಣ, ಕುರುಚಲು ಗಡ್ಡಗಳಿಂದ ಆತ ಶೋಭಿತನಾಗಿದ್ದನು. ಪ್ರಾಯ 35 ಇದ್ದೀತು. ಪ್ರವಾಸಿಗರನ್ನು ನಗಿಸಲು ಕೆಟ್ಟ ಅಭಿರುಚಿಯ ಜೋಕುಗಳನ್ನು ಸಿಡಿಸುವ ಕಿಲಾಡಿ ರಂಗೀಲಾಲ ಮಾರ್ಗದರ್ಶಿಗಳಿಗೆ ಹೋಲಿಸಿದರೆ, ಜೋಶ್ ಗಂಭೀರ ವ್ಯಕ್ತಿತ್ವದವನು. ಅವನ ಪ್ರತಿಭೆ- ಸೂಕ್ಷ್ಮತೆಗಳು, ಸಾಮಾನ್ಯ ಮಾಹಿತಿ ಹೇಳುವಾಗ ಹೊಮ್ಮುತ್ತಿರಲಿಲ್ಲ. ನಮ್ಮ ಅಡ್ಡಪ್ರಶ್ನೆಗಳಿಗೆ ಆಲೋಚಿಸಿ ಉತ್ತರಿಸುವಾಗ ಪ್ರಕಟವಾಗುತ್ತಿದ್ದವು. ಅವನು ಯಾವಾಗಲೂ `ನನ್ನ ಅಭಿಪ್ರಾಯದಲ್ಲಿ’ ಎಂದೇ ವಾಕ್ಯ ಶುರು ಮಾಡುತ್ತಿದ್ದನು-ಈ ವಿಷಯದ ಬಗ್ಗೆ ಇನ್ನೊಂದು ದೃಷ್ಟಿಕೋನವೂ ಇದೆಯೆಂಬ ಗ್ರಹಿಕೆಯಲ್ಲಿ. ಗೊತ್ತಿದಷ್ಟನ್ನು ಮಾತ್ರ ಹೇಳುತ್ತಿದ್ದನು. ಸರ್ವಜ್ಞತ್ವ ತೋರಿಸುತ್ತಿರಲಿಲ್ಲ. ಕ್ಷುದ್ರಪ್ರಶ್ನೆ ಕೇಳಿದರೆ ಮೌನವಾಗಿದ್ದೊ ನಕ್ಕೊ ತಳ್ಳಿಹಾಕುತ್ತಿದ್ದನು.

`ಜೋಶ್’ ಎಂದರೆ ಫಾರಸಿಯಲ್ಲಿ ಭಾವಾವೇಶ ಎಂದು. ಇದಕ್ಕೆ ತಕ್ಕಂತೆ ಆತ ಕುದಿವ ಕಡಲಾಗಿದ್ದನು. ಆದರೆ ಅವನಲ್ಲಿ ಚಿಂತನಶೀಲ ಗುಣವಿತ್ತು. ಸೂಫಿ ಗುರುವಿನಿಂದ ದೀಕ್ಷೆ ತೆಗೆದುಕೊಂಡಿದ್ದ ಆತ `ನಾನು ಸಾಂಪ್ರದಾಯಿಕ ಮುಸ್ಲಿಂ ಅಲ್ಲ. ನನ್ನ ಆಚರಣೆಯ ಮೂಲಕ ಧರ್ಮ ಸಾಬೀತುಪಡಿಸಲಾರೆ’ ಎಂದನು. ಸೂಫಿಗಳ ವಿಷಯ ಬಂದಾಗಲೆಲ್ಲ ತನ್ಮಯತೆಯಿಂದ ವಿವರಿಸುತ್ತಿದ್ದನು. ಅದರಲ್ಲಿ ಅವನು ಹೇಳಿದ ಬುರ್ಸಾದ ಗುಪ್ತಸಾಧಕನ ಕತೆಯೂ ನನಗೆ ನೆನಪಿದೆ. ಬುರ್ಸಾ, ಟರ್ಕಿಯ ಪ್ರಾಚೀನ ಶಹರಗಳಲ್ಲಿ ಒಂದು. ಅಲ್ಲೊಬ್ಬ ದೊಡ್ಡ ಅನುಭಾವಿಯಿದ್ದ. ಅವನ ಕೆಲಸ ಬೇಕರಿಯಲ್ಲಿ ರೊಟ್ಟಿ ಬೇಯಿಸುವುದು. ತನ್ನ ಸಾಧನೆಯನ್ನು ಗುಪ್ತವಾಗಿಡಬೇಕೆಂದು ಎಷ್ಟು ಯತ್ನಿಸಿದರೂ, ಸುದ್ದಿ ನಿಧಾನವಾಗಿ ಹಬ್ಬತೊಡಗುತ್ತದೆ. ಜನ ಬಂದು ಅವನನ್ನು ಗೌರವಿಸತೊಡಗುತ್ತಾರೆ. ತಮ್ಮೂರಿಗೆ ಆಹ್ವಾನಿಸತೊಡಗುತ್ತಾರೆ. ಜನಪ್ರಿಯತೆಯಿಂದ ತಪ್ಪಿಸಿಕೊಳ್ಳಲು ಆತ ಒಂದು ಉಪಾಯ ಹೂಡುತ್ತಾನೆ. ಅದೊಂದು ರಂಜಾನ್. ಜನ ಉಪವಾಸ ಮಾಡುವ ಮಾಸ. ಆಗ ಈತ ಬ್ರೆಡ್ಡನ್ನು ತಿನ್ನುತ್ತ ಆಹ್ವಾನಿಸಿದವರ ಊರಿಗೆ ಹೋಗುತ್ತಾನೆ. ಜನರಿಗೆ ಇವನು ಧಾರ್ಮಿಕನಲ್ಲ ಎಂದು ಆಸಕ್ತಿ ಕಡಿಮೆಯಾಗುತ್ತದೆ. ಸಂತ ನಿರಾಳನಾಗುತ್ತಾನೆ.

ಜೋಶ್, ನಾವು ಐತಿಹಾಸಿಕ ಸ್ಮಾರಕ ನೋಡಲು ಒಳಗೆಹೋದಾಗ ಹೊರಗೆ ಕಟ್ಟೆಯ ಮೇಲೆ ಸುಮ್ಮನೆ ಕೂತಿರುತ್ತಿದ್ದನು. ಅವನ ಖಿನ್ನತೆ ನಿರಿಗೆಗಟ್ಟಿದ ಅವನ ಹಣೆಯಲ್ಲೂ ಮಂಕಾದ ಕಣ್ಣಲ್ಲೂ ಗೋಚರಿಸುತ್ತಿತ್ತು. ನನಗೆ ಗಾಢಮೌನದ ರಹಸ್ಯ ಬೇಧಿಸಬೇಕೆಂದು ತವಕವಾಯಿತು. ಅದೊಂದು ದಿನ ನಾವು ಇಸ್ತಾನಬುಲ್‍ದಿಂದ ದೂರವಿರುವ ಕೋನ್ಯಾ ನಗರದಲ್ಲಿದ್ದೆವು. ಅದು ಪ್ರೇಮದ ಮಹತ್ವವನ್ನು ತನ್ನ ದಾರ್ಶನಿಕ ಕಾವ್ಯದಲ್ಲಿ ತುಂಬಿಕೊಟ್ಟ ರೂಮಿಯವರ ದರ್ಗಾಯಿರುವ ಊರು. ನಾನು ಬಹುಕಾಲದಿಂದ ನೋಡಲು ತವಿಸುತ್ತಿದ್ದ ತಾಣ. ಚಳಿ ಬೆರೆತ ಎಳೆಬಿಸಿಲು ಹಿತವಾಗಿ ಚುಚ್ಚುತ್ತ ಮೈಮನ ಆವರಿಸಿಕೊಳ್ಳುತ್ತಿತ್ತು. ದರ್ಗಾದ ಎದುರಿನ ವಿಶಾಲ ಅಂಗಣದಲ್ಲಿ ದೀಪದ ಕಂಬಗಳಿದ್ದವು. ಅವುಗಳ ಸೊಂಟಕ್ಕೆ ಕಟ್ಟಿದ್ದ ಕುಂಡಗಳಲ್ಲಿ ಚಳಿಗಾಲಕ್ಕೆ ಅರಳುವ ಪುಟ್ಟ ಹೂಗಳಿದ್ದವು. ನಡುನಡುವೆ ಜನರು ವಿಶ್ರಾಂತಿಗೆ ಅಥವಾ ಬಿಸಿಲುಕಾಯಿಸುತ್ತ ಕೂರಲು ಹಾಸುಗಲ್ಲುಗಳಿದ್ದವು. ನಮ್ಮ ಗುಂಪು ಸಂಜೆ ವಿಮಾನದತನಕ ಧಂಡಿಯಾಗಿ ಬಿದ್ದಿದ್ದ ಸಮಯವನ್ನು ಕಳೆಯಲು ಮಾರುಕಟ್ಟೆಗೆ ಹೋಗಿತ್ತು. ನಾನು ಮಕರಂದ ಕುಡಿದರೂ ಹೂಗಿಡದ ಸುತ್ತ ಭ್ರಮಿಸುವ ಭ್ರಮರದಂತೆ, ದರ್ಗಾದ ಆವರಣದಲ್ಲಿಯೇ ಅಲೆಯುತ್ತಿದ್ದೆ. ನನಗೆ ಸೂಫಿ ಗುರುವಿನ ಭೇಟಿ ಮಾಡಿಸಲು ಜೋಶ್ ಮಾತುಕೊಟ್ಟಿದ್ದನು. ಅವನಿಗಾಗಿ ಹುಡುಕತಲಿದ್ದೆ.

ಅವನು ದರ್ಗಾದ ಎದುರಿನ ಪ್ರಾಂಗಣದಲ್ಲಿರುವ ಒಂದು ಕಟ್ಟೆಯ ಮೇಲೆ ಎಲ್ಲೊ ಕಣ್ಣುನೆಟ್ಟು ಕೂತಿದ್ದನು. ಜೋಶ್ ಎಂದು ಕರೆದು ಪಕ್ಕ ಹೋಗಿ ಕುಳಿತೆ. ನೀನೊಬ್ಬ ಅಂತರ್ಮುಖಿ ಎಂದೆ. ಅವನು ನನ್ನತ್ತ ಆಪ್ತವಾಗಿ ನೋಡುತ್ತ `ನಾನು ಅಂತರ್ಮುಖಿಯಲ್ಲ. ಧ್ಯಾನವನ್ನೂ ಮಾಡುತ್ತಿಲ್ಲ. ವೈಯಕ್ತಿಕವಾದ ಒಂದು ಕಷ್ಟದಲ್ಲಿ ಹಾಯುತ್ತಿದ್ದೇನೆ’ ಎಂದನು. ಎದೆಯ ಸಂದೂಕ ತುಸುವೇ ತೆರೆಯಿತು. ತನ್ನ ಭಗ್ನಪ್ರೇಮದ ಕತೆಯನ್ನು ಶುರು ಮಾಡಿದನು. “ನೋಡಿ, ಇಸ್ತಾನ್‍ಬುಲ್‍ನಲ್ಲಿ ನನ್ನನ್ನು ಇಷ್ಟಪಡುವ ಹಲವಾರು ಹುಡುಗಿಯರು ಇದ್ದಾರೆ. ನನಗೆ ಆಸಕ್ತಿಯಿಲ್ಲ. ನನ್ನ ಮನೋಭಾವಕ್ಕೆ ಸರಿಹೊಂದುವ ಜೀವನ ಸಂಗಾತಿ ಬೇಕು ಎಂದು ಹುಡುಕುತ್ತಿದ್ದೆ. ಒಬ್ಬ ಹುಡುಗಿಯ ಗೆಳೆತನವಾಯಿತು. ಆಕೆ ಸುಂದರಿ. ಜಾಣೆ. ನನ್ನ ಕಂಡರೆ ಜೀವಬಿಡುತ್ತಿದ್ದಳು. ಆದರೆ ಅವಳು ಮಹಾ ಪೊಸೆಸಿವ್. ಅವಳ ಮುಷ್ಟಿಯಲ್ಲೇ ನಾನು ಇರಬೇಕೆಂದು ಬಯಸುವವಳು. ಹೀಗೆ ಕಟ್ಟಿಹಾಕುವ ಹೆಣ್ಣಿನ ಜತೆ ಜೀವನವಿಡೀ ಇರಲಾರೆ; ಮದುವೆಯಾಗಿ ಆಕೆಗೆ ನೆಮ್ಮದಿ ಸುಖ ಕೊಡಲಾರೆ ಅನಿಸಿತು. ಒಂದು ದಿನ ಇದೇ ಕಟ್ಟೆಯ ಮೇಲೆ ಕೂತು ಆಕೆಗೆ ನನ್ನನ್ನು ಮರೆತುಬಿಡು ಎಂದೆ. ಅವಳಿಗೆ ಆಘಾತವಾಗಿರಬೇಕು. ಬಹಳ ಅತ್ತಳು. ಕೊನೆಗೆ ಕಣ್ಣೊರೆಸಿಕೊಂಡು ಹೊರಟುಹೋದಳು. ಅಂದಿನಿಂದ ಬಳಿಕ ನನ್ನ ಮನಶಾಂತಿಯೂ ಹೊರಟುಹೋಯಿತು. ನಾನು ಘೋರತಪ್ಪು ಮಾಡಿದೆ ಅನಿಸತೊಡಗಿದೆ. ಈಗ ಅವಳತ್ತ ಹೋಗಲಾರೆ. ನಾನೊಂದು ಅರ್ಧಸೇಬು. ಇನ್ನರ್ಧ ಸೇಬಿಗಾಗಿ ಕಾದಿದ್ದೇನೆ. ಸಣ್ಣ ಸಂಬಳ ನನಗೇ ಸಾಲುತ್ತಿಲ್ಲ. ನಾನು ಕುಟುಂಬವನ್ನು ಹೇಗೆ ನಿಭಾಯಿಸಲಿ ಎಂದು ಹೇಳಿ ನಿಟ್ಟುಸಿರಿಟ್ಟನು. ನನಗೆ ಯಾವುದೊ ನಾಟಕವೊಂದರ ಸನ್ನಿವೇಶ ನೋಡುತ್ತಿರುವಂತೆ ಭಾಸವಾಯಿತು. ಅವನ ದನಿ ನಾನು ಆಕೆಯ ಕಡೆಯವನೇನೊ ಎಂಬಂತೆ ಆಕ್ರೋಶಭರಿತವಾಗಿತ್ತು. ಸೂಫಿಗಳಲ್ಲಿ ಪ್ರೇಮವು ಒಂದು ತತ್ವ. ಬಹಳ ದೊಡ್ಡದನ್ನು ಪಡೆಯಲು ಪ್ರೇಮದ ವಸ್ತುವನ್ನು ಕಳೆದುಕೊಂಡು ವಿರಹದಲ್ಲಿ ಬಳಲುವುದು ಒಂದು ಅವಸ್ಥೆ. ರೂಮಿಯ `ಶಂಸ್ ಎ ತಬ್ರೀಜ್’ ಹುಟ್ಟಿದ್ದೇ ಅವನ ಗುರು ತಬ್ರೇಜನಿಂದ ಅಗಲಿದ ವಿರಹದಲ್ಲಿ.

ಜೋಶ್‍ಗೆ ಕೇಳಿದೆ: `ಬರುವ ಪ್ರವಾಸಿಗರಿಗೆಲ್ಲ ದೇಶ ತೋರಿಸುತ್ತಿ. ನಿನಗೆ ಯಾವುದಾದರೂ ದೇಶ ನೋಡಬೇಕು ಅನಿಸಿದೆಯಾ?’ ಆತ ಹೇಳಿದ: `ನನಗೆ ಕೀನ್ಯಾದಲ್ಲಿ ಜಂಗಲ್ ಸಫಾರಿ ಮಾಡುವುದು. ನೇಪಾಳಕ್ಕೆ ಬಂದು ಹಿಮಾಲಯ ಹತ್ತುವುದು. ಎರಡು ಆಸೆಯಿದೆ’. ಗಮನಿಸಿದೆ. ಅವನ ಎರಡೂ ಆಯ್ಕೆಗಳಲ್ಲಿ ಕಟ್ಟಡಗಳಿಲ್ಲ. ಜನರಿಲ್ಲ. ನಿಸರ್ಗವಿದೆ. ಯೂರೋಪಿಗೆ ಹೋಗುವುದಿಲ್ಲವೇ ಎಂದೆ. ನಮ್ಮದು ಲೆಕ್ಕದಲ್ಲಿ ಏಶಿಯಾ ಖಂಡ. ಆದರೆ ಸಂಸ್ಕøತಿಯೆಲ್ಲ ಯೂರೋಪಿನದು. ನಮ್ಮೊಳಗೆ ಯೂರೋಪು ಇರುವಾಗ ಅದು ನನಗೆ ಹೊಸತೆನಿಸುವುದಿಲ್ಲ ಎಂದನು. ಜೋಶ್ ಟರ್ಕಿಯ ರಾಜಕಾರಣಿಗಳನ್ನು ಕಟುವಾಗಿ ಟೀಕಿಸುತ್ತಿದ್ದನು. ನಾವು ಕೊಡುವ ತೆರಿಗೆ ಹಣ ದುರುಪಯೋಗ ಮಾಡಿದರೆ, ಅಂಥ ಮೂರ್ಖ ಸರ್ಕಾರವನ್ನು ಕೆಳಗಿಳಿಸುತ್ತೇವೆ ಎಂದನು. ಈಜಿಪ್ಟ್ ಟರ್ಕಿ ಮುಂತಾದ ಕಡೆ ಹೊಸತಲೆಮಾರು, ಸರ್ಕಾರವನ್ನೇ ಅಲ್ಲಾಡಿಸಿದ ಚಳವಳಿಗಳ ಗಾಳಿಯ ಬೀಸು ಇನ್ನೂ ತಗ್ಗಿರಲಿಲ್ಲ. ಆದರೆ ನೋಬಲ್ ಪ್ರಶಸ್ತಿ ಪಡೆದ ಟರ್ಕಿಯ ಲೇಖಕ ಒರಾಕ್ ಪಾಮುಕ್ ಬಗ್ಗೆ ಕೇಳಿದಾಗ, ಜೋಶ್ `ನಮ್ಮ ದೇಶವನ್ನು ಟೀಕಿಸಿದ್ದಕ್ಕಾಗಿ ಅವರಿಗೆ ಬಹುಮಾನ ಬಂದಿತು’ ಎಂದು ವ್ಯಂಗ್ಯವಾಗಿ ಹೇಳಿದನು. ಅವನ ದೇಶಭಕ್ತಿ ಮತೀಯ ರಾಷ್ಟ್ರವಾದಗಳನ್ನು ವಿಮರ್ಶಿಸುವ ಚಿಂತಕರನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿತ್ತು.

ಜೋಶ್‍ಗೆ ಹೋಲಿಸಿದರೆ, ಸ್ಲೊವೇನಿಯಾದ ನಮ್ಮ ಗೈಡು/ಚಾಲಕ ಮಾರ್ತಿನ್, ಮಹಾಸೌಮ್ಯ. ಆರೂಕಾಲಡಿ ಎತ್ತರವಿದ್ದ ಈ ತರುಣ, ನಮಗೆ ಸ್ಲೋವೇನಿಯಾದ ಕಾಡು ಸರೋವರ ಗುಹೆ ಬೆಟ್ಟಗಳನ್ನು ತೋರಿಸಿದನು. ಅವನು ಸ್ಲೊವೇನಿಯಾದ ಹಿಮಗೊಳದಂತೆ ಶಾಂತವಾಗಿದ್ದನು. ಅವಕಾಶ ಸಿಕ್ಕಾಗಲೆಲ್ಲ ಅವನು ತನ್ನ ಗರ್ಲ್‍ಫ್ರೆಂಡಿನ ಬಗ್ಗೆ ಹೇಳುತ್ತಿದ್ದನು. ನಾವು ಒಯ್ದಿದ್ದ ತಿಂಡಿಗಳನ್ನು ತಿನ್ನಲು ಕೊಟ್ಟರೆ, ಚೂರು ತಿಂದಂತೆ ಮಾಡಿ, ತನ್ನ ಗೆಳತಿಗೆ ಭಾರತೀಯ ತಿಂಡಿಗಳೆಂದರೆ ಬಹಳ ಇಷ್ಟ ಎಂದು ಜತನದಿಂದ ಇರಿಸಿಕೊಳ್ಳುತ್ತಿದ್ದನು. ಅವನು ಗ್ರಾಮೀಣ ಸ್ಲೋವೆನಿಯಾದಿಂದ ಬಂದು, ರಾಜಧಾನಿ ಲುಬ್ಲಿಯಾನದಲ್ಲಿ ಪ್ರವಾಸಿಗೈಡ್ ಆಗಿ ಕೆಲಸ ಮಾಡುತ್ತಿದ್ದನು. ಅವನ ಸಮಸ್ಯೆಯೆಂದರೆ 1. ಬಹಳ ತುಟ್ಟಿಯಾಗಿರುವ ರಾಜಧಾನಿಯಲ್ಲಿ ಸಂಸಾರ ಹೂಡಲು ತನ್ನ ದುಡಿಮೆ ಸಾಲಲಿಕ್ಕಿಲ್ಲ ಎಂದು. ಅವನ ಪ್ರಕಾರ ಸ್ವಂತ ಮನೆ ಕಟ್ಟಲು ಇಡೀ ಜೀವನ ದುಡಿಯಬೇಕು. 2. ತನ್ನ ಗ್ರಾಮೀಣ ಸ್ಲೋವಿಕ್ ಭಾಷೆಯನ್ನು ಸುಧಾರಿಸಿಕೊಳ್ಳುವುದು. ಹಿಂದೆ ಹುಡುಗ ಹುಡುಗಿಯ ಮನೆಯಲ್ಲಿ ಎಷ್ಟು ಹಂದಿ ದನ ಹೊಲ ಇದೆಯೆನ್ನುವುದರ ಆಧಾರದಲ್ಲಿ ಮದುವೆಯಾಗುವುದು ನಿರ್ಧಾರವಾಗುತ್ತಿತ್ತು. ಈಗ ಪ್ರೇಮವಿವಾಹದ ಕಾಲ. ತಂದೆತಾಯಿಗಳು ಮಕ್ಕಳ ಸ್ವಾತಂತ್ರ್ಯಕ್ಕೆ ಬಿಡುತ್ತಾರೆ. ಎಷ್ಟೇ ಕಷ್ಟವಾಗಲಿ. ಬಡತನ ಇರಲಿ. ನಮ್ಮಿಷ್ಟದ ಸಂಗಾತಿಯ ಜತೆ ಜೀವಿಸಬೇಕು ಎಂದು ಮಾರ್ಟಿನ್ ಹೇಳಿದನು.

ಇವರಿಬ್ಬರಿಗೆ ಹೋಲಿಸಿದರೆ, ಭೂತಾನದ ಮಾರ್ಗದರ್ಶಿ ಸೋನಂ ಒಬ್ಬ ಸಂತೃಪ್ತ ಗೃಹಸ್ಥ. ಅವನು ಏಳು ದಿನಗಳ ತಿರುಗಾಟಕ್ಕೆ ಬಾಡಿಗೆ ಪಡೆದ ಟ್ಯಾಕ್ಸಿಯ ಚಾಲಕ. ಸ್ಥಳೀಯನೂ ಮಿತಭಾಷಿಯೂ ಆದ ಅವನನ್ನೇ ನಾವು ಗೈಡಾಗಿ ಪರಿವರ್ತಿಸಿದೆವು. ನಾವು ಮೊದಲಿಗೇ ಸ್ಪಷ್ಟಪಡಿಸಿದೆವು: `ನಾವು ಸೈಟ್‍ಸೀಯಿಂಗಿಗೆ ಬಂದವರಲ್ಲ. ನಿಮ್ಮ ದೇಶ ಭಾಷೆ ಸಂಸ್ಕøತಿ ತಿಳಿಯಲು ಬಂದವರು. ನಡುವೆ ನಮಗೆ ಇಷ್ಟವಾದ ಕಡೆ ನಿಲ್ಲಿಸಬೇಕು. ಫೋಟೊ ತೆಗೆದುಕೊಳ್ಳುತ್ತೇವೆ. ಜನರ ಜತೆ ಮಾತಾಡುತ್ತೇವೆ. ಸಾಧ್ಯವಾದರೆ ಒಂದು ದಿನ ಒಂದು ಹಳ್ಳಿಯಲ್ಲಿ ಸೌಲಭ್ಯವಿಲ್ಲದಿದ್ದರೂ ಉಳಿಯುವ ಆಸೆಯಿದೆ. ಇಲ್ಲಿನ ಲೇಖಕರ/ ಪತ್ರಕರ್ತರ ಜತೆ ಮಾತಾಡಲು ಬಯಸುತ್ತೇವೆ’ ಎಂದು. ಭೂತಾನಿನಲ್ಲಿ ಬಹುತೇಕ ಎಲ್ಲ ಯುವಕರಿಗೂ ಇಂಗ್ಲಿಷ್ ಬರುತ್ತದೆ. ಸೋನಂ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ಅವನಿಗೆ ಇಂಗ್ಲಿಷಿರಲಿಲ್ಲ. ಹರಕು ಹಿಂದಿಯಲ್ಲಿ ಮಾತಾಡುತ್ತಿದ್ದನು. ಅವನು ಎಲ್ಲಿ ಹೋದರೂ ತನ್ನ ಹೆಂಡತಿ ಮಕ್ಕಳ ಬಗ್ಗೆ ಆಲೋಚಿಸುತ್ತಿದ್ದನು. ಅವನ ಮಡದಿ ಮಕ್ಕಳಿಗೆ ನಾವು ಕೆಲವು ಉಡುಗೊರೆ ಕಳಿಸಿದೆವು. ಒಂದು ದಿನ ಸೋನಂ ನಮ್ಮ ಮನೆಯಲ್ಲಿ ಊಟ ಸ್ವೀಕರಿಸಬೇಕು ಎಂದು ಆಹ್ವಾನಿಸಿದನು. ನಾವು ಟೈಗರ್ ನೆಸ್ಟ್ ಪರ್ವತವನ್ನು ಹತ್ತಿ ಕೆಳಗೆ ಇಳಿಯುವಾಗ, ಪರ್ವತದ ಬುಡದಲ್ಲಿ ಊಟ ತಂದು ಕಾಯುತ್ತಿರಬೇಕೆಂದು ಹೇಳಿದೆವು. ನಾವು ಇಳಿಯುವುದು ತಡವಾಯಿತು, ಅಷ್ಟರಲ್ಲಿ ಬುತ್ತಿ ಹೊತ್ತುಕೊಂಡು ಸೋನಂ ಕಾಲುಭಾಗ ಪರ್ವತವನ್ನೇ ಹತ್ತಿ ಬಂದಿದ್ದನು- ಅದೂ ಗರ್ಭಿಣಿ ಮಡದಿ ಹಾಗೂ ಐದು ವರ್ಷದ ಮಗ ತೆಂಜಿಮ್ ಕರೆದುಕೊಂಡು. ನಾವು ಒಂದು ಝರಿಯ ಬಳಿ ಕುಳಿತು ಉಂಡೆವು. ಭೂತಾನದ ಅದ್ಭುತ ಊಟ. ಸೋನಂ ನಾವು ಕೈಬಾಯಿ ಒರೆಸಿದ ಕಾಗದದ ನ್ಯಾಪ್‍ಕಿನ್‍ಗಳನ್ನು ಬಿಡದೆ ಸಂಗ್ರಹಿಸಿದನು- ಯಾವುದಾದರೂ ಕಾಡುಪ್ರಾಣಿ ಅದನ್ನು ತಿಂದು ತೊಂದರೆ ಆಗಬಾರದು ಎಂದು. ಸ್ವಚ್ಛತೆಯ ಪ್ರಜ್ಞೆ ಭೂತಾನಿಗರಿಗೆ ರಕ್ತದಲ್ಲೇ ಇದೆ.

ನಾವು ಕೊನೆಯ ದಿನ ಭಾರತಕ್ಕೆ ಹಿಂತಿರುಗುವ ದಿನ ಬೆಳಿಗ್ಗೆ ಚಹಕ್ಕೆ ಅವನ ಮನೆಗೆ ಹೋದೆವು. ಸೇಬಿನ ತೋಟದಲ್ಲೊಂದು ಪುಟ್ಟ ಬಾಡಿಗೆಮನೆ. ಟ್ಯಾಕ್ಸಿ ಚಾಲಕನೊಬ್ಬ ಹೀಗೆ ಬದುಕಬಹುದೇ ಎಂದು ಸೋಜಿಗವಾಯಿತು. ನಾವು ಹೋದಾಗ ಅವನ ಆಗಷ್ಟೆ ಬುದ್ಧನ ಪಟಕ್ಕೆ ಧೂಪ ಹಾಕಿದ್ದರು. ನಾವು ಐದು ನಿಮಿಷ ಧ್ಯಾನ ಮಾಡಿದೆವು. ಅವನೇ ಟೀಯನ್ನು ದೊಡ್ಡಪಾತ್ರೆಯಲ್ಲಿ ಮಾಡಿ ಅದನ್ನು ಒಂದು ಸೌಟಿನಿಂದ ನಮ್ಮ ಜಾಮುಗಳಿಗೆ ಬಡಿಸಿದನು. ಅವ ಸುಖೀ ಸಂಸಾರ ಕಂಡು ನನಗೆ ಆನಂದವಾಯಿತು.

ಜೋಶ್, ಒಬ್ಬ ಅಶಾಂತ ಸಂತ. ಮಾರ್ತಿನ್ ತನ್ನ ಪ್ರಿಯತಮೆಯ ಜತೆ ಸುಖಸಂಸಾರ ನಡೆಸಲು, ಹುಲ್ಲುಕಡ್ಡಿ ತಂದು ಗೂಡು ಕಟ್ಟಿಕೊಳ್ಳುತ್ತಿರುವ ಕನಸು ಕಾಣುತ್ತಿರುವ ಹಕ್ಕಿ. ಸೋನಂ, ಪುಟ್ಟ ಆದಾಯದಲ್ಲಿ ಘನತೆಯಿಂದ ಬದುಕುತ್ತಿರುವವನು. ಪ್ರವಾಸ ಹೋದ ದೇಶದಲ್ಲಿ ಇಷ್ಟವಾದುದು ಯಾವುದು ಎಂಬ ಪ್ರಶ್ನೆ ಸುಳಿದಾಗೆಲ್ಲ, ನನಗೆ ಭೇಟಿಯಾದ ಜನರೇ ನೆನಪಾಗುತ್ತಾರೆ. ಭೂತಾನದಲ್ಲಂತೂ ನನ್ನ ಹೃದಯಸ್ಪರ್ಶಿ ನೆನಪು- ಸೋನಂ ಸಂಸಾರ. ಸಂಸಾರ ತ್ಯಜಿಸಿಹೋದ ಬುದ್ಧನ ಧಮ್ಮವನ್ನು ಪಾಲಿಸುತ್ತಿರುವ ದೇಶದಲ್ಲಿ, ಬೌದ್ಧದರ್ಶನಕ್ಕೆ ಹೊಸ ವ್ಯಾಖ್ಯಾನ ಬರೆದಂತೆ ಅವನ ಸಂಸಾರವಿತ್ತು.

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

  1. ಇಲ್ಲಿ ಟರ್ಕಿಯ ಲೇಖಕ ಒಲಾಫ್ ಪಾಮೆ ಅಂತಿದೆ. ಅದು ಒರಾನ್ ಪಾಮುಕ್ ಆಗಿರಬೇಕು ಎಂದು ಅನಿಸಿಕೆ. ಪಾಮೆ ಬಹಳ ವರ್ಷಗಳ ಹಿಂದೆ ಹತ್ಯೆಯಾದ ಸ್ವೀಡಿಷ್ ಪ್ರಧಾನಿಯಲ್ಲವೆ?

LEAVE A REPLY

Please enter your comment!
Please enter your name here