Homeಮುಖಪುಟವಸಾಹತು ಕಾನೂನು ಬದಲಿಸುವ ನೆಪದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮತ್ತಷ್ಟು ಕರಾಳ ಕಾನೂನುಗಳನ್ನು ಸೇರಿಸಿದೆಯೇ?

ವಸಾಹತು ಕಾನೂನು ಬದಲಿಸುವ ನೆಪದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮತ್ತಷ್ಟು ಕರಾಳ ಕಾನೂನುಗಳನ್ನು ಸೇರಿಸಿದೆಯೇ?

- Advertisement -
- Advertisement -

ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರು ಅನೇಕ ಕಠಿಣ ಕಾನೂನುಗಳನ್ನು ಜಾರಿ ಮಾಡಿದ್ದರು. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಈಗಲೂ ಅವೇ ಕಠಿಣ ಕಾನೂನುಗಳನ್ನು ಜಾರಿಯಲ್ಲಿಟ್ಟಿರುವುದಕ್ಕೆ ಸಾಕಷ್ಟು ವಿರೋಧಗಳಿವೆ. ದೇಶದ್ರೋಹ ಕಾನೂನು ಇದಕ್ಕೆ ಜ್ವಲಂತ ಉದಾಹರಣೆ. ಆದರೆ ಕೇಂದ್ರ ಸರ್ಕಾರ ಇತ್ತೀಚೆಗೆ ಮುಂಗಾರು ಅಧಿವೇಶನದಲ್ಲಿ ಕೆಲವು ಕಾನೂನುಗಳನ್ನು ಬದಲಾಯಿಸುವ ಮಸೂದೆಯನ್ನು ಅಂಗೀಕಾರ ಮಾಡಿತು. ಇದರಲ್ಲಿ ಕೆಲವೊಂದು ಸ್ವಾಗತಾರ್ಹ ಸಂಗತಿಗಳಿದ್ದರೂ, ದೇಶದ ಜನರ ಮುಂದೆ ಇನ್ನಷ್ಟು ಕರಾಳ ಕಾನೂನುಗಳನ್ನು ಮಂಡಿಸಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬದಲಾದ ಕಾನೂನುಗಳು

1860ರ ಭಾರತೀಯ ದಂಡಸಂಹಿತೆ (IPC)- ಭಾರತೀಯ ನ್ಯಾಯ ಸಂಹಿತಾ, 2023 (Bharatiya Nyaya Sanhita, 2023)ವಾಗಿ ಬದಲಾಗಿದೆ.

1973ರ ಅಪರಾಧ ಪ್ರಕ್ರಿಯಾ ಸಂಹಿತೆ (CRPC)- ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, (Bharatiya Nagarik Suraksha Sanhita, 2023)ವಾಗಿ ಬದಲಾಗಿದೆ.

1872ರ ಭಾರತೀಯ ಸಾಕ್ಷಿ ಕಾಯಿದೆ (Indian Evidence Act)- ಭಾರತೀಯ ಸಾಕ್ಷ್ಯ ಸಂಹಿತಾ 2023 (Bharatiya Sakshya Bill, 2023) ಆಗಿ ಬದಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಸ್ತೆಗಳ, ನಗರಗಳ, ಐತಿಹಾಸಿಕ ಕಟ್ಟಡಗಳ ಮತ್ತು ಸ್ಮಾರಕಗಳ ಹೆಸರುಗಳನ್ನು ಬದಲಾಯಿಸುವುದನ್ನು ರೂಢಿ ಮಾಡಿಕೊಂಡಿದೆ. ಇದೀಗ ಈ ಕಾನೂನಗಳ ಹೆಸರು ಬದಲಾಯಿಸುವುದರಲ್ಲಿಯೂ ಮುಂದುವರೆಸಿದೆಯೇ ಎಂದು ಪ್ರಶ್ನೆ ಮೇಲ್ನೋಟಕ್ಕೆ ತೋರುತ್ತದೆ.

ಭಾರತದಲ್ಲಿನ ಪ್ರತಿಯೊಂದು ಕಾನೂನು ಪ್ರತಿ ರಾಜ್ಯದ ಆಯಾ ಅಧಿಕೃತ ಭಾಷೆಯಲ್ಲಿ ಅಧಿಕೃತ ಅನುವಾದವನ್ನು ಹೊಂದಿದೆ. ಹಾಗಾಗಿ IPC, CrPC ಮತ್ತು ಎವಿಡೆನ್ಸ್ ಆಕ್ಟ್‌ಅನ್ನು ಕೇವಲ ಹಿಂದಿಯಲ್ಲಿ ಮಾತ್ರ ಉಲ್ಲೇಖಿಸುವ ಪ್ರಯತ್ನ ಕೂಡ ಪ್ರಶ್ನಾರ್ಹವಾಗಿದೆ.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಜಸ್ಟಿಸ್ ನಾಗಮೋಹನ್ ದಾಸ್ ಅವರು, “ಬ್ರಿಟಿಷರಿಗಿಂತ ಕೆಟ್ಟದಾದ ಕಾನೂನುಗಳನ್ನು ಜಾರಿ ಮಾಡುವ ಹಿಡನ್ ಅಜೆಂಡಾ ಇದರಲ್ಲಿ ಕಾಣುತ್ತದೆ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮಾನವ ಹಕ್ಕುಗಳ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಬ್ರಿಟಿಷರು ಮನುಷ್ಯತ್ವ ವಿರೋಧಿ ನೀತಿ ಮತ್ತು ಕಾನೂನುಗಳನ್ನು ತಂದಿದ್ದರು; ನಾವುಗಳು ಅವನ್ನು ವಿರೋಧ ಮಾಡುತ್ತಿದ್ದೆವು. ಉದಾಹರಣೆಗೆ ಬ್ರಿಟಿಷರು ಡಿವೈಡ್ ಅಂಡ್ ರೂಲ್ ತಂದರು, ಅದು ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ, ಭಾಷೆ ಭಾಷೆಗಳ ಬೆಂಕಿ ಹಚ್ಚುವಂತೆ ಮಾಡಿ ದೇಶದ ಜನರು ಒಟ್ಟಾಗದಂತೆ ಮಾಡಿದ್ದರು.

“ಮತ್ತೊಂದು ಉದಾಹರಣೆ ಎಂದರೆ ಸಾರ್ವಜನಿಕವಾಗಿ ಜನರನ್ನು ಕೊಲ್ಲುವುದು, ಮರಣದಂಡನೆ ನೀಡುವುದು, ಚಿತ್ರಹಿಂಸೆ ನೀಡುವುದು; ಇಂತಹ ಶಿಕ್ಷೆಗಳ ಮೂಲಕ ಸರ್ಕಾರದ ವಿರುದ್ಧ ಧ್ವನಿ ಎತ್ತದಂತೆ ನೋಡಿಕೊಳ್ಳುವುದು. ಇಂತಹ ಶಿಕ್ಷೆಗಳನ್ನು ನೀಡುವುದನ್ನು ಬ್ರಿಟಿಷರು ಕಾನೂನನ್ನಾಗಿಸಿದರು. ದೇಶದ್ರೋಹ ಕಾನೂನು, ನ್ಯಾಯಾಂಗ ನಿಂದನೆ ಕಾನೂನು, ಕ್ರಿಮಿನಲ್ ಮಾನನಷ್ಟ ಕಾನೂನುಗಳನ್ನು ಪರಿಚಯಸಿದರು. ಈ ಮೂರನ್ನೂ ಇಂದಿಗೂ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.

“ಬ್ರಿಟಿಷರ ಕಾಲದ ಈ ಕಾಯ್ದೆಗಳು ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಬದಲಾವಣೆಯಾಗಿಲ್ಲ. ಈ ಕಾಯ್ದೆಗಳ ಸದ್ಬಳಕೆಗಿಂತ ದುರ್ಬಳಕೆ ಮಾಡಿಕೊಂಡದ್ದೇ ಹೆಚ್ಚು. ಹಾಗಾಗಿ ದೇಶದ ಜನರು ಈ ಎಲ್ಲ ಕಾನೂನುಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದ್ರೋಹದ ಕಾನೂನನ್ನು ಸರ್ಕಾರಗಳು ಬಹಳಷ್ಟು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪ್ರಭುತ್ವವನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಟೀಕೆ ಮಾಡುವ ಹಾಗಿಲ್ಲ. ಒಂದು ವೇಳೆ ಟೀಕೆ ವಿಮರ್ಶೆ ಮಾಡಿದರೆ ಬಂಧನ ಮಾಡೋದು; ವರ್ಷಾನುಗಟ್ಟಲೇ ಜೈಲಲ್ಲಿ ಇಡೋದನ್ನ ಮಾಡಲಾಗುತ್ತಿದೆ. ಇಂತಹ ಕರಾಳ ಕಾನೂನುಗಳನ್ನು ವಿರೋಧ ಪಕ್ಷದ ನಾಯಕರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಮಾನವ ಹಕ್ಕುಗಳ ಹೋರಾಟಗಾರರು, ಲೇಖಕರು, ವಕೀಲರು ಹಾಗೂ ಪತ್ರರ್ಕರ ಮೇಲೆ ಹೇರಲಾಗುತ್ತಿದೆ.

“ಇಂತಹ ಸಮಯದಲ್ಲಿ ರಾಷ್ಟ್ರೀಯ ಕಾನೂನು ಆಯೋಗ ಒಂದು ವರದಿ ನೀಡಿತು. ಅದರಲ್ಲಿ ಈ ದೇಶದ್ರೋಹ ಕಾನೂನನ್ನು ಮುಂದುವರಿಸಬೇಕು ಮತ್ತು ಶಿಕ್ಷೆಯನ್ನು ಎರಡು ಪಟ್ಟು ಹೆಚ್ಚಿಗೆ ಮಾಡಬೇಕು ಎಂದು ಹೇಳಲಾಗಿದೆ. ಆ ವರದಿಯನ್ನು ಆಧರಿಸಿ ದೇಶದ್ರೋಹ ಎನ್ನುವ ಪದವನ್ನು ಮಾತ್ರ ಕಿತ್ತುಹಾಕುತ್ತಿದ್ದಾರೆ. ಇದು ಜನರ ಕಣ್ಣೊರೆಸುವ ನಾಟಕವಾಗಿದೆ, ಆದರೆ ಅದಕ್ಕಿಂತ ಬರ್ಬರವಾದ ಕಾನೂನನ್ನು ಜಾರಿಗೆ ತರಲಾಗುತ್ತಿದೆ.

ಎಚ್.ಎನ್ ನಾಗಮೋಹನ್ ದಾಸ್

“ಇದೇ ರೀತಿಯಲ್ಲಿ ನ್ಯಾಯಾಂಗನಿಂದನೆ ಹಾಗೂ ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲೂ ಬದಲಾವಣೆ ತರಲು ಮುಂದಾಗಿದ್ದಾರೆ. ಇತ್ತೀಚಿನ ಘಟನೆಯಲ್ಲಿ ರಾಹುಲ್ ಗಾಂಧಿ ಅವರ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಯಿತು. ಕೋಲಾರದಲ್ಲಿ ಹೇಳಿಕೆ ನೀಡಿದ್ದಾರೆ. ಅದರ ವಿಚಾರಣೆ ಸೂರತ್‌ನಲ್ಲಿ ನಡೆದು ತೀರ್ಪು ಕೊಟ್ಟಿದ್ದಾರೆ. ಒಂದು ಹೇಳಿಕೆಗೆ 2 ವರ್ಷ ಜೈಲು ಕೊಡಬಹುದಾ? ಇನ್ನು, ಆ ತೀರ್ಪು ಬರೆದ ನ್ಯಾಯಾಧೀಶರ ಪೆನ್ನಿನ ಇಂಕು ಆರುವ ಮುನ್ನವೇ ಅವರನ್ನು ಲೋಕಸಭೆ ಸಭೆ ಸದಸ್ಯತ್ವವನ್ನು ರದ್ದು ಮಾಡುತ್ತಾರೆ ಎನ್ನುವುದಾದರೆ ಇವರ ಉದ್ದೇಶ ಏನಾಗಿತ್ತು ಎನ್ನುವುದು ಅಲ್ಲಿಗೆ ಸ್ಪಷ್ಟವಾಗುತ್ತದೆ. ಅವರು ಈ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಒಂದುವೇಳೆ ರಾಹುಲ್ ಗಾಂಧಿ ತಪ್ಪು ಮಾಡಿದ್ದಾರೆ ಎಂದೇ ಭಾವಿಸಿದರೂ ಕೂಡ, ಎರಡು ವಾರ ಅಥವಾ ಎರಡು ತಿಂಗಳು ಶಿಕ್ಷೆ ನೀಡಬಹುದಿತ್ತು; ಆದರೆ ಮ್ಯಾಕ್ಸಿಮಮ್ ಯಾಕೆ ನೀಡಿದ್ದು? ಇದೆಲ್ಲಾ ನೋಡಿದಾಗ ಈ ಕಾನೂನುಗಳ ದುರ್ಬಳಕೆಯಾಗುತ್ತಿದೆಯೆಂದು ಸುಲಭವಾಗಿ ಎಲ್ಲರಿಗೂ ತಿಳಿಯುತ್ತದೆ.

“ಈ ಕ್ರಿಮಿನಲ್ ಅಮೆಂಡ್‌ಮೆಂಟ್ ಲಾ ಎನ್ನುವುದನ್ನು ಬ್ರಿಟಿಷ್ ಕಾನೂನುಗಳನ್ನು ಕಿತ್ತುಹಾಕಲಿಕ್ಕೆ ಮಾಡಿರುವಂತದ್ದಲ್ಲ; ಬದಲಾಗಿ ಇನ್ನಷ್ಟು ಕಠಿಣ ಕಾನೂನು ಜಾರಿ ಮಾಡುವುದು ಇದರ ಉದ್ದೇಶವಾಗಿದೆ. ಇದು ಸರ್ಕಾರದ ಆಷಾಢಭೂತಿತನವಾಗಿದೆ. ಇದನ್ನು ನಾನು ವಿರೋಧ ಮಾಡುತ್ತೇನೆ ಏಕೆಂದರೆ ಈ ಸರ್ಕಾರ ಇದರ ಮೂಲಕ ಬ್ರಿಟಿಷರಿಗಿಂತ ಬರ್ಬರವಾದ ಕಾನೂನು ತರಲು ಹೊರಟಿದೆ. ಇದು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ” ಎಂದು ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಮಸೂದೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಖ್ಯಾತ ವಕೀಲ ಬಾಲನ್ ಅವರು, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾವಣೆ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: “ದೇಶದ್ರೋಹ” ಕಾನೂನನ್ನು ರದ್ದು ಮಾಡಿ, ಹೊಸ ಕಾನೂನಿನಡಿ 7 ವರ್ಷ ಜೈಲು-ಅಮಿತ್ ಶಾ

“ಇತ್ತೀಚೆಗೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕ್ರಿಮಿನಲ್ ಅಮೆಂಡ್‌ಮೆಂಟ್ ಲಾದಲ್ಲಿ ಕಾನೂನುಗಳಿಗೆ ಹೊಸ ಹೆಸರು ನಾಮಕರಣ ಮಾಡಿದ್ದಾರೆ. ಅವು- ಭಾರತೀಯ ನ್ಯಾಯಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಸಂಹಿತಾ… ಇದು ವೇದ ಭಾಷೆಗಳಿಂದ ಕೂಡಿದೆ. ಇದು ಮನುಭಾಷೆಯಾಗಿದ್ದು, ದೇಶದ ಭಾಷೆ ಅಲ್ಲವೇ ಅಲ್ಲ.

“ನಮ್ಮ ದೇಶದಲ್ಲಿ ಇಂಡಿಯನ್ ಪಿನಲ್ ಕೋಡ್‌ನಲ್ಲಿ 511 ಸೆಕ್ಷನ್ ಇವೆ, ಇಂಡಿಯನ್ ಎವಿಡೆನ್ಸ್ ಆಕ್ಟ್‌ನಲ್ಲಿ 167 ಸೆಕ್ಷನ್ ಇವೆ, ಸಿಆರ್‌ಪಿಸಿನಲ್ಲಿ 484 ಸೆಕ್ಷನ್ ಇವೆ. ಲಕ್ಷಾಂತರ ತೀರ್ಪುಗಳಿವೆ. ಎನ್‌ಡಿಎಗೆ ಈ ಕ್ರಿಮಿನಲ್ ಲಾ ಬೇಡ ಅದಕ್ಕೆ ಮನು ಲಾ ಬೇಕಾಗಿದೆ.

“ನಮ್ಮ ದೇಶದಲ್ಲಿ ಬಂದಿರುವ ಈ ಕಾನೂನುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿವೆ. ಕೇವಲ ಬ್ರಿಟಿಷರು ತಂದಿರುವ ಕಾನೂನು ಎಂದು ಹೇಳಿ ತಗೆದಿಲ್ಲ. ಬ್ರಿಟಿಷರು ತಂದಿರುವವು ಎಂದು ಹೇಳಿ ರೈಲು ವ್ಯವಸ್ಥೆಯ ಹಳಿಗಳನ್ನು ತೆಗೆಯಲಾಗುತ್ತಾ?” ಎಂದು ಬಾಲನ್ ಪ್ರಶ್ನೆ ಮಾಡಿದ್ದಾರೆ.

“ಈ ಸರ್ಕಾರದಲ್ಲಿ ಎಲ್ಲವೂ ರಾತ್ರೋರಾತ್ರಿ ನಿರ್ಧಾರಗಳಾಗುತ್ತಿವೆ. ಹಿಂದೆ ಪ್ರಧಾನಿ ಮೋದಿ ಅವರು ರಾತ್ರಿ 8 ಗಂಟೆಗೆ ಟಿವಿ ಮುಂದೆಬಂದು 500 ಮತ್ತು 1000 ರೂ ಮುಖಬೆಲೆ ನೋಟುಗಳು ಬ್ಯಾನ್ ಎಂದರು. ಅದರಿಂದ ಜನಸಾಮಾನ್ಯರಿಗೆ ಸಾಕಷ್ಟು ಕಷ್ಟ ಆಯ್ತು. ಅದೇರೀತಿ ಇದೀಗ ಈ ಜಾರಿಯಲ್ಲಿರುವ ಕಾನೂನುಗಳನ್ನು ನಾಶಮಾಡಲು ಹೊರಟಿದೆ.

“ಈಗ ಇರುವ ಎವಿಡೆನ್ಸ್ ಆಕ್ಟ್‌ನಲ್ಲಿ ಸೆಕ್ಷನ್ 25 ಮತ್ತು 26ರಲ್ಲಿ ಪೊಲೀಸರ ಎದುರು ಏನೇ ಹೇಳಿಕೆ ಕೊಟ್ಟರೂ ಅದಕ್ಕೆ ಬೆಲೆ ಇರುವುದಿಲ್ಲ; ಆರ್ಟಿಕಲ್ 20(3)ನಲ್ಲಿ ನನಗೆ ವಿರೋಧವಾಗಿ ನನ್ನನ್ನೇ ಸಾಕ್ಷಿ ಮಾಡುವಂತಿಲ್ಲ ಎನ್ನುವುದಾಗಿದೆ. ಆದರೆ ಈಗಿನ ಹೊಸ ಕಾನೂನು ಅದನ್ನು ನಾಶ ಮಾಡಿದೆ. ಇದರಿಂದ ಪೊಲೀಸರು ಏನು ಚಾರ್ಜ್‌ಶೀಟ್ ಸಲ್ಲಿಕೆ ಮಾಡುತ್ತಾರೋ ಅದೇ ಅಂತಿಮ ಆಗೋಗುತ್ತದೆ. ಅದರ ವಿರುದ್ಧ ಬಡವರು ಹೋರಾಟ ಮಾಡುವುದು ಕಷ್ಟವಾಗುತ್ತದೆ.

“ಪ್ರಕರಣವೊಂದರಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದರೆ ಆತನನ್ನು 24 ಗಂಟೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. 90ದಿನದಲ್ಲಿ ಆತನ ಮೇಲೆ ಚಾರ್ಜ್‌ಶೀಟ್ ಆಗಬೇಕು, ಇಲ್ಲದಿದ್ದರೆ ಆತನನ್ನು ಬೇಲ್ ಮೇಲೆ ಬಿಡುಗಡೆ ಮಾಡಬೇಕು ಎನ್ನುವುದಿದೆ. ಆದರೆ ಈಗ ತಂದಿರುವ ಹೊಸ ಕಾನೂನಿನಲ್ಲಿ 180 ದಿನ ಜೈಲಲ್ಲಿ ಇರಬೇಕು; ಬೇಲ್ ಅನ್ನೋದನ್ನ ಬಹುತೇಕ ಕಡೆಗೆ ತೆಗೆದಿದ್ದಾರೆ.

ಎಸ್. ಬಾಲನ್

“ಭಯೋತ್ಪಾದಕತೆಗೆ ಸಂಬಂಧಿಸಿದಂತೆ ಒಂದು ಕಾನೂನು ತಿದ್ದುಪಡಿ ಮಾಡಿದ್ದಾರೆ. ಒಬ್ಬ ವ್ಯಕ್ತಿ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾನೆ ಎನ್ನುವುದನ್ನು ಹೇಗೆ ಕಂಡುಹಿಡಿಯುತ್ತಾರೆ? ಒಬ್ಬ ವ್ಯಕ್ತಿ ತನ್ನ ಲ್ಯಾಪ್‌ಟಾಪ್‌ನಲ್ಲಿ ಭಯೋತ್ಪಾದಕ ಸಂಘಟನೆಯ ಒಂದು ಲೋಗೋ ಡೌನ್‌ಲೋಡ್ ಮಾಡಿದ್ದರೂ ಕೂಡ ಆತ ಟೆರೆರಿಸ್ಟ್ ಅಂತ ಇವರು ಜೀವಾವದಿ ಶಿಕ್ಷೆ ನೀಡುವ ಸಾಧ್ಯತೆ ಇದೆ.

“2018ರಲ್ಲಿ ನಿವೃತ್ತ ನ್ಯಾಯಾಧೀಶ, ಲಾ ಕಾಲೇಜು ಪ್ರಿನ್ಸಿಪಲ್ ಮತ್ತು ಬಿಜೆಪಿಯ ರಾಮ್‌ಜೆಟ್ ಮಲಾನಿ ಅವರ ಮಗ ಮಹೇಶ್‌ಜೆಟ್ ಮಲಾನಿ ಅವರ ನೇತೃತ್ವದಲ್ಲಿ ಒಂದು ಕಮಿಟಿ ರಚನೆ ಮಾಡಿದರು. ಈ ಕಮಿಟಿ ನಾಗಪುರದಿಂದ ವರದಿ ರಚನೆ ಮಾಡಿದೆ. ಅದೇ ವರದಿಯನ್ನು ಇಂದು ಕೇಂದ್ರ ಸರ್ಕಾರ ಕಾನೂನಾಗಿ ಜಾರಿ ಮಾಡಿದೆ.

“ಈ ಕಾನೂನು ತಿದ್ದುಪಡಿಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಒಬ್ಬ ವ್ಯಕ್ತಿಯ ಮೇಲೆ ಪೊಲೀಸರು ಯುಎಪಿಎ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಬಿಟ್ಟರೆ, ಆರೋಪಿತನಿಗೆ ಯಾವುದೇ ಹಕ್ಕುಗಳಿರುವುದಿಲ್ಲ. ಆತನ ಜೀವನವೇ ಅಂತ್ಯವಾಗಿಬಿಡುತ್ತದೆ. ಇಂತಹ ಪ್ರಕರಣಗಳಲ್ಲಿ ಈಗಾಗಲೇ ಸಾಕಷ್ಟು ಜನ ಜೈಲು ಸೇರಿದ್ದಾರೆ. ಅವರಲ್ಲಿ ಹೆಚ್ಚಿನವರು ದಲಿತರು, ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಸಮಾಜದವರೇ ಸೇರಿದ್ದಾರೆ. ಇದು ದೇಶವನ್ನು ಸಾವಿರಾರು ವರ್ಷ ಹಿಂದಕ್ಕೆ ತಗೆದುಕೊಂಡು ಹೋಗುವ ಕಾನೂನಾಗಿದೆ.

“ಅವರಿಗೆ ಬಹುಮತ ಇದೆ ಎನ್ನುವ ಕಾರಣಕ್ಕೆ ಅವರ ಮನಸೋಇಚ್ಛೆ ಕಾನೂನುಗಳನ್ನು ತರುತ್ತಿದ್ದಾರೆ. ಹೀಗೆ ಮುಂದುವರಿದರೆ ಮತ್ತು ಮುಂದೆ 2024ರಲ್ಲಿ ಮತ್ತೆ ಅವರೇ ಅಧಿಕಾರಕ್ಕೆ ಬಂದರೆ ಅವರು ಸಂವಿಧಾನವನ್ನೇ ಬದಲು ಮಾಡುವುದಕ್ಕೆ ಮುಂದಾಗುತ್ತಾರೆ” ಎಂದು ಬಾಲನ್ ಅವರು ಕಳವಳ ವ್ಯಕ್ತಪಡಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...