Homeಕರ್ನಾಟಕದೇಶದ ಯಾರೊಬ್ಬರನ್ನು ಹೊರಹಾಕುವುದನ್ನು ಉಸಿರಿರುವವರೆಗೂ ವಿರೋಧಿಸುತ್ತೇನೆ: ಜಲೀಲ್‌ ಮುಕ್ರಿ ಅವರಿಗೊಂದು ಪ್ರತಿಪತ್ರ...

ದೇಶದ ಯಾರೊಬ್ಬರನ್ನು ಹೊರಹಾಕುವುದನ್ನು ಉಸಿರಿರುವವರೆಗೂ ವಿರೋಧಿಸುತ್ತೇನೆ: ಜಲೀಲ್‌ ಮುಕ್ರಿ ಅವರಿಗೊಂದು ಪ್ರತಿಪತ್ರ…

- Advertisement -
- Advertisement -

(ನನ್ನ ನೆರೆಹೊರೆಯವರು ದೇಶಬಿಟ್ಟು ಹೋಗು ಎಂದರೆ ಪ್ರೀತಿಯಿಂದ ಹೋಗುವೆ, ಆದರೆ ರಾಜಕೀಯ ಪಕ್ಷಗಳು ಹೇಳಿದರೆ ಹೋರಾಡುವೆ ಎಂದು ಭಾವನಾತ್ಮಕ ಪತ್ರ ಬರೆದಿದ್ದ ಜಲೀಲ್‌ ಮುಕ್ರಿ ಅವರಿಗೊಂದು ಪ್ರತಿಪತ್ರ ಬರೆದಿದ್ದಾರೆ ಮಹಾಲಿಂಗಪ್ಪ ಆಲಬಾಳರವರು…)

ಹಿರಿಯ ಸಹೋದರ ಜಲೀಲ ಸಾಹೇಬರೇ ತಾವು ಪಕ್ಕದ್ಮನೆಯವರಿಗೆ ಬರೆದ ಭಾವನಾತ್ಮಕ ಪತ್ರ ಓದಿ ಮನಸ್ಸು ಮತ್ತು ಹೃದಯ ಎರಡೂ ಭಾರವಾದಂತಾಗಿ ಕಣ್ಣಲ್ಲಿ ನೀರಾಡಿತು.

ಹುಟ್ಟಿ ಆಡಿ ಬೆಳೆದ ನಮ್ಮ ನೆಲದಲ್ಲೇ ನಾವು ಅನಾಥ ಪ್ರಜ್ಞೆ ಅನುಭವಿಸುವುದಿದೆಯಲ್ಲ, ಅದು ಭಯಾನಕವಾದದ್ದು, ವರ್ಣಿಸಲಸಾಧ್ಯವಾದದ್ದು. ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಎಂಥ ನಿರಾಸೆ ಮತ್ತು ಆತಂಕವಾಗುತ್ತದೆ ಎಂಬುದು ಮಾನವೀಯತೆ ಇರುವ ಪ್ರತಿಯೊಬ್ಬರಿಗೂ ಅರ್ಥವಾಗುವಂತದ್ದು.
ನಿಮ್ಮ ನೋವಿಗೆ ಸದ್ಯದ ಸಂದರ್ಭ ಕಾರಣವಾಗಿರಬಹುದು.

ಆದರೇ ಜಲೀಲ ಸಾಹೇಬರೇ ಒಂದು ಮಾತು ಹೇಳಲಿಚ್ಚಿಸುತ್ತೇನೆ. ಭಾರತದ ಒಬ್ಬನೇ ಒಬ್ಬ ಮುಸಲ್ಮಾನರನ್ನೂ ದೇಶದಿಂದ ಹೊರಹಾಕುವುದನ್ನು ನಾನು ನನ್ನ ಜೀವ ಇರುವವರೆಗೂ ವಿರೋಧಿಸುತ್ತೇನೆ. ಉಸಿರು ನಿಲ್ಲುವವರೆಗೂ ನಾನು ನನ್ನ ಪಕ್ಕದ ಮನೆಯ ಮುಸಲ್ಮಾನರನ್ನು ಅವರ ಜಾಗದಿಂದ ಕದಲಿಸುವ ಪ್ರಯತ್ನದ ವಿರುದ್ಧ ಹೋರಾಡುತ್ತೇನೆ.

ಜಲೀಲ ಸಾಹೇಬರೇ ನಾನು ಈ ಬರಹವನ್ನು ನಿಮ್ಮ ಪತ್ರವನ್ನೋದಿ ಮನಕಲಕಿ ನಾನು ನಿಮ್ಮ ಬೆಂಬಲಕ್ಕಿದ್ದೇನೆ ಎಂದು ಭರವಸೆ ನೀಡಲು ಬರೆಯುತ್ತಿಲ್ಲ.
ನನ್ನ ಸ್ವಾರ್ಥಕ್ಕಾಗಿ ಬರೆಯುತ್ತಿದ್ದೇನೆ.
ನನಗೆ ಆತಂಕವಾಗುತ್ತಿರುವುದು ನನ್ನ ಬಗ್ಗೆ.

ನಾನು ಚಿಕ್ಕವನಿದ್ದಾಗ ಅಲಾಬ್ ಸಮಯದಲ್ಲಿ ತಿಂಗಳುಗಳ ಕಾಲ ಸಂಭ್ರಮದಿಂದ ಚಿನ್ನಿಕೋಲು ಕಲಿತು ಸಂಭ್ರಮಿಸಿ ಅದನ್ನು ಹಬ್ಬದಲ್ಲಿ ಆಡಿದಾಗ ನನ್ನ ತಾಯಿ ನೋಡಿ ಸಂತಸದಿಂದ ನನ್ನನ್ನು ಎದೆಗವಚಿಕೊಂಡು ಪ್ರೀತಿಸಿದ್ದನ್ನು ನಾನು ಜೀವನಪರ್ಯಂತ ಮರೆಯಲು ಸಾಧ್ಯವಿಲ್ಲ. ಆ ನೆನಪುಗಳ ಜೀವಂತಿಕೆಯನ್ನು ಉಳಿಸಿಕೊಳ್ಳಲು ಹೋರಾಡುತ್ತೇನೆ.

ನಮ್ಮೂರಿನ ದರ್ಗಾ ಜಾತ್ರೆಗೆ ಬೆಸಿಗೆ ಕಾಲದಲ್ಲಿ ಬರೀಗಾಲಲ್ಲಿ ನದಿಯಲ್ಲಿನ ಮರಳಲ್ಲಿ ಹಾದು ಹೋಗಿ ಹಚ್ಚ ಹಸುರಿನ ನಿಸರ್ಗದ ಮಡಿಲಿನಲ್ಲಿ ಜಾತ್ರೆ ಮಾಡಿ ಬೆಂಡು, ಬೆತ್ತಾಸು ತಿಂದು ಸಂಭ್ರಮಿಸಿದ ನೆನಪುಗಳನ್ನು ನಾನು ಉಳಿಸಿಕೊಳ್ಳದಿದ್ದರೆ ಆ ಕಾಲ ನನ್ನಿಂದ ಕಳೆದು ಹೋಗುತ್ತದೆ.

ನಂತರ ನಾನು ಶಿಕ್ಷಣಕ್ಕಾಗಿ, ದುಡಿಮೆಗಾಗಿ ಊರಿನಿಂದ ದೂರವಾದಾಗಲೂ ಈ ಸುಂದರ ನೆನಪುಗಳು ನನ್ನ ಬದುಕನ್ನು ಹಸಿಯಾಗಿರಿಸಿಕೊಳ್ಳಲು ನೆರವಾಗಿವೆ.

ನಂತರವೂ ಊರಿಗೆ ಹತ್ತಿರವಾದಾಗ ಪ್ರತಿ ವರ್ಷ ದರ್ಗಾ ಜಾತ್ರೆ (ನಮ್ಮೂರಲ್ಲಿ ಉರುಸು ಅಂತ ಕರೆಯದೇ ಜಾತ್ರೆ ಅಂತಲೇ ಕರೆಯುವುದು)ಗೆ ಬರಲೇಬೇಕು ಸರ್ ಅಂತ ಸ್ಪರ್ಧೆಗೆ ಬಿದ್ದವರಂತೆ ಕರೆದು, ನಮ್ಮಲ್ಲೂ ಎರಡು ತುತ್ತು ತಿನ್ನಲೇಬೇಕು ಅಂತ ಪ್ರೀತಿಯಿಂದ ಬಲವಂತ ಮಾಡಿ ಅಲ್ಲಿ ಹರಕೆಗೆ ಮಾಡಿದ ಕುರಿ ಮಾಂಸದ ರುಚಿರುಚಿಯಾದ ಅಡುಗೆಯನ್ನು ಹೊಟ್ಟೆ ಬಿರಿಯುವಷ್ಟು, ಎದೆ ಬಿರಿಯುವಷ್ಟು ಪ್ರೀತಿಯಿಂದ ತಿನ್ನಿಸಿ ಮುಂದಿನ ವರ್ಷ ಹೇಳ್ತೀನಿ, ಅಲ್ಲಿದ್ದೀನಿ, ಇಲ್ಲಿದ್ದೀನಿ ಅಂತ ನೆಪ ಹೇಳದೇ ಬರಬೇಕು ಸರ್, ಊಟ ನಿಮಗೆ ಛಲೋ ಅನಿಸ್ತೋ ಇಲ್ಲೋ ಎಂದು ಸಂಕೋಚದಿಂದ ಬಿಳ್ಕೊಡುವ ನಮ್ಮೂರಿನ ಅಕ್ಬರ್, ಇಕ್ಬಾಲ್, ರಂಜಾನ್, ಶಬ್ಬೀರ್ ಮೇಸ್ತ್ರೀ, ಇರ್ಫಾನ್, ಇನ್ನೂ ಹಲವಾರು ಜನ.

ನೀವು ಏನೇನ್ ಹಾಕ್ತೀರಿ ಎಲ್ಲ ಹಾಕಿದ್ರೂ ನಮ್ಮ ಮನೆಯಲ್ಲಿ ಬಿರಿಯಾನಿ ನಿಮ್ಮ ಮನೆ ಥರಾ ಆಗೋದೇ ಇಲ್ಲಲ್ಲೋ ಮಗನೇ ಏನ್ ಮಾಡ್ತೀರಿ ಅಂತ ಬೈದಾಗ, ಅದು ಆಗೋದಿಲ್ಲ ಬಿಡೋ…ಅಂತ ಹೇಳಿ, ಮನೆಯಲ್ಲಿ ಮಾಡಿಸಿ ಬೋಗಾಣಿಗಟ್ಟಲೇ ಬಿರಿಯಾನಿ ತಂದು ಕೊಡುವ ಗೆಳೆಯ ಉಸ್ಮಾನ್.

ಈಗ ನಮ್ಮೂರಿನ ಬಸ್ ನಿಲ್ಧಾಣದಲ್ಲಿ ಬಾಳೆ ಹಣ್ಣು ಮಾರುವ ಫಾತೀಮಾ ಅಜ್ಜಿ ನಮ್ಮ ಅಜ್ಜಿಯ ಗೆಳತಿ. ಮೊದಲು ಬೋರೆ ಹಣ್ಣು ಮಾರುತ್ತಿದ್ದಳು. ಶಾಲೆಗೆ ಹೋಗುವಾಗ ಹಣ ಇಲ್ಲದೇ ತಿನ್ನುವ ಆಸೆಯಿಂದ ನೋಡುತ್ತ ನಿಂತಾಗ ಅದೆಷ್ಟು ಸಲ ಬೊಗಸೆ ತುಂಬ ಬೋರೆ ಹಣ್ಣು ಕೊಟ್ಟು ಕಳಿಸಿಲ್ಲ?. ಈಗಲೂ ಅದೇ ದಾಟಿ. ಬಾಳೆ ಹಣ್ಣಿನ ಬೆಲೆ ಕೇಳಿದಾಗ” ಅದನ್ನೆಲ್ಲ ಏನ್ ಮಾಡ್ತಿ, ಎಷ್ಟು ಬೇಕೋ ಅಷ್ಟು ತಗೊಂಡು ಹೋಗೋ ಬಾಡ್ಯಾ” ಅಂತ ಬೈದು ಕೈಗಿಟ್ಟಷ್ಟು ಸಾಕು ಹೋಗು ಎನ್ನುವ ಆ ಹಿರಿಯ ಜೀವ.

ಗಾಡಿ ರಿಪೇರಿಗೆ ಅಂತ ಗ್ಯಾರೆಜಿಗೆ ಬಿಟ್ಟು, ಎಷ್ಟಾಯಿತು? ಅಂತ ಕೇಳಿದಾಗ, ನಾಲ್ಕು ನೂರು ಆಗಿದೆ ಎಷ್ಟಾದ್ರೂ ಕೊಡಿ ಸರ್ ಎಂದು ಕೊಟ್ಟಷ್ಟು ತೆಗೆದುಕೊಂಡು ಅದರಲ್ಲೇ ಚಹಾ ತರಿಸಿ ಕುಡಿಸಿ ನನ್ನ ವೈಯಕ್ತಿಕ ಬದುಕಿನ ಬಗ್ಗೆ ನನಗಿಂತ ಹೆಚ್ಚು ಕಾಳಜಿ ವಹಿಸುವ ನಮ್ಮೂರಿನ ಸೈಯ್ಯದ್ ಸಾಬ್.

ಬೆಳಿಗ್ಗೆ ವಾಕಿಂಗ್ ಹೋಗುವಾಗ ಇನ್ನೂ ಬೆಳಕು ಹರಿಯದಿದ್ದರೂ ಚಹಾ ಮಾಡಿ ಇಟ್ಟುಕೊಂಡು ಕರೆದು ಚಹಾ ಕುಡಿದು ಹೋಗ್ರೀ ಸರ್ ಅಂತ ಪ್ರೀತಿಯ ಬಲವಂತದಿಂದ ಚಹಾ ಕುಡಿಸಿ ಕಳಿಸುವ ನಜೀರ್.

“ಏಯ್ ಸರ್ ಕೋ ಅಚ್ಛಾ ಕರೋ” ಅಂತ ಅಡುಗೆ ಮಾಡುವವನಿಗೆ ಕೂಗಿ ಹೇಳಿ, ನೀವು ಇಲ್ಲಿ ಬನ್ನಿ ಸರ್ ಅಂತ ಜಾಗವನ್ನು ಎರಡೆರಡು ಬಾರಿ ಸ್ವಚ್ಚಗೊಳಿಸಿ ಊಟ ಬಡಿಸಿ, ಮತ್ತೇನ್ ಬೇಕು ಸರ್ ಅನ್ನುತ್ತ ಓಡಾಡುವ ನಿಯಾಜ್ ದಾಬಾದ ಸಲೀಂ.

“ಮೀನು ಸರಿ ಇಲ್ಲ. ಇಲ್ಲಿ ಊಟ ಬೇಡ ಸರ್. ಅಂತ ಪ್ರಾಮಾಣಿಕ ಕಾಳಜಿ ಮಾಡುವ, ಮೀನು ಚನ್ನಾಗಿದೆ ಸಕ್ಕತ್ತಾಗಿ ಮಾಡಿಕೊಡ್ತೀನಿ ನೀವು ಊಟ ಮಾಡ್ಕೊಂಡೇ ಹೋಗಿ ಸರ್. ಅನ್ನುತ್ತ ಎಂದೂ ಬಿಲ್ ಬಗ್ಗೆ ಯೋಚನೆನೇ ಮಾಡದ ರಸೂಲ್ ದಾದಾ.

ಇನ್ನೂ ಎಷ್ಟು ಉದಾಹರಣೆ ಕೊಡಲಿ. ನನ್ನ ಜೀವನ ಚರೀತ್ರೆಯೇ ಆದೀತು. ಇವರೆಲ್ಲ ನನ್ನ ಬದುಕಿನ ಭಾಗವಾಗಿಯೇ ಹೋಗಿದ್ದಾರೆ ಎನ್ನುವುದಕ್ಕಿಂತ ಬದುಕಿನ ಭಾಗವೇ ಹೌದು. ಅವರ ಇತಿಹಾಸ ನಮ್ಮ ಇತಿಹಾಸದಷ್ಟೇ ಆಳವಾಗಿದೆ. ಹೃದಯದ ಪಸೆಯಲ್ಲೂ ವ್ಯತ್ಯಾಸವಿಲ್ಲ…….

ಇನ್ನೂ ಮುಖ್ಯವಾಗಿ ಸಾಹಿತಿ, ಕವಿ, ನನ್ನ ಹಿರಿಯ ಮಿತ್ರ, ಮಾರ್ಗದರ್ಶಕರಾದ ಪೀರ್ ಭಾಷಾ ಅವರಿಂದ ನಾನು ಜನರನ್ನು, ಈ ದೇಶವನ್ನು ಪ್ರೀತಿಸುವ ಬಗೆಯನ್ನು ಕಲಿತಿದ್ದೇನೆ. ಜನರ ನೋವಿಗೆ ಮಿಡಿಯುವ ಅಂತರಂಗವನ್ನು ರೂಢಿಸಿಕೊಂಡಿದ್ದೇನೆ. ಹಂಚಿಕೆಯಾಗಿದೆ. ತರಿಕೆರೆಯವರಂಥ ಸಾಹಿತ್ಯ ಸಂತನನ್ನು ಮರು ರೂಪಿಸಲು ಈ ನಾಡಿಗೆ ಸಾಧ್ಯವೇ?

ನಾನು ಅವರಿಂದ, ಅವರನ್ನು ಗಮನಿಸುತ್ತ, ಅವರ ಪುಸ್ತಕಗಳನ್ನು ಓದುತ್ತ ಮಾನವೀಯವಾದ ಆಲೋಚನಾ ಕ್ರಮಗಳನ್ನು ಕಲಿತ್ತಿದ್ದೇನೆ. ಒಂದು ದಿನ ಬೆಳಗಿನ ಜಾವ ಧಾರವಾಡದ ಬೀದಿಯಲ್ಲಿ ಅವರೊಂದಿಗೆ ಸುತ್ತುತ್ತ ಸಿರಿಯಾದಲ್ಲಿನ ನಾಗರಿಕ ಹತ್ಯೆ ಬಗ್ಗೆ ಕೇಳಿದೆ… ‘ಮನುಷ್ಯ ಇಷ್ಟು ಕ್ರೂರಿ ಯಾಕಾಗ್ತಾನೆ ಅಂತ ಗೊತ್ತಿಲ್ಲ ಆಲಬಾಳ… ಎನ್ನುತ್ತ… ಅಂದ ಹಾಗೇ ಸಾಕಷ್ಟು ಜನರ ಸಂಪರ್ಕ ಇರುವ ನೀವು ಈ ಪ್ರಶ್ನೆಯನ್ನು ನನಗೆ ಏಕೆ ಕೇಳುತ್ತಿದ್ದಿರಿ’ ಎಂದಾಗ ನನ್ನ ಮೂರ್ಖತನಕ್ಕೆ ನನಗೇ ನಾಚಿಕೆಯಾಗಿತ್ತು. ತಲೆ ತಗ್ಗಿಸಿ ಅವರ ಸೂಕ್ಷ್ಮತೆಯೊಳಗಿನ ಸ್ವಲ್ಪನ್ನಾದರೂ ನಾನು ರೂಢಿಸಿಕೊಳ್ಳಬೇಕು ಅಂತ ನಿರಧರಿಸಿದೆ.

ಇನ್ನೂ, ನಾನು ಬಳ್ಳಾರಿ ಕಡೆ ಬರ್ತೀನಿ ಅಂತ ಹೇಳಿದ್ದೆ ತಡ. ಈಗ ಎಲ್ಲಿಗೆ ಬಂದ್ರೀ… ನಾನು ಬಸ್ ನಿಲ್ದಾಣದಲ್ಲಿದ್ದೀನಿ ಆರಾಮಾಗಿ ಬನ್ನಿ ಎನ್ನುತ್ತ ತಾಸುಗಟ್ಟಲೇ ಕಾದು. ಸಿಕ್ಕ ತಕ್ಷಣ ಮೊದಲೇ ನಿಗದಿ ಮಾಡಿದ ಭೋಜನ ಕೂಟಕ್ಕೆ ಕರೆದೊಯ್ದು ಕುಡಿಸಿ, ತಿನ್ನಿಸಿ ಮಲಗುವವರೆಗೂ ಕಾಳಜಿ ಮಾಡಿ ನಂತರ ಮಲಗುವ ಗೆಳೆಯ ಇರ್ಫಾನ್ ಮುದುಗಲ್.

ನೀನು ನನ್ನ ಹಿರಿಯ ಮಗ ಅಂತ ಹೇಳಿ ಮನೆಯ ವ್ಯವಹಾರಗಳಿಗೆಲ್ಲ ನನ್ನನ್ನೇ ಕೇಳುವ ಅವನ ತಂದೆ ತಾಯಿ. ಅಣ್ಣ ಎನ್ನುತ್ತ ತಮ್ಮ ಶಿಕ್ಷಣ, ಓದು ಎಲ್ಲದರ ಕುರಿತು ವರದಿ ಒಪ್ಪಿಸುವ ಅವರ ತಂಗಿಯರು ಅವರ್ಯಾರು ನನಗೆ ಜೀವಮಾನದಲ್ಲೆಂದೂ, ಧರ್ಮದ ಕಾರಣಕ್ಕಾಗಿ ಬೇರೆಯವರು ಅನ್ನಿಸಲೇ ಇಲ್ಲ.

ಬರೆಯುತ್ತ ಹೋದರೆ ಬಹಳ ಆಗುತ್ತದೆ ಜಲೀಲ್ ಸಾಹೇಬರೆ..
ಇವರೆಲ್ಲ, ಇಂಥ ಸಾವಿರಾರು ಜನ ನನ್ನ ಬದುಕಿನ ಭಾಗವಾಗಿದ್ದಾರೆ. ನಾನು ಸವೆಸಿದ ಆಯಸ್ಸಿನ ಭಾಗವಾಗಿದ್ದಾರೆ. ನನ್ನ ಸಂತಸದ, ನೆನಪುಗಳ ಭಾಗವಾಗಿದ್ದಾರೆ.
ನಾನು ಇವರಿಂದ ದೂರವಾಗುವುದೆಂದರೆ ನನ್ನ ಬದುಕಿದ ಬದುಕಿನಿಂದಲೇ ದೂರವಾದಂತಾಗುವುದಿಲ್ಲವೇ? ನಾನು ಕಳೆದ ಕಾಲ, ನೋವು, ನಲಿವು, ಅನುಭವಿಸಿದ ಅನುಭವ, ಮುಖ್ಯವಾಗಿ ನಾನು ಮರು ಕಟ್ಟಿಕೊಳ್ಳಲು ಸಾಧ್ಯವಿರದಂಥ ನೆನಪುಗಳು ಎಲ್ಲವುಗಳಿಂದಲೂ ದೂರವಾದಂತಾಗುವುದಿಲ್ಲವೇ?
ಆಗ ನಾನು ಬದುಕಿದ ಆ ಕ್ಷಣಗಳು ಕಳೆದು ಹೋಗುತ್ತವೆ. ಇಲ್ಲವೇ ಆ ಕ್ಷಣಗಳಲ್ಲಿ ನಾನು ಬದುಕಿಯೇ ಇರಲಿಲ್ಲ ಎಂದು ಭಾವಿಸಿಕೊಳ್ಳಬೇಕಾಗುತ್ತದೆ.

ಜಲೀಲ್ ಸಾಹೇಬರೇ ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ಇದರಲ್ಲಿ ನನ್ನ ಸ್ವಾರ್ಥವಿದೆ.
ನಾನು ಬದುಕಿದ ಯಾವೊಂದು ಕ್ಷಣಗಳನ್ನು ನಾನು ಬದುಕಿಲ್ಲ ಎಂದು ಹೇಳಲು ನಾನು ಸಿದ್ದನಿಲ್ಲ.
ಅದಕ್ಕಾಗಿ ಈ ನೆಲದಿಂದ ಈ ನೆಲದವರೇ ಆದ ಯಾವೊಬ್ಬ ಮುಸಲ್ಮಾನರನ್ನೂ ಕದಲಿಸಲು ನಾನು ಕೈ ಕಟ್ಟಿಕೊಂಡು ಕುಳಿತು ಅವಕಾಶ ಕೊಡುವುದಿಲ್ಲ ಏಕೆಂದರೆ ನನ್ನ ಬದುಕು ಅವರೊಂದಿಗೆ ಹಂಚಿಕೆಯಾಗಿದೆ.

– ಮಹಾಲಿಂಗಪ್ಪ ಆಲಬಾಳ.

ಜಲೀಲ್‌ ಮುಕ್ರಿಯವರ ಪತ್ರ ಓದಿಲು ಇಲ್ಲಿ ಕ್ಲಿಕ್‌ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...