Homeಮುಖಪುಟಉಕ್ರೇನ್‌, ಚೀನಾದಿಂದ ವಾಪಸಾದ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಎಂಬಿಬಿಎಸ್‌ ಪೂರ್ಣಗೊಳಿಸಲು ಅವಕಾಶ: ಕೇಂದ್ರ ಸರ್ಕಾರ

ಉಕ್ರೇನ್‌, ಚೀನಾದಿಂದ ವಾಪಸಾದ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಎಂಬಿಬಿಎಸ್‌ ಪೂರ್ಣಗೊಳಿಸಲು ಅವಕಾಶ: ಕೇಂದ್ರ ಸರ್ಕಾರ

- Advertisement -
- Advertisement -

ತಮ್ಮ ಕೋರ್ಸ್‌ಗಳನ್ನು ಮುಗಿಸದೆ ಉಕ್ರೇನ್ ಮತ್ತು ಚೀನಾದಿಂದ ಹಿಂತಿರುಗಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಂಬಿಬಿಎಸ್‌ ಪೂರ್ಣಗೊಳಿಸುವ ಅವಕಾಶವನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಯಾವುದೇ ಭಾರತೀಯ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗದೆ ಎಂಬಿಬಿಎಸ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಒಂದು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಚೀನಾದಲ್ಲಿನ ಕೋವಿಡ್ -19 ಪ್ರಯಾಣದ ನಿರ್ಬಂಧ, ಉಕ್ರೇನ್ ಯುದ್ಧದಿಂದಾಗಿ ವೈದ್ಯಕೀಯ ಪದವಿ ಮತ್ತು ಬ್ಯಾಚುಲರ್ ಆಫ್ ಸರ್ಜರಿ ಪದವಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ವೈದ್ಯಕೀಯ ವಿದ್ಯಾರ್ಥಿಗಳ ಮನವಿಯನ್ನು ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ವಿಕ್ರಮ್ ನಾಥ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

ಕಳೆದ ವರ್ಷ ಫೆಬ್ರುವರಿಯಲ್ಲಿ ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ, ಉಕ್ರೇನ್‌ನಲ್ಲಿ ಓದುತ್ತಿದ್ದ 20,000 ಭಾರತೀಯ ವಿದ್ಯಾರ್ಥಿಗಳು ಹಿಂತಿರುಗಬೇಕಾಯಿತು. ಅವರಲ್ಲಿ 18,000 ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ.

ಯುದ್ಧ ಪೀಡಿತ ದೇಶಕ್ಕೆ ಮರಳಲು ಸಾಧ್ಯವಾಗದ ಕಾರಣ ಭಾರತದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.

ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮತ್ತು ಸಂಬಂಧಿತ ಸಚಿವಾಲಯಗಳನ್ನು ಒಳಗೊಂಡಿರುವ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಧ್ಯಕ್ಷತೆಯ ಸಮಿತಿಯು ಈ ವಿಷಯವನ್ನು ಚರ್ಚಿಸಿದ ನಂತರ ಕೇಂದ್ರವು ತನ್ನ ನಿರ್ಧಾರವನ್ನು ಉನ್ನತ ನ್ಯಾಯಾಲಯಕ್ಕೆ ಬುಧವಾರ ತಿಳಿಸಿದೆ.

ಎಂಬಿಬಿಎಸ್ ಅಂತಿಮ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳಿಗೆ ಒಂದು ಅವಕಾಶವನ್ನು ನೀಡಲು ಸಮಿತಿಯು ನಿರ್ಧರಿಸಿದೆ. ವಿದ್ಯಾರ್ಥಿಗಳು ಯಾವುದೇ ಭಾರತೀಯ ಕಾಲೇಜುಗಳಿಗೆ ದಾಖಲಾಗುವ ಅಗತ್ಯವಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ನ್ಯಾಯಾಲಯಕ್ಕೆ ಹೇಳಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗವು ಎಂಬಿಬಿಎಸ್ ಕೋರ್ಸ್‌ಗೆ ನಿಗದಿಪಡಿಸಿದ ಪಠ್ಯಕ್ರಮದಲ್ಲಿ ನಡೆಸಲಾದ ತಮ್ಮ ಥಿಯರಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹಾಜರಾಗುತ್ತಾರೆ, ಆದರೆ ಪ್ರಾಯೋಗಿಕ ಪರೀಕ್ಷೆಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುತ್ತವೆ.

ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾರ್ಥಿಗಳು ಕಡ್ಡಾಯವಾಗಿ ಎರಡು ವರ್ಷಗಳ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದು ಸಮಿತಿ ಹೇಳಿದೆ. ವಿದ್ಯಾರ್ಥಿಗಳಿಗೆ ಎರಡನೇ ವರ್ಷದಲ್ಲಿ ಅವರ ಇಂಟರ್ನ್‌ಶಿಪ್‌ಗೆ ಅವಕಾಶವಿರುತ್ತದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌, ರಾಷ್ಟ್ರೀಯ ವೈದ್ಯಕೀಯ ಆಯೋಗ ಸೂಚಿಸಿರುವ ಪಠ್ಯಕ್ರಮದಲ್ಲಿನ ವ್ಯತ್ಯಾಸ ಹಾಗೂ ವಿದೇಶಿ ವೈದ್ಯಕೀಯ ಸಂಸ್ಥೆಗಳಲ್ಲಿ ಅನುಸರಿಸುವ ವ್ಯತ್ಯಾಸ ವಿದ್ಯಾರ್ಥಿಗಳಿಗೆ ಅಡ್ಡಿಯಾಗಬಹುದು ಎಂದು ಹೇಳಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇವಲ ಒಂದು ಪ್ರಯತ್ನ ಸಾಕಾಗುವುದಿಲ್ಲ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿದರು.

“ಇದು ಅಖಿಲ ಭಾರತ ವಕೀಲಿ ಪರೀಕ್ಷೆಯಂತಲ್ಲ, ನೀವು ಅನುತ್ತೀರ್ಣರಾದರೆ ನೀವು ಇನ್ನೂ ನಿಮ್ಮ ಎಲ್‌ಎಲ್‌ಬಿ [ಬ್ಯಾಚುಲರ್ ಆಫ್ ಲಾಸ್] ಪದವಿಯನ್ನು ಹೊಂದಿರುತ್ತೀರಿ” ಎಂದು ಶಂಕರನಾರಾಯಣನ್ ವಾದಿಸಿದರು. “ಈ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ಅವರಿಗೆ ಏನೂ ಉಳಿಯುವುದಿಲ್ಲ” ಎಂದು ತಿಳಿಸಿದರು.

ಆದರೆ, ಸಮಿತಿ ನೀಡಿದ ಶಿಫಾರಸುಗಳನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಲೇವಾರಿ ಮಾಡಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದುದರ ಪರಿಣಾಮವಾಗಿ ಭಾರತಕ್ಕೆ ಮರಳಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಭಾರತದ ವಿವಿಗಳಲ್ಲಿ ಸೀಟು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ 2022ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು.

ಇದನ್ನೂ ಓದಿರಿ: ಉಕ್ರೇನ್ ನಿರಾಶ್ರಿತ ಮಕ್ಕಳ ನೆರವಿಗೆ ನೊಬೆಲ್ ಪ್ರಶಸ್ತಿ ಹರಾಜಿಗಿಟ್ಟ ರಷ್ಯಾ ಪತ್ರಕರ್ತ

ಭಾರತದ ವೈದ್ಯ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆ ಉಂಟಾಗುವುದರಿಂದ ಆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿತ್ತು.

ಇಲ್ಲಿನ ನೀಟ್‌ ಪರೀಕ್ಷೆಯಲ್ಲಿ ಕಳಪೆ ಸಾಧನೆ ಮಾಡಿದ ಮತ್ತು ಅಗ್ಗದ ವೈದ್ಯಕೀಯ ವೆಚ್ಚದ ಕಾರಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್‌ನಂತಹ ರಾಷ್ಟ್ರಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ಕಳಪೆ ಮೆರಿಟ್ ಹೊಂದಿರುವ ವಿದ್ಯಾರ್ಥಿಗಳಿಗೆ ನಾವು ಪ್ರವೇಶ ನೀಡಿದ್ದೆ ಆದರೆ ಅದು ಭವಿಷ್ಯದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಗುಣಮಟ್ಟ ಕಾಪಾಡುವ ಕುರಿತು ನಿರ್ದೇಶನ ನೀಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಈ ವಿದ್ಯಾರ್ಥಿಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ದಾಖಲು ಮಾಡಿಕೊಳ್ಳಲು ಅವಕಾಶ ನೀಡಿದರೂ ಸಹ ಆ ಕಾಲೇಜುಗಳ ಶುಲ್ಕವನ್ನು ಭರಿಸಲು ಅವರು ಶಕ್ತರಾಗಿಲ್ಲ ಎಂದೂ ಸಹ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ರಾಹುಲ್ ಗಾಂಧಿಯ ವಯನಾಡ್‌ ಕ್ಷೇತ್ರದ ಹಿಂದೂ ಮಂದಿರದಲ್ಲಿ ಚಿಕನ್ ಶಾಪ್...

0
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡ್‌ನ ಕ್ಷೇತ್ರ ವ್ಯಾಪ್ತಿಯ ಐತಿಹಾಸಿಕ ದೇವಸ್ಥಾನವೊಂದರಲ್ಲಿ ಕೋಳಿ ಅಂಗಡಿ (ಚಿಕನ್ ಶಾಪ್) ತೆರೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ವೈರಲ್ ವಿಡಿಯೋದಲ್ಲಿ ದೇವಾಲಯದಂತಹ ಕಟ್ಟಡವೊಂದು...