Homeಕರ್ನಾಟಕಅನ್ನ ಭಾಗ್ಯ, ಒಕ್ಕೂಟ ತತ್ವ ಮತ್ತು ಕರ್ನಾಟಕ ವಿರೋಧಿ ದಳ (ಕವಿದ)

ಅನ್ನ ಭಾಗ್ಯ, ಒಕ್ಕೂಟ ತತ್ವ ಮತ್ತು ಕರ್ನಾಟಕ ವಿರೋಧಿ ದಳ (ಕವಿದ)

- Advertisement -
- Advertisement -

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯು 2014ರಿಂದ ಜಾರಿಯಲ್ಲಿದೆ. ಇದರ ರೂವಾರಿ ಸಿದ್ದರಾಮಯ್ಯ. ಅನ್ನಭಾಗ್ಯ ಯೋಜನೆಯಿಂದಾಗಿ ’ಅನ್ನರಾಮಯ್ಯ’ ಎಂಬ ಬಿರುದನ್ನು ಅವರು ಗಳಿಸಿದರು. ತುಂಡುತುಂಡು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಯಾವ ಬಿರುದನ್ನು ಗಳಿಸಿದರು? ’ಉಳುವವನಿಗೆ ಭೂಮಿ’ ಎಂಬ ದೇವರಾಜ್ ಅರಸ್ ನೀಡಿದ್ದ ಕೊಡುಗೆಗೆ ಬದಲಾಗಿ ಬಿಎಸ್‌ವೈ ನೀಡಿದ ಕೊಡುಗೆ ’ಉಳ್ಳವರಿಗೆ ಭೂಮಿ’ ಎಂಬುದಾಗಿದೆ. ಸಿದ್ಧರಾಮಯ್ಯನವರು ’ಜನರಾಮಯ್ಯ’ನಾಗಿದ್ದರೆ ಯಡಿಯೂರಪ್ಪ ’ಕಾರ್ಪೋರೆಟ್ ಅಪ್ಪ’ನವರಾಗಿದ್ದಾರೆ. ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರ ಸಿದ್ದರಾಮಯ್ಯ ಅವರ ಸರ್ಕಾರದ ಯೋಜನೆಗಳನ್ನು ಹಾಳುಗೆಡುವುದಕ್ಕಾಗಿಯೇ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಹಟ ತೊಟ್ಟು ಕರ್ನಾಟಕಕ್ಕೆ ಅಕ್ಕಿಯನ್ನು ಮಾರಾಟ ಮಾಡುವುದನ್ನು ನಿರಾಕರಿಸಿದೆ. ಇದನ್ನೂ ಸಮರ್ಥಿಸಿಕೊಳ್ಳುತ್ತಾ ರಾಜ್ಯದ ಬಿಜೆಪಿಯ ಹರುಕು ಬಾಯಿಯ (ಕು)ನಾಯಕರುಗಳು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಅನ್ನಭಾಗ್ಯದ ವಿರುದ್ಧ ಮಾತನಾಡುವುದು ಕರ್ನಾಟಕದ ಬಡವರ, ಹಸಿದವರ, ದುಸ್ಥಿತಿಯಲ್ಲಿರುವವರ ವಿರುದ್ಧದ ಮಾತಾಗಿದೆ. ಈ ವಿಷಕಾರುವ ಬಾಯಿಗಳಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಉತ್ತರ ನೀಡುತ್ತಾರೆ.

ಅನ್ನಭಾಗ್ಯ ವರ್ಸಸ್ ಅನ್ನದಾನ ಕಾರ್ಯಕ್ರಮ!

ಸಿದ್ದರಾಮಯ್ಯನವರು ರೂಪಿಸಿರುವ ಒಂದು ಜನಕಲ್ಯಾಣ ಕಾರ್ಯಕ್ರಮ ಅನ್ನಭಾಗ್ಯ. ಇದು ಬಸವ-ಕನಕ-ನಾಲ್ವಡಿ ಪರಂಪರೆಯ ಕಾರ್ಯಯೋಜನೆ. ಅನ್ನವನ್ನು ಜನರು ಹಕ್ಕಿನ ನೆಲೆಯಿಂದ ಪಡೆದುಕೊಳ್ಳುತ್ತಿದ್ದಾರೆ ವಿನಾ ದಾನ-ದತ್ತಿಯಾಗಿಯಲ್ಲ. ಈ ಕಾರಣಕ್ಕೆ ಪತ್ರಕರ್ತರ ಜೊತೆಯಲ್ಲಿ ಒಂದು ಗೋಷ್ಠಿಯಲ್ಲಿ ಸಿದ್ದರಾಮಯ್ಯ ಅನ್ನಭಾಗ್ಯಕ್ಕೆ ’ನನ್ನಪ್ಪನ ದುಡ್ಡಿನಿಂದಲ್ಲ ಅನ್ನಭಾಗ್ಯದಲ್ಲಿ ಅಕ್ಕಿ ನೀಡುತ್ತಿರುವುದು, ಜನರ ತೆರಿಗೆ ಹಣದಿಂದ ಅಕ್ಕಿ ನೀಡುತ್ತಿದ್ದೇನೆ’ ಎಂದು ಗರ್ವದಿಂದ ಹೇಳಿದ್ದಾರೆ. ಕರ್ನಾಟಕಸ್ಥರಿಗೆ ’ದಾನ’ದಲ್ಲಿ ನಂಬಿಕೆಯಿಲ್ಲ. ಅದು ಪರಾವಲಂಬನೆಯ ಸರಕು. ಉದ್ದೇಶಪೂರ್ವಕವಾಗಿ ಭಾಗ್ಯ ಎಂದು ಹೆಸರು ನೀಡಿದರೋ ಅಥವಾ ಸಹಜವಾಗಿ ನೀಡಿದರೂ ಗೊತ್ತಿಲ್ಲ. ಭಾಗ್ಯ ಎನ್ನುವುದು ಶೂದ್ರ-ದಲಿತ ಸಂಸ್ಕೃತಿಯ ಪ್ರತೀಕವಾದರೆ, ದಾನ ಬ್ರಾಹ್ಮಣ್ಯದ ಪ್ರತೀಕ.

 

ಏನಿದು ಅನ್ನಭಾಗ್ಯದ ಸಮಸ್ಯೆ

ಇದು ಕೇವಲ ಅನ್ನಭಾಗ್ಯದ ಸಮಸ್ಯೆಯಲ್ಲ. ಇದು ನಮ್ಮ ಸಂವಿಧಾನದತ್ತ ಒಕ್ಕೂಟ ವ್ಯವಸ್ಥೆಯ ಸಮಸ್ಯೆಯಾಗಿದೆ. ಕರ್ನಾಟಕಕ್ಕೆ ಅಕ್ಕಿ ಮಾರಾಟ ಮಾಡುವುದನ್ನು ಒಕ್ಕೂಟ ಸರ್ಕಾರ ನಿರಾಕರಿಸುತ್ತದೆ ಎಂಬುದು ಅನಿರೀಕ್ಷಿತ ವಿದ್ಯಮಾನವೇನಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಏನನ್ನು ಹೇಳಿದ್ದರು ಎಂಬುದನ್ನು ನೆನಪಿಸಿಕೊಂಡರೆ ಇದು ಸ್ಪಷ್ಟವಾಗುತ್ತದೆ. “ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಒಕ್ಕೂಟ ಸರ್ಕಾರದ ಯೋಜನೆಗಳೆಲ್ಲವನ್ನು ತಡೆದು ನಿಲ್ಲಿಸುತ್ತೇವೆ. ಕಾಂಗ್ರೆಸ್ಸನ್ನು ಗೆಲ್ಲಿಸಿದರೆ ಕರ್ನಾಟಕಕ್ಕೆ ನರೇಂದ್ರ ಮೋದಿ ಅವರ ’ಆಶೀರ್ವಾದ’ ದೊರೆಯುವುದಿಲ್ಲ” ಎಂದು ನಡ್ಡ ಅಬ್ಬರಿಸಿದ್ದರು. ಅದನ್ನು ಈಗ ಕಾರ್ಯಗತ ಮಾಡುತ್ತಿದ್ದಾರೆ.

ಕರ್ನಾಟಕ ವಿರೋಧಿ ದಳ (ಕವಿದ)

ರಾಜ್ಯದ ಬಿಜೆಪಿ ನಾಯಕರುಗಳಾದ ತೇಜಸ್ವಿ ಸೂರ್ಯ, ಪ್ರಹ್ಲಾದ್ ಜೋಷಿ, ಪ್ರತಾಪ ಸಿಂಹ, ಸಿ.ಟಿ. ರವಿ, ಬಸವರಾಜ್ ಯತ್ನಾಳ್, ಬಿ.ಎಲ್ ಸಂತೋಷ್, ಆರ್. ಅಶೋಕ್ ಮುಂತಾದವರು ಸೇರಿಕೊಂಡು ’ಕರ್ನಾಟಕ ವಿರೋಧಿ ದಳ’ (ಕವಿದ) ಎನ್ನುವ ಗುಂಪನ್ನು ಕಟ್ಟಿಕೊಂಡು ಇಂದಿನ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಯುದ್ಧ ಸಾರಿದ್ದಾರೆ. ಕರ್ನಾಟಕಸ್ಥರು ಹಸಿವಿನಿಂದ, ಬಡತನದಿಂದ, ದುಸ್ಥಿತಿಯಿಂದ ಸತ್ತರೂ ಸರಿ, ಒಕ್ಕೂಟದ ನೆರವು ರಾಜ್ಯಕ್ಕೆ ದೊರೆಯದಂತೆ ಏನೆಲ್ಲ ಮಾಡಬೇಕೋ ಅದೆಲ್ಲವನ್ನು ಇವರು ದುರುಳತನದಿಂದ ಮಾಡುತ್ತಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸುವ ಒಕ್ಕೂಟ ವಿತ್ತಮಂತ್ರಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಕವಿದದ ಸದಸ್ಯರನ್ನಾಗಿ ಪರಿಗಣಿಸಬಹುದು. ಏಕೆಂದರೆ 15ನೆಯ ಹಣಕಾಸು ಆಯೋಗವು ತನ್ನ ಮಧ್ಯಂತರದ ವರದಿಯಲ್ಲಿ 2020-21ನೆಯ ಸಾಲಿಗೆ ರಾಜ್ಯಕ್ಕೆ ಶಿಫಾರಸ್ಸು ಮಾಡಿದ್ದ ವಿಶೇಷ ಅನುದಾನ ರೂ.5495 ಕೋಟಿಯನ್ನು ಅಂತಿಮ ವರದಿಯಲ್ಲಿ ಇವರು ತೆಗೆಸಿಹಾಕಿದ್ದರು. ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಒಂದೂ ಸಭೆಯನ್ನು ಇವರು ರಾಜ್ಯ ಸರ್ಕಾರದ ಜೊತೆ ನಡೆಸಿಲ್ಲ. ಈಗ ಅನ್ನಭಾಗ್ಯದಲ್ಲಿ ಕರ್ನಾಟಕ ತೊಂದರೆಯಲ್ಲಿ ಸಿಲುಕಿದೆ. ಅದರ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಹುಡುಕುವುದರಲ್ಲಿ ಅವರ ಸಹಯೋಗ ಅಗತ್ಯ. ಆದರೆ ಕವಿದವು ಅಂತಹ ಸಹಯೋಗ ದೊರೆಯದಂತೆ ಮಾಡುತ್ತಿದೆ. ಕರ್ನಾಟಕವನ್ನು ಶತ್ರು ಎನ್ನುವಂತೆ ಒಕ್ಕೂಟ ಮತ್ತು ಕವಿದ ನೋಡುತ್ತಿದೆ. ಈ ಕಾರಣಕ್ಕೆ ಇರಬೇಕು ಮಾತುಮಾತಿಗೆ ಕರ್ನಾಟಕವನ್ನು ಕಾಂಗ್ರೆಸ್ ’ಶ್ರೀಲಂಕ’ವನ್ನಾಗಿ ಮಾಡುತ್ತದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಕರ್ನಾಟಕದ ಪರವಾಗಿ ಈ ಕವಿದವು ಮಾತನಾಡುವುದಿಲ್ಲ. ಹಣಕಾಸು ಆಯೋಗದ ಶಿಫಾರಸ್ಸು ರೂ.5495 ಕೋಟಿಯನ್ನು ಒಕ್ಕೂಟ ಸರ್ಕಾರದಿಂದ ಕೊಡಿಸುವಲ್ಲಿ ಈ ದಳ ಕೆಲಸ ಮಾಡಲಿಲ್ಲ. ಅನೇಕ ರೀತಿಯಲ್ಲಿ ಒಕ್ಕೂಟವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ.

  • ಒಕ್ಕೂಟವು ತನ್ನ ಒಟ್ಟು ತೆರಿಗೆ ರಾಶಿಯಲ್ಲಿ ಶೇ.41ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು. ಅದು ವರ್ಗಾಯಿಸುತ್ತಿರುವುದು ಶೇ.30ರ ಆಸುಪಾಸಿನಲ್ಲಿದೆ. ಪ್ರಸಕ್ತ 2023-24ರಲ್ಲಿ ಒಕ್ಕೂಟದ ಒಟ್ಟು ತೆರಿಗೆ ರಾಶಿ ರೂ.33.60 ಲಕ್ಷ ಕೋಟಿ. ಇದರಲ್ಲಿ ಒಕ್ಕೂಟ ವರ್ಗಾಯಿಸುತ್ತಿರುವುದು ರೂ.10.21 ಲಕ್ಷ ಕೋಟಿ. ಇಲ್ಲಿನ ಕೊರತೆ ರೂ.3.16 ಲಕ್ಷ ಕೋಟಿ. ಪೂರ್ಣ ಶೇ.41ರಷ್ಟನ್ನು ವರ್ಗಾಯಿಸಿದ್ದರೆ ರಾಜ್ಯಕ್ಕೆ ಹೆಚ್ಚಿನ ಪಾಲು ದೊರೆಯುತ್ತಿತ್ತು. ಇಲ್ಲಿ ಒಕ್ಕೂಟ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ.
  • ಪ್ರತಿ ವರ್ಷ ಒಕ್ಕೂಟವು ತೆರಿಗೆ ರಾಶಿಯಲ್ಲಿ ಪಾಲನ್ನು ನೀಡುವುದರ ಜೊತೆಗೆ ಕೇಂದ್ರ ಪ್ರಾಯೋಜಿತ ಮತ್ತು ಕೇಂದ್ರ ಯೋಜನೆಗಳಿಗೆ ಅನುದಾನ ನೀಡುತ್ತದೆ. ಈ ಅನುದಾನ (ಗ್ರಾಂಟ್ಸ್ ಇನ್ ಏಡ್) 2017-18ರಲ್ಲಿ ರೂ.15394 ಕೋಟಿ. ಈಗ 2023-24ರಲ್ಲಿ ನೀಡುತ್ತಿರುವುದು ರೂ.13005 ಕೋಟಿ. ಕಳೆದ ಏಳು ವರ್ಷಗಳಲ್ಲಿ ಒಕ್ಕೂಟ ರಾಜ್ಯಕ್ಕೆ ನೀಡುವ ಅನುದಾನ ಶೇ(-)15.52 ರಷ್ಟು ಕುಸಿದಿದೆ. ಒಕ್ಕೂಟದ ತೆರಿಗೆ ರಾಶಿಯು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಆದರೆ ರಾಜ್ಯಕ್ಕೆ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಿದೆ. ಇದು ರಾಜ್ಯಕ್ಕೆ ಒಕ್ಕೂಟ ಮಾಡುತ್ತಿರುವ ಮತ್ತೊಂದು ಅನ್ಯಾಯ.
ಜೆ.ಪಿ. ನಡ್ಡ
  • ಒಕ್ಕೂಟವು ಸೆಸ್ ಮತ್ತು ಸರ್‌ಚಾರ್ಚ್‌ಗಳ ಮೂಲಕ ಅಪಾರ ತೆರಿಗೆ ಸಂಗ್ರಹಿಸಿಕೊಳ್ಳುತ್ತಿದೆ. ಇದನ್ನು ರಾಜ್ಯಗಳ ಜೊತೆ ಹಂಚಿಕೊಳ್ಳುತ್ತಿಲ್ಲ. ಇದರಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಈ ತೆರಿಗೆಗಳನ್ನು ’ಹಂಚಿಕೊಳ್ಳುವ ತೆರಿಗೆ ರಾಶಿ’ಗೆ ಸೇರಿಸಬೇಕು.
  • ಪ್ರತ್ಯಕ್ಷ ತೆರಿಗೆಗಳಲ್ಲಿ ಉಳ್ಳವರಿಗೆ ಮತ್ತು ಕಾರ್ಪೋರೆಟ್‌ಗಳಿಗೆ 2022-23ರಲ್ಲಿ ನೀಡಿದ್ದ ತೆರಿಗೆ ರಿಯಾಯಿತಿ ರೂ.4.36 ಲಕ್ಷ ಕೋಟಿ. ಕರ್ನಾಟಕ ಕೂಲಿಕಾರರಿಗೆ, ಬಡವರಿಗೆ, ಕಾರ್ಮಿಕರಿಗೆ, ರೈತರಿಗೆ, ಮಹಿಳೆಯರಿಗೆ ನೀಡುವ ರೂ.50000ದಿಂದ ರೂ.60000 ಕೋಟಿಯ ಗ್ಯಾರಂಟಿಗಳು ರೇವ್ಡಿ (ಉಚಿತ) ಸಂಸ್ಕೃತಿ! ಒಕ್ಕೂಟ ಉಳ್ಳವರಿಗೆ ನೀಡುವ ರೂ.4.36 ಲಕ್ಷ ಕೋಟಿಯ ತೆರಿಗೆ ರಿಯಾಯಿತಿಯು ಯಾವ ಸಂಸ್ಕೃತಿ?

ಈ ರೀತಿಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವುದನ್ನು ಒಕ್ಕೂಟ ನಿಲ್ಲಿಸಿದರೆ ರಾಜ್ಯಕ್ಕೆ ಹೆಚ್ಚಿನ ಸಂಪನ್ಮೂಲ ದೊರೆಯುತ್ತದೆ. ಆದರೆ ಒಕ್ಕೂಟವು ಸಂವಿಧಾನದತ್ತ ಒಕ್ಕೂಟ ತತ್ವವನ್ನು ಪಾಲಿಸುತ್ತಿಲ್ಲ.

ಇದನ್ನೂ ಓದಿ: ಕೇಂದ್ರದ ನೀತಿಯಿಂದ ಬಡವರ ಆಹಾರಕ್ಕೆ ಸಮಸ್ಯೆ: ಅಮಿತ್ ಶಾಗೆ ಸಿದ್ದರಾಮಯ್ಯ ಮನವರಿಕೆ

ಸಿದ್ದರಾಮಯ್ಯ ರೂಪಿಸಿದ್ದ ಅನ್ನಭಾಗ್ಯ ಮತ್ತು ಮನಮೋಹನ್ ಸಿಂಗ್ ಸರ್ಕಾರ ರೂಪಿಸಿದ್ದ ಮನ್‌ರೇಗಾ ಕಾರ್ಯಕ್ರಮಗಳಿಂದಾಗಿ ಕೋವಿಡ್ ಸಂದರ್ಭದಲ್ಲಿ ಜನರ ಬದುಕನ್ನು ಅವು ಉಳಿಸಿದ್ದವು. ಇಂತಹ ಒಂದೇಒಂದು ಜನಸ್ನೇಹಿ ಜನಕಲ್ಯಾಣ ಕಾರ್ಯಯೋಜನೆಯನ್ನು ಕಳೆದ 9 ವರ್ಷಗಳಲ್ಲಿ ಬಿಜೆಪಿಗೆ ರೂಪಿಸಲು ಸಾಧ್ಯವಾಗಿಲ್ಲ. ಈಗ ಒಕ್ಕೂಟದ ನೆರವನ್ನು ಇಲ್ಲವಾಗಿಸಿ ಕರ್ನಾಟಕವನ್ನು ಹಾಳು ಮಾಡಲು ಕವಿದ ಹೊರಟಿದೆ.

ಒಕ್ಕೂಟ ಸರ್ಕಾರ ಏನೇನೋ ನೆಪ ಹೇಳಿ ಅಕ್ಕಿಯನ್ನು ನೀಡದಿರಬಹುದು. ಈಗಾಗಲೆ ರಾಜ್ಯ ಸರ್ಕಾರ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಪ್ರಯುತ್ನ ನಡೆಸುತ್ತಿದೆ. ಇದು ಕಷ್ಟವಾಗಬಹುದು. ಐದು ಗ್ಯಾರಂಟಿಗಳ ಭಾಗವಾದ ಅನ್ನಭಾಗ್ಯವು ಪ್ರತಿಯೊಬ್ಬ ಕರ್ನಾಟಕಸ್ಥನನ್ನು ’ಟಿ.ವಿ. ಮೋಹನದಾಸ ಪೈ’ ರೀತಿಯಲ್ಲಿ, ’ರಾಜೀವ್ ಚಂದ್ರಶೇಖರ’ ರೀತಿಯಲ್ಲಿ ಹೊಟ್ಟೆ ತುಂಬ ಉಂಡು ರಟ್ಟೆಯ ಬಲದಿಂದ ದುಡಿಯುವ ಸ್ಥಿತಿಗೆ ಬರುವಂತೆ ಮಾಡುತ್ತದೆ. ಕನ್ನಡದ ಮಹಾಕವಿ ಹೇಳಿರುವಂತೆ ’ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆದಡೆ, ಕೈಲಾಸ ಬಿನ್ನಾಣವಕ್ಕು ಸರ್ವಜ್ಞ.’. ಈ ಕವಿದಕ್ಕೆ ’ತನ್ನಂತೆ ಪರರನ್ನು ಬಗೆಯುವ’ ಮೌಲ್ಯದ ಬಗ್ಗೆ ಗೌರವವಿಲ್ಲ. ತಮ್ಮನ್ನು ತಾವು ಶ್ರೇಷ್ಠರು, ಮಡಿವಂತರು, ಅಕ್ಷರವನ್ನು ಗುತ್ತಿಗೆ ಹಿಡಿದವರು ಎಂದುಕೊಂಡವರಿಗೆ ಪರರನ್ನು ತನ್ನಂತೆ ಭಾವಿಸುವುದು ಸಾಧ್ಯವಿಲ್ಲ. ಅನ್ನರಾಮಯ್ಯ ಸಂಸ್ಕೃತಿಯಿಂದ ಮಾತ್ರ ಇದು ಸಾಧ್ಯ. ಹಸಿದವರ ಹಸಿವನ್ನು ಹೇಗೆ ಉಲ್ಬಣಗೊಳಿಸಬೇಕು ಎಂಬುದರ ಬಗ್ಗೆ ಚಿಂತಿಸುವುದೇ ಅನ್ನಭಾಗ್ಯದ ಬಗ್ಗೆ ಒಕ್ಕೂಟ ಹಾಗೂ ಕವಿದ ತಳೆದಿರುವ ನಿಲುವಾಗಿದೆ. ಅನ್ನರಾಮಯ್ಯನು ’ಶಕ್ತಿ’ ಯೋಜನೆಯ ಕಾರಣವಾಗಿ ರಾಜ್ಯದಾದ್ಯಂತ ಮಹಿಳೆಯರ ಅಭಿಮಾನವನ್ನು ಗಳಿಸಿರುವುದನ್ನು ಕಂಡು ಕವಿದಕ್ಕೆ ಉರಿ-ನಂಜು ನಖಶಿಖಾಂತ ಏರಿಬಿಟ್ಟಿದೆ. ಸಿದ್ದರಾಮಯ್ಯನವರ ಬೆನ್ನಿಗೆ ನಿಂತ ಶೂದ್ರ-ದಲಿತ ಶಕ್ತಿಯ ಮುಂದೆ ಬ್ರಾಹ್ಮಣ್ಯದ ಆಟ ನಡೆಯುವುದಿಲ್ಲ.

ಒಕ್ಕೂಟದ ಬಳಿ ಇರುವ ಅಕ್ಕಿ ದಾಸ್ತಾನು

ಒಂದು ವರದಿಯ ಪ್ರಕಾರ ಇಂದು ಒಕ್ಕೂಟ ಸರ್ಕಾರದ ಬಳಿ, ಅಂದರೆ ಭಾರತೀಯ ಆಹಾರ ನಿಗಮದ ಹತ್ತಿರ 573 ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ಅಗತ್ಯವಿರುವ ಕಾಪು ದಾಸ್ತಾನು 411 ಲಕ್ಷ ಟನ್ನುಗಳು. ಆಹಾರ ನಿಗಮದ ಬಳಿ 162 ಲಕ್ಷ ಟನ್ ಅಕ್ಕಿ ಅಧಿಕವಾಗಿದೆ. ಸಾಮಾನ್ಯವಾಗಿ ಮಳೆ ಮಾರುತದಲ್ಲಿ ವ್ಯತ್ಯಯವಾದರೂ ದೇಶದಲ್ಲಿ ಭತ್ತದ ಉತ್ಪನ್ನದಲ್ಲಿ ಕುಸಿತ ಉಂಟಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಓಪನ್ ಮಾರ್ಕೆಟ್ ಸೇಲ್ ಸ್ಕೀಮ್(ಒಎಂಎಸ್‌ಎಸ್)ನಲ್ಲಿ ಕರ್ನಾಟಕಕ್ಕೆ ಅಕ್ಕಿಯನ್ನು ನೀಡಬಹುದು. ಭಾರತೀಯ ಆಹಾರ ನಿಗಮವು ಒಕ್ಕೂಟ ಸರ್ಕಾರದ ಒತ್ತಡಕ್ಕೆ ಮಣಿದು ಕರ್ನಾಟಕಕ್ಕೆ ವಿಶೇಷವಾಗಿ ಅನ್ಯಾಯ ಮಾಡುವ ಉದ್ದೇಶದಿಂದ ತೆರೆದ ಮಾರುಕಟ್ಟೆ ಮಾರಾಟ ಯೋಜನೆಯನ್ನು ತಡೆಯುವ ಕ್ರಮವನ್ನು ತೆಗೆದುಕೊಂಡಿದೆ. ಈ ಕ್ರಮವು ಒಕ್ಕೂಟ ತತ್ವ-ವಿರೋಧಿ ಮತ್ತು ಮಾನವ-ವಿರೋಧಿ ಕ್ರಮವಾಗಿದೆ.

ದೇಹಾರ ವರ್ಸ್‌ಸ್ ಆಹಾರ

ಅಂಬಿಗರ ಚೌಡಯ್ಯ ಶರಣರು ದೇಹಾರಕ್ಕಿಂತ (ದೇವಾಲಯ) ಆಹಾರ ಮುಖ್ಯ ಎಂಬುದನ್ನು ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ. ಅವರ ವಚನ ಹೀಗಿದೆ:

ದೇಹಾರ ಮಾಡುವ ಅಣ್ಣಗಳಿರಾ ಒಂದು ತುತ್ತು ಆಹಾರವನಿಕ್ಕಿರಯ್ಯಾ.
ದೇಹಾರಕ್ಕೆ ಆಹಾರವೇ ನಿಚ್ಚಣಿಕೆ.
ದೇಹಾರವ ಮಾಡುತ್ತೆ ಆಹಾರವನ್ನಿಕ್ಕದಿದ್ದರೆ ಆ ಹರನಿಲ್ಲೆಂದನಂಬಿಗ ಚೌಡಯ್ಯ

ಸಿದ್ದರಾಮಯ್ಯನವರದ್ದು ’ಆಹಾರ ಸಂಸ್ಕೃತಿ’ಯಾದರೆ ಕವಿದ ಮತ್ತು ಒಕ್ಕೂಟ ಸರ್ಕಾರದ್ದು ’ದೇಹಾರ ಸಂಸ್ಕೃತಿ’. ಈ ಕಾರಣಕ್ಕೆ ಒಕ್ಕೂಟ ಸರ್ಕಾರದ ಅಧಿನಾಯಕರು ಮುಂದಿನ ಲೋಕಸಭೆ ಚುನಾವಣೆಗಿಂತ ಮೊದಲು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮುಗಿಸಬೇಕೆಂದು ಗಮನ ನೀಡುತ್ತಿದ್ದಾರೆ. ಅವರಿಗೆ ಮಂದಿರವು ಚುನಾವಣೆಯ ಸಾಧನವಾದರೆ ನಮಗೆ ಆಹಾರವು ಚುನಾವಣೆಯ ಅಸ್ತ್ರವಾಗಿದೆ. ದೇಹಾರದಲ್ಲಿ ಮುಳುಗಿರುವವರಿಗೆ ಅನ್ನಸಂಸ್ಕೃತಿ ಹೇಗೆ ಅರ್ಥವಾಗಬೇಕು?

ಸಂವಿಧಾನದ ಅನುಚ್ಛೇದ 21ರ ಜೀವಿಸುವ ಹಕ್ಕು

ಅನ್ನಭಾಗ್ಯಕ್ಕೆ ಅಕ್ಕಿಯನ್ನು ನೀಡದಿರುವ ಒಕ್ಕೂಟ ಸರ್ಕಾರದ ನಿಲುವು ಸಂವಿಧಾನ ವಿರೋಧಿಯಾಗಿದೆ. ಅನ್ನಭಾಗ್ಯ ಜನಕಲ್ಯಾಣ ಕಾರ್ಯಕ್ರಮವನ್ನು ಸಂವಿಧಾನದ ಅನುಚ್ಛೇದ 21ರ ಜೀವಿಸುವ ಹಕ್ಕಿನ ಭಾಗವಾಗಿ ಪರಿಗಣಿಸಬೇಕು. ಸರ್ವೋಚ್ಚ ನ್ಯಾಯಾಲಯವು ಅನೇಕ ಪ್ರಕರಣಗಳಲ್ಲಿ ಆಹಾರದ ಹಕ್ಕು ಅನುಚ್ಛೇದ 21ರ ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗ ಎಂದು ತೀರ್ಪುಗಳನ್ನು ನೀಡಿದೆ. ಯಾರೊಬ್ಬರೂ ಹಸಿವಿನಿಂದಿರಬಾರದು ಎಂಬುದು ಸಂವಿಧಾನದ ಆಶಯ. ಈ ಆಶಯದ ಅನುಷ್ಠಾನವನ್ನು ಭಾಗಶಃವಾಗಿಯಾದರೂ ಸಾಧಿಸಲಿಕ್ಕಿರುವುದೇ ಅನ್ನಭಾಗ್ಯ. ಇದನ್ನು ವಿರೋಧಿಸುವುದೆಂದರೆ ಸಂವಿಧಾನವನ್ನು ವಿರೋಧಿಸಿದಂತೆಯೇ ಸರಿ. ಅನ್ನಭಾಗ್ಯ ಅನುಷ್ಠಾನಕ್ಕೆ ಅಕ್ಕಿಯನ್ನು ರಾಜ್ಯಕ್ಕೆ ಮಾರಾಟ ಮಾಡುವುದಿಲ್ಲ ಎಂಬ ಒಕ್ಕೂಟ ಸರ್ಕಾರದ ನಿಲುವು ಅನ್ನಭಾಗ್ಯಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಕರ್ನಾಟಕದ 6.5 ಕೋಟಿ ಜನರು ಹೇಗೆ ಕರ್ನಾಟಕಸ್ಥರೋ ಅದೇ ರೀತಿಯಲ್ಲಿ ಅವರು ಭಾರತದ ಪ್ರಜೆಗಳು. ಈ ಪ್ರಜೆಗಳ ಹಿತವನ್ನು ಕಾಪಿಡುವುದು ಕರ್ನಾಟಕ ಸರ್ಕಾರದ ಜವಾಬ್ದಾರಿ ಹೇಗೋ ಅದೇ ರೀತಿಯಲ್ಲಿ ಒಕ್ಕೂಟ ಸರ್ಕಾರದ ಜವಾಬ್ದಾರಿಯೂ ಹೌದು. ದೇಶದ 28 ರಾಜ್ಯಗಳನ್ನು, ಎಂಟು ಒಕ್ಕೂಟಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ಒಕ್ಕೂಟ ಸರ್ಕಾರವು ’ಕೇಂದ್ರ ಸರ್ಕಾರ’ದಂತೆ ನಡೆದುಕೊಳ್ಳುತ್ತಿದೆ. ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ’ಕೇಂದ್ರ ಸರ್ಕಾರ’ ಎಂಬ ನುಡಿಯನ್ನು ಬಳಸಿಲ್ಲ. ಕೇಂದ್ರ ಎನ್ನುವುದೇ ಸರ್ವಾಧಿಕಾರಿ ಆಶಯದ ಒಂದು ರೂಪ. ಒಕ್ಕೂಟ ಎನ್ನುವುದು ಎಲ್ಲರನ್ನು ಒಳಗೊಳ್ಳುವ ಒಂದು ರೂಪ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿರುವಂತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳನ್ನು ವಿಫಲಗೊಳಿಸುವುದೇ ಒಕ್ಕೂಟ ಸರ್ಕಾರದ ಗುರಿಯಾಗಿದೆ. ಇದೊಂದು ಷಡ್ಯಂತ್ರ. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯದ ಬಗ್ಗೆ ರಾಜ್ಯದಲ್ಲಿ ಉಂಟಾಗಿರುವ ವಿವಾದವನ್ನು ನೋಡಬೇಕಾಗಿದೆ.

ಡಾ. ಟಿ. ಆರ್. ಚಂದ್ರಶೇಖರ

ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತ ಪಡಿಸುತ್ತಿರುವ ಮುಂಚೂಣಿ ಚಿಂತಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...