ಗೋವಾದಲ್ಲಿ ಬ್ಯಾಕ್ ಫ್ಲಿಪ್ ಮಾಡುವಾಗ ಸ್ಯಾಂಡಲ್‌ವುಡ್ ನಟ ದಿಗಂತ್ ಅವರ ಕುತ್ತಿಗೆಗೆ ಸೋಮವಾರ (ಜೂನ್ 20) ತೀವ್ರ ಪೆಟ್ಟು ಬಿದ್ದಿದ್ದು, ಗೋವಾದಿಂದ ಬೆಂಗಳೂರಿಗೆ ಹೆಲಿಕಾಫ್ಟರ್ ಮೂಲಕ ಕರೆತರಲಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗೋವಾದಲ್ಲಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದ ವೇಳೆ ಬ್ಯಾಕ್ ಫ್ಲಿಪ್ ಮಾಡಲು ಪ್ರಯತ್ನಿಸುತ್ತಿರುವಾಗ ಬೆನ್ನುಹುರಿ ಮತ್ತು ಕುತ್ತಿಗೆಗೆ ಪೆಟ್ಟಾಗಿದ್ದು, ಅವರನ್ನು ಗೋವಾದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿಗೆ ಕರೆತರಲಾಗಿದೆ.
“ದಿಗಂತ್ ಅವರು ಬೆಂಗಳೂರಿನ ಹಳೆ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಸಂಜೆ 4:30 ಕ್ಕೆ ಆಗಮಿಸಿದರು. ಅವರು ಬೆನ್ನುಮೂಳೆಯ ಶಸ್ತ್ರಚಿಕಿತ್ಸಕರಾದ ಡಾ.ವಿದ್ಯಾಧರ ಎಸ್ ಅವರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಎರಡು ದಿನಗಳ ಹಿಂದೆ ಗೋವಾದಲ್ಲಿ ಗಾಯದಿಂದ ಬಳಲುತ್ತಿದ್ದರು. ಈ ಮೊದಲು ಗೋವಾದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು” ಎಂದು ಮಣಿಪಾಲ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಎಲ್ಲ ಸದಭಿರುಚಿ ಸಿನಿಮಾಗಳಿಗೆ ತೆರಿಗೆ ವಿನಾಯಿತಿ ಅಗತ್ಯ: ಫಿಲ್ಮ್ ಛೇಂಬರ್ ಅಧ್ಯಕ್ಷ ಭಾ.ಮ.ಹರೀಶ್ ಪ್ರತಿಕ್ರಿಯೆ
View this post on Instagram
ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದಿಗಂತ್ ಕುಟುಂಬಸ್ಥರು ’ಸಣ್ಣ ಪ್ರಮಾಣದಲ್ಲಿ ಕುತ್ತಿಗೆ ಮತ್ತು ಬೆನ್ನು ಹುರಿಗೆ ಪೆಟ್ಟಾಗಿದೆ. ಒಂದು ಶಸ್ತ್ರಚಿಕಿತ್ಸೆ ಆಗಬೇಕಿದೆ. ಉಳಿದಂತೆ ಅವರ ಆರೋಗ್ಯ ಸ್ಥಿರವಾಗಿದೆ. ಆತಂಕ ಬೇಡ’ ಎಂದಿದ್ದಾರೆ.
ಆಸ್ಪತ್ರೆಯಲ್ಲಿ ನಟ ದಿಗಂತ್ ಪತ್ನಿ, ನಟಿ ಐಂದ್ರಿತಾ ರೇ, ನಟನ ತಂದೆ ತಾಯಿ ಸೇರಿದಂತೆ ಕುಟುಂಬಸ್ಥರು ಇದ್ದು, ನಿರ್ದೇಶಕ ಯೋಗರಾಜ್ ಭಟ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ‘ಚಾರ್ಲಿ’ಗಷ್ಟೇ ಅಲ್ಲ, ಎಲ್ಲ ಸದಭಿರುಚಿಯ ಸಿನಿಮಾಗಳಿಗೂ ಸಿಗಲಿ ತೆರಿಗೆ ವಿನಾಯಿತಿ- ಚಿತ್ರಕರ್ಮಿಗಳ ಒಕ್ಕೊರಲ ಆಗ್ರಹ