ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಗಣಿ ಕಂಪನಿಯಿಂದ ಚತ್ತೀಸ್‌ಘಡದ ಹಸ್ಡಿಯೋ ಅರಂಡ್ ಕಾಡನ್ನು ಉಳಿಸಿ ಎಂಬ ಬೇಡಿಕೆಯೊಂದಿಗೆ ಅಲ್ಲಿನ ಸ್ಥಳೀಯ ಆದಿವಾಸಿಗಳು 300 ಕಿ.ಮೀ ಪಾದಯಾತ್ರೆ ನಡೆಸಿ ಇಂದು ರಾಜಧಾನಿ ರಾಯ್‌ಪುರ ತಲುಪಿದ್ದಾರೆ. ಹಸ್ಡಿಯೋ ಅರಂಡ್ ಕಾಡಿನ ಘಟ್ಬರಾ ಗ್ರಾಮದಿಂದ ಅಕ್ಟೋಬರ್ 04 ರಂದು ನೂರಾರು ಆದಿವಾಸಿಗಳು ಅಂಬೇಡ್ಕರ್, ಗಾಂಧೀಜಿ ಫೋಟೊ ಹಿಡಿದು ಆರಂಭಿಸಿದ ನಡಿಗೆ ಮಳೆ, ಗಾಳಿಯನ್ನೆಲ್ಲ ಎದುರಿಸಿ ಇಂದು ರಾಜಧಾನಿ ತಲುಪಿದೆ.

ಉತ್ತರ ಚತ್ತೀಸ್‌ಘಡದ ಕೊರ್ಬಾ, ಸರ್ಗುಜಾ ಮತ್ತು ಸೂರಜ್‌ಪುರ್ ಜಿಲ್ಲೆಗಳಲ್ಲಿ ಹರಡಿರುವ ಹಸ್ಡಿಯೋ ಅರಣ್ಯ ಮಧ್ಯ ಭಾರತದ ಅತಿ ದೊಡ್ಡ ಕಾಡುಗಳಲ್ಲಿ ಒಂದಾಗಿದೆ. ಕಾಡು ಕೃಷಿ-ಅವಲಂಬಿತ ಸಮುದಾಯಗಳು, ಗೊಂಡ ಆದಿವಾಸಿಗಳು, ನದಿ-ನೀರಿನ ಮೂಲಗಳು, ಆನೆಗಳು, ಚಿರತೆಗಳು ಸೇರಿದಂತೆ ಅಸಂಖ್ಯಾತ ಪ್ರಾಣಿಗಳು ಇಲ್ಲಿ ವಾಸವಿದ್ದು ಜೀವವೈವಿಧ್ಯಗೆ ಹೆಸರುವಾಸಿಯಾಗಿದೆ. ಕಲ್ಲಿದ್ದಲು ಸಚಿವಾಲಯವು ಈ ಶ್ರೀಮಂತ ಕಾಡುಗಳಲ್ಲಿ ಸಾವಿರಾರು ಚ.ಕಿ.ಮೀ ಕಲ್ಲಿದ್ದಲು ಗಣಿ ನಿಕ್ಷೇಪಗಳಿವೆ ಎಂದು ಗುರುತಿಸಿದ್ದು, ಈ ಕಾಡು ಇಂದು ತೀವ್ರ ಅಪಾಯಕ್ಕೆ ಈಡಾಗಿದೆ.

ಹಸ್ಡಿಯೋದಲ್ಲಿನ ಹಳ್ಳಿ ಮತ್ತು ಅರಣ್ಯ ಪ್ರದೇಶಗಳನ್ನು 18 ಕಲ್ಲಿದ್ದಲು ಗಣಿ ಬ್ಲಾಕ್‌ಗಳಾಗಿ ವಿಭಾಗಿಸಲಾಗಿದ್ದು ಅವುಗಳಲ್ಲಿ 3 ಸರ್ಕಾರಿ ಸ್ವಾಮ್ಯದ ನಿಗಮಗಳಿಗೆ ನಾಲ್ಕು ಬ್ಲಾಕ್‌ಗಳನ್ನು ಹಂಚಿಕೆ ಮಾಡಲಾಗಿದೆ. ಅವರೆಲ್ಲರೂ “ಗಣಿ ಡೆವಲಪರ್ ಮತ್ತು ಆಪರೇಟರ್” ಗುತ್ತಿಗೆಯನ್ನು ಗೌತಮ್ ಅದಾನಿಯ ಭಾರತದ ಅತ್ಯಂತ ಶಕ್ತಿಶಾಲಿ ಕಾರ್ಪೊರೇಶನ್‌ಗಳಲ್ಲಿ ಒಂದಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL)ಗೆ ನೀಡಿದ್ದಾರೆ. AEL ಈಗ ಹಸ್ಡಿಯೋದಲ್ಲಿ ಅಂದಾಜು 964 ದಶಲಕ್ಷ ಟನ್‌ಗಳಷ್ಟು ಕಲ್ಲಿದ್ದಲು ಗಣಿಗಾರಿಕೆ ಮಾಡಲು ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ಸುಮಾರು 7,500 ಹೆಕ್ಟೇರ್ ಭೂಮಿ ಮತ್ತು ಕಾಡುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಮತ್ತು ಮುಕ್ತ ಗಣಿಗಾರಿಕೆಗೆ ನಿರ್ಧರಿಸಲಾಗಿದೆ. AEL ಹಸ್ಡಿಯೋದಲ್ಲಿ ಗಣಿಗಾರಿಕೆ ಕಾರ್ಯಾಚರಣೆ ಆರಂಭಿಸಿದ ವರ್ಷಗಳಲ್ಲಿ ಅರಣ್ಯನಾಶ ಉಂಟಾಗಿದ್ದು ಅದರ ವಿರುದ್ಧ ಅಲ್ಲಿನ ಸ್ಥಳೀಯ ಜನತೆ ಸಿಡಿದೆದ್ದಿದ್ದಾರೆ.

ಹಸ್ಡಿಯೋ ಕಾಡು, Photo Courtesy: Article 14

ಇಲ್ಲಿನ ಜೀವವೈವಿಧ್ಯವನ್ನು ನಾಶಗೊಳಿಸುವ, ಕಾಡನ್ನು ನುಂಗಿಹಾಕುವ ಮತ್ತು ತಮ್ಮ ಬದಕನ್ನು ಕಿತ್ತುಕೊಳ್ಳುವ ಗಣಿಗಾರಿಕೆ ನಿಲ್ಲಿಸಿ, ಅದಾನಿಯಿಂದ ಹಸ್ಡಿಯೋ ಕಾಡನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ಸ್ಥಳೀಯ ನಿವಾಸಿಗಳು ಪ್ರತಿಭಟನೆಗಿಳಿದಿದ್ದಾರೆ. 2011ರ ಅಕ್ಟೋಬರ್ 02 ರಂದೇ ಅಂದರೆ ಹತ್ತು ವರ್ಷಗಳ ಹಿಂದೆಯೇ ಘಟ್ಬರಾ ಗ್ರಾಮಸಭೆಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ವಿರೋಧಿಸಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಈಗ 2021ರ ಅಕ್ಟೋಬರ್ 02 ರಂದು ಫತೇಪುರ್ ಗ್ರಾಮದಲ್ಲಿ ಅರಣ್ಯ ಸತ್ಯಾಗ್ರಹ ನಡೆಸಿದ ಅವರು ರಾಜಧಾನಿಗೆ ಪಾದಯಾತ್ರೆ ನಡೆಸಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಎರಡು ಪಕ್ಷಗಳು ಜನವಿರೋಧಿಗಳಾಗಿವೆ ಎಂದು ಆರೋಪಿಸಿದ್ದಾರೆ. ಈ ಆದಿವಾಸಿಗಳ ದಿಟ್ಟ ಹೋರಾಟವನ್ನು ನೂರಾರು ಸಾಮಾಜಿಕ ಕಾರ್ಯಕರ್ತರು ಬೆಂಬಲಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ #StopAdani ಎಂಬ ಪ್ರಚಾರಾಂದೋಲನ ಆರಂಭಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ಹನ್ಸ್‌ರಾಜ್ ಮೀನಾ “ಚತ್ತೀಸ್‌ಘಡದ ಆದಿವಾಸಿಗಳು 1.70 ಲಕ್ಷ ಹೆಕ್ಟೇರ್ ಹಸ್ಡಿಯೋ ಅರಣ್ಯವನ್ನು ಅದಾನಿಯಿಂದ ರಕ್ಷಿಸಲು 300 ಕಿಮೀ ಪ್ರಯಾಣಿಸಿ ರಾಯ್‌ಪುರ ತಲುಪಿದ್ದಾರೆ. ಆದರೆ ಅವರ ಮನವಿ ಸ್ವೀಕರಿಸಲು ಭೂಪೇಶ್‌ ಭಾಘೇಲ್‌ ಸರ್ಕಾರದ ಒಬ್ಬ ಸಚಿವರು, ಶಾಸಕರು ಬಂದಿಲ್ಲ. ಆದರೆ ಆದಿವಾಸಿ ನೃತ್ಯೋತ್ಸವಕ್ಕೆ ಆಹ್ವಾನಿಸಲು ಪ್ರತಿ ರಾಜ್ಯಕ್ಕೂ ಹೋಗುತ್ತಾರೆ. ಸಾಕು ಮಾಡಿ ನಿಮ್ಮ ನಾಟಕವನ್ನು” ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ: ಏಷ್ಯಾದ 2 ನೇ ಶ್ರೀಮಂತ ವ್ಯಕ್ತಿಯಾಗಿ ‘ಅದಾನಿ’; ಒಂದು ದಿನದ ಆದಾಯ 1,002 ಕೋಟಿ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here